ಮೊದಲು `ಬಿಗ್ ಬಾಸ್’ ನಂತರ `ಫಿಯರ್ ಫ್ಯಾಕ್ಟರ್’ ಶೋಗಳಲ್ಲಿ ನಟಿಸಿದ ನಿಕ್ಕಿ ತಂಬೋಲಿ, ಪಡ್ಡೆ ಹುಡುಗರ ಅಚ್ಚುಮೆಚ್ಚಿನ ಗ್ಲಾಮರಸ್ ಗೊಂಬೆಯಾದಳು. ಮಹಾರಾಷ್ಟ್ರದ ಜೌರಂಗಾಬಾದ್ ನ 27 ವರ್ಷದ ಈಕೆ ದಕ್ಷಿಣದ ಜೊತೆ ಬಾಲಿವುಡ್ ನಲ್ಲೂ ಮುಖ ತೋರಿಸಿದ್ದಿದೆ. ಇತ್ತೀಚೆಗೆ ನಿಕ್ಕಿ, FB ಮುಖಾಂತರ ಅಭಿಮಾನಿಗಳಿಗೆ ತನ್ನ ಬೋಲ್ಡ್ ಅವತಾರ ಪ್ರದರ್ಶಿಸ ತೊಡಗಿದ್ದಾಳೆ. ಒಮ್ಮೆ ಬ್ಯಾಕ್ ಲೆಸ್, ಒಮ್ಮೊಮ್ಮೆ ಡೀಪ್ ನೆಕ್ ಡ್ರೆಸೆಸ್ ಧರಿಸಿ ನಿಕ್ಕಿ FBನಲ್ಲಿ ಮಿಂಚಿದ್ದೇ ಮಿಂಚಿದ್ದು! ಈಕೆ ಉರ್ಫಿಗೆ ಪೈಪೋಟಿ ನೀಡುತ್ತಿಲ್ಲ ತಾನೇ?
ಅನನ್ಯಾ ಈಗ ಹೊಸ ಸೀಕ್ವೆಲ್ ಕ್ವೀನಾ….
`ಡ್ರೀಂ ಗರ್ಲ್’ ಚಿತ್ರವಂತೂ ಆಯುಷ್ಮಾನ್ ಖುರಾನಾದೇ ಯಶಸ್ವಿ ಚಿತ್ರ ಎಂದು ಹೆಸರು ಗಳಿಸಿತ್ತು. ಇದರಲ್ಲಿ ಅನನ್ಯಾಳಿಗೆ ಹೆಸರಿಗಷ್ಟೇ ಮರ ಸುತ್ತುವ ನಾಯಕಿ ಬೇಕು ಅಂತ ಆ ಪಟ್ಟ ಕಟ್ಟಿದ್ದರು. ಇದೀಗ ಸುದ್ದಿಗಾರರ ಹೊಸ ಸರದಿ ಎಂದರೆ ಈಕೆ `ಪತಿ ಪತ್ನಿ ಔರ್ ವೋ-2′ ಚಿತ್ರದಲ್ಲೂ ಕಾಣಿಸಲಿದ್ದಾಳಂತೆ! ಅಂದ್ರೆ ಅನನ್ಯಾ ಸೀಕ್ವೆಲ್ ಕ್ವೀನ್ ಆಗಲು ಹೊರಟಿದ್ದಾಳಾ? ಅಂದಹಾಗೆ ಇದುವರೆಗಿನ ಇವಳ ಕೆರಿಯರ್ ನಲ್ಲಿ ಇವಳದೇ ಛಾಪು ಮೂಡಿಸುವಂಥ ಒಂದೇ ಒಂದು ಚಿತ್ರ ಬಂದಿಲ್ಲ ಎಂಬುದು ದುರಂತವಾದರೂ ನಿಜ! ಹೋ ಅನನ್ಯಾ ಡಿಯರ್, ಸ್ವಲ್ಪ ಯೋಚಿಸಿ ಎಚ್ಚೆತ್ತುಕೋ…. ನಿನ್ನ ಸಮಕಾಲೀನರಾದ ಜಾಹ್ನವಿ, ಸಾರಾ ನಿನಗಿಂತ ಎಷ್ಟೋ ಮುಂದೆ ಹೋಗಿಬಿಟ್ಟಿದ್ದಾರೆ ಎಂಬುದು ನೆನಪಿರಲಿ, ಎನ್ನುತ್ತಾರೆ ಹಿತೈಷಿಗಳು.
ನಂಬಿಕೆಗೆ ಎಸಗಲಾದ ದ್ರೋಹ
ನಟನಿಂದ ನೇತಾರ ಆಗಿದ್ದ ಸನೀಡಿಯೋಲ್, ಇದೀಗ ಬ್ಯಾಕ್ ಟು ಪೆವಿಲಿಯನ್ ಅಂತಿದ್ದಾನೆ. ಪಂಜಾಬಿನ ಗುರುದಾಸ್ ಪುರ್ ನ ಸಂಸದನಾದ ಸನೀ ಇತ್ತೀಚೆಗೆ ಹೇಳಿದ್ದೆಂದರೆ, ಸಾಕಪ್ಪ ಈ ಎಲೆಕ್ಷನ್ ಗೋಳು ಅಂತ! ನಮ್ಮ ದೇಶದ ರಾಜಕೀಯದ ಆಗುಹೋಗು ಗಮನಿಸುತ್ತಾ, ಇದನ್ನು ದೇಶ ಮತ್ತು ದೇಶವಾಸಿಗಳಿಗೆ ಮಾಡಲಾಗುತ್ತಿರುವ ದ್ರೋಹ ಅಲ್ಲದೆ ಮತ್ತೇನು? ಅಂತಾನೆ. ಈತನ ನಟನೆಯ ಕೆರಿಯರ್ ಪಾತಾಳಕ್ಕಿಳಿದಾಗ ಇದೇ ರಾಜಕೀಯ ಈತನಿಗೆ ಅತಿ ಪ್ರಿಯವಾಗಿತ್ತು. ರಾಜಕೀಯದಲ್ಲಿ ಯಾರಿಗೇನೂ ಜವಾಬ್ದಾರಿ ನಿರ್ವಹಿಸಬೇಕಾದ ಅಗತ್ಯ ಇಲ್ಲವಲ್ಲ? ಈತನ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ನಡು ನೀರಿನಲ್ಲೇ ಬಿಟ್ಟು ಬಂದವನಲ್ಲ…. ಅವರ ಗತಿ ಏನು? ಮುಂದೆ 5 ವರ್ಷ ಅವರು ಅದನ್ನು ಯಾರಿಗೆ ಹೇಳಬೇಕಂತೆ? ಇಂಥ ಮಹೋದಯ ಸಂಸದರು ಆಗಾಗ ಕ್ಷೇತ್ರದಿಂದ ಸಿನಿಮಾಗೋಸ್ಕರ ಮಾಯವಾಗುತ್ತಿದ್ದರೆ ಅಲ್ಲಿನವರ ಗೋಳೇನು? ವೋಟ್ ಹಾಕುವ ಮಂದಿ ಸರಿಯಾದ ನಾಯಕರನ್ನು ಆರಿಸದಿದ್ದರೆ ಈ ಅಧೋಗತಿ ತಪ್ಪಿದ್ದಲ್ಲ!
6 ಇಂಚಿನಿಂದ 70 ಇಂಚಿಗೆ
ಯೂಟ್ಯೂಬ್ ನಿಂದ ಯುವಜನರ ಮಧ್ಯೆ ಫೇಮಸ್ ಆಗಿರುವ ಎಲ್ವಿಶ್ ಯಾದವ್ ಗೆ ಐಡೆಂಟಿಟಿ ಸಿಕ್ಕಿದ್ದು `ಬಿಗ್ ಬಾಸ್’ನಿಂದ. OTT ಯ ಲೇಟೆಸ್ಟ್ ಸೀಸನ್ನಿನ ವಿನ್ನರ್ ಆಗಿ ಐಡೆಂಟಿಟಿ ಸಿಕ್ಕ ನಂತರ ಕೈ ತುಂಬಾ ಸಿನಿಮಾಗಳು ಸಿಕ್ಕ. ಇದು ಈತನಿಗೂ ಅಷ್ಟೇ ಆಶ್ಚರ್ಯಕರ! ಊರ್ವಶಿ ರೊತೇಲಾಳ ಜೊತೆ ಇಷ್ಟರಲ್ಲಿ ಈತ ಒಂದು ಹೊಸ ಆಲ್ಬಂನಲ್ಲಿ ಕಾಣಿಸಲಿದ್ದಾನೆ. ಸುದ್ದಿಗಾರರ ಪ್ರಕಾರ ವರ್ಷಾಂತ್ಯದ ಹೊತ್ತಿಗೆ ಈತನಿಗೆ ಇನ್ನಷ್ಟು ಸಿನಿಮಾ ಸಿಗಲಿದೆ! ಹೊಸ ಚಿತ್ರದ ಶೂಟಿಂಗ್ ಗಾಗಿ ಈಗಾಗಲೇ ವಿದೇಶ ತಲುಪಿದ್ದೂ ಆಯ್ತು. ರಾಜಸ್ಥಾನದ ಆಳ್ವಾರ್ ಜಿಲ್ಲೆಯ ಯಾವುದೋ ಗ್ರಾಮದ ನಿವಾಸಿ ಇದೀಗ ಬಾಲಿವುಡ್ ನಲ್ಲಿ ಎಲ್ಲರಿಗೂ ಬೇಕಾಗಿದ್ದಾನೆ! ಇದು ಕೇವಲ ವದಂತಿ ಅಷ್ಟೆ. ಸುದ್ದಿಗಾರರು ಸ್ಟಾರ್ ಗಳ ಬೆನ್ನುಹತ್ತಿ ಫೋಟೋ ಸೆರೆಹಿಡಿಯುವುದು ಮಾತ್ರವಲ್ಲ, ಇತ್ತೀಚೆಗೆ ಈ ಕ್ಯಾಮೆರಾ ವೀರರು, ರಿತೇಶ್‌ಜೆನೆಲಿಯಾರ ಬೆನ್ನುಹತ್ತಿ ಫೋಟೋ ಹಿಡಿಯುತ್ತಿದ್ದಾಗ, ಆಕೆ ತನ್ನ ಹೊಟ್ಟೆ ಕವರ್ ಆಗುವ ಹಾಗೆ ಕೈ ಒಡ್ಡಿದಳು. ಈಕೆ ಈಗ ತುಸು ಮೈ ಕೈ ತುಂಬಿಕೊಂಡಿರುವುದೂ ನಿಜ. ಅವಳ ಡ್ರೆಸ್ಸಿನ ಸ್ಟೈಲೂ ಡಿಫರೆಂಟ್ ಆಗಿತ್ತು. ಇನ್ನೇನು? ಈ ಸುದ್ದಿಗಾರರ ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು! ಜೆನೆಲಿಯಾ 3ನೇ ಸಲ ಗರ್ಭಿಣಿ ಅಂತ ಡಂಗೂರ ಸಾರಿಯೇಬಿಟ್ಟರು. ಸಿಟ್ಟಿಗೆದ್ದ ರಿತೇಶ್, ಹಾಗೇನಲ್ಲ ಸುಮ್ಮನಿರಿ ಅಂತ ಗುಡುಗಿದಾಗ, ಇವರು ತೆಪ್ಪಗಾದರು.
ಫಿಟ್ ನೆಸ್ ಇಲ್ಲ ಅಂದ್ರೆ ಏನೂ ಇಲ್ಲ
ಫ್ಯಾಟ್ ನಿಂದ ಫಿಟ್ ಆದರ ಕಥೆಗಳ ಬಗ್ಗೆ ಓದುವುದು ಎಷ್ಟು ಸುಲಭವೇ, ಹಾಗೆ ಆಗುವುದೂ ಸುಲಭವಾಗದ್ದಿದ್ದರೆ ಚೆನ್ನಾಗಿರುತ್ತಿತ್ತು. ಫಿಟ್ ನೆಸ್ ಇದೀಗ ಅಗತ್ಯ ಮಾತ್ರವಲ್ಲ, ಸಿನಿಮಾದವರಿಗೆ ಒಂದು ಹುಚ್ಚೇ ಆಗಿಹೋಗಿದೆ. ಸಾರಾ ಅಂತೂ ಇದನ್ನು ಅಕ್ಷರಶಃ ನಿಜ ಆಗಿಸಿದ್ದಾಳೆ. ಸಾರಾ ಮೊದಲು ತನ್ನ ಲೈಫ್ ಸ್ಟೈಲ್ ಬದಲಾಯಿಸಿಕೊಂಡು ಫ್ಯಾಟ್ ನಿಂದ ಫಿಟ್ ಆದಳು. ಅಸಾಧ್ಯ ಎಂಬುದನ್ನು ಈಕೆ ಸಾಧ್ಯ ಮಾಡಿ ತೋರಿಸಿದ್ದಾಳೆ. ಇದೀಗ ಆಕೆ ಫಿಟ್ ಸಕ್ಸಸ್ ಫುಲ್ ಕೂಡಾ ಹೌದು. ಹೀಗಾಗಿ ಸಹಜವಾಗಿಯೇ ಸಾರಾ ಹೆಂಗಸರ ನಡುವೆ ಫಿಟ್ ನೆಸ್ ಕುರಿತು ಭಾಷಣ ಬಿಗಿಯುತ್ತಿದ್ದಾಳೆ. ಫಿಟ್ ನೆಸ್ ಹೊಂದಲು ಸ್ವಯಂ ನಮ್ಮನ್ನು ನಾವು ಮೋಟಿವೇಟ್ ಮಾಡಿಕೊಳ್ಳಬೇಕು ಅಂತಾಳೆ. ತನ್ನ ಹಳೆಯ ಫೋಟೋಗಳನ್ನು ನೋಡಿ ನೋಡಿ ಅಂಥ ಡುಮ್ಮಕ್ಕ ಇಂದು ಸಣ್ಣಕ್ಕ ಆಗಿದ್ದಾಳೆ!
`ಗದರ್’ ನಂಥ ಚಿತ್ರ ಹಿಟ್ ಆಗೋದು ಅಪಾಯಕಾರಿ!
ನಸೀರುದ್ದೀನ್ ಶಾಹ್ ನಂಥ ಹಿರಿಯ ನಟರು ಹಿಂದೆ ಮುಂದೆ ಯೋಚಿಸದೆ ಆಡುವ ಮಾತು ಅನೇಕ ಎಡವಟ್ಟುಗಳಿಗೆ ಮೂಲ. ಈ ಸಲ ಆತ `ಗದರ್, ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿ,’ ಇತ್ಯಾದಿ ಚಿತ್ರಗಳ ಜನ್ಮ ಜಾಲಾಡಿದ್ದಾರೆ. ಈತ ಹೇಳುವುದೆಂದರೆ, ದೇಶಪ್ರೇಮದ ನೆಪದಲ್ಲಿ ಕಾಲ್ಪನಿಕ ಶತ್ರುಗಳನ್ನು ಕ್ರಿಯೇಟ್ ಮಾಡಿ, ಕೋಟ್ಯಂತರ ಗಳಿಸುವ ಈ ಟ್ರೆಂಡ್, ಮುಂದಿನ ಸಿನಿಮಾಗಳನ್ನು ಅಪಾಯಕಾರಿ ಅಂಚಿಗೆ ತಂದು ನಿಲ್ಲಿಸಲಿದೆಯಂತೆ. ಅಧಿಕಾರದಲ್ಲಿರುವ ಜನರ ಆಸೆಯಂತೆ ಇಂಥ ಚಿತ್ರಗಳೂ ತಯಾರಾಗುತ್ತಿವೆಯಂತೆ. ಹಂಸ್ ಮೆಹ್ತಾ, ಸುಧೀ ಮಿಶ್ರಾ ಮುಂತಾದ ನಿರ್ದೇಶಕರಿಗೆ ಯಾವ ಮಹತ್ವ ಇಲ್ಲವಾಗಿದೆ ಅಂತಾರೆ. ಅಂದಹಾಗೆ ಈತನ ಮಾತಿನಲ್ಲಿ ದಮ್ ಇದೆ!
ಫ್ರಾಂಚೈಸಿ ನೆರವಿನಿಂದ ಗೆಲ್ಲುತ್ತದೆಯೇ ಈತನ ಕೆರಿಯರ್?
ಪುಲಕಿತ್ ಸಾಮ್ರಾಟ್ ಎಂಬ ಹೀರೋ ಇತ್ತೀಚೆಗೆ ಬಿದಿಗೆಯ ಚಂದ್ರಮನಂತೆ ಅತಿ ವಿರಳವಾಗಿ ದರ್ಶನ ನೀಡುತ್ತಿದ್ದಾನೆ. ಸದ್ಯದಲ್ಲೇ ಈತ `ಪಕರೆ-3′ ಚಿತ್ರದಲ್ಲಿ ಕಾಣಿಸಲಿದ್ದಾನೆ. `ಪಕರೆ-1, 2′ ಬಿಟ್ಟರೆ, ಪಾಪ ಈತನಿಗೆ ಹೇಳಿಕೊಳ್ಳುವಂಥ ಚಿತ್ರ ಒಂದೂ ಇಲ್ಲ! `ಪಕರೆ` ಸೀಕ್ವೆ್ ನ ಸಹನಟರಾದ ಮನಜೋತ್ ಸಿಂಗ್‌ವರುಣ್ ಶರ್ಮ ಅಂತೂ ಇಂತೂ ಬೇರೆ ಚಿತ್ರಗಳಲ್ಲಿ ಸಹನಟರಾಗಿಯಾದರೂ ಗೋಚರಿಸುತ್ತಿರುತ್ತಾರೆ, ಆದರೆ ಈತ ಮಾತ್ರ ಅಲ್ಲ! ತಾನು ನಟಿಸಿದರೆ ಹೀರೋನೇ ಆಗಿರಬೇಕು ಎಂಬುದು ಈತನ ನೆತ್ತಿಗೇರಿದೆ. ಅಯ್ಯೋ ಮಹಾರಾಯ, ಬಾಲಿವುಡ್ ನಲ್ಲಿ ಉಳಿಯಬೇಕಾದರೆ ನಿನ್ನ ಪಾತ್ರ ಹಾಗೂ ಕೆರಿಯರ್‌ಬೆಳವಣಿಗೆ ಕಡೆ ಗಮನ ಕೊಡು, ಕೇವಲ `ಪಕರೆ’ ಸೀಕ್ವೆ್ ನಂಬಿ ಕುಳಿತರೆ, ಮುಂದೆ ನಿನ್ನ ಗತಿ ಏನು?
ವಾನ್ಯಾಳಿಗಾಗಿ ಬಿಗ್ ಬಿ ಗದ್ಗದಿತ ಆದದ್ದೇಕೆ
ತಮ್ಮ ಮೊಮ್ಮಗಳು (ಮಗಳ ಮಗಳು) ವಾನ್ಯಾ ನೀಲಿ ಅಂದ್ರೆ ಬಿಗ್ ಬಿಗೆ ಪಂಚಪ್ರಾಣ! ಅವಳ ಕೆಲಸಗಳಿಂದಾಗಿ ಅವರಿಗೆ ಬಹಳ ಹೆಮ್ಮೆ. ವಿಷಯ ಇರೋದೇ ಹಾಗೆ. ಬಚ್ಚನ್ ಪರಿವಾರದ ಡಂಗೂರ ಸಾರದೆ, ಪ್ರಾಮಣಿಕ ಸಮಾಜಸೇವೆಗೆ ಟೊಂಕ ಕಟ್ಟಿರುವ ಈಕೆ, ಹಳ್ಳಿ ಹಳ್ಳಿಗೂ ಹೋಗಿ ಅಲ್ಲಿನ ಹೆಂಗಸರ ಮುಟ್ಟಿನ ಸಮಸ್ಯೆಗಳ ಕುರಿತು ಸಲಹೆ ನೀಡುತ್ತಾ, ಪ್ಯಾಡ್ ಬಳಸುವುದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾಳೆ, ಆರ್ಥಿಕವಾಗಿಯೂ ಅವರಿಗೆ ನೆರವಾಗುತ್ತಿದ್ದಾಳೆ. ಇದಕ್ಕಾಗಿ ಹಳ್ಳಿ ಹಳ್ಳಿಗಳಲ್ಲಿ ಕ್ಯಾಂಪ್ ಹೂಡುತ್ತಿದ್ದಾಳೆ, ಶಭಾಷ್ ವಾನ್ಯಾ.!
ಕಾಂಪ್ರಮೈಸ್ ಆಗಲಾರೆ, ಹೀಗಾಗಿ ಕೆಲಸವಿಲ್ಲ
ಕಿರು ಪರದೆಯಿಂದ ಗ್ಲಾಮರಸ್ ಹಿರಿ ತೆರೆಗೆ ಕಾಲಿಟ್ಟ ನಟಿ ಪ್ರಾಚೀ ದೇಸಾಯಿ, ಬರೀ ರಾಗಿ ಬೀಸಿದ್ದೇ ಬಂತು. ಸಿಕ್ಕಿದ ಕೆಲವು ಚಿತ್ರಗಳಲ್ಲಿ ತನ್ನ ಅಪ್ಪಟ ಪ್ರತಿಭೆ ಪ್ರದರ್ಶಿಸಿದ ಈಕೆ, ಅದು ಕೇವಲ ಕಿರುತೆರೆಗಷ್ಟೇ ಸೀಮಿತಲ್ಲ ಎಂದು ಸಾಬೀತುಪಡಿಸಿದ್ದಾಳೆ. ಇಷ್ಟಾದರೂ ತನ್ನ ಯೋಗ್ಯತೆಗೆ ತಕ್ಕ ಮನ್ನಣೆ ಇವಳಿಗೆ ಸಿಗುತ್ತಿಲ್ಲ. ಇತ್ತೀಚೆಗೆ ಒಂದು ವೆಬ್ ಸೀರೀಸ್ ನಲ್ಲಿ ಕಾಣಿಸಿಕೊಂಡಿದ್ದಾಳೆ. ಬಾಲಿವುಡ್ ನಲ್ಲಿ ಕೆಲಸ ಸಿಗದ ಕಾರಣ, ತನ್ನ ಮೌನ ಮುರಿದ ಈಕೆ, ಇಲ್ಲಿನ ಕಾಸ್ಟಿಂಗ್ ಕೌಚ್ ಕುರಿತು ಬಾಯಿಬಿಟ್ಟಳು. ಅಂದಹಾಗೆ ಈಕೆಗೆ ಒಂದು ದೊಡ್ಡ ಚಿತ್ರದ ಆಫರ್ ಬಂದಿತ್ತಂತೆ. ಆದರೆ ಆ ಚಿತ್ರದ ನಿರ್ದೇಶಕ ಮತ್ತೆ ಮತ್ತೆ ಈಕೆಯನ್ನು ಒಂದು ಖಾಸಗಿ ಹೋಟೆಲ್ ಗೆ ಸಂಜೆ ನಂತರ ಬಾ ಎಂದು ಒತ್ತಾಯಿಸುತ್ತಿದ್ದನಂತೆ. ಪ್ರಾಚಿ ಬೇಡ ಎಂದಾಗ ಇವಳಿಗೆ ಆ ಪಾತ್ರ ಖೋತಾ ಆಯ್ತು. ಇಂಥ ಪ್ರಭಾವಶಾಲಿಗಳಿಗೆ ಅವಕಾಶ ನೀಡದ ಈ ಬಾಲಿವುಡ್, ತನಗೆ ಅಂಟಿದ ಈ ಕಳಂಕವನ್ನು ಎಂದು ತೊಳೆದುಕೊಂಡೀತು?
ನ್ಯಾಶನಲ್ ಕ್ರಶ್ ಆದ ನಯನತಾರಾ
ಇತ್ತೀಚೆಗಷ್ಟೆ ಬಾಲಿವುಡ್ ನ `ಜಾನ್’ ಚಿತ್ರದಲ್ಲಿ ಮಿಂಚಿದ ತಮಿಳು, ತೆಲುಗು ನಟಿ ನಯನತಾರಾ, ಈ ಹೊತ್ತಿಗೆ ನ್ಯಾಶನಲ್ ಕ್ರಶ್ ಎನಿಸಿದ್ದಾಳೆ! ಇದ್ದಕ್ಕಿದ್ದಂತೆ ಇವಳ ಫ್ಯಾನ್ ಫಾಲೋಯರ್ಸ್ ಹೆಚ್ಚಿದ್ದಾರೆ. ಈಕೆಗೆ ಸಿಕ್ಕ ಅವಕಾಶಗಳೂ ಅಂತಿಂಥದ್ದಲ್ಲ. ಈಕೆ ನಟಿ ಮಾತ್ರವಲ್ಲ, ನಿರ್ಮಾಪಕಿಯೂ ಸಹ! ಅಷ್ಟು ಮಾತ್ರವಲ್ಲ, ಭಾರತದ ಅತೀ ದುಬಾರಿ ಸಂಭಾವನೆ ಪಡೆಯುವ ನಟಿಯರಲ್ಲಿ ಈಕೆ ಸಹ ಒಬ್ಬಳು. ಅಂತಾರಾಷ್ಟ್ರೀಯ ಪತ್ರಿಕೆ `ಪೇಬರ್ಸ್’ನ ಆಯ್ದ 100 ಸೆಲೆಬ್ರಿಟಿಗಳಲ್ಲಿ ಅವಳು ಏಕೈಕ ದಕ್ಷಿಣ ನಟಿ ಎನಿಸಿದ್ದಾಳೆ. ದಕ್ಷಿಣದ ನಟಿಯರ ಪ್ರತಿಭೆ ಮುಂದೆ ಇತ್ತೀಚೆಗೆ ಉತ್ತರದವರ ಬೇಳೆಕಾಳು ಏನೇನೂ ಬೇಯುತ್ತಿಲ್ಲ. ಹೀಗಾಗಿಯೇ ಅಂದ ಕಾಲತ್ತಿಲೆ ಹೇಮಾ, ಶ್ರೀದೇವಿಯವರಿಂದ ಹಿಡಿದು ಇಂದಿನ ನಯನಾರವರೆಗೂ, ಇವರಿಗೆ ಮಣೆ ಹಾಸುತ್ತಿದೆ ಬಾಲಿವುಡ್.