– ರಾಘವೇಂದ್ರ ಅಡಿಗ ಎಚ್ಚೆನ್.
ಕೋಟ್ಯಂತರ ಅಭಿಮಾನಿಗಳು ಮಾತ್ರವಲ್ಲದೇ, ನಿರ್ಮಾಪಕ, ನಿರ್ದೇಶಕರ ಅಚ್ಚುಮೆಚ್ಚಿನ ಕನ್ನಡದ ನಟ ಶಿವರಾಜ್ಕಮಾರ್. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಹ್ಯಾಟ್ರಿಕ್ ಹೀರೋ ಶಿವಣ್ಣನ ಮುಂದಿನ ಬಹುನಿರೀಕ್ಷಿತ ಚಿತ್ರ ’45’. ಶಿವರಾಜ್ಕುಮಾರ್ ಜೊತೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರತಿಭಾನ್ವಿತ ನಟ ರಾಜ್ ಬಿ. ಶೆಟ್ಟಿ ಅಭಿನಯಿಸಿರುವ ಈ ಚಿತ್ರದ ಮೊದಲ ಹಾಡು ಅನಾವರಣವಾಗಿದೆ.
ಆನಂದ ಪೀಠಾಧಿಪತಿ ಶ್ರೀ ಮಹಾರಾಜ್ ಸ್ವಾಮಿಗಳು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿ ‘ಶಿವಂ ಶಿವಂ ಸನಾತನಂ’ ಹಾಡನ್ನು ಬಿಡುಗಡೆಗೊಳಿಸಿದರು. ಈವೆಂಟ್ನಲ್ಲಿ ಶಿವರಾಜ್ಕುಮಾರ್ಗೂ ಶಿವ ಎಂಬ ಹೆಸರಿಗೂ ಏನು ಸಂಬಂಧ ಎಂಬುದರ ಬಗ್ಗೆ ಹಂಚಿಕೊಳ್ಳಲಾಯಿತು.
ಡ್ಯಾನ್ಸ್ ಆರ್ಟಿಸ್ಟ್ಗಳು ಈಶ್ವರನ ಅವತಾರದಲ್ಲಿ ಈ ‘ಶಿವಂ ಶಿವಂ ಸನಾತನಂ’ ಹಾಡಿಗೆ ಅದ್ಭುತವಾಗಿ ನೃತ್ಯ ಪ್ರದರ್ಶಿಸುವ ಮೂಲಕ ಕಾರ್ಯಕ್ರಮದಲ್ಲಿದ್ದವರನ್ನು ರಂಜಿಸಿದರು. ಈ ಹಾಡು ಪೂರ್ಣಗೊಳ್ಳುವ ಹೊತ್ತಿಗೆ ನಾಯಕ ನಟ ಶಿವರಾಜ್ಕುಮಾರ್ ವೈಟ್ ಅಂಡ್ ವೈಟ್ ರೇಷ್ಮೆ ಪಂಚೆ ಹಾಗೂ ಶರ್ಟ್ನಲ್ಲಿ ಸಂಪೂರ್ಣ ಸಾಂಪ್ರದಾಯಿಕ ನೋಟದಲ್ಲಿ ವೇದಿಕೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟರು.
ಶಿವರಾಜ್ಕುಮಾರ್ ಮೂಲ ಹೆಸರು ‘ನಾಗರಾಜ ಶಿವ ಪುಟ್ಟಸ್ವಾಮಿ’. ಶಿವನ ಜೊತೆಗೆ ತಂದೆ ರಾಜ್ಕುಮಾರ್ ಎಂಬ ಹೆಸರನ್ನು ಸೇರಿಸಿಕೊಂಡು ಭಾರತೀಯ ಚಿತ್ರರಂಗದಲ್ಲಿ ಶಿವರಾಜ್ಕುಮಾರ್ ಎಂದೇ ಬ್ರ್ಯಾಂಡ್ ಆಗಿದ್ದಾರೆ. ವಿಶೇಷವಾಗಿ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಮೋಘ ಅಭಿನಯ ಮಾತ್ರವಲ್ಲದೇ ಸಿಂಪ್ಲಿಸಿಟಿಗೆ ಹೆಸರುವಾಸಿಯಾಗಿದ್ದಾರೆ.
ಓಂ ಹಾಗೂ ಶಿವ ಎಂಬ ಹೆಸರು ಶಿವರಾಜ್ಕುಮಾರ್ ಸಿನಿಪಯಣದಲ್ಲಿ ದೊಡ್ಡ ಮಹತ್ವವನ್ನೊಳಗೊಂಡಿದೆ. ಓಂ ಅನ್ನೋದು ಶಿವರಾಜ್ಕುಮಾರ್ ಅಭಿನಯದ ಉಪೇಂದ್ರ ನಿರ್ದೇಶನದ ಬ್ಲಾಕ್ಬಸ್ಟರ್ ಸಿನಿಮಾ. ಇನ್ನೂ, ಶಿವ ಅನ್ನೋದು ಹ್ಯಾಟ್ರಿಕ್ ಹೀರೋಗೆ ದೊಡ್ಡ ಶಕ್ತಿ. ಈ ಶಕ್ತಿಯಿಂದಲೇ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳನ್ನು ಉತ್ತಮವಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆಯಂದ್ರೆ ಇತ್ತೀಚೆಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಸಂಪೂರ್ಣ ಚೇತರಿಸಿಕೊಂಡು, ಇದೀಗ ಡಬಲ್ ಎನರ್ಜಿಯೊಂದಿಗೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.
”ಈ ಸಿನಿಮಾ ವಿಶ್ವಾದ್ಯಂತ ತಲಪಬೇಕು. ನನಗೆ ಈ ಹಾಡು ಕೇಳಿದ ಮೇಲೆ ಸಿನಿಮಾ ಮೇಲಿನ ಅಭಿಮಾನ ಮತ್ತಷ್ಟು ಜಾಸ್ತಿಯಾಗಿದೆ. ಯಾವಾಗ ಈ ಚಿತ್ರ ನೋಡುತ್ತೇನೋ ಅನಿಸುತ್ತಿದೆ. ನಿರ್ಮಾಪಕ ರಮೇಶ್ ರೆಡ್ಡಿ ನಮ್ಮ ಕುಟುಂಬವಿದ್ದಂತೆ. ಈಗಾಗಲೇ ಕನ್ನಡ ವರ್ಷನ್ ಡಬ್ಬಿಂಗ್ ಮಾಡಿದ್ದೇನೆ. ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕ ಅರ್ಜುನ್ ಜನ್ಯ ಅವರು ಬಹಳ ಚೆನ್ನಾಗಿ ನಿರ್ದೇಶನದ ಹೊಣೆಯನ್ನು ನಿಭಾಯಿಸಿದ್ದಾರೆ. ನನಗೆ ಶಿವ ಅಂತಾ ಹೆಸರಿಟ್ಟಿದ್ದು ನಮ್ಮ ತಂದೆ ತಾಯಿ. ನಾನು 9 ವರ್ಷಗಳ ಬಳಿಕ ಹುಟ್ಟಿದ್ದು. ಅವರ ಮಗ ಅಂತಾ ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ನನ್ನ ಮೂಲ ಹೆಸರು ನಾಗರಾಜ ಶಿವಪುಟ್ಟಸ್ವಾಮಿ. ಹೀಗಾಗಿ, ಶಿವ ಎಂಬ ಹೆಸರು ನನ್ನ ಅಪ್ಪ ಅಮ್ಮನ ಆಶೀರ್ವಾದ” ಎಂದು ತಿಳಿಸಿದರು.
ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣಗೊಂಡಿದ್ದು, ಪಡ್ಡೆಹುಲಿ, 100 ಹಾಗೂ ಗಾಳಿಪಟ 2 ಸಿನಿಮಾಗಳನ್ನು ನಿರ್ಮಾಣ ಮಾಡಿರೋ ಉಮಾ ರಮೇಶ್ ರೆಡ್ಡಿ ಬಿಗ್ ಬಜೆಟ್ನಲ್ಲಿ ನಿರ್ಮಿಸಿದ್ದಾರೆ. ಸಂಗೀತ ಲೋಕದಲ್ಲಿ ಖ್ಯಾತರಾದ ಅರ್ಜುನ್ ಜನ್ಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಕಥೆ, ಚಿತ್ರಕಥೆ, ಸಂಗೀತದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯಲ್ಲಿ ಆಗಸ್ಟ್ 15ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಅಭಿಮಾನಿಗಳಲ್ಲಿ ದೊಡ್ಡಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.