ಜಾಗೀರ್ದಾರ್*
ಟಾಲಿವುಡ್ ನಟ ಶರ್ವಾ ಇದೀಗ ಹೊಸ ಪ್ರಾಜೆಕ್ಟ್ ಜತೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಆಗಮಿಸುತ್ತಿದ್ದಾರೆ. ಅಂದರೆ ಸಂಪತ್ ನಂದಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಶರ್ವಾ ನಾಯಕನಾಗಿ ನಟಿಸುತ್ತಿದ್ದು, ಇದೀಗ ಈ ಚಿತ್ರದ ಶೀರ್ಷಿಕೆ ರಿವೀಲ್ ಆಗಿದೆ. ಜತೆಗೆ ಮಾಸ್ ಶೀರ್ಷಿಕೆಯ ಅನೌನ್ಸ್‌ಮೆಂಟ್‌ನ ಟೀಸರ್ ಸಹ ಬಿಡುಗಡೆ ಆಗಿದೆ. ಅಂದಹಾಗೆ, #Sharwa38 ಚಿತ್ರಕ್ಕೆ “ಭೋಗಿ” ಎಂಬ ಟೈಟಲ್ ಇಡಲಾಗಿದೆ. ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್‌ನಲ್ಲಿ ಕೆ.ಕೆ. ರಾಧಾಮೋಹನ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇಂದಿನಿಂದ ಈ ಸಿನಿಮಾ ಶೂಟಿಂಗ್ ಶುರುವಾಗಿದೆ.
ಮೊದಲ ಸಲ ನಟ ಶರ್ವಾನಂದ್ ಮತ್ತು ಸಂಪತ್ ನಂದಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಮೂಲಕ ಒಂದಾಗುತ್ತಿದ್ದಾರೆ. 1960 ರ ದಶಕದ ಕಾಲಘಟ್ಟದಲ್ಲಿ ಸಾಗುವ ಕಥೆ ಇದಾಗಿದ್ದು, ಫಸ್ಟ್ ಸ್ಪಾರ್ಕ್‌ನಲ್ಲಿ ಒಂದಷ್ಟು ವಿಚಾರಗಳನ್ನು ಚಿತ್ರಪ್ರೇಮಿಗಳ ಮುಂದಿಟ್ಟಿದ್ದಾರೆ ನಿರ್ದೇಶಕರು. ವಿಧಿಯಾಟ, ಬೆಂಕಿ ಮತ್ತು ಸಂಘರ್ಷದ ಕಥೆಯ ಮೂಲಕ ಆಗಮಿಸುತ್ತಿದ್ದಾರೆ. ಟೈಟಲ್ ಟೀಸರ್‌ನಲ್ಲಿ ಹರಿತವಾದ ಆಯುಧವೂ ಪ್ರಮುಖ ಪಾತ್ರದಂತೆ ಕಂಡಿದೆ. ಒಪ್ಪಂದದ ಕೈ ಕೂಡುವ ಮೂಲಕ ಸೂಚ್ಯವಾಗಿ ಹೊಸ ಕಥೆಯನ್ನು ಹೇಳಹೊರಟಂತಿದೆ ನಿರ್ದೇಶಕರು.
ಸಂಘರ್ಷ ಮತ್ತು ಧೈರ್ಯ ಹಿನ್ನೆಲೆಯಲ್ಲಿ ರೂಪಿಸಲಾದ ಜಗತ್ತನ್ನು ಅವರು ಕಲ್ಪಿಸಿಕೊಳ್ಳುತ್ತಾರೆ. ಒಂದು ಸಾಂಕೇತಿಕ ಸನ್ನೆ, ಕತ್ತಿಯ ವಿನಿಮಯ, ಒಪ್ಪಂದದ ಮುದ್ರೆಯೂ “ಭೋಗಿ” ಚಿತ್ರದ ಟೈಟಲ್ ಟೀಸರ್‌ನಲ್ಲಿ ಕಾಣಿಸುತ್ತದೆ. ಈ ಶೀರ್ಷಿಕೆ ಸಂಪ್ರದಾಯದೊಂದಿಗೆ ಪ್ರತಿಧ್ವನಿಸುವ ಜೊತೆಗೆ ದಂಗೆಯ ಮುನ್ಸೂಚನೆಯನ್ನೂ ನೀಡಿದೆ. ಶೀರ್ಷಿಕೆಗೆ ಕ್ಯಾಪ್ಷನ್ ರೂಪದಲ್ಲಿ ರಕ್ತದ ಹಬ್ಬ ಎಂದು ಬರೆಯಲಾಗಿದೆ. ಒಟ್ಟಾರೆ ಪಕ್ಕಾ ಆಕ್ಷನ್ ಪ್ಯಾಕ್ಡ್ ಸಿನಿಮಾ ಎಂಬುದನ್ನು ಈ ಶೀರ್ಷಿಕೆ ತೋರಿಸುತ್ತದೆ.
ಶೀರ್ಷಿಕೆ ರಿವೀಲ್ ಜತೆಗೆ ಇದೇ ಚಿತ್ರದ ಶೂಟಿಂಗ್ ಸಹ ಇಂದಿನಿಂದ ಶುರುವಾಗಿದೆ. ಹೈದರಾಬಾದ್‌ನ 20 ಎಕರೆ ಜಾಗದಲ್ಲಿ ಬೃಹತ್ ಸೆಟ್ ಹಾಕಿ ಶೂಟಿಂಗ್ ಆರಂಭವಾಗಿದೆ. ಈ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಮತ್ತು ಡಿಂಪಲ್ ಹಯಾತಿ ನಾಯಕಿಯರಾಗಿದ್ದಾರೆ. ಕಿರಣ್ ಕುಮಾರ್ ಮನ್ನೆ ಈ ಚಿತ್ರದ ಕಲಾ ನಿರ್ದೇಶಕರಾಗಿದ್ದಾರೆ. ಇನ್ನುಳಿದ ತಾಂತ್ರಿಕ ಬಳಗದ ಘೋಷಣೆ ಶೀಘ್ರದಲ್ಲಿ ಆಗಲಿದೆಯಂತೆ. ಅಂದಹಾಗೆ ಈ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.