ಸೋಶಿಯಲ್ ಮೀಡಿಯಾದಲ್ಲಿ ಅಗ್ರಗಣ್ಯ ಎನಿಸಿರುವ ಫೇಸ್ಬುಕ್ಗೆ ತನ್ನದೇ ಆದ ಹಲವು ಆಯಾಮಗಳಿವೆ. ಇದರಿಂದ ಒಳಿತು ಕೆಡುಕು ಎಲ್ಲವೂ ಉಂಟು. ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ…….?

ಹುಟ್ಟಿನಿಂದ ಸಾವಿನವರೆಗಿನ ಎಲ್ಲವನ್ನೂ ದಾಖಲಿಸುವುದು ಆತ್ಮ ಕಥೆಯಾದರೆ, ಫೇಸ್‌ ಬುಕ್‌ ಅದಕ್ಕೂ ಒಂದು ಕೈ ಮೇಲು. ಏಕೆಂದರೆ ಇದು ಹುಟ್ಟುವುದಕ್ಕೂ ಮೊದಲಿನಿಂದ ಹಾಗೂ ಮರಣಾನಂತರದ ಚಟುವಟಿಕೆಗಳನ್ನೂ ದಾಖಲಿಸುವಂತಹ ವಿಶಿಷ್ಟ ವೇದಿಕೆ ಎಂದರೆ ತಪ್ಪಾಗಲಾರದು. ಈ ಫೇಸ್‌ ಬುಕ್‌ ಗೆ ಈಗಿನ್ನೂ ಇಪ್ಪತ್ತೆರಡರ ಹರೆಯ. ಅಂದರೆ ಫೇಸ್‌ ಬುಕ್‌ ಆರಂಭವಾಗಿದ್ದೇ 2003ರಲ್ಲಿ. ಅತ್ಯಂತ ವೇಗವಾಗಿ ವೈವಿಧ್ಯಮಯ ಮಾಹಿತಿಗಳನ್ನು ಹಂಚಿಕೊಳ್ಳುತ್ತಾ ಜನಪ್ರಿಯವಾಗುತ್ತಿರುವ ಫೇಸ್‌ ಬುಕ್ ಒಂದರ್ಥದಲ್ಲಿ ಆಧುನಿಕ ವಿಶ್ವಕೋಶವೇ ಸರಿ! ಇಂತಹ ಅದ್ಭುತ ಜಾಲತಾಣದ ಇತಿಹಾಸ ಮತ್ತು ಚಟುವಟಿಕೆಗಳ ಕುರಿತಂತೆ ಸಣ್ಣದೊಂದು ಅವಲೋಕನ :

ವಿಶ್ವದಾದ್ಯಂತ ಕೋಟ್ಯಂತರ ಜನರ ಆಕರ್ಷಣೆಯ ಜಾಲತಾಣವಾಗಿರುವ ಫೇಸ್‌ ಬುಕ್‌ 2003ರ ಅಕ್ಟೋಬರ್‌ 28ರಂದು ರೂಪುಗೊಂಡಿತು. ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿದ್ದ ಈಗಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಾರ್ಕ್‌ ಜುಗಕರ್‌ ಬರ್ಗ್‌, ಎಡ್ವರ್ಡೊ ಸಿರಿನ್‌, ಆ್ಯಂಡ್ರೂ ಮೆಕ್‌ ಕಾಲಮ್, ಡಸ್ಟಿನ್‌ ಮಾಸ್ಕೊವಿಟ್ಜ್ ಮತ್ತು ಕ್ರಿಸ್‌ ಹ್ಯೂಸ್‌ ಸೇರಿ ಇದನ್ನು ಸ್ಥಾಪಿಸಿದರು. ಮುಂದೆ ಅದರ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳಾಗಿದ್ದು ಮಾರ್ಕ್‌ ಜುಗರ್‌ ಬರ್ಗ್‌ ಈಗ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಜಾಲತಾಣ ಇಷ್ಟೊಂದು ಜನಪ್ರಿಯತೆಯನ್ನು ಗಳಿಸಲು ಕಾರಣ, ಇದೊಂದು ಅದ್ಭುತ ಮಾಹಿತಿ ಕಣಜವಾಗಿರುವುದರ ಜೊತೆಗೆ ಪತ್ರಿಕಾ, ಕಲಾ ಮಾಧ್ಯಮ, ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯೂ, ಆಪ್ತ ಸಖ/ಸಖಿ ಹೀಗೆ ಒಂದೇ ಕಾಲದಲ್ಲಿ ಎಲ್ಲ ಆಗಿರುವುದೇ ಆಗಿದೆ.

ಪೂರ್ವ ಇತಿಹಾಸ

ಆರಂಭದಲ್ಲಿ ಇದು ಸಾಮಾಜಿಕ ಜಾಲತಾಣ ಆಗಿರಲಿಲ್ಲ. ಸೀಮಿತ ಸಂಖ್ಯೆಯ ಸದಸ್ಯರಿಗಾಗಿ ಆರಂಭಿಸಿದ ಇದರ ಮೂಲ ಹೆಸರು ದ ಫೇಸ್ ಬುಕ್. ಮೊದಲಿಗೆ ಅದರ ಸದಸ್ಯತ್ವ ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು. ನಂತರ ಬೋಸ್ಟನ್‌ ಪ್ರದೇಶದ ಇತರ ಕಾಲೇಜುಗಳಿಗೆ ವಿಸ್ತರಿಸಲ್ಪಟ್ಟಿತು. 2004ರ ಫೆಬ್ರವರಿ 4 ರಂದು ಅದರ ಹೆಸರನ್ನು ಫೇಸ್‌ ಬುಕ್‌ ಎಂದು ಬದಲಾಯಿಸಿ. ಅಮೆರಿಕಾ ಮತ್ತು ಕೆನಡಾ ದೇಶದ ಎಲ್ಲಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಯಿತು.

ಕ್ರಮೇಣ ಇದರ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಸ್ವಂತ ಮಿಂಚಂಚೆ ವಿಳಾಸ ಹೊಂದಿದ 13 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ಈ ಜಾಲತಾಣದ ಸದಸ್ಯರಾಗುವ ಅವಕಾಶವನ್ನು 2006ರ ಸೆಪ್ಟೆಂಬರ್‌ ನಲ್ಲಿ ನೀಡಲಾಯಿತು. ಅಲ್ಲಿಂದೀಚೆಗೆ ಈ ಜಾಲತಾಣ ಬೆಳೆದ ದಾರಿ ಅದ್ಭುತ! ಇತ್ತೀಚಿನ ಅಂಕಿಅಂಶಗಳಂತೆ ವಿಶ್ವದಾದ್ಯಂತ ಫೇಸ್‌ ಬುಕ್‌ ಬಳಕೆ ಮಾಡುವವರ ಸಂಖ್ಯೆ 300 ಕೋಟಿಯಾದರೆ, ಅದರಲ್ಲಿ 33 ಕೋಟಿ ಖಾತೆ ಹೊಂದಿರುವ ಭಾರತೀಯರೇ ಮೊದಲ ಸ್ಥಾನದಲ್ಲಿ ಇದ್ದಾರೆ. ಜನಸಂಖ್ಯೆ ಆಧಾರದಲ್ಲಿ ನೋಡಿದಾಗ ಇದೇನೂ ವಿಶೇಷವೆನಿಸದು. ಹಾಗಾದರೆ ಭಾರತಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಚೀನಾದಲ್ಲಿ ಅಲ್ಲಿ ಒಬ್ಬನೇ ಒಬ್ಬ ಬಳಕೆದಾರ ಇಲ್ಲ. ಏಕೆಂದರೆ ಅಲ್ಲಿ ಫೇಸ್‌ ಬುಕ್‌ ನ್ನು ಸಂಪೂರ್ಣ ನಿಷೇಧಿಸಲಾಗಿದೆ!

ಸಂಗ್ರಹಣಾ ಸಾಮರ್ಥ್ಯ

ಹೀಗೆ ವಿಶ್ವ ವ್ಯಾಪಿಯಾಗಿರುವ ಇದರ ಮಾಹಿತಿ ಸಂಗ್ರಹಣಾ ಸಾಮರ್ಥ್ಯ ಎಷ್ಟಿದೆ ಗೊತ್ತೇ? ನಮಗೆ ಎಂ.ಬಿ ಮತ್ತು ಜಿ.ಬಿ ಬಗ್ಗೆ ಗೊತ್ತಿದೆ. ಅದರಾಚೆಗಿನ ಲೆಕ್ಕ ಹೀಗಿದೆ. 1000 ಜಿಬಿ = 1 ಟೆರಾಬೈಟ್‌. 1000 ಟೆರಾಬೈಟ್‌ = 1 ಪೆಟಾಬೈಟ್‌. ಫೇಸ್‌ ಬುಕ್ ಜಾಲತಾಣದಲ್ಲಿ ದಿನವೊಂದಕ್ಕೆ 4 ಪೆಟಾಬೈಟ್‌ ಅಂದರೆ 40 ಲಕ್ಷ ಜಿ.ಬಿ. ಮಾಹಿತಿ ಸಂಗ್ರಹವಾಗುತ್ತದೆ. ಈಗಿನ ಒಟ್ಟು ಸಂಗ್ರಹ 30 ಕೋಟಿ ಜಿ.ಬಿ. ಅಂದರೆ 300 ಪೆಟಾಬೈಟ್‌.

ಈಗಿನ ವೇಗ ನೋಡಿದರೆ ಮುಂದಿನ ಒಂದೆರಡು ವರ್ಷಗಳಲ್ಲಿ ಇದು ದುಪ್ಪಟ್ಟಾದರೂ ಆಶ್ಚರ್ಯವೇನಿಲ್ಲ. ಅಮೆರಿಕಾದ ಕ್ಯಾಲಿಫೋರ್ನಿಯಾದ ಮೆನ್ಲೋಪಾರ್ಕ್‌ ಎಂಬಲ್ಲಿ ಇದರ ಕೇಂದ್ರ ಕಛೇರಿ ಇದೆ. ವಿಶ್ವಾದ್ಯಂತ 18 ಮಾಹಿತಿ ಸಂಗ್ರಹಣಾ ಕೇಂದ್ರಗಳಿದ್ದು, ಅಮೆರಿಕಾ ಒಂದರಲ್ಲಿ 14 ಕೇಂದ್ರಗಳಿವೆ. ಭಾರತದಲ್ಲಿ 2021ರ ಡಿಸೆಂಬರ್‌ ನಲ್ಲಿ 1,30,000 ಚದರಡಿ ವಿಸ್ತೀರ್ಣದ ಕಛೇರಿಯನ್ನು ಗುಜರಾತಿನ ಗುರ್‌ ಗಾಂವ್ ‌ನಲ್ಲಿ ತೆರೆಯಲಾಗಿದೆ. ಇದೂ ಸೇರಿ ಭಾರತದಲ್ಲಿ ಒಟ್ಟು 3 ಕಛೇರಿಗಳಿವೆ. ಆದರೆ ಮಾಹಿತಿ ಸಂಗ್ರಹಣಾ ಕೇಂದ್ರವಿಲ್ಲ. ದೇಶದೊಳಗಿನ ಮಾಹಿತಿಯನ್ನು ಇಲ್ಲೇ ಸಂಗ್ರಹಿಸಿಡುವ ವ್ಯವಸ್ಥೆ ಇರಬೇಕೆಂದು ಸರ್ಕಾರ ಒತ್ತಾಯಿಸುತ್ತಿದೆ. ಕಾರಣಾಂತರಗಳಿಂದ ಫೇಸ್‌ ಬುಕ್‌ ಇದಕ್ಕೆ ಪೂರಕವಾಗಿ ಸ್ಪಂದಿಸಿಲ್ಲ.

ಜಾಹೀರಾತುಗಳಿಂದ ಆದಾಯ

ಫೇಸ್‌ ಬುಕ್‌ ಜಾಲತಾಣದಲ್ಲಿ ಸದಸ್ಯತ್ವ ಶುಲ್ಕ ಇಲ್ಲ. ಆದರೆ ಜಾಹೀರಾತು ಮೂಲಕ ಬರುವ ವಾರ್ಷಿಕ ಆದಾಯ ರೂ.950 ಕೋಟಿ. ಬೇರೆ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಹೋಲಿಸಿದರೆ ಇದರಲ್ಲಿ ಉದ್ಯೋಗ ಮಾಡುವವರ ಸಂಖ್ಯೆ ಸ್ವಲ್ಪ ಕಡಿಮೆ ಎನ್ನಬಹುದು. ವಿಶ್ವಾದ್ಯಂತ ಇವರು ಪೂರ್ಣಕಾಲೀನ ಉದ್ಯೋಗಿಗಳು ಕೇವಲ 83,553. (ಅಕ್ಟೋಬರ್‌ 2022ಕ್ಕೆ ಅನ್ವಯಿಸಿ). ಲೆಕ್ಕಕ್ಕೆ ಭಾರತದಲ್ಲಿ 33 ಕೋಟಿ ಬಳಕೆದಾರರಿದ್ದರೂ ಜೊಳ್ಳುಕಾಳು ವಿಂಗಡಿಸಿದರೆ ಅರ್ಧದಷ್ಟಾದರೂ ಖಂಡಿತಾ ಉದುರುತ್ತದೆ. ಅದರಲ್ಲೂ ಗುಣಮಟ್ಟದವುಗಳನ್ನು ವಿಂಗಡಿಸಿದರೆ ಇನ್ನೂ ಕಡಿಮೆಯಾದರೂ ಆಶ್ಚರ್ಯವಿಲ್ಲ. ಆದರೆ ಇದು ಫೇಸ್‌ ಬುಕ್ ನಿಯಮಗಳಿಗೆ ವಿರುದ್ಧ. ಆದರೂ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವವರೂ ಇದ್ದಾರೆ. ಅದಕ್ಕೆ ಬೇರೆ ಬೇರೆ ಕಾರಣಗಳೂ ಇವೆ. ಕೆಲವರು ಖಾತೆ ತೆರೆದು ಯಾವುದೇ ಚಟುವಟಿಕೆಯಿಲ್ಲದೆ ಸುಮ್ಮನಿರುತ್ತಾರೆ. ಅಂಥವರು ಲೆಕ್ಕಕ್ಕುಂಟು ಆಟಕ್ಕಿಲ್ಲ. ಸ್ವಲ್ಪ ಸಮಯದ ನಂತರ ತಮ್ಮ ಫೇಸ್‌ ಬುಕ್‌ ಖಾತೆಯ ನೆನಪಾಗಿ ತೆರೆಯಲು ನೋಡಿದರೆ ಪಾಸ್‌ ವರ್ಡ್‌ ಮರೆತು ಹೋಗಿರುತ್ತದೆ. ಇನ್ನೊಂದು ಖಾತೆ ತೆರೆದು ಒಂದಿಷ್ಟು ಜನರನ್ನು ಸ್ನೇಹಿತರಾಗಿ ಸೇರಿಸಿ ಪುನಃ ತೆಪ್ಪಗೆ ಇರುತ್ತಾರೆ. ಇನ್ನು ಮೃತಪಟ್ಟವರ ಖಾತೆ ಸಾಯುವುದಿಲ್ಲವಲ್ಲ…..?

ಉದ್ದೇಶ ವ್ಯಾಪ್ತಿ

ನಿರ್ದಿಷ್ಟ ಉದ್ದೇಶವಿಟ್ಟುಕೊಂಡು…. ಉದಾಹರಣೆಗೆ ಸರ್ಕಾರವನ್ನು ಟೀಕಿಸುವ, ವ್ಯವಸ್ಥೆಯನ್ನು ಹಾಳುಗೆಡವುವ, ಒಂದರ್ಥದಲ್ಲಿ ಋಣಾತ್ಮಕ ಮಾಹಿತಿ ಹರಡು ಉದ್ದೇಶದಿಂದ ಸೃಷ್ಟಿಸಿದಂತಹ ನಕಲಿ ಖಾತೆಗಳು ಕೆಲವು. ವಾಸ್ತವವಾಗಿ ಯಾವ ಹೆಸರಿನಲ್ಲಿ ಖಾತೆ ಇರುವುದೋ ಅವರಿಗೂ ಅದಕ್ಕೂ ಏನೇನೂ ಸಂಬಂಧವಿರುವುದಿಲ್ಲ. ಭಾವಚಿತ್ರ ಇರುವುದಿಲ್ಲ. ಇನ್ನೂ ವಿಶೇಷವೆಂದರೆ ಅವರಲ್ಲಿ ಹೆಚ್ಚಿನವರು ದೇಶದೊಳಗೇ ಇರುವುದಿಲ್ಲ. ಯಾವುದೋ ದೇಶದಲ್ಲಿದ್ದು ಸ್ವಂತ ದೇಶದ ಬಗ್ಗೆ ದ್ವೇಷ ಹರಡುವ ಕಾಯಕ ಮಾಡುತ್ತಾರೆ.

ವಿಚಿತ್ರವೆಂದರೆ ಹೀಗೆ ಟೀಕಿಸುವವರು ಯಾವುದೇ ಧರ್ಮಕ್ಕೆ ಸೇರಿದವರಾದರೂ ನಕಲಿ ಹೆಸರಿನಲ್ಲಿ ಖಾತೆ ತೆರೆಯುವ ಮೂಲಕ ಆ ಧರ್ಮದ ವಿರುದ್ಧವೇ ಪೋಸ್ಟ್ ಹಾಕುತ್ತಾರೆ. ಏಕೆಂದರೆ ಅವರು ತಮ್ಮ ಮೂಲ ಗುರುತನ್ನು ಮರೆಮಾಚಿರುತ್ತಾರೆ! ಯಾವುದಾದರೂ ನಿರ್ದಿಷ್ಟ ವಿಷಯದಲ್ಲಿ ಮಾತ್ರ ಟೀಕಿಸುವ ಅಭ್ಯಾಸ ಬೆಳೆಸಿಕೊಂಡವರೂ ಇರುತ್ತಾರೆ. ಅವರ ಖಾತೆಗಳಲ್ಲಿ ಯಾವುದೇ ಮುಚ್ಚುಮರೆ ಇಲ್ಲದೆ, ತಮ್ಮ ಭಾವಚಿತ್ರ, ವಿವರ ಎಲ್ಲವನ್ನೂ ಕೊಡುತ್ತಾರೆ. ಆದರೆ ಅಂತಹ ಖಾತೆಗಳ ವಿರುದ್ಧ ಫೇಸ್‌ ಬುಕ್‌ ಗೆ ದೂರು ನೀಡುವವರ ಸಂಖ್ಯೆ ಹೆಚ್ಚು. ಹಾಗೆಲ್ಲ ಆದಾಗ ಫೇಸ್‌ ಬುಕ್‌ ಅಂತಹ ಖಾತೆಗಳ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ ಅಥವಾ ಸ್ಥಗಿತಗೊಳಿಸುತ್ತದೆ. ಹಾಗೆ ಆದಾಗೆಲ್ಲ ಇನ್ನೊಂದು ಖಾತೆ ತೆರೆಯಲ್ಪಡುತ್ತದೆ. ಹೀಗಾಗಿ ಮೇಲ್ನೋಟಕ್ಕೆ ಕಾಣುವ ಅಂಕಿಅಂಶಕ್ಕೂ, ವಾಸ್ತವಕ್ಕೂ ಅಗಾಧ ವ್ಯತ್ಯಾಸವಿದೆ.

ಫೇಸ್ಬುಕ್ ಚಟುವಟಿಕೆಗಳು

ಇನ್ನು ಫೇಸ್‌ ಬುಕ್‌ ನ ಚಟುವಟಿಕೆಗಳನ್ನು ನೋಡುವುದಾದರೆ, ಪರಸ್ಪರ ಸ್ನೇಹಿತರಾಗಲು ಸ್ನೇಹದ ಕೋರಿಕೆಯನ್ನು ಕಳುಹಿಸಬೇಕು. ಅದನ್ನು ಸ್ವೀಕರಿಸಿದಾಗ ಮಾತ್ರ ಸ್ನೇಹಿತರಾಗಲು ಸಾಧ್ಯ. ಹೀಗೆ ಸ್ನೇಹಿತರಾಗುವವರ ಸಂಖ್ಯೆ 5000 ಮೀರುವಂತಿಲ್ಲ. ಕೆಲವೊಮ್ಮೆ 5000 ಸ್ನೇಹಿತರಿದ್ದರೂ ಸ್ನೇಹದ ಕೋರಿಕೆ ಕಳುಹಿಸುವವರಿದ್ದಾರೆ. ನಾವು ಫೇಸ್‌ ಬುಕ್‌ ನಲ್ಲಿ ಬರೆದ ಪೋಸ್ಟ್ ಗಳನ್ನು ವೈಯಕ್ತಿಕ ವಿವರಗಳನ್ನು ಯಾರು ಓದಬಹುದು, ಯಾರು ಓದಬಾರದು ಎಂಬುದನ್ನು ನಿಯಂತ್ರಿಸಲು ಸಾಧ್ಯವಿದೆ.  ಕೆಲವರು ತಮ್ಮ ಎಲ್ಲಾ ವಿವರಗಳನ್ನು ಅಡಗಿಸಿಟ್ಟರೆ, ಇನ್ನೂ ಕೆಲವರು ಮೊಬೈಲ್ ‌ಸಂಖ್ಯೆ, ಮಿಂಚಂಚೆ ವಿಳಾಸ (ಇ-ಮೇಲ್)  ಸೇರಿದಂತೆ ಎಲ್ಲ ಎಲ್ಲರಿಗೂ ಸಿಗುವಂತೆ ತೆರೆದಿಡುತ್ತಾರೆ. ಎರಡೂ ಒಳ್ಳೆಯ ಅಭ್ಯಾಸವಲ್ಲ. ಹೀಗೆ ಎಲ್ಲಾ ವಿವರ ಹಾಕುವುದರ ಹಿಂದೆ ತಮ್ಮ ವ್ಯಾಪಾರ, ವ್ಯವಹಾರಗಳನ್ನು ಪ್ರಚಾರಕ್ಕೆ ಬಳಸುವ ಉದ್ದೇಶ ಕೆಲವರಿಗೆ ಇರುತ್ತದೆ.

ಫ್ರೆಂಡ್ಲಿ ರಿಕ್ವೆಸ್ಟ್

ಸಾಮಾನ್ಯವಾಗಿ ಸ್ನೇಹದ ಕೋರಿಕೆ ಕಳುಹಿಸುವವರಿಗೆ ಸಂಬಂಧಿಸಿದ ಕನಿಷ್ಠ ವಿವರಗಳನ್ನು ತಿಳಿಯದೆ ಸ್ವೀಕರಿಸಿ, ಸ್ನೇಹಿತರ ಗುಂಪಿಗೆ ಸೇರಿಸಿಕೊಳ್ಳುವುದು ಹೇಗೆ? ಸ್ನೇಹಿತರಾಗಲು ಬಯಸುವವರಲ್ಲಿ ಎಷ್ಟು ವಿಚಿತ್ರ ವರ್ಗದವರು ಇರುತ್ತಾರೆ ಎಂಬುದಕ್ಕೆ ಕೆಲವು ಉದಾಹರಣೆಗಳು. ಪ್ರೊಫೈಲ್ ಲಾಕ್‌ ಮಾಡಿ ಸ್ನೇಹದ ಆಹ್ವಾನ ಕಳುಹಿಸಿದವರಿಗೆ ಕೆಲವು ಪರಸ್ಪರರ ಸ್ನೇಹಿತರು ಇರುವ ಕಾರಣಕ್ಕೆ ಮೆಸೆಂಜರ್‌ ಮೂಲಕ ಪರಿಚಯದ ಬಗ್ಗೆ ವಿಚಾರಿಸಿದರೆ ಬರುವ ಉತ್ತರ : ಹೆಸರು ಮತ್ತು ಊರು ಮಾತ್ರ! ಇನ್ನೂ ಕೆಲವರು ನೀಡುವ ವಿಚಿತ್ರ ಉತ್ತರಗಳನ್ನು ನೋಡಿ.

ಯಾವನೋ ಒಬ್ಬ ಜೆಸಿಬಿ ಆಪರೇಟರ್‌ ಅಂತೆ. ಅವನಿಗೆ ಎಲ್ಲೋ ಏನೋ ಅಗೆಯುತ್ತಿರುವಾಗ ಚಿನ್ನದ ಬಿಸ್ಕೆಟ್‌ ಸಿಕ್ಕಿದ್ದು, ಅದರ ಮಾರಾಟಕ್ಕೆ ಪಾಲುದಾರಿಕೆ ಮಾಡಲು ಫೇಸ್‌ ಬುಕ್‌ ಸ್ನೇಹ ಬೇಕಂತೆ!

ಇನ್ನೊಬ್ಬರಿಗೆ ಅವರ ವೃತ್ತಿ ಪ್ರವೃತ್ತಿ ಬಗ್ಗೆ ಕೇಳಿದರೆ, ಆರೋಗ್ಯ ಸಲಹೆಗಾರರಂತೆ. ಸಲಹೆ ಬೇಕಾದರೆ ಸ್ನೇಹದ ಕೋರಿಕೆ ಸ್ವೀಕರಿಸಬೇಕಂತೆ. ಆರೋಗ್ಯ ಸಲಹೆಯಲ್ಲಿ ಆಸಕ್ತಿ ಇಲ್ಲ, ಸ್ನೇಹದ ಕೋರಿಕೆಯನ್ನು ಸ್ವೀಕರಿಸಬಹುದು ಎಂದು ಉತ್ತರಿಸಿದರೆ, ಬರೀ ಸ್ನೇಹಿತರಾಗಿರಲು ಬಿಡುವಿಲ್ಲವಂತೆ. ಹೇಗಿದೆ ವರಸೆ!?

ವಿವರ ಕೇಳಿದರೆ, ವಿವರ ಏಕೆ ಹೇಳಬೇಕು? ಕೋರಿಕೆ ಸ್ವೀಕರಿಸಿದರೆ ವಿವರ ಸಿಗುತ್ತದೆ ಎಂಬ ಉದ್ಧಟತನ!

ಅದಕ್ಕಿಂತಲೂ ವಿಚಿತ್ರವೆಂದರೆ ಖಾತೆಗೆ ಇಟ್ಟಿರುವ ಹೆಸರುಗಳು! ಮಾವನ ಮನೆ, ಚಿನಕುರಳಿ, ಮಳೆ ಹುಡುಗಿ, ನಾನವನಲ್ಲ, ನೀಲಿ ಚಿಟ್ಟೆ, ಕೊಳವೆ ಬಾವಿ, ಅಂತರ್ಜಲ ಹೆಚ್ಚಿಸಿ, ಅಧಿಕ ಪ್ರಸಂಗಿ, ಮೋಟು ಬೀಡಿ, ಕವಿತೆಯ ಹುಡುಕಾಟದಲ್ಲಿ…. ಇನ್ನೂ ಏನೇನೋ! ಒಂದು ಹೆಸರಂತೂ ಕೇವಲ ….. ಹೇಗಿದೆ?

ಕೆಲವರು ಕೋರಿಕೆ ಸ್ವೀಕರಿಸದೇ ಇದ್ದರೂ ಮೆಸೆಂಜರ್‌ ನಲ್ಲಿ ಚಾಟಿಂಗ್‌ಮಾಡುತ್ತಾರೆ. ವಿಷಯ ಏನೇನೂ ಅಲ್ಲ. ಗುಡ್‌ ಮಾರ್ನಿಂಗ್‌, ಗುಡ್‌ ಈವ್ನಿಂಗ್‌, ಗುಡ್‌ ನೈಟ್‌, ಊಟ ಆಯ್ತಾ, ಕಾಫಿ ಆಯ್ತಾ…? ಹೀಗೆಲ್ಲಾ ಮಾಡಬೇಡಿ ಎಂದರೆ, ಉತ್ತರಿಸಿದರೆ ಏನು ನಿಮ್ಮ ಗಂಟು ಹೋಗುತ್ತಾ ಎಂಬ ಉದ್ಧಟತನದ ಉತ್ತರ ಬೇರೆ. ಬ್ಲಾಕ್‌ ಮಾಡಿ ಸುಮ್ಮನೆ ಇರುವುದು ಇದಕ್ಕೆಲ್ಲಾ ಪರಿಹಾರ.

ಚಿತ್ರವಿಚಿತ್ರ ಪುಟಗಳು

ಕೆಲವರ ಪುಟವನ್ನು ನೋಡಿದರೆ ದೇವರಿಗೇ ಪ್ರೀತಿ. ಹುಟ್ಟುಹಬ್ಬಕ್ಕೆ ಯಾರು ಯಾರೋ ಶುಭಾಶಯ ಕೋರಿದ್ದು ಬಿಟ್ಟರೆ, ಇನ್ನೇನೂ ಇರುವುದಿಲ್ಲ. ಕನಿಷ್ಠ ಶುಭಾಶಯ ಹೇಳಿದವರಿಗೆ ಉತ್ತರ ಕೂಡಾ ಇಲ್ಲ!

ಸ್ನೇಹಿತರಲ್ಲದಿದ್ದರೂ, ವಿಷಯದ ಬಗ್ಗೆ ಯಾವುದೇ ಜ್ಞಾನ ಇಲ್ಲದಿದ್ದರೂ ಎರ್ರಾಬಿರ್ರಿ ಟೀಕೆಗಳು. ಅವರ ಟೀಕೆಗೆ ಉತ್ತರಿಸೋಣವೆಂದರೆ ಪ್ರೊಫೈಲ್ ಲಾಕ್‌!

ಪೋಸ್ಟ್ ಗಳ ಬಗ್ಗೆ ಹಿಂದೆ ಮುಂದೆ ಯೋಚಿಸದೆ ಟೀಕೆಗಳ ಸುರಿಮಳೆ ಸುರಿಸುವವರ ಬಗ್ಗೆ ಉದಾಹರಣೆ : ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರದಲ್ಲಿ 40 ಲಕ್ಷ ವೆಚ್ಚದಲ್ಲಿ ತೇಲು ಸೇತುವೆಯನ್ನು ನಿರ್ಮಿಸಿ ಪ್ರವಾಸಿಗರ ಮನರಂಜನೆಗೆ ಒದಗಿಸಲಾಗಿತ್ತು. ಉದ್ಘಾಟನೆಯಾದ 1-2 ದಿನಗಳಲ್ಲಿ ಹವಾಮಾನ ವೈಪರೀತ್ಯದ ಕಾರಣಕ್ಕೆ ಅದನ್ನು ಬಿಚ್ಚಿ ಇಡಲಾಗಿತ್ತು.

ತಕ್ಷಣ ಬಂತು ನೋಡಿ ಟೀಕೆಗಳ ಸುರಿಮಳೆ. ಅದನ್ನು ಉದ್ಘಾಟಿಸಿದ ಶಾಸಕರನ್ನು ಸೇರಿಸಿ ಲಂಚ ತೆಗೆದುಕೊಂಡು ಸರ್ಕಾರಕ್ಕೆ ಲಕ್ಷಾಂತರ ನಷ್ಟ ಎಂದೆಲ್ಲ ಗದ್ದಲವೆಬ್ಬಿಸಲಾಯಿತು. ಇಡೀ ಯೋಜನೆಯೇ ಖಾಸಗಿ ವ್ಯಕ್ತಿಗಳ ಮಾಲೀಕತ್ವದ್ದಾಗಿದ್ದು ಸರ್ಕಾರಕ್ಕೆ ಅದಕ್ಕೂ ಯಾವುದೇ ಸಂಬಂಧವಿರಲಿಲ್ಲ. ನಂತರ ಯೋಜನೆಯ ಪ್ರಾಯೋಜಕರು ಸ್ಪಷ್ಟೀಕರಣ ನೀಡಿದಾಗ ಮೊದಲು ಹಾರಾಡಿದರು ಯಾವ ಬಿಲ ಸೇರಿಕೊಂಡರೋ ಗೊತ್ತಿಲ್ಲ.

ಟೀಕೆ ಟಿಪ್ಪಣಿ

ಇದೆಲ್ಲಾ ಚಿಕ್ಕ ಪುಟ್ಟ ವಿಷಯಗಳು. ಆದರೆ ಕನಿಷ್ಠ ಜ್ಞಾನವಿದ್ದರೂ, ರಾಷ್ಟ್ರೀಯ, ಅಂತಾರಾಷ್ಟ್ರೀಯ, ಆರ್ಥಿಕ ವಿಷಯಗಳ ಬಗ್ಗೆ ಪ್ರಚಂಡ ಜ್ಞಾನ ಇರುವಂತೆ ಪೋಸ್ಟ್ / ಟೀಕೆ ಟಿಪ್ಪಣಿಗಳನ್ನು ಮಾಡುವವರು ಒಂದು ವರ್ಗದವರಾದರೆ, ಮೂಲ ವಿಷಯವನ್ನೇ ಓದದೆ ಎರ್ರಾಬಿರ್ರಿ ಒದರುವರು, ಅವರು ಬರೆದ ವಿಷಯಕ್ಕೆ ಆಧಾರ ಕೇಳಿದರೆ ಮೆತ್ತಗೆ ಜಾರಿಕೊಳ್ಳುವರು, ತಮ್ಮ ಮೊಂಡುವಾದಕ್ಕೆ ಅಂಟಿಕೊಂಡು, ಕೆಲವೊಮ್ಮೆ ಅಶ್ಲೀಲವಾದ ಟೀಕೆ ಮಾಡುವವರೂ ಇರುತ್ತಾರೆ. ಸ್ಥಳೀಯ, ರಾಷ್ಟ್ರೀಯ, ಅಷ್ಟೇಕೆ ಅಂತಾರಾಷ್ಟ್ರೀಯ ವಿಷಯಗಳಲ್ಲಿ ಕೆಸರೆರಚಿ ಮಾಯವಾಗುವವರ ಸಂಖ್ಯೆ ದೊಡ್ಡದಾಗಿಯೇ ಇದೆ.

ಕೆಲವರು ನಮ್ಮ ಪುಟದಲ್ಲಿ ಇರುವ ಎಲ್ಲಾ ಮಾಹಿತಿಗಳನ್ನು, ಪೋಸ್ಟ್ ಗಳನ್ನು ಓದಿರುತ್ತಾರೆ. ಆದರೆ ನಮ್ಮ ಧೋರಣೆ, ಆಸಕ್ತಿಗೆ ತೀರಾ ವಿರುದ್ಧವಾದ ಧೋರಣೆ ಹೊಂದಿದವರಾದರೂ ನಮ್ಮ ಸ್ನೇಹ ಬಯಸುತ್ತಾರೆ. ಹೀಗೆ ಸ್ನೇಹ ಬಯಸುವ ಉದ್ದೇಶವೇನೆಂದರೆ, ನಮ್ಮ ಪುಟದಲ್ಲಿರುವ ವಿಷಯವನ್ನು ಓದಿ ಏನಾದರೂ ಟೀಕೆ, ಟಿಪ್ಪಣಿ ಮಾಡಬೇಕಾದರೆ ಸ್ನೇಹಿತರಾಗಬೇಕಾಗುತ್ತದೆ. ಅಂದರೆ ನಮ್ಮ ಪುಟದಲ್ಲಿ ಏನಾದರೂ `ಒದರಬೇಕಾದರೆ’ ಒಳ ನುಸುಳಬೇಕಾಗುತ್ತದೆ. ಆದ್ದರಿಂದ ಸ್ನೇಹಿತರನ್ನು ಆಯ್ಕೆ ಮಾಡುವ ಮೊದಲು ಕೂಲಂಕಷವಾಗಿ ಪರಿಶೀಲನೆ ಮಾಡುವುದು ಒಳ್ಳೆಯದು.

ವಿಧ್ವಂಸಕ ಕೃತ್ಯಗಳು

ಇನ್ನು ಒಂದು ರೀತಿಯ ವಿಧ್ವಂಸಕ ಕೃತ್ಯ ನಡೆಸುವವರಿರುತ್ತಾರೆ. ಅದು ಹೇಗೆಂದರೆ, ಕೆಲವು ಗಣ್ಯ ವ್ಯಕ್ತಿಗಳು ಖಾತೆ ತೆರೆದು ಯಾವುದೋ ಕಾರಣಕ್ಕೆ ಹೆಚ್ಚು ಕ್ರಿಯಾಶೀಲರಾಗಿರುವುದಿಲ್ಲ. ಆದರೆ ಅವರ ಸ್ನೇಹಿತರ ಬಳಗ ಸಾಕಷ್ಟು ದೊಡ್ಡದಿರುತ್ತದೆ. ಅಂತಹ ಖಾತೆಗಳನ್ನು ಗಮನಿಸಿ ಕೆಲವರು ಅದೇ ಹೆಸರು, ಪ್ರೊಫೈಲ್, ಚಿತ್ರದ ನಕಲು ಮಾಡಿ ಹೊಸ ಖಾತೆಯನ್ನು ರಚಿಸುತ್ತಾರೆ.

ನಂತರ ಈ ಮೊದಲಿನ ಮೂಲ ಖಾತೆಯಲ್ಲಿದ್ದ ಸ್ನೇಹಿತರಿಗೆ ಪುನಃ ಕೋರಿಕೆ ಕಳುಹಿಸುತ್ತಾರೆ. ಅವರಂತೆಯೇ ಹೆಚ್ಚು ಕ್ರಿಯಾಶೀಲರಾಗಿರದ ಅವರ ಸ್ನೇಹಿತರು ಈಗಾಗಲೇ ಅವರು ಸ್ನೇಹಿತರಾಗಿರುವುದನ್ನು ಗಮನಿಸದೆ ಸ್ವೀಕರಿಸಿ ಬಿಡುತ್ತಾರೆ. ಅಲ್ಲಿಂದ ರಂಗಿನಾಟ ಆರಂಭ! ಮೆಸೆಂಜರ್‌ ನಲ್ಲಿ ಕ್ಷೇಮ ಸಮಾಚಾರ ಕೇಳುವ ನೆಪದಲ್ಲಿ ತುರ್ತಾಗಿ ಒಂದಿಷ್ಟು ಹಣ ಬೇಕಾಗಿತ್ತು ಎಂಬ ಕೋರಿಕೆ ಮಂಡಿಸುತ್ತಾರೆ. ಆತ್ಮೀಯರು ಪರಿಶೀಲನೆ ಮಾಡದೆ ಕಳುಹಿಸುವುದೂ ಇದೆ. ನೂರರಲ್ಲಿ ಒಬ್ಬರಾದರೂ ಒಂದೆರಡು ಸಾವಿರ ಕಳುಹಿಸಿದರೂ ಸಾಕಲ್ಲ….!

ಹೀಗೆ ನಕಲಿ ಖಾತೆ ತೆರೆಯುವ, ಕೋರಿಕೆ ಕಳುಹಿಸುವ ವ್ಯವಹಾರ ಎಲ್ಲವೂ ಅಪರ ರಾತ್ರಿಯಲ್ಲಿ ನಡೆಯುತ್ತದೆ. ಬೆಳಗಾಗುವುದರೊಳಗೆ ಅಂತಹ ಖಾತೆ ಮಂಗಮಾಯ! ಪೋಸ್ಟ್ ಅಥವಾ ಶೇರ್‌ ಮಾಡುತ್ತಿದ್ದರೆ ಮಾತ್ರ ಖಾತೆ ಚಾಲ್ತಿಯಲ್ಲಿರುವಂತೆ ಕಾಣಲು ಸಾಧ್ಯ. ಕೇವಲ ಲೈಕ್‌ ಅಥವಾ ಟಿಪ್ಪಣಿ ಮಾತ್ರ ಮಾಡುವುದರಿಂದ ಇದು ಗೋಚರಿಸುವುದಿಲ್ಲ. ಇಂತಹ ಖಾತೆಗಳೇ ನಕಲು ಮಾಡುವವರಿಗೆ ಸುಲಭವಆಗಿ ತುತ್ತಾಗುವುದು.

ನಕಲಿ ಖಾತೆಗಳ ಗೊಂದಲಗಳು

ನಕಲಿ ಖಾತೆ ಸೃಷ್ಟಿಸಿದ ಬಗ್ಗೆ ಸ್ವತಃ ಮೂಲ ಖಾತೆ ಮಾಡಿದರೇ ದೂರು ದಾಖಲಿಸಿದರೂ ಅದನ್ನು ತಿರಸ್ಕರಿಸಿದ ಉದಾಹರಣೆಗಳಿವೆ. ಅದೇ ಯಾವುದಾದರೊಂದು ಪೋಸ್ಟ್ ಗೆ ಅಥವಾ ಟಿಪ್ಪಣಿಗೆ ದೂರು ದಾಖಲಿಸಿದರೆ, ತಕ್ಷಣ `ಮಾನದಂಡಗಳ ಉಲ್ಲಂಘನೆ’ ಕಾರಣಕ್ಕೆ ಖಾತೆಯನ್ನು ಅಮಾನತು ಅಥವಾ ಖಾಯಂ ರದ್ದುಪಡಿಸುತ್ತದೆ ಫೇಸ್‌ ಬುಕ್‌.

ಫೇಸ್‌ ಬುಕ್‌ ನಲ್ಲಿ ಬರೆಯುವುದರಲ್ಲಿರುವ ಒಂದು ಅನುಕೂಲವೆಂದರೆ ತಕರಾರು ಆಗುವ ಸಾಧ್ಯತೆ ಏನಾದರೂ ಕಾಣಿಸಿದರೆ ಪೋಸ್ಟ್ ಅಥವಾ ಟಿಪ್ಪಣಿ ಎರಡನ್ನೂ ತಿದ್ದುಪಡಿ ಮಾಡಬಹುದು ಅಥವಾ ಅಚಾನಕ್ಕಾಗಿ ರದ್ದು ಮಾಡಲೂಬಹುದು. ಮುದ್ರಣ ಮಾಧ್ಯಮದಲ್ಲಿ ಈ ಅವಕಾಶವಿಲ್ಲ.

ಆದರೆ ಫೇಸ್‌ ಬುಕ್‌ ಉಚಿತವಾಗಿ ಉಪಯೋಗಿಸಬಹುದಾದ ಜಾಲತಾಣವಾಗಿದ್ದು, ಅದು ಆದಾಯ ತರುವಂತಹ ಜಾಹೀರಾತುಗಳನ್ನು ನಡುವೆ ಪ್ರಸಾರ ಮಾಡುತ್ತದೆ. ಇದು ಸಹಜವೇ, ಆದರೆ ನಾನು ಗಮನಿಸಿದಂತೆ ಬರುವ ರೀಲ್ ‌ಗಳಲ್ಲಿ ಅಶ್ಲೀಲ ಚಿತ್ರಗಳೂ ಇರುತ್ತದೆ. ಅಪ್ಪಿತಪ್ಪಿ ಅದನ್ನು ತರೆದರೆ ಪುಂಖಾನುಪುಂಖ ಮರುಕಳಿಸುತ್ತದೆ!

ಫೇಸ್‌ ಬುಕ್‌ ನಲ್ಲಿ ವಯಸ್ಸಿನ ದೃಢೀಕರಣಕ್ಕೆಂದು ಯಾವ ದಾಖಲೆಯನ್ನೂ ಒದಗಿಸದೇ ಅಪ್ರಾಪ್ತ ವಯಸ್ಕರೂ ಖಾತೆ ತೆರೆಯುವ ಅವಕಾಶವಿದೆ. ಸಹಜವಾಗಿ ಇದು ಅಪಾಯಕಾರಿ. ಯೂಟ್ಯೂಬ್‌ ನಲ್ಲಾದರೆ ಮಕ್ಕಳಿಗೆಂದೇ ಪ್ರತ್ಯೇಕ ಚಾನೆಲ್ ‌ಇದೆ. ಬೇರೆ ಚಾನೆಲ್ ‌ನೋಡಲು ಸಾಧ್ಯವಾಗದಂತೆ ಮಾಡುವ ವ್ಯವಸ್ಥೆ ಇದೆ. ಫೇಸ್‌ ಬುಕ್‌ ನಲ್ಲಿ ಇದಿಲ್ಲ. ವಿಚಿತ್ರ ಆತ್ಮೀಯತೆ

ಕೆಲವೊಮ್ಮೆ ಯಾವುದೇ ಪರಿಚಯ ಇಲ್ಲದಿದ್ದರೂ ಏಕಾಏಕಿ ಆತ್ಮೀಯ ಸ್ನೇಹಿತರಂತೆ ವರ್ತಿಸುತ್ತಾರೆ. ಹಳೇ ಪರಿಚಯವೆಂಬಂತೆ ಹರಟೆ ಹೊಡೆಯುತ್ತಾರೆ. ನಡುವೆ ಭಿನ್ನಾಭಿಪ್ರಾಯ ಏನಾದರೂ ಬಂದರೆ ಏಕಾಏಕಿ ಕಚ್ಚಾಟ ಶುರು ಮಾಡುತ್ತಾರೆ. ಜೋರಾದರೆ ಬ್ಲಾಕ್‌!

ಕೆಲವರ ವರ್ತನೆಯೂ ಬಹಳ ವಿಚಿತ್ರ. ಸಲಹೆ ಕೇಳುವುದು ಸರಿ. ತುರ್ತು ಸಂದರ್ಭದಲ್ಲಿ ಏನಾದರೂ ಚಿಕಿತ್ಸೆ ಬೇಕಾದರೆ ಅದನ್ನೂ ಫೇಸ್‌ ಬುಕ್‌ ನಲ್ಲಿ ಹಾಕಿ ಸಲಹೆ ಕೇಳುವುದು, ಒಬ್ಬೊಬ್ಬರು ಒಂದೊಂದು ಸಲಹೆ ಕೊಡುತ್ತಾರೆ. ಇದು ಎಷ್ಟರಮಟ್ಟಿಗೆ ಸರಿಯೋ? ಕೇಳುವವರು ಮತ್ತು ಹೇಳುವವರೇ ತಿಳಿಸಬೇಕು.

ವೈವಿಧ್ಯಮಯ ಪೋಸ್ಟ್ ಗಳು

ಇನ್ನು ಪೋಸ್ಟ್ ಹಾಕುವುದರಲ್ಲಿ ವೈವಿಧ್ಯಗಳ ಬಗ್ಗೆ ಹೇಳಿದಷ್ಟೂ ಮುಗಿಯದು. ಹುಟ್ಟಿಗೂ ಮೊದಲಿನಿಂದ ಆರಂಭಿಸಿ ಸಾವಿನ ನಂತರ ಮುಗಿಯದ ಪ್ರವಾಸಗಳನ್ನು ಬಿತ್ತರಿಸುವ ಏಕೈಕ ವೇದಿಕೆ ಫೇಸ್‌ ಬುಕ್‌ ಎಂದರೆ ತಪ್ಪಾಗದು. ಏಕೆಂದರೆ ಪರಸ್ಪರರು ಸ್ನೇಹಿತರಾಗಿ, ಪ್ರೇಮಿಗಳಾಗಿ ಪರಸ್ಪರರ ಭಾವನೆಗಳ ವಿನಿಮಯ, ಸುತ್ತಾಟ, ಮನಸ್ತಾಪ ಇಂತಹ ವಿವಾಹಪೂರ್ವ ಆಗುಹೋಗುಗಳ ಸಚಿತ್ರ ಮಾಹಿತಿಯನ್ನು ಫೇಸ್‌ ಬುಕ್‌ ನಲ್ಲಿ ಪ್ರಕಟಿಸುವವರೂ ಇದ್ದಾರೆ.

ಮುಂದುವರಿದು ಪ್ರೀತಿ ವಿವಾಹದತ್ತ ಹೊರಳಿದರೆ ನಿಶ್ಚಿತಾರ್ಥ, ವಿವಾಹಪೂರ್ವ ಚಿತ್ರೀಕರಣ (ಪ್ರಿವೆಡ್ಡಿಂಗ್‌ ಶೂಟ್‌), ಮದುವೆಯಾದರೆ ಪ್ರತಿಯೊಂದು ಹಂತದ ಚಿತ್ರೀಕರಣ ಮಾಡಿ ಫೇಸ್‌ ಬುಕ್‌ ನಲ್ಲಿ ಹಾಕುವವರೂ ಇದ್ದಾರೆ. ಅಷ್ಟಕ್ಕೇ ನಿಲ್ಲುವುದಿಲ್ಲ. ಮದುವೆ ನಂತರ ಒಂದು ವಾರ, ಒಂದು ತಿಂಗಳು, ಮೂರು ತಿಂಗಳು, ಆರು ತಿಂಗಳು, ವಾರ್ಷಿಕೋತ್ಸವ, ಮಧುಚಂದ್ರ ಇನ್ನೂ ಏನೇನೋ….! ಹೀಗೆಲ್ಲಾ ಮುಂದುವರಿಯುತ್ತದೆ. ಗರ್ಭಿಣಿಯಾದರೆ ಮುಗಿದೇ ಹೋಯ್ತು. ಅನುದಿನದ ಬೆಳವಣಿಗೆಯ ಚಿತ್ರಗಳು, ವೀಡಿಯೋ, ವಿವರಣೆ ಹೀಗೆ…. ಮಗುವಾದರಂತೂ ಜನಿಸಿದ ದಿನದಿಂದ ಪ್ರತಿಯೊಂದು ಹಂತದ ಚಿತ್ರಗಳನ್ನೂ ಹಂಚಿಕೊಳ್ಳುತ್ತಾರೆ.

ಹುಟ್ಟಿನಿಂದ ಸಾವಿನವರೆಗೆ ಎಲ್ಲವನ್ನೂ ಹಂಚಿಕೊಳ್ಳುವವರಲ್ಲಿ ಕೆಲವರು `ತಮ್ಮ ಕನಸಿನಲ್ಲಿ ಹಿರಿಯರು ಬರುತ್ತಾರೆ.’ ತಮಗೆ ಕೊನೆಯ ದಿನಗಳೇನಾದರೂ ಬಂತಾ ಹೇಗೆ….? ಎಂದು ಪ್ರಶ್ನೆ ಮಾಡುವವರೂ ಇದ್ದಾರೆ!

ಆರೋಗ್ಯಕರ ಚರ್ಚೆ

ಆಸಕ್ತಿ ಮೂಡಿಸುವ ಆರೋಗ್ಯಕರ ಚರ್ಚೆ ಮಾಡುವವರೂ ಇರುತ್ತಾರೆ. ವಿಕೃತ ಮನಸ್ಥಿತಿಯವರೂ ಇರುತ್ತಾರೆ. ಅಂಥವರು ಮೆಸೆಂಜರ್‌ ನಲ್ಲಿ (ಹೆಚ್ಚಿನ ಸಂದರ್ಭಗಳಲ್ಲಿ ವಿರುದ್ಧ ಲಿಂಗದವರಿಗೆ) ಅಶ್ಲೀಲ ಸಂದೇಶ ಬರೆಯುವುದು ಇತ್ಯಾದಿ ಮಾಡುತ್ತಾರೆ. ಕೆಲವರು ಧೈರ್ಯದಿಂದ ಅಂತಹ ಸಂದೇಶಗಳ ಸ್ಕ್ರೀನ್‌ ಶಾಟ್‌ ತೆಗೆದು ಫೇಸ್‌ ಬುಕ್‌ ಪುಟದಲ್ಲಿ ಹಾಕಿದರೆ, ಇನ್ನು ಕೆಲವರು ತಲೆನೋವು ಬೇಡವೆಂದು ಬ್ಲಾಕ್‌ ಮಾಡಿ ಸುಮ್ಮನೆ ಇರುವವರೂ ಇದ್ದಾರೆ. ವೈಯಕ್ತಿಕ ವಾಗ್ದಾಳಿ ಮಾಡುವವರೂ ಇರುತ್ತಾರೆ, ರೇಷ್ಮೆ ವಸ್ತ್ರದಲ್ಲಿ ಸುತ್ತಿ ಚಪ್ಪಲಿ ಏಟು ಹೊಡೆದಂತೆ. ಜಾಣತನದ ಟೀಕೆ ಮಾಡುವವರೂ ಇರುತ್ತಾರೆ. ಒಟ್ಟಿನಲ್ಲಿ ಇದೊಂದು ವೈವಿಧ್ಯಮಯ ಮಾಹಿತಿ ಕಣಜ ಎನ್ನುವುದು ಸರಿ ತಾನೇ?

ಕೆಲವರು ತಾವು ಬರೆದದ್ದನ್ನು ಎಲ್ಲರೂ ಓದಬೇಕು, ಪ್ರತಿಕ್ರಿಯಿಸಬೇಕೆಂದು ನಿರೀಕ್ಷಿಸುತ್ತಾರೆ. ಆದರೆ ತಾವು ಮಾತ್ರ ಹಾಗೆ ಮಾಡುವುದಿಲ್ಲ. ಫೇಸ್‌ ಬುಕ್‌ ನಲ್ಲಿ ಸದಾ ಕ್ರಿಯಾಶೀಲರಾಗಿ ಇರುವವರಿಂದ ಕೆಲವು ದಿನ ಯಾವುದೇ ಚಟುವಟಿಕೆ ಕಾಣದಿದ್ದರೆ ಗಾಬರಿಯಾಗುವವರೂ ಇರುತ್ತಾರೆ. ಅವರ ಖಾತೆ ಏನಾದರೂ ಅಮಾನತು ಆಯಿತೇ ಅಥವಾ ಅವರಿಗೇನಾದರೂ ಅವಘಡ ಆಗಿರಬಹುದೇ, ಅಥವಾ ಸತ್ತೇ ಹೋದರೇನೋ ಎಂದೆಲ್ಲಾ ಊಹಿಸಿ ಗಲಿಬಿಲಿಗೊಳ್ಳುವವರೂ ಇರುತ್ತಾರೆ. ಜನರು ಇದರಲ್ಲಿ ಎಷ್ಟು ವ್ಯಸನಿಗಳು ಎಂಬುದಕ್ಕೆ ಇದು ಉದಾಹರಣೆ.

ಫೇಸ್‌ ಬುಕ್‌ ನ್ನು ಭಾಷಾಂತರ ಮಾಡುವವರಿದ್ದಾರೆ. ಮುಖಪುಟ, ಮುಖಪುಸ್ತಕ ಹೀಗೆ ವಿಚಿತ್ರ ಹೆಸರುಗಳು, ಆದರೆ ಫೇಸ್‌ ಬುಕ್ ಎಂಬುದು ವಿದೇಶಿ ಮೂಲದ ಸಾಮಾಜಿಕ ಜಾಲತಾಣವಾಗಿದ್ದು ಭಾಷಾಂತರ ಮಾಡಲು ಅದು ಒಂದು ನಿರ್ದಿಷ್ಟ ಪದವಲ್ಲ. ಆದ್ದರಿಂದ `ಫೇಸ್‌ ಬುಕ್‌ ನ ಫೇಸ್‌’ ವಿರೂಪಗೊಳಿಸಿ ಪೇಲವಗೊಳಿಸದೆ ಇರುವುದೇ ಒಳ್ಳೆಯದು.

ಫೇಸ್‌ ಬುಕ್‌, ಟ್ವಿಟರ್‌, ಇನ್‌ ಸ್ಟಾಗ್ರಾಮ್, ಗೂಗಲ್ ಇವೆಲ್ಲದಕ್ಕೂ ಭಾರತದ ಪರ್ಯಾಯ ಇದೆ. ಆದರೆ ನಮಗೆ ಹಿತ್ತಲ ಗಿಡ ಮದ್ದಲ್ಲ. ನಮ್ಮ ದೃಷ್ಟಿಗೆ ಕಾಣುವುದು ಸಾಗರದೊಳಗಿನ ನೀರ ಹನಿಯಷ್ಟು. ಈ ಉಪಮೆ ಏಕೆಂದರೆ, ನಕ್ಷತ್ರ ಪುಂಜದಲ್ಲಿ ಸೌರವ್ಯೂಹ, ಅದರಲ್ಲಿ ಭೂಮಿ ನಮ್ಮೆದುರು ಕಾಣಿಸುವ ತಂಬಿಗೆ ಅನ್ನಬಹುದು. ಹಾಗೆಯೇ ಈ ಜಗತ್ತಿನಲ್ಲಿ ಕಣ್ಣಿಗೆ ದೊಡ್ಡದಾಗಿ ಕಾಣುವ ಅದೆಷ್ಟೋ ವಿಷಯಗಳು ವಾಸ್ತವವಾಗಿ ಸಾಗರದಲ್ಲಿ ಬಿಂದುವಿನಷ್ಟು ಚಿಕ್ಕದು. ಫೇಸ್‌ ಬುಕ್‌ ಒಂದು ಆಧುನಿಕ ವಿಶ್ವಕೋಶ ಎಂಬುದು ಎಷ್ಟು ಸತ್ಯವೇ, ಅತಿಯಾದರೆ ಅಮೃತ ವಿಷ ಎಂಬುದೂ ಅಷ್ಟೇ ಸತ್ಯ.

ಮೋಹನದಾಸ್ಕಿಣಿ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ