ಕಾಲ್ಪನಿಕ ದೇವರ ಹೆಸರಲ್ಲಿ ಭಯ ಹುಟ್ಟಿಸಿ, ಧರ್ಮದ ಗುತ್ತಿಗೆದಾರರು ಯಾವ ತರಹ ನಮ್ಮ ಸಮಾಜ ಹಂಚಿ ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂಬ ವಿವರ ನಿಮಗೆ ಗೊತ್ತೇ…..?
ಈ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಮನದಲ್ಲಿ ಭಯ, ದ್ವೇಷದ ವಿಷಬೀಜ ಬಿತ್ತಿಬಿಟ್ಟರೆ, ಅವರನ್ನು ಸುಲಭವಾಗಿ ಸಂಘಟಿತರನ್ನಾಗಿಸಬಹುದು. ಇದರ ನಮೂನೆಯನ್ನು ನಾವು ಎಷ್ಟೋ ವರ್ಷಗಳಿಂದ ನೋಡುತ್ತಿದ್ದೇವೆ. ದ್ವೇಷದ ದಳ್ಳುರಿ ಹೆಚ್ಚಿಸಲು ಧರ್ಮಕ್ಕಿಂತ ಮತ್ತೊಂದು ಅಗ್ಗದ, ಸುಲಭದ ದಾರಿ ಇಲ್ಲ. ಇದನ್ನು ಸನಾತನ ಕಾಲದಿಂದಲೂ ಅಧಿಕಾರ ವರ್ಗದವರು, ಧರ್ಮಗುರುಗಳು ಧಾರಾಳ ಬಳಸುತ್ತಾ ಬಂದಿದ್ದಾರೆ.
ಚುನಾಣೆಯಲ್ಲಿ ತಮ್ಮ ಗೆಲುವಿಗಾಗಿ ರಾಜಕೀಯ ಮಂದಿ ಧರ್ಮವನ್ನು ಮಹಾ ವಿಷವಾಗಿ ಬಳಸಿಕೊಳ್ಳುತ್ತಾರೆ. ಬಿಜೆಪಿಯನ್ನು ಗಮನಿಸಿ ಕಾಂಗ್ರೆಸ್, ಸಮಾಜವಾದಿ, ತೃಣಮೂಲ ಕಾಂಗ್ರೆಸ್, ಜೆಡಿಎಸ್, ಆಪ್ ಮೊದಲಾದ ಪಕ್ಷಗಳೆಲ್ಲ ಭಯಭೀತ ಜನರತ್ತ ಸಹಾನುಭೂತಿ ತೋರಿಸುವ ನೆಪದಲ್ಲಿ, ಎಲ್ಲರ ವೋಟ್ ತಮ್ಮ ಪಾರ್ಟಿಗೇ ಸಿಗುವಂತೆ ಪ್ರಯಾಸಪಡುತ್ತವೆ.
ಮುಸಲ್ಮಾರನ್ನು ದೇಶದ್ರೋಹಿಗಳೆಂಬಂತೆ ಬಿಂಬಿಸುತ್ತಾ ಹಿಂದೂಗಳ ವೋಟ್ ಗಿಟ್ಟಿಸಲು ಯತ್ನಿಸುತ್ತಾರೆ. ಅವರ ಮುಂದೆ ಇವರನ್ನು ತೆಗಳುತ್ತಾ, ಹೌದಪ್ಪನ ಚಾವಡಿಯಲ್ಲಿ ಹೌದು, ಇಲ್ಲಪ್ಪನ ಛಾವಡಿಯಲ್ಲಿ ಇಲ್ಲ ಎನ್ನುತ್ತಾ ಎಲ್ಲಾ ವೋಟ್ ಕಬಳಿಸಲು ಯತ್ನಿಸುತ್ತಾರೆ. ಜನರ ಅಭಿವೃದ್ಧಿ, ಬಡವರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಯಾರಿಗೂ ಪುರಸತ್ತಿಲ್ಲ. ಎಲ್ಲಾ ಪಕ್ಷಗಳೂ `ಹೇಗಾದರೂ ಜನರನ್ನು ತುಳಿದು ಹಾಕು, ಅಧಿಕಾರ ಗಿಟ್ಟಿಸು’ ಎಂಬ ಸಿದ್ಧಾಂತಕ್ಕೆ ಅಂಟಿಕೊಂಡಿವೆ.
ಲೋಕಸಭೆ, ರಾಜ್ಯಸಭೆಗಳಲ್ಲಿ ನಡೆಯುವ ಚರ್ಚೆಗಳಿಂದ ಸಾಮಾನ್ಯ ಜನತೆಗೆ ತಿಳಿದುಬರುವ ವಿಚಾರ ಎಂದರೆ, ಧರ್ಮದ ಹೆಸರಿನಲ್ಲಿ ಹೇಗೆ ತಮ್ಮ ಅಧಿಕಾರ ಉಳಿಸಿಕೊಳ್ಳುವುದು, ಧರ್ಮ ಎಂಬ ಅಸ್ತ್ರ ಉಪಯೋಗಿಸಿ ಹೇಗೆ ಅಧಿಕಾರ ಕಿತ್ತುಕೊಳ್ಳುವುದು ಎಂಬುದೇ ಪ್ರಧಾನ ವಿಷಯ. ಯಾವ ಪಕ್ಷಕ್ಕೂ ಹಿಂದೂ ಮುಸ್ಮಾನರು ಸೋದರವಾತ್ಸಲ್ಯ ಬೆಳೆಸಿಕೊಳ್ಳಲಿ ಎಂಬ ಕಾಳಜಿ ಕಿಂಚಿತ್ತೂ ಇಲ್ಲ!
ಧರ್ಮದ ಹೆಸರಲ್ಲಿ ವಿಭಜನೆ
ರಾಜಕೀಯ ನೇತಾರರು, ಧರ್ಮಗುರುಗಳ ಸಂಪಾದನೆ ಇರುವುದೇ ಧರ್ಮವನ್ನು ಮಾರಕಾಸ್ತ್ರವಾಗಿ ಪ್ರಯೋಗಿಸಿ ಸಾಮಾನ್ಯ ಜನತೆಯನ್ನು ಕುರಿಗಳನ್ನಾಗಿಸುವುದರಲ್ಲಿ. ಅವರನ್ನು ಸದಾ ವಿಭಜಿಸುತ್ತಾ ಒಗ್ಗಟ್ಟಾಗಿರಲು ಬಿಡದೆ ಬೇರೆ ಬೇರೆ ಆಗಿಸುತ್ತಾರೆ. ಸನಾತನ ಕಾಲದಿಂದಲೂ ಇದು ಹೀಗೆ ನಡೆಯುತ್ತಾ ಬಂದಿದೆ. ಆಂಗ್ಲರು ಹಿಂದೆ ನಮ್ಮನ್ನು ದಾಸ್ಯದಲ್ಲಿ ಬಂಧಿಸಿಡಲು ಪಾಲಿಸುತ್ತಿದ್ದ `ಡಿವೈಡ್‌ರೂಲ್’ ಮನೋಧರ್ಮವನ್ನೇ ಇಂದಿನ ರಾಜಕೀಯ ಪಕ್ಷಗಳು ಅಧಿಕಾರ ದಾಹಕ್ಕಾಗಿ ಬಳಸಿಕೊಳ್ಳುತ್ತಿವೆ. ಧರ್ಮ, ಜಾತಿ, ಕೋಮುಗಲಭೆ ಎಬ್ಬಿಸಿ ಸುಲಭವಾಗಿ ಜನರನ್ನು ವಿಭಜಿಸಬಹುದಾಗಿದೆ.
ಇಡೀ ಕೋಮನ್ನು ಸಂಘಟಿತರನ್ನಾಗಿಸಲು ಸಹ ಈ ಧರ್ಮರೂಪಿ ವಿಷವನ್ನೇ ಬಳಸುತ್ತಾರೆ. ಪಾಕಿಸ್ತಾನ, ಆಫ್ಗಾನಿಸ್ತಾನಗಳು ಈ ಧರ್ಮ ವಿಷದ ಸಹಾಯದಿಂದಲೇ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಪಶ್ಚಿಮ ಏಷ್ಯಾದ ಎಲ್ಲಾ ಅಧಿಕಾರಸ್ಥ ಧುರೀಣರೂ ಇಂಥ ಮಾರಕಾಸ್ತ್ರ ಬಳಸಿಕೊಂಡೇ ತಮ್ಮ ಅಧಿಕಾರ ಸದಾ ಉಳಿಯುವಂತೆ ಮಾಡುತ್ತಿದ್ದಾರೆ.
ಧರ್ಮದ ಹೆಸರಿನಲ್ಲಿ ಲಕ್ಷಾಂತರ ಮಂದಿ ಅಮಾಯಕ ಮುಗ್ಧರನ್ನು ಜೇಲಿಗೆ ತುಂಬಿಸಿ, ನಿಸ್ಸಹಾಯಕರ ಮೇಲೆ ಗೋಲಿಬಾರು ನಡೆಸಿ, ಅದನ್ನು ಪುಣ್ಯಕಾರ್ಯ ಎಂದೇ ಬಿಂಬಿಸುತ್ತಾರೆ. ಸಾಮಾಜಿಕ ಕೆಟ್ಟ ಕಾರ್ಯಗಳನ್ನೂ ಘನಕಾರ್ಯವೆಂದೇ ಆದರ್ಶವಾಗಿಸಿ, ಸನ್ಮಾನ ಮಾಡಲಾಗುತ್ತದೆ.
ರಷ್ಯಾ ಯುಕ್ರೇನಿನ ಯುದ್ಧದಲ್ಲಿ ಮಾಸ್ಕೋದ ಆರ್ಥೊಡಾಕ್ಸ್ ಚರ್ಚುಗಳ ಬಹುದೊಡ್ಡ ಕೈವಾಡವಿದೆ, ಇವು ರಷ್ಯಾದ ಆಕ್ರಮಣವನ್ನು ಪುಣ್ಯ ಕಾರ್ಯ ಎನ್ನುತ್ತವೆ. ನಿಮ್ಮ ಪೂರ್ವಾಗ್ರಹ ವಿಚಾರಗಳನ್ನು ಬದಿಗೊತ್ತಿ, ಒಂದು ಸಲ ಮುಕ್ತ ಮನಸ್ಸಿನಿಂದ ತರ್ಕಬದ್ಧವಾಗಿ ಆಲೋಚಿಸಿ ನೋಡಿ. ಧರ್ಮವೇ ಎಲ್ಲಾ ಸಮಸ್ಯೆಗಳಿಗೂ ಮೂಲ ಅಂತ ಸ್ಪಷ್ಟ ಗೊತ್ತಾಗುತ್ತದೆ.
ಸಾವಿರಾರು ವರ್ಷಗಳಿಂದ ಜನ ಧರ್ಮದ ಹೆಸರಿನಲ್ಲಿ ಹೊಡೆದಾಡುತ್ತಾ, ಸಾವು ನೋವು ಕಾಣುತ್ತಿದ್ದಾರೆ. ಕಳೆದ 3 ಸಾವಿರ ವರ್ಷಗಳಿಂದ ಧರ್ಮದ ನೆಪವೊಡ್ಡಿ ಜನ ಸಾಯುವಂತೆ ಹೋರಾಡುತ್ತಿದ್ದಾರೆ, 15 ಸಾವಿರಕ್ಕೂ ಹೆಚ್ಚು ಯುದ್ಧಗಳು ಈ ಧರ್ಮದ ಹೆಸರಿನಲ್ಲೇ ಆಗಿಹೋಗಿವೆ. ಧರ್ಮದ ರಕ್ಷಣೆ, ಅದನ್ನು ಕಾಪಾಡಬೇಕು, ಹರಡಬೇಕು ಎಂಬ ಹೆಸರಲ್ಲಿ ಇಷ್ಟೆಲ್ಲ ಅನರ್ಥಗಳು ನಡೆಯುತ್ತಲೇ ಇವೆ.
ಇದರ ಹಿಂದೆ ಇರುವವರಾರು?
ಕ್ರೈಸ್ತ ಮತದ ಪ್ರಚಾರದ ಸಂದರ್ಭದಲ್ಲಿ ಧರ್ಮಗುರುಗಳ ಮನದಲ್ಲೂ, ಧರ್ಮದ ಹೆಸರಿನಲ್ಲಿ ಯಾಕೆ ಯುದ್ಧ ಆಗಬಾರದು, ಇದು ಧಾರ್ಮಿಕ ಯುದ್ಧವೇ ಆಗುತ್ತದೆ, ಎಂದೆನಿಸಿತು. ನಂತರ ಇಸ್ಲಾಂ ಮತ್ತು ಇತರ ಧರ್ಮಗಳೂ ಇದನ್ನೇ ಅನುಸರಿಸಿದ. ಈ ರೀತಿ ವಿಶ್ವದಲ್ಲಿ ಎಲ್ಲೆಡೆ ಧರ್ಮ ಯುದ್ಧಗಳು ಹೆಚ್ಚತೊಡಗಿದವು.
ಧರ್ಮ ಗುರುಗಳು ಮಾಡಿದ ಮತ್ತೊಂದು ಘನಕಾರ್ಯವೆಂದರೆ, ಸಾಮಾನ್ಯ ಜನರು ಇಂಥ ಯುದ್ಧಗಳಲ್ಲಿ ಹೋರಾಡಿ ಸತ್ತರೆ, ಅವರಿಗೆ ನೇರ ಸ್ವರ್ಗ ಪ್ರಾಪ್ತಿ ಎಂದು ನಂಬಿಸಿಬಿಟ್ಟರು. ರಾಮಾಯಣ, ಮಹಾಭಾರತದ ಯುದ್ಧಗಳನ್ನು ಈ ಧರ್ಮಗುರುಗಳು ಧರ್ಮ ಯುದ್ಧಗಳೆಂದೇ ಜನರ ಮನದದಲ್ಲಿ ಬಿಂಬಿಸಿದರು. ಇಂಥ ಯಾವುದೇ ಯುದ್ಧದ ಪ್ರಸಂಗವಿರಲಿ, ಅದರ ಹಿಂದೆ ಯಾರೋ ಧರ್ಮಗುರು ಇದ್ದೇ ಇರುತ್ತಾರೆ.
ಹಿಂದಿನಿಂದಲೂ ಆಡಳಿತ ನಡೆಸುತ್ತಿದ್ದ ರಾಜಮಹಾರಾಜರು ಈ ಧರ್ಮಗುರುಗಳ ಸಹಾಯದಿಂದ, ತಮ್ಮ ಸ್ವಾರ್ಥ ಸಾಧನೆಗಾಗಿ ಧರ್ಮವನ್ನು ಮನಸ್ಸಿಗೆ ಬಂದಂತೆ ದುರುಪಯೋಗಪಡಿಸಿಕೊಂಡರು. ಧರ್ಮಗುರುಗಳು ಸಹ ತಮ್ಮ ಸ್ವಾರ್ಥಕ್ಕಾಗಿ ಇಂಥ ಅಧಿಕಾರ ವರ್ಗದ ಜೊತೆ ಸೇರಿ, ತಮ್ಮ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಇಂಥ ಯುದ್ಧಗಳು ನಡೆಯುವಂತೆ ಪ್ರಚೋದಿಸಿದರು. ಈ ರೀತಿ ಸಾಮಾನ್ಯ ಜನತೆಯನ್ನು ಮೂರ್ಖರನ್ನಾಗಿಸಿ ತಂತಮ್ಮ ಧಾರ್ಮಿಕ ಸಂಸ್ಥೆ, ಮಠ, ದತ್ತಿಗಳಿಗೆ ಬೇಕಾದಷ್ಟು ಹಣ ಗಿಟ್ಟಿಸಿದರು.
ಅಸಲಿನ ವಿಷಯ ಎಂದರೆ ಯಾವ ವ್ಯಕ್ತಿ ತನ್ನನ್ನು ತಾನು ಹಿಂದೂ, ಕ್ರೈಸ್ತ, ಮುಸಲ್ಮಾನ್, ಜೈನ, ಬೌದ್ಧರೆಂದು ಹೇಳಿಕೊಳ್ಳುತ್ತಾರೋ, ಅವರ ಪೂರ್ಜರು ಆ ಧರ್ಮವನ್ನು ಪಾಲಿಸುತ್ತಿದ್ದುರಿಂದ ಇವರೂ ಕಣ್ಣುಮುಚ್ಚಿ ಪಾಲಿಸುತ್ತಿದ್ದಾರೆ. ಹಿಂದೂತ್ವ ಎಂದರೇನು ಎಂದು ಬಹಳಷ್ಟು ಹಿಂದೂಗಳಿಗೆ ಗೊತ್ತಿಲ್ಲ. ಇದೇ ಮಾತು ಕ್ರೈಸ್ತ, ಮುಸಲ್ಮಾನರಿಗೂ ಅನ್ವಯಿಸುತ್ತದೆ. ಮನೆಯಲ್ಲಿ ಕಲಿಸಲಾದ ಧರ್ಮವನ್ನು ಮೌನವಾಗಿ ಅನುಸರಿಸುತ್ತಾರೆ.
ಹಾಗೆ ನೋಡಿದರೆ ವಿಶ್ವದ ಎಲ್ಲಾ ಧರ್ಮಗಳೂ ಸತ್ಯ, ಅಹಿಂಸೆ, ಪ್ರೇಮ, ಸಹನಶೀಲತೆ, ಭ್ರಾತೃತ್ವದ ಅಡಿಗಲ್ಲ ಮೇಲೇ ನಿಂತಿವೆ, ಹಾಗೆಂದು ಹೇಳಿಕೊಳ್ಳುತ್ತಿವೆ. ಆದರೆ ವಿಶ್ವದಲ್ಲಿ ಎಲ್ಲಾ ಕಡೆ ಈ ಧರ್ಮದ ಹೆಸರಿನಲ್ಲೇ ಹಿಂಸೆ, ಭಯೋತ್ಪಾದನೆ, ಯುದ್ಧದ ಕರ್ಮಕಾಂಡಗಳು ನಡೆಯುತ್ತವೆ. ಒಂದು ಧರ್ಮದ ಅನುಯಾಯಿ ಮತ್ತೊಂದು ಧರ್ಮದ ಅನಿಯಾಯಿಯನ್ನು ತನ್ನ ಶತ್ರುವೆಂದೇ ಭಾವಿಸಿ ಅವನನ್ನು ಸಂಹರಿಸಲು ಯತ್ನಿಸುತ್ತಾನೆ, ಅದನ್ನೇ ಧರ್ಮಕಾರ್ಯವೆಂದು ಬೀಗುತ್ತಾನೆ.
ಬೇರೆ ಧರ್ಮದ ಆಯಾ ಧರ್ಮಪ್ರಾಂತ್ಯಗಳ ಮೂರ್ತಿಗಳನ್ನು ಹಾಳು ಮಾಡುವುದು, ಬೆಂಕಿ ಹಚ್ಚಿ ನಾಶಪಡಿಸುವುದನ್ನು ಯಾವ ನಾಸ್ತಿಕರೂ ಮಾಡುತ್ತಿಲ್ಲ. ತಮ್ಮನ್ನು ತಾವು ಅಪ್ಪಟ ಆಸ್ತಿಕರು, ಧರ್ಮನಿಷ್ಠರು ಎಂದು ಭಾವಿಸುವ ವಿಧರ್ಮೀಯರಷ್ಟೇ ಹೀಗೆ ಮಾಡುತ್ತಿದ್ದಾರೆ. ಆಸ್ತಿಕರಷ್ಟೆ ಧರ್ಮಯುದ್ಧ, ಜಿಹಾದ್, ಭಯೋತ್ಪಾದನೆಯಂಥ ದ್ವೇಷ ದಳ್ಳುರಿಗಳ ದುಶ್ಕೃತ್ಯ ಎಸಗುತ್ತಾರೆ. ಯಾರು ಇಂಥ ಕುಕೃತ್ಯದಲ್ಲಿ ಪಾಲ್ಗೊಳ್ಳುವುದಿಲ್ಲವೋ ಅಂಥವರನ್ನು ಟೀಕಿಸುತ್ತಾರೆ.
ವಿಡಂಬನೆ ಎಂದರೆ, ಇಲ್ಲಿ ಧರ್ಮ ಬೇರೆ ಬೇರೆ ಜನರನ್ನು ಒಂದುಗೂಡಿಸುವ ಬದಲು, ದ್ವೇಷದಿಂದ ತೊರೆಯಿಸುವ ಕೆಲಸ ಮಾಡಿಸುತ್ತದೆ. ಕೇವಲ ಹುಲುಮಾನವರನ್ನು ಒಂದುಗೂಡಿಸಲಾಗದ ಈ ಧರ್ಮ, ಕಣ್ಣಿಗೆ ಕಾಣಿಸದ ಆ ದೇವರ ಪಾದಕ್ಕೆ ಈ ಮಾನವರನ್ನು ಹೇಗೆ ಸೇರಿಸಲು ಸಾಧ್ಯ?
ದೇವರೆಂಬ ಕಟ್ಟು ಕಥೆ
ಯಾವ ದೇರವನ್ನು ಸಾಕ್ಷಾತ್ಕಾರ ಹೊಂದಬೇಕೆಂದು ಈ ವಿಶ್ವದಲ್ಲಿ ಕೋಟ್ಯಂತರ ಮಂದಿ ಧರ್ಮ, ಮತ ಚಲಾಯಿಸುತ್ತಿರುವರೋ, ಅಂಥ ಯಾರಿಗೂ ಇದುವರೆಗೂ ದೇವರ ದರ್ಶನ ಆಗಿರುವ ನಿದರ್ಶನವೇ ಇಲ್ಲ! ಏಕೆಂದರೆ ಪ್ರತಿಯೊಂದು ಧರ್ಮ ಜನರ ಮನದಲ್ಲಿ ಒಂದು ಕಾಲ್ಪನಿಕ ದೇವರಿನ ಕಟ್ಟುಕಥೆ ಹೇಳಿ ನಂಬಿಸಿಬಿಟ್ಟಿದೆ. ಈ ಕಾರಣದಿಂದಲೇ ಪ್ರತಿಯೊಬ್ಬರೂ ದೇವರನ್ನು ಬಲವಾಗಿ ನಂಬುತ್ತಾರೆ. ಆ ದೇವರನ್ನು ಕಾಣಬೇಕೆಂದು ಕಠಿಣ ಕ್ರಮ ಕೈಗೊಳ್ಳುತ್ತಾರೆ. ಅವರು ಮಾನಸಿಕ ಪ್ರೇಕ್ಷಣ (ಪ್ರೊಜೆಕ್ಷನ್) ಮೂಲಕ ಕಾಲ್ಪನಿಕ ದೇವರನ್ನು ಕಂಡೆವೆಂದು ಭ್ರಮಿಸುತ್ತಾರೆ. ಇದು ಅವರ ಮನದಲ್ಲಿ ಸದಾ ಉಳಿದಿರುತ್ತದೆ. ಈ ಕಾರಣದಿಂದಲೇ ಆಯಾ ಧರ್ಮದವರಿಗೆ ಅವರವರ ದೇವರು ಮಾತ್ರ ಕಾಣಿಸುತ್ತಾನೆ. ಬೌದ್ಧರು ಅನೇಕ ಕಡೆ ಬುದ್ಧನ ಮೂರ್ತಿ ಪ್ರತಿಷ್ಠಾಪಿಸಿದ್ದರೂ, ಬಹಳ ಕಡೆ ಅದು ನಷ್ಟ ಆಗಿದೆ.
ಇದು ಒಂದು ಮನೋವೈಜ್ಞಾನಿಕ ಸತ್ಯ, ಅಂದ್ರೆ ಮಾನವನ ಮನಸ್ಸು ಯಾವುದನ್ನು ದೃಢವಾಗಿ ನಂಬಿರುತ್ತದೋ ಕೇವಲ ಆ ಚಿತ್ರ ಮಾತ್ರ ನಮ್ಮ ಅಂತಃಪಟಲದಲ್ಲಿ ಉಳಿಯುತ್ತದೆ. ಹೀಗಾಗಿ ದೇವರನ್ನು ಸಾಕ್ಷಾತ್ ಆಗಿ ಕಂಡಿದ್ದೇವೆ ಎಂದು ಹೇಳಿಕೊಳ್ಳುವರು, ತಮಗೆ ಮಾತ್ರ ದೇವರು ಕಾಣುತ್ತಾನೆ ಎನ್ನುತ್ತಾರೆ. ಪ್ರವಚನಕ್ಕೆ ಬಂದ ಇತರರಿಗೆ ದೇವರು ಕಂಡುಬರೋಲ್ಲ. ವ್ಯಕ್ತಿ ವಿಕ್ಷಿಪ್ತ ಅವಸ್ಥೆಯಲ್ಲಿದ್ದಾಗ, ಅವನಿಗೆ ಆಕಾಶವಾಣಿಯೂ ಕೇಳಿಸುತ್ತದೆ, ದೇವರು ಸಹ ದರ್ಶನ ನೀಡಿದಂತೆ ಅನಿಸುತ್ತೆ.
ಕಟ್ಟುಕಥೆಗಳ ಮಹಾಪೂರ ಎಲ್ಲಾ ಧರ್ಮಗಳೂ ಭಕ್ತಿ, ಶ್ರದ್ಧೆಗಳ ಹೆಸರಿನಲ್ಲಿ ಕೇವಲ ಮೂಢನಂಬಿಕೆ ಮತ್ತು ಹುಸಿ ಚಮತ್ಕಾರಗಳಿಂದಲೇ ತಮ್ಮ ಅಂಗಡಿ ನಡೆಸುತ್ತವೆ. ಎಲ್ಲಾ ಧರ್ಮಗಳೂ ತಮ್ಮ ದೇವರುಗಳೊಂದಿಗೆ ಅಂಥ ಇಂಥ ಚಮತ್ಕಾರಿಕ ಕಟ್ಟು ಕಥೆಗಳನ್ನು ಹೇಳಿಕೊಳ್ಳುತ್ತವೆ. ಎಲ್ಲಾ ಧರ್ಮಗಳ ಹೇಳಿಕೆಯೂ ಒಂದೇ, ಯಾರು ಅವರ ಧರ್ಮವನ್ನು ಪಾಲಿಸುತ್ತಾರೋ ಅವರ ಎಲ್ಲಾ ಆಸೆಗಳೂ ಈಡೇರುತ್ತವೆ ಅಂತ. ಮರಣಾನಂತರ ನೇರ ಸ್ವರ್ಗಕ್ಕೆ ಹೋಗಬಹುದು ಅಂತ. ಜನನ ಮರಣಗಳ ಚಕ್ರದಿಂದ ಮೋಕ್ಷ ಸಿಗುವ ಸಾಧ್ಯತೆ ಇದೆಯಂತೆ.
ಸಾಮಾನ್ಯ ಜನತೆ ಎಲ್ಲಾ ಧರ್ಮಗಳಿಂದಲೂ ಮಾನವ ಮಾತ್ರದವರಿಂದ ಸಾಧ್ಯವಿಲ್ಲದ ಚಮತ್ಕಾರಗಳನ್ನೇ ಬಯಸುತ್ತಾರೆ ಎಂಬುದೂ ಸತ್ಯ! ಅದನ್ನು ಪಡೆಯುವ ಸಲುವಾಗಿಯೇ ಇವರ ನಂಬಿಕೆಗಳು ಮೂಢನಂಬಿಕೆಗಳಾಗಿ ಬದಲಾಗುತ್ತವೆ. ಎಲ್ಲಾ ಧರ್ಮಗಳಲ್ಲೂ ಇರುವ ಪವಾಡದ ಕಥೆಗಳಿಗೆ ಯಾವ ಆಧಾರವೂ ಇಲ್ಲ, ತರ್ಕವೂ ಇಲ್ಲ, ಈಗ ಮತ್ತೆ ಅವು ರಿಪೀಟ್ ಆಗುವುದೂ ಇಲ್ಲ. ಅವು ಕೇವಲ ಕಟ್ಟು ಕಥೆಗಳ ಪ್ರಚಾರದಲ್ಲಿವೆಯಷ್ಟೆ. ಎಲ್ಲಾ ಧರ್ಮಗುರುಗಳೂ ಹೇಳುವುದು ಒಂದೇ ಮಾತು, ಎಲ್ಲಿಯವರೆಗೂ ನೀವು ನಮ್ಮ ಧರ್ಮದ ವಿಚಾರದಲ್ಲಿ ಪೂರ್ಣ ವಿಶ್ವಾಸ, ಶ್ರದ್ಧೆ ಇರಿಸಿಕೊಳ್ಳುದಿಲ್ಲವೋ, ಅಲ್ಲಿಯವರೆಗೂ ನಿಮಗೆ ದೇವರು ಕಂಡುಬರುವುದಿಲ್ಲ, ನಿಮ್ಮ ಆಸೆಗಳು ಈಡೇರುವುದಿಲ್ಲ ಅಂತ. ಇಂಥ ಧಾರ್ಮಿಕ ವಿಚಾರಶೂನ್ಯತೆಗಳಿಂದಾಗಿಯೇ, ಧಾರ್ಮಿಕ ವ್ಯಕ್ತಿಗಳು ಸದಾ ಮೂಢನಂಬಿಕೆಗಳಿಗೆ ಸಂಪೂರ್ಣ ಬಲಿ ಆಗಿರುತ್ತಾರೆ. ಧರ್ಮದ ಹೆಸರಿನಲ್ಲಿ ಇವರು ತಮ್ಮ ಬಲಿದಾನ ಕೊಡುವುದಕ್ಕೂ ಹೇಸುವುದಿಲ್ಲ. ಇಂಥ ದೇವರನ್ನು ಪಡೆದು ಸಾಮಾನ್ಯ ಜನ ಮುಂದೇನು ಮಾಡಬೇಕು ಎಂಬುದನ್ನು ಯಾವ ಧರ್ಮಗುರು ಹೇಳುವುದಿಲ್ಲ. ಏಕೆಂದರೆ ದೇವರು ಸಿಗುವ ಹೊತ್ತಿಗೆ ನಿಮಗೆ ಸಕಲ ಸಿರಿಸಂಪತ್ತು, ಸೌಭಾಗ್ಯಗಳೂ ಕೂಡಿರುತ್ತವೆ ಎಂದು ಆಶ್ವಾಸನೆ ತುಂಬಿರುತ್ತಾರೆ.
ಧರ್ಮ ಎಂಬ ವ್ಯಾಪಾರ
ಈ ವಿಶ್ವದ ಅತಿ ದೊಡ್ಡ ವ್ಯಾಪಾರ ಎಂದರೆ ಧರ್ಮ. ಇದರಲ್ಲಿ ನಕರದ ಭಯ, ಸ್ವರ್ಗದ ಲೋಭವನ್ನು ಮೊದಲಿನಿಂದ ತೋರಿಸಲಾಗುತ್ತದೆ. ಮೋಕ್ಷದ ಹೆಸರಿನಲ್ಲಿ ಸಾಮಾನ್ಯರನ್ನು ಕೊಳ್ಳೆ ಹೊಡೆಯುವುದು ಒಂದು ದೊಡ್ಡ ದಂಧೆಯೇ ಸರಿ. ಬೇರೆ ಬೇರೆ ವ್ಯಕ್ತಿಗಳನ್ನು ಪ್ರೀತಿ ವಾತ್ಸಲ್ಯದಿಂದ ಬಂಧಿಸುವುದು ಧರ್ಮ ಆಗಿರಬೇಕೇ ಹೊರತು ಅವರನ್ನು ಬೇರ್ಪಡಿಸುವುದಲ್ಲ. ಯಾವುದೇ ವ್ಯಕ್ತಿ ತನ್ನ ಹೆಸರಿನೊಂದಿಗೆ ಇಂಥ ವಿಶೇಷ ಧರ್ಮದ ಲೇಬಲ್ ಅಂಟಿಸಿಕೊಂಡಾಗ, ಬೇರೆ ಧರ್ಮೀಯರನ್ನು ತನ್ನ ಶತ್ರುಗಳೆಂದೇ ಭಾವಿಸುತ್ತಾನೆ. ಅವರ ಧರ್ಮತಾಣಗಳನ್ನು ನಾಶಪಡಿಸಿ, ಒಂದು ಪೈಶಾಚಿಕ ತೃಪ್ತಿ ಹೊಂದುತ್ತಾನೆ. ತನ್ನ ಪೂರ್ವಾಗ್ರಹದ ಪ್ರಕಾರ ತಾನೇನೋ ಪುಣ್ಯದ ಘನಕಾರ್ಯ ಮಾಡಿದ್ದೇನೆ ಅಂದುಕೊಳ್ಳುತ್ತಾನೆ.
ಈ ಕೆಲಸವನ್ನೇ ದೇಶದ ಸಂವಿಧಾನಗಳು ಇಂದು ಮಾಡತೊಡಗಿವೆ. ಅವು ಸಾಮಾನ್ಯ ಜನರ ಹಕ್ಕುಗಳ ರಕ್ಷಣೆ ಮಾಡುತ್ತವೆ. ಧರ್ಮ ಮತ್ತು ಸರ್ಕಾರಗಳ ಆತಂಕದಲ್ಲಿ ಜನರನ್ನು ಕಾಪಾಡುವ ಮಾತುಗಳನ್ನಾಡುತ್ತಾರೆ. ಧರ್ಮಗುರುಗಳು ಈಗ ಎಲ್ಲಾ ಸಂವಿಧಾನಗಳ ಹಿಂದೆ ಬಿದ್ದಿದ್ದಾರೆ. ಭಾರತದಲ್ಲಿ ಸಂವಿಧಾನದ ರಕ್ಷಕರು ರಾಮ ಮಂದಿರದಲ್ಲಿ ಅತಾರ್ಕಿಕ ನಿರ್ಣಯಗಳನ್ನು ಸಂವಿಧಾನದ ಹೆಸರಿನಲ್ಲಿ ಧರ್ಮದ ರಕ್ಷಣೆಯ ಹೆಸರಿನಲ್ಲಿ ನೀಡುತ್ತಾರೆ. ಅಮೆರಿಕಾದಂಥ ಮುಂದುವರಿದ ದೇಶದಲ್ಲಿ, ಚರ್ಚುಗಳ ಮುಂದಾಳತ್ವದಲ್ಲಿ, ಹೆಂಗಸರನ್ನು ಗುಲಾಮರನ್ನಾಗಿಸುವ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.
ಎಲ್ಲಾ ಧರ್ಮಗಳೂ ಹೆಂಗಸರು, ದುರ್ಬಲರನ್ನು ಗುಲಾಮರನ್ನಾಗಿಯೇ ಕಾಣುತ್ತವೆ. ಆಗ ಮಾತ್ರ ಸಶಕ್ತರಾದ, ಚತುರರು ಧರ್ಮದ ನೆಪದಲ್ಲಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳಲು ಸಾಧ್ಯವಾಗುತ್ತದೆ. ಧರ್ಮಗುರುಗಳಿಗ ಲಾಭ ಇರುವುದೇ ಇಲ್ಲವೇ!
– ಹರಿದತ್ತ ಶರ್ಮ