ಭಾರತೀಯ ಭವ್ಯ ಸಂಸ್ಕೃತಿಯ ಪ್ರತೀಕವಾಗಿರುವ ರೇಷ್ಮೆ ಸೀರೆಗೆ ಯಾವುದೂ ಸರಿಸಾಟಿ ಇಲ್ಲ! ನವ ವಧು ತನ್ನ ಮದುವೆಗೆ ಬೇಕಾಗುವಂಥ ವಿವಿಧ ಬಗೆಯ ರೇಷ್ಮೆ ಸೀರೆಗಳನ್ನು ಆರಿಸಿಕೊಳ್ಳುವುದು ಹೇಗೆ ಮತ್ತು ಅವುಗಳ ವೈವಿಧ್ಯತೆಗಳ ಬಗ್ಗೆ ಸಂಪೂರ್ಣ ವಿವರ ತಿಳಿಯೋಣವೇ…….?

ನೀರೆಯರ ಭವ್ಯ ಪಾರಂಪರಿಕ ಉಡುಗೆಯ ಪ್ರತೀಕ ಸೀರೆ. ಇದು ಭಾರತೀಯ ನಾರಿಯ ಅಚ್ಚುಮೆಚ್ಚಿನ ಹಾಗೂ ಆಕರ್ಷಕವಾದ ಉಡುಪುಗಳಲ್ಲಿ ಒಂದು. ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಸೀರೆಗಳ ಪಾತ್ರ ಹಿರಿದು. ಸೀರೆಗೆ ಐದು ಸಾವಿರ ವರ್ಷಗಳ ಇತಿಹಾಸವಿದ್ದು, ಇದು ಸಿಂಧೂ ನದಿಯ ನಾಗರಿಕತೆಯ ಸಮಯದಿಂದರೂ ಚಾಲ್ತಿಯಲ್ಲಿತ್ತು ಎಂದು ನಂಬಲಾಗಿದೆ. ಹತ್ತಿ ಹಿಂಜಿ ಮಹಿಳೆಯರಿಗಾಗಿ ಸತ್ತಿಕಾ ಎಂಬ ಉಡುಪನ್ನು ನೀಡುತ್ತಿದ್ದರು. ಅದರಲ್ಲಿ ಅಂತರೀಯ, ಉತ್ತರೀಯ ಹಾಗೂ ಸ್ತನ ಪಟ್ಟಿ ಎಂಬ ಮೂರು ತುಂಡುಗಳಿದ್ದವು.

ಸೀರೆಯೊಂದಿಗೆ ಹೆಣ್ಣು ಮಕ್ಕಳ ಬದುಕು ತಳುಕು ಹಾಕಿಕೊಂಡಿರುತ್ತದೆ. ತವರಿಗೆ ಬರುವ ಹೆಣ್ಣುಮಕ್ಕಳಿಗೆ ಸೀರೆ ಉಡಿಸಿ ಕಳಿಸುವ ಪದ್ಧತಿ ಇದೆ. ಋತುಮತಿಯಾದಾಗ, ನಿಶ್ಚಿತಾರ್ಥ, ಮದುವೆ, ಸೀಮಂತ, ಕೊನೆಗೆ ಅಂತಿಮ ಸಂಸ್ಕಾರದ ಸಮಯದಲ್ಲೂ ತವರಿನ ಸೀರೆ ಜೊತೆಯಲ್ಲಿ ಬರುವುದು. ಈ ಫ್ಯಾಷನ್‌ ಫಾರ್ವರ್ಡ್ ಯುಗದಲ್ಲಿ ಉಡುಗೆತೊಡುಗೆಯ ಸ್ಟೈಲ್ ‌ಕೂಡ ದೊಡ್ಡ ಪ್ರಮಾಣದಲ್ಲಿ ಬದಲಾಗುತ್ತಿರುತ್ತದೆ. ಕಾಲ ಎಷ್ಟೇ ಬದಲಾದರೂ ನೀರೆಗೆ ಸೀರೆಯ ಮೇಲಿನ ವ್ಯಾಮೋಹ ಕ್ಷೀಣಿಸದು. ಸೀರೆಗಳಲ್ಲೇ ವಿವಿಧ ಪ್ರಯೋಗಗಳನ್ನು ಮಾಡಿ ಟ್ರೆಂಡ್‌ ಗೆ ತಕ್ಕಂತೆ ಅದನ್ನು ಬದಲಾಯಿಸಿಕೊಳ್ಳುವರು.

ಸೀರೆಗಳಲ್ಲಿ ಜಾರ್ಜೆಟ್‌, ಶಿಫಾನ್‌, ಕ್ರೇಪ್‌, ಟಸ್ಸರ್‌, ಕಾಟನ್‌ ಹೀಗೆ ನಾರ್ಮಲ್ ವೇರಿಗೆ ಅನೇಕ ಬಗೆಯ ಸೀರೆಗಳು ಯುವತಿಯರನ್ನು ಆಕರ್ಷಿಸುತ್ತವೆ. ಇವನ್ನು ಮೈಸೂರು ಸಿಲ್ಕ್, ಕಾಂಜೀರಂ, ಮೊಳಕಾಲ್ಮೂರು, ಇಳಕಲ್, ಧರ್ಮಾವರಂ, ಪೈಠಣಿ, ಬನಾರಸ್‌, ಉಪ್ಪಾಡ ಕಟ್ಟು ಹೀಗೆ ಜರಿಯೊಂದಿಗೆ ರಾಯಲ್ ಲುಕ್‌ ಇರುವ ರೇಷ್ಮೆ ಸೀರೆಗಳು ಮದುವೆ ಸಮಾರಂಭಗಳಲ್ಲಿ ಬಳಸಲ್ಪಡುತ್ತವೆ. ಇತ್ತೀಚಿನ ದಿನಗಳಲ್ಲಿ ಕೆಲವು ಯುವತಿಯರು ನಿಶ್ಚಿತಾರ್ಥ ಹಾಗೂ ರಿಸೆಪ್ಷನ್‌ ಗಳಲ್ಲಿ ಉತ್ತರದವರಂತೆ ಲೆಹೆಂಗಾ ಧರಿಸಲು ಬಯಸಿದರೂ, ಮದುವೆ ಮುಹೂರ್ತಕ್ಕೆ ಸಾಂಪ್ರದಾಯಿಕ ರೇಷ್ಮೆ ಸೀರೆಯೇ ಎಲ್ಲರ ಆಯ್ಕೆಯಾಗಿರುತ್ತದೆ.

Image_1663820074

ರೇಷ್ಮೆ ಸೀರೆ ನಮ್ಮ ದೇಶದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ರಾಜ್ಯದಿಂದ ರಾಜ್ಯಕ್ಕೆ ಸೀರೆಗಳ ವಿನ್ಯಾಸ ವಿಭಿನ್ನವಾಗಿದ್ದರೂ ಪ್ರತಿಯೊಂದೂ ಆಕರ್ಷಕ, ಅನನ್ಯ. ಕರ್ನಾಟಕದ ಮೈಸೂರು ಸಿಲ್ಕ್ ಸೀರೆ, ಇಳಕಲ್ ಸೀರೆ, ಮೊಳಕಾಲ್ಮೂರು ಸಿಲ್ಕ್ ಸೀರೆ, ಕೇರಳದ ಬಕಾರಾಂಪುರ ಸೀರೆ, ತೆಲಂಗಾಣದ ಗಡ್ವಾಲಾ ಸಿಲ್ಕ್, ಪೋಚಂಪಲ್ಲಿ, ಧರ್ಮಾವರಂ, ತಮಿಳುನಾಡಿನ ಕಾಂಜೀವರಂ, ಆರಣಿ, ಮದುರೈ ಸೀರೆ,  ಚೆಟ್ಟಿನಾಡು, ವಿನ್ನಲಪತ್ತಿ ಸೀರೆ, ಕೊಯಂಬತ್ತೂರು ಸೀರೆ, ಮಧ್ಯಪ್ರದೇಶದ ಚಂದ್ರಗಿರಿ ಸೀರೆ, ಮಹೇಶ್ವರಿ ಸೀರೆ, ಮಹಾರಾಷ್ಟ್ರದ ಪೈಠಣಿ ಸೀರೆ, ನಲ್ವಾರಿ ಸೀರೆ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುವುದು……

0_Image_1663819571

ಮೈಸೂರು ರೇಷ್ಮೆ ಸೀರೆಗಳು

ಕನ್ನಡ ನಾಡಿನಲ್ಲಿ ಅಧಿಪತ್ಯ ಸಾಧಿಸಿರುವ ಸೀರೆ ಎಂದರೆ ಮೈಸೂರು ಸಿಲ್ಕ್ ಸೀರೆಗಳು. ಮೈಸೂರು ಸಿಲ್ಕ್ ಸೀರೆಯ ವೈಶಿಷ್ಟ್ಯ ಎಂದರೆ ದೂರದಿಂದಲೇ ಕಾಣುವ ಅದರ ಹೊಳಪು, ಶುದ್ಧ ರೇಷಿಮೆಯ ಮೃದುತ್ವ ಹಾಗೂ ದೀರ್ಘಕಾಲಿಕ ಬಾಳಿಕೆ.

ಮೈಸೂರು ಸಿಲ್ಕ್ ಫ್ಯಾಕ್ಟರಿ 1912ರಲ್ಲಿ ಪ್ರಾರಂಭವಾಗಿ ಮೈಸೂರಿನ ನಾಲ್ವಡಿ ಮಹಾರಾಜರು ಸ್ವಿಡ್ವರ್ಜ್ ಲೆಂಡ್‌ ನಿಂದ 2-3 ವಿದ್ಯುತ್‌ ಮಗ್ಗಗಳನ್ನು ಮೈಸೂರಿಗೆ ತರಿಸಿಕೊಂಡು ರೇಷ್ಮೆ ಸೀರೆ ತಯಾರಿಸುವ ಕಾರ್ಖಾನೆಗೆ ಚಾಲನೆ ನೀಡಿದರು. ಆರಂಭದಲ್ಲಿ ಮೈಸೂರು ಸಿಲ್ಕ್ ಸೀರೆಯ ತಯಾರಿ ಕೇವಲ ರಾಜ ಮನೆತನದ ಬಳಕೆಗಷ್ಟೇ ಮೀಸಲಾಗಿತ್ತು. ತದನಂತರ ಎಲ್ಲರ ಬಳಕೆಗೆ ಲಭ್ಯವಾಯಿತು. ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ ಕಳೆದ ಒಂಬತ್ತು ದಶಕಗಳಿಂದ ಇದನ್ನು ಹೆಮ್ಮೆಯಿಂದ ಮುನ್ನಡೆಸಿಕೊಂಡು ಹೋಗುತ್ತಿದೆ. ಶುದ್ಧ ಚಿನ್ನದ ಜರಿಯೊಂದಿಗೆ ಪರಿಪೂರ್ಣ ಶುದ್ಧ ರೇಷ್ಮೆಯನ್ನು ಉತ್ಪಾದಿಸುತ್ತಾ ಬಂದಿರುವ ಕೆಎಸ್‌ಐಸಿ ವಿವಿಧ ಬಣ್ಣಗಳ, ವಿನ್ಯಾಸಗಳ ರೇಷ್ಮೆ ಸೀರೆಯನ್ನು ನೇಯುವಲ್ಲಿ ದೇಶದಲ್ಲೇ ಏಕ ಮಾತ್ರ ಸಂಸ್ಥೆ. ಈ ಸೀರೆಯ ಜರಿ ಮಾಸದೆ ಹೊಚ್ಚ ಹೊಸದರಂತೆ ಕಾಣುವುದು ವಿಶೇಷವಾಗಿದ್ದು, ಇಲ್ಲಿ ದೊಡ್ಡ ಬುಟ್ಟ, ಪಲ್ಲು ಸೀರೆ, ರಿಚ್ ಪಲ್ಲು ಸೀರೆ, ಜರಿ ಪ್ರಿಂಟೆಡ್‌ ಸೀರೆ, ಟಿಶ್ಯೂ ಸೀರೆ, ಸಾಂಪ್ರದಾಯಿಕ ಜರಿ ಸೀರೆ, ಹೀಗೆ 15 ಬಗೆಯ 300ಕ್ಕೂ ಹೆಚ್ಚು ವರ್ಣರಂಜಿತ ಮಾದರಿಯ ಸೀರೆಗಳು ತಯಾರಾಗುತ್ತಿರುವುದು ವಿಶೇಷ.

IMG-20220926-WA0107

ಇಳಕಲ್ ಸೀರೆ

ಬಾಗಲಕೋಟೆಯ ಇಳಕಲ್ ನಲ್ಲಿ ತಯಾರಾಗುವ ಇಳಕಲ್ ಸೀರೆ ಉತ್ತರ ಕರ್ನಾಟಕದ ಹೆಮ್ಮೆ. ಇದಕ್ಕೆ ಎಲ್ಲಾ ಕಡೆಯಿಂದಲೂ ಮಾನ್ಯತೆ ಹಾಗೂ ಬೇಡಿಕೆ ಇದೆ. 12ನೇ ಶತಮಾನದಿಂದಲೂ ಟೋಪ್‌ ಟೆಕ್ನಿಕ್‌ ನ್ನು ಬಳಸಿ ಇದನ್ನು ನೇಯುವರು. ಸೀರೆಯ ಅಂಚು, ವಿಶಾಲವಾಗಿ ನಾಲ್ಕರಿಂದ ಐದು ಇಂಚಿನಷ್ಟು ಅಗಲವಿರುತ್ತದೆ. ಸಾಂಪ್ರದಾಯಿಕ ಸೀರೆಗಳ ಬಣ್ಣ ಕೆಂಪು ಇಲ್ಲವೇ ಮೆರೂನ್‌ ಬಣ್ಣದ್ದಾಗಿರುತ್ತದೆ. ಸೀರೆಯ ತುದಿಯಲ್ಲಿ ಕೋಚಿ ಕಂಬಿ, ಟೋಪಿ ತೆನೆ, ಜೋಳದ ತೆನೆ ಇತ್ಯಾದಿಗಳ ಹೆಣಿಗೆ ವಿನ್ಯಾಸವಿರುತ್ತದೆ. ಉತ್ತರ ಕರ್ನಾಟಕ ಮಾತ್ರವಲ್ಲದೆ, ದೇಶಾದ್ಯಂತ ಇದಕ್ಕೆ ಬೇಡಿಕೆ ಇದೆ. ಪ್ರತಿಯೊಬ್ಬ ಮಹಿಳೆಯ ಬಳಿ ಒಂದಾದರೂ ಇಳಕಲ್ ಸೀರೆ ಇದ್ದೇ ಇರುತ್ತದೆ.

0_Image_1663820023

ಮೊಳಕಾಲ್ಮೂರು ಸೀರೆ

ಮೊಳಕಾಲ್ಮೂರು ಎಂಬ ಚಿತ್ರದುರ್ಗದ ಚಿಕ್ಕ ಪ್ರದೇಶದಲ್ಲಿ ತಯಾರಾಗುವ ಈ ರೇಷ್ಮೆ ಸೀರೆ ತನ್ನ ವಿಶಿಷ್ಟ ವಿನ್ಯಾಸಗಳಿಂದ ಕರ್ನಾಟಕದಲ್ಲಿ ಮಾತ್ರವಲ್ಲದೆ, ಭಾರತದಾದ್ಯಂತ ಜನಪ್ರಿಯತೆ ಪಡೆದಿದೆ. ಈ ಸೀರೆಗಳ ವಿನ್ಯಾಸದಲ್ಲಿ ಮೂಡಿಸಲಾಗುವ ಕಲಾ ಪ್ರಕಾರಗಳಲ್ಲಿ ಹಣ್ಣುಗಳು, ಪ್ರಾಣಿಗಳು ಹಾಗೂ ನಾನಾ ತರಹದ ಪುಷ್ಪಗಳ ಸಮ್ಮಿಲನವಿರುತ್ತದೆ. ವಧುವಿಗಾಗಿ ತಯಾರಾಗುವ ಮೊಳಕಾಲ್ಮೂರು ಬ್ರೈಡಲ್ ಸೀರೆಗಳಿಗೆ ಉತ್ಕೃಷ್ಟ ಗುಣಮಟ್ಟದ ಜರಿಯನ್ನು ಬಳಸಿ ತಯಾರಿಸಲಾಗುತ್ತದೆ. ದುಬಾರಿ ಬೆಲೆಯ ಈ ಸೀರೆಗಳು ವಧುವಿನ ಅಲಂಕಾರಕ್ಕೆ ವೈಭವದ ಮೆರುಗನ್ನು ನೀಡುತ್ತವೆ.

Sharee

ಉಡುಪಿ ಸೀರೆ

ಅಳಿವಿನಂಚಿನಲ್ಲಿರುವ ಉಡುಪಿ ಸೀರೆ, ಕರಾವಳಿ ಕರ್ನಾಟಕದ ಪ್ರಮುಖ ಸೀರೆ. ಬ್ರಾಂಡ್‌ ಜಿಐ ಮಾನ್ಯತೆ ಪಡೆದಿರುವ ಈ ಕೈ ಮಗ್ಗದ ಸೀರೆ ತಿಳಿ ಬಣ್ಣದ ಒಡಲು, ಗಾಢ ಬಣ್ಣದ ಅಂಚು ಮತ್ತು ಸೆರಗು ಹೊಂದಿರುತ್ತದೆ. ಇದು ತನ್ನ ಸರಳ ಲುಕ್‌ ನಿಂದಲೇ ಇಷ್ಟವಾಗುತ್ತದೆ.

Image_1665224900

ಕೇರಳ ಸೀರೆ

ಕೇರಳ ಸೀರೆಯಲ್ಲಿ ಬಿಳಿ, ನಸು ಹಳದಿ ಸೀರೆಗೆ ಗೋಲ್ಡನ್‌ ಬಣ್ಣದ ಜರಿ ಇರುವುದು ಸಾಮಾನ್ಯ. ಇದರಲ್ಲಿ ಕಲರ್‌ ಕರಿ ಪ್ರಿಂಟ್‌ಸೀರೆ, ಪೀಕಾಕ್‌ ಎಂಬ್ರಾಯಿಡರಿ ಕಸು ಸೀರೆ, ಸಿಲ್ವರ್‌ ಎಂಬೋಸ್‌, ಲಿಲ್ಲಿ ಪ್ರಿಂಟ್‌, ರಾಧಾಕೃಷ್ಣ ಪ್ರಿಂಟ್‌ ಹೀಗೆ ಅನೇಕ ಬಗೆಯುಂಟು.

ಕಾಂಜೀವರಂ ಸೀರೆ

ದಕ್ಷಿಣ ಭಾರತದ ಪ್ರಖ್ಯಾತ ಹಳ್ಳಿ ಕಂಚಿ. ಇದು ರೇಷ್ಮೆ ಸೀರೆಗಳಿಗೆ ಹೆಸರುವಾಸಿ. ಕಾಂಚಿಪುರದ ಈ ರೇಷ್ಮೆ ಸೀರೆಗಳನ್ನು ಹಿಪ್ಪುನೇರಳೆ ರೇಷ್ಮೆಯಿಂದ ತಯಾರಿಸಲಾಗಿದ್ದು, ಬೆಳ್ಳಿ ಮತ್ತು ಚಿನ್ನದ ಜರಿಯಿಂದ ನೇಯಲಾಗುತ್ತದೆ. ಕಂಚಿಯಲ್ಲಿ ನೇಯಲ್ಪಡುವ ಈ ರೀತಿಯ ವಿಶಿಷ್ಟ ಸೀರೆಗಳು ಹಲವಾರು ವೆರೈಟಿ ಡಿಸೈನ್‌ ಗಳಲ್ಲಿದ್ದು, ಯುವತಿಯರನ್ನು ಬಹಳವಾಗಿ ಆಕರ್ಷಿಸುತ್ತದೆ. ಕಾಂಚಿಪುರಂ ಸೀರೆಗಳು ಅದ್ಭುತವಾದ ವಿನ್ಯಾಸ ಹಾಗೂ ಕಣ್ಮನ ಸೆಳೆಯುವ ಬಣ್ಣಗಳನ್ನು ಒಳಗೊಂಡಿರುತ್ತವೆ. ಸೀರೆಯ ವಿನ್ಯಾಸಗಳು ಅಲ್ಲಿನ ಹಲವಾರು ದೇವಾಲಯಗಳು, ಗ್ರಂಥಗಳು ಹಾಗೂ ಪ್ರತಿಮೆಗಳಿಂದ ಪ್ರಭಾವಿತವಾಗಿದ್ದು, ಟೆಂಪಲ್ ಡಿಸೈನ್ಸ್ ಎಂಬ ವಿಶೇಷ ವಿನ್ಯಾಸ ಹೊಂದಿರುತ್ತವೆ. ಇದರ ಪಲ್ಲು ರಿಚ್‌ಎಲಿಗೆಂಟ್‌ ಲುಕ್‌ ನಿಂದ ಕಂಗೊಳಿಸುತ್ತಾ ಬ್ರೈಡಲ್ ವೇರ್‌ ಗೆ ಹೇಳಿ ಮಾಡಿಸಿದಂತಿರುತ್ತದೆ.

Sharee-2

ಬನಾರಸಿ ರೇಷ್ಮೆ ಸೀರೆಗಳು

ಬನಾರಸಿ ರೇಷ್ಮೆ ಸೀರೆಗಳು ಉತ್ತರ ಪ್ರದೇಶದ ವಾರಾಣಸಿಯಲ್ಲಿ ದೊರೆಯುತ್ತವೆ. ಬನಾರಸ್‌ ಎಂಬುದು ವಾರಾಣಸಿಯ ಹಿಂದಿನ ಹೆಸರು ಬನಾರಸಿ ಸೀರೆಗಳಿಗೆ ಅದರದೇ ಇತಿಹಾಸವಿದೆ. ಇವು ಮೊಘಲರಿಂದ ಪ್ರೇರಣೆಗೊಂಡು ವಿನ್ಯಾಸಗೊಳಿಸಲ್ಪಟ್ಟಿರುವ ಸೀರೆಗಳಾಗಿವೆ. ನಿಜವಾದ ಚಿನ್ನ ಹಾಗೂ ಬೆಳ್ಳಿಯ ಎಳೆಗಳಿಂದ ಕೂಡ ಇದನ್ನು ತಯಾರಿಸುತ್ತಾರೆ. ಬನಾರಸಿ ಸೀರೆಗಳು ರಾಯಲ್ ಲುಕ್‌ ನೀಡುವುದರೊಂದಿಗೆ ಭಾರೀ ರಿಚ್‌ ಗ್ರಾಂಡ್‌ ಆಗಿಯೂ ಕಾಣುತ್ತವೆ.

ಆಂಧ್ರದ ರೇಷ್ಮೆ ಸೀರೆಗಳು

ತೆಲಂಗಾಣ ತನ್ನ ರೇಷ್ಮೆ ಸೀರೆಯ ಉತ್ಪಾದನೆಗೆ ಹೆಚ್ಚು ಹೆಸರುವಾಸಿಯಾಗಿದೆ. ಕೈಮಗ್ಗದ ಸೀರೆಗಳು, ಶ್ರೀಮಂತ ವಿನ್ಯಾಸ ಹೊಂದಿರುವ ಸೀರೆಗಳು, ಗಡ್ವಾಲಾ ಸಿಲ್ಕ್, ಪೋಚಂಪಲ್ಲಿ ಸೀರೆಗಳು ಜರಿ ವಿನ್ಯಾಸ ಹಾಗೂ ನೇಯ್ಗೆಯಲ್ಲಿ ವಿಶೇಷವೆನಿಸುತ್ತವೆ. ಹಾಗೆಯೇ ಧರ್ಮಾವರಂ ಸೀರೆಗಳು ಸಾಕಷ್ಟು ಭಾರವಾಗಿದ್ದು ಆಕರ್ಷಕವಾಗಿರುತ್ತವೆ.

ಸುಮಾ ರಮೇಶ್

ರೇಷ್ಮೆ ಸೀರೆಗಳನ್ನು ಅಸಲಿ ಅಥವಾ ನಕಲಿ ಎಂದು ಗುರುತಿಸುವುದು ಹೇಗೆ…..?

ರೇಷ್ಮೆ ಸೀರೆ ಪ್ರತಿಷ್ಠೆಯ ಸಂಕೇತ ಹೌದು. ಅದಕ್ಕಾಗಿಯೇ ಸಿರಿವಂತರು ಲಕ್ಷಾಂತರ ರೂಪಾಯಿ ವ್ಯಯಿಸಿದರೆ ಮಧ್ಯಮ ವರ್ಗದವರು ಸಾವಿರಾರು ರೂಪಾಯಿ ನೀಡಿ ಖರೀದಿಸಿರುತ್ತಾರೆ. ಹಾಗಾಗಿ ರೇಷ್ಮೆ ಸೀರೆ ಖರೀದಿಸುವಾಗ ಸೀರೆಯ ಗುಣಮಟ್ಟ ಅಳೆಯಲು ಒಂದು ಚಿಹ್ನೆ ಇದೆ. ಅದೇ ಸಿಲ್ಕ್ ಮಾರ್ಕ್‌, ಆಹಾರ ಪದಾರ್ಥಗಳಿಗೆ ಆ್ಯಗ್‌ ಮಾರ್ಕ್‌ ಇದ್ದಂತೆ, ಚಿನ್ನಕ್ಕೆ ಹಾಲ್ ‌ಮಾರ್ಕ್‌ ಇದ್ದಂತೆ ರೇಷ್ಮೆ ಸೀರೆಗಳಿಗೆ ಸಿಲ್ಕ್ ಮಾರ್ಕ್‌ ನ ಟ್ಯಾಗ್‌ ಅಂಟಿಸಲಾಗುತ್ತದೆ. ಅಲ್ಲದೆ ಪ್ರತಿ ಟ್ಯಾಗ್‌ ಗೂ ಕೋಡ್‌ ವರ್ಡ್ ಇರುತ್ತದೆ. ಗ್ರಾಹಕರು ತಾವು ಖರೀದಿಸಿದ ರೇಷ್ಮೆ ಸೀರೆಯ ಬಗ್ಗೆ ಸಂಶಯಗಳಿದ್ದರೆ, ಸಿಲ್ಕ್ ಮಾರ್ಕ್‌ ಸಂಸ್ಥೆಗೆ ನೇರವಾಗಿ ದೂರು ನೀಡಬಹುದಾಗಿದೆ.

ರೇಷ್ಮೆ ಸೀರೆಯ ನಿರ್ಹಣೆ ಹೇಗೆ….?

ರೇಷ್ಮೆ ಸೀರೆಗಳನ್ನು ಇತರೆ ಬಟ್ಟೆಗಳೊಂದಿಗೆ ಇಡಬೇಡಿ. ಒಂದೊಂದು ರೇಷ್ಮೆ ಸೀರೆಯನ್ನೂ ಮಸ್ಲಿನ್‌ ಬಟ್ಟೆಯಲ್ಲಿ ಸುತ್ತಿಡಿ. ಆಗಾಗ ಮಡಿಕೆಗಳನ್ನು ಬದಲಾಯಿಸುತ್ತಿರಬೇಕು. ಇಲ್ಲದಿದ್ದರೆ ಸೀರೆ ಇಟ್ಟಲ್ಲೇ ಕಟ್‌ ಆಗುವ ಇಲ್ಲವೇ ಹರಿದುಹೋಗುವ ಅವಕಾಶವಿರುತ್ತದೆ.

ರೇಷ್ಮೆ ಸೀರೆಯಲ್ಲಿ ಫೈಬರ್‌ ಅಂಶ ಇರುವುದರಿಂದ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ನಾಲ್ಕೈದು ತಿಂಗಳಿಗೊಮ್ಮೆ ಬಿಸಿಲಿನಲ್ಲಿ ಒಣಗಿಸಿ ಮಡಚಿಡಬೇಕು. ತೇವಾಂಶ ಹೆಚ್ಚು ಇರುವಂತಹ ಪ್ರದೇಶದಲ್ಲಿ ಕನಿಷ್ಠ ಎರಡು ಮೂರು ತಿಂಗಳಿಗೊಮ್ಮೆಯಾದರೂ ನೆರಳಿನಲ್ಲಿ ಒಣಗಿಸಬೇಕು. ರೇಷ್ಮೆ ಸೀರೆ ಇರುವ ಕಪಾಟಿನಲ್ಲಿ ನುಸಿ ಗುಳಿಗೆ ಬದಲು ಸಿಲಿಕಾನ್ ಬ್ಯಾಗ್ ಗಳನ್ನು ಇರಿಸಿದರೆ ತೇವಾಂಶ ಇರುವುದಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ