ನವರಾತ್ರಿ ಸಂದರ್ಭ ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ನಡೆಯುವ ರಾಜವಂಶಸ್ಥರ ಖಾಸಗಿ ದರ್ಬಾರ್​ಗೆ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯ ಮಂಗಳವಾರ ಆರಂಭಿಸಲಾಯಿತು.

ಈ ಹಿನ್ನೆಲೆ ಮಂಗಳವಾರ ಮಧ್ಯಾಹ್ನದವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್​ ನೇತೃತ್ವದಲ್ಲಿ ಬೆಳಗ್ಗೆ 7.30ರಿಂದಲೇ ರತ್ನ ಖಚಿತ ಸಿಂಹಾಸನ ಜೋಡಣೆ ಮಾಡಲಾಯಿತು.

ರಾಜವಂಶ್ಥರು ನಡೆಸುವ ಧಾರ್ಮಿಕ ಕಾರ್ಯ, ಖಾಸಗಿ ದರ್ಬಾರ್‌ಗಾಗಿ ಅರಮನೆ ಪುರೋಹಿತರ ಸಮ್ಮುಖದಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ಮಾಡಲಾಯಿತು. ಅರಮನೆಯ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನದ ಬಿಡಿಭಾಗಗಳನ್ನುಬಿಗಿ ಭದ್ರತೆಯೊಂದಿಗೆ ರಾಜವಂಶಸ್ಥೆ  ಪ್ರಮೋದಾ ದೇವಿ ಒಡೆಯರ್ ಅವರ ಸಮ್ಮುಖದಲ್ಲಿ ದರ್ಬಾರ್​ ಹಾಲ್​ಗೆ ತರಲಾಯಿತು.

ಬೆಳಗ್ಗೆ 10.45ರಿಂದ 11.15ರ ಶುಭ ಮುಹೂರ್ತದಲ್ಲಿ ಸಿಂಹಾಸನದ 13 ಬಿಡಿ ಭಾಗಗಳನ್ನು ದರ್ಬಾರ್ ಹಾಲ್‌ಗೆ ತಂದು ಜೋಡಣೆ ಮಾಡಲಾಯಿತು.

ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ನಡೆಯಲಿದ್ದು, ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ