ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಗುರುವಾರ (ಜೂನ್ 12) ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಮೇಘನಿ ನಗರ ಪ್ರದೇಶದಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ವಿಮಾನದಲ್ಲಿ 12 ಮಂದಿ ಸಿಬ್ಬಂದಿ ಸೇರಿದಂತೆ 242 ಜನರಿದ್ದರು.

ಗುರುವಾರ ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸುವವರೆಗೂ, ಡಾ. ಕೋನಿ ವ್ಯಾಸ್ ಅವರ ಕುಟುಂಬವು ಹೊಸ ಜೀವನದ ಕನಸು ಕಾಣುತ್ತಿತ್ತು. ರಾಜಸ್ಥಾನದ ಬನ್ಸ್ವಾರಾದ ಖಾಸಗಿ ಆಸ್ಪತ್ರೆಯಲ್ಲಿ ರೋಗಶಾಸ್ತ್ರಜ್ಞರಾಗಿದ್ದ ಡಾ. ಕೋನಿ, ಲಂಡನ್ ಮೂಲದ ವೈದ್ಯರಾಗಿರುವ ತಮ್ಮ ಪತಿ ಪ್ರತೀಕ್ ಜೋಶಿ ಮತ್ತು ಅವರ ಮೂವರು ಮಕ್ಕಳ ಜೊತೆ ಪಯಣ ಬೆಳೆಸಿದ್ದರು.

ಐದು ವರ್ಷದ ಅವಳಿ ಗಂಡು ಮಕ್ಕಳಾದ ಪ್ರದ್ಯುತ್ ಮತ್ತು ನಕುಲ್ ಹಾಗೂ ಎಂಟು ವರ್ಷದ ಮಗಳು ಮಿರಾಯಾ ಅವರೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಲು ಕಳೆದ ತಿಂಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ವಿಮಾನ ಹಾರುವ ಮೊದಲು, ಕುಟುಂಬವು ಸೆಲ್ಫಿ ಕ್ಲಿಕ್ಕಿಸಿಕೊಂಡಿತು. ವಿಮಾನದ ಒಂದು ಬದಿಯಲ್ಲಿ ಪೋಷಕರು ಮತ್ತು ಇನ್ನೊಂದು ಬದಿಯಲ್ಲಿ ಮಕ್ಕಳು ಕೂತಿದ್ದರು ಅದಾದ ಕೆಲವೇ ನಿಮಿಷಗಳ ನಂತರ, ದುರಂತ ಸಂಭವಿಸಿತು.

ಬನ್ಸ್ವಾರಾದ ಕುಟುಂಬ ಸದಸ್ಯರ ಪ್ರಕಾರ, ಪೆಸಿಫಿಕ್ ಆಸ್ಪತ್ರೆಯಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ ನಂತರ, ಕೋನಿ ಒಂದು ತಿಂಗಳಿನಿಂದ ಪ್ರಯಾಣಕ್ಕೆ ತಯಾರಿ ನಡೆಸುತ್ತಿದ್ದರು. ರೇಡಿಯಾಲಜಿಸ್ಟ್ ಆಗಿರುವ ಜೋಶಿ ಕಳೆದ ನಾಲ್ಕು ವರ್ಷಗಳಿಂದ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಅಲ್ಲಿ ತಮ್ಮ ಕುಟುಂಬದೊಂದಿಗೆ ಹೊಸ ಜೀವನಕ್ಕಾಗಿ ಎದುರು ನೋಡುತ್ತಿದ್ದರು. ಕೋನಿ ಅವರು ಮಕ್ಕಳೊಂದಿಗೆ ಉದಯಪುರದಲ್ಲಿ ವಾಸಿಸುತ್ತಿದ್ದರು, “ಮಕ್ಕಳ ವೀಸಾಗಳು ಇನ್ನೂ ಪ್ರಕ್ರಿಯೆಯಲ್ಲಿದ್ದರಿಂದ ಅವರು ಬನ್ಸ್ವಾರಾದಲ್ಲಿ ವಾಸಿಸುತ್ತಿದ್ದರು” ಎಂದು ಅವರ ಸೋದರಸಂಬಂಧಿ ನಯನ್ ಜೋಶಿ ಹೇಳಿದ್ದಾರೆ.

ಸಂಬಂಧಿಕರ ಪ್ರಕಾರ, ದಂಪತಿಗಳು ಸುಮಾರು ಒಂದು ದಶಕದ ಹಿಂದೆ ವಿವಾಹವಾಗಿದ್ದರು. ತಮ್ಮ ಕುಟುಂಬವನ್ನು ಕರೆದೊಯ್ಯಲು ಜೋಶಿ ಮೂರು ದಿನಗಳ ಹಿಂದೆ ಲಂಡನ್‌ನಿಂದ ಹಿಂತಿರುಗಿದ್ದರು. ಅವರು ಬುಧವಾರ ಲಂಡನ್‌ಗೆ ವಿಮಾನದಲ್ಲಿ ಹೋಗಲು ಅಹಮದಾಬಾದ್‌ಗೆ ತೆರಳಿದ್ದರು,” ಎಂದು ನಯನ್ ಜೋಶಿ ಹೇಳಿದ್ದಾರೆ. ಪ್ರಯಾಣದ ಮೊದಲು ಅವರನ್ನು ಬೀಳ್ಕೊಡಲು ಕೋನಿಯ ಕುಟುಂಬದ ಹಲವಾರು ಸದಸ್ಯರು ಅವರೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ