ಇಂದು ಸಾಮಾಜಿಕ ಜಾಲತಾಣಗಳನ್ನು ಬಳಸದ ಜನರೇ ಇಲ್ಲ. ಆಬಾಲವೃದ್ಧರಾಗಿ ಇಂದು ಇದು ಎಲ್ಲರಿಗೂ ಅತ್ಯಗತ್ಯ. ಸಾಮಾಜಿಕ ಜಾಲತಾಣಗಳಿಂದ ದೊರಕುವ ಲಾಭ ಅಷ್ಟಿಷ್ಟಲ್ಲ. ಆದರೆ ಇಂದು ಇದರ ದುರ್ಬಳಕೆ ಅತಿಯಾಗುತ್ತಿದೆ. ಹಾಗಾದರೆ ಇದು ವರವೋ ಶಾಪವೋ…..?
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಸಾರ್ವಜನಿಕ ಸಮೂಹ ಮಾಧ್ಯಮವನ್ನು ಮೀರಿ ಬೆಳೆಯುತ್ತಿದ್ದು, ಜನಸಾಮಾನ್ಯರ ಮಧ್ಯೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದರಲ್ಲಿ ಜನಸಾಮಾನ್ಯರು ಸಾರ್ವಜನಿಕ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಾಧ್ಯವಿರುವುದರಿಂದ ಕೆಲವು ಮಾಧ್ಯಮ ತಜ್ಞರು ಇದನ್ನು ಜನಸಾಮಾನ್ಯರ ಸಬಲೀಕರಣದ ಬೆಳವಣಿಗೆ ಎಂದು ಬಣ್ಣಿಸಿರುವುದುಂಟು. ಆದರೆ ಇಂದು ಈ ಮಾಧ್ಯಮ ಬೆಳೆಯುತ್ತಿರುವ ರೀತಿ, ಅದರ ದಿಕ್ಕು ಸ್ವರೂಪ ಮತ್ತು ಬಳಕೆಯಾಗುತ್ತಿರುವ ಉದ್ದೇಶಗಳನ್ನು ಗಮನಿಸಿದರೆ ಮೈ ಜುಮ್ಮೆನ್ನುತ್ತದೆ.
ಮೊದ ಮೊದಲು ಕೆಲವು ಸಂಘಟಿತ ಗುಂಪುಗಳು ಈ ಮಾಧ್ಯಮವನ್ನು ತಾವು ನಂಬಿದ ರಾಜಕೀಯ ಸಿದ್ಧಾಂತ ಹರಡಲೆಂದು ಬಳಸಿಕೊಳ್ಳಲು ಪ್ರಾರಂಭಿಸಿದವು. ನಂತರ ತನ್ನ ಹಾದಿಗೆ ಅಡ್ಡ ಬರುವುದೆಂದು, ಈ ಅವಹೇಳನ ತಾತ್ವಿಕ ವಾದವಿವಾದಗಳ ಚೌಕಟ್ಟಿನಲ್ಲಿ ಇರುವವರೆಗೆ ಅದನ್ನು ಸಹಿಸಬಹುದಾಗಿತ್ತು. ಆದರೆ ಇಂತಹ ಗುಂಪುಗಳು ಯಾವ ಮಟ್ಟಿಗೆ ಮುಟ್ಟಿದೆ ಎಂದರೆ, ಸಾರ್ವಜನಿಕ ಜೀವನದಲ್ಲಿ ಬಹು ಮಹತ್ವದ ವ್ಯಕ್ತಿತ್ವಗಳೆಂದು ಸ್ಥಾಪಿತವಾಗಿರುವ ಚಾರಿತ್ರಿಕ ವ್ಯಕ್ತಿಗಳ ವೈಯಕ್ತಿಕ ಅವಹೇಳನಗಳನ್ನು ಆರಂಭಿಸಲಾಗಿದೆ. ನಮ್ಮ ರಾಷ್ಟ್ರಪಿತನಿಂದ ಹಿಡಿದು ನಮ್ಮ ಸ್ವಾತಂತ್ರ್ಯ ಹೋರಾಟದ ಮುಖ್ಯ ವ್ಯಕ್ತಿಗಳ ಚಾರಿತ್ರ್ಯ ಹರಣದ ನಿರಂತರ ಪ್ರಯತ್ನಗಳು ನಿರಂತರವಾಗಿ ಸಾಗುತ್ತಲೇ ಇವೆ.
ಸಾಮಾಜಿಕ ಜಾಲತಾಣಗಳಿಲ್ಲದಿದ್ದಾಗ
ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್, ವಾಟ್ಸ್ ಆ್ಯಪ್ ಇವುಗಳು ಇಲ್ಲದೇ ಇದ್ದ ಕಾಲದಲ್ಲಿ ಓರ್ವ ವ್ಯಕ್ತಿ ತನ್ನ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಸೂಕ್ತ ವೇದಿಕೆ ಎನ್ನುವುದು ಇರಲಿಲ್ಲ. ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಹತ್ವವಿರುವುದು ಹೌದಾದರೂ ಕೂಡ ಅಭಿವ್ಯಕ್ತಿಗೊಳಿಸುವುದು ಎಲ್ಲಿ ಮತ್ತು ಹೇಗೆ ಎನ್ನುವ ಪ್ರಶ್ನೆಯಿತ್ತು. ಕಳೆದ 6-7 ವರ್ಷಗಳಿಂದ ಈ ಸಾಮಾಜಿಕ ಜಾಲತಾಣಗಳು ತಲೆಯೆತ್ತಿದ್ದು, ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿದೆ.
ಇವುಗಳ ಬಳಕೆಯ ಉದ್ದೇಶವೇನು?
ಈ ಮೊದಲು ಹೇಳಿದಂತೆ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್, ವಾಟ್ಸ್ ಆ್ಯಪ್, ಹೈಕ್, ಟೆಲಿಗ್ರಾಂ ಮೊದಲಾದವುಗಳನ್ನು ನಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ವ್ಯಕ್ತಪಡಿಸುವ ಒಂದು ವೇದಿಕೆಯನ್ನಾಗಿ ನಾವು ನಮ್ಮ ವೈಯಕ್ತಿಕ ನೆಲೆಯಲ್ಲಿ ಬಳಸಬೇಕು ಮತ್ತು ಈ ಅಭಿವ್ಯಕ್ತಿಗಾಗಿಯೇ ಇವುಗಳನ್ನು ಬಳಸುತ್ತಿದ್ದೇವೆ ಎಂದು ಅತ್ಮಾವಲೋಕನ ಮಾಡಿಕೊಳ್ಳಬೇಕು.
ಇವನ್ನು ಬಳಸುವಲ್ಲಿ ಎಚ್ಚರ!
ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ಹೆಸರಿನಲ್ಲಿ ನಾವು ಮನಸ್ಸಿಗೆ ಬಂದಂತೆ ವರ್ತಿಸುವುದಕ್ಕೋ, ಮಾತನಾಡುವುದಕ್ಕೋ ಬರುವುದಿಲ್ಲ. ಹಾಗೆ ಮಾಡುವುದು ತಪ್ಪಾಗುತ್ತದೆ. ನಾಗರಿಕ ಸಮಾಜದ ನಿಯಮಾವಳಿಗಳಿಗೆ ಒಪ್ಪಿ ಬದುಕಬೇಕಾದದ್ದು ನಾಗರಿಕರು ಎನಿಸಿಕೊಂಡಿರುವ ನಿಮ್ಮ ಕರ್ತವ್ಯವೂ ಹೌದು. ನಮ್ಮ ಕರ್ತವ್ಯವನ್ನು ಪಾಲಿಸಿದಾಗಲಷ್ಟೇ ನಮಗೆ ಹಕ್ಕಿನ ಬಗ್ಗೆ ಮಾತನಾಡಲು ಮತ್ತು ನಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯ. ಸಾಮಾಜಿಕ ಜಾಲತಾಣ ಒಂದು ಸಾರ್ವಜನಿಕ ವೇದಿಕೆ ಅನಿಸಿಕೆ. ಇಲ್ಲಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಎತ್ತರದ ವೇದಿಕೆಯಲ್ಲಿದ್ದೇವೆ. ವೇದಿಕೆಯ ಕೆಳಗಡೆ ಕೇಳುಗರು ಅನೇಕರಿದ್ದಾರೆ ಎನ್ನುವ ಪರಿಜ್ಞಾನ ನಮಗಿರಬೇಕು. ಈ ಪರಿಜ್ಞಾನ ಇಲ್ಲದೇ ಹೋದಾಗ ಎಡವಟ್ಟುಗಳಾಗುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಸಂಸ್ಕಾರಯುತವಾಗಿದ್ದರೆ ಎಲ್ಲರಿಗೂ ಒಳ್ಳೆಯದು.
ಅರಿಯ ಬೇಕಾದ ನೀತಿ
ಇಲ್ಲಿ ಎಲ್ಲರು ಕೇಳಿರುವ ಒಂದು ಕಥೆ ಹೆಚ್ಚು ಸೂಕ್ತ ಮತ್ತು ಏನು ಹೇಳಲು ಹೊರಟಿದ್ದೇನೋ ಅದು ಹೆಚ್ಚು ಗಾಢವಾಗಿ ಅರ್ಥ ಮಾಡಿಕೊಳ್ಳಲು ಪೂರಕ. ಕನಕದಾಸರಿಗೆ ಯಾರೂ ನೋಡದ ಹಾಗೆ ಬಾಳೆಹಣ್ಣು ತಿನ್ನಲು ಹೇಳಿದ ಕಥೆ ಎಲ್ಲರಿಗೂ ತಿಳಿದಿರುವಂಥದ್ದೇ. ಕನಕದಾಸರ ಜೊತೆಗಾರರೆಲ್ಲ ಎಲ್ಲೆಲ್ಲಿಯೋ ಹೋಗಿ ಬಾಳೆಹಣ್ಣು ತಿಂದು ಬಂದರೂ ಕೂಡ ಕನಕದಾಸರು ಬಾಳೆಹಣ್ಣನ್ನು ತಿನ್ನಲಾರದೇ ಮರಳಿ ಗುರುಗಳ ಬಳಿ ಬಂದಿದ್ದರು. ಏಕೆ? ಯಾರು ನೋಡದಿದ್ದ ಜಾಗ ನಿನಗೊಬ್ಬನಿಗೆ ಸಿಗಲಿಲ್ಲವೇಕೆ ಎಂಬ ಗುರುಗಳ ಪ್ರಶ್ನೆಗೆ ಭಗವಂತನೊಬ್ಬ ಎಲ್ಲವನ್ನೂ ಎಲ್ಲರನ್ನು ನೋಡುತ್ತಿರುತ್ತಾನೆ, ಗಮನಿಸುತ್ತಿರುತ್ತಾನೆ. ಅವನ ಕಣ್ತಪ್ಪಿಸಿ ತಿನ್ನುವುದಾದರೂ ಹೇಗೆ ಎನ್ನುವ ಮಾರ್ಮಿಕವಾದ ಆಧ್ಯಾತ್ಮಿಕ ಉತ್ತರವನ್ನು ಕೊಡುತ್ತಾರೆ.
ಈ ಕಥೆಯನ್ನು ಇಲ್ಲಿ ಹೇಳಿದ್ದು ಏಕೆಂದರೆ ನಾವುಗಳು ನಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಫೇಸ್ ಬುಕ್, ವಾಟ್ಸ್ ಆ್ಯಪ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಹೌದಾದರೂ, ನಾವು ಒಬ್ಬಂಟಿಯಲ್ಲ. ನಮ್ಮನ್ನು ನೋಡುವ ಕಣ್ಣುಗಳು, ನಮ್ಮ ಪೋಸ್ಟ್ ನ್ನು ಗಮನಿಸುವ ಮಂದಿ ಹಲವರಿದ್ದಾರೆ ಎನ್ನುವ ಪ್ರಜ್ಞೆ ನಮ್ಮಲ್ಲಿರಬೇಕು. ಈ ಪ್ರಜ್ಞೆ ಇಲ್ಲದೇ ಇರುವುದರಿಂದ ತಾನೊಬ್ಬ ತಮಾಷೆಯಾಗಿ ಮಾತನಾಡುವುದೆನ್ನುವ ಭಾವದಿಂದ, ಮಕ್ಕಳಾಟ ಮಾಡುವುದು ನಮ್ಮ ಗೌರವವನ್ನು, ತೂಕವನ್ನು ವ್ಯಕ್ತಿತ್ವದ ಘನತೆಯನ್ನು ಹಾಳುಗೆಡವುತ್ತದೆ.
ನುಡಿದರೆ ಮುತ್ತಿನ ಹಾರದಂತಿರಬೇಕು
ತೂಕದ, ಆಳದ ಮಾತುಗಳನ್ನು ಆಡಬೇಕು. ಅಳೆದೂ ತೂಗಿ ನಿಜವಾಗಿಯೂ ಅಭಿಪ್ರಾಯಿಸಬೇಕಾದಲ್ಲಿ ಮಾತ್ರವೇ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು. ಹಗುರವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರ ಮೂಲಕ ನಮ್ಮ ವ್ಯಕ್ತಿತ್ವ ಹಗುರ ಮಾಡಿಕೊಳ್ಳಬಾರದು. ಯಾರದೇ ಮನಸ್ಸನ್ನು ನೋಯಿಸುವಂತಹ, ಘಾಸಿಗೊಳಿಸುವಂತಹ, ಪೋಸ್ಟರ್, ಕಮೆಂಟ್ ಗಳನ್ನಾಗಲಿ ಮಾಡದಿದ್ದರೆ ಒಳ್ಳೆಯದು. ಜಾತೀಯತೆ, ಮತೀಯತೆ, ಧರ್ಮ, ಪ್ರಾಂತ್ಯ ಇತ್ಯಾದಿಗಳ ಬಗ್ಗೆ ಅಭಿಪ್ರಾಯ ಪಡುವಾಗ ಜಾಗರೂಕರಾಗಿರಬೇಕು.
ಬೇಜವಾಬ್ದಾರಿ ಬೆಳವಣಿಗೆ
ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಅತ್ಯಂತ ಬೇಜವಾಬ್ದಾರಿಯುತ, ಅನೈತಿಕ ಆಗಿರುವ ಮತ್ತು ಯಾವ ಎಗ್ಗೂ ಇಲ್ಲದೆ ನಡೆದಿರುವ ವಿದ್ಯಮಾನಗಳನ್ನು ನೋಡಿದರೆ ಅಸಹ್ಯವಾಗುತ್ತದೆ. ನಮ್ಮ ರಾಜಕೀಯ ನಾಯಕರ ಬಗೆಗೋ ಅಥವಾ ಸಹವರ್ತಿಗಳ ಬಗೆಗೂ ಒಂದು ಪರೋಕ್ಷ ಟೀಕೆಯ ಮಾತನ್ನು ಬರೆದರು, ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳ ಕಾನೂನಿನ ಪ್ರಕಾರ ಮೊಕದ್ದಮೆ ಹೂಡಲು ಆದೇಶಿಸುವ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಸಾರ್ವಜನಿಕ ಜೀವನದ ಶಾಂತಿಯನ್ನು ಕದಡಬಲ್ಲದು. ಇಂತಹ ದುರುದ್ದೇಶಪೂರ್ವಕ, ವ್ಯವಸ್ಥಿತ ಪ್ರಯತ್ನಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುವುದಿಲ್ಲವೇ ಆಶ್ಚರ್ಯವಾಗುತ್ತದೆ.
ಹಾಗೆಯ ಇಂತಹ ಮಾಧ್ಯಮ ಪುಂಡಾಟಿಕೆಯನ್ನು ಹೇಳುವವರು, ಕೇಳುವವರು ಯಾರೂ ಇಲ್ಲ ಎಂಬ ಭಾವನೆ ಉಂಟಾದಾಗ ಯಾರು ಬೇಕಾದರೂ ಇಂತಹ ದುಷ್ಟ ಅವಹೇಳನಕಾರಿ ದಾಳಿ ನಡೆಸಲಾರಂಭಿಸಿದರೆ, ಸಾರ್ವಜನಿಕ ಜೀವನ ಎಂತಹ ಹೀನ ಪರಿಸ್ಥಿತಿಗೆ ಈಡಾಗಬಹುದೆಂದು ಆತಂಕವಾಗುತ್ತದೆ. ಜೊತೆಗೆ ತಂತ್ರಜ್ಞಾನ ಇಂದು ಸಾಮಾಜಿಕವಾಗಿ ವರವೋ ಶಾಪವೋ ಎಂಬ ಗಂಭೀರ ಪ್ರಶ್ನೆ ಕೇಳುವಂತಾಗಿದೆ. ಮಾಹಿತಿ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ಹರಡಲು ಒಂದು ಮಾಧ್ಯಮ ಮತ್ತು ವೇದಿಕೆಯ ಅವಶ್ಯಕತೆ ಇದೆ. ಮಾಧ್ಯಮ ವೇದಿಕೆ ಅಂತರ್ಜಾಲ ಮಾಧ್ಯಮವಾಗಿದ್ದರೆ, ಫೇಸ್ ಬುಕ್, ಇನ್ ಸ್ಟಾಗ್ರಾಮ್, ವಾಟ್ಸ್ ಆ್ಯಪ್ ಗಳು ವೇದಿಕೆಗಳಾಗಿವೆ. ಆದರೆ ಈ ವೇದಿಕೆಗಳಲ್ಲಿ ಯೋಗ್ಯವಾದ ಮಾಹಿತಿ ಮತ್ತು ಸಾರವನ್ನು ಮಾತ್ರ ಉಳಿಸಿಕೊಂಡು ದೊಡ್ಡ ಸಂಖ್ಯೆಯಲ್ಲಿ ಹರಿದು ಬರುತ್ತಿರುವ ಸುಳ್ಳು ಸುದ್ದಿ, ಬೆದರಿಕೆ ಮತ್ತು ನಿಂದನೆಗಳನ್ನು ಹೇಗೆ ತಡೆಗಟ್ಟಬಹುದೆಂಬುದೇ ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ಈಗ ಯಾವುದನ್ನು ನಿಷೇಧಿಸಬೇಕು? ಮಾಧ್ಯಮವನ್ನೋ, ವೇದಿಕೆಯನ್ನೋ ಅಥವಾ ಸಾರವನ್ನೋ ಎಂಬುದು ಯಕ್ಷಪ್ರಶ್ನೆ.
ಇದನ್ನು ನಿಷೇಧಿಸಬೇಕೇ….?
ಹೀಗಾಗಿ ಉಳಿಯುವ ಕೊನೆಯ ಆಯ್ಕೆ ಎಂದರೆ ಅಂತರ್ಜಾಲ ಮಾಧ್ಯಮವನ್ನು ನಿಷೇಧಿಸುವುದು. ಸುಳ್ಳು ಸುದ್ದಿಯ ವಾಹಕಗಳೇ ಆಗಿರುವ ಅಂತರ್ಜಾಲ ವೇದಿಕೆಗಳನ್ನು ನಿಷೇಧಿಸುವುದು. ಇದರಿಂದ ಯಾವುದೇ ವಿಧವಾದ ಪ್ರತ್ಯಕ್ಷ, ವಾಣಿಜ್ಯ ಪರಿಣಾಮವಾಗುವುದಿಲ್ಲ. ಆದರೆ ಎಲ್ಲಾ ರಾಜಕೀಯ ಪಕ್ಷಗಳು, ಅಧಿಕಾರಶಾಹಿ ಮತ್ತು ನ್ಯಾಯಾಂಗವನ್ನು ಕೂಡ ತಮ್ಮ ಹೆಗ್ಗಳಿಕೆಗಳನ್ನು ಪ್ರಚಾರ ಮಾಡಲು ಅಥವಾ ಇತರರನ್ನು ಹೀಗಳೆಯಲು ವಿಸ್ತೃತವಾಗಿ ಫೇಸ್ ಬುಕ್ ವೇದಿಕೆಯನ್ನು ಬಳಸುತ್ತಿದ್ದಾರೆ. ಈಗ ಅದನ್ನು ಹೇಗೆ ನಿಷೇಧಿಸಲು ಸಾಧ್ಯ? ಮಂತ್ರಿ ಮಹೋದಯರುಗಳು ತಮ್ಮ ಅಧಿಕೃತ ಸಂಪರ್ಕಕ್ಕೆ ಟ್ವಿಟರ್ ವೇದಿಕೆಯನ್ನು ಬಳಸುತ್ತಿರುವಾಗ ಅದನ್ನು ಹೇಗೆ ನಿಷೇಧಿಸಲು ಸಾಧ್ಯ?
ಇದುವರೆಗೂ ಸಾಮಾಜಿಕ ಜಾಲತಾಣಗಳಿಂದ ಆಗುತ್ತಿರುವ ಅನಾಹುತ ಮತ್ತು ನ್ಯೂನತೆಗಳ ಬಗ್ಗೆ ಮಾತನಾಡುತ್ತಿದ್ದೆವು. ಇಂದಿನ ಯುವಪೀಳಿಗೆ ಅದರಲ್ಲಿಯೂ ಕಾಲೇಜಿಗೆ ಹೋಗುವ ಯುವ ವಿದ್ಯಾರ್ಥಿಗಳ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ಇರಲೇಬೇಕು. ದಿನದಲ್ಲಿ ಬಹುತೇಕ ಸಮಯ ಫೇಸ್ ಬುಕ್, ವಾಟ್ಸ್ ಆ್ಯಪ್ ನಲ್ಲಿ ಕಳೆಯುತ್ತಿರುವುದು ಬೇಸರದ ಸಂಗತಿ. ಪುಸ್ತಕ ಓದುವ ಹವ್ಯಾಸವನ್ನೇ ಬಿಟ್ಟಿರುವ ವಿದ್ಯಾರ್ಥಿ ಸಮೂಹ, ನೋಟ್ಸ್ ಸಮೇತ ಇಂಟರ್ ನೆಟ್ (ಗೂಗಲ್)ನಲ್ಲಿ ಸಿಗುವ ಕಾರಣ ಯೋಚನೆ ಮಾಡುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಒಂದು ಪದದಲ್ಲಿ ಹೇಳುವುದಾದರೆ ಮೊಬೈಲ್ ಇಲ್ಲದಿದ್ದರೆ ಏನೋ ಕಳೆದುಕೊಂಡವರಂತೆ ವರ್ತಿಸುತ್ತಾರೆ. ಬಹುಶಃ ಭವಿಷ್ಯದಲ್ಲಿ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎನಿಸುತ್ತಿದೆ.
ಇಂಟರ್ ನೆಟ್ ಎಂಬ ಮಾಯಾಜಾಲ
ವಿದ್ಯಾರ್ಥಿಗಳಿರಲಿ, ಈಗ ಪುಟ್ಟ ಮಕ್ಕಳೂ ಸಹ ಇಂಟರ್ ನೆಟ್ ನ್ನು ಸಮರ್ಥವಾಗಿ ಬಳಸುತ್ತಿದ್ದಾರೆ. ಕ್ಲಿಷ್ಟಕರ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಾರೆ ನಿಜ. ಆದರೆ ಪೋಷಕರಿಗೆ ತಿಳಿಯದಂತೆ ಡೆಡ್ಲಿ ಗೇಮ್ಸ್ ಡೌನ್ ಲೋಡ್ ಮಾಡಿಕೊಂಡು ಆಟವಾಡುತ್ತಿದ್ದಾರೆ. ಪೋಷಕರನ್ನು ಕಂಡೊಡನೆ ಡಿಲೀಟ್ ಮಾಡಿಬಿಡುತ್ತಾರೆ. ಮಕ್ಕಳು ಬೇಡವಾಗಿರುವುದರ ಕಡೆಗೆ ಹೆಚ್ಚು ಆಕರ್ಷಿತರಾಗುವುದು ಮಾತ್ರವಲ್ಲ, ಕುತೂಹಲಕ್ಕಾಗಿ ಎಲ್ಲವನ್ನೂ ತಿಳಿದುಕೊಳ್ಳಲು ಯತ್ನಿಸುತ್ತಾರೆ. ಆದ್ದರಿಂದ ಮಕ್ಕಳ ಕಡೆಗೆ ಬಹಳ ಜಾಗರೂಕರಾಗಿರಬೇಕು.
ಇತ್ತೀಚೆಗೆ ಗೃಹಿಣಿಯರು ಸಹ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂಗೆ ಫೋಟೋ ಹಾಕುವುದು, ಅನಾಮಿಕರು ಫೋಟೋ ಎಡಿಟ್ ಮಾಡಿ ಬೇಕಾದ ವಿಡಿಯೋಗಳನ್ನು ಸೃಷ್ಟಿ ಮಾಡಿ ಬೆದರಿಕೆ ಹಾಕಿ ಹಣ ಕೀಳುವುದು, ಹಾಗೆಯೇ ಟಿಕ್ ಟಾಕ್ ಎಂಬ ಒಂದು ವಿಷಯ ಎಷ್ಟೋ ಜನ ಗೃಹಿಣಿಯರ ಸಂಸಾರ ಬದುಕಲು ಬಿಡದಂತೆ ಮಾಡಿದೆ. ಹಾಗೆಯೇ ಸಾವಿಗೂ ಶರಣಾಗಿದ್ದಾರೆ. ಅಷ್ಟರಮಟ್ಟಿಗೆ ಸಾಮಾಜಿಕ ಜಾಲತಾಣ ಮಕ್ಕಳು, ಗೃಹಿಣಿಯರನ್ನು ತನ್ನಡೆಗೆ ಸೆಳೆದುಕೊಳ್ಳುತ್ತಿದೆ. ಅತಿಯಾದರೂ ಅಮೃತ ವಿಷವೇ! ಹಾಗಾಗಿ ಸಾಮಾಜಿಕ ಜಾಲತಾಣಗಳು ಒಂದು ಕಡೆ ವರವೂ ಹೌದು, ಶಾಪವೂ ಹೌದು.
ವರವೋ …. ಶಾಪವೋ……?
ಸಾಮಾಜಿಕ ಜಾಲತಾಣದ ಬಳಕೆ ಒಂದು ಗೀಳಾಗಿ ಪರಿಣಮಿಸುವುದು ಹಾಗೂ ಸಮಯ ಹಾಳಾಗುವುದು.
ಸಂಬಂಧಗಳಲ್ಲಿ ಏರುಪೇರಾಗುವುದು ಉದಾ. ಗಂಡ ಹೆಂಡಿರಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಇರಿಸು ಮುರಿಸು ಉಂಟಾಗುವುದು.
ರಾಜಕಾರಣ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣ ಬಳಕೆ.
ಮಕ್ಕಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದು.
ಇದೇನಿದು ಸಾಮಾಜಿಕ ಜಾಲತಾಣಗಳ ಅನಾಹುತಗಳ ಬಗ್ಗೆ ಬರವಣಿಗೆಯೇ ಎಂದು ಅನ್ಯಥಾ ಭಾವಿಸುವುದು ಬೇಡ. ಏಕೆಂದರೆ ಸಾಮಾಜಿಕ ಜಾಲತಾಣಗಳ ಬಗ್ಗೆ ಸ್ವಲ್ಪ ಎಚ್ಚರಿಕೆಯಿರಲಿ ಎಂಬ ಕಾರಣಕ್ಕೆ ಈ ಲೇಖನ ಬರೆಯುವ ಪ್ರಯತ್ನ. ಸಾಮಾಜಿಕ ಜಾಲತಾಣ ವಿಶ್ವದ ಎಲ್ಲೆಡೆಯಲ್ಲಿರುವ ವ್ಯಕ್ತಿಗಳ ಸಂಪರ್ಕ ಸೇತುವೆ ಅದರಲ್ಲಿ ಎರಡು ಮಾತಿಲ್ಲ. ವಯಸ್ಸಾದವರು ಕುಳಿತಲ್ಲಿಯೇ ತಮ್ಮ ಹಲವಾರು ಗೆಳೆಯರನ್ನು ಕಂಡುಕೊಂಡು ಅವರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಯುವ ಜನತೆಗೆ ತಮ್ಮ ಪ್ರತಿಭೆಗಳನ್ನು ತೋರಿಸಿಕೊಳ್ಳಲು ಮುಕ್ತ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಎಷ್ಟೋ ಜನ ಗೃಹಿಣಿಯರು ಮನೆಯಲ್ಲಿಯೇ ಕುಳಿತು ಕಥೆ, ಕವನ, ಅಡುಗೆ, ಸಂಗೀತ…. ಹೀಗೆ ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಹ ಇದು ಸಹಕಾರಿಯಾಗಿದೆ. ಉತ್ತಮ ರೀತಿಯಲ್ಲಿ ಬಳಸಿಕೊಂಡರೆ ಸಾಮಾಜಿಕ ಜಾಲತಾಣ ಒಂದು ಅದ್ಭುತವಾದ ವೇದಿಕೆ. ಯಾವುದೇ ವಿಷಯದಲ್ಲಿ ಹಿತಮಿತವಾದ ಬಳಕೆ ಇದ್ದರೆ ಚೆನ್ನ. ಹಾಗಾಗಿ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್, ಟ್ವಿಟರ್, ಫೇಸ್ ಬುಕ್…. ಇವುಗಳನ್ನು ಬಳಸುವಾಗ ಜಾಗರೂಕತೆಯಿಂದ ಬಳಸಿ. ದುರುಪಯೋಗ ಪಡಿಸಿಕೊಳ್ಳದೆ ಸದುಪಯೋಗ ಪಡಿಸಿಕೊಳ್ಳಿ ಎಂಬುದಷ್ಟೇ ಈ ಬರವಣಿಗೆಯ ಮೂಲ ಉದ್ದೇಶ.
– ಕೀರ್ತಿ ಕಿರಣ್ ಕುಮಾರ್