ಸೋಶಿಯಲ್ ಮೀಡಿಯಾದ ಸೆನ್ಸೇಷನ್​ ಕ್ವೀನ್​ ಉರ್ಫಿ ಜಾವೇದ್ ತಮ್ಮ ವಿಚಿತ್ರ ಫ್ಯಾಷನ್ ಆಯ್ಕೆಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಅವರು ತಮ್ಮ ತುಟಿಗಳ ಸೌಂದರ್ಯ ಹೆಚ್ಚಿಸಿಕೊಳ್ಳಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉರ್ಫಿ ಈ ಘಟನೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ 8 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.

ತುಟಿಗಳನ್ನು ಆಕರ್ಷಕವಾಗಿಸಲು ಫಿಲ್ಲರ್ ಚಿಕಿತ್ಸೆಗೆ ಒಳಗಾದ ಉರ್ಫಿಗೆ ಅದರ  ಫಲಿತಾಂಶ ಅವರ ನಿರೀಕ್ಷೆಗೆ ವಿರುದ್ಧವಾಗಿತ್ತು. ತುಟಿಗಳು ಸೌಂದರ್ಯವಾಗುವ ಬದಲು ಊದಿಕೊಂಡು ವಿಕಾರವಾದವು. ಈ ತೊಂದರೆಯಿಂದ ಪರಿಹಾರ ಪಡೆಯಲು ಫಿಲ್ಲರ್ ತೆಗೆಸುವ ಪ್ರಕ್ರಿಯೆಗೆ ಒಳಗಾಗಿದ್ದಾರೆ. ಆದರೆ ಈ ಪ್ರಕ್ರಿಯೆಯೂ ಸಹ ನೋವಿನಿಂದ ಕೂಡಿತ್ತು. ಈ ಅನುಭವವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಉರ್ಫಿ, ಸರಿಯಾದ ತಜ್ಞರನ್ನು ಆಯ್ಕೆ ಮಾಡುವ ಮಹತ್ವವನ್ನು ಈ ಸಂದರ್ಭದಲ್ಲಿ ಒತ್ತಿಹೇಳಿದ್ದಾರೆ.

ಆಶ್ಚರ್ಯವೆಂದರೆ, ಈ ಘಟನೆಯ ನಂತರವೂ ಉರ್ಫಿ ಫಿಲ್ಲರ್ ಚಿಕಿತ್ಸೆಯನ್ನು ಸಂಪೂರ್ಣವಾಗಿ ತ್ಯಜಿಸಿಲ್ಲ. ಕೆಲವು ದಿನಗಳ ನಂತರ ಮತ್ತೆ ನೈಸರ್ಗಿಕ ರೀತಿಯಲ್ಲಿ ಫಿಲ್ಲರ್ ಮಾಡಿಸುವ ಯೋಜನೆಯನ್ನು ಅವರು ಹೊಂದಿದ್ದಾರೆ. ಈ ವಿಡಿಯೋ ಮೂಲಕ, ಸೌಂದರ್ಯ ಚಿಕಿತ್ಸೆಯಲ್ಲಿ ಎಚ್ಚರಿಕೆಯಿಂದಿರಬೇಕು ಎಂಬ ಸಂದೇಶವನ್ನು ಜನರಿಗೆ ತಿಳಿಸಿದ್ದಾರೆ. ಅಭಿಮಾನಿಗಳು ಈ ವಿಡಿಯೋ ನೋಡಿ ಶಾಕ್ ಆಗಿದ್ದು, “ಇಂಥ ವಿಷಯವನ್ನು ತೆರೆದಿಟ್ಟಿರುವ ಧೈರ್ಯಕ್ಕೆ ಧನ್ಯವಾದ” ಎಂದು ಕಾಮೆಂಟ್‌ ಮಾಡಿದ್ದಾರೆ.

ಸೌಂದರ್ಯವನ್ನು ವರ್ಧಿಸಲು ಹಲವು ದಾರಿಗಳಿದ್ದರೂ, ತಜ್ಞರ ಆಯ್ಕೆಯಲ್ಲಿ ಎಚ್ಚರಿಕೆ ವಹಿಸದಿದ್ದರೆ ಈ ರೀತಿಯ ಅನಾಹುತಗಳು ಸಂಭವಿಸಬಹುದು ಎಂಬುದನ್ನು ಉರ್ಫಿ ಒತ್ತಿ ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ