ದಕ್ಷಿಣದ ಚಿತ್ರಗಳು ಇಡೀ ದೇಶಾದ್ಯಂತ ಯಶಸ್ವಿಯಾಗಿ `ಪ್ಯಾನ್‌ ಇಂಡಿಯಾ ಚಿತ್ರಗಳು’ ಎಂಬ ಖ್ಯಾತಿಗೊಳಗಾಗಿ ಬಾಕ್ಸ್ ಆಫೀಸ್‌ ನಲ್ಲಿ ಕೋಟಿಗಟ್ಟಲೆ ಗಳಿಸುತ್ತಿರುವಾಗ, ಬಾಲಿವುಡ್‌ ಸಿನಿಮಾ ಮಖಾಡೆ ಮಲಗಿರುವುದೇಕೆ? ಚಿತ್ರಮಂದಿರಕ್ಕೆ ಬಾರದ ಜನ, OTT ಯಲ್ಲೂ ದಕ್ಷಿಣದ ಚಿತ್ರಗಳದ್ದೇ ಮೇಲುಗೈ! ಬಾಲಿವುಡ್‌ ತೀರಾ ಹದಗೆಟ್ಟಿರುವುದಕ್ಕೆ ಸಾಕ್ಷಿ. ಇದಕ್ಕೆ ಕಾರಣವೇನು….?

ಬಾಲಿವುಡ್‌ ನ ಯಾವಾ ಕಲಾವಿದ ಅಥವಾ ನಿರ್ದೇಶಕರೂ ಇಂದು ಗಟ್ಟಿಯಾಗಿ ನೆಲೆ ನಿಂತಿದ್ದಾರೆ ಎಂದು ಹೇಳಲಾಗದು. ಪರಿಣಾಮವಾಗಿ ಇಂದು ಬಾಲಿವುಡ್‌ ನ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ದಯನೀಯವಾಗಿ ಸೋತು ನೆಲಕಚ್ಚುತ್ತಿವೆ, ಮಖಾಡೆ ಮಲಗಿಬಿಟ್ಟಿವೆ. ವರ್ತಮಾನದ ಎಲ್ಲಾ ಕಲಾವಿದರೂ ತಮ್ಮನ್ನು ತಾವು ಸಾಧಾರಣ, ಮಾಮೂಲಿ ಮನುಷ್ಯರಿಂದ ದೂರ ಇರಿಸಿಕೊಳ್ಳುವಂಥ ಪ್ರಯತ್ನದಲ್ಲೇ ತೊಡಗಿರುತ್ತಾರೆ. ಹಿಂದಿನ ಕಾಲದಲ್ಲಾದರೆ ಯಾವ ಸಾಧಾರಣ ವ್ಯಕ್ತಿಯೇ ಆಗಲಿ, ಯಾವುದೇ ಶೂಟಿಂಗಿನ ಸೆಟ್‌ ಗೆ ಹೋಗಿ, ಅಲ್ಲಿ ಲೈಟ್‌ ಬಾಯ್‌ ನಿಂದ ಹಿಡಿದು ದೊಡ್ಡ ಸ್ಟಾರ್‌ ವರೆಗೂ ಯಾರನ್ನಾದರೂ ಭೇಟಿ ಆಗಬಹುದಿತ್ತು. ಆ ದಿನಗಳಲ್ಲಿ ಕಲಾವಿದರ ಅಭಿಮಾನಿಗಳೂ ಸಹ ಖುಷಿಯಾಗಿ ತಮ್ಮ ಮೆಚ್ಚಿನ ನಟನಟಿಯರನ್ನು ಕಾಣಲು ಹೀಗೆ ಶೂಟಿಂಗ್‌ ಸ್ಪಾಟ್‌ ಗೆ ಧಾವಿಸುತ್ತಿದ್ದರು. ಆಗೆಲ್ಲ ಅಭಿಮಾನಿಗಳೊಂದಿಗೆ ಕಲಾವಿದರು, ತಾಂತ್ರಿಕ ವರ್ಗದವರು ಎಲ್ಲರೂ ಒಂದೇ ಕಡೆ ಒಟ್ಟಾಗಿ ಕುಳಿತು ಊಟ ಮಾಡುತ್ತಿದ್ದರು.

ಆದರೆ ಈಗಿನ ಪರಿಸ್ಥಿತಿ ಖಂಡಿತಾ ಹೀಗಿಲ್ಲ. ಈಗೆಲ್ಲ ಕಲಾವಿದರು ಮೊದಲ ಚಿತ್ರ ಸೈನ್‌ ಮಾಡಿದ ತಕ್ಷಣವೇ ಪಿ, ಮ್ಯಾನೇಜರ್‌, ಸುರಕ್ಷತೆಗಾಗಿ ಬೌನ್ಸರ್‌ ಸೇವೆ ಎಂದು ಬಾಡಿಗಾರ್ಡ್‌ ನಿಯಮಿಸಿಕೊಳ್ಳುತ್ತಾರೆ, ಅವರ ನಡುವೆ ತಮಗೆ ತಾವೇ ಕೈದಿಗಳಾಗುತ್ತಾರೆ. ಈ ಸರ್ಪಗಾವಲನ್ನು ದಾಟಿ ಸಾಧಾರಣ ಜನ ತಮ್ಮ ನೆಚ್ಚಿನ ನಟನಟಿಯರನ್ನು ಭೇಟಿಯಾಗುವುದಾದರೂ ಹೇಗೆ? ಈಗ ಯಾವ ಕಲಾವಿದರೂ ಸೆಟ್‌ ಗಳಲ್ಲಿ ಬಹಳ ಹೊತ್ತೇನೂ ಉಳಿಯುವುದಿಲ್ಲ. ಅವರೆಲ್ಲ ತಂತಮ್ಮ ಪರ್ಸನಲ್ ವ್ಯಾನಿಟಿಗಳಲ್ಲಿ ಕುಳಿತೇ ಇರುತ್ತಾರೆ. ತಮ್ಮ ಸೀನ್‌ ನ ಶೂಟಿಂಗ್‌ ಎಂದು ಹೇಳಿದಾಗ ಮಾತ್ರ, ವ್ಯಾನಿಟಿ ವ್ಯಾನಿನಿಂದ ಎದ್ದು ಕ್ಯಾಮೆರಾ ಎದುರು ಹೋಗಿ ನಿಲ್ಲುತ್ತಾರೆ. ಅದಾದ ತಕ್ಷಣ ತಮ್ಮ ವ್ಯಾನಿಗೆ ದೌಡಾಯಿಸುತ್ತಾರೆ.

ಹೀಗಿರುವ ಇಂದಿನ ಮಹಾನ್‌ ತಾರೆಯರು ತಳಹದಿಯ ಮಟ್ಟದಲ್ಲಿ ನಮ್ಮ ಸಾಮಾನ್ಯ ಜನರನ್ನು ಗುರುತಿಸುವುದಾದರೂ ಹೇಗೆ? ಇಂಥ ಸ್ಟಾರ್‌ ಗಳಿಗೆ ತಮ್ಮದೇ ಸೆಟ್‌ ಗಳ ಸ್ಪಾಟ್‌ ಬಾಯ್‌ ಗಳಿಗೆ ಇರುವ ಸಮಸ್ಯೆಗಳ ಬಗ್ಗೆ ಗೊತ್ತೇ? ಸಾಮಾನ್ಯ ಜನ ಎಂಥ ಚಿತ್ರ ನೋಡಲು ಬಯಸುತ್ತಾರೆ? ಅದಕ್ಕೆ ಸ್ಪಂದಿಸುವುದು ಹೇಗೆ? ನಿವಾರಣೆ ಹೇಗೆ…..? ಇತ್ಯಾದಿಗಳ ಅರಿವಾದರೂ ಇದೆಯೇ?

ಇದಕ್ಕೆ ವಿರುದ್ಧ ಎಂಬಂತೆ ದ. ಭಾರತದ ಚಿತ್ರೋದ್ಯಮದ ಮಂದಿ ಸದಾ ಸಾಮಾನ್ಯರೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ. ಕನ್ನಡದ್ದೇ ಇರಲಿ, ತೆಲಗಿನದ್ದೇ ಇರಲಿ, ತಮಿಳಿನ ರೋಬೋ ಇತ್ಯಾದಿ ಇರಲಿ, ಜನಸಾಮಾನ್ಯರ ಸಂಪರ್ಕದಿಂದಾಗಿಯೇ ಈ ಚಿತ್ರಗಳು ಇಷ್ಟು ಜನಪ್ರಿಯ ಆಗಲು ಸಾಧ್ಯವಾಯ್ತು. ಚಿತ್ರದ ಯಶಸ್ಸಿನಿಂದ, ನಾಯಕ ರಾಮ್ ಚರಣ್‌ ಮುಂಬೈನ ಪಂಚತಾರಾ ಹೋಟೆಲ್ ನಲ್ಲಿ ಪಾರ್ಟಿ ಏರ್ಪಡಿಸಿ, ಸಣ್ಣ ಲೈಟ್‌ ಬಾಯ್‌ ನ್ನೂ ಬಿಡದೆ, ಇಡೀ ಚಿತ್ರದ ಎಲ್ಲಾ ತಾಂತ್ರಿಕ ವರ್ಗದವರನ್ನು ಮನೆಗೂ ಕರೆಸಿಕೊಂಡು, ಪ್ರತಿಯೊಬ್ಬರಿಗೂ 10 ಗ್ರಾಮಿನ ಚಿನ್ನದ ಸರ ನೀಡಿ, ಭೂರಿ ಭೋಜನ ಏರ್ಪಡಿಸಿದ್ದ. ಅವರೊಂದಿಗೆ ಸುದೀರ್ಘ ಮಾತುಕಥೆಯಲ್ಲಿ ಪಾಲ್ಗೊಂಡಿದ್ದ. ಇದಲ್ಲವೇ ಅಸಲಿ ಬಾಂಧವ್ಯ……?

ಅದೇ ಬಾಲಿವುಡ್‌ ನಲ್ಲಿ ಪ್ರತಿ ಚಿತ್ರದ ಬಿಡುಗಡೆಗೂ ಮುನ್ನ ಒಂದಿಷ್ಟು ಪತ್ರಕರ್ತರನ್ನು ಒಂದೆಡೆ ಕಲೆ ಹಾಕಿ, ಏನೋ ಉಡುಗೊರೆ ನೀಡಿ, ಡ್ರಿಂಕ್ಸ್ ಕೊಟ್ಟು, ಬಾಯಿಪಾಠ ಮಾಡಿದ ಒಂದಿಷ್ಟು ವಿಚಾರ ಅವರಿಗೆ ವರದಿ ಒಪ್ಪಿಸಿ, ಕೆಲವೇ ನಿಮಿಷಗಳಲ್ಲಿ ನಾಯಕ, ನಿರ್ಮಾಪಕ, ನಿರ್ದೇಶಕರು ಕಣ್ಮರೆ ಆಗಿಬಿಡುತ್ತಾರೆ. ಹಾಗಿರುವಾಗ ಜನಸಾಮಾನ್ಯರ ಸ್ಥಿತಿಗತಿ ಇವರಿಗೆ ಹೇಗೆ ತಿಳಿಯಬೇಕು? ಈ ಮಹಾನ್‌ ತಾರೆಯರ ನಟನೆ ಬಗ್ಗೆ ಯಾರು ಏನೆಂದು ಭಾವಿಸುತ್ತಾರೆ ಎಂಬುದು ಇವರುಗಳಿಗೆ ಹೇಗೆ ಗೊತ್ತಾಗಬೇಕು? ಇತ್ತೀಚೆಗೆ ಪತ್ರಕರ್ತರು ಸಹ `ಗ್ರೂಪ್‌ ಇಂಟರ್‌ ವ್ಯೂ’ದ ಭಾಗವಾಗಲು ಯಾವ ಕೀಳು ಮಟ್ಟಕ್ಕೆ ಇಳಿಯುತ್ತಾರೆಂಬುದನ್ನು ವಿವರಿಸ ಹೊರಟರೆ ಅದು ಬೇರೆ ದೊಡ್ಡ ಲೇಖನವಾದೀತು.

ಮೀಡಿಯಾದಿಂದ ವಿಮುಖರೇಕೆ?

ಇದು ಖಂಡಿತಾ ನಿಜ, ಬಾಲಿವುಡ್‌ ನ ತಾರೆಯರಿಗೆ ಪತ್ರಕರ್ತರೊಂದಿಗೆ ಕುಳಿತು ಮಾತನಾಡುವಷ್ಟು ಸಹನೆ, ಸಮಯ ಎರಡೂ ಇಲ್ಲ! ಅಥವಾ ತಮ್ಮ ಪಿಎಗಳ ಮಾತು ಕೇಳಿಕೊಂಡು ಪ್ರೆಸ್‌ ನ್ನು ಮಾರು ದೂರ ಇಡುತ್ತಾರೆ. ಒಂದೇ ಸಲ 20-50 ಪತ್ರಕರ್ತರಿಗೆ `ಗ್ರೂಪ್‌ ಇಂಟರ್‌ ವ್ಯೂ’ ನೀಡುತ್ತಾರೆ, ಅವರನ್ನು ಟೀಕಿಸುತ್ತಾರೆ ಸಹ.

ಒಂದು ಸಲ ನಾನು ಅಕ್ಷಯ್‌ ಕುಮಾರ್‌ ಜೊತೆ ಆತನ ಮನೆಯಲ್ಲಿ ಪ್ರತ್ಯೇಕ ಸಂದರ್ಶನದಲ್ಲಿದ್ದಾಗ, ಆತ ಬಲು ಗರ್ವದಿಂದ ಹಿಂದಿನ ದಿನವಷ್ಟೆ ಒಟ್ಟಿಗೆ 57 ಪತ್ರಕರ್ತರ ಜೊತೆ 15 ನಿಮಿಷ ಸಂದರ್ಶನ ನೀಡಿದ್ದಾಗಿ ಕೊಚ್ಚಿಕೊಳ್ಳುತ್ತಿದ್ದ.

ಪ್ರಸಿದ್ಧ ನಟ, ನಿರ್ಮಾಪಕ, ನಿರ್ದೇಶಕ ರಾಜ್‌ ಕಪೂರ್‌ ದೊಡ್ಡ ಸ್ಟಾರ್‌ ಆಗುವ ಮೊದಲು 1935ರಲ್ಲಿ `ಇನ್‌ ಕ್ವಿಲಾಬ್‌’ನಲ್ಲಿ  ನಟಿಸುತ್ತಿದ್ದ ಸಮಯ. ಆತ ತನ್ನ ತಂದೆ ಪೃಥ್ವಿರಾಜ್‌ ಕಪೂರ್‌ ರ (ಇರು ಕನ್ನಡದ `ಸಾಕ್ಷಾತ್ಕಾರದಲ್ಲಿ ಡಾ. ರಾಜ್‌ರ ತಂದೆ ಪಾತ್ರ ನಿರ್ವಹಿಸಿದ್ದರು) ಸಲಹೆಯಂತೆ ಎಷ್ಟೆಲ್ಲ ಅನುಕೂಲಗಳಿದ್ದರೂ, ಮುಂದೆ ಸ್ಟಾರ್‌ ಆಗಿ ಬೆಳೆದರೂ, ಸಾಧಾರಣ ಮುಂಬೈ ಬಸ್ಸು, ಲೋಕಲ್ ರೈಲುಗಳಲ್ಲೇ ಓಡಾಡುತ್ತಾ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದರು.

ಆ ಕಾಲದಲ್ಲಿ ಅವರು ಶೂಟಿಂಗ್‌ ಸ್ಪಾಟ್‌ ನ ಪ್ರತಿಯೊಬ್ಬ ಸಣ್ಣಪುಟ್ಟ ತಾಂತ್ರಿಕ ಸಿಬ್ಬಂದಿಯೊಂದಿಗೂ ಮನಬಿಚ್ಚಿ ಮಾತನಾಡುತ್ತಿದ್ದರು. ಆತ ಹೊಸ ಚಿತ್ರದ ವಿಷಯ ವಸ್ತುವಿನ ಹುಡುಕಾಟದಲ್ಲಿ ಏಕಾಂಗಿಯಾಗಿ ಕೆಲಸ ಮಾಡಬೇಕಿದ್ದಾಗ, ಮುಂಬೈನಿಂದ 300 ಕಿ.ಮೀ. ದೂರದಲ್ಲಿದ್ದ ಪುಣೆಯ ತಮ್ಮ ಫಾರ್ಮ್ ಹೌಸ್‌ ಗೆ ಹೋಗುತ್ತಿದ್ದರಂತೆ. ಈ ಫಾರ್ಮ್ ಹೌಸ್‌ ಗೆ ಸಂಬಂಧಿಸಿದ ಕೆಲವು ಜನರನ್ನು ಮಾತನಾಡಿಸಿದೆ. ಅವರುಗಳ ಪ್ರಕಾರ, ರಾಜ್‌ ಕಪೂರ್‌ ಅಲ್ಲಿದ್ದಾಗ, ಎಲ್ಲಾ ಸಾರ್ವಜನಿಕರೊಂದಿಗೂ ಬಹಳ ಹೊತ್ತು ಮಾತುಕಥೆಗೆ ತೊಡಗುತ್ತಿದ್ದರಂತೆ. ಎಲ್ಲಾ ಜನರ ಸುಖ ದುಃಖ ವಿಚಾರಿಸುತ್ತಿದ್ದರಂತೆ.

ಆದರೆ ಇಂದಿನ ಬಾಲಿವುಡ್‌ ನಿರ್ಮಾಪಕ, ನಿರ್ದೇಶಕ, ತಾರೆಯರು ಹಿಂದಿಯಲ್ಲಿ ಮಾತನಾಡುವುದನ್ನೇ ಇಷ್ಟಪಡುವುದಿಲ್ಲ. ರಾಷ್ಟ್ರದ 4 ಪ್ರಮುಖ ಆಂಗ್ಲ ಪತ್ರಕರ್ತರೊಡನೆ ಮುಖಾಮುಖಿ ಆದನಂತರ, ಉಳಿದೆಲ್ಲ ಹಿಂದಿ ಪತ್ರಕರ್ತರನ್ನೂ ಸೇರಿಸಿ ಕಾಟಾಚಾರಕ್ಕೆ ಗ್ರೂಪ್‌ ಸಂದರ್ಶನ ಮುಗಿಸಿಬಿಟ್ಟರೆ ಆಯ್ತು. ಗ್ರೂಪ್‌ ಸಂದರ್ಶನಗಳಲ್ಲೂ ಬಾಯಿ ತೆರೆದು ಸಹಜವಾಗಿ ನಿರರ್ಗಳವಾಗಿ ಮಾತನಾಡಲು ಹಿಂಜರಿಯುತ್ತಾರೆ.

bollywood

ಮೂಲಕ್ಕೆ ಅಂಟಿದ ಕಲಾವಿದರು

ಪ್ರಸಿದ್ಧ  ನಿರ್ಮಾಪಕ ನಿರ್ದೇಶಕ ಸುನೀಲ್ ‌ದರ್ಶನ್‌ ರ ತಂದೆ ತಮ್ಮ ಕಾಲದ ಪ್ರಸಿದ್ಧ ನಿರ್ಮಾಪಕ ಹಾಗೂ ಚಿತ್ರ ವಿತರಕರು. ತಮ್ಮ ಓದು ಮುಗಿಸಿ ಸುನೀಲ್ ‌ಚಿತ್ರರಂಗಕ್ಕಿಳಿದು ನಿರ್ಮಾಣಕ್ಕೆ ತೊಡಗಿದಾಗ, ಅವರ ತಂದೆ ಮಗನನ್ನು ಮ.ಪ್ರದೇಶದ ಇಂದೋರ್‌ ನ ತಮ್ಮ ವಿತರಕ ಕಛೇರಿಗೆ ಮಗ ಅನುಭವ ಪಡೆಯಲೆಂದು ಅಲ್ಲೇ 6 ರ್ಷ ದುಡಿಯುವಂತೆ ಮಾಡಿದರು. ಆ 6 ವರ್ಷ ಅವರು ಸುತ್ತಮುತ್ತಲ ಹಳ್ಳಿಗಳಿಗೆ ಭೇಟಿ ನೀಡಿ, ಗ್ರಾಮೀಣ ಜನರ ಕಷ್ಟ ಸುಖ ಅರಿತರು.

ಒಂದು ಸಲ ಅವರು ನನಗೆ ಹೇಳಿದ್ದು, ಈ 6 ವರ್ಷಗಳ ಶ್ರಮದ ದುಡಿತ, ಮುಂದೆ ತಾವು ಸಿನಿರಂಗದಲ್ಲಿ ಪ್ರಗತಿ ಹೊಂದಲು ಬಹಳ ಪೂರಕವಾಗಿತ್ತು ಅಂತ. ಅಲ್ಲಿನ ಊರು, ಹೋಬಳಿ, ತಾಲ್ಲೂಕು ಮಟ್ಟದ ಪ್ರತಿ ಜಾಗಕ್ಕೂ ಹೋಗಿ, ಜನರೊಂದಿಗೆ ಸಹಜವಾಗಿ ಬೆರೆತು, ಭಾರತೀಯ ಚಿತ್ರರಂಗದ ಆಳ ಅಗಲ ಅರಿತವರು.

ಇದಾದ ನಂತರ ಅವರು `ಜಾನ್ವರ್‌, ಏಕ್‌ ರಿಶ್ತಾ, ಬರ್ಸಾತ್‌, ಅಂದಾಜ್‌, ದೋಸ್ತಿ, ಅಜಯ್‌, ಲುಟೇರಾ, ಮೇರೆ ಜೀನ್‌ ಸಾಥಿ, ಇಂತಕಾಮ್’ನಂಥ ಯಶಸ್ವಿ ಚಿತ್ರಗಳನ್ನು ನೀಡಿದರು.

ಸಾಮಾನ್ಯ ಜನರಂತೆ ಕೆಲಸ

2010ರಲ್ಲಿ ಕರೀನಾ, ಕಾಜೋಲ್‌, ಅರ್ಜುನ್‌ ರಾಮ್ ಪಾಲ್‌ ನಟಿಸಿದ್ದ `ವಿ ಆರ್‌ ಫ್ಯಾಮಿಲಿ’ ಚಿತ್ರದ ನಿರ್ದೇಶಕರಾದ ಸಿದ್ದಾರ್ಥ್ ಮಲ್ಹೋತ್ರಾ ಫಿಲ್ಮಿ ವಾತಾವರಣದಲ್ಲೇ ಬೆಳೆದರು. ಅಂದಿನ ಕಾಲದ ಸೂಪರ್‌ ಹಿಟ್‌ ಚಿತ್ರ `ದುಲ್ಹನ್‌ ವಹೀ ಜೋ ಪಿಯಾ ಮನ್‌ಭಾಯೇ’ ಚಿತ್ರದ ನಾಯಕ ಪ್ರೇಮ್ ಕಿಶನ್‌ ರಿಗೆ ಬೇಕಾದಂತೆ ನೆರವು ನೀಡಬಹುದಿತ್ತು. ಆದರೆ ಹಾಗೇನೂ ಮಾಡದೆ, ಮಗನನ್ನೂ ಸೆಟ್‌ ನಲ್ಲಿ ಎಲ್ಲರಂತೆ ದುಡಿಸುತ್ತಿದ್ದರು.

ಹೀಗೆ ಸುಮಾರು 15 ವರ್ಷದ ತನಕ ಹೆಚ್ಚಿನ ಜವಾಬ್ದಾರಿ ನಿರ್ವಹಿಸುತ್ತಾ ಬಹಳಷ್ಟು ಅನುಭವ ಗಳಿಸಿದ ಬಳಿಕ, ಅಂತೂ 2010ರಲ್ಲಿ `ವೀ ಆರ್‌ ಫ್ಯಾಮಿಲಿ’ ಚಿತ್ರ ನಿರ್ದೇಶಿಸುವ ಅವಕಾಶ ಸಿಕ್ಕಿತು.

ಬಿ.ಆರ್‌. ಚೋಪ್ರಾ ಯಾರಿಗೆ ತಾನೇ ಗೊತ್ತಿಲ್ಲ? ಅವರು `ನಯಾ ದೌರ್‌, ಕಾನೂನ್‌, ಸಾಧನಾ, ಗುಮರಾಹ್‌, ಇನ್ಸಾಫ್‌ ಕಾ ತರಾಝು, ನಿಕಾಹ್‌, ಬಾಬುಲ್‌, ಭೂತನಾಥ್‌’ನಂಥ ಬೇಕಾದಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟರು. ಇವರು ತಮ್ಮ ಜೀವನದ ಕೊನೆಯ ಕ್ಷಣಗಳವರೆಗೂ ಸಾಮಾನ್ಯ ಜನರೊಂದಿಗೆ ಸಹಜವಾಗಿ ಬೆರೆಯುತ್ತಿದ್ದರು. 2002ರಲ್ಲಿ ನಾನು ಅವರ ಸಂದರ್ಶನ ಪಡೆದಿದ್ದೆ. ಆಗ ಬಿ.ಆರ್‌. ಚೋಪ್ರಾ ನನ್ನ ಲೇಖನ ಮೆಚ್ಚಿ, ಕೊರಿಯರ್‌ ಮೂಲಕ ಪತ್ರ ಕಳುಹಿಸಿ, ತಾವು ಪತ್ರಕರ್ತರಾಗಿದ್ದ ವಿಷಯವನ್ನೂ ಹೆಮ್ಮೆಯಿಂದ ಹಂಚಿಕೊಂಡಿದ್ದರು.

ಸಮಾಜಕ್ಕೆ ಅಂಟಿದ್ದ ಚಿತ್ರಗಳು

ಇಂದಿನ ಜನರಿಗೆ `ಟೀ ಸೀರೀಸ್‌’ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇದನ್ನು ಆರಂಭಿಸಿದವರು ಗುಲ್ಶನ್‌ ಕುಮಾರ್‌. ಇವರು ನಾಡಿನ ಮೂಲ ಮಣ್ಣಿನ ಗುಣ ಬೆಳೆಸಿಕೊಂಡರು. ಇವರು ತಮ್ಮ ಆಫೀಸ್‌ ಬಿಲ್ಡಿಂಗ್‌ ನ ಒಂದು ಮಹಡಿಯಲ್ಲಿ ಕೆಫೆಟೇರಿಯಾ ನಡೆಸುತ್ತಿದ್ದರು. ಅಲ್ಲಿ ಎಲ್ಲಾ ಸಿಬ್ಬಂದಿ ಒಟ್ಟಿಗೆ ಕುಳಿತು ಮಧ್ಯಾಹ್ನದ ಊಟ ಮಾಡುತ್ತಿದ್ದರು. ಇವರೊಂದಿಗೆ ಕುಳಿತ ಗುಲ್ಶನ್ ಕುಮಾರ್‌, ಎಲ್ಲರ ಕಷ್ಟಸುಖ ವಿಚಾರಿಸುತ್ತಿದ್ದರು.

ಪ್ರಸಿದ್ಧ ಚಿತ್ರೋದ್ಯಮಿ ಯಶ್‌ ಚೋಪ್ರಾ, ಸದಾ ಸಾಮಾನ್ಯ ಪ್ರಜೆಯಂತೆಯೇ ಬಾಳಿದರು. ಅವರು ತಮ್ಮ ಜೀವನದ ಕೊನೆಯ ದಿನಗಳವರೆಗೂ ಎಲ್ಲಾ ಪತ್ರಕರ್ತರೊಂದಿಗೆ ಮಾತ್ರವಲ್ಲದೆ, ಮಾಮೂಲಿ ಜನರೊಂದಿಗೂ ಸಹಜವಾಗಿ ಬೆರೆಯುತ್ತಿದ್ದರು. ಹೀಗಾಗಿ ಅವರ ಚಿತ್ರಗಳಾದ  `ಧರ್ಮಪುತ್ರ್, ದಾಗ್‌, ದೀವಾರ್‌, ತ್ರಿಶೂಲ್‌, ಚಾಂದನಿ, ಲಮ್ಹೆ, ಪರಂಪರಾ, ಡರ್‌, ವೀರ್‌ ಝರಾ’ಗಳನ್ನು ಜನ ಇಂದಿಗೂ ಸ್ಮರಿಸುತ್ತಾರೆ.

ಬಾಲಿವುಡ್‌ : ಹೇಗಿದ್ದದ್ದು…. ಹೇಗಾಯ್ತು

ರಾಜೇಶ್‌ ಖನ್ನಾರ `ಆನಂದ್‌’ ಚಿತ್ರದ ಸಂಭಾಷಣೆ `ಯಹ್‌ ಭೀ ಏಕ್‌ ದೌರ್‌ ಹೈ…… ವಹ್‌ ಭೀ ಏಕ್‌ ದೌರ್‌ ಥಾ’ (ಇದೊಂದು ಕಾಲ…. ಅದೊಂದು ಕಾಲ) ಚಿತ್ರದಲ್ಲಿ ಅದು ಏನೇ ಸಂದರ್ಭವಾಗಿರಲಿ, ಆದರೆ ಇಂದಿನ ಬಾಲಿವುಡ್‌ ಪರಿಸ್ಥಿತಿಗಂತೂ ಇದು ಕೈಗನ್ನಡಿಯಾಗಿದೆ.

ಅಂದ ಕಾಲತ್ತಿಲೆ…. ಬಾಲಿವುಡ್‌ ನಲ್ಲಿ `ಆಲಂ ಆರಾ, ದೋ ಭೀಗಾ ಝಮೀನ್‌, ಮದರ್‌ ಇಂಡಿಯಾ, ಬಂದಿನಿ, ಶೋಲೆ, ಆಝಮ್……’ ಚಿತ್ರಗಳ ನಂತರ KGF  ಚಿತ್ರಗಳ ವೈಭವ ಮೆರೆಯಿತು. ಈ ಎಲ್ಲಾ ಚಿತ್ರಗಳೂ ಈಗಲೂ ಎವರ್‌ ಗ್ರೀನ್, ಏಕೆಂದರೆ ಇದರಲ್ಲಿ ನಮ್ಮ ಸಮಾಜದ ಸತ್ಯ ಅಡಗಿತ್ತು.

ಅಮಿತಾಭ್ ರ 80ರ ದಶಕದ ಚಿತ್ರಗಳು ಸಹ ಜನಸಾಮಾನ್ಯರ ಕಥೆಯನ್ನೇ ಹೊಂದಿದ್ದವು. ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿ ಅಮಿತಾಭ್ ಬಡವರ ಪ್ರತಿನಿಧಿ ಆಗಿದ್ದರು. ಇವರ ಚಿತ್ರಗಳು ಜನ ಸಾಮಾನ್ಯರನ್ನು ತಮ್ಮದೇ ಲೋಕಕ್ಕೆ ಕರೆದೊಯ್ಯುತ್ತಿದ್ದವು. ಎಷ್ಟೇ ಕಷ್ಟಗಳಿದ್ದರೂ ಬಡವರ ಪ್ರತಿನಿಧಿ ಹೋರಾಟದಿಂದ ಗೆದ್ದು ನಿಲ್ಲುತ್ತಿದ್ದುನ್ನು (ವಾಸ್ತವ ಇರಲಿ ಬಿಡಲಿ) ತೆರೆದ ಮನದಿಂದ ಒಪ್ಪುವುದು, ಮಾನವ ದೌರ್ಬಲ್ಯವೇ ಆಗಿತ್ತು. ಅದನ್ನೇ ಎನ್‌ ಕ್ಯಾಶ್‌ ಮಾಡಿ ಈ ಚಿತ್ರಗಳು ಭರ್ಜರಿ ಜಯಭೇರಿ ಬಾರಿಸುತ್ತಿದ್ದವು.

ತಲೆ ಬಾಲವಿಲ್ಲದ ಚಿತ್ರಗಳು

ಆದರೆ ಕಳೆದ 15-20 ವರ್ಷಗಳಿಂದ ಬಾಲಿವುಡ್‌ ನಲ್ಲಿ ದಕ್ಷಿಣದ ರೀಮೇಕ್‌ ಚಿತ್ರಗಳು, ವಿವಾಹೇತರ ಬಾಂಧವ್ಯ, ತ್ರಿಕೋನ ಪ್ರೇಮ, ಸೆಕ್ಸ್, ಕ್ರೈಂ, ಹಿಂಸಾ ಪ್ರಧಾನ ಚಿತ್ರಗಳದೇ ಮೇಲುಗೈ ಆಯ್ತು. ಜೊತೆಗೆ ಬಯೋಪಿಕ್‌ ಚಿತ್ರಗಳೂ ಕೂಡಿದವು. ನಾಡಿನ ಮಣ್ಣಿನ ಮೂಲಭೂತ ಕಥೆಗಳು ದೂರವಾಗುತ್ತಾ ಹೋದವು.

ಯಾವ ಚಿತ್ರವನ್ನು ಮುಂಬೈನ ಕೊಲಾಬಾದಿಂದ ಅಂಧೇರಿಯವರೆಗೂ ನೋಡಲಾಗುತ್ತದೋ, ಅವನ್ನು ದೇಶದ ಇತರ ಕಡೆಗಳಲ್ಲಿ  ಇಷ್ಟಪಡುವುದಿಲ್ಲ ಎಂಬುದನ್ನು ಬಾಲಿವುಡ್‌ ನ ಘಟಾನುಘಟಿಗಳು ಮರೆತಂತಿದೆ.

`ಯಶ್‌ ರಾಜ್‌ ಫಿಲಮ್ಸ್’ನ ಆದಿತ್ಯ ಚೋಪ್ರಾ ಮಾಮೂಲಿ ಜನರೊಂದಿಗೆ ಬೆರೆಯುವುದಿರಲಿ, ಪತ್ರಕರ್ತರನ್ನೂ ಹತ್ತಿರ ಸೇರಿಸುವುದಿಲ್ಲ. ಆತ ಸದಾ ತನ್ನ 4 ಗೋಡೆಗಳ ರೂಮಿನಲ್ಲಿ ಬಂಧಿ. ಈತ ತನ್ನ ಮೂಲ ಬೇರುಗಳಿಂದ ಬಲು ದೂರವಾಗಿದ್ದಾನೆ ಎಂದರೆ ಏನೂ ಆಶ್ಚರ್ಯವಿಲ್ಲ.

ತಮ್ಮನ್ನು ತಾವು ರಿಲೇಟ್‌ ಮಾಡಿಕೊಳ್ಳಬಲ್ಲ ಚಿತ್ರಗಳೊಂದಿಗೆ ಮಾತ್ರ ಸಾಮಾನ್ಯ ಜನ ನೋಡಲು ಇಷ್ಟಪಡುತ್ತಾರೆ. ಆದರೆ ಇಂಥ ಮಾಡರ್ನ್‌ ಚಿತ್ರಗಳು ಈ ತರಹ ಇಲ್ಲವೇ ಇಲ್ಲ.

ರಣವೀರ್‌ ಸಿಂಗ್‌ ನ ಇತ್ತೀಚಿನ `ಜಯೇಶ್‌ ಭಾಯಿ ಜೋರ್‌ ದಾರ್‌’ ಚಿತ್ರಕ್ಕೆ ಕೇವಲ ಭಾರತದಲ್ಲಿ ಮಾತ್ರ 2200 ಸ್ಕ್ರೀನ್ಸ್ ನಿಂದ ಕೇವಲ 3 ಕೋಟಿ 25 ಲಕ್ಷದ ಓಪನಿಂಗ್‌ ಮಾತ್ರ ಪಡೆಯಲು ಸಾಧ್ಯವಾಯಿತು.

ಗುಜರಾತ್‌ ನ ಮೂಲ ಕಥೆ ಹೊಂದಿರುವ ಈ ಚಿತ್ರದ ಜೊತೆ ಮುಂಬೈ ಯಾ ಗುಜರಾತ್‌ ನ ಜನ ತಮ್ಮನ್ನು ತಾವು ರಿಲೇಟ್ ಮಾಡಿಕೊಳ್ಳಲು ಆಗಲೇ ಇಲ್ಲ.

ಹೆಸರಿಗಷ್ಟೇ ನಿತಿನ್‌ ಕೇಣಿ ಸಿನಿಮಾದ ಪ್ರಗತಿ ಹಾಗೂ ಎಲ್ಲ ಪಾರದರ್ಶಿ ಆಗಿರಬೇಕೆಂಬ ನಿಟ್ಟಿನಲ್ಲಿ `ಝೀ’ ಸ್ಟುಡಿಯೋ ಜೊತೆ ಬೆರೆತು ಹಾಲಿವುಡ್‌ ಶೈಲಿಯಲ್ಲಿ ಸ್ಟುಡಿಯೋ ಸಂಸ್ಕೃತಿ ಶುರು ಮಾಡಿ, `ಲಗಾನ್‌’ ಎಂಬ ಮೊದಲ ಚಿತ್ರ ಪೂರೈಸಿದರು. ಇದರ ಎಲ್ಲಾ ತಾರೆಯರು, ತಾಂತ್ರಿಕ ವರ್ಗದವರಿಗೆ, ಚೆಕ್‌ ಮೂಲಕವೇ ಸಂಭಾವನೆ ನೀಡಲಾಯಿತು.

ಈ ಚಿತ್ರದ ಅಪೂರ್ವ ಯಶಸ್ಸನ್ನು ಕಂಡು, ನೋಡ ನೋಡುತ್ತಿದ್ದಂತೆ ನಾಯಿಕೊಡೆಗಳಂತೆ ಅಗಣಿತ ಸ್ಟುಡಿಯೋಗಳು ಮೈದಾನಕ್ಕಿಳಿದವು. ರಿಲೆಯನ್ಸ್ ಸಹಿತ ಅನೇಕ ಉದ್ಯಮಿ ಕುಟುಂಬಗಳು ಇದಕ್ಕೆ ಮುಗಿಬಿದ್ದವು. ಮೊದಲ ಬಾರಿಗೆ ಈ ಎಲ್ಲಾ ಸ್ಟುಡಿಯೋಗಳಲ್ಲಿ ಯಾವ ಕಥೆ ಆಧರಿಸಿ ಚಿತ್ರ ತಯಾರಿಸುವುದೆಂಬ ಹೊಣೆಯನ್ನು ಹೊಸದಾಗಿ ಬಂದ ಯುವ ಪೀಳಿಗೆಗೆ ನೀಡಲಾಯಿತು.

ಹೌದು, ಕಲಿತು ಬಂದ ಈ ಮಂದಿ, ಸಿನಿಮಾದ ಗಂಧಗಾಳಿ ಗೊತ್ತಿಲ್ಲದವರು. ಇವರಿಗೆ ಸಂಗೀತ, ಸಾಹಿತ್ಯ, ಚಿತ್ರಕಥೆ, ನೃತ್ಯ… ಯಾವುದರ ಅರಿವೂ ಇಲ್ಲ. ಚಿತ್ರ ನಿರ್ಮಾಣಗಳ ಬಗ್ಗೆ ಈ ಮಂದಿ ನಿರ್ಧರಿಸ ತೊಡಗಿದರು. ಆದರೆ ಒಂದು ಚಿತ್ರದ ತಯಾರಿಗೆ ಎಲ್ಲಾ ಅಂಶಗಳೂ ಗೊತ್ತಿರುವುದು ಅನಿವಾರ್ಯವಾಗಿದೆ. ಇವರೆಲ್ಲರೂ ಸೇರಿ ಕಾಗದದ ಮೇಲೆ ಚಿತ್ರದ ಯಶಸ್ಸಿನ ಸೂತ್ರ ಗೀಚತೊಡಗಿದರು. ಈ ಮಂದಿ ಯಾವ ಕಥೆಯನ್ನೂ ಆಧರಿಸದೆ, ಕೇವಲ ಸ್ಟಾರ್‌ ವ್ಯಾಲ್ಯೂ ನೋಡಿಕೊಂಡು, ತಮ್ಮ ಸ್ಟುಡಿಯೋಗಳಲ್ಲಿ ಬಾಯಿಗೆ ಬಂದ ಬೆಲೆ ತೆತ್ತು, ಚಿತ್ರ ಸುತ್ತತೊಡಗಿದರು.

ಆಗ ತಾರೆಯರೆಲ್ಲ ಏಕ್‌ ದಂ ತಮ್ಮ ಸಂಭಾವನೆಯನ್ನು 400-500 ಪಟ್ಟು ಹೆಚ್ಚಿಸಿಕೊಂಡರು. ಆಗಿನ ಸುದ್ದಿ ಪ್ರಕಾರ ರಿಲೆಯನ್ಸ್ ಕಂಪನಿ ಅಮಿತಾಭ್ ‌ಜೊತೆ 1500 ಕೋಟಿಗಳ ಅಗ್ರಿಮೆಂಟ್‌ ಮಾಡಿಕೊಂಡಿತ್ತಂತೆ. ಮತ್ತೊಂದು ಸ್ಟುಡಿಯೋ ಮೂಲಕ ಅಕ್ಷಯ್ ಕುಮಾರ್‌ ಗೆ ಪ್ರತಿ ಚಿತ್ರಕ್ಕೂ 135 ಕೋಟಿ ಎಂದು ಒಪ್ಪಂದ ಆಗಿತ್ತು.

ದಕ್ಷಿಣದ ಚಿತ್ರಗಳ ಮೇಲುಗೈ

ಬಾಲಿವುಡ್‌ ಕ್ರಮೇಣ ದಕ್ಷಿಣದ ಚಿತ್ರಗಳ ಮುಖವಾಣಿ ಆಯ್ತು. ಜಿತೇಂದ್ರ, ಅನಿಲ್ ಕಪೂರ್‌ ನಂಥವರು ಮಾತ್ರವಲ್ಲದೆ, ಬಹುತೇಕರು ದಕ್ಷಿಣದ ದಿಗ್ಗಜರೊಂದಿಗೆ ಕೈ ಜೋಡಿಸಿ, ಹಿಂದಿ ಚಿತ್ರ ತಯಾರಿಸಿ, ಸ್ಟಾರ್‌ ಡಂ ಕ್ರಿಯೇಟ್‌ ಮಾಡಿಕೊಂಡರು. ಇಷ್ಟು ಮಾತ್ರವಲ್ಲ, ಬಾಲಿವುಡ್‌ ನ ಕಳೆದ 20-25 ವರ್ಷಗಳ ಇತಿಹಾಸದ ಕುರಿತು ಕಣ್ಣಾಡಿಸಿದರೆ, ಒಂದೇ ವಿಷಯ ಹೊರಬರುತ್ತದೆ, ಬಾಲಿವುಡ್‌ ಅಂದ್ರೆ ಕೇವಲ ದಕ್ಷಿಣದ ಅಥವಾ ವಿದೇಶೀ ಚಿತ್ರಗಳನ್ನು ರೀಮೇಕ್‌ ಆಗಿಸಿ, ತಮ್ಮ ಯಶಸ್ವಿ ಬಾವುಟ ಹಾರಿಸಿ, ತಾವೇ ತಮ್ಮ ಬೆನ್ನು ತಟ್ಟಿಕೊಳ್ಳುವೆತೆ ಆಗಿದೆ.

ಬಾಲಿವುಡ್ಬಯೋಪಿಕ್

ಕುರಿತು ಚಿತ್ರ ತಯಾರಿಸುತ್ತಿದೆಯೋ ಅದು ಮುಖ್ಯವಲ್ಲ, ಮೌಲಿಕ ಕೆಲಸ ಮಾಡುವ ಬದಲು ನಕಲು ಮಾಡುವುದನ್ನೇ ದಂಧೆ ಆಗಿಸಿ ರಾಜನಾಗಿ ಮೆರೆಯಲು ಹಣಿಸುತ್ತಿದೆ.

ಕಥೆಗಳ ಬರ

ಪ್ರಸ್ತುತ ಕಾಲಕ್ಕೆ ಅನ್ವಯಿಸಿಕೊಂಡರೆ, ಬಾಲಿವುಡ್‌ ಇದೀಗ 40-50 ರೀಮೇಕ್‌ ಚಿತ್ರಗಳ ತಯಾರಿಯಲ್ಲಿದೆ. ದೇವ್ ‌ಗನ್‌ ಬಳಿ ಸಹ ಕಥೆಗಳಿಗೆ ಬರ ಬಂದಿರುವ ಹಾಗಿದೆ. ಹೀಗಾಗಿ ಆತ ಸಹ ಬಯೋಪಿಕ್‌ ಹಿಂದೆ ಓಡುತ್ತಿದ್ದಾನೆ. ಸಾಮಾನ್ಯ ಜನರೊಂದಿಗೆ ಈತನಿಗೆ ಸಂಪರ್ಕವೇ ಇಲ್ಲ, ಹೀಗಾಗಿ ಇಂಥ ಅವಘಡಗಳಾಗುತ್ತಿವೆ.

ಅಷ್ಟು ದೂರ ಏಕೆ? `ವಾಂಟೆಡ್‌, ಕಿಕ್‌, ರೌಡಿ ರಾಠೋರ್‌…..’ ಮುಂತಾದ ಯಶಸ್ವೀ ಬಾಲಿವುಡ್‌ ಚಿತ್ರಗಳೆಲ್ಲ ದಕ್ಷಿಣ ಮೂಲದ್ದೇ ಆಗಿದೆ. ಇದರಲ್ಲಿ ಸಲ್ಮಾನ್‌ ಖಾನ್‌ ನ `ಜುಡ್ವಾ’ ಸಹ ಒಂದು. ಇದು ತೆಲುಗಿನ `ಹಲೋ ಬ್ರದರ್‌’ನ ರೀಮೇಕ್‌. ಅಲ್ಲಿ ನಾಗಾರ್ಜುನ ಮಾಡಿದ್ದನ್ನೇ ಇಲ್ಲಿ ಬ್ಯಾಡ್‌ ಬಾಯ್‌ ಮಾಡಿದ. ಈ ಚಿತ್ರ ಬಾಕ್ಸ್ ಆಫೀಸ್‌ ನಲ್ಲಿ ಕೊಳ್ಳೆ ಹೊಡೆಯಿತು. ಕೇವಲ 6 ಕೋಟಿಯಲ್ಲಿ ತಯಾರಾಗಿದ್ದ ಈ ಚಿತ್ರ 24 ಕೋಟಿಗೂ ಮೀರಿ ಗಳಿಸಿತ್ತು!

ಇದರಿಂದಲೇ ನೀವು ಊಹಿಸಬಹುದು, ದಕ್ಷಿಣದ ಚಿತ್ರಗಳನ್ನು ಹಿಂದಿಗೆ ಇಳಿಸಿದರೆ ಕೋಟಿಗಟ್ಟಲೇ ಗಳಿಸಬಹುದು ಅಂತ. ಇದೇ ತರಹ ಮಲೆಯಾಳಂ `ರಾಮ್ ಜಿ ರಾವ್ ‌ಸ್ಪೀಕಿಂಗ್‌’ ಹಿಂದಿಯಲ್ಲಿ `ಹೇರಾಫೇರಿ’ ಆಯ್ತು. ಈ ಚಿತ್ರ ಬಹಳ ಯಶಸ್ವಿ ಎನಿಸಿತು. ಇದಾದ ಮೇಲೆ ಈ ಚಿತ್ರದ ನಿರ್ದೇಶಕ ಸಾಲು ಸಾಲು ಕಾಮಿಡಿ ಚಿತ್ರಗಳನ್ನು ನೀಡತೊಡಗಿದರು.

`ಹಲ್ ಚಲ್, ಹಂಗಾಮಾ, ಏ ತೇರಾ ಘರ್‌ ಏ ಮೇರಾ ಘರ್‌, ಗರಂ ಮಸಾಲಾ, ಕ್ಯೋಂಕಿ, ಛುಪ್‌ ಛುಪ್‌ ಕೇ, ಭಾಗಂಭಾಗ್‌, ದೇ ದನಾದನ್‌, ಭಿಲ್ಲೂ’  ಮುಂತಾದ ಚಿತ್ರಗಳನ್ನು ತಯಾರಿಸಿದರು. ಇವೆಲ್ಲ ಕಾಮಿಡಿ, ಡ್ರಾಮಾ, ರೊಮಾನ್ಸ್ ಆಧಾರಿತ ಚಿತ್ರಗಳು.

ಬಾಲಿವುಡ್ಗೆ ಭಾರಿ ಹೊರೆ

ಇದೇ ತರಹ ಆ್ಯಕ್ಷನ್‌ ಚಿತ್ರಗಳ ರೀಮೇಕ್‌ ದಾಳಿಯೂ ಸತತ ನಡೆಯಿತು. ತಮಿಳಿನ ಖ್ಯಾತ ನಿರ್ದೇಶಕ 2008ರಲ್ಲಿ `ಗಜನಿ’ ಮಾಡಿದರು. ಇದೇ ಹೆಸರಿನಲ್ಲಿ ತಮಿಳಿನಲ್ಲಿ ಇದು ಭರ್ಜರಿ ಜಯ ಕಂಡಿತ್ತು. ಆಮೀರ್‌ ಖಾನ್‌, ಜೋಯಾ ಖಾನ್‌, ಆಸಿನ್‌ ಕೂಡಿ ಇಡೀ ಚಿತ್ರವನ್ನು ಚಿಂದಿ ಉಡಾಯಿಸಿದ್ದರು. 6 ಪ್ಯಾಕ್‌ ಆ್ಯಬ್‌ ಕ್ರೇಜ್‌ ಇಲ್ಲಿಂದಲೇ ಶುರುವಾಗಿ, ಮಾರಾಮಾರಿಯ ರಣತಾಂಡವ ನಡೆಯಿತು.

ಹೌದು, ದಕ್ಷಿಣದ ಚಿತ್ರಗಳು ಬಾಲಿವುಡ್‌ ಮೇಲೆ ಅತಿ ಪ್ರಭಾವ ಬೀರಲು ಮೂಲ ಕಾರಣ ಎಂದರೆ, ಕಳೆದ 15-20 ವರ್ಷಗಳಿಂದ ಬಾಲಿವುಡ್‌ ಸತತ ದಕ್ಷಿಣದ ಚಿತ್ರಗಳನ್ನೇ ನಂಬಿಕೊಂಡು ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ದಕ್ಷಿಣದ ಮಂದಿ ಉತ್ತರದವರ ಈ ದೌರ್ಬಲ್ಯ ಅರಿತುಕೊಂಡು, ತಮ್ಮ `ಬೆಸ್ಟ್’ ಸಿನಿಮಾಗಳನ್ನೇ ಮುಂದೆ `ಪ್ಯಾನ್‌ಸಿನಿಮಾ’ ಎಂದು ತಯಾರಿಸಲಾರಂಭಿಸಿದರು. ಈ ರೀತಿ ಬಾಲಿವುಡ್‌ ನವರು ಹಣ ಮಾಡಿಕೊಳ್ಳುವುದನ್ನು ತಪ್ಪಿಸಲು ದಕ್ಷಿಣದವರೇ ಎಲ್ಲಾ ಭಾಷೆಗಳಲ್ಲೂ ತಮ್ಮ ಚಿತ್ರ ಡಬ್‌ ಮಾಡಿ, ಎಲ್ಲದರ ಕ್ರೆಡಿಟ್‌ ಪಡೆಯ ತೊಡಗಿದರು.

ಮುಂದೆ ಬರಲಿರುವ ಇಂಥ ಸಿನಿಮಾಗಳೆಂದರೆ ಪ್ರಭಾಸ್‌ ನ `ಆದಿಪುರುಷ್‌,’ ವರುಣ್‌ ತೇಜಾನ `ಘನಿ’ ಹೆಸರು ಮಾಡುತ್ತಿವೆ. ಎಲ್ಲ 100% ಹಣ ಮಾಡುತ್ತಿವೆ ಎನ್ನಲಾಗದು. ವಿಜಯ್‌ ದೇವರಕೊಂಡಾನ `ಲೈಗರ್‌’ ಇದಕ್ಕೆ ಸಾಕ್ಷಿ. ಅಷ್ಟಕ್ಕೆ ಬಾಲಿವುಡ್‌ ಸಮಾಧಾನ ಪಟ್ಟುಕೊಳ್ಳಬೇಕು.

ಯಶಸ್ಸಿನ ಶಿಖರವೇರಿದ ಚಿತ್ರಗಳು

ಕೊರೋನಾ ಪೀಡೆಯ ನಂತರ ಭಾರತೀಯ ಚಿತ್ರರಂಗ ಎಚ್ಚೆತ್ತುಕೊಂಡಾಗ, ದೇಶವಿಡೀ ಚಿತ್ರಮಂದಿರಗಳು ಎಂದಿನಂತೆ ತೆರೆಯಲ್ಪಟ್ಟಾಗ, ಬಾಲಿವುಡ್‌ ನ `ಅಂತಿಮ್, 83, ಸತ್ಯಮೇವ ಜಯತೆ-2, ಬಚ್ಚನ್‌ ಪಾಂಡೆ, ಜರ್ಸಿ, ರನ್‌ ವೇ 34, ಅಟ್ಯಾಕ್‌, ಹೀರೋಪಂತಿ-2, ಆಪರೇಷನ್‌ ರೋಮಿಯೊ, ಜಾಲ್ಸಾ, ಝುಂಡ್‌, ಧಾಕಡ್‌’ ಚಿತ್ರಗಳೊಂದೂ ಯಶಸ್ಸು ಕಾಣದೆ ಮಖಾಡೆ ಮಲಗಿದ. ಅಪಾರ ನಿರೀಕ್ಷೆ ಹೊಂದಿದ್ದ ಅಕ್ಷಯ್‌ ಕುಮಾರ್‌ ನ `ಬಚ್ಚನ್‌ ಪಾಂಡೆ’  ಸಹ ದಯನೀಯವಾಗಿ ಸೋತಿತು.

ಅದೇ ಸಮಯಕ್ಕೆ ದಕ್ಷಿಣದವರ `ಪುಷ್ಪಾ, ಜೈಭೀಮ್, ಕೀಲ್ ‌ಸಾಹೇಬ್‌, KGF -2′  ಇತ್ಯಾದಿ ಹಿಂದಿಯ ಡಬ್‌ ಚಿತ್ರಗಳು ಸತತ ಯಶಸ್ವಿಯಾಗಿ ಮೂಲ ನಿರ್ಮಾಪಕರಿಗೆ ಅಪಾರ ಹಣ ತಂದುಕೊಟ್ಟವು.

ಕನ್ನಡದ KGF -2 ಒಂದೇ ಹಿಂದಿಯ ಘಟಾನುಘಟಿ ಚಿತ್ರಗಳನ್ನು ಮಣ್ಣು ಮುಕ್ಕಿಸಿ ಅತ್ಯಂತ ಹೆಚ್ಚು ಹಣ ಗಳಿಸಿತು. ಇದರ ಮುಂದೆ ಆಮೀರ್‌ ಖಾನ್‌ `ದಬಂಗ್‌’ ನಂ.1 ಎಂದೇ ರೆಕಾರ್ಡ್‌ ಮಾಡಿದ್ದೂ ಸಹ ಸಪ್ಪೆ ಎನಿಸಿತು. ಇದೀಗ ಬಾಲಿವುಡ್‌ ನಲ್ಲಿ ಹುಟ್ಟಿಕೊಂಡಿರುವ ಹೊಸ `ಗುಮ್ಮ’ ಎಂದರೆ, `ದಕ್ಷಿಣದ ಚಿತ್ರಗಳು ಅಪ್ಪಟ ಹಿಂದಿ ಚಿತ್ರಗಳನ್ನು ಕಬಳಿಸಿ ಬಿಡುತ್ತವೆ’ ಎಂಬುದು. ಆದರೆ ಇಲ್ಲಿನ ಘಟಾನುಘಟಿಗಳಗೆ ದಕ್ಷಿಣದವರನ್ನು ಮೀರಿಸಿ ಚಿತ್ರ ಮಾಡುವ, ಪ್ರೇಕ್ಷಕರಿಗೆ ಆಪ್ತ ಎನಿಸುವ ಚಿತ್ರ ನೀಡುವ ತಾಕತ್ತು ಇಲ್ಲವಾಗಿದೆ.

ಬರ್ಬಾದಿಯತ್ತ ಬಾಲಿವುಡ್

ದಕ್ಷಿಣದ ಖ್ಯಾತರು ಹಿಂದಿಯವರ ಈ ದೌರ್ಬಲ್ಯವನ್ನು ಚೆನ್ನಾಗಿಯೇ ಗುರುತಿಸಿದ್ದಾರೆ. ಹಿಂದಿಯ ಖ್ಯಾತ ನಟರನ್ನು ತಮ್ಮ ಚಿತ್ರಗಳಲ್ಲಿ ಒಂದು ಸಣ್ಣ ಪಾತ್ರವಾಗಿಸಿಕೊಂಡು, ಆ ಮೂಲಕ ಉತ್ತರದವರನ್ನು ಸೆಳೆಯುತ್ತಾ, ತಮ್ಮ ದಕ್ಷಿಣದ ಚಿತ್ರಗಳನ್ನು ಪ್ಯಾನ್ ಇಂಡಿಯಾ ತಲುಪಿಸುತ್ತಿದ್ದಾರೆ.

ಯಾರೋ ಬಾಲಿವುಡ್‌ ನವರು, ಹಿರಿಯ ನಿರ್ದೇಶಕ ಮಹೇಶ್‌ ಭಟ್‌ ರ ಮಗಳು ಖ್ಯಾತ ನಟಿ ಆಲಿಯಾ ಭಟ್‌ ಗೆ, ನಿನ್ನಿಂದಲೇ  ಇಷ್ಟು ಯಶಸ್ಸು ಗಳಿಸಲು ಸಾಧ್ಯವಾದದ್ದು ಎಂದು ತಲೆ ತುಂಬಿಸಿಬಿಟ್ಟರು. ಸುಯೋಗ ವಶಾತ್‌ ಅದೇ ಸಮಯಕ್ಕೆ ಅವಳಿಗೆ ಹಾಲಿವುಡ್‌ ನ `ಹಾರ್ಟ್‌ ಆಫ್‌ ಸ್ಟೋನ್‌’ ಚಿತ್ರದಲ್ಲೂ ಅವಕಾಶ ಸಿಗಬೇಕೇ? ಇನ್ನಿವಳನ್ನು ಹಿಡಿಯುವವರೇ ಇಲ್ಲ ಎಂದಾಗಿ ಹೋಯಿತು!

ಟಾಮ್ ಹಾರ್ಪರ್‌ ನಿರ್ದೇಶನದ `ಹಾರ್ಟ್‌ ಆಫ್‌ ಸ್ಟೋನ್‌’ ಅಮೆರಿಕನ್‌ ಪತ್ತೇದಾರಿ ಚಿತ್ರ. ಈ ಚಿತ್ರದಲ್ಲಿ ಆಲಿಯಾಳ ಜೊತೆ ಗ್ಯಾಡೋಟ್‌, ಜೆಮಿ ಡೋನರ್ಸ್‌, ಸೋಫಿ ಒಕೊನೆಡೊ, ಮ್ಯಾಥ್ಯೂಸ್‌ ಶೈಘೋಥರ್‌, ಝಿಂಗ್‌ ಲೂಸಿ ಮುಂತಾದ ಹಾಲಿವುಡ್‌ ನ ಘಟಾನುಘಟಿಗಳೇ ತುಂಬಿದ್ದಾರೆ. ಇದರಿಂದ ಪಿತ್ತ ನೆತ್ತಿಗೇರಿದ ಆಲಿಯಾ, ಮುಂದೆ ತಾನು ದಕ್ಷಿಣದವರ ಯಾವ ಚಿತ್ರದಲ್ಲೂ ನಟಿಸಲಾರೆ ಎಂದು ಘೋಷಣೆ ನೀಡಿದಳು!

ಇದಕ್ಕೆ ದಕ್ಷಿಣದವರು ಸುಮ್ಮನೆ ಬಿಟ್ಟಾರೆಯೇ? ಬಾಹುಬಲಿ, ಚಿತ್ರಗಳ ಸ್ಟಾರ್‌ ನಿರ್ದೇಶಕ ರಾಜಮೌಳಿ ತಕ್ಷಣವೇ ಜವಾಬು ನೀಡಿ, ತಮ್ಮ ಮುಂದಿನ ಯಾವ ಚಿತ್ರದಲ್ಲೂ ಬಾಲಿವುಡ್‌ ನ ಯಾರನ್ನೂ ತೆಗೆದುಕೊಳ್ಳುವುದೇ ಇಲ್ಲ ಎಂದುಬಿಟ್ಟರು. ಇದರಿಂದ ನಷ್ಟ ಆಗಿದ್ದು ದಕ್ಷಿಣದವರಿಗಲ್ಲ, ಖಂಡಿತಾ ಬಾಲಿವುಡ್‌ ಕಲಾವಿದರಿಗೇ! ಇತರರು ಆಲಿಯಾಳಿಗೆ ಹಿಡಿ ಶಾಪ ಹಾಕುತ್ತಾ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

ಬಾಲಿವುಡ್ ದುರಹಂಕಾರಿ ಸ್ಟಾರ್ಸ್

ಬಾಲಿವುಡ್‌ ನ ಸೂಪರ್‌ ಸ್ಟಾರ್‌ ಅಮಿತಾಭ್ ‌ಬಚ್ಚನ್‌, ಶಾರೂಖ್‌ ಖಾನ್‌, ಸಲ್ಮಾನ್‌ ಖಾನ್‌ ಮುಂತಾದವರೆಲ್ಲ ತಂತಮ್ಮ ಜನ್ಮದಿನಗಳಂದು, ತಮ್ಮ ಹಿಂಬಾಲಕರನ್ನು ಗಂಟೆಗಟ್ಟಲೇ ಮನೆ ಮುಂದೆ ಬಿಸಿಲಲ್ಲಿ ಕಾಯಿಸಿ, ಏನೋ ಉಪಕಾರ ಮಾಡುವವರಂತೆ ತಮ್ಮ ಬಾಲ್ಕನಿಗೆ ಬಂದು ನಿಂತು, ಇವರತ್ತ ಕೈ ಬೀಸಿ, ಅವರ ಅಭಿವಾದನಕ್ಕೆ ಇತಿಶ್ರೀ ಹಾಡಿ ಕಣ್ಮರೆಯಾಗುತ್ತಾರೆ.

ಅದೇ ದಕ್ಷಿಣದವರನ್ನು ನೋಡಿ. ಬೆಂಗಳೂರಿನಲ್ಲಿ ಒಂದು ಚಿತ್ರದ ಶೂಟಿಂಗ್‌ ನಡೆಯುತ್ತಿತ್ತು. ಊಟದ ಸಮಯ ಆಗಿತ್ತು. ಮಲೆಯಾಳಂ ನಟ ದುಲ್ಕರ್‌ ಸಲ್ಮಾನ್‌ ಊಟ ಮಾಡುತ್ತಿದ್ದ. ಆಗ ಆತ ನೋಡುತ್ತಾನೆ, ಇವನ ದರ್ಶನಕ್ಕಾಗಿ ಒಂದಿಷ್ಟು ಮಂದಿ ಹೊರಗೆ ನಿಂತಿದ್ದಾರೆ ಎಂದು ತಿಳಿಯಿತು. ಇವನ ಜೊತೆ ಸೆಲ್ಛಿಗಾಗಿ ಕಾದು ನಿಂತಿದ್ದರು. ತಕ್ಷಣ ಊಟದ ಮಧ್ಯೆ ಕೈ ತೊಳೆದು ಎದ್ದ ಈತ, ಅವರ ಬಳಿ ಓಡೋಡಿ ಬಂದು ಫೋಟೋ ತೆಗೆಸಿಕೊಂಡು, ಕುಶಲೋಪರಿ ವಿಚಾರಿಸಿ, ಅಷ್ಟು ಜನಕ್ಕೂ ತಕ್ಷಣ ಊಟಕ್ಕೆ ಆರ್ಡರ್‌ ನೀಡಿ, ಅವರೊಂದಿಗೆ ಸಹಭೋಜನ ಮಾಡಿದ. ಇದಲ್ಲವೇ ವ್ಯತ್ಯಾಸ?

ಬಾಲಿವುಡ್‌ ನಲ್ಲಿ ಕಲೆಗಿಂತಲೂ ಅಧಿಕ ಹಣಕ್ಕೇ ಹೆಚ್ಚಿನ ಬೆಲೆ ನೀಡಲಾಗುತ್ತದೆ. ಪ್ರತಿಯೊಬ್ಬ ಕಲಾವಿದರೂ ಸಂಭಾವನೆಯ ರೂಪದಲ್ಲಿ ಕೋಟಿಗಟ್ಟಲೆ ಬಾಚಿಕೊಳ್ಳುತ್ತಾರೆ. ಅದಕ್ಕೆ ಬದಲಾಗಿ ಎಂಥದೋ ಒಂದು ಪಾತ್ರದಲ್ಲಿ ನಟಿಸಿ ಕೈ ತೊಳೆದುಕೊಳ್ಳುತ್ತಾರೆ. ಸಂದರ್ಶನಗಳಲ್ಲಿ ಮಾತ್ರ ತಾವು ಅತ್ಯಂತ ಸಾಲುಭರಿತ ಪಾತ್ರ, ಕಥೆಗಳನ್ನಷ್ಟೇ ಆರಿಸಿಕೊಳ್ಳುವುದಾಗಿ ಸುಳ್ಳು ಹೇಳುತ್ತಾರೆ.

ಇದಕ್ಕೆ ವಿರುದ್ಧ ಎಂಬಂತೆ ದಕ್ಷಿಣದ ನಟನಟಿಯರು, ಕಥೆ ಮತ್ತು ತಮ್ಮ ಪಾತ್ರಗಳನ್ನು ಆಮೂಲಾಗ್ರವಾಗಿ ಪರಾಮರ್ಶಿಸುತ್ತಾರೆ. ಅಲ್ಲಿ ಕಥೆಗಳಲ್ಲಿ ಹೀರೋ ಬಹಳ ಗ್ಲೋರಿ ಫೈ ಆಗುತ್ತಾನೆ. ಆದರೆ ಬಾಲಿವುಡ್‌ ನಲ್ಲಿ ಪಾತ್ರ ಅಥವಾ ಕಥೆ ಬಗ್ಗೆ ಗಮನಿಸದೆ, ಕಲಾವಿದರನ್ನು ಗ್ಲೋರಿ ಫೈ ಮಾಡಲಾಗುತ್ತದೆ.

ಬಾಲಿವುಡ್‌ ನ ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ, 2013ರಲ್ಲಿ `ಫಟಾ ಪೋಸ್ಟರ್‌ ನಿಕ್ಲಾ ಹೀರೋ’ ಚಿತ್ರದ ನಿರ್ದೇಶಕ ರಾಜ್ ಕುಮಾರ್‌ ಸಂತೋಷಿ, ತಮ್ಮ ಚಿತ್ರದ ಪ್ರಮೋಶನ್‌ ಇಂಟರ್‌ ವ್ಯೂ ಸಮಯದಲ್ಲಿ, ಬಾಲಿವುಡ್‌ ನ ದುಃಸ್ಥಿತಿ ಕುರಿತು, “ನೋಡ್ತಾ ಇರಿ, ಇನ್ನು ಕೆಲವೇ ವರ್ಷಗಳಲ್ಲಿ ಬಾಲಿವುಡ್‌ ನ ಈ ಘಟಾನುಘಟಿ ಸ್ಟಾರ್‌ ಗಳೆಲ್ಲ ತಾವಾಗಿ ಮನೆ ಮನೆಗೆ ಬಂದು, ಸಾರ್ವಜನಿಕರ ಬಾಗಿಲು ತಟ್ಟಿ, ದಯವಿಟ್ಟು ಚಿತ್ರಮಂದಿರಕ್ಕೆ ಬಂದು ತಮ್ಮ ಚಿತ್ರಗಳ ಟಿಕೆಟ್‌ ಖರೀದಿಸಿ ಎಂದು ಬೇಡುತ್ತಾರೆ!”

9 ವರ್ಷಗಳ ಹಿಂದೆಯೇ ಹೇಳಲಾದ ಈ ಮಾತು ಇಂದು ಅಕ್ಷರಶಃ ನಿಜ ಆಗುತ್ತಲಿದೆ. ಹೆಚ್ಚೂ ಕಡಿಮೆ ಇದೇ ಸ್ಥಿತಿ ಎನ್ನಬಹುದು. ಕಲಾವಿದರು ಉತ್ತಮ ಕಥೆಗಳನ್ನು ನೋಡಿ ಆರಿಸಿಕೊಳ್ಳುವ ಬದಲು, ತಮ್ಮ ಚಿತ್ರಗಳ ಪ್ರಚಾರದ ಈವೆಂಟ್ಸ್ ನಲ್ಲಿ ತಮ್ಮ ಅಭಿಮಾನಿಗಳನ್ನು ಕರೆಸಿ, ನಾಟಕ ಆಡುತ್ತಾರೆ ಅಥವಾ ಪ್ರೆಸ್‌ ಮೀಟ್‌ ಗಳಲ್ಲಿ ಫ್ರೀ ಸಿನಿಮಾ ತೋರಿಸುವ ಢಂಬಾಚಾರ ಮಾಡುತ್ತಾರೆ.

ಪ್ರತಿನಿಧಿ 

ಹಿಂದಿಯಿಂದ ವಿಮುಖರು

ಬಾಲಿವುಡ್‌ ಇಂದು ಮಣ್ಣಿನ ದೋಣಿಯಾಗಲು ಮುಖ್ಯ ಕಾರಣ, ಇದಕ್ಕೆ ಸಂಬಂಧಿಸಿದ ಪ್ರತಿ ವ್ಯಕ್ತಿಯೂ ಕೇವಲ ಹಣ ಬಾಚಿಕೊಳ್ಳಬೇಕು, ಎಂಬ ಒಂದೇ ಉದ್ದೇಶಕ್ಕಾಗಿ ಮಾತ್ರ ಹಿಂದಿ ಭಾಷೆಯಲ್ಲಿ ಚಿತ್ರ ತಯಾರಿಸುತ್ತಿರುವುದು. ಆದರೆ ಇವರುಗಳು ಯಾರೂ ಹಿಂದಿಯಲ್ಲಿ ಮಾತನಾಡಲು ಬಯಸುವುದಿಲ್ಲ, ಅಷ್ಟು ಹೀನಾಯ ಅವರಿಗೆ. ಇಂಗ್ಲಿಷ್‌ ನಲ್ಲಿ  ಮಾತ್ರ ಯೋಚಿಸುವುದು, ಅದರಲ್ಲಿ ಮೆರೆದರೆ ಸಾಕು ಎಂಬ ಭಾವ. ಚಿತ್ರದ ಪ್ರಮೋಶನ್‌ ಸಹ ಆಂಗ್ಲದಲ್ಲೇ ನಡೆಯುತ್ತದೆ. ಪ್ರೆಸ್‌ ಮೀಟ್‌ ನಲ್ಲೂ ಎಲ್ಲ ಆಂಗ್ಲಮಯ.

ಇದಕ್ಕೆ ವಿರುದ್ಧ ಎಂಬಂತೆ ದಕ್ಷಿಣದವರು ವರ್ತಿಸುತ್ತಾರೆ. KGF ಚಿತ್ರದ ನಾಯಕ ನಟ ಯಶ್‌ ಮೂಲತಃ ಅಪ್ಪಟ ಕನ್ನಡಿಗ. ಆದರೆ ಆತ ಇದರ ಹಿಂದಿ ಅವತರಣಿಕೆಗಾಗಿ ಮುಂಬೈಗೆ ಬಂದಾಗ, ಅಲ್ಲಿನ ಪತ್ರಕರ್ತರೊಂದಿಗೆ ಅಪ್ಪಟ ಹಿಂದಿಯಲ್ಲೇ ವ್ಯವಹರಿಸಿದರು. ಪುಷ್ಪಾ ಖ್ಯಾತಿಯ ಅಲ್ಲೂ ಅರ್ಜುನ್‌ ಸಹ ಹಿಂದಿಯಲ್ಲೇ ಮಾತನಾಡುತ್ತಾರೆ. ಮಮ್ಮುಟಿ, ಕಿಚ್ಚಾ ಸುದೀಪ್‌….. ಹೀಗೆ ದಕ್ಷಿಣದ ಎಲ್ಲಾ ಮಂದಿ ಹಿಂದಿಯಲ್ಲೇ ಮಾತನಾಡಲು ಬಯಸುತ್ತಾರೆ.

ಅದೇ ಬಾಲಿವುಡ್‌ ಮಂದಿ, ಹಿಂದಿ ಚಿತ್ರದ ಸಂಭಾಷಣೆ, ಪೋಸ್ಟರ್‌, ಪ್ರಮೋಶನ್ಸ್…. ಎಲ್ಲವನ್ನೂ ಆಂಗ್ಲದಲ್ಲೇ ವ್ಯವಹರಿಸುತ್ತಾರೆ. ಹಿಂದಿಯಲ್ಲಿ ಬರೆಯುವುದು ಸಹ ಅವರಿಗೆ ಹೀನಾಯ. ಚಿತ್ರ ಶುರುವಾದ ತಕ್ಷಣ ಅದರ ಕ್ರೆಡಿಟ್‌ ಲೈನ್‌ ಸಹ ಆಂಗ್ಲದಲ್ಲಿರುತ್ತದೆ.

3 ವರ್ಷಗಳ ಹಿಂದೆ ಸೆನ್ಸಾರ್‌ ಮಂಡಳಿ ಯಾವ ಭಾಷೆಯ ಚಿತ್ರವೋ ಅದೇ ಭಾಷೆಯಲ್ಲಿ ಶೀರ್ಷಿಕೆ ಇರಬೇಕೇ ಹೊರತು ಆಂಗ್ಲ ಶೀರ್ಷಿಕೆಗಳಲ್ಲವಲ್ಲ, ಎಂದು ಫರ್ಮಾನ್‌ ಹೊರಡಿಸಿತು. ಮೊದಲ ದೃಶ್ಯದ ಕ್ರೆಡಿಟ್‌ ಲೈನ್‌ ಗೂ ಅದು ಅನ್ವಯಿಸುತ್ತದೆ, ಇಲ್ಲದಿದ್ದರೆ ಸೆನ್ಸಾರ್‌ ಪ್ರಮಾಣ ಪತ್ರ ಸಿಗದು, ಎಂದು ಗುಡುಗಿತು. ಆಗಿನಿಂದ ವಿಧಿಯಿಲ್ಲದೆ ಬಾಲಿವುಡ್‌ ಮಂದಿ ಆಂಗ್ಲದ ಜೊತೆ ಹಿಂದಿಯಲ್ಲೂ ಕ್ರೆಡಿಟ್‌ ಲೈನ್‌, ಹೆಸರು ತೋರಿಸುತ್ತಿದ್ದಾರೆ. ಆದರೆ ಇಲ್ಲಿ ಬಳಸುವ ಭಾಷೆಯ ಶುದ್ಧತೆ ಬಗ್ಗೆ ಏನು ಹೇಳುವುದು? 15-20 ವರ್ಷಗಳ ಹಿಂದೆ ಖಂಡಿತಾ ಈ ಸ್ಥಿತಿ ಇರಲಿಲ್ಲ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ