ತನ್ನ ಮೊದಲ ಚಿತ್ರದಿಂದಲೇ ಬಾಲಿವುಡ್ ನಲ್ಲಿ ಅಪಾರ ಖ್ಯಾತಿ ಗಳಿಸಿದ ಶ್ವೇತಾ ತ್ರಿಪಾಠಿ, ತಾನು ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದ್ದು ಹೀಗೆ......!
ಬಾಲಿವುಡ್ ನ ಇಂದಿನ ಗ್ಲಾಮರಸ್ ಯುಗದ ಮಧ್ಯೆ, ಸಶಕ್ತ ನಾರಿ ಪಾತ್ರಗಳ ಮೂಲಕ, ಪಳಗಿದ ನಟನೆಯ ಝಲಕ್ ತೋರಿದ ಆಧುನಿಕ ನಟಿ ಶ್ವೇತಾ ತ್ರಿಪಾಠಿ ಶರ್ಮ, ತನ್ನ 8 ವರ್ಷದ ಕೆರಿಯರ್ ನಲ್ಲಿ ಹಲವು ಘಟ್ಟಗಳನ್ನು ದಾಟಿ ಸೈ ಎನಿಸಿದ್ದಾಳೆ. ತನ್ನ ಮೊಟ್ಟ ಮೊದಲ ಚಿತ್ರ `ಮಸಾನ್'ನಿಂದ ಎತ್ತರಕ್ಕೇರಿ, `ಕಾನ್ಸ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್'ಗೆ ಹೆಜ್ಜೆ ಇಡುವಲ್ಲಿ ಯಶಸ್ವಿಯಾಗಿದ್ದಾಳೆ. ಈಕೆಯ ಕೆರಿಯರ್ ಉತ್ತುಂಗದಲ್ಲಿರುವಾಗಲೇ, 2018ರಲ್ಲಿ ರಾಪರ್‌ಮ್ಯುಸಿಶಿಯನ್ ಚೈತನ್ಯ ಶರ್ಮ ಜೊತೆ 2018ರಲ್ಲಿ ಮದುವೆಯಾದಳು. ಆಂಟಿಯಾದ ನಂತರ ಇವಳ ಕೆರಿಯರ್ ಕಥೆ ಮುಗಿಯಿತು ಎಂದು ಜನ ಆಡಿಕೊಳ್ಳುತ್ತಿದ್ದಂತೆ, ಶ್ವೇತಾ ಚಿತ್ರಗಳಿಂದ ಚಿತ್ರಕ್ಕೆ ಮತ್ತಷ್ಟು ಎತ್ತರಕ್ಕೆ ಏರಿದಳು.
ಈಕೆಗೆ OTT ವೆಬ್ ಸೀರೀಸ್ ನ `ಮಿರ್ಜಾಪುರ್' ಚಿತ್ರದಲ್ಲಿ ಗೋಲು ಪಾತ್ರ ದೊರಕಿದಾಗಿನಿಂದ ಹೆಸರು, ಹಣ ತಾನಾಗಿ ಹರಿದುಬಂತು. ಕಾಲೇಜು ಕಿಶೋರಿಯ ಈ ಪಾತ್ರ ಬಲು ಸೆಕ್ಸಿ ಎನಿಸಿ, ಪಡ್ಡೆಗಳ ನಿದ್ದೆ ಕೆಡಿಸಿತ್ತು. ಇವಳೊಂದಿಗಿನ ಮಾತುಕಥೆಯ ಸಾರಾಂಶ :
ನಿನಗೆ ಈ ನಟನೆಯ ವ್ಯಾಮೋಹ ಬೆಳೆದು ಬಂದಿದ್ದು ಹೇಗೆ?
ಇದು ಸಹಜವಾಗಿ ನನ್ನಲ್ಲಿ ಮೊದಲಿನಿಂದಲೂ ಇತ್ತು ಅನ್ಸುತ್ತೆ. ಆ ಹುಚ್ಚು ಬೆಳೆಸಿಕೊಂಡರು, ಬೆಳ್ಳಿ ತೆರೆಯಲ್ಲಿ ಮಿಂಚುವರೆಗೂ ಅವರ ತಲೆಯಿಂದ ಅದು ಇಳಿಯದು. ಬಾಲ್ಯದಿಂದ ನಾನು ಶಾಲೆಯ ಎಲ್ಲಾ ಪಠ್ಯೇತರ ಚಟುವಟಿಕೆ, ನಾಟಕಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದೆ.
ಇದು ನಿನ್ನ ತಲೆಗೆ ಹೊಳೆದದ್ದು ಎಲ್ಲಿಂದ?
ನನಗೆ ಮೊದಲಿನಿಂದಲೂ ಟಿವಿ ಪ್ರೋಗ್ರಾಂ ಅಂದ್ರೆ ಏನೋ ಕ್ರೇಜ್! ಅದರಲ್ಲೂ ಅದರ ಜಾಹೀರಾತುಗಳು ಅಂದ್ರೆ ನನ್ನ ಫೇವರಿಟ್! ಅಂಥ ಆ್ಯಡ್ಸ್ ನಲ್ಲಿ ನಾನು ಇಲ್ಲವಲ್ಲ ಅಂತ ಬೇಜಾರಾಗ್ತಾ ಇತ್ತು. ಮುಂದೆ ದೊಡ್ಡವಳಾಗಿ ಸಣ್ಣಪುಟ್ಟ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದೆ. ಆಗಲೂ `ಪೃಥ್ವಿ ಥಿಯೇಟರ್ ಫೆಸ್ಟಿವ್' ನಡೆಯುತ್ತಿತ್ತು. ಇದರ ಬಗ್ಗೆ ನನಗೆ ಆಗ ಅಷ್ಟು ಐಡಿಯಾ ಇರಲಿಲ್ಲ. ನನ್ನ ತಂದೆ ಅಧಿಕಾರಿ, ತಾಯಿ ನಿವೃತ್ತ ಪ್ರಾಧ್ಯಾಪಕಿ. ಅವರ ನೇತೃತ್ವದಲ್ಲಿ ಈ ಕಲ್ಚರ್ ಬಗ್ಗೆ ಅರಿತುಕೊಂಡೆ.
ದೆಹಲಿಯಲ್ಲಿದ್ದಾಗ ಪೇರೆಂಟ್ಸ್ ಜೊತೆ ಹೇಮಾಮಾಲಿನಿ ಅವರ ಶಾಸ್ತ್ರೀಯ ನೃತ್ಯಗಳು ಹಾಗೂ ಕ್ಲಾಸಿಕ್ ನಾಟಕಗಳನ್ನು ಬಹಳ ಸಲ ನೋಡಿದ್ದೇನೆ. ಬಾಲಿವುಡ್ ಅರಸುತ್ತಾ ಮುಂಬೈ ಸೇರಿ, ಇಲ್ಲಿನ `ಪೃಥ್ವಿ ಫೆಸ್ಟಿವ್'ನಲ್ಲಿ ವಿಶ್ವಾಸ್ ರ ನಿರ್ದೇಶನದ ನಾಟಕಗಳನ್ನು ಗಮನಿಸುತ್ತಿದ್ದೆ. ಆ ನಾಟಕಗಳು ನನ್ನ ಮೇಲೆ ಅಪಾರ ಮೋಡಿ ಮಾಡಿದವು. ಈ ಪಾತ್ರಧಾರಿಗಳ ತರಹವೇ, ಮುಂದೆ ವೇದಿಕೆಯಲ್ಲಿ ನಾನೂ ನಟಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಳ್ಳುವ ಛಲ ಮೂಡಿತು. ಈ ರೀತಿ ನಾಟಕಗಳ ಖಯಾಲಿಯಿಂದ ನಾನು ನಟನೆಯತ್ತ ವಾಲಿದೆವು.
ನಿನ್ನ ವೃತ್ತಿಯ ಆರಂಭ ಹೇಗಾಯಿತು?
ಮೊದಲಿನಿಂದಲೂ ನನಗೆ ಫೋಟೋಗ್ರಫಿಯ ಹುಚ್ಚು. ಈ ಹವ್ಯಾಸವನ್ನು ಅಕ್ಕನ ಜೊತೆ ಪೈಪೋಟಿಗಾಗಿ ಅಳವಡಿಸಿಕೊಂಡೆ. ಕಾಲೇಜ್ ಮುಗಿಸಿ ಇದನ್ನೇ ಮುಂದುವರಿಸೋಣ ಎಂದು ಕ್ಯಾಮೆರಾ ಕೈಗೆತ್ತಿಕೊಂಡು, ಪ್ರೊಫೆಶನಲ್ ಆಗಿ ಕಲಿತೆ, ಬೆಳೆದೆ. ಆಗ ಇಂಟರ್ನ್ ಶಿಪ್ ಗಾಗಿ ಮುಂಬೈಗೆ ಬಂದೆ. ಈ ರೀತಿ ಒಂದು ಆಂಗ್ಲ ಪತ್ರಿಕೆಗೆ ನಾನು ಫೋಟೋ ಎಡಿಟರ್ ಆಗಿ ಸೇರಿದೆ, ಹಾಗೇ ನಟನೆಯತ್ತ 100% ವಾಲಿದೆ.