ಫ್ರಿಝಿ ಹೇರ್‌ ಅಂದ್ರೆ ಶುಷ್ಕ, ಹೇಗ್ಹೇಗೋ ಹರಡಿಕೊಂಡು, ಸಿಕ್ಕುಸಿಕ್ಕಾಗಿ, ಹಿಂಸೆ ನೀಡುವ ಕೂದಲು. ಇದನ್ನು ಸಂಭಾಳಿಸುವುದೇ ಬಲು ಕಷ್ಟ. ಇದಕ್ಕೆ ಕಾರಣ ಕೂದಲಿನಲ್ಲಿ ಆರ್ದ್ರತೆ ಮತ್ತು ಪೋಷಣೆಯ ಕೊರತೆ. ಎಷ್ಟೋ ಸಲ ಕೂದಲನ್ನು ಅತಿ ಹೆಚ್ಚು ಬಾರಿ ಡ್ರೈಯರ್‌, ಬ್ಲೋಯರ್‌ ಗಳಿಗೆ ಒಡ್ಡಿಕೊಳ್ಳುವುದರಿಂದಲೂ ಹೀಗಾಗುತ್ತದೆ. ಇದಕ್ಕೆ ಪರಿಹಾರವೇನು?

ಉತ್ತಮ ಕ್ವಾಲಿಟಿಯ ಶ್ಯಾಂಪೂ : ಶ್ಯಾಂಪೂನಲ್ಲಿ ಸಲ್ಫೇಟ್‌ ಪ್ರಮಾಣ ಅಧಿಕವಾಗಿರುತ್ತದೆ, ಹೀಗಾಗಿ ಕೂದಲಿನ ನೈಸರ್ಗಿಕ ತೈಲಾಂಶವನ್ನು ಹೀರಿಬಿಡುತ್ತದೆ. ಹೀಗಾಗಿ ನೀವು ದಿನನಿತ್ಯ ಬಳಸುವ ಶ್ಯಾಂಪೂ ಸಲ್ಪೇಟ್‌ ಫ್ರೀ ಪ್ಯಾರಾಬೀನ್‌ ಫ್ರೀ ಆಗಿರಬೇಕು. ಜೊತೆಗೆ ಇದರಲ್ಲಿ ಗ್ಲಿಸರಿನ್‌ ಪ್ರಮಾಣ ಎಷ್ಟಿದೆ ಎಂಬುದನ್ನೂ ಗಮನಿಸಿಕೊಳ್ಳಬೇಕು. ಗ್ಲಿಸರಿನ್‌ ಕೂದಲಿನ ಫ್ರಿಝಿನೆಸ್‌ ತಗ್ಗಿಸುತ್ತದೆ. ನೀವು ತಲೆಗೆ ಶ್ಯಾಂಪೂ ಬಳಸುವಾಗೆಲ್ಲ ಕೈಗೆ ಶ್ಯಾಂಪೂ ಹಾಕಿಕೊಂಡು, ಅದಕ್ಕೆ 4-5 ಹನಿ ನೀರು ಬೆರೆಸಿಕೊಂಡು, ನಂತರ ತಲೆಗೆ ಹಚ್ಚಿ ಮಸಾಜ್‌ ಮಾಡಬೇಕು.

ನಿಯಮಿತವಾಗಿ ಹೇರ್ಕಟ್ಮಾಡಿಸಿ : ನಿಮ್ಮ ಕೂದಲನ್ನು ನಿಯಮಿತವಾಗಿ ಟ್ರಿಮ್ಮಿಂಗ್‌ ಮಾಡಿಸುತ್ತಿರಿ. ಇದರಿಂದ ಫ್ರಿಝಿನೆಸ್ ಸೀಳು ತುದಿಯ ಸಮಸ್ಯೆ ಎರಡೂ ತಗ್ಗುತ್ತದೆ. 2 ತಿಂಗಳಿಗೊಮ್ಮೆ ತಪ್ಪದೆ ಹೀಗೆ ಮಾಡಿಸಿ.

ಡಯೆಟ್‌ : ನಿಮ್ಮ ಆಹಾರ ಕೇವಲ ಚರ್ಮಕ್ಕೆ ಮಾತ್ರವಲ್ಲದೆ, ನಿಮ್ಮ ಕೂದಲಿಗೂ ಪೋಷಣೆ ನೀಡುತ್ತದೆ. ಹೀಗಾಗಿ ಸದಾ ಪ್ರೋಟೀನ್‌ ಯುಕ್ತ ಆಹಾರ ಸೇವಿಸಿ. ಸಂಜೆ ಹೊತ್ತು ಅಗತ್ಯ ಡ್ರೈಫ್ರೂಟ್ಸ್ ಸೇವಿಸಿ, ಗ್ರೀನ್‌ ಟೀ ಕುಡಿಯಿರಿ. ಇದರ ಜೊತೆ ಟೊಮೇಟೊ, ಫ್ಲಾಕ್ಸ್ ಸೀಡ್ಸ್, ಹಣ್ಣು, ಪನೀರ್‌, ನೆನೆಸಿದ ಕಡಲೆಕಾಳು ಇತ್ಯಾದಿಗಳನ್ನು ದಿನನಿತ್ಯ ಸೇವಿಸಿ.

ತಲೆ ಸ್ನಾನದ ನಂತರ ಬ್ರಶ್ಶಿಂಗ್ಮಾಡಿ : ಇಂಥ ಫ್ರಿಝಿ ಕೂದಲನ್ನು ತಲೆ ಸ್ನಾನದ ನಂತರ ಬಾಚಣಿಗೆಯಿಂದ ನೀಟಾಗಿ ಬ್ರಶ್ ಮಾಡುವುದೇ ಸರಿ. ಸದಾ ಕೆಳ ಭಾಗದಿಂದ ಮೇಲ್ಭಾಗಕ್ಕೆ ಬ್ರಶ್‌ ಮಾಡಬೇಕು.

ಹೀಟಿಂಗ್ಟೂಲ್ಸ್ ಬೇಡ : ನೀವು ಆಗಾಗ ಡ್ರೈಯರ್‌, ಬ್ಲೋಯರ್‌ ನಂಥ ಹೀಲಿಂಗ್‌ ಟೂಲ್ಸ್ ಬಳಸುತ್ತಿದ್ದರೆ, ಆದಷ್ಟು ಅದನ್ನು ದೂರವಿರಿಸಿ. ಇಲ್ಲದಿದ್ದರೆ ಕೂದಲಿನ ನೈಸರ್ಗಿಕ ತೈಲಾಂಶ, ಮಾಯಿಶ್ಚರೈಸರ್‌ ಎಲ್ಲಾ ಹಿಂಗಿಹೋಗುತ್ತದೆ. ಇಂಥ ಟೂಲ್ಸ್ ನಿರ್ಜೀವ, ಕಾಂತಿಹೀನ, ಡ್ರೈ ಕೂದಲಿಗೆ ಮೂಲ. ಯಾವುದಾದರೂ ವಿಶೇಷ ಪಾರ್ಟಿಗೆ ಹೋಗಬೇಕೆಂದು ನೀವು ನಿಮ್ಮ ಕೂದಲನ್ನು ಕಲ್ಸ್ ಯಾ ಸ್ಟ್ರೇಟ್‌ ಮಾಡಲಿದ್ದರೆ, ಅದರ ಸೆಟ್ಟಿಂಗ್‌ ನ್ನು ಸದಾ ಕೂಲ್ ‌ಮೂಡ್‌ ಗೆ ಇಟ್ಟಿರಿ. ಆದಷ್ಟೂ ಲೋ ಮೋಡ್‌ ನಲ್ಲಿ ಬಳಸಿರಿ.

ಸೂಕ್ತ ಬಾಚಣಿಗೆ ಬಳಸಿರಿ : ಇಂಥ ಕೂದಲಿಗಾಗಿ ಬ್ರಾಂಡ್‌ ಬ್ರಿಸಲ್ಸ್ ಹೇರ್‌ ಬ್ರಶ್‌ ಯಾ ಕೂಂಬ್‌ ಬಳಸಬೇಕು. ಅನಿವಾರ್ಯವಾಗಿ ಒದ್ದೆ ಕೂದಲು ಬಾಚಬೇಕಾದಲ್ಲಿ, ವೈಡ್‌ ಬ್ರಶ್‌ ಬಳಸಿಕೊಳ್ಳಿ.

ಕಂಡೀಶನರ್ಬಳಸಿರಿ : ಕಂಡೀಶನರ್‌ಸೀರಂ ಬಳಕೆಯಿಂದ ಕೂದಲು ಎಷ್ಟೋ ಸಾಫ್ಟ್ ಆಗುತ್ತದೆ. ಶ್ಯಾಂಪೂ ನಂತರ, ಕೂದಲಿನ ಬುಡದಿಂದ ತುದಿವರೆಗೂ ಕಂಡೀಶನರ್‌ ಹಚ್ಚಿ, 2-3 ನಿಮಿಷಗಳ ನಂತರ, ಸಾಫ್ಟ್ ಮಸಾಜ್‌ ಮಾಡಿ, ತೊಳೆಯಿರಿ. ಇದರಿಂದ ಕೂದಲು ಸಶಕ್ತಗೊಳ್ಳುತ್ತದೆ.

ಫ್ರಿಝಿ ಕೂದಲಿಗಾಗಿ ಮನೆಮದ್ದು

ಬಾಳೆಹಣ್ಣಿನ ಮಾಸ್ಕ್ : ಬಾಳೆಹಣ್ಣಿನಲ್ಲಿರುವ ವಿಟಮಿನ್ಸ್ ನೈಸರ್ಗಿಕ ತೈಲಾಂಶ, ಕಾರ್ಬೋಹೈಡ್ರೇಟ್ಸ್, ಪೊಟಾಶಿಯಂ, ಝಿಂಕ್‌, ಕಬ್ಬಿಣಾಂಶಗಳ ಮೂಲ ಸ್ರೋತವಾಗಿದೆ. ನಿರ್ಜೀವ, ಡ್ರೈ ಹೇರ್‌ ಗೆ ಇದು ಉಪಕಾರಿ. ಇದು ಕೂದಲನ್ನು ಮೃದುಗೊಳಿಸಿ ಹೊಳೆಯುವಂತೆ ಮಾಡುತ್ತದೆ. ಮ್ಯಾಶ್‌ ಮಾಡಿದ 1 ಮಾಗಿದ ಬಾಳೆ, 1 ಚಮಚ ಜೇನುತುಪ್ಪ, 2 ಚಮಚ ಆಲಿಲ್ ‌ಆಯಿಲ್ ‌ನ್ನು ಚೆನ್ನಾಗಿ ಬೆರೆಸಿಕೊಂಡು ತಲೆಗೆ ಹಚ್ಚಿ ಮೃದುವಾಗಿ ಮಸಾಜ್‌ ಮಾಡಿ. ಅರ್ಧ ಗಂಟೆ ಬಿಟ್ಟು ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ. ನಂತರ ಅಗತ್ಯವಾಗಿ ಕಂಡೀಶನರ್‌ ಹಚ್ಚಿಕೊಳ್ಳಿ.

ಮಸೆದ 1 ಬಾಳೆ, 4-5 ಚಮಚ ಮೊಸರು, ತುಸು ಗುಲಾಬಿ ಜಲ, 1 ಚಮಚ ನಿಂಬೆರಸ ಬೆರೆಸಿ ತಲೆಗೆ ಹಚ್ಚಿ. 1 ಗಂಟೆ ನಂತರ ತಲೆ ತೊಳೆಯಿರಿ.

ಹಾಲು ಜೇನಿನ ಹೇರ್ಮಾಸ್ಕ್ : 4-5 ಚಮಚ ಹಾಲಿಗೆ, 2-3 ಚಮಚ ಜೇನು ಬೆರೆಸಿ, ನಿಮ್ಮ ಕೈ ಬೆರಳುಗಳಿಂದ ಇದನ್ನು ಕೂದಲಿಗೆ ತೀಡಿರಿ. ಅರ್ಧ ಗಂಟೆ ಬಿಟ್ಟು ಶ್ಯಾಂಪೂನಿಂದ ತೊಳೆಯಿರಿ.

ಮೊಟ್ಟೆಯ ಮಾಸ್ಕ : ಮೊಟ್ಟೆಯ ಬಿಳಿ ಭಾಗವನ್ನು ಒಂದು ಬಟ್ಟಲಿಗೆ ಹಾಕಿ. ಇದಕ್ಕೆ 1 ನಿಂಬೆ ಹಿಂಡಿಕೊಳ್ಳಿ. ಇದನ್ನು ಚೆನ್ನಾಗಿ ಗೊಟಾಯಿಸಿ ಕೂದಲಿಗೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ತೊಳೆಯಿರಿ.

ಮೆಹೆಂದಿ ಮಾಸ್ಕ್ : ಶುಷ್ಕ, ಗುಂಗುರಾದ ಕೂದಲಿಗೆ ಮೆಹೆಂದಿ ಉಪಯುಕ್ತ ಹರ್ಬ್‌. 1 ಕಪ್‌ ಟೀ ಡಿಕಾಕ್ಷನ್‌ ಗೆ, 3-4 ಚಮಚ ಮೆಹೆಂದಿ ಪೌಡರ್‌ ಹಾಕಿ ಕದಡಿರಿ. ತುಸು ಮೊಸರು ಬೆರೆಸಿ ಪೇಸ್ಟ್ ಮಾಡಿ. ಇದನ್ನು ಕೂದಲಿಗೆ ಹಚ್ಚಿ,ಅರ್ಧ ಗಂಟೆ ಬಿಟ್ಟು ತೊಳೆಯಿರಿ. ರಾತ್ರಿಯಿಡೀ ಹಾಗೇ ಬಿಟ್ಟು ಮಾರನೇ ದಿನ ತೊಳೆದರೆ ಹೆಚ್ಚಿನ ಲಾಭವಿದೆ.

ಆಯಿಲ್ ನಿಂದ ಆರ್ದ್ರತೆ

ಆಲಿವ್ ‌ಆಯಿಲ್ ನ್ನು ತುಸು ಬೆಚ್ಚಗೆ ಮಾಡಿ. ಇದನ್ನು ಕೂದಲಿಗೆ ನೀಟಾಗಿ ಹಚ್ಚಿರಿ. ಅರ್ಧ ಗಂಟೆ ಹಾಗೇ ಬಿಡಿ. ಇದೇ ತರಹ ಕೊಬ್ಬರಿ ಎಣ್ಣೆಯಿಂದಲೂ ಮಾಡಿ. ಕೊಬ್ಬರಿ ಎಣ್ಣೆಗೆ ಜೋಜೋಬಾ ಆಯಿಲ್ ‌ಬೆರೆಸಿ ಸಹ ಹೀಗೇ ಮಾಡಬಹುದು. ನಂತರ ಲೈಟಾಗಿ ಮಸಾಜ್‌ ಮಾಡಿ, ಅರ್ಧ ಗಂಟೆ ಬಿಟ್ಟು ಶ್ಯಾಂಪೂ ಹಚ್ಚಿ ಸ್ನಾನ ಮಾಡಿ.

ಶ್ಯಾಂಪೂ ಕಂಡೀಶನರ್‌ ಬಳಸಿದ ನಂತರ ಕೂದಲನ್ನು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ ಕೂದಲನ್ನು ಟವೆಲ್ ‌ನಿಂದ ಒರೆಸಿಕೊಳ್ಳಿ. ಆಮೇಲೆ 4-5 ಹನಿ ಸೀರಂ ತೆಗೆದು ತಲೆಗೆ ಹಚ್ಚಿಕೊಳ್ಳಿ, ನಂತರ ಅದು ಸಹಜವಾಗಿ ಒಣಗಲು ಮಾಡಿ. ಸೀರಂ ಕೂದಲಿಗೆ ಬೇಕಾದ ಸಹಜ ಆರ್ದ್ರತೆ ಒದಗಿಸುತ್ತದೆ, ಮೃದುಗೊಳಿಸಿ, ಕಾಂತಿಯುತವಾಗಿ ಮಾಡುತ್ತದೆ. ನಿಮ್ಮ ಕೂದಲಿಗೆ ಸೂಕ್ತವಾಗುವಂಥ ಬಗೆಯ ಸೀರಂ ಮಾತ್ರ ಆರಿಸಬೇಕು.

ಜಿ. ಪಂಕಜಾ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ