ಚಿತ್ರರಂಗದ ಪರಿಸರದಲ್ಲೇ ಹುಟ್ಟಿ ಬೆಳೆದು 24ರ ಹರೆಯ ಮುಟ್ಟಿದ ಯಂಗ್ ನಟಿ ಅನನ್ಯಾ ಪಾಂಡೆ, ತನ್ನ ಕೋಮಲತೆ, ಮಾಧುರ್ಯ, ಸೌಂದರ್ಯ, ಅಂದಚೆಂದ, ಬೆಡಗಿನ ಹಾವಭಾವಗಳಿಂದ ಇಂದಿನ ಬಾಲಿವುಡ್ ಇಂಡಸ್ಟ್ರಿಯಲ್ಲಿ ತನ್ನದೇ ಆದ ಪ್ರತ್ಯೇಕ ಐಡೆಂಟಿಟಿ ಗಿಟ್ಟಿಸಿದ್ದಾಳೆ.
ಇವಳಿಗೆ ಪ್ರತಿಯೊಂದು ಬಗೆಯ ಪಾತ್ರವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಛಾತಿ ಇದೆ. ಅದೇ ಇವಳನ್ನು ಬೇರೆ ನಟಿಯರಿಗಿಂತ ವಿಭಿನ್ನ ಎನಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಎವರ್ ಗ್ರೀನ್ ಆಗಿ ಮಿರಿಮಿರಿ ಮಿಂಚುತ್ತಿರುವ ಅನನ್ಯಾಳ ಅಭಿಮಾನಿಗಳ ಬಳಗಕ್ಕೇನೂ ಕೊರತೆ ಇಲ್ಲ.
ಹಿಂದಿ ಚಿತ್ರರಂಗದ 80ರ ದಶಕದ ಖ್ಯಾತ ತಾರೆಯರಾದ ಚಂಕಿ ಪಾಂಡೆ ಮತ್ತು ಭಾವನಾ ಪಾಂಡೆಯರ ಮಗಳಾದ ಅನನ್ಯಾ ಪಾಂಡೆ, `ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಪಡೆದಳು. ಇದರ ಯಶಸ್ಸಿನಿಂದ ಇವಳ ಅದೃಷ್ಟದ ಬಾಗಿಲು ತೆರೆಯಿತು. ಹೀಗಾಗಿ ಇದಾದ ಮೇಲೆ ಒಂದಾದ ನಂತರ ಮತ್ತೊಂದು ಎಂಬಂತೆ ಸಾಲು ಸಾಲಾಗಿ ಅನೇಕ ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಳು.
ಸಿನಿಮಾ ಮಾತ್ರವಲ್ಲದೆ ಅನನ್ಯಾ ಹಲವಾರು ಜಾಹೀರಾತುಗಳಲ್ಲೂ ಅದ್ಭುತ ಮಾಡೆಲ್ ಆಗಿ ಮಿಂಚಿದ್ದಾಳೆ. ಇದರ ಮೂಲ ಕಾರಣ, ಅವಳ ಸೌಮ್ಯ ಸ್ವಭಾವ, ಎಲ್ಲರೊಂದಿಗೆ ಬೆರೆತುಕೊಳ್ಳುವ ಗುಣ ಹಾಗೂ ಕಪಟತನವಿಲ್ಲದ ಮುಕ್ತ ವಿಚಾರಗಳ ದೃಷ್ಟಿಕೋನ ಎನ್ನಬಹುದು.
ನಟನೆಯ ಜೊತೆಯಲ್ಲೇ ಅನನ್ಯಾ `ಯೂನಿವರ್ಸಿಟಿ ಆಫ್ ಸೌತ್ ಕ್ಯಾಲಿಫೋರ್ನಿಯಾ, ಲಾಸ್ ಏಂಜಲಿಸ್ ‘ನಲ್ಲಿ ಫ್ಯಾಷನ್ ಡಿಸೈನಿಂಗ್‌ನ ಕೋರ್ಸ್ ಸಹ ಕಂಪ್ಲೀಟ್ ಮಾಡಿಕೊಂಡಿದ್ದಾಳೆ. ಅನನ್ಯಾಳ ಫ್ಯಾಷನ್ ಸ್ಕಿಲ್ಸ್ ಬಲು ಉನ್ನತ ಮಟ್ಟದ್ದು. ಅದರಲ್ಲೂ ಗ್ಲಾಮರಸ್ ಜಗತ್ತಿನ ಬಾಲಿವುಡ್ ಗೆ ಸಂಬಂಧಿಸಿದಂತೆ, ಈ ನಿಟ್ಟಿನಲ್ಲಿ ಅವಳ ಕ್ರಿಯಾಶೀಲತೆ ಮೆಚ್ಚುವಂಥದ್ದು. ಹೀಗಾಗಿ ತನ್ನ ಎಲ್ಲಾ ಚಿತ್ರಗಳಲ್ಲೂ, ತನ್ನ ಪಾತ್ರಕ್ಕೆ ಒಪ್ಪುವಂಥ ಕಾಸ್ಟ್ಯೂಮ್ಸ್ ಡಿಸೈನಿಂಗ್ ತಾನೇ ಮಾಡಿಕೊಳ್ಳುತ್ತಾಳೆ.
ಬಾಲಿವುಡ್ ನಲ್ಲಿ ಈ ನಟಿಯ ನಟನೆಯನ್ನು ಹಿರಿಯ ದಿಗ್ಗಜರು, ವಿಮರ್ಶಕರೂ ಎಲ್ಲಾ ಮೆಚ್ಚಿ ತಲೆದೂಗಿದ್ದಾರೆ. ಇವಳ ನಟನೆಯ `ಗೆಹರಾಯಿಯಾನ್’ ಬಿಡುಗಡೆಯಾಗಿ ಉತ್ತಮ ಹೆಸರು ಗಳಿಸಿದೆ. ತಾನು ಇದುವರೆಗೆ ನಡೆದು ಬಂದ ಹಾದಿಯ ಕುರಿತು ಅನನ್ಯಾ ಇಲ್ಲಿ ಮನಬಿಚ್ಚಿ ಮಾತನಾಡಿದ್ದಾಳೆ. ಅವಳೊಂದಿಗೆ ನಡೆಸಿದ ಮಾತುಕಥೆಯ ಮುಖ್ಯಾಂಶಗಳು :
ರಿಲೇಶನ್ ಶಿಪ್ ಬಲು ಮುಖ್ಯ
ರಿಲೇಶನ್ ಶಿಪ್ ಕುರಿತಾಗಿ ಅನನ್ಯಾ ಹೇಳುತ್ತಾಳೆ, “ಲವ್ ಅಂದ್ರೆ ನನ್ನ ದೃಷ್ಟಿಯಲ್ಲಿ ಫ್ರೆಂಡ್ ಶಿಪ್ ನಷ್ಟೇ ಪವಿತ್ರ. ಬಲು ಮುಖ್ಯವಾದುದು. ಇದನ್ನೇ ನಾನು ನನ್ನ ಹೆತ್ತವರಿಂದ ಕಲಿತಿದ್ದೇನೆ. ಅಮ್ಮ ಅಪ್ಪನ ಬಾಂಡಿಂಗ್ ನೋಡಿಯೇ ನಾನು ಪ್ರೇಮ ಬಾಂಧವ್ಯದ ಆಳ ಅರಿತುಕೊಂಡೆ. 25 ವರ್ಷದ ಸಿಲ್ವರ್ ಜ್ಯೂಬಿಲಿ ಮದುವೆ ಆ್ಯನಿವರ್ಸರಿ ಆಚರಿಸಿಕೊಂಡು ತಮ್ಮ ಯಶಸ್ವೀ ದಾಂಪತ್ಯದಲ್ಲಿ ಮುಂದುವರಿಯುತ್ತಿರುವ ಈ ಸ್ಟಾರ್ ಡಮ್ ಜೋಡಿ, ನಿಜಕ್ಕೂ ಬಾಲಿವುಡ್ ನ ಎಷ್ಟೋ ಜೋಡಿಗಳಿಗೆ ಮಾತ್ರವಲ್ಲದೆ, ಇಂದಿನ ಸಾಮಾನ್ಯ ಯುವಜನತೆಗೂ ದಾರಿದೀಪ, ಮಾರ್ಗದರ್ಶಿ ಆಗಿದೆ.
“ಇಂದಿಗೂ ಅವರು ಇತ್ತೀಚೆಗಷ್ಟೇ ಮದುವೆಯಾದ ನವ ವಿವಾಹಿತರಂತೆ ದಿ ಬೆಸ್ಟ್ ಫೆಲ್ ರಿಂಡ್ಸ್ ಆಗಿದ್ದಾರೆ. ಇವರಿಬ್ಬರಲ್ಲಿ ಹುಸಿ ಮುನಿಸು, ಜಗಳ ಎಲ್ಲಾ ದಂಪತಿಗಳಂತೆ ಕಾಮನ್ ಆಗಿದ್ದರೂ, ಅದು ಕೆಲವೇ ಘಂಟೆ ಕಾಲ ಮಾತ್ರ! 1-2 ತಾಸಿನ ನಂತರ `ಠೂ’ ಬಿಟ್ಟ ಚಿಕ್ಕ ಮಕ್ಕಳಂತೆ ಅದನ್ನು ಮರೆತು ಒಂದಾಗುತ್ತಾರೆ……
“ನಾನು ಯಾರೊಂದಿಗೆ ಹೃದಯ ಬಿಚ್ಚಿ ನನ್ನ ಭಾವನೆಗಳನ್ನು ಹಂಚಿಕೊಳ್ಳುವಂಥ ಆತ್ಮೀಯತೆ ತೋರುತ್ತಾನೋ, ಅಂಥ ವ್ಯಕ್ತಿ ಮಾತ್ರ ಮುಂದೆ ನನ್ನ ಸಂಗಾತಿ ಆಗಲು ಸಾಧ್ಯ! ಅವನು ಸದಾ ನನ್ನ ನಕ್ಕು ನಗಿಸುವ, ಪ್ರೀತಿಯಿಂದ ವ್ಯವಹರಿಸುವ ಓಪನ್ ಮೈಂಡೆಡ್ ಆಗಿರಬೇಕು. ನನ್ನ ತಂದೆಯೇ ನನ್ನ ರೋಲ್ ಮಾಡೆಲ್, ಹೀ ಮ್ಯಾನ್. ನನ್ನ ಭಾವಿ ಸಂಗಾತಿಯೂ ಹಾಗೇ ಇರಬೇಕೆಂದು ಬಯಸುತ್ತೇನೆ. ರಿಯಲ್ ಲೈಫ್ ನಲ್ಲಿ ನನ್ನ ತಾಯಿ ತಂದೆಯರ ಜೊತೆ ನನ್ನದು ಗಾಢವಾದ ಸಂಬಂಧ.”
ಗ್ಲಾಮರ್ಪಾತ್ರಗಳೇ ಇಷ್ಟ!
`ಗೆಹರಾಯಿಯಾನ್’ ಚಿತ್ರದಲ್ಲಿ ಅನನ್ಯಾಳದು ಅದ್ಭುತ ನಟನೆ. ಮಹಾ ಗ್ಲಾಮರ್ ಪಾತ್ರ ನಿಭಾಯಿಸಿ ಸೈ ಎನಿಸಿಕೊಂಡಿದ್ದಾಳೆ. ಇದು ಇವಳ ವಯಸ್ಸಿಗೆ ಮೀರಿದ ಪಾತ್ರ ಎಂದೇ ಬಾಲಿವುಡ್ ಪಂಡಿತರು ಬಣ್ಣಿಸಿದ್ದಾರೆ.
ಈ ಕುರಿತಾಗಿ ಅನನ್ಯಾ ಹೇಳುತ್ತಾಳೆ, “ನಾನು ಇದನ್ನು ಬೋಲ್ಡ್ ಪಾತ್ರ ಎನ್ನುವುದಕ್ಕಿಂತ ಬಲು ಮೆಚ್ಯೂರ್ಡ್, ಎಮೋಶನ್ ಪಾತ್ರ ಎಂದೇ ಹೇಳ ಬಯಸುತ್ತೇನೆ. ಈ ಪಾತ್ರ ನನ್ನ ಯೋಗ್ಯತೆಗೆ ಮೀರಿದ್ದು, ಇದನ್ನು ನಾನು ಸರಿಯಾಗಿ ನಿಭಾಯಿಸಬಲ್ಲನೇ ಎಂದು ಈ ಚಿತ್ರದ ಸ್ಕ್ರಿಪ್ಟ್ ಬಗ್ಗೆ ಓದಿದಾಗ ನಾನು ಹಿಂಜರಿದದ್ದು ನಿಜ. ಆದರೆ ಇಂಥ ಛಾಲೆಂಜಿಂಗ್ ರೋಲ್ ನ್ನು ಪರ್ಫೆಕ್ಟಾಗಿ ನಿಭಾಯಿಸಲೇಬೇಕೆಂದು ಹಠತೊಟ್ಟೆ.
“ಹೀಗಾಗಿ ನಿರ್ದೇಶಕ ಶಕುನ್ ಬಾತ್ರಾರ ಜೊತೆ ಕುಳಿತು ನನ್ನ ಪಾತ್ರದ ಬಗ್ಗೆ ಅವರಿಂದ ಎಲ್ಲ ಸೂಕ್ಷ್ಮ ಸುಳಿವುಗಳ ವಿವರ ಪಡೆದುಕೊಂಡೆ. ಕೇವಲ ನಾನು ಮಾತ್ರ ಅಲ್ಲ, ನನ್ನ ಸಹನಟ ಸಿದ್ಧಾಂತ್ ಚತುರ್ವೇದಿ ಸಹ ತನ್ನ ಪಾತ್ರಕ್ಕಾಗಿ ಬಹಳ ಪರಿಶ್ರಮ ಪಡಬೇಕಾಯಿತು. ಹೀಗೆ ನಮ್ಮಿಬ್ಬರ ಡೆಡಿಕೇಶನ್ ನಿಂದಾಗಿ ಈ ಚಿತ್ರ ಯಶಸ್ವಿಯಾಗಿ ಬಂದಿದೆ ಎಂದುಕೊಳ್ಳುತ್ತೇನೆ, ಉಳಿದಿದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು!
“ಈ ಚಿತ್ರದಿಂದ ನಾನು ಬೇಕಾದಷ್ಟು ವಿಷಯಗಳನ್ನು ಕಲಿತಿದ್ದೇನೆ. ಅದರಲ್ಲಿ ಮುಖ್ಯವಾದುದು ಎಂದರೆ ಇನ್ನೊಬ್ಬರ ದುಃಖವನ್ನು ಗುರುತಿಸುವುದು. ಅವರು ಜೋರಾಗಿ ಅಳದೇ ಇರಬಹುದು, ಎಲ್ಲರಿಗೂ ಗೊತ್ತಾಗುವಂತೆ ಬಿಕ್ಕಳಿಸದೇ ಇರಬಹುದು, ಆದರೆ ಅವರ ಅಂತರಾಳದಲ್ಲಿ ಮಡುಗಟ್ಟಿದ ದುಃಖ ಕಂಗಳಲ್ಲಿ ಖಂಡಿತಾ ಪ್ರತಿಫಲಿಸುತ್ತದೆ. ಅವರ ಆ ಭಾವೋದ್ರೇಕವನ್ನು ಹೃದಯವುಳ್ಳವರು ಮಾನವೀಯತೆಯಿಂದ ಖಂಡಿತಾ ಗುರುತಿಸಬಹುದು.
“ಇಂಥ ಭಾವನೆಗಳನ್ನು ನಟನೆಯಲ್ಲಿ ತೋಡಿಕೊಳ್ಳುವುದು ಕಷ್ಟ ಸಾಧ್ಯವೇ ಸರಿ. ಹಾಗೆಯೇ ನೀವು ದುಃಖದಲ್ಲಿರುವಾಗಲೂ ಹೊರಗಿನ ಪ್ರಪಂಚಕ್ಕೆ ಅದು ಗೊತ್ತಾಗಬಾರದೂಂತ, ಅದನ್ನು ಬಲವಂತದಿಂದ ಕಂಟ್ರೋಲ್ ಮಾಡಿಕೊಳ್ಳುತ್ತಾ, ನಸುನಗುತ್ತಾ ಇರುವುದು ಇದೆಯಲ್ಲ….. ಅದಂತೂ ಮೋಸ್ಟ್ ಹಾರಿಬಲ್! ಇಂಥ ನಗುವಿನಲ್ಲಿ ಖಂಡಿತಾ ಖುಷಿ ಕಾಣಿಸುವುದಿಲ್ಲ, ಬದಲಿಗೆ ಒಳಗೇ ಮಡುಗಟ್ಟಿದ ದುಃಖದ ಪ್ರತಿಫಲನ ಆಗಿರುತ್ತದೆ.
“ಇಷ್ಟು ಮಾತ್ರ ಅಲ್ಲ, ಯಾವುದೇ ಸಂಬಂಧದ ಆಳ (ಗೆಹರಾಯಿ) ಕ್ಕಿಳಿದು ನೋಡಿದಾಗ, ಅಲ್ಲಿ ನಿಮಗೆ ಕೇವಲ ಮೋಸ ಒಂದೇ ಕಟ್ಟಿಟ್ಟ ಬುತ್ತಿ ಎಂದು ಖಾತ್ರಿಯಾದಾಗ, ಅದನ್ನು ಮನದಲ್ಲೇ ಅಡಗಿಸಿಟ್ಟು ವೇದನೆ ಪಡುವ ಬದಲು ಹೊರಗೆ ಕೂರಿಸಿಕೊಳ್ಳುವುದಿದೆಯಲ್ಲ….. ಅದು ಕಷ್ಟ ಸಾಧ್ಯ. ಇದನ್ನು ನಿಮ್ಮ ಆಪ್ತರ ಬಳಿ ಹಂಚಿಕೊಂಡಾಗ ಮಾತ್ರ ಮನಸ್ಸಿಗೆ ತುಸು ನೆಮ್ಮದಿ ಸಿಗಲು ಸಾಧ್ಯ. ಏಕೆಂದರೆ ನಿಮ್ಮ ಮನದಾಳದ ಸ್ಟ್ರೆಸ್ ನ್ನು ಅದುಮಿಟ್ಟೂ ಇಟ್ಟೂ ನೀವು ಬೇರೆ ಯಾವ ಕೆಲಸವನ್ನೂ ಕ್ರಿಯೇಟೀವ್ ಆಗಿ ಮಾಡಲಾರಿರಿ. ಈ ವಿಷಯ ನನಗೆ ಮಾತ್ರವಲ್ಲ, ಎಲ್ಲರಿಗೂ ಅನ್ವಯಿಸುತ್ತದೆ. ಯಾರು ಏನೇ ಹೇಳಲಿ, ನನ್ನ ಮುಂದಿನ ಸಾಂಸಾರಿಕ ಜೀವನ ಬಲು ಪ್ರಾಕ್ಟಿಕಲ್ ಆಗಿ ಇರಬೇಕೆಂದೇ ಬಯಸುತ್ತೇನೆ.”
ಎಂಜಾಯ್ಡ್ ದಿ ಶೂಟ್
ಈ ಪಾತ್ರ ನಿಭಾಯಿಸುವಾಗ ಅನನ್ಯಾಳಿಗೆ ಹಲವು ತೊಂದರೆಗಳು ಎದುರಾದಂತೆ. ಅದರ ಕುರಿತಾಗಿ ಅನನ್ಯಾ ಹೇಳುತ್ತಾಳೆ, “ನಿರ್ದೇಶಕರ ಕಲ್ಪನೆಯ ಕೂಸಾದ ಈ ಟಿಯಾ ಖನ್ನಾಳ ಪಾತ್ರ ನನಗೆ ನಿಜಕ್ಕೂ ದೊಡ್ಡ ಛಾಲೆಂಜಿಂಗ್ ಆಗಿತ್ತು. ಅವರೇನೋ ನಾನು ನೋಡಲು ಆ ಪಾತ್ರದಂತೆಯೇ ಇದ್ದೇನೆ ಎಂದುಬಿಟ್ಟರು. ಹೀಗಾಗಿ ನಾನು ಸಲೀಸಾಗಿ ಈ ಪಾತ್ರ ನಿಭಾಯಿಸಬಹುದು, ಹೆಚ್ಚಿನ ಕಷ್ಟವಾಗದು ಎಂದುಬಿಟ್ಟರು.
“ಆದರೆ ನಿಜ ಜೀವನದಲ್ಲಿ ನಾನು ನಿಜಕ್ಕೂ ಈ ಪಾತ್ರಕ್ಕೆ ತದ್ವಿರುದ್ಧ…… ಅಂಥ ಸ್ವಭಾವ ನನ್ನದು! ಪ್ರೇಕ್ಷಕರು ಇಷ್ಟು ವರ್ಷ ಅನನ್ಯಾಳನ್ನಾಗಿ ನನ್ನನ್ನು ಗುರುತಿಸಿದ್ದಾರೆ, ನಾನು ಇರುವುದೇ ಹಾಗೆ. ಆದರೆ ಈ ಚಿತ್ರದ ನಂತರ ಪ್ರೇಕ್ಷಕರು ನನ್ನನ್ನು ಟಿಯಾ ಎಂದೇ ನೆನಪಿಸಿಕೊಳ್ಳುತ್ತಾರೆ. ಅಯ್ಯಯ್ಯೋ…. ನನಗಂತೂ ಇದು ಭಯಂಕರ ದುಃಸ್ವಪ್ನ! ಆದರೆ ನಾನು ಹೇಗೋ ಮಾಡಿ ನನ್ನಲ್ಲಿದ್ದ ಈ ಭಯವನ್ನು ಹೋಗಲಾಡಿಸಿ ನಿರ್ದೇಶಕರು ಬಯಸಿದಂತೆ ಆ ಪಾತ್ರ ಮಾಡಿದ್ದೇನೆ, ಶೂಟಿಂಗ್ ಬಹಳ ಎಂಜಾಯ್ ಮಾಡಿದೆ.”
ಅನನ್ಯಾ ಪ್ರತಿ ಸಲ ಹೊಸ ಚಿತ್ರ ಸೈನ್ ಮಾಡುವ ಮುನ್ನ, ಬಹಳ ಯೋಚಿಸಿ, ತನಗೆ ಆ ಪಾತ್ರ ಎಷ್ಟು ಮಾತ್ರ ಒಪ್ಪುತ್ತದೆ ಎಂದು ತರ್ಕಿಸಿ, ನಂತರ ಆ ಚಿತ್ರ ಆರಿಸಿಕೊಳ್ಳುತ್ತಾಳಂತೆ. ಆ ಚಿತ್ರ ಆಕಸ್ಮಾತ್ ಫ್ಲಾಪ್ ಆದರೆ, ಅದರ ಹೊಣೆ ತಾನೇ ಹೊರುತ್ತಾಳಂತೆ. ಇವಳ ಈ ಮೆಚ್ಯೂರಿಟಿಯನ್ನು ಪೇರೆಂಟ್ಸ್ ಬಹಳ ಮೆಚ್ಚುತ್ತಾರೆ. ಅವಳು ಸದಾ ನಕಾರಾತ್ಮಕವಾಗಿಯೇ ಚಿಂತಿಸುತ್ತಾಳೆ. ಅವಳು ಹೇಳುತ್ತಾಳೆ, “ಕೋವಿಡ್ ನ 2ನೇ ಅಲೆಯ ಸಂದರ್ಭದಲ್ಲಿ ನಾನು ಒಂದು ಸೀರೀಸ್ ಶುರು ಮಾಡಿದ್ದೆ. `ಸೋಶಿಯಲ್ ಮೀಡಿಯಾ ಫಾರ್ ಸೋಶಿಯಲ್ ಗುಡ್’ ಇದರ ಹೆಸರು. ನಾನು ನನ್ನ 10 ಜನ ಫ್ರೆಂಡ್ಸ್ ಬಳಸಿಕೊಂಡು ಇದನ್ನು ಆರಂಭಿಸಿದೆ. ಇವರೆಲ್ಲ ಮೊದಲಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸೋಶಿಯಲ್ ಸರ್ವೀಸ್ ಗೆ ಹೆಸರಾದರು. ಇವರು ತಾವಾಗಿ ಕೊರೋನಾ ರೋಗಿಗಳಿಗೆ ಹೆಚ್ಚಿನ ನೆರವು ಸಿಗಲೆಂದು ಅಂಥವರಿಗಾಗಿ ಆ್ಯಂಬುಲೆನ್ಸ್ ಅರೇಂಜ್ ಮಾಡುವುದು, ಅಗತ್ಯವುಳ್ಳವರಿಗಾಗಿ ಆಕ್ಸಿಜನ್ ಸಿಲಿಂಡರ್ಸ್ ಒದಗಿಸುವುದು, ಬೀದಿ ಬದಿ ಪ್ರಾಣಿಗಳಿಗೆ ಸುರಕ್ಷತೆ ಒದಗಿಸುವುದು, ವೃದ್ಧಾಶ್ರಮಗಳಲ್ಲಿ ಶ್ರಮದಾನ ಇತ್ಯಾದಿ ಎಲ್ಲಾ ಕೆಲಸಗಳನ್ನೂ ಬಹಳ ಸಂಘಟಿತರಾಗಿ ಮಾಡುತ್ತಿದ್ದೇವೆ. ಯಾರಿಗೆ ಯಾವಾಗ ಎಂಥ ಸೇವೆ ಬೇಕಾಗುತ್ತದೋ ಅಂಥದ್ದನ್ನು ಗುರುತಿಸಿ, ಆಯಾ ತಜ್ಞರ ನೆರವು ಸಿಗುವಂತೆ ಮಾಡುವುದೇ ನಮ್ಮ ಮುಖ್ಯ ಉದ್ದೇಶ.
“ಇದರ ಅನುಭವ ನನ್ನೊಂದಿಗೆ ಬಹಳ ಚೆನ್ನಾಗಿ ನಡೆಯಿತು. ನಾನು ಬೇರೆ ನಗರಗಳಿಗೆ ಹೋದಾಗ ಅಲ್ಲಿನ ಯುವ ಅಭಿಮಾನಿಗಳನ್ನು ಭೇಟಿಯಾಗಿ, ಅಲ್ಲಿಯೂ ಇಂಥ ಒಂದು ಸಂಘಟನೆ ನಡೆಸುವ ವ್ಯವಸ್ಥೆ ಕುರಿತು ಚರ್ಚಿಸುತ್ತೇನೆ. ಈ ರೀತಿ ಅವರುಗಳು ತಂತಮ್ಮ ನಗರಗಳಿಂದಲೇ ನಮ್ಮ ಸಂಸ್ಥೆಯೊಂದಿಗೆ ಸಂಘಟಿತರಾಗಿ, ಈ ಸೇವಾ ಕಾರ್ಯದ ಅಭಿಯಾನ ಮುಂದುವರಿಸುತ್ತಾರೆ.
“ನನ್ನಿಂದ ಈ ಸಮಾಜಕ್ಕೆ ಕಿಂಚಿತ್ತಾದರೂ ಉಪಕಾರ ಆಗಲಿ ಎಂಬುದೇ ನನ್ನ ಉದ್ದೇಶ. ಹೀಗಾಗಿಯೇ ಮುಂಬೈ ಮಹಾನಗರಿ ಮಾತ್ರವಲ್ಲದೆ, ನಾನು ಸಂಚರಿಸುವ ಸುತ್ತಮುತ್ತಲಿನ ನಗರ ಪ್ರದೇಶಗಳಲ್ಲೂ ಅಭಿಮಾನಿಗಳನ್ನು ಸಂಘಟಿಸುತ್ತಾ, ಈ ಕಾರ್ಯ ಯಶಸ್ವಿಯಾಗಿ ಮುಂದುವರಿಯುವಂತೆ ನೋಡಿಕೊಳ್ಳುತ್ತೇನೆ.”
– ಪ್ರತಿನಿಧಿ