ಸಾಮಗ್ರಿ : ಒಂದಿಷ್ಟು ಉದ್ದಿನ ಬೇಳೆಯ ಸಂಡಿಗೆ, ಆಲೂ, ಬದನೆ, ಮೂಲಂಗಿ, ಹಾಗಲ, ಬೀನ್ಸ್, ಕ್ಯಾರೆಟ್, ಬಾಳೆ, ನುಗ್ಗೇಕಾಯಿ (ಎಲ್ಲಾ ಹೆಚ್ಚಿದ್ದು ತಲಾ ಅರ್ಧರ್ಧ ಕಪ್), ಒಗ್ಗರಣೆಗೆ ಎಣ್ಣೆ, ಕ/ಉ ಬೇಳೆ, ಇಂಗು, ಕರಿಬೇವು, ತುಂಡರಿಸಿದ ಒಣಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಪ.ಬಂಗಾಳದ ಪಂಚರತ್ನ ಮಸಾಲ (ರೆಡಿಮೇಡ್ ಲಭ್ಯ), ಶುಂಠಿ ಪೇಸ್ಟ್, ತೆಂಗಿನ ಪೇಸ್ಟ್, ಪಲಾವ್ ಎಲೆ, 2 ಚಮಚ ಸಕ್ಕರೆ, ಕದಡಿದ ಕಾದಾರಿದ ಹಾಲು, 2 ಚಿಟಕಿ ಅರಿಶಿನ.
ವಿಧಾನ : ಮೊದಲು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಅದರಲ್ಲಿ ಉದ್ದಿನ ಸಂಡಿಗೆ ಕರಿದು ತೆಗೆದಿಡಿ. ನಂತರ ಇದರಲ್ಲಿ ಬಿಲ್ಲೆಗಳಾಗಿಸಿದ ಹಾಗಲ, ನಂತರ ಬಾಳೇಕಾಯಿ ಹೋಳು ಹಾಕಿ ಕರಿದು ತೆಗೆಯಿರಿ. ಆಮೇಲೆ ಇಂಗು, ಪಲಾವ್ ಎಲೆ, ಕರಿಬೇವಿನ ಸಮೇತ ಒಗ್ಗರಣೆ ಕೊಟ್ಟು ಒಂದಂದಾಗಿ ಎಲ್ಲಾ ತರಕಾರಿ ಹಾಕಿ ಬಾಡಿಸಿಕೊಳ್ಳಿ. ತರಕಾರಿ ಸುಮಾರು ಬೆಂದಿದೆ ಎನಿಸಿದಾಗ, ಉಪ್ಪು, ಖಾರ, ಅರಿಶಿನ, ಮಸಾಲೆಗಳನ್ನು ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ನಂತರ ಇದಕ್ಕೆ ಹಾಗಲ, ಬಾಳೇಕಾಯಿ ಹೋಳು ಸೇರಿಸಿ ಬಾಡಿಸಿ. ಆಮೇಲೆ ಸಕ್ಕರೆ, ತೆಂಗಿನ ಪೇಸ್ಟ್, ಶುಂಠಿ ಪೇಸ್ಟ್ ಎಲ್ಲಾ ಬೆರೆಸಿ ಮಂದ ಉರಿಯಲ್ಲಿ ಗ್ರೇವಿ ಕುದಿಸಿರಿ. ಗ್ರೇವಿ ಕುದ್ದು ಸಾಕಷ್ಟು ಗಟ್ಟಿಯಾದಾಗ ಮೇಲೆ ಸಂಡಿಗೆ ಉದುರಿಸಿ, ಬಿಸಿ ಬಿಸಿ ಅನ್ನದೊಂದಿಗೆ ಸವಿಯಲು ಕೊಡಿ.
ತೊಂಡೆಕಾಯಿ ಸ್ಪೆಷಲ್
ಸಾಮಗ್ರಿ : 500 ಗ್ರಾಂ ತಾಜಾ ತೊಂಡೆಕಾಯಿ, 100 ಗ್ರಾಂ ಪನೀರ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪಂಚರತ್ನ ಮಸಾಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಒಣ ಮೆಣಸು, 2 ಸೌಟು ಎಣ್ಣೆ.
ವಿಧಾನ : ತೊಂಡೆಕಾಯಿ ಇಡಿಯಾಗಿರಿಸಿಕೊಂಡು, ಅದರ ತಿರುಳು ತೆಗೆದು ಟೊಳ್ಳಾಗಿಸಿ, ಸೀಳಬಾರದು. ಒಂದು ಬಾಣಲೆಯಲ್ಲಿ ಮೊದಲು ತುಸು ಎಣ್ಣೆ ಬಿಸಿ ಮಾಡಿ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಅರಿಶಿನ, ಮಸಾಲೆ, ಸಕ್ಕರೆ ಎಲ್ಲಾ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಇದಕ್ಕೆ ತೊಂಡೆಕಾಯಿ ತಿರುಳು, ಮಸೆದ ಪನೀರ್ ಸಹ ಹಾಕಿ ಕೈಯಾಡಿಸಿ. 2 ನಿಮಿಷ ಬಿಟ್ಟು ಇದನ್ನು ಕೆಳಗಿಳಿಸಿ, ತಣಿದ ನಂತರ ಪ್ರತಿ ಟೊಳ್ಳಾದ ಕಾಯಿಗೂ ತುಂಬಿಸಿ. ಉಳಿದ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಇವನ್ನು ಕರಿಯಿರಿ. ನಂತರ ಅದೇ ಬಾಣಲೆಯಲ್ಲಿ ತುಸು ಎಣ್ಣೆ ಉಳಿಸಿಕೊಂಡು ಉಳಿದ ಮಸಾಲೆ, ತುಂಡರಿಸಿದ ಒಣ ಮೆಣಸು, ಉಪ್ಪು, ಸಕ್ಕರೆ, ಮಸೆದ ಪನೀರ್ ಹಾಕಿ ಬಾಡಿಸಿ. ಅದಕ್ಕೆ ಕರಿದ ತೊಂಡೆ ಸೇರಿಸಿ, ಬಾಡಿಸಿ ಕೆಳಗಿಳಿಸಿ. ಇದೀಗ ತೊಂಡೆಕಾಯಿ ಸ್ಪೆಷಲ್ ರೆಡಿ! ಚಪಾತಿ, ದೋಸೆ, ಅನ್ನದ ಜೊತೆ ಸವಿಯಲು ಕೊಡಿ.
ಬಂಗಾಳದ ಪತ್ರೋಡೆ
ಮೂಲ ಸಾಮಗ್ರಿ : 3 ಕಪ್ ಕಡಲೆಹಿಟ್ಟು, 10-12 ಅಗಲದ ಮೂಲಂಗಿ/ಪಾಲಕ್ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಓಮ, ಕರಿಯಲು ಎಣ್ಣೆ.
ಹೂರಣದ ಸಾಮಗ್ರಿ : ಬೇಯಿಸಿ ಮಸೆದ ಕಾಬೂಲು ಕಡಲೆಕಾಳು, ಬಟಾಣಿ, ತುರಿದ ಕ್ಯಾರೆಟ್ (ತಲಾ ಅರ್ಧ ಕಪ್), ಹೆಚ್ಚಿದ 2-3 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಣಿಸೆ ರಸ.
ವಿಧಾನ : ಹೂರಣದ ಎಲ್ಲಾ ಸಾಮಗ್ರಿ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಕಡಲೆ ಹಿಟ್ಟಿಗೆ ಉಪ್ಪು ಖಾರದ ಜೊತೆ ಉಳಿದೆಲ್ಲ ಮಸಾಲೆ ಸೇರಿಸಿ ಬೋಂಡ ಮಿಶ್ರಣದಂತೆ ಕಲಸಿಡಿ. ಮೂಲಂಗಿ/ಪಾಲಕ್ ಎಲೆಗಳನ್ನು ಶುಚಿಗೊಳಿಸಿ, ಅದರ ಮೇಲೆ ಒಂದು ಪದರ ಈ ಮಿಶ್ರಣ ಸರಬೇಕು. ಅದರ ಮೇಲೆ 1-2 ಚಮಚ ಹೂರಣ ಹರಡಿ, ನೀಟಾಗಿ ಎಲ್ಲಾ ಬದಿಯಿಂದಲೂ ಎಲೆ ಮಡಿಚಿ, ಪತ್ರೋಡೆ ತರಹ ಮಾಡಿ, ಬಿಟ್ಟುಕೊಳ್ಳದಂತೆ ಟೂತ್ ಪಿಕ್ ಸಿಗಿಸಿಡಿ. ನಂತರ ಇದನ್ನು ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ ಬೇಯಿಸಿ. ನಂತರ ಇದೇ ಬೋಂಡಾ ಮಿಶ್ರಣದಲ್ಲಿ ಇದನ್ನು ಅದ್ದಿಕೊಂಡು, ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದು ತೆಗೆಯಿರಿ. ಸಂಜೆ ಬಿಸಿ ಬಿಸಿ ಚಹಾ ಜೊತೆ ಸವಿಯಲು ಕೊಡಿ.
ಬದನೆ ಬಜ್ಜಿ
ಸಾಮಗ್ರಿ : ದೊಡ್ಡ ಗಾತ್ರದ ಮಂಗಳೂರು ಬದನೆ 2, ಅರ್ಧರ್ಧ ಕಪ್ ಕಡಲೆಹಿಟ್ಟು, ರವೆ, ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸಿನ ಪೇಸ್ಟ್, ಪಂಚರತ್ನ ಮಸಾಲೆ, ಅರಿಶಿನ, ಓಮ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಯಲು ಎಣ್ಣೆ.
ವಿಧಾನ : ಮೊದಲು ತುಸು ಹುರಿದ ರವೆಗೆ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು ಬೋಂಡಾ ಮಿಶ್ರಣದಂತೆ ಕಲಸಿಡಿ, ತುಂಬಾ ತೆಳು ಆಗಬಾರದು. ಇದರಲ್ಲಿ ಬಿಲ್ಲೆಗಳಾಗಿ ಕತ್ತರಿಸಿದ ಬದನೆ ಅದ್ದಿಕೊಂಡು, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಸಂಜೆಯ ಬಿಸಿ ಬಿಸಿ ಕಾಫಿ-ಟೀ ಜೊತೆ ಇದನ್ನು ಬಿಸಿಯಾಗಿ ಸವಿಯಲು ಕೊಡಿ.
ಸ್ಟಫ್ಡ್ ಹೀರೇಕಾಯಿ ಸ್ಪೆಷಲ್
ಮೂಲ ಸಾಮಗ್ರಿ : 250 ಗ್ರಾಂ ತಾಜಾ ತುಪ್ಪದ ಹೀರೇಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಧನಿಯಾಪುಡಿ, ಸೋಂಪು/ಜೀರಿಗೆ ಪುಡಿ, ಓಮ, ಅಮ್ಚೂರ್ ಪುಡಿ, 1 ಸೌಟು ಎಣ್ಣೆ.
ಒಗ್ಗರಣೆ ಸಾಮಗ್ರಿ : 4 ಲವಂಗ, 4 ಕಾಳು ಮೆಣಸು, 1 ಸಣ್ಣ ತುಂಡು ಚಕ್ಕೆ, 1-2 ಏಲಕ್ಕಿ, 1 ಪಲಾವ್ ಎಲೆ, ತುಸು ಎಣ್ಣೆ, ಸಾಸುವೆ, ಜೀರಿಗೆ.
ವಿಧಾನ : ಮೊದಲು ಹೀರೇಕಾಯಿ ಸಿಪ್ಪೆ ಹೆರೆದು ಶುಚಿಗೊಳಿಸಿ, ತುಸು ಉದ್ದದ ಹೋಳಾಗುವಂತೆ ಮಾಡಿ, ತುಂಡರಿಸಬಾರದು. ಇದರ ಮಧ್ಯ ಭಾಗ ತೆಗೆದು ಟೊಳ್ಳಾಗಿಸಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಅದಕ್ಕೆ ಮೂಲ ಸಾಮಗ್ರಿ ಬೆರೆಸಿಕೊಂಡು, ಕಿವುಚಿದ ತಿರುಳಿನ ಭಾಗ ಸೇರಿಸಿ ಬಾಡಿಸಿ. ಇದನ್ನು ಕೆಳಗಿಳಿಸಿ, ಆರಿದ ನಂತರ ಎಲ್ಲಾ ಕಾಯಿಗಳಿಗೂ ತುಂಬಿಸಿ. ನಂತರ ಅದೇ ಬಾಣಲೆಯಲ್ಲಿ ಮತ್ತೆ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಅದರಲ್ಲಿ ಈ ಕಾಯಿಗಳನ್ನು ಶ್ಯಾಲೋ ಫ್ರೈ ಮಾಡಿ. ಹದನಾಗಿ ಬೆಂದಾಗ ಹೊರಗೆ ತೆಗೆದು, ಚಿತ್ರದಲ್ಲಿರುವಂತೆ ಸಿಲ್ವರ್ ಫಾಯಿಲ್ ನಿಂದ ಅಲಂಕರಿಸಿ, ಊಟದ ಜೊತೆ ಸಲಾಡ್ ಸಹಿತ ಸವಿಯಲು ಕೊಡಿ.
ಸ್ವಾದಿಷ್ಟ ಉಸಲಿ
ಸಾಮಗ್ರಿ : ರಾತ್ರಿಯಿಡೀ ನೆನೆಸಿ, ಮಾರನೇ ದಿನ ಬೇಯಿಸಿದ 1-1 ಕಪ್ ಕಾಬೂಲ್ ಕಡಲೆಕಾಳು, ಬಟಾಣಿ, 1 ಗಿಟುಕು ತೆಂಗಿನ ತುರಿ, ಹೆಚ್ಚಿದ 3 ಈರುಳ್ಳಿ, 1-2 ಟೊಮೇಟೊ, 4-5 ಹಸಿ ಮೆಣಸು, 1 ಗಿಟುಕು ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪ, ಖಾರ, ಜೀರಿಗೆ/ಸೋಂಪಿನ ಪುಡಿ, ಒಗ್ಗರಣೆಗೆ ಎಣ್ಣೆ ಇತ್ಯಾದಿ.
ವಿಧಾನ : ಮೊದಲು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಇದಕ್ಕೆ ಹೆಚ್ಚಿದ ಹಸಿ ಮೆಣಸು, ಈರುಳ್ಳಿ, ಟೊಮೇಟೋಗಳನ್ನು ಒಂದೊಂದಾಗಿ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಪುಡಿಗಳು, ತೆಂಗಿನ ತುರಿ ಸೇರಿಸಿ ಕೆದಕಬೇಕು. ಕೊನೆಯಲ್ಲಿ ಬೆಂದ ಬಟಾಣಿ, ಕಾಳು ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಇದರ ಮೇಲೆ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಸವಿಯಲು ಕೊಡಿ.
ಸ್ಪೆಷಲ್ ದಾಲ್ ಫ್ರೈ
ಸಾಮಗ್ರಿ : ತೊಗರಿಬೇಳೆ, ಕಡಲೆಬೇಳೆ, ಹೆಸರುಬೇಳೆ, ಉದ್ದಿನ ಬೇಳೆ (ಒಟ್ಟಾಗಿ 2 ಕಪ್), 1 ಗಿಟುಕು ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂ ಮಸಾಲ, ಪಂಚರತ್ನ ಮಸಾಲ, ತುಂಡರಿಸಿದ ತುಸು ಹಸಿ ಮೆಣಸು, ಒಣ ಮೆಣಸು, 3 ಈರುಳ್ಳಿ, 4 ಟೊಮೇಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಗ್ಗರಣೆಗೆ ಅರ್ಧ ಸೌಟು ಎಣ್ಣೆ, ಇತರ ಸಾಮಗ್ರಿ ಜೊತೆ 1-2 ಲವಂಗ, ಏಲಕ್ಕಿ, ಚಕ್ಕೆ, ಮೊಗ್ಗು, 2 ಚಮಚ ಸಕ್ಕರೆ.
ವಿಧಾನ : ಮೊದಲು ಪ್ರೆಶರ್ ಪ್ಯಾನಿನಲ್ಲಿ ತೊಳೆದ ಬೇಳೆಗಳನ್ನು ಹಾಕಿ, 2 ಚಮಚ ಎಣ್ಣೆ, ತುಸು ಅರಿಶಿನ ಸೇರಿಸಿ 3 ಸೀಟಿ ಬರುವಂತೆ ಕೂಗಿಸಿ. ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ ಕರಿಬೇವಿನ ಸಮೇತ ಒಗ್ಗರಣೆ ಒಡಿ. ಹಸಿಒಣ ಮೆಣಸು, ಚಕ್ಕೆ ಲವಂಗಗಳನ್ನು ಹಾಕಿ ಚಟಪಟಾಯಿಸಿ. ನಂತರ ಹೆಚ್ಚಿದ ಈರುಳ್ಳಿ, ಆಮೇಲೆ ಟೊಮೇಟೊ ಹಾಕಿ ಬಾಡಿಸಿ. ಕೊನೆಯಲ್ಲಿ ಉಪ್ಪು, ಖಾರ, ಮಸಾಲೆಗಳು, ಸಕ್ಕರೆ ಎಲ್ಲಾ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಇದಾದ ಮೇಲೆ ನೀರಿನ ಸಮೇತ ಬೆಂದ ಬೇಳೆ ಹಾಕಿ, ಬೆರೆತುಕೊಳ್ಳುವಂತೆ ಮಾಡಿ, 1-2 ಕುದಿ ಬರಿಸಿ ಕೆಳಗಿಳಿಸಿ. ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಬಿಸಿ ಬಿಸಿ ಅನ್ನ, ಚಪಾತಿ, ದೋಸೆ ಜೊತೆ ಸವಿಯಲು ಕೊಡಿ.
ತೆಂಗಿನ ಲಡ್ಡು
ಸಾಮಗ್ರಿ : 1 ದೊಡ್ಡ ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಸಕ್ಕರೆ, 1 ಕಪ್ ತುಪ್ಪ, ಅಗತ್ಯವಿದ್ದಷ್ಟು ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು, ತುಸು ಏಲಕ್ಕಿ ಪುಡಿ, ಹಾಲಿನ ಪುಡಿ, ಖೋವಾ, ಕಂಡೆನ್ಸ್ಡ್ ಮಿಲ್ಕ್.
ವಿಧಾನ : ತೆಂಗಿನ ತುರಿಯನ್ನು ತುಸು ತರಿತರಿಯಾಗಿ ರುಬ್ಬಿಕೊಳ್ಳಿ. ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಡ್ರೈ ಫ್ರೂಟ್ಸ್ಸ ಹುರಿದು ತೆಗೆಯಿರಿ. ನಂತರ ಮಂದ ಉರಿ ಮಾಡಿ, ಇದಕ್ಕೆ ರುಬ್ಬಿದ ತೆಂಗು ಹಾಕಿ ಕೆದಕಬೇಕು. ನಂತರ ಇದಕ್ಕೆ ಕಂಡೆನ್ಸ್ಡ್ ಮಿಲ್ಕ್, ಸಕ್ಕರೆ ಹಾಕಿ ಕೆದಕಿರಿ. ಮಧ್ಯೆ ಮಧ್ಯೆ ತುಪ್ಪ ಬೆರೆಸುತ್ತಾ ತಳ ಹತ್ತದಂತೆ ನೋಡಿಕೊಳ್ಳಿ. ಆಮೇಲೆ ಏಲಕ್ಕಿಪುಡಿ, ಹಾಲಿನ ಪುಡಿ ಹಾಕಿ ಚೆನ್ನಾಗಿ ಕೈಯಾಡಿಸಿ. ಕೊನೆಯಲ್ಲಿ ಮಸೆದ ಖೋವಾ, ಡ್ರೈ ಫ್ರೂಟ್ಸ್ ಸೇರಿಸಿ ಎಲ್ಲ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ, ತುಪ್ಪ ಸವರಿದ ಕೈಗಳಿಂದ ಚಿತ್ರದಲ್ಲಿರುವಂತೆ ಉಂಡೆ ಕಟ್ಟಿ, ತುರಿದ ಒಣ ಕೊಬ್ಬರಿಯಿಂದ ಅಲಂಕರಿಸಿ ಸವಿಯಲು ಕೊಡಿ. ಇದನ್ನು ಆದಷ್ಟು ಬೇಗ ಖಾಲಿ ಮಾಡಿ, ತೆಂಗಿನ ಪದಾರ್ಥ, ಕೆಡದಂತೆ ಫ್ರಿಜ್ ನಲ್ಲಿರಿಸಿ.
ಸ್ಟೀಮ್ಡ್ ಆಲೂ ಕೋಫ್ತಾ
ಸಾಮಗ್ರಿ : 4-5 ಬೇಯಿಸಿದ ಮಸೆದ ಆಲೂ, 2 ಕಪ್ ಕಡಲೆಹಿಟ್ಟು, ಅರ್ಧ ಕಪ್ ತುರಿದ ಪನೀರ್, ಅರ್ಧ ಕಪ್ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ (ಕೆಂಪು, ಹಳದಿ, ಹಸಿರು), 2 ಈರುಳ್ಳಿ, 4-5 ಹಸಿ ಮೆಣಸು, ಒಂದಿಷ್ಟು ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಕೊ.ಸೊಪ್ಪು, ಕರಿಬೇವು, ತುಸು ಎಣ್ಣೆ, ಒಗ್ಗರಣೆ ಸಾಮಗ್ರಿ, ರುಚಿಗೆ ತಕ್ಕಷ್ಟು ಉಪ್ಪುಖಾರ, ಓಮ.
ವಿಧಾನ : ಮಸೆದ ಆಲೂಗೆ ತುರಿದ ಪನೀರ್, 3 ಬಗೆ ಕ್ಯಾಪ್ಸಿಕಂ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸು, ಉಳಿದ ಪದಾರ್ಥ, ಉಪ್ಪು, ಖಾರ ಸೇರಿಸಿ, ಚೆನ್ನಾಗಿ ಬೆರೆತುಕೊಳ್ಳುವಂತೆ ಮಿಶ್ರಣ ಮಾಡಿ, ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿಸಿ. ಒಂದು ಬಟ್ಟಲಲ್ಲಿ ಕಡಲೆಹಿಟ್ಟು, ಉಪ್ಪು, ಖಾರ, ಓಮ, ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಗಟ್ಟಿ ಕಲಸಿಕೊಳ್ಳಿ. ಆಲೂ ಉಂಡೆಗಳನ್ನು ಇದರಲ್ಲಿ ಅದ್ದಿ, ಇಡ್ಲಿ ಕುಕ್ಕರ್ ನಲ್ಲಿಟ್ಟು 12-15 ನಿಮಿಷ ಹಬೆಯಲ್ಲಿ ಬೇಯಿಸಿ. ಒಂದು ಚಿಕ್ಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದನ್ನು ಸ್ಟೀಮ್ಡ್ ಆಲೂ ಕೋಫ್ತಾ ಮೇಲೆ (ಚಿತ್ರದಲ್ಲಿರುವಂತೆ) ಹರಡಿ, ಟೊಮೇಟೊ ಸಾಸ್ ನಿಂದ ಅಲಂಕರಿಸಿ ಸವಿಯಲು ಕೊಡಿ.
ನುಗ್ಗೆಸೊಪ್ಪಿನ ಪಕೋಡ
ಸಾಮಗ್ರಿ : 1-1 ಕಪ್ ಬಿಡಿಸಿದ ನುಗ್ಗೆಸೊಪ್ಪು, ಕಡಲೆಹಿಟ್ಟು, 4 ಚಮಚ ಅಕ್ಕಿಹಿಟ್ಟು, ಹೆಚ್ಚಿದ ಕೆಂಪು, ಹಸಿರು, ಹಳದಿ ಕ್ಯಾಪ್ಸಿಕಂ (ಒಟ್ಟಾರೆ ಅರ್ಧ ಕಪ್), 1-2 ಹೆಚ್ಚಿದ ಈರುಳ್ಳಿ, ಹಸಿ ಮೆಣಸು, ತುಸು ಹೆಚ್ಚಿದ ಕೊ.ಸೊಪ್ಪು, ಕರಿಬೇವು, ಪುದೀನಾ, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಕರಿಯಲು ಎಣ್ಣೆ.
ವಿಧಾನ : ಹೆಚ್ಚಿದ ಪದಾರ್ಥಗಳೊಂದಿಗೆ ಮೇಲಿನ ಎಲ್ಲಾ ಸಾಮಗ್ರಿ, ತುಸು ನೀರು ಬೆರೆಸಿಕೊಂಡು ಪಕೋಡ ಮಿಶ್ರಣದ ಹದಕ್ಕೆ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಇದರಿಂದ ತುಸುವೇ ಮಿಶ್ರಣ ತೆಗೆದು ನೇರ ಎಣ್ಣೆಗೆ ಬಿಡುತ್ತಾ, ಚಿತ್ರದಲ್ಲಿರುವಂತೆ ಗರಿಗರಿಯಾದ ಪಕೋಡ ತಯಾರಿಸಿ, ಬಿಸಿಯಾಗಿ ಟೊಮೇಟೊ ಸಾಸ್, ಕಾಫಿ-ಟೀ ಜೊತೆ ಕೊಡಿ.
ಬ್ರೋಕನ್ ವೀಟ್ ದೋಸೆ
ಸಾಮಗ್ರಿ : 1 ಕಪ್ ಬ್ರೋಕನ್ ವೀಟ್, 2 ಈರುಳ್ಳಿ, 2 ಟೊಮೇಟೊ, ಸಣ್ಣಗೆ ಹೆಚ್ಚಿದ ಕೆಂಪು, ಹಳದಿ, ಹಸಿರು ಕ್ಯಾಪ್ಸಿಕಂ (ಒಟ್ಟಾರೆ ಅರ್ಧ ಕಪ್), ಅರ್ಧರ್ಧ ಕಪ್ ತುರಿದ ಪನೀರ್ ಸೋರೇಕಾಯಿ, 2-3 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ತುಸು ಎಣ್ಣೆ.
ವಿಧಾನ : ಬ್ರೋಕನ್ ವೀಟ್ ಚೆನ್ನಾಗಿ ತೊಳೆದು, ಶುಚಿಗೊಳಿಸಿ, ಬಿಸಿ ನೀರಲ್ಲಿ 1-2 ಗಂಟೆ ಕಾಲ ನೆನೆಸಿಡಿ. ನಂತರ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿ. ಇದನ್ನು ಒಂದು ಪಾತ್ರೆಗೆ ಬಗ್ಗಿಸಿಕೊಂಡು, ಹೆಚ್ಚಿದ ಪದಾರ್ಥ ಹಾಗೂ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ, 1 ಗಂಟೆ ಕಾಲ ನೆನೆಯಲು ಬಿಟ್ಟು, ಕಾದ ತಲಾ ಮೇಲೆ ಎಣ್ಣೆ ಬಿಡುತ್ತಾ ದೋಸೆ ತಯಾರಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಅಕ್ಕಿಹಿಟ್ಟಿನ ಶಂಕರಪೋಳಿ
ಸಾಮಗ್ರಿ : 1-1 ಕಪ್ ಅಕ್ಕಿಹಿಟ್ಟು, ಬೆಲ್ಲದ ಪುಡಿ, 1 ಗಿಟಕು ಕೊಬ್ಬರಿ ತುರಿ, ಸಣ್ಣಗೆ ತುಂಡರಿಸಿದ ಗೋಡಂಬಿ, ಬಾದಾಮಿ, ದ್ರಾಕ್ಷಿ, ಪಿಸ್ತಾ, ತುಸು ತುಪ್ಪ, ಎಳ್ಳು, ಕರಿಯಲು ಎಣ್ಣೆ.
ವಿಧಾನ : ಮೊದಲು ಬೆಲ್ಲದ ಪಾಕ ತಯಾರಿಸಿ, ಸೋಸಿಕೊಳ್ಳಿ. ಇದಕ್ಕೆ ತುಪ್ಪದಲ್ಲಿ ಹುರಿದ ಡ್ರೈಫ್ರೂಟ್ಸ್, ಎಳ್ಳು, ಕೊಬ್ಬರಿ, ಅಕ್ಕಿಹಿಟ್ಟು ಸೇರಿಸಿ ಮಿಶ್ರಣ ಕಲಸಿ. ತುಪ್ಪ ಸೇರಿಸಿ ಮೃದುಗೊಳಿಸಿ. ನಿಪ್ಪಟ್ಟಿನ ಆಕಾರದಲ್ಲಿ ತಟ್ಟಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ.