ಋತು ಬದಲಾದಂತೆ ನಾವು ನಮ್ಮ ಮುಖ ಮತ್ತು ಕೈಗಳ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೇವೆ, ಆದರೆ ಒಂದು ಮುಖ್ಯ ವಿಚಾರ ಮರೆಯುತ್ತೇವೆ. ನಮ್ಮ ವ್ಯಕ್ತಿತ್ವ ಉನ್ನತವಾಗಿರಲು ಮುಖ, ಕೈಗಳ ಅಂದ ಮಾತ್ರ ಸಾಲದು, ಕಾಲು ಹಿಮ್ಮಡಿಗಳನ್ನು ಅಷ್ಟೇ ಗಮನಿಸಿಕೊಳ್ಳಬೇಕು. ಮಳೆಗಾಲದ ಪರಿಣಾಮ ಮೊದಲು ಇದರ ಮೇಲೆಯೇ ಆಗತ್ತದೆ. ಆದರೆ ಅದನ್ನು ಕಡೆಗಣಿಸಿ, ನಾವು ಮುಖದ ಮೇಕಪ್ ಗಷ್ಟೇ ಆಸಕ್ತಿ ವಹಿಸುತ್ತೇವೆ. ಇದರ ಪರಿಣಾಮವಾಗಿ ನಮ್ಮ ಹಿಮ್ಮಡಿ ಒಡೆಯುತ್ತದೆ. ಹೀಗಾಗಿ ಕಾಲು ನಿರ್ಜೀವವಾಗಿ ತೋರುತ್ತದೆ.
ನೀವು ನಿಮ್ಮ ಕಾಲು, ಹಿಮ್ಮಡಿಯನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂದು ನೋಡೋಣವೇ?
ನಿಮ್ಮ ಒಡೆದ ಹಿಮ್ಮಡಿ ಹಿಂದಿನಂತಾಗಲು ಎಂಥ ಪ್ರಾಡಕ್ಟ್ಸ್ ಬಳಸಬೇಕೆಂದು ತಿಳಿಯೋಣವೇ?
ಹಿಮ್ಮಡಿ ಒಡೆಯಲು ಕಾರಣ
ಹಿಮ್ಮಡಿ ಒಡೆಯಲು ಮುಖ್ಯ ಕಾರಣ ಮಳೆ, ಚಳಿಗಾಲದ ಥಂಡಿ. ಋತುವಿಗೆ ತಕ್ಕಂತೆ ಹಿಮ್ಮಡಿಗೆ ಮಾಯಿಶ್ಚರೈಸರ್ ಬಳಸದೆ ಇರುವುದೇ ಮುಖ್ಯ ಕಾರಣ. ಹವಾಮಾನದಲ್ಲಿ ಶುಷ್ಕತೆ ಹೆಚ್ಚಿದಷ್ಟೂ ಈ ತೊಂದರೆ ಹೆಚ್ಚಾಗುತ್ತದೆ.
ಸಾಮಾನ್ಯವಾಗಿ ಒಡೆದ ಹಿಮ್ಮಡಿಯುಳ್ಳ ಹೆಂಗಸರು ಅದನ್ನು ಇತರರ ಎದುರು ತೋರಿಸಿಕೊಳ್ಳುವುದಿಲ್ಲ, ಸಮಯವಿಲ್ಲ ಎಂಬ ನೆಪದಲ್ಲಿ ಅದಕ್ಕೆ ಆರೈಕೆಯೂ ಮಾಡಿಕೊಳ್ಳುವುದಿಲ್ಲ. ಕೆಲಸದ ನೆಪವಾಗಿ ಹೊರಗೆ ಓಡಾಡುವಾಗ, ಅವರ ಹಿಮ್ಮಡಿಗೆ ಸಹಜವಾಗಿ ಹೊರಗಿನ ಧೂಳು, ಮಣ್ಣು, ಕೆಸರು ಮೆತ್ತುತ್ತವೆ. ಅಷ್ಟು ಮಾತ್ರವಲ್ಲದೆ ಈ ಕಾರಣಗಳೂ ಇವೆ :
ಬಹಳ ಹೊತ್ತು ನಿಂತೇ ಕೆಲಸ ಮಾಡುವುದು.
ಬರಿಗಾಲಲ್ಲಿ ಹೊರಗಿನ ಓಡಾಟ, ಕೆಲಸಗಳು.
ಓಪನ್ ಹಿಮ್ಮಡಿಯುಳ್ಳ ಸ್ಯಾಂಡಲ್ಸ್ ನ ಬಳಕೆ.
ಅತಿಯಾದ ಬಿಸಿ ನೀರಿನ ಸ್ನಾನ.
ಅತಿಯಾದ ಕೆಮಿಕಲ್ಸ್ ವುಳ್ಳ ಸೋಪಿನ ಬಳಕೆ.
ಸರಿಯಿಲ್ಲದ ಚಪ್ಪಲಿ, ಸ್ಯಾಂಡಲ್ಸ್ ಬಳಸುವಿಕೆ.
ಬದಲಾದ ಋತುವಿನ ಕಾರಣ, ವಾತಾವರಣದಲ್ಲಿ ಆರ್ದ್ರತೆ ಕಡಿಮೆ ಆಗುವುದರಿಂದ ಹಿಮ್ಮಡಿ ಒಡೆಯುವುದು ಸಹಜ ಆಗಿಬಿಡುತ್ತದೆ. ಜೊತೆಗೆ ವಯಸ್ಸು ಹೆಚ್ಚುವಿಕೆ, ಆನುವಂಶಿಕತೆ ಸಹ ಪ್ರಧಾನ ಪಾತ್ರ ವಹಿಸುತ್ತದೆ. ಈ ಕಾರಣಗಳಿಂದ ಹಿಮ್ಮಡಿ, ಪಾದದ ಪೂರ್ತಿ ಬಿರುಕು ಮೂಡುತ್ತದೆ. ಒಂದೊಂದು ಹೆಜ್ಜೆ ಊರಿ ನಡೆಯುವುದೂ ಕಷ್ಟವಾಗಿ, ಒಮ್ಮೊಮ್ಮೆ ಬಿರುಕಗಳಿಂದ ರಕ್ತ ಹನಿಯುತ್ತದೆ, ಬಹಳ ನೋವು ಕಾಡುತ್ತದೆ.
ಪಾದಗಳ ಆರೈಕೆ ಹೇಗೆ?
ನಿಮ್ಮ ಪಾದಗಳ ಸೌಂದರ್ಯ ಕಾಪಾಡಿಕೊಳ್ಳಲು ಅತಿ ಅಗತ್ಯವಾದುದು ಎಂದರೆ, ನಿಮ್ಮ ಮುಖದಲ್ಲಿನ ಡೆಡ್ ಸ್ಕಿನ್ ತೊಲಗಿಸಿ ಮಾಯಿಶ್ಚರೈಸ್ ಗೊಳಿಸುವ ಹಾಗೆಯೇ ಅದೇ ತರಹ ನಿಮ್ಮ ಪಾದನ್ನು ಪ್ಯೂಮಿಕ್ ಸ್ಟೋನಿನಿಂದ ಚೆನ್ನಾಗಿ ಉಜ್ಜಿ, ಆ ಭಾಗದ ಡೆಡ್ ಸ್ಕಿನ್ ತೆಗೆದುಬಿಡಿ. ಅದಾದ ಮೇಲೆ ಥಿಕ್ ಕ್ರೀಂ ಬೇಸ್ಡ್ ಫಾರ್ಮುಲಾವಳ್ಳ ಬಾಮ್ ಯಾ ಲೋಶನ್, ಕೊಬ್ಬರಿ ಎಣ್ಣೆ ಬಳಸಿ ಪಾದವನ್ನು ಮಾಯಿಶ್ಚರೈಸ್ ಮಾಡಿ. ಈ ರೀತಿ ನೀವು ನಿಮ್ಮ ಒಡೆದ ಹಿಮ್ಮಡಿಯನ್ನು ಸರಿಪಡಿಸಿಕೊಳ್ಳಬಹುದು. ಆದರೆ ನಿಮ್ಮ ಹಿಮ್ಮಡಿಯಲ್ಲಿ ಅತಿ ಹೆಚ್ಚು ಬಿರುಕು ಮೂಡಿದ್ದರೆ, ಅದರಿಂದ ನೋವು ಹೆಚ್ಚಾಗಿ ರಕ್ತ ಜಿನುಗುತ್ತಿದ್ದರೆ, ನೀವು ತಕ್ಷಣ ಸ್ಕಿನ್ ಸ್ಪೆಷಲಿಸ್ಟ್ ರನ್ನು ಕಾಣಲೇಬೇಕು. ಏಕೆಂದರೆ ಡಯಾಬಿಟೀಸ್, ಹೈಪೊಥೈರಾಯಿಡಿಸಂ, ಅಟಾಪಿಕ್ ಡರ್ಮಟೈಟಿಸ್ ಮುಂತಾದ ಅನೇಕ ರೋಗಗಳ ಕಾರಣದಿಂದಲೂ ಹಿಮ್ಮಡಿ ತೀವ್ರವಾಗಿ ಒಡೆಯುತ್ತದೆ.
ಪೆಟ್ರೋಲಿಯಂ ಜೆಲ್ಲಿ, ಗ್ಲಿಸರಿನ್, ಲೆನೊಲಿನ್ ಯುಕ್ತ ಕ್ರೀಂ ಬಳಸುವುದರಿಂದ ಹೆಚ್ಚಿನ ಲಾಭವಿದೆ. ರಾತ್ರಿ ಮಲಗುವ ಮೊದಲು ಒಂದು ಬಕೆಟ್ ಬಿಸಿ ನೀರಿಗೆ ತುಸು ಕಲ್ಲುಪ್ಪು, ಶ್ಯಾಂಪೂ ಹಾಕಿ ನೊರೆ ನೊರೆಯಾಗಿಸಿ. ಅದರಲ್ಲಿ 15-20 ನಿಮಿಷ ಪಾದ ಊರಬೇಕು. ನೋವು ಎಷ್ಟೋ ತಗ್ಗುತ್ತದೆ. ನಂತರ ಪ್ಯೂಮಿಕ್ ಸ್ಟೋನ್ ನಿಂದ ಉಜ್ಜಿ ಡೆಡ್ ಸ್ಕಿನ್ ತೆಗೆದುಬಿಡಿ. ಆಮೇಲೆ ಉತ್ತಮ ಫುಟ್ ಕೇರ್ ಕ್ರೀಂ, ಕ್ರಾಕ್ ಹೀಲ್ ಕ್ರೀಂ ಬಳಸಿ ಪಾದ, ಹಿಮ್ಮಡಿಗೆ ಹಚ್ಚಿ, ರಾತ್ರಿ ಹಾಗೇ ಮಲಗಿಬಿಡಿ. ಈ ರೀತಿ ಸತತ 15-20 ದಿನ ಮಾಡಿದರೆ, ಪಾದ ಎಷ್ಟೋ ಸುಧಾರಿಸುತ್ತದೆ.
ನಿಮ್ಮ ಫುಟ್ ಕೇರ್ ಕ್ರೀಂನಲ್ಲಿ ಪೆಟ್ರೋಲಿಯಂ ಜೆಲ್ಲಿ, ಗ್ಲಿಸರಿನ್, ಲೆನೊಲಿನ್, ಕಿಂಡುಲಾ, ಮಲ್ಲಿಗೆ ಹೂವಿನ ಎಣ್ಣೆ, ಕೋಕಂ ಬಟರ್ ಇತ್ಯಾದಿ ಅಂಶಗಳಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಪಾದ ತುಸು ಸರಿಹೋದ ಮೇಲೂ ಈ ಕ್ರಮ ತಪ್ಪಿಸಬೇಡಿ, ಭವಿಷ್ಯದಲ್ಲಿ ಈ ತೊಂದರೆ ಮತ್ತೆ ಕಾಡದು.
– ಪಿ. ಸುಮನಾ