ಬಾಲ್ಯ ಎನ್ನುವುದು ಎಲ್ಲರ ಜೀವನದಲ್ಲಿ ಸದಾ ನೆನಪಿಸಿಕೊಳ್ಳುವ ಒಂದು ಹಂತ, ಬಾಲ್ಯದ ನೆನಪುಗಳು ಸಾಮಾನ್ಯವಾಗಿ ನಾವು ದೊಡ್ಡವರಾದ ಮೇಲೆ, ಅದೂ ವಯಸ್ಸಾದ ಮೇಲೆ ಸದಾ ನಮ್ಮನ್ನು ಕಾಡುತ್ತಿರುತ್ತದೆ. ಬಾಲ್ಯದ ಶಾಲೆ, ಸಹಪಾಠಿಗಳು, ಗೆಳೆಯ ಗೆಳತಿಯರು, ನಮ್ಮನ್ನು ಗೋಳು ಹೊಯ್ದುಕೊಂಡ ಕೆಲವರು, ನಮ್ಮ ಆತ್ಮೀಯರೆನಿಸಿಕೊಂಡ ಹಲವರು….. ಈ ರೀತಿ ಶಾಲೆಯ ನೆನಪುಗಳು ನಮ್ಮ ಮನದಲ್ಲಿ ಮೂಡುವುದು ಸಹಜ.

ನಮ್ಮ ಚಿಕ್ಕಂದಿನಲ್ಲಿ ಒಂದು ಚಂದನದ ಗೊಂಬೆಗಾಗಿ ಜಗಳವಾಡುತ್ತಿದ್ದ ಆ ಗೆಳತಿ ಈಗಲೂ ನನ್ನ ಮನಸ್ಸಿಗೆ ಬರುತ್ತಾಳೆ. ಅವಳು ಆ ಗೊಂಬೆಯನ್ನು ನನಗೆ ಕೊಡದೆ ನನ್ನನ್ನು ಅನೇಕ ಬಾರಿ ಅಳಿಸುತ್ತಿದ್ದುದೂ ಉಂಟು. ಈ ಎಲ್ಲದರ ಜೊತೆ ಬರದು ನಮ್ಮ ಶಿಕ್ಷಕರ ನೆನಪು, ಕೆಲವರು ಈಗಲೂ ಮನದ ಮುಂದೆ ಮೂಡುತ್ತಾರೆ. ನಮ್ಮ ಶಾಲಾ ದಿನಗಳ ನೆನಪನ್ನು ಜಾಗೃತಗೊಳಿಸುತ್ತಾರೆ. ಚಂದದ ಚುರುಕಿನ ಲೀಲಾ ಟೀಚರ್‌, ಸೌಮ್ಯ ಸ್ವಭಾವದ ಕುಸುಮಾ ಟೀಚರ್‌, ಚರಿತ್ರೆಯ ತರಗತಿಯಲ್ಲಿ ಬ್ಲೂಸ್ಟಾರ್‌ ಆಪರೇಶನ್‌ ನ್ನು ರಸವತ್ತಾಗಿ ಎಲ್ಲವನ್ನೂ ವಿವರಿಸುತ್ತಿದ್ದ ಅಶೋಕ್‌ ಕುಮಾರ್‌ ಸರ್‌. ನಮ್ಮ ಕಾಗುಣಿತದ ತಪ್ಪುಗಳನ್ನು ತೋರಿಸಿ ಮುಖದಲ್ಲಿ ನೀರಿಳಿಸುತ್ತಿದ್ದ ಸುರೇಶ್‌ ಸರ್‌. ಅಕ್ಕನಿಗೆ ಸಂಗೀತ ಹೇಳಿಕೊಡಲು ಬರುತ್ತಿದ್ದು, ನನಗೂ ಹಾಡುಗಳನ್ನು ಹೇಳಿ ಕೊಡುತ್ತಿದ್ದ ರಾಮಶೇಷು ಸರ್‌…. ಹೀಗೆ ನೆನೆಸಿಕೊಳ್ಳುತ್ತಾ ಹೋದರೆ ಇನ್ನೂ ತುಂಬಾ ಗುರುಗಳು ನೆನಪಿಗೆ ಬರುತ್ತಾರೆ.

Newton-05

ಶಿಕ್ಷಕರ ದಿನಾಚರಣೆಯ ನೆಪದಿಂದ ಗುರುಗಳನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಹೌದು. ನಮ್ಮ ಜೀವನವನ್ನು ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಬಹಳ ಹಿರಿದು. ಕೆಲವರಂತೂ ಈಗಲೂ ನಮ್ಮ ನೆನಪಿನಂಗಳದಲ್ಲಿ ಸದಾ ಹಸಿರಾಗಿ ರಾರಾಜಿಸುತ್ತಾರೆ.

ಈ ಸಂದರ್ಭದಲ್ಲಿ ಇತ್ತೀಚಿಗೆ ಭೇಟಿಯಾದ, ಮೂವತ್ತು ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿದ ಒಬ್ಬ ಮಹಿಳೆ ನನ್ನ ಕಣ್ಮುಂದೆ ಬರುತ್ತಾರೆ. ಅವರ ಅನುಭವದ ಕೆಲವು ಮಾತುಗಳನ್ನು ತಿಳಿಯೋಣ :

ಶಿಕ್ಷಕಿಯಾಗಿ ಕಲಿಸಿದೆ, ಗ್ರಹಿಸಿದೆ

ಜ್ಯೋತಿ ಎನ್ನುವ ಸರಳ ಸ್ವಭಾವದ ಮಹಿಳೆ. ಬಳ್ಳಾರಿ ಜಿಲ್ಲಿಯ ಕೌಲ್ ಬಜಾರ್‌ ನಲ್ಲಿ ಹುಟ್ಟಿ ನಂತರ 1976ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು. ನ್ಯೂಟನ್‌ ಎಜುಕೇಶನ್‌ ಸೊಸೈಟಿ, ನ್ಯೂಟನ್‌ ಪಬ್ಲಿಕ್‌ ಸ್ಕೂಲ್‌, ಮಂಗಮ್ಮನಪಾಳ್ಯದ ಈ ಸಂಸ್ಥೆಯಲ್ಲಿ ಇವರು 1991-2002ರವರೆಗೆ ಪೂರ್ವ ಪ್ರಾಥಮಿಕ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, 2003ರಿಂದ ಈವರೆಗೂ ಮುಖ್ಯ ಶಿಕ್ಷಕಿಯಾಗಿ 30 ವರ್ಷಗಳಲ್ಲಿ ಬಹಳಷ್ಟು ಕಲಿಸಿ, ಕಲಿತುಕೊಳ್ಳುತ್ತಿದ್ದೇನೆ ಎನ್ನುವುದು ಇವರ ವಿನಯಪೂರಿತ ನುಡಿ.

ಪೀಳಿಗೆಯಲ್ಲಿನ ಅಂತರ 30 ವರ್ಷದ ಹಿಂದಿನ ಮಕ್ಕಳಿಗೆ ಹಾಗೂ ಈಗಿನ ವಿದ್ಯಾರ್ಥಿಗಳಿಗೆ ಬಹಳ ವ್ಯತ್ಯಾಸವಿದೆ. ಆಗ ಪ್ರತಿಯೊಂದು ವಿಷಯದಲ್ಲೂ ಮಕ್ಕಳು ಯಾವ ಮಾಧ್ಯಮಗಳ ಸಹಾಯವಿಲ್ಲದೆ, ಚಟುವಟಿಕೆಗಳು ಅಥವಾ ವಿಜ್ಞಾನದ ಬಗ್ಗೆ ಬೇರೆ ಯಾವುದೇ ಕಾರ್ಯಗಳಲ್ಲೂ ಪುಸ್ತಕಗಳನ್ನು ಓದಿ ಗ್ರಂಥಾಲಯಗಳ ಮೂಲಕ ನಿಘಂಟುಗಳಲ್ಲಿ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಿ, ಸ್ವತಃ ಕಷ್ಟಪಟ್ಟು ಓದುತ್ತಿದ್ದರು. ಈಗ ಪೋಷಕರ ಮತ್ತು ಮಾಧ್ಯಮಗಳ ಸಹಾಯದಿಂದ ಬಹಳಷ್ಟು ಕಲಿಯುತ್ತಿದ್ದಾರೆ. ಪೋಷಕರಿಗೆ ಅವರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಇಂದು ಹೆಚ್ಚಿನ ಒತ್ತಡವಿದೆ, ಎನ್ನುತ್ತಾರೆ.

ವಯಸ್ಕರ ಶಿಕ್ಷಣದ ಬಗ್ಗೆ ಒಲವು

ಇವರಿಗೆ ಚಿಕ್ಕಂದಿನಿಂದಲೂ ವಯಸ್ಕರ ಶಿಕ್ಷಣ ನಡೆಸಲು ಬಹಳ ಆಸಕ್ತಿ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕಡೆಗೆ ಒಬ್ಬ ಆದರ್ಶ ಮತ್ತು ಉತ್ತಮ ಶಿಕ್ಷಕಿಯಾಗಬೇಕು ಎಂದು ಶಾಲೆಗೆ ಸೇರಿ ಶಾಲೆಯಲ್ಲಿ ಕೆಲಸ ನಿರ್ವಹಿಸಿಕೊಂಡು, ಶಾಲೆಯ ಕಾರ್ಯದರ್ಶಿಗಳ ಮುಖಾಂತರ ಇವರು ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಈಗಲೂ ಸಮಯ ಸಿಕ್ಕಾಗ ಅಂಧ ವಿದ್ಯಾರ್ಥಿಗಳಿಗೆ ಪಾಠಗಳನ್ನು ರೆಕಾರ್ಡ್‌ ಮಾಡಿ ಅವರಿಗೆ ತಲುಪಿಸುತ್ತಿರುತ್ತಾರೆ.

ಸಂದೇಶ ಸಾಧನೆ ಮಾಡಿದ ಪ್ರತಿಯೊಬ್ಬ ಪುರುಷನ ಹಿಂದೆ ಹೇಗೆ ಒಬ್ಬ ಮಹಿಳೆ ಇರುತ್ತಾಳೋ ಹಾಗೇ ಯಶಸ್ಸನ್ನು ಗಳಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯ ಹಿಂದೆ ಅನುಭವಿ ಮತ್ತು ಮಹಾನ್‌ ಶಕ್ತಿಯಾಗಿ ಒಬ್ಬ ಶಿಕ್ಷಕರಿರುತ್ತಾರೆ. ಈಗಿನ ವಿದ್ಯಾರ್ಥಿಗಳಿಗೆ ನನ್ನ ಸಂದೇಶ ಎಂದರೆ, ಶಾಲೆಯಲ್ಲಿ ನಿಮ್ಮ ಗುರುಗಳು ವಿವರಿಸಿದ ಪಾಠವನ್ನು ಶಾಲೆಗೆ ಬರುವ ಮುನ್ನ ಮತ್ತು ವಿವರಿಸಿದ ಬಳಿಕ ಬಹಳಷ್ಟು ಓದಿ, ಮತ್ತೆ ಮತ್ತೆ ಮನನ ಮಾಡಿಕೊಳ್ಳಿ. ಆದಷ್ಟು ಮುಂಜಾನೆ ಎದ್ದು ಪಠ್ಯಪುಸ್ತಕಗಳನ್ನು ಓದಿದರೆ ಆಗ ನಿಮಗೆ ನೀವೇ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬಹುದು. ಈಗಿನ ಮೊಬೈಲ್ ‌ನಲ್ಲಿ ಬರುವಂತಹ ವಾಟ್ಸ್ ಆ್ಯಪ್‌, ಫೇಸ್‌ ಬುಕ್‌, ಇನ್ ಸ್ಟಾಗ್ರಾಂ, ಯೂ ಟ್ಯೂಬ್‌ ಇವುಗಳಿಂದ ಆದಷ್ಟೂ ದೂರವಿರಿ. ನಿಮ್ಮ ಕಣ್ಣು ಮತ್ತು ಕಿವಿಗಳನ್ನು ರಕ್ಷಿಸಿಕೊಳ್ಳಿ ಹಾಗೂ ನಿಮ್ಮ ತಾಯಿ ತಂದೆಯರ ಆಸೆಗಳನ್ನು ಪೂರೈಸಿ, ಗುರುಹಿರಿಯರಿಗೆ ಗೌರವವನ್ನು ಕೊಡಿ ಎಂದು ಹಾರೈಸುತ್ತೇನೆ, ಎನ್ನುವುದು ವಿದ್ಯಾರ್ಥಿಗಳಿಗೆ ಇವರು ನೀಡುವ ಸಂದೇಶ.

ಗುರುಗಳಿಗೆ ಯಾವಾಗಲೂ ನಮ್ಮ ವಿದ್ಯಾರ್ಥಿಗಳ ಬಗ್ಗೆ ಒಲವು, ಅವರು ಪ್ರಸಿದ್ಧರಾದರೆ ತಾವೇ ಪ್ರಸಿದ್ಧಿಯನ್ನು ಪಡೆದಂತೆ ಸಂತಸ ಪಡುತ್ತಾರೆ. ವಿದ್ಯಾರ್ಥಿಗಳು ಪ್ರತಿ ಬಾರಿ ನಮಸ್ಕಾರ ಮೇಡಂ ಅಥವಾ ಸರ್‌ ಎಂದಾಗ ಹೃದಯ ತುಂಬಿ ಬರುತ್ತದೆ. ನಾವು ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್‌ ಪಾಠ ಹೇಳಿ ಕೊಡಲು ಹೋಗುತ್ತಿದ್ದಾಗ ಆ ಮಕ್ಕಳು ದಾರಿಯಲ್ಲಿ ಸಿಕ್ಕಿದಾಗೆಲ್ಲಾ, `ನಮಸ್ತೆ ಟೀಚರ್‌’ ಎನ್ನುತ್ತಿದ್ದರು. ಆ ಮಕ್ಕಳ ಪ್ರೀತಿ ಕಂಡಾಗ ಸಂತಸವೆನಿಸುತ್ತಿತ್ತು.  ಗುರು ಶಿಷ್ಯರ ಬಾಂಧವ್ಯವೆಂದರೆ ಇದೆ ಏನೋ? ನಮ್ಮ ಲೆಕ್ಚರರ್‌ ಒಬ್ಬರು, ಮುಂದೆ ನೀವು ಪ್ರಸಿದ್ಧರಾದಾಗ ನನ್ನನ್ನು ನೋಡಿ ಗುರುತಿಸಿ ಒಂದು ಮುಗುಳ್ನಗೆ ಬೀರಿ ಸಾಕು ಎನ್ನುತ್ತಿದ್ದರು. ಅದು ನಿಜಕ್ಕೂ ನಾವು ಗುರುಗಳಿಗೆ ನೀಡಬಲ್ಲ ಒಂದು ಕಾಣಿಕೆಯೂ ಹೌದಲ್ಲವೇ? ಹ್ಯಾಪಿ ಟೀಚರ್ಸ್‌ ಡೇ!

ಮಂಜುಳಾ ರಾಜ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ