ಸಾಮಗ್ರಿ : 3 ಕಪ್ ಕಾರ್ನ್ ಫ್ಲೇಕ್ಸ್, ತುಂಡರಿಸಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾರೆ 1 ಕಪ್), ಅರ್ಧ ಕಪ್ ಕಡಲೆಬೀಜ, 5-6 ಚಮಚ ತುಪ್ಪ, 5-6 ಎಸಳು ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಸಕ್ಕರೆ, ಚಾಟ್ ಮಸಾಲ, ಅಮ್ಚೂರ್ ಪುಡಿ, ಅರಿಶಿನ, ಇಂಗು, ತುಂಡರಿಸಿದ ಕೊಬ್ಬರಿ ಚೂರು.
ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಡ್ರಫ್ರೂಟ್ಸ್ ಹಾಕಿ ಹುರಿದು ತೆಗೆಯಿರಿ. ಮಂದ ಉರಿ ಇರಲಿ. ನಂತರ ಕಡಲೆಬೀಜ, ಕೊಬ್ಬರಿ ತುಂಡು ಹಾಕಿ ಹುರಿದು ತೆಗೆಯಿರಿ. ನಂತರ ಉಳಿದ ತುಪ್ಪಕ್ಕೆ ಉಪ್ಪು, ಖಾರ, ಉಳಿದ ಮಸಾಲೆ, ಕೊನೆಯಲ್ಲಿ ಕಾರ್ನ್ ಫ್ಲೇಕ್ಸ್, ಸೇರಿಸಿ ಬೇಗ ಬೇಗ ಕೈಯಾಡಿಸಿ. ಆಮೇಲೆ ಇದಕ್ಕೆ ಮೊದಲು ಹುರಿದ ಎಲ್ಲಾ ಸಾಮಗ್ರಿ ಸೇರಿಸಿ, ಕೆಳಗಿಳಿಸಿ, ಗಾಳಿಯಾಡದ ಡಬ್ಬಕ್ಕೆ ಇದನ್ನೂ ತುಂಬಿರಿಸಿ, ಸಿಹಿ ಸವಿಯುವಾಗ ಜೊತೆಗೆ ಕೊಡಿ.
ಡ್ರೈ ಫ್ರೂಟ್ಸ್ ಕಟ್ ಲೆಟ್
ಮೂಲ ಸಾಮಗ್ರಿ : 2-3 ಮಧ್ಯಮ ಗಾತ್ರದ ಬೀಟ್ ರೂಟ್, 150 ಗ್ರಾಂ ಬೇಯಿಸಿ ಮಸೆದ ಆಲೂ, 3-4 ಬ್ರೆಡ್ ಪೀಸ್, ಅರ್ಧ ಕಪ್ ಕಡಲೆಹಿಟ್ಟು, ತುಸು ಆರಾರೂಟ್, ರೀಫೈಂಡ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ಹೂರಣಕ್ಕಾಗಿ ಸಾಮಗ್ರಿ : 10-12 ಇಡಿಯಾದ ಗೋಡಂಬಿ, ತುಸು ಎಳ್ಳು, ಬಾದಾಮಿ ಚೂರು, ಗೋಡಂಬಿ ಪುಡಿ, ಪಿಸ್ತಾ, ಬಾದಾಮಿ, ದ್ರಾಕ್ಷಿ, ಉಪ್ಪು, ಮೆಣಸು, ಪನೀರ್, ಹೆಚ್ಚಿದ ಕೊ.ಸೊಪ್ಪು.
ವಿಧಾನ : ಬೀಟ್ ರೂಟ್ ನ ಸಿಪ್ಪೆ ಹೆರೆದು ಇಡಿಯಾಗಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ಇದು ಚೆನ್ನಾಗಿ ಆರಿದ ನಂತರ ನೀಟಾಗಿ ತುರಿದಿಡಿ. ಇದಕ್ಕೆ ಮಸೆದ ಆಲೂ, ಕಿವುಚಿದ ಬ್ರೆಡ್ ಚೂರು ಹಾಕಿ ಕಲಸಿಕೊಳ್ಳಿ. ಜೊತೆಗೆ ಉಳಿದ ಮೂಲ ಸಾಮಗ್ರಿಗಳನ್ನೂ ಬೆರೆಸಿಕೊಳ್ಳಿ. ತುಸು ತುಪ್ಪದಿಂದ ನಾದಿ, ಈ ಮಿಶ್ರಣ ನೆನೆಯಲು ಬಿಡಿ. ಹೂರಣಕ್ಕಾಗಿ ತುಪ್ಪದಲ್ಲಿ ಇಡಿಯಾದ ಗೋಡಂಬಿ, ಎಳ್ಳು ಹುರಿದು ಪಕ್ಕಕ್ಕಿಡಿ. ಪನೀರ್ ನ್ನು ಚೆನ್ನಾಗಿ ಮಸೆದು (ದೊಡ್ಡದಾಗಿದ್ದರೆ ತುರಿದು) ಉಳಿದೆಲ್ಲ ಸಾಮಗ್ರಿ ಅದಕ್ಕೆ ಹಾಕಿ ಬೆರೆಸಿಕೊಳ್ಳಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಹಿಡಿದು ಚಪ್ಪಟೆ ಮಾಡಿ. ಬೀಟ್ ರೂಟ್ ಮಿಶ್ರಣದಿಂದ ದೊಡ್ಡ ನಿಂಬೆ ಗಾತ್ರ ಮಾಡಿಕೊಂಡು, ಮಧ್ಯದಲ್ಲಿ ಈ ಹೂರಣ ಇರಿಸಿ, ಅದುಮಿ, ಕವರ್ ಮಾಡಿ. ನಂತರ ಚಿತ್ರದಲ್ಲಿರುವಂತೆ ಎಳ್ಳಿನಲ್ಲಿ ಹೊರಳಿಸಿ, ಮಧ್ಯದಲ್ಲಿ 1-1 ಗೋಡಂಬಿ ಸಿಗಿಸಿಡಿ. ಅವಶ್ಯಕವಾದ ಬಾಣಲೆಯಲ್ಲಿ ಇದರಿಂದ ಶ್ಯಾಲೋ ಫ್ರೈ ಮಾಡಿ, ತಿರುವಿ ಹಾಕುತ್ತಾ ಎರಡೂ ಬದಿ ಹದನಾಗಿ ಬೇಯಿಸಿ. ಬಿಸಿ ಇರುವಾಗಲೇ ಸಾಸ್, ಸಿಹಿ ಮಿಠಾಯಿ ಜೊತೆ ಸವಿಯಲು ಕೊಡಿ.
ಸ್ಪೆಷಲ್ ಟೋಸ್ಟ್
ಸಾಮಗ್ರಿ : ಒಂದಿಷ್ಟು ಬ್ರೆಡ್ ಸ್ಲೈಸ್, ಬೆಣ್ಣೆ, 2 ಚಮಚ ಪೀನಟ್ ಬಟರ್ ವಿತ್ ಶುಗರ್, ಒಂದಿಷ್ಟು ಮಾಗಿದ ಬಾಳೆಹಣ್ಣುಗಳ ಬಿಲ್ಲೆ, ಸಕ್ಕರೆ, ಏಲಕ್ಕಿ ಪುಡಿ.
ವಿಧಾನ : ಬ್ರೆಡ್ ಗೆ ಬೆಣ್ಣೆ ಹಚ್ಚಿ ತವಾ ಮೇಲೆ ಎರಡೂ ಬದಿ ಫ್ರೈ ಮಾಡಿ. ನಂತರ ಇದಕ್ಕೆ ಪೀನಟ್ ಬಟರ್ ಸವರಿ, ಚಿತ್ರದಲ್ಲಿರುವಂತೆ ಬಾಳೆ ಬಿಲ್ಲೆಗಳಿಂದ ಅಲಂಕರಿಸಿ, ಏಲಕ್ಕಿಪುಡಿ ಉದುರಿಸಿ, ಬಿಸಿ ಕಾಫಿ/ಟೀ ಜೊತೆ ಸವಿಯಲು ಕೊಡಿ.
ಮ್ಯಾಕ್ರೋನಿ ಸಲಾಡ್
ಸಾಮಗ್ರಿ : ಒಂದಿಷ್ಟು ಬೆಂದ ಮ್ಯಾಕ್ರೋನಿ, ಹೆಚ್ಚಿದ ಸೌತೆಕಾಯಿ, ಈರುಳ್ಳಿ, 3 ಬಗೆಯ ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಚಾಟ್ ಮಸಾಲ, ವಿನಿಗರ್, ಮಿಕ್ಸ್ಡ್ ಹರ್ಬ್, ಆಲಿವ್ ಎಣ್ಣೆ, ಅನಾನಸ್ ಸಿರಪ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಕೊ.ಸೊಪ್ಪು, ಪುದೀನಾ, ತೆಂಗಿನ ತುರಿ.
ವಿಧಾನ : ಮೇಲೆ ಹೇಳಿದ ಎಲ್ಲಾ ಸಾಮಗ್ರಿ ನೀಟಾಗಿ ಬೆರೆಸಿಕೊಂಡು, 1 ಗಂಟೆ ಕಾಲ ಫ್ರಿಜ್ ನಲ್ಲಿರಿಸಿ. ನಂತರ ಸವಿಯಲು ಕೊಡಿ.
ಸ್ಪೆಷಲ್ ಆಲೂ ಟಿಕ್ಕಿ
ಮೂಲ ಸಾಮಗ್ರಿ : 250 ಗ್ರಾಂ ಬೇಯಿಸಿ ಮಸೆದ ಆಲೂ, 4 ಚಮಚ ಕಾರ್ನ್ ಸ್ಟಾರ್ಚ್ ಪೌಡರ್, 1-1 ದೊಡ್ಡ ಚಮಚ ಅಕ್ಕಿಹಿಟ್ಟು, ಮೈದಾ, ಅರ್ಧ ಕಪ್ ಬ್ರೆಡ್ ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಕರಿಯಲು ಎಣ್ಣೆ.
ಹೂರಣಕ್ಕೆ ಸಾಮಗ್ರಿ : ಅರ್ಧರ್ಧ ಕಪ್ ಹೆಸರುಬೇಳೆ, ಬೆಂದ ಹಸಿ ಬಟಾಣಿ, ಮಿಕ್ಸ್ಡ್ ಡ್ರೈ ಫ್ರೂಟ್ಸ್ ಚೂರು (ಒಟ್ಟಾರೆ ಅರ್ಧ ಕಪ್), ಒಂದಿಷ್ಟು ಬಾದಾಮಿ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಚಾಟ್ ಮಸಾಲ, ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಕಡಲೆಹಿಟ್ಟು, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಮಿಕ್ಸ್ ಚರ್.
ವಿಧಾನ : ಮೊದಲು ಹೆಸರುಬೇಳೆ ಹುರಿದು, ಇದಕ್ಕೆ ನೀರು ಬೆರೆಸಿ ಬೇಯಿಸಿ. ನೀರು ಬಸಿದು ಬೇರ್ಪಡಿಸಿ. ಒಂದು ನಾನ್ ಸ್ಟಿಕ್ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಅದಕ್ಕೆ ಕಡಲೆಹಿಟ್ಟು ಹಾಕಿ ಕೆದಕಬೇಕು. ನಂತರ ಬೆಂದ ಬೇಳೆ ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸಿ. ಇದಕ್ಕೆ ಒಂದೊಂದಾಗಿ ಹೂರಣದ ಎಲ್ಲಾ ಸಾಮಗ್ರಿ ಬೆರೆಸುತ್ತಾ ಚೆನ್ನಾಗಿ ಕೆದಕಬೇಕು. ಕೆಳಗಿಳಿಸಿ ತುಸು ಆರಲು ಬಿಡಿ. ಮಸೆದ ಆಲೂಗೆ ಇತರ ಎಲ್ಲಾ ಮೂಲ ಸಾಮಗ್ರಿ ಹಾಕಿ ಬೆರೆಸಿಕೊಳ್ಳಿ. ಇದರಿಂದ ನಿಂಬೆ ಗಾತ್ರ ಉಂಡೆ ಹಿಡಿದು, ಮಧ್ಯೆ 1-2 ಚಮಚ ಹೂರಣ ತುಂಬಿಸಿ, ನೀಟಾಗಿ ಕವರ್ ಮಾಡಿ, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ ಬಾಣಲೆಯಲ್ಲಿ ಧಾರಾಳ ಎಣ್ಣೆ ಬಿಡುತ್ತಾ, ಶ್ಯಾಲೋ ಫ್ರೈ ಮಾಡಿ. ನಂತರ ಇದನ್ನು ಚಿತ್ರದಲ್ಲಿರುವಂತೆ ಪುದೀನಾ ಚಟ್ನಿ, ಗಟ್ಟಿ ಮೊಸರು, ಮಿಕ್ಸ್ ಚರ್ ಹಾಕಿ ಅಲಂಕರಿಸಿ, ಸಿಹಿ ಮಿಠಾಯಿ ಜೊತೆ ಸವಿಯಿರಿ.