ಸೋಶಿಯಲ್ ಮೀಡಿಯಾದಲ್ಲಿ ಅಗ್ರಗಣ್ಯ ಎನಿಸಿರುವ ಫೇಸ್ ಬುಕ್ ಗೆ ತನ್ನದೇ ಆದ ಹಲವು ಆಯಾಮಗಳಿವೆ. ಇದರಿಂದ ಒಳಿತು ಕೆಡುಕು ಎಲ್ಲವೂ ಉಂಟು. ಈ ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ.......?
ಹುಟ್ಟಿನಿಂದ ಸಾವಿನವರೆಗಿನ ಎಲ್ಲವನ್ನೂ ದಾಖಲಿಸುವುದು ಆತ್ಮ ಕಥೆಯಾದರೆ, ಫೇಸ್ ಬುಕ್ ಅದಕ್ಕೂ ಒಂದು ಕೈ ಮೇಲು. ಏಕೆಂದರೆ ಇದು ಹುಟ್ಟುವುದಕ್ಕೂ ಮೊದಲಿನಿಂದ ಹಾಗೂ ಮರಣಾನಂತರದ ಚಟುವಟಿಕೆಗಳನ್ನೂ ದಾಖಲಿಸುವಂತಹ ವಿಶಿಷ್ಟ ವೇದಿಕೆ ಎಂದರೆ ತಪ್ಪಾಗಲಾರದು. ಈ ಫೇಸ್ ಬುಕ್ ಗೆ ಈಗಿನ್ನೂ ಇಪ್ಪತ್ತೆರಡರ ಹರೆಯ. ಅಂದರೆ ಫೇಸ್ ಬುಕ್ ಆರಂಭವಾಗಿದ್ದೇ 2003ರಲ್ಲಿ. ಅತ್ಯಂತ ವೇಗವಾಗಿ ವೈವಿಧ್ಯಮಯ ಮಾಹಿತಿಗಳನ್ನು ಹಂಚಿಕೊಳ್ಳುತ್ತಾ ಜನಪ್ರಿಯವಾಗುತ್ತಿರುವ ಫೇಸ್ ಬುಕ್ ಒಂದರ್ಥದಲ್ಲಿ ಆಧುನಿಕ ವಿಶ್ವಕೋಶವೇ ಸರಿ! ಇಂತಹ ಅದ್ಭುತ ಜಾಲತಾಣದ ಇತಿಹಾಸ ಮತ್ತು ಚಟುವಟಿಕೆಗಳ ಕುರಿತಂತೆ ಸಣ್ಣದೊಂದು ಅವಲೋಕನ :
ವಿಶ್ವದಾದ್ಯಂತ ಕೋಟ್ಯಂತರ ಜನರ ಆಕರ್ಷಣೆಯ ಜಾಲತಾಣವಾಗಿರುವ ಫೇಸ್ ಬುಕ್ 2003ರ ಅಕ್ಟೋಬರ್ 28ರಂದು ರೂಪುಗೊಂಡಿತು. ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿದ್ದ ಈಗಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಾರ್ಕ್ ಜುಗಕರ್ ಬರ್ಗ್, ಎಡ್ವರ್ಡೊ ಸಿರಿನ್, ಆ್ಯಂಡ್ರೂ ಮೆಕ್ ಕಾಲಮ್, ಡಸ್ಟಿನ್ ಮಾಸ್ಕೊವಿಟ್ಜ್ ಮತ್ತು ಕ್ರಿಸ್ ಹ್ಯೂಸ್ ಸೇರಿ ಇದನ್ನು ಸ್ಥಾಪಿಸಿದರು. ಮುಂದೆ ಅದರ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳಾಗಿದ್ದು ಮಾರ್ಕ್ ಜುಗರ್ ಬರ್ಗ್ ಈಗ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಜಾಲತಾಣ ಇಷ್ಟೊಂದು ಜನಪ್ರಿಯತೆಯನ್ನು ಗಳಿಸಲು ಕಾರಣ, ಇದೊಂದು ಅದ್ಭುತ ಮಾಹಿತಿ ಕಣಜವಾಗಿರುವುದರ ಜೊತೆಗೆ ಪತ್ರಿಕಾ, ಕಲಾ ಮಾಧ್ಯಮ, ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯೂ, ಆಪ್ತ ಸಖ/ಸಖಿ ಹೀಗೆ ಒಂದೇ ಕಾಲದಲ್ಲಿ ಎಲ್ಲ ಆಗಿರುವುದೇ ಆಗಿದೆ.
ಪೂರ್ವ ಇತಿಹಾಸ
ಆರಂಭದಲ್ಲಿ ಇದು ಸಾಮಾಜಿಕ ಜಾಲತಾಣ ಆಗಿರಲಿಲ್ಲ. ಸೀಮಿತ ಸಂಖ್ಯೆಯ ಸದಸ್ಯರಿಗಾಗಿ ಆರಂಭಿಸಿದ ಇದರ ಮೂಲ ಹೆಸರು ದ ಫೇಸ್ ಬುಕ್. ಮೊದಲಿಗೆ ಅದರ ಸದಸ್ಯತ್ವ ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು. ನಂತರ ಬೋಸ್ಟನ್ ಪ್ರದೇಶದ ಇತರ ಕಾಲೇಜುಗಳಿಗೆ ವಿಸ್ತರಿಸಲ್ಪಟ್ಟಿತು. 2004ರ ಫೆಬ್ರವರಿ 4 ರಂದು ಅದರ ಹೆಸರನ್ನು ಫೇಸ್ ಬುಕ್ ಎಂದು ಬದಲಾಯಿಸಿ. ಅಮೆರಿಕಾ ಮತ್ತು ಕೆನಡಾ ದೇಶದ ಎಲ್ಲಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಯಿತು.
ಕ್ರಮೇಣ ಇದರ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಸ್ವಂತ ಮಿಂಚಂಚೆ ವಿಳಾಸ ಹೊಂದಿದ 13 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ಈ ಜಾಲತಾಣದ ಸದಸ್ಯರಾಗುವ ಅವಕಾಶವನ್ನು 2006ರ ಸೆಪ್ಟೆಂಬರ್ ನಲ್ಲಿ ನೀಡಲಾಯಿತು. ಅಲ್ಲಿಂದೀಚೆಗೆ ಈ ಜಾಲತಾಣ ಬೆಳೆದ ದಾರಿ ಅದ್ಭುತ! ಇತ್ತೀಚಿನ ಅಂಕಿಅಂಶಗಳಂತೆ ವಿಶ್ವದಾದ್ಯಂತ ಫೇಸ್ ಬುಕ್ ಬಳಕೆ ಮಾಡುವವರ ಸಂಖ್ಯೆ 300 ಕೋಟಿಯಾದರೆ, ಅದರಲ್ಲಿ 33 ಕೋಟಿ ಖಾತೆ ಹೊಂದಿರುವ ಭಾರತೀಯರೇ ಮೊದಲ ಸ್ಥಾನದಲ್ಲಿ ಇದ್ದಾರೆ. ಜನಸಂಖ್ಯೆ ಆಧಾರದಲ್ಲಿ ನೋಡಿದಾಗ ಇದೇನೂ ವಿಶೇಷವೆನಿಸದು. ಹಾಗಾದರೆ ಭಾರತಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಚೀನಾದಲ್ಲಿ ಅಲ್ಲಿ ಒಬ್ಬನೇ ಒಬ್ಬ ಬಳಕೆದಾರ ಇಲ್ಲ. ಏಕೆಂದರೆ ಅಲ್ಲಿ ಫೇಸ್ ಬುಕ್ ನ್ನು ಸಂಪೂರ್ಣ ನಿಷೇಧಿಸಲಾಗಿದೆ!





