ಈ ಸಲಹೆಗಳನ್ನು ಅನುಸರಿಸಿ ನೀವು ಸಹ ಸುಲಭವಾಗಿ ಮನೆಯಲ್ಲೇ ಮೆನಿಕ್ಯೂರ್ ಪೆಡಿಕ್ಯೂರ್ ಮಾಡಿಕೊಳ್ಳಬಹುದು. ಅದು ಹೇಗೆ….?
ಸುರಸುಂದರ ಮುಖದ ಜೊತೆ ನಮ್ಮ ಕೈಕಾಲುಗಳೂ ಸುಂದರವಾಗಿದ್ದಾಗ ಮಾತ್ರ ಸೌಂದರ್ಯಕ್ಕೆ ಒಂದು ಪರಿಪೂರ್ಣತೆ ಬರುತ್ತದೆ. ಕೋಮಲ, ನಾಜೂಕಾದ, ಬ್ಯೂಟಿಫುಲ್ ಕೈಕಾಲುಗಳನ್ನು ಹೊಂದಲು ಹೆಂಗಸರು ಅದೆಷ್ಟು ಬ್ಯೂಟಿಪಾರ್ಲರ್ ಗಳ ಮೆಟ್ಟಿಲು ಹತ್ತಿಳಿಯುತ್ತಾರೋ ಏನೋ? ಒಮ್ಮೆ ಕ್ರೀಂ, ಮತ್ತೊಮ್ಮೆ ಪ್ಯಾಕ್, ಒಮ್ಮೆ ಸನ್ ಸ್ಕ್ರೀನ್, ಪಾರ್ಲರ್ ಗಳಿಂದ ಆರೈಕೆ…. ಇತ್ಯಾದಿ ನಡೆಯುತ್ತಲೇ ಇರುತ್ತದೆ. ಆದರೆ ಪ್ರತಿ ಸಲ ಪಾರ್ಲರ್ ಗಳನ್ನು ಎಡತಾಕುತ್ತಾ, ಮೆನಿಕ್ಯೂರ್ ಪೆಡಿಕ್ಯೂರ್ ಗಳಿಗಾಗಿ ಓಡಾಡಿದರೆ ಖರ್ಚು ದುಬಾರಿ ಆದೀತು. ಇದರಿಂದ ಹಣ, ಸಮಯ ಎರಡೂ ದಂಡ. ಹೀಗಾಗಿ ಇವೆರಡನ್ನೂ ಮನೆಯಲ್ಲೇ ಮಾಡಿಕೊಳ್ಳುವುದು ಲೇಸು.
ಮೆನಿಕ್ಯೂರ್ ಏಕೆ ಅಗತ್ಯ?
ಸ್ವಚ್ಛತೆ ಶುಭ್ರತೆಗಾಗಿ : ಯಾವುದೇ ಕೆಲಸ ಮಾಡಲಿಕ್ಕೂ ಕೈಗಳ ನೆರವಿಲ್ಲದೆ ಆಗುವುದಿಲ್ಲ. ಹೀಗಾಗಿ ಬೇಗ ಅದಕ್ಕೆ ಧೂಳು, ಕೊಳೆ ಸೇರಿಕೊಳ್ಳುತ್ತದೆ. ಹೀಗಾಗಿ ಸೋಪು ಬಳಸಿ ಕೈ ತೊಳೆಯಲು ಯತ್ನಿಸುತ್ತೇವೆ. ಆದರೆ ಅದು ಉಗುರು ಅಡಿಯ ಕೊಳಕನ್ನು ನಿವಾರಿಸಲಾಗದು. ದಿನ ಕಳೆದಂತೆ ಈ ಜಾಗದಲ್ಲಿ ಕೊಳಕು ಜಮೆಗೊಳ್ಳುತ್ತಾ ಹೋಗುತ್ತದೆ, ಮುಂದೆ ಸೋಂಕಿಗೂ ತಿರುಗಬಹುದು. ನಿಯಮಿತವಾಗಿ ಮೆನಿಕ್ಯೂರ್ ಮಾಡಿಸುವುದರಿಂದ ಅದು ಉಗುರಿನ ಪ್ರದೇಶದ ಕೊಳಕು ನಿವಾರಿಸಿ, ಕೀಟಾಣು ದೂರಗೊಳಿಸುತ್ತದೆ.
ಕೈಗಳು ಅತಿ ಮೃದುವಾಗಲು : ಮೆನಿಕ್ಯೂರ್ ನಂತರ ಕೈಗಳು ಬಲು ಕೋಮಲ, ಮೃದು ಆಗುತ್ತವೆ. ಕೈಗಳ ಬಣ್ಣ ಎಷ್ಟೋ ತೇಲುತ್ತದೆ, ತಿಳಿಯಾಗುತ್ತದೆ. ಇವು ನಮ್ಮ ಕೈಗಳೇ ಎಂಬಷ್ಟು ಸುಂದರವಾಗುತ್ತವೆ. ಈ ಮೂಲಕ ಮಾಡುವ ಮಸಾಜ್ ನಿಂದ ರಕ್ತಸಂಚಾರ ಸುಧಾರಿಸುತ್ತದೆ. ಇದರಲ್ಲಿ ಸ್ಕ್ರಬಿಂಗ್, ಎಕ್ಸ್ ಫಾಲಿಯೇಶನ್ ಸಹ ಇರುತ್ತದೆ. ಒರಟು ಕೈಗಳು ಸರಿಹೋಗಲು ಇದು ಬೆಸ್ಟ್ ವಿಧಾನ.
ಕ್ಯುಟಿಕಲ್ಸ್ ಗೂ ಪೋಷಣೆ : ಉಗುರಿನ ಅಂಚಲ್ಲಿ ಜಮೆಗೊಳ್ಳುವ ಡೆಡ್ ಸ್ಕಿನ್ ಕ್ಯುಟಿಕಲ್ಸ್ ಎನಿಸಿದೆ. ಇದು ಉಗುರಿನ ಸುತ್ತಲ ಚರ್ಮಕ್ಕೆ ಕೀಟಾಣು ನಿರೋಧಕವಾಗಿ ಕೆಲಸ ಮಾಡಲು ದಪ್ಪ ಪದರವಾಗಿ ನಿಲ್ಲುತ್ತದೆ. ನೀವು ನಿಯಮಿತವಾಗಿ ಮನೆಯಲ್ಲಿ ಮೆನಿಕ್ಯೂರ್ ಮಾಡುತ್ತಿದ್ದರೆ, ಕ್ಯುಟಿಕಲ್ಸ್ ಗೆ ಆಟೋಮೆಟಿಕಲಿ ಉತ್ತಮ ಪೋಷಣೆ, ಆಕಾರ ದೊರಕುತ್ತದೆ.
ರಿಲ್ಯಾಕ್ಸೇಶನ್ ಗಾಗಿ ಅಗತ್ಯ : ನೀವು ರಿಲ್ಯಾಕ್ಸ್ ಆಗಲು ನಿಯಮಿತ ಮಸಾಜ್ ಬಹಳ ಅವಶ್ಯಕ. ಅದರಲ್ಲೂ ಇಂದಿನ ಟೆನ್ಶನ್ ಭರಿತ ಜೀವನಶೈಲಿಗೆ ಇದು ಬೇಕೇಬೇಕು. ಇದರಿಂದ ಇಡೀ ದೇಹಕ್ಕೆ ಆರಾಮ ಸಿಗುತ್ತದೆ.
ರಕ್ತ ಸಂಚಾರಕ್ಕೂ ಪೂರಕ : 15-20 ನಿಮಿಷಗಳ ಮಸಾಜ್ ಮೆನಿಕ್ಯೂರ್ ನ ಒಂದು ಅವಶ್ಯಕ ಅಂಶವಾಗಿದೆ. ಇದು ನಮ್ಮ ಕೈಗಳಲ್ಲಿ ರಕ್ತ ಸಂಚಾರ ಉತ್ತೇಜಿಸಿ ಬೆರಳು, ಮಣಿಕಟ್ಟು ಚುರುಕಾಗಿ ಕೆಲಸ ಮಾಡಲು ಸಹಕರಿಸುತ್ತದೆ.
ಮೆನಿಕ್ಯೂರ್ ಗಾಗಿ ಅಗತ್ಯ ಪರಿಕರ
ನೇಲ್ ಪಾಲಿಶ್ ರಿಮೂವರ್, ನೇಲ್ ಫೈಬರ್ಕಲರ್, ಕಾಟನ್ ಪ್ಯಾಡ್ಸ್, ಕ್ಯುಟಿಕಲ್ ಕ್ರೀಂ ಪುಶರ್, ನೇಲ್ ಪಾಲಿಶ್, ಕೈಗಳನ್ನು ಬಿಸಿ ನೀರಲ್ಲಿ ಅದ್ದಿಡಲು ಒಂದು ದೊಡ್ಡ ಬಟ್ಟಲು, ಶ್ಯಾಂಪೂ ಯಾ ಬಾಡಿವಾಶ್, ನಿಂಬೆರಸ, ಜೇನು, ಸಕ್ಕರೆ, ಆಲಿವ್ ಆಯಿಲ್ ಯಾ ಬಾದಾಮಿ ಎಣ್ಣೆ.
ಮೆನಿಕ್ಯೂರ್ ನ ವಿಧಾನ
ನೇಲ್ ಪೇಂಟ್ ತೊಲಗಿಸಿ ಉಗುರನ್ನು ಟ್ರಿಂ ಮಾಡಿ : ಎಲ್ಲಕ್ಕೂ ವೊದಲು ಉತ್ತಮ ಮೆಡಿಕೇಟೆಡ್ ಸೋಪಿನಿಂದ ನಿಮ್ಮ ಕೈಗಳನ್ನು ತೊಳೆದು ಸ್ವಚ್ಛಗೊಳಿಸಿ. ಟವೆಲ್ ನಿಂದ ಒರೆಸಿ, ಉತ್ತಮ ನೇಲ್ ಪೇಂಟ್ ರಿಮೂವರ್ ನಿಂದ (ಕಾಟನ್ ಬಳಸಿ) ಹಳೆಯ ಉಗುರು ಬಣ್ಣವನ್ನು ತೆಗೆದುಬಿಡಿ. ನೇಲ್ ಫೈಲರ್ ನಿಂದ ಉಗುರ ಅಂಚನ್ನು ಪೈಲ್ ಮಾಡುತ್ತಾ, ಅದನ್ನು ಟ್ರಿಂ ಮಾಡಿ. ಬಯಸಿದರೆ ನೀವು ನಿಮ್ಮ ಉಗುರನ್ನು ಗೋಲ, ಚೌಕ, ಆಯತ, ಅಂಡಾಕಾರದಲ್ಲಿ ಇಟ್ಟುಕೊಳ್ಳಬಹುದು.
ಕೈಗಳನ್ನು ಬಿಸಿ ನೀರಲ್ಲಿ ಅದ್ದಿಡುವುದು : ಒಂದು ಬಟ್ಟಲಲ್ಲಿ ತುಸು ಬಿಸಿ ನೀರು ತೆಗೆದುಕೊಳ್ಳಿ. ಇದಕ್ಕೆ ತುಸು ಶ್ಯಾಂಪೂ ಬೆರೆಸಿ ಕದಡಿದ ನಂತರ, ಎರಡೂ ಕೈಗಳನ್ನು 5-6 ನಿಮಿಷ ಅದ್ದಿಡಿ. ಇನ್ನೊಮ್ಮೆ ಟ್ರೈ ಮಾಡುವಾಗ 2-3 ಚಮಚ ಜೇನು, 1 ಹೋಳು ನಿಂಬೆರಸ ಹಿಂಡಿಕೊಳ್ಳಿ. ನಿಂಬೆ ಒಂದು ಉತ್ತಮ ಡೀಟ್ಯಾನಿಂಗ್ಲೈಟ್ ನಿಂಗ್ ಏಜೆಂಟ್ ಆಗಿ ನೆರವಾಗುತ್ತದೆ. ಜೇನು ಉತ್ತಮ ಮಾಯಿಶ್ಚರೈಸರ್ ಆಗಿದೆ. ಹೀಗೆ ಕೈ ಇರಿಸಿಕೊಂಡು ಅದನ್ನು ಸಾಫ್ಟ್ ಆಗಿಸಿ. ಒಂದು ಸಾಫ್ಟ್ ಬ್ರಶ್ ನಿಂದ ಉಗುರು, ಕ್ಯುಟಿಕಲ್ಸ್ ನ್ನು ಶುಚಿಗೊಳಿಸಿ. ನಂತರ ಫೈಲರ್ ನ ಹ್ಯಾಂಡ್ ನೆರವಿನಿಂದ ಕ್ಯುಟಿಕಲ್ಸ್ ನ್ನು ಪ್ರೆಸ್ ಮಾಡಿ ಒಳಗೆ ಪುಶ್ ಮಾಡಿ.
ಸ್ಕ್ರಬ್ ಮಾಡಿ : ಇದಕ್ಕಾಗಿ ನೀವು ಹಲವು ಬಗೆಯ ಸ್ಕ್ರಬ್ ರೆಡಿ ಮಾಡಿಕೊಳ್ಳಬಹುದು. ಎಲ್ಲಕ್ಕೂ ಸರಳ ವಿಧಾನ ಎಂದರೆ ನಿಂಬೆ, ಸಕ್ಕರೆ, ಆಲಿವ್ ಎಣ್ಣೆ ಬೆರೆಸಿ ಸಿದ್ಧಪಡಿಸುವುದು. ಇದು ಎಲ್ಲಾ ಬಗೆಯ ಚರ್ಮಕ್ಕೂ ಅನ್ವಯಿಸುತ್ತದೆ. ಒಂದು ಚಿಕ್ಕ ಬಟ್ಟಲಿಗೆ 2 ಚಮಚ ಸಕ್ಕರೆ, ಅರ್ಧ ಚಮಚ ಆಲಿವ್ ಎಣ್ಣೆ, 1 ಚಮಚ ನಿಂಬೆರಸ ಬೆರೆಸಿಕೊಳ್ಳಿ. ಆಲಿವ್ ಎಣ್ಣೆ ನಿಮ್ಮ ಕೈಗಳ ಮೃದುತ್ವ ಸುಧಾರಿಸುತ್ತದೆ. ಇದನ್ನು ನಿಮ್ಮ ಕೈಗಳಿಗೆ ಸವರಿಕೊಂಡು ನಿಧಾನ ಉಜ್ಜಬೇಕು. ನಂತರ ಬಿಸಿ ನೀರಲ್ಲಿ 5-6 ನಿಮಿಷ ಅದ್ದಿರಿಸಿ, ಆಮೇಲೆ ಟವೆಲ್ ನಿಂದ ಒರೆಸಿಕೊಳ್ಳಿ.
ಕ್ಲಿಯರ್ ನೇಲ್ ಪಾಲಿಶ್ ಹಚ್ಚಿರಿ : ನಂತರ ನಿಮ್ಮ ಉಗುರಿಗೆ ನೇಲ್ ಪಾಲಿಶ್ ಹಚ್ಚಿರಿ. ಮೊದಲು ಕ್ಲಿಯರ್ ನೇಲ್ ಪಾಲಿಶ್ ನಿಂದ ಬೇಸ್ ಕೋಟ್ ಸಿದ್ಧಪಡಿಸಿ. ಇದಕ್ಕಾಗಿ ನೀವು ಲೈಟ್ ನೇಲ್ ಪಾಲಿಶ್ ಬಳಸಬಹುದು. ಇದರಿಂದ ನಿಮ್ಮ ನೇಲ್ ಕಲರ್ ಪಾಪ್ ಆಗುತ್ತದೆ. ಬೇಸ್ ಕೋಟ್ ನಿಂದ ನೇಲ್ ಪಾಲಿಶ್ ದೀರ್ಘ ಬಾಳಿಕೆ ಬರುತ್ತದೆ.
ಟಾಪ್ ಕೋಟ್ ಹಚ್ಚಿರಿ : ಬೇಸ್ ಒಣಗಿದಾಗ, ನಿಮ್ಮ ನೆಚ್ಚಿನ ನೇಲ್ ಪಾಲಿಶ್ ನ ಒಂದು ತೆಳು ಕೋಟ್ ಅದರ ಮೇಲೆ ಹಚ್ಚಿರಿ. ಇದು ಚೆನ್ನಾಗಿ ಒಣಗಲು ಬಿಡಿ. ಇದರ ಮೇಲೆ ಕ್ಲಿಯರ್ ಪಾಲಿಶ್ ನ ಮತ್ತೊಂದು ಕೋಟ್ ಹಚ್ಚಿರಿ.
ಪೆಡಿಕ್ಯೂರ್ ನಾವು ದಿನವಿಡೀ ಓಡಾಡುತ್ತಾ ಹೊರಗಿನ ಕೆಲಸ ಮಾಡುತ್ತಿರುತ್ತೇವೆ. ಈ ಎಲ್ಲಾ ಹೆಚ್ಚಿನ ಒತ್ತಡದ ಓಡಾಟ ಕಾಲಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಹೀಗಾಗಿ ಕಾಲಿನ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು. ಶುಭ್ರ ಸ್ವಚ್ಛ, ಕೋಮಲ ಪಾದಗಳು ದೇಹದ ಸೌಂದರ್ಯ ಹೆಚ್ಚಿಸುತ್ತವೆ. ಇದಕ್ಕೆ ಬೇಕಾದ ವಿಧಾನವೇ ಪೆಡಿಕ್ಯೂರ್. ಇದರಿಂದ ಕೊಳೆ ನಿವಾರಣೆ ಆಗುವುದಲ್ಲದೆ, ಪಾದಗಳ ಆಕರ್ಷಣೆಯೂ ಹೆಚ್ಚುತ್ತದೆ.
ಪೆಡಿಕ್ಯೂರ್ನ ಲಾಭಗಳು
ಇದು ಒಂದು ಎಫಿಶಿಯೆಂಟ್ ಎಕ್ಸ್ ಫಾಲಿಯೇಟ್ ಆಗಿ ಕೆಲಸ ಮಾಡುತ್ತದೆ. ಇದರಿಂದ ಪಾದಗಳ, ಅದರಲ್ಲೂ ಹಿಮ್ಮಡಿಯ ಡೆಡ್ ಸ್ಕಿನ್ ಸುಲಭವಾಗಿ ತೊಲಗಿ, ಉಗುರಿನ ಪಾಲಿಶಿಂಗ್ ಕೂಡ ಮಾಡುತ್ತದೆ. ಹಿಮ್ಮಡಿಯಲ್ಲಿನ ಒಡೆತ ಮತ್ತು ಡ್ರೈ ಸ್ಕಿನ್ ಗೂ ಈ ಆರೈಕೆ ಬಲು ಉತ್ತಮ. ಇದು ಹಿಮ್ಮಡಿಯ ಒಡೆತ ಸರಿಪಡಿಸಿ, ಡೆಡ್ ಸ್ಕಿನ್ ತೊಲಗಿಸಿ ಹೊಸ ಚರ್ಮ ಪುನರುಜ್ಜೀವಗೊಳ್ಳಲು ಪೂರಕ. ಇದರಲ್ಲಿ ಮಸಾಜ್ ಸಹ ಒಂದು ಮುಖ್ಯ ಹಂತ. ಮಸಾಜ್ ನಿಂದ ಪಾದದ ಮುಂಭಾಗ, ಹಿಮ್ಮಡಿಗೆ ಹೆಚ್ಚಿನ ಲಾಭವಿದೆ. ಇದರ ಫುಟ್ ಮಸಾಜ್ ನಿಂದ ಪಾದದ ರಕ್ತ ಸಂಚಾರ ಸುಗಮವಾಗುತ್ತದೆ.
ಮನೆಯಲ್ಲಿ ಪೆಡಿಕ್ಯೂರ್ ಮಾಡಬೇಕೇ?
ಇದಾಕ್ಕಗಿ ಪ್ರತಿ ಸಲ ಪಾರ್ಲರ್ ಗೆ ಹೋಗಲೇಬೇಕು ಎಂದೇನಿಲ್ಲ. ಕಡಿಮೆ ಹಣ ಮತ್ತು ಸಮಯ ಬಳಸಿ ಮನೆಯಲ್ಲೇ ಮಾಡಬಹುದು.
ಬೇಕಾಗುವ ಸಾಮಗ್ರಿ : ಒಂದು ಟಬ್ ಬಿಸಿ ನೀರು, ಫುಟ್ ಸ್ಕ್ರಬ್, ನೇಲ್ ಕ್ಲಿಪರ್, ಕ್ಯುಟಿಕಲ್ ಪುಶರ್, ನೇಲ್ ಫೈಲರ್, ಪ್ಯೂಮಿಕ್ ಸ್ಟೋನ್/ ಫುಟ್ ಫೈಲ್, ನೇಲ್ ಸ್ಕ್ರಬರ್, ನೇಲ್ ಪಾಲಿಶ್ ರಿಮೂವರ್, ಕ್ಯುಟಿಕ್ ಕ್ರೀಂ, ಒಂದು ಟವೆಲ್, ಮಾಯಿಶ್ಚರೈಸರ್, ಕಾಟನ್ ಪ್ಯಾಡ್ಸ್, ಜೇನು, ಮಾಯಿಶ್ಚರೈಸಿಂಗ್ ಕ್ರೀಂ, ನಿಂಬೆ ಹೋಳು.
ಉಗುರು ಕತ್ತರಿಸಿ ಟ್ರಿಂ ಫೈಲ್ ಮಾಡಿ : ಉಗುರನ್ನು ಸ್ವಚ್ಛಗೊಳಿಸಿದ ನಂತರ, ನೇಲ್ ಕಟರ್ ನಿಂದ ನೀಟಾಗಿ ಫೈಲ್ ಮಾಡಿ. ಹಾಗೆಯೇ ಅಂಚು ಸವರುತ್ತಾ ಟ್ರಿಂ ಮಾಡಿ. ನಿಮಗೆ ಬೇಕಾದ ಚೌಕ, ಆಯತ, ಅಂಡಾಕಾರದಲ್ಲಿ ಉಗುರನ್ನು ಸರಿಪಡಿಸಿ.
ಪಾದವನ್ನು ಬಿಸಿ ನೀರಲ್ಲಿ ಅದ್ದಿಡಿ : ಇದಾದ ಮೇಲೆ ಪಾದಗಳಿಗೆ ಆರಾಮ ನೀಡಲು ಅದನ್ನು ಹಿತಕರ ಬಿಸಿ ನೀರಲ್ಲಿ ಅದ್ದಿಡಬೇಕು. ಇದಕ್ಕಾಗಿ ಒಂದು ಟಬ್ ಗೆ ಬಿಸಿ ನೀರು ತುಂಬಿಸಿ ತುಸು ಕಲ್ಲುಪ್ಪು, ಮೈಲ್ಡ್ ಕ್ಲೆನ್ಸರ್ಬೆರೆಸಿರಿ. ಇದು ಪಾದಕ್ಕೆ ಧಾರಾಳ ಆರಾಮ ನೀಡುತ್ತದೆ. ಇದರಿಂದ ಕಾಲುಗಳ ಊತ, ಉರಿ, ಪಾದದ ನೋವು ಎಷ್ಟೋ ತಗ್ಗುತ್ತದೆ. ಇದಕ್ಕೆ ನೀವು ನಿಂಬೆರಸ, ಎಸೆನ್ಶಿಯಲ್ ಆಯಿಲ್ ಸಹ ಬೆರೆಸಿಕೊಳ್ಳಬಹುದು. ಇವೆರಡೂ ಆ್ಯಂಟಿ ಬ್ಯಾಕ್ಟೀರಿಯಲ್ ಆ್ಯಂಟಿ ಫಂಗಲ್ ಗುಣಗಳಿಂದ ಸಮೃದ್ಧ, ಹೀಗಾಗಿ ನಿಮಗೆ ಯಾವುದೇ ಸೋಂಕಿನ ಭಯ ಬೇಡ. ಇದರಿಂದ ಕಾಲಿಗೆ ಆರಾಮ, ಜೊತೆಗೆ ರಕ್ತ ಸಂಚಾರ ಹೆಚ್ಚುತ್ತದೆ. ಹೀಗೆ ಬಿಸಿ ನೀರಲ್ಲಿ ನಿಮ್ಮ ಪಾದಗಳನ್ನು ಕನಿಷ್ಠ 15 ನಿಮಿಷ ಅದ್ದಿಡಬೇಕು.
ಪಾದಗಳ ಸ್ಕ್ರಬ್ ಗಾಗಿ : ಪಾದಗಳನ್ನು ನೀಟಾಗಿ ಒರೆಸಿಕೊಂಡ ನಂತರ, ಉಗುರಿನ ಮೇಲೆ ಕ್ಯುಟಿಕಲ್ ಕ್ರೀಂ ಹಚ್ಚಿರಿ, ನಿಧಾನ ಮಸಾಜ್ ಮಾಡಿರಿ. ಈ ಭಾಗದ ಡೆಡ್ ಸ್ಕಿನ್ ಮೃದುವಾದಾಗ, ಕ್ಯುಟಿಕಲ್ ಪುಶರ್ ನ ನೆರವಿನಿಂದ ಕ್ಯುಟಿಕಲ್ಸ್ ಶುಚಿಗೊಳಿಸಿ. ಈಗ ಪಾದಗಳ ಡೆಡ್ ಸ್ಕಿನ್ ತೊಲಗಿಸಲು, ಫುಟ್ ಸ್ಕ್ರಬ್ ಬಳಸಿರಿ. ಇದನ್ನು ನಿಮ್ಮ ಪಾದಗಳ ಎಲ್ಲಾ ಭಾಗ, ಬೆರಳೂ ಸೇರಿಸಿ ನೀಟಾಗಿ ಸವರಿ, 3-4 ನಿಮಿಷ ಸ್ಕ್ರಬ್ ಮಾಡಬೇಕು.
ಪಾದಗಳನ್ನು ಮಾಯಿಶ್ಚರೈಸ್ ಗೊಳಿಸಿ : ಈಗ ನಿಮ್ಮ ಪಾದಗಳು ನೀಟಾಗುತ್ತವೆ. ಆದರೆ ಇದನ್ನು ಮಾಯಿಶ್ಚರೈಸ್ ಮಾಡುವುದು ಅತಿ ಅಗತ್ಯ. ಮಾಯಿಶ್ಚರೈಸರ್ ಹಚ್ಚು ಮೊದಲು ಪಾದದ ಪ್ರತಿಯೊಂದು ಭಾಗವನ್ನೂ 10 ನಿಮಿಷ ಮಸಾಜ್ ಮಾಡಿ. ಮಾಯಿಶ್ಚರೈಸರ್ ಇಲ್ಲದಿದ್ದರೆ ಆಗ ಆಲಿವೆ ಆಯಿಲ್ ಬಳಸಿಕೊಳ್ಳಿ.
– ಪ್ರತಿನಿಧಿ