ಶರತ್ ಚಂದ್ರ
ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಸ ಕ್ರಿಯವಾಗಿರುವ ಶಿಲ್ಪಾ ಶ್ರೀನಿವಾಸ್ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಉಪೇಂದ್ರ,ಪ್ರೇಮ ರವೀನಾ ತಂಡನ್ ನಟಿಸಿರುವ ಉಪೇಂದ್ರ ಅವರೇ ನಿರ್ದೇಶಿಸಿದ ಬ್ಲಾಕ್ ಬಸ್ಟರ್ ಸಿನಿಮಾ ‘ಉಪೇಂದ್ರ’ ಚಿತ್ರದಿಂದ ಹಿಡಿದು, ಉಪ್ಪಿ ಅವರೇ ನಟಿಸಿರುವ ಕಲ್ಪನಾ 2, ಶಿವಣ್ಣ ಅವರ ವಾಲ್ಮೀಕಿ, ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ವಿಷ್ಣುವರ್ಧನ್ ನಟಿಸಿರುವ ‘ಪರ್ವ ‘ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿ ಕನ್ನಡ ಚಿತ್ರರಂಗ ಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. 800ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಣೆ ಮಾಡಿ ಅನುಭವ ಇರುವ ಶಿಲ್ಪಾ ಶ್ರೀನಿವಾಸ್ ಈಗ ಅವರದೇ ಹೆಸರಿರುವ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸುವುದರ ಮೂಲಕ ಬಣ್ಣ ಹಚ್ಚಲಿದ್ದಾರೆ.
ಸಿನಿಮಾ ರಂಗವನ್ನು ತನ್ನ ತಾಯಿಯಂತೆ ಪೂಜಿಸುವ, ಕಲಾಮಾತೆ ಎಂದು ಕರೆದು ಆರಾಧಿಸುವ ಒಂದಷ್ಟು ಜನ ನಮ್ಮಲ್ಲಿದ್ದರೆ, ಇನ್ನೊಂದಷ್ಟು ಜನ
ಶೋಕಿಗಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಚಿತ್ರರಂಗದ ಹೆಸರು ಹಾಳು ಮಾಡುತ್ತಿದ್ದಾರೆ. ಇದನ್ನು ಮಟ್ಟ ಹಾಕಲು ಕಲಾಮಾತೆಯ ನಿಜವಾದ ಆರಾದಕ ಏನೆಲ್ಲಾ ಮಾಡುತ್ತಾನೆ ಎಂಬ ಕಥಾ ಹಂದರವನ್ನು ಒಳಗೊಂಡ ‘ಶಿಲ್ಪಾ ಶ್ರೀನಿವಾಸ್ “ಎಂಬ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಜುಲೈ 14 ರಂದು ಸೆಟ್ಟೇರಲಿದೆ.
ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿರುವ ಕನ್ನಡ ಚಿತ್ರ ‘ಮುಗಿಲ ಮಲ್ಲಿಗೆ ‘ ಚಿತ್ರದ ನಿರ್ದೇಶಕ ಹಾಗೂ ತೆಲುಗಿನಲ್ಲಿ ರುದ್ರಾಕ್ಷಿಪುರಂ, ಆಗಸ್ಟ್ 6 ರಾತ್ರಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಅನುಭವ ಇರುವ ಆರ್. ಕೆ. ಗಾಂಧಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಚಿತ್ರದಲ್ಲಿ ಶಿಲ್ಪಾ ಶ್ರೀನಿವಾಸ್ ಅವರಿಗೆ ನಾಯಕಿಯಿಲ್ಲದಿದ್ದರೂ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಾಯಕಿಯಾಗಿ ಸ್ವಾತಿ ಲಿಂಗರಾಜ್ ಅಭಿನಯಿಸುತ್ತಿದ್ದಾರೆ. ಸ್ವಾತಿ ಮಿಸ್ಸೆಸ್ ಇಂಡಿಯಾ ಮತ್ತು ಇಂಟರ್ನ್ಯಾಷನಲ್ ಕ್ವೀನ್ ಟೈಟಲ್ ಗಳನ್ನು ಗೆದ್ದು ಚಿತ್ರರಂಗಕ್ಕೆ ಎಂಟ್ರಿ ನೀಡಿ ಈಗಾಗಲೇ ಒಂದಷ್ಟು ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಉಳಿದಂತೆ ಕಿಶೋರ್ ಕಾಸರಗೋಡು, ಪ್ರಿಯಾಂಕಾ, ಶೋಭರಾಜ್, ಸಿ. ಟಿ. ಜಯರಾಮ್ ,ಹೊಸ ಕೋಟೆ ಶಿವರಾಮ್,ಲೋಕೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಆರ್. ಕೆ ಗಾಂಧಿ ಅವರ ಈ ಹಿಂದಿನ ಚಿತ್ರಗಳಲ್ಲಿ ನಟಿಸಿ ಬೆಂಬಲವಾಗಿ ನಿಂತಿದ್ದ ಡಾ. ಥ್ರಿಲ್ಲರ್ ಮಂಜು, ಈ ಚಿತ್ರದಲ್ಲಿ ಸಾಹಸ ಸಂಯೋಜನೆ ಮಾಡಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಾಯಕನಾಗಿ,ಚಿತ್ರ ಸಾಹಿತಿಯಾಗಿ ಹಾಗೂ ಸಂಗೀತ ನಿರ್ದೇಶಕನಾಗಿ ಕೂಡ ಬೇಡಿಕೆಯಲ್ಲಿರುವ ಯುವ ಪ್ರತಿಭೆ ಅನಿರುದ್ದ್ ಶಾಸ್ತ್ರಿ ಚಿತ್ರಕ್ಕೆ ಸಂಗೀತ ನೀಡಿದ್ದು ಅನಿರುದ್ದ್ ಮತ್ತು ಪ್ರತಾಪ್ ಭಟ್ ಹಾಡುಗಳನ್ನು ಬರೆದಿದ್ದಾರೆ.
ಪ್ರಮೋದ್ ಭಾರತೀಯ ಛಾಯಾಗ್ರಹಣ ,ವಿನಯ್ ಜೆ. ಆಲೂರ್ ಸಂಕಲನ,ಮೋಹನ್ ಕುಮಾರ್ ಪ್ರಸಾದನ ಮಲ್ಲಿಕಾರ್ಜುನ ಅವರ ಕಲಾ ನಿರ್ದೇಶನ, ಕಪಿಲ್.ಎಂ. ಶ್ರೀನಿವಾಸ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಸ್ನೇಹಾಲಯಂ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಪ್ರೀ ಪ್ರೊಡಕ್ಷನ್ ಕಾರ್ಯಗಳು ಈಗಾಗಲೇ ಮುಗಿದಿದ್ದು ಇದೇ ತಿಂಗಳ 14 ರಿಂದ ಚಿತ್ರೀಕರಣ ಆರಂಭಿಸುವ ಪ್ಲಾನ್ ನಿರ್ಮಾಪಕರಿಗಿದೆ. ಹೊಸಕೋಟೆ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನ ಸುತ್ತ ಮುತ್ತ ಎರಡು ಹಂತ ಗಳಲ್ಲಿ ಚಿತ್ರೀಕರಣ ನಡೆಯಲಿದೆ.