ಇಂದು ಎಲ್ಲೆಡೆ ಐಪಿಎಲ್ ಫೈನಲ್ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಇದರ ನಡುವೆ 2025ರ ಮಹಿಳಾ ವಿಶ್ವಕಪ್ ಟೂರ್ನಿ ನಡೆಯುವ ದಿನಾಂಕ, ಸ್ಥಳವನ್ನು ಘೋಷಣೆ ಮಾಡಲಾಗಿದೆ. ವಿಶೇಷವೆಂದರೆ, ಬೆಂಗಳೂರಿನಿಂದಲೇ ಮಹಿಳಾ ವಿಶ್ವಕಪ್ ಟೂರ್ನಿ ಆರಂಭವಾಗುವುದರ ಜೊತೆಗೆ ಒಂದು ಸೆಮಿಫೈನಲ್ ಪಂದ್ಯ ಕೂಡ ನಡೆಯಲಿದೆ.2025ರ ಮಹಿಳಾ ವಿಶ್ವಕಪ್ ಟೂರ್ನಿ ಸೆಪ್ಟೆಂಬರ್ 30 ರಿಂದ ನವೆಂಬರ್ 2 ರವರೆಗೆ ನಡೆಯಲಿದೆ. ಭಾರತ ಹಾಗೂ ಶ್ರೀಲಂಕಾ ಸೇರಿ ಒಟ್ಟು 5 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 30ಕ್ಕೆ ಸೆಕೆಂಡ್ ಸೆಮಿಫೈನಲ್ ಪಂದ್ಯ ಪೂರ್ಣಗೊಳ್ಳಲಿದೆ. ಸೆಮಿಫೈನಲ್ ಪಂದ್ಯ ಮುಗಿದ ಮೂರು ದಿನಗಳ ಬಳಿಕ ಅಂದರೆ, ನವೆಂಬರ್ 2 ರಂದು ಫೈನಲ್ ಪಂದ್ಯ ನಡೆಯಲಿದೆ.
ಮಹಿಳಾ ವಿಶ್ವಕಪ್ ಟೂರ್ನಿಯ ಪಂದ್ಯಗಳು ಬೆಂಗಳೂರು, ಗುವಾಹಟಿ, ಇಂದೋರ್ ಹಾಗೂ ವಿಶಾಖಪಟ್ಟಣಂನಲ್ಲಿ ನಡೆಯಲಿವೆ. ಇನ್ನು ಶ್ರೀಲಂಕಾದ ಕೊಲೊಂಬೊದಲ್ಲೂ ಮ್ಯಾಚ್ಗಳು ನಿಗದಿಯಾಗಿವೆ. ಸೆಪ್ಟೆಂಬರ್ 30 ರಂದು ಬೆಂಗಳೂರಿನಲ್ಲಿ ಭಾರತ ತಂಡ ಉದ್ಘಾಟನಾ ಪಂದ್ಯ ಆಡಲಿದೆ. ಅಕ್ಟೋಬರ್ 29 ರಂದು ಮೊದಲ ಸೆಮಿಫೈನಲ್ ಗುವಾಹಟಿ ಅಥವಾ ಕೊಲೊಂಬೊದಲ್ಲಿ ನಡೆಯಲಿದೆ. ಅಕ್ಟೋಬರ್ 30 ರಂದು ಎರಡನೇ ಸೆಮಿಫೈನಲ್ ಬೆಂಗಳೂರು ಅಥವಾ ಕೊಲೊಂಬೊದಲ್ಲಿ ನಡೆಯಲಿದೆ.
2025ರ ಮಹಿಳಾ ವಿಶ್ವಕಪ್ನಲ್ಲಿ ವಿಶ್ವದ 8 ತಂಡಗಳು ಭಾಗಿಯಾಗಲಿವೆ. ಭಾರತದ ಮಹಿಳಾ ತಂಡ ಸೇರಿದಂತೆ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿಶ್ವಕಪ್ನಲ್ಲಿ ಭಾಗಿಯಾಗಲಿವೆ. ಪಾಕಿಸ್ತಾನದ ಮಹಿಳಾ ತಂಡದ ಎಲ್ಲ ಪಂದ್ಯಗಳು ಕೊಲಂಬೊದಲ್ಲಿ ನಡೆಯಲಿವೆ. ಒಂದು ವೇಳೆ ಪಾಕಿಸ್ತಾನ ತಂಡ ಸೆಮಿಫೈನಲ್ ಮತ್ತು ಫೈನಲ್ಗೆ ಪ್ರವೇಶ ಪಡೆದರೆ ಈ ಎರಡು ಮಹತ್ವದ ಪಂದ್ಯಗಳನ್ನು ಕೊಲಂಬೊದಲ್ಲೇ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.