ತನ್ನ ಮೊದಲ ಚಿತ್ರದಿಂದಲೇ ಬಾಲಿವುಡ್ ನಲ್ಲಿ ಅಪಾರ ಖ್ಯಾತಿ ಗಳಿಸಿದ ಶ್ವೇತಾ ತ್ರಿಪಾಠಿ, ತಾನು ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದ್ದು ಹೀಗೆ……!
ಬಾಲಿವುಡ್ ನ ಇಂದಿನ ಗ್ಲಾಮರಸ್ ಯುಗದ ಮಧ್ಯೆ, ಸಶಕ್ತ ನಾರಿ ಪಾತ್ರಗಳ ಮೂಲಕ, ಪಳಗಿದ ನಟನೆಯ ಝಲಕ್ ತೋರಿದ ಆಧುನಿಕ ನಟಿ ಶ್ವೇತಾ ತ್ರಿಪಾಠಿ ಶರ್ಮ, ತನ್ನ 8 ವರ್ಷದ ಕೆರಿಯರ್ ನಲ್ಲಿ ಹಲವು ಘಟ್ಟಗಳನ್ನು ದಾಟಿ ಸೈ ಎನಿಸಿದ್ದಾಳೆ. ತನ್ನ ಮೊಟ್ಟ ಮೊದಲ ಚಿತ್ರ `ಮಸಾನ್’ನಿಂದ ಎತ್ತರಕ್ಕೇರಿ, `ಕಾನ್ಸ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ಗೆ ಹೆಜ್ಜೆ ಇಡುವಲ್ಲಿ ಯಶಸ್ವಿಯಾಗಿದ್ದಾಳೆ. ಈಕೆಯ ಕೆರಿಯರ್ ಉತ್ತುಂಗದಲ್ಲಿರುವಾಗಲೇ, 2018ರಲ್ಲಿ ರಾಪರ್‌ಮ್ಯುಸಿಶಿಯನ್ ಚೈತನ್ಯ ಶರ್ಮ ಜೊತೆ 2018ರಲ್ಲಿ ಮದುವೆಯಾದಳು. ಆಂಟಿಯಾದ ನಂತರ ಇವಳ ಕೆರಿಯರ್ ಕಥೆ ಮುಗಿಯಿತು ಎಂದು ಜನ ಆಡಿಕೊಳ್ಳುತ್ತಿದ್ದಂತೆ, ಶ್ವೇತಾ ಚಿತ್ರಗಳಿಂದ ಚಿತ್ರಕ್ಕೆ ಮತ್ತಷ್ಟು ಎತ್ತರಕ್ಕೆ ಏರಿದಳು.
ಈಕೆಗೆ OTT ವೆಬ್ ಸೀರೀಸ್ ನ `ಮಿರ್ಜಾಪುರ್’ ಚಿತ್ರದಲ್ಲಿ ಗೋಲು ಪಾತ್ರ ದೊರಕಿದಾಗಿನಿಂದ ಹೆಸರು, ಹಣ ತಾನಾಗಿ ಹರಿದುಬಂತು. ಕಾಲೇಜು ಕಿಶೋರಿಯ ಈ ಪಾತ್ರ ಬಲು ಸೆಕ್ಸಿ ಎನಿಸಿ, ಪಡ್ಡೆಗಳ ನಿದ್ದೆ ಕೆಡಿಸಿತ್ತು. ಇವಳೊಂದಿಗಿನ ಮಾತುಕಥೆಯ ಸಾರಾಂಶ :
ನಿನಗೆ ಈ ನಟನೆಯ ವ್ಯಾಮೋಹ ಬೆಳೆದು ಬಂದಿದ್ದು ಹೇಗೆ?
ಇದು ಸಹಜವಾಗಿ ನನ್ನಲ್ಲಿ ಮೊದಲಿನಿಂದಲೂ ಇತ್ತು ಅನ್ಸುತ್ತೆ. ಆ ಹುಚ್ಚು ಬೆಳೆಸಿಕೊಂಡರು, ಬೆಳ್ಳಿ ತೆರೆಯಲ್ಲಿ ಮಿಂಚುವರೆಗೂ ಅವರ ತಲೆಯಿಂದ ಅದು ಇಳಿಯದು. ಬಾಲ್ಯದಿಂದ ನಾನು ಶಾಲೆಯ ಎಲ್ಲಾ ಪಠ್ಯೇತರ ಚಟುವಟಿಕೆ, ನಾಟಕಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದೆ.
ಇದು ನಿನ್ನ ತಲೆಗೆ ಹೊಳೆದದ್ದು ಎಲ್ಲಿಂದ?
ನನಗೆ ಮೊದಲಿನಿಂದಲೂ ಟಿವಿ ಪ್ರೋಗ್ರಾಂ ಅಂದ್ರೆ ಏನೋ ಕ್ರೇಜ್! ಅದರಲ್ಲೂ ಅದರ ಜಾಹೀರಾತುಗಳು ಅಂದ್ರೆ ನನ್ನ ಫೇವರಿಟ್! ಅಂಥ ಆ್ಯಡ್ಸ್ ನಲ್ಲಿ ನಾನು ಇಲ್ಲವಲ್ಲ ಅಂತ ಬೇಜಾರಾಗ್ತಾ ಇತ್ತು. ಮುಂದೆ ದೊಡ್ಡವಳಾಗಿ ಸಣ್ಣಪುಟ್ಟ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದೆ. ಆಗಲೂ `ಪೃಥ್ವಿ ಥಿಯೇಟರ್ ಫೆಸ್ಟಿವ್’ ನಡೆಯುತ್ತಿತ್ತು. ಇದರ ಬಗ್ಗೆ ನನಗೆ ಆಗ ಅಷ್ಟು ಐಡಿಯಾ ಇರಲಿಲ್ಲ. ನನ್ನ ತಂದೆ ಅಧಿಕಾರಿ, ತಾಯಿ ನಿವೃತ್ತ ಪ್ರಾಧ್ಯಾಪಕಿ. ಅವರ ನೇತೃತ್ವದಲ್ಲಿ ಈ ಕಲ್ಚರ್ ಬಗ್ಗೆ ಅರಿತುಕೊಂಡೆ.
ದೆಹಲಿಯಲ್ಲಿದ್ದಾಗ ಪೇರೆಂಟ್ಸ್ ಜೊತೆ ಹೇಮಾಮಾಲಿನಿ ಅವರ ಶಾಸ್ತ್ರೀಯ ನೃತ್ಯಗಳು ಹಾಗೂ ಕ್ಲಾಸಿಕ್ ನಾಟಕಗಳನ್ನು ಬಹಳ ಸಲ ನೋಡಿದ್ದೇನೆ. ಬಾಲಿವುಡ್ ಅರಸುತ್ತಾ ಮುಂಬೈ ಸೇರಿ, ಇಲ್ಲಿನ `ಪೃಥ್ವಿ ಫೆಸ್ಟಿವ್’ನಲ್ಲಿ ವಿಶ್ವಾಸ್ ರ ನಿರ್ದೇಶನದ ನಾಟಕಗಳನ್ನು ಗಮನಿಸುತ್ತಿದ್ದೆ. ಆ ನಾಟಕಗಳು ನನ್ನ ಮೇಲೆ ಅಪಾರ ಮೋಡಿ ಮಾಡಿದವು. ಈ ಪಾತ್ರಧಾರಿಗಳ ತರಹವೇ, ಮುಂದೆ ವೇದಿಕೆಯಲ್ಲಿ ನಾನೂ ನಟಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಳ್ಳುವ ಛಲ ಮೂಡಿತು. ಈ ರೀತಿ ನಾಟಕಗಳ ಖಯಾಲಿಯಿಂದ ನಾನು ನಟನೆಯತ್ತ ವಾಲಿದೆವು.
ನಿನ್ನ ವೃತ್ತಿಯ ಆರಂಭ ಹೇಗಾಯಿತು?
ಮೊದಲಿನಿಂದಲೂ ನನಗೆ ಫೋಟೋಗ್ರಫಿಯ ಹುಚ್ಚು. ಈ ಹವ್ಯಾಸವನ್ನು ಅಕ್ಕನ ಜೊತೆ ಪೈಪೋಟಿಗಾಗಿ ಅಳವಡಿಸಿಕೊಂಡೆ. ಕಾಲೇಜ್ ಮುಗಿಸಿ ಇದನ್ನೇ ಮುಂದುವರಿಸೋಣ ಎಂದು ಕ್ಯಾಮೆರಾ ಕೈಗೆತ್ತಿಕೊಂಡು, ಪ್ರೊಫೆಶನಲ್ ಆಗಿ ಕಲಿತೆ, ಬೆಳೆದೆ. ಆಗ ಇಂಟರ್ನ್ ಶಿಪ್ ಗಾಗಿ ಮುಂಬೈಗೆ ಬಂದೆ. ಈ ರೀತಿ ಒಂದು ಆಂಗ್ಲ ಪತ್ರಿಕೆಗೆ ನಾನು ಫೋಟೋ ಎಡಿಟರ್ ಆಗಿ ಸೇರಿದೆ, ಹಾಗೇ ನಟನೆಯತ್ತ 100% ವಾಲಿದೆ.
ನಿನ್ನ `ಆಲ್ ಮೈಟಿ ಪ್ರೊಡಕ್ಷನ್’ ನಾಟ್ಯ ತಂಡದ ಬಗ್ಗೆ ಒಂದಿಷ್ಟು ವಿವರಗಳು……
ಪತ್ರಿಕೆಗೆ ಕೆಲಸ ಮಾಡುತ್ತಲೇ ಇದನ್ನು ಶುರು ಹಚ್ಚಿಕೊಂಡೆ. ನಮ್ಮ ನಾಟಕಗಳಿಗೆ ಬಂದು ವೃತ್ತಿಪರ ನಾಟ್ಯ ಪ್ರದರ್ಶನ ನೀಡಬೇಕೆಂದು ನೃತ್ಯಪಟುಗಳಿಗೆ ಫೋನಾಯಿಸುತ್ತಿದ್ದೆ. ಸಮಯಾಭಾವದ ಕಾರಣ, ಎಷ್ಟೋ ಸಲ ಅದು ಸರಿಹೋಗುತ್ತಿರಲಿಲ್ಲ. ನಾನೇ ಈ ನಿಟ್ಟಿನಲ್ಲಿ ಒಂದು ಹೊಸ ಪ್ರಯತ್ನ ಮಾಡಬಾರದೇಕೆ ಎನಿಸಿತು. ಈ ರೀತಿ ಈ ನಾಟ್ಯ ತಂಡ ರೂಪುಗೊಂಡಿತು. ನಾವೆಲ್ಲ ಬೇರೆ ಬೇರೆ ಕಡೆ ಕೆಲಸದಲ್ಲಿದ್ದೆ. ಸಂಜೆ ಒಂದೆಡೆ ಕಲೆತು ಹವ್ಯಾಸಿ ನಾಟಕಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಸ್ಕ್ರಿಪ್ಟ್ ರೀಡಿಂಗ್, ರಿಹರ್ಸಲ್ಸ್ ಈ ರೀತಿ ರೆಡಿ ಆಗ್ತಿತ್ತು.
ಈ ತಂಡ ಬಳಸಿ ಈಗಲೂ ನಾಟಕ ಮಾಡುತ್ತಿರುತ್ತೇವೆ. ಪ್ರೇಕ್ಷಕರ ಎದುರು ನೇರವಾಗಿ ಪ್ರತಿಕ್ರಿಯೆ ಸಿಗುವಂತೆ, ವೇದಿಕೆಯ ಮೇಲೆ ನಾಟಕ, ನೃತ್ಯ ಮಾಡುವುದಿದೆಯಲ್ಲ…. ಅದು ಸಿನಿಮಾಗಿಂತ ಸಾವಿರ ಪಟ್ಟು ಬಲು ರೋಮಾಂಚಕಾರಿ! ನನ್ನ ಅಭಿಪ್ರಾಯದಲ್ಲಿ ಎಲ್ಲಾ ಸಿನಿಮಾ ನಟನಟಿಯರೂ ಇಂಥ ಪ್ರಯೋಗ ಮಾಡಲೇಬೇಕು. ಸಿನಿಮಾ, ಟಿವಿ ಅಷ್ಟೇ ಸಾಕು ಎಂದು ಭಾವಿಸಬಾರದು. ನೀವು ಬೇರೆ ಬೇರೆ ಮಾಧ್ಯಮಗಳಲ್ಲಿ ಹೀಗೆ ದುಡಿದಷ್ಟೂ ನಿಮ್ಮ ಪ್ರಗತಿ ಹೆಚ್ಚುತ್ತದೆ. ನನಗಂತೂ ಥಿಯೇಟರ್ ನಿಂದಲೇ ಎಲ್ಲ ಸಿಕ್ಕಿದೆ! ನನಗೆ ಕೆಲಸ, ಫ್ರೆಂಡ್ಸ್, ಪತಿ, ಪರಿವಾರ ಎಲ್ಲವೂ ಇಲ್ಲಿಂದಲೇ ಸಿಕ್ಕಿದ್ದು.
ನಿನ್ನ ಮೊದಲ ಚಿತ್ರದಿಂದ 8 ವರ್ಷದ ನಿನ್ನ ಪಯಣ ಹೇಗೆ ಮುಂದುವರಿಯಿತು?
ನನ್ನ ಮೊದಲ ಚಿತ್ರ ಅಂದ್ರೆ `ಮಸಾನ್.’ ಹೀಗಾಗಿ ನನ್ನ ವರ್ಕ್ ಪ್ರೊಫೈಲ್, ನನ್ನ ರಿಪೋರ್ಟ್ ಕಾರ್ಡ್ ಆಗಿದೆ. ಪ್ರತಿ ಪ್ರಾಜೆಕ್ಟ್, ಪ್ರತಿ ಪಾತ್ರಕ್ಕೂ ನ್ಯಾಯ ಒದಗಿಸಲು ಸತತ ಪ್ರಯತ್ನಿಸುತ್ತೇನೆ. `ಕಲಾವಿದರ ಕೆಲಸ ಸದಾ ಸೆಟ್ ಮೇಲಿರುತ್ತದೆ, ಪ್ರಮೋಶನ್ ಆ್ಯಕ್ಟಿವಿಟೀಸೇ ಬೇರೆ’ ಎಂದು ನಿರ್ದೇಶಕ ಪಂಕಜ್ ತ್ರಿಪಾಠಿ ಆಗಾಗ ಹೇಳುತ್ತಿರುವ ಮಾತು ಕಾಡುತ್ತದೆ. ಕಲಾವಿದರಾಗಿ ನಮ್ಮ ಕೆಲಸ ಸಿನಿಮಾ ಸೆಟ್ ನಲ್ಲಿ ಅಲ್ಲೇ ಮುಗಿಯುತ್ತದೆ, ಅದರ ನಂತರವೇ ಪ್ರೇಕ್ಷಕರು ಅದು ಸರಿಯಾಗಿತ್ತೋ ಇಲ್ಲವೋ ಎಂದು ತೀರ್ಪು ನೀಡುತ್ತಾರೆ. ಹೀಗಾಗಿ ಈಗಲೂ ನಾನು ಕಲಿಯುತ್ತಲೇ ಇರುತ್ತೇವೆ. ನನ್ನ `ಕಂಜೂಸ್ ಮಕ್ಕಿಚೂಸ್’ ಚಿತ್ರ ಗಮನಿಸಿ, ನನ್ನಿಂದ ಸಾಧ್ಯವಾದಷ್ಟೂ ಗರಿಷ್ಠ ಶ್ರಮ ವಹಿಸಿದ್ದೇನೆ.
ನಿನ್ನ ಕೆರಿಯರ್ ಗಮನಿಸಿದರೆ, ನೀನು ಪ್ರತಿ ಚಿತ್ರಕ್ಕಾಗಿಯೂ ಎಷ್ಟು ಕಷ್ಟಪಟ್ಟಿದ್ದಿ, ಆ ಪಾತ್ರವೇ ನೀನಾಗಿದ್ದಿ ಎಂಬುದು ತಿಳಿಯುತ್ತದೆ. ಆದರೆ ನಿನಗಿಂತ ಹೆಚ್ಚಾಗಿ ನಿನ್ನ ಸಹನಟರೇ ಚಿತ್ರದ ಸಕ್ಸೆಸ್ ಹೊತ್ತೊಯ್ದರು. ಇದರ ಬಗ್ಗೆ ಏನು ಹೇಳ್ತೀಯಾ?
ನಿಮ್ಮ ಮಾತು ನಿಜ. `ಮಸಾನ್’ ಚಿತ್ರದ ಶ್ರೇಯಸ್ಸು, ವಿಕ್ಕಿ ಕೌಶ್, ರಿಚಾ ಚಡ್ಡಾರ ಪಾಲಾದರೆ, `ಮಿರ್ಜಾಪುರ್’ ಚಿತ್ರದ ಕ್ರೆಡಿಟ್ ಪೂರ್ತಿ ನಿರ್ದೇಶಕ ಪಂಕಜ್ ತ್ರಿಪಾಠಿ ಹೊಡೆದರು. ಇವರೆಲ್ಲ ಅತ್ಯುತ್ತಮ ನಟರು, ಮಾನವೀಯತೆ ಉಳ್ಳವರು. ಅವರವರ ಪಾಲಿನ ಕ್ರೆಡಿಟ್ ಅವರವರಿಗೆ ಇದ್ದೇ ಇರುತ್ತದೆ. ಮಿರ್ಜಾಪುರ್ ಚಿತ್ರದ ಗೋಲು ಪಾತ್ರದಿಂದ ನನಗೆ ಸಿಕ್ಕ ಹೆಸರಿನಿಂದ ನನಗೆ ಖುಷಿ ಇದೆ! ಜಾಸ್ತಿ, ಕಡಿಮೆ ಬಗ್ಗೆ ತಲೆ ಕೆಡಿಸಿಕೊಳ್ಳೋಲ್ಲ. ಹಿಂದಿನ ಚಿತ್ರಕ್ಕಿಂತ ಮುಂದಿನ ಚಿತ್ರದಲ್ಲಿ ಇನ್ನೂ ಚೆನ್ನಾಗಿ ನಟಿಸಿ, ಪ್ರೇಕ್ಷಕರ ಮೆಚ್ಚುಗೆ ಗಳಿಸುವುದೇ ನನ್ನ ಗುರಿ. ಬಾಲಿವುಡ್ ನಲ್ಲಿ ಭೇದಭಾವದ ಸಮಸ್ಯೆ ಯಾರಿಗೆ ತಾನೇ ಇಲ್ಲ…..? ಅದರಲ್ಲೂ ನಟಿ ಎಂದರೆ ಅವಳನ್ನು ಇನ್ನಷ್ಟು ಮಟ್ಟ ಹಾಕುತ್ತಾರೆ, ನಟರಿಗೆ ಕೊಂಬು ಇದೆ ಎಂಬಂತೆ!
ಎಂದಿನ ಕಮಿರ್ಷಿಯಲ್ ಸಿನಿಮಾ ಅಲ್ಲದೆ OTT ವೆಬ್ ಸೀರಿಸ್ ನಲ್ಲೂ ನಟಿಸಿದ್ದಿ. ಈ 2 ವಿಭಿನ್ನ ಪ್ಲಾಟ್ ಫಾರ್ಮ್ ಗಳಲ್ಲಿ ಯಾವುದಕ್ಕೆ ಆದ್ಯತೆ ಕೊಡ್ತೀಯಾ?
ನನಗೆ ಎಲ್ಲಾ ಪ್ಲಾಟ್ ಫಾರ್ಮ್ ಗಳೂ ಒಂದೇ ಅನ್ಸುತ್ತೆ. ಮುಖ್ಯ ಪಾತ್ರ ಚೆನ್ನಾಗಿ ಬರಬೇಕಷ್ಟೆ. ಉತ್ತಮ ಕಥೆ, ಅಚ್ಚುಕಟ್ಟಾದ ಪಾತ್ರಗಳೇ ನನ್ನ ಆದ್ಯತೆ. ನನ್ನ ಚಿತ್ರ ನೋಡಲು ಬಂದ ಪ್ರೇಕ್ಷಕರಿಗೆ ನಿರಾಸೆ ಆಗಬಾರದೆಂಬುದೇ ನನ್ನ ಗುರಿ. ಕಲಾವಿದೆ ಆಗಿ ನಟನೆಯಲ್ಲಿ ನನಗೆ ಹಸಿ ಹೆಚ್ಚು. ಹೀಗಾಗಿ ಬೆಳ್ಳಿ ಪರದೆ, OTT ಯಾವುದಾದರೇನಂತೆ? ಎಲ್ಲಕ್ಕಿಂತ OTTಯ ಹೆಚ್ಚಿನ ಲಾಭ ಎಂದರೆ, ಮಂಡ್ಯಾದ ಕ್ಯಾತಮಾರನಹಳ್ಳಿಯಿಂದ ಅಮೆರಿಕಾದ ಬೋಸ್ಟನ್ ವರೆಗೂ ತಂತಮ್ಮ ಮನೆಗಳಲ್ಲೇ ಕುಳಿತು ಜನ ವಿಮರ್ಶೆ ಮಾಡಬಹುದು. ತಾಕತ್ತಿದ್ದರೆ ಆ ಚಿತ್ರ ಗೆದ್ದೇ ಗೆಲ್ಲುತ್ತದೆ!
ಸಿನಿಮಾ ಥಿಯೇಟರ್ ಗಳಿಂದ ಚಿತ್ರಗಳು 2-3 ವಾರಗಳಲ್ಲೇ ಎತ್ತಗಂಡಿ ಆಗುತ್ತವೆ, ಜನ ಬೇಗ ಮರೆತುಬಿಡುತ್ತಾರೆ. OTTಯಲ್ಲಿ ಸಂಗ್ರಹಗೊಳ್ಳುವುದರಿಂದ ಜನ ಯಾವಾಗ ಬೇಕಾದರೂ ಅದನ್ನು ನೋಡಬಹುದು, ಇಲ್ಲಿ ಕಂಟಿನ್ಯೂಯಿಟಿ ಇರುತ್ತದೆ.
ನಿನ್ನ ಯಾವ ಪಾತ್ರಗಳು ನಿನ್ನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿವೆ?
`ಹರಾಮ್ ಖೋರ್’ ಚಿತ್ರದಲ್ಲಿನ ಪಾತ್ರದಲ್ಲಿ ನಾನು ಪರಕಾಯ ಪ್ರವೇಶ ಮಾಡಿದ ನಂತರ, ಅದರಿಂದ ಹೊರಬರಲು ಬಹಳ ಕಾಲ ಹಿಡಿಸಿತು. ಹಿಂದೆ `ಶರಪಂಜರ’ದಲ್ಲಿ ಕಲ್ಪನಾ ಹುಚ್ಚಿ ಕಾವೇರಿ ಪಾತ್ರದಿಂದ ಹೊರಬರಲಾಗದಂತೆ! ಹಾಗೆಯೇ `ಮಿರ್ಜಾಪುರ್’ ಚಿತ್ರದ ಪಾತ್ರದಲ್ಲೂ ಆಯ್ತು. ಅದರಿಂದ ಹೊರಬರಲು ಬಹಳ ಪಾಡುಪಟ್ಟೆ. ನನಗೆ ಯಾಕೆ ಹೀಗಾಗಿದೆ ಎಂದು ಶೂಟಿಂಗ್ ಸೆಟ್ ನಲ್ಲಿ ಎಲ್ಲರಿಗೂ ಗೊಂದಲವಾಗಿತ್ತು. ಗೋಲು ಪಾತ್ರದ ಪ್ರಭಾವ ಅಷ್ಟು ಗಾಢವಾಗಿತ್ತು. ನಂತರ `ಮಿರ್ಜಾಪುರ್’ ಚಿತ್ರ ಶುರುವಾದ ಮೇಲೆ ನಾನು ಮಾಮೂಲಿ ಆದೆ.
ಈ ಚಿತ್ರದ ಪ್ರಭಾವದಿಂದಲೂ ಹೊರ ಬರಲಾಗದ ನಾನು ಕೌನ್ಸಿಲಿಂಗ್ ಗೆ ಹೋಗಬೇಕಾಯ್ತು. ಆ ಪಾತ್ರದೊಳಗೆ ಪ್ರವೇಶಿಸಲು ಮಾತ್ರ ನನಗೆ ಗೊತ್ತು, ಅದರಿಂದ ಹೊರಬರಲು ಆಗುವುದಿಲ್ಲ, ಅಭಿಮನ್ಯು ಚಕ್ರವ್ಯೂಹದೊಳಗೆ ಸಿಲುಕಿದಂತೆ! ಆದರೆ ಈಗ ಎಷ್ಟೋ ಸುಧಾರಿಸಿದ್ದೇನೆ. ಹೀಗಾಗಿ ನನ್ನ ಸಹನಟರು, ಲೇಖಕರು, ನಿರ್ದೇಶಕರಿಗೂ ಸಹಾಯ ಆಗುವಂತೆ ಬಲು ಎಚ್ಚರಿಕೆಯಿಂದ ನಟಿಸುತ್ತಿದ್ದೇನೆ.
– ಪ್ರತಿನಿಧಿ