ಹಿಂದಿ ಬಂಗಾಳಿ ಚಿತ್ರಗಳ ಖ್ಯಾತ ನಟಿ ಮೂನ್‌ ಮೂನ್‌ ಸೇನ್‌ ಳ ಮಗಳು ರೈಮಾ ಸೇನ್‌ ಬಲು ಬ್ಯೂಟಿಫುಲ್, ಸದಾ ಹನಸ್ಮುಖಿ, ಮೃದುಭಾಷಿಣಿ, ಸೌಮ್ಯ ಗುಣದವಳು. 70ರ ದಶಕದ ಹಿರಿಯ ಅಭಿನೇತ್ರಿ, ಇವಳ ಅಜ್ಜಿ ಸುಚಿತ್ರಾ ಸೇನ್‌ ರನ್ನು ಈಕೆ ಹೋಲುತ್ತಾಳೆ. ಹೀಗಾಗಿಯೇ ಇವಳಿಗೆ ಶಾಂತ, ಸೌಮ್ಯ ಸ್ವಭಾವದ ನಾಯಕಿ ಪಾತ್ರಗಳಷ್ಟೇ ಸಿಗುತ್ತಿವೆ, ಅದುವೇ ತನಗಿಷ್ಟ ಎನ್ನುತ್ತಾಳೆ ರೈಮಾ.

ಸಿನಿಮಾ ಎಂಬುದು ಇವಳ ಕೌಟುಂಬಿಕ ಹಿನ್ನೆಲೆಯಲ್ಲಿ ಹಾಸು ಹೊಕ್ಕಾಗಿದೆ. ಹೀಗಾಗಿ ನಟನೆ ಬಿಟ್ಟು ಇವಳು ಬೇರೆ ಕೆರಿಯರ್‌ ನತ್ತ ಮನಸ್ಸು ಕೊಡಲೇ ಇಲ್ಲ. 17ರ ಹರೆಯದಲ್ಲೇ ಇವಳು ಮೊದಲ ಹಿಂದಿ ಚಿತ್ರ `ಗಾಡ್‌ಮದರ್‌’ನಿಂದ ಬೆಳ್ಳಿ ತೆರೆಯಲ್ಲಿ ಮಿಂಚಿದಳು. ಇವಳ ಫಿಲ್ಮೀ ಕೆರಿಯರ್‌ ಬಹುತೇಕ ಯಶಸ್ವೀ ಎಂದೇ ಹೇಳಬಹುದು. ಆದರೆ ತನ್ನ ಖಾಸಗಿ ಬದುಕಿನಲ್ಲಿ ಇವಳು ಯಶಸ್ವೀ ಎನಿಸಲಿಲ್ಲ. ಇವಳ ಹೆಸರು ವಿಖ್ಯಾತ ಬಿಸ್‌ ನೆಸ್‌ ಮ್ಯಾಗ್ನೆಟ್‌ ವರುಣ್‌ ಥಾಪರ್‌, ಸಹ ನಟ ಕುನಾಲ್ ‌ಕಪೂರ್‌, ರಾಜಕೀಯ ಪುಢಾರಿ ಕಲಿಕೇಶ್‌ ಸಿಂಗ್‌ ಮುಂತಾದವರೊಂದಿಗೆ ಹರಿದು ಬಂದಿತ್ತು. ಆದರೆ ಇವಳು ಅವರಾರನ್ನೂ ವರಿಸದೆ, ತನ್ನ ಕೆರಿಯರ್ ನತ್ತಲೇ ಗಮನವಿಟ್ಟಳು. ಇವಳ `ದಿ ವ್ಯಾಕ್ಸಿನ್‌ ವಾರ್‌’ ಹಿಂದಿ ಚಿತ್ರ ಇತ್ತೀಚೆಗಷ್ಟೆ ರಿಲೀಸ್‌ ಆಯಿತು. ತನ್ನ ಜರ್ನಿ ಕುರಿತು ಈಕೆ ಇಲ್ಲಿ ಮನ ಬಿಚ್ಚಿ ಮಾತನಾಡಿದ್ದಾಳೆ.

ಈ ಚಿತ್ರದ ಕುರಿತಾಗಿ ರೈಮಾ ಬಲು ಉತ್ಸಾಹಿತಳಾಗಿದ್ದಾಳೆ. ಏಕೆಂದರೆ ಕೋವಿಡ್‌ ನಂತರ, ಬಲು ದಿನಗಳಾದ ಮೇಲೆ ಇವಳ ಚಿತ್ರ ಬೆಳಕು ಕಂಡಿದೆ. ಇದರಲ್ಲಿ ಕೊರೋನಾ ಹಾಗೂ ಆ ಸಮಸ್ಯೆಗಾಗಿ ಕಂಡುಹಿಡಿಯಾದ ವ್ಯಾಕ್ಸಿನ್‌ ಕುರಿತು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಇಲ್ಲಿ ಮಹಿಳಾ ವಿಜ್ಞಾನಿಗಳ ಪರಿಶ್ರಮ, ಶ್ರದ್ಧೆ, ನಿಷ್ಠೆ, ಯಶಸ್ಸಿನ ಕುರಿತಾಗಿ ಹೇಳಲಾಗಿದೆ.

ರೈಮಾ ಹೇಳುತ್ತಾಳೆ, “ಇದು ನಮ್ಮ ದೇಶದ ಮೊದಲ ಬಯೋ ಸೈನ್ಸ್ ಚಿತ್ರ. ಇದರಲ್ಲಿ ನಾನು ಒಬ್ಬ ಸೈನ್ಸ್ ಜರ್ನಲಿಸ್ಟ್ ಳ ಸ್ಟ್ರಾಂಗ್‌ ಪಾತ್ರ ನಿರ್ವಹಿಸಿದ್ದೇನೆ. ನಾನು ಈ ಪಾತ್ರವನ್ನು ಬಹಳ ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ.”

ಇದಕ್ಕಾಗಿ ಏನೆಲ್ಲ ತಯಾರಿ ನಡೆದಿತ್ತು?

“ಈ ಚಿತ್ರದಲ್ಲಿ ಹಲವಾರು ಹಿರಿಯ ಸ್ಟಾರ್ಸ್‌ ನನ್ನೊಂದಿಗಿದ್ದಾರೆ. ಅವರ ಮುಂದೆ ನನ್ನ ನಟನೆ ಸಪ್ಪೆ ಆಗಬಾರದು ಎಂದು ಬಹಳ ಪ್ರಯತ್ನಪಟ್ಟಿದ್ದೇನೆ. ಇದಕ್ಕಾಗಿ ನಾನು ಹಲವು ಸೈನ್ಸ್ ವರ್ಕ್‌ ಶಾಪ್ಸ್ ಅಟೆಂಡ್‌ ಮಾಡಿದೆ. ಹಿರಿಯ ನಟಿ ಪಲ್ಲವಿ ಜೋಶಿ ಬಳಿ ಹಲವು ಸಲಹೆ ಪಡೆದಿದ್ದೇನೆ.”

ಚಿತ್ರ ನಮ್ಮ ವೀಕ್ಷಕರನ್ನು ಥಿಯೇಟರ್ಗೆ ಕರೆತರಬಲ್ಲದೇ?

“ಕೋವಿಡ್‌ ಕಾಲದಲ್ಲಿ ಜನ ಸಿನಿಮಾ ಥಿಯೇಟರ್‌ ಗೆ ಬರಲಾಗುತ್ತಿರಲಿಲ್ಲ, ನಿಜ. ಆದರೆ ಚಿತ್ರದ ಎಫೆಕ್ಟ್ ನಿಂದ ಸಿನಿಮಾ ಅವರನ್ನು ಖಂಡಿತಾ ಇಲ್ಲಿಗೆ ತರತರಬಲ್ಲದು. ಎಲ್ಲಾ ಮಾಮೂಲಿ ಮಸಾಲೆ ಚಿತ್ರಗಳ ಹಾಗಿರದೆ, ಇದು ರಿಯಲಿಸ್ಟಿಕ್‌ ಆಗಿರುವುದರಿಂದ, ಜನ ಖಂಡಿತಾ ಅಂಥದ್ದನ್ನು ನೋಡಲು ಬಯಸುತ್ತಾರೆ. ಜನ ಒಂದು ಚಿತ್ರದ ಕುರಿತು ಬಹಳ ಹೊಗಳಿ ವಿಮರ್ಶಿಸಿದಾಗ ಮಾತ್ರ ನಾನು ಅಂಥ ಚಿತ್ರ ನೋಡಲು ಥಿಯೇಟರ್‌ ಗೆ ಹೋಗ್ತೀನಿ. ಇಲ್ಲದಿದ್ದರೆ ಟಿವಿಯಲ್ಲೇ ಅದನ್ನು ನೋಡ್ತೀನಿ.”

ಹೆಚ್ಚಿನ ಪರಿಶ್ರಮ

ತನ್ನ ನಟನೆಯಲ್ಲಿ ರಿಯಾಲಿಟಿ ಇರಲಿ ಅಂತ ರೈಮಾ ಬಹಳ ಪ್ರಯತ್ನಿಸುತ್ತಾಳೆ. “ನನಗೆ ಸದಾ ಅತ್ಯುತ್ತಮ ಕಲಾವಿದರ ನಂಟು ಹಾಗೂ ಸದಭಿರುಚಿಯ ಚಿತ್ರಗಳಲ್ಲಿ ನಟಿಸಲು ಅವಕಾಶ ಕೊಟ್ಟ ಆ ದೇವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಇತರರಂತೆ ಆ್ಯಕ್ಟಿಂಗ್‌ ಸ್ಕೂಲ್ ‌ನಲ್ಲಿ ತರಬೇತಿ ಪಡೆದವಳಲ್ಲ, ಅದು ನನ್ನ ರಕ್ತದಲ್ಲೇ ಕರಗತವಾಗಿದೆ. 17 ವರ್ಷದವಳಾಗಿದ್ದಾಗ ನಾನು ಮೊದಲ ಬಾರಿ ಕ್ಯಾಮೆರಾ ಫೇಸ್‌ ಮಾಡಿದೆ. ಆಗ ಬಂಗಾಳಿ ಚಿತ್ರೋದ್ಯಮದಲ್ಲಿ ನಾನು ಬಹಳ ಪ್ರೆಶರ್‌ ಎದುರಿಸಿದೆ. ನನ್ನ ಅಜ್ಜಿ, ತಾಯಿಗೆ ಹೋಲಿಸುತ್ತಾ ಜನ ನನ್ನಿಂದ ಬಹಳ ಎಕ್ಸ್ ಪೆಕ್ಟ್ ಮಾಡಿದರು. ಆಗಿನಿಂದ ನಾನು ಬಹಳ ಶ್ರದ್ಧೆ ವಹಿಸಿ, ಕಷ್ಟಪಟ್ಟು ನಟಿಸುತ್ತಿದ್ದೇನೆ.

“ನಾನು ಬೆಳ್ಳಿ ತೆರೆಗೆ ಕಾಲಿಟ್ಟ ನಂತರವೇ ಇಂದಿನ ಕಾಲಕ್ಕೆ ತಕ್ಕಂತೆ ಟೆಕ್ನಾಲಜಿ ಕುರಿತು ಒಂದೊಂದೇ ಅಪ್‌ ಡೇಟ್ಸ್ ಪಡೆದು ಮುಂದುವರಿದೆ. ಪ್ರತಿ ಸಹನಟರು, ನಿರ್ದೇಶಕರಿಂದ ತುಂಬಾ ಕಲಿತಿದ್ದೇನೆ. ಮೊದಮೊದಲು ನಾನು ಬಹಳ ಹೆದರಿಕೊಳ್ಳುತ್ತಿದ್ದೆ. ನನ್ನ ಮೊದಲ ಚಿತ್ರ `ಗಾಡ್‌ ಮದರ್‌’ ಹಿಂದಿಯ ಘಟಾನುಘಟಿ ಶಬಾನಾ ಆಜ್ಮಿ ಜೊತೆ ಇತ್ತು. ಆಕೆ ಮುಂದೆ ನಾನು ತೀರಾ ಪೇಲವ ಎಂದು ಜನ ನಾನಾ ರೀತಿ ಆಡಿಕೊಂಡರು. ಕ್ರಮೇಣ ಮುಂದಿನ ಚಿತ್ರ `ಚೋಖೇರ್‌ ಬಾಲಿ’ ನಂತರ ಜನ ನನ್ನನ್ನು ಅಕ್ಸೆಪ್ಟ್ ಮಾಡಿಕೊಳ್ಳ ತೊಡಗಿದರು.”

ನಟನೆಯೇ ನನ್ನ ಜೀವಾಳ

ರೈಮಾ ಮಾತು ಮುಂದುವರಿಸುತ್ತಾ, “ನಟನೆ ಬಿಟ್ಟರೆ ಈಗ ನನಗೆ ಬೇರಾ ಕೆರಿಯರ್‌ ಸೆಟ್‌ ಆಗುವುದಿಲ್ಲ. ಹಿಂದೆ ನಾನು ಶಾಸ್ತ್ರೀಯ ನೃತ್ಯ ಕಲಿತಿದ್ದೆ, ಅದು ನಟನೆಗೆ ಪೂರಕವಾಗಿದೆ. ಅಪ್ಪ ಅಮ್ಮನ ಜೊತೆ ಇದ್ದೇನೆ, ಒಂದು ಪೆಟ್‌ ಡಾಗ್‌ ಇದೆ, ಇಷ್ಟೇ ನನ್ನ ಪ್ರಪಂಚ. ಬಿಡುವಿದ್ದಾಗ ಟಿವಿಯಲ್ಲಿ ಹಳೆಯ ಚಿತ್ರಗಳನ್ನು ನೋಡುತ್ತಿರುತ್ತೇನೆ. ಕೊರೋನಾ ನಂತರ ಈಗ ಒಂದಿಷ್ಟು ಆಫರ್ಸ್‌ ಬರತೊಡಗಿವೆ. ಹೀಗಾಗಿ ಕೇವಲ ನಟನೆಯತ್ತ ಮಾತ್ರ ಕಾನ್‌ ಸ್ಟ್ರೇಟ್‌ ಮಾಡುತ್ತಿದ್ದೇನೆ. ಜೊತೆಗೆ ನನ್ನನ್ನು ನಾನು ಅಪ್ ಡೇಟ್‌ ಮಾಡಿಕೊಳ್ಳಲು ಹಲವಾರು ವರ್ಕ್‌ ಶಾಪ್‌ ಅಟೆಂಡ್‌ ಮಾಡ್ತೀನಿ. ನಾನು ಮುಂಬೈ ಕೋಲ್ಕತಾ ಅಂತ ಓಡಾಡುತ್ತಲೇ ಇರ್ತೀನಿ. ಲಾಕ್‌ ಡೌನ್‌ ಪೂರ್ತಿ ಪೇರೆಂಟ್ಸ್ ಜೊತೆ ಕೋಲ್ಕತಾದಲ್ಲೇ ಇದ್ದೆ. ಕೊರೋನಾ ಬಂದು ಎಲ್ಲರಿಗೂ ಬಾಂಧವ್ಯ, ಜೀವನ, ಸಾವು ಇತ್ಯಾದಿಗಳ ಬಗ್ಗೆ ಪಾಠ ಕಲಿಸಿದೆ.

“ಕೋವಿಡ್‌ ಗೆ ಮುಂಚೆ ಜನ ಕುಟುಂಬಕ್ಕಿಂತ ಹಣಕ್ಕೇ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಿದ್ದರು. ಕೆರಿಯರ್‌ ಗಾಗಿ ಎಲ್ಲಿಂದೆಲ್ಲಿಗೋ ಹೊರಟುಬಿಡುತ್ತಿದ್ದರು. ಲಾಕ್‌ ಡೌನ್‌ ನಂತರ ನಮಗೆ ಕೌಟುಂಬಿಕ ಜೀವನ ಎಷ್ಟು ಮುಖ್ಯ ಎಂದು ಕೊರೋನಾ ಕಲಿಸಿಕೊಟ್ಟಿದೆ. ಈಗಲೂ ನಾನು ಅಮ್ಮ ಅಪ್ಪನನ್ನು ಬಿಟ್ಟು ತಿಂಗಳಾನುಗಟ್ಟಲೆ ಒಬ್ಬಳೇ ಮುಂಬೈನಲ್ಲಿರಲು ಹೆದರುತ್ತೇನೆ!”

ಕುಟುಂಬಕ್ಕಿಂತ ದೊಡ್ಡದಿಲ್ಲ

“ನನ್ನ ತಂದೆ ಈ ಬಾಲಿವುಡ್‌ ಗೆ ಸೇರಿದವರಲ್ಲ. ನಾನು ಕೇವಲ ಅಜ್ಜಿ, ಅಮ್ಮಂದಿರಿಂದ ಗುರುತಿಸಲ್ಪಡಬೇಕು ಎಂದು ಅವರು ಬಯಸಲಿಲ್ಲ. ಹೀಗಾಗಿ ಸ್ವತಂತ್ರವಾಗಿ ನನ್ನ ವ್ಯಕ್ತಿತ್ವ ರೂಪುಗೊಳ್ಳಲು ಬಹಳ ಸಹಕರಿಸಿದರು. ನಮ್ಮದು ಸಾಧಾರಣ ಮಧ್ಯಮ ವರ್ಗದ ಜೀವನ. ಟ್ಯಾಕ್ಸಿಗಿಂತ ಹೆಚ್ಚಾಗಿ ಆಟೋದಲ್ಲೇ ಓಡಾಡುತ್ತಿದ್ದೆ, ಒಂದಿಷ್ಟು ಸಕ್ಸಸ್‌ ಆದ ಮೇಲೆ ಕಾರು ಕೊಂಡುಕೊಂಡೆ. ಸ್ಟಾರ್‌ ಕಿಡ್ಸ್ ತರಹ ನಾನು ಮೆರೆದವಳಲ್ಲ! ಅಮ್ಮನ ಸಹಯೋಗ, ಅಪ್ಪನ ಪ್ರೋತ್ಸಾಹ ಇದ್ದೇ ಇದೆ. ಈ ಚಿತ್ರೋದ್ಯಮದ ಬಗ್ಗೆ ಅಮ್ಮನಿಗೆ ಚೆನ್ನಾಗಿ ಗೊತ್ತು. ಹೀಗಾಗಿ ಅಮ್ಮನೇ ನನ್ನ ಚಿತ್ರದ ಮೊದಲ ವಿಮರ್ಶಕಿ!”

ಪ್ರತಿನಿಧಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ