ಮುಗ್ಧ ಮಕ್ಕಳು ಲೈಂಗಿಕ ಶೋಷಣೆಗೆ ಹೇಗೆ ತುತ್ತಾಗುತ್ತಾರೆ ಹಾಗೂ ಅವರನ್ನು ಅಂಥವರಿಂದ ರಕ್ಷಿಸುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳಿ…….!

ದೆಹಲಿಯಲ್ಲಿ ನಡೆದ ಘಟನೆಯೊಂದನ್ನು ಗಮನಿಸಿ. ವಿವೇಕ್‌ ವಿಹಾರ್‌ ಪ್ರದೇಶದ ಮನನೊಂದವರ 9 ವರ್ಷದ ಹುಡುಗಿಯನ್ನು ಅದೇ ಮನೆಯಲ್ಲಿ ಬಾಡಿಗೆಗಿದ್ದ ವ್ಯಕ್ತಿಯೊಬ್ಬ ಲೈಂಗಕವಾಗಿ ಪೀಡಿಸುತ್ತಿದ್ದ. ತನ್ನೊಂದಿಗೆ ಏನು ನಡೆಯುತ್ತಿದೆ ಎಂಬುದು ಆ ಹುಡುಗಿಗೆ ಗೊತ್ತೇ ಆಗುತ್ತಿರಲಿಲ್ಲ. ಆ ಘಟನೆಯ ಬಗ್ಗೆ ಅವಳಿಗೆ ಬಹಳ ಕೆಡುಕೆನಿಸುತ್ತಿತ್ತು. ಆದರೆ ಅದು ಗೊತ್ತಾಗುತ್ತಿರಲಿಲ್ಲ. ಅದೊಂದು ದಿನ ಶಾಲೆಯಲ್ಲಿ ಟೀಚರ್‌, `ಗುಡ್‌ ಟಚ್‌ ಮತ್ತು ಬ್ಯಾಡ್‌ ಟಚ್‌’ಗಳ ಬಗ್ಗೆ ಹೇಳಿದಾಗ ಅವಳಿಗೆ ಅರಿವಾಯಿತು. ಅವಳು ತಕ್ಷಣವೇ ತನ್ನೊಂದಿಗೆ ನಡೆದ ಘಟನೆಯನ್ನು ಬಿಡಿಸಿ ಹೇಳಿದಳು. ಬಾಡಿಗೆಗಿದ್ದ ವ್ಯಕ್ತಿಯೊಬ್ಬ ಅವಳೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದು ಅವಳಿಗೆ ಇಷ್ಟವಾಗುತ್ತಿರಲಿಲ್ಲ.

ಈ ವಿಷಯ ಪೊಲೀಸ್‌ ಸ್ಟೇಷನ್‌ತನಕ ಹೋಯಿತು. ಪೊಲೀಸರು ಬಾಲಕಿಯ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದರು. ಇದರಿಂದ ಬಹುದೊಡ್ಡ ದುರುಂತವೊಂದು ತಪ್ಪಿತು.

ರಾಷ್ಟ್ರೀಯ ಕ್ರೈಮ್ ರೆಕಾರ್ಡ್‌ ಬ್ಯೂರೊದ ಅಂಕಿ ಅಂಶಗಳ ಪ್ರಕಾರ, ಮಕ್ಕಳೊಂದಿಗೆ ನಡೆಯುವ ಲೈಂಗಿಕ ಅಪರಾಧದ ಪ್ರಕರಣಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. 2010ರಲ್ಲಿ 33,353 ಇದ್ದದ್ದು 2016ರಲ್ಲಿ 98,344ಕ್ಕೇರಿತು. ಇದರಲ್ಲಿ 48,582 ಅಪಹರಣ ಹಾಗೂ ಉಳಿದ 18,862 ಬಲಾತ್ಕಾರದ ಪ್ರಕರಣವಾಗಿದ್ದ.

2016ರಲ್ಲಿ ಅತ್ಯಾಚಾರದ ಒಟ್ಟು 36,657 ಘಟನೆಗಳು ನಡೆದ. ಅವುಗಳಲ್ಲಿ 16,000 ಅತ್ಯಾಚಾರದ ಘಟನೆಗಳು ನಡೆದಿದ್ದು ಅಪ್ರಾಪ್ತರ ಮೇಲೆ ಮಕ್ಕಳೊಂದಿಗೆ ಲೈಂಗಿಕ ಶೋಷಣೆಯ ಘಟನೆಗಳು ಮನೆ, ಶಾಲೆಗಳಲ್ಲಿ ಅಥವಾ ಹೊರಗೆ ನಡೆಯಬಹುದು. ಎಷ್ಟೋ ಮಕ್ಕಳು ಸಂಕೋಚದ ಕಾರಣದಿಂದ ಅಥವಾ ಹೊಡೆಯುತ್ತಾರೆಂಬ ಭಯದಿಂದ ತಮ್ಮೊಂದಿಗೆ ನಡೆದ ಘಟನೆಯನ್ನು ಯಾರ ಮುಂದೂ ಹೇಳಿಕೊಳ್ಳುವುದಿಲ್ಲ.

ಹೆಚ್ಚಿನ ಪ್ರಕರಣಗಳಲ್ಲಿ ಶೋಷಣೆ ಮಾಡುವ ವ್ಯಕ್ತಿ ಹುಡುಗಿಯ ಮನೆಯವರಿಗೆ ತೀರಾ ವಿಶ್ವಾಸಿ ವ್ಯಕ್ತಿಯಾಗಿರುತ್ತಾನೆ. ಸುಮಾರು ಶೇ.30ರಷ್ಟು ಅಪರಾಧಿಗಳು ಹುಡುಗಿಯ ಸಂಬಂಧಿಕರೇ ಆಗಿರುತ್ತಾರೆ. ಶೇ.60ರಷ್ಟು ಜನರು ಕುಟುಂಬದ ಸ್ನೇಹಿತರು, ನೆರೆಯವರು, ಬೇಬಿ ಸಿಟರ್‌, ಟೀಚರ್‌ ಆಗಿರುತ್ತಾರೆ.

ಭಾರತ ಸರ್ಕಾರ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಮಕ್ಕಳ ಲೈಂಗಿಕ ದುರ್ವರ್ತನೆಗಳು ಸಾಮಾನ್ಯವಾಗಿ 5-12 ವರ್ಷಗಳ ವಯೋಮಿತಿಯಲ್ಲಿ ಘಟಿಸುತ್ತವೆ. ಆ ವಯಸ್ಸಿನಲ್ಲಿ ಅವರು ತಮ್ಮ ನೋವನ್ನು ಯಾರ ಮುಂದೆಯೂ ಹೇಳಿಕೊಳ್ಳಲು ಸಮರ್ಥರಾಗಿರುವುದಿಲ್ಲ. ಏಕೆಂದರೆ ಅವರಿಗೆ ಈ ವಯಸ್ಸಿನಲ್ಲಿ ಪ್ರೀತಿ ಹಾಗೂ ಶೋಷಣೆಯ ನಡುವಿನ ವ್ಯತ್ಯಾಸ ಗುರುತಿಸುವ ತಿಳಿವಳಿಕೆ ಇರುವುದಿಲ್ಲ. ಈ ಕಾರಣದಿಂದಾಗಿ ಮಕ್ಕಳ ಜೊತೆಗಿನ ಹೆಚ್ಚಿನ ಅಪರಾಧ ಪ್ರಕರಣಗಳ ಬಗ್ಗೆ ಗೊತ್ತಾಗುವುದಿಲ್ಲ ಹಾಗೂ ಅಪರಾಧವನ್ನು ಸಾಬೀತುಪಡಿಸಲು ಆಗುವುದಿಲ್ಲ. ಅದರಿಂದಾಗಿ ಅಪರಾಧಿಗಳ ಮನೋಬಲ ಹೆಚ್ಚುತ್ತದೆ.

ತಿಳಿವಳಿಕೆ ಕೊಡಿ : ಇಂತಹ ಸ್ಥಿತಿ ಬಂದಾಗ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಮತ್ತು ಅವರು ಹೇಗೆ ಜಾಗರೂಕರಾಗಿರಬೇಕು  ಎಂಬುದನ್ನು ಕಲಿಸುವುದು ಮುಖ್ಯ. ಮಕ್ಕಳ ಮುಂದೆ ಮಾತುಕಥೆ ನಡೆಸುವಾಗ ಅವರ ದೇಹದ ಅಂಗಗಳ ಹೆಸರಿಗೆ ನಿಕ್‌ ನೇಮ್ ಕೊಡದೆ ವಾಸ್ತವ ಹೆಸರುಗಳನ್ನೇ ಬಳಸಿ. ಅವರಿಗೆ ತಮ್ಮ ಅಂಗಗಳ ಬಗ್ಗೆ ಮಾತನಾಡಲು ಅವಕಾಶ ಕೊಡಿ. ಹೀಗೆ ಮಾಡುವುದರ ಮೂಲಕ ಪೋಷಕರು ಮಕ್ಕಳ ಮನಸ್ಸಿನ ಹಿಂಜರಿಕೆ ಹಾಗೂ ನಾಚಿಕೆಯನ್ನು ದೂರಗೊಳಿಸಿ ಅವರೊಂದಿಗೆ ಸ್ನೇಹದ ವಾತಾವರಣದಲ್ಲಿ ಮಾತನಾಡಲು ಅವಕಾಶ ಸಿಗುತ್ತದೆ.

ಬಾಡಿ ಪ್ರೈವೆಸಿ ಬಗ್ಗೆ ಮಾತನಾಡಿ : ಅವರ ದೇಹದ ಮೇಲೆ ಕೇವಲ ಅವರಿಗಷ್ಟೇ ಹಕ್ಕಿದೆ. ಅದನ್ನು ಮುಟ್ಟಲು ಯಾರಿಗೂ ಹಕ್ಕಿಲ್ಲ ಎನ್ನುವುದನ್ನು ಅವರಿಗೆ ಮನದಟ್ಟು ಮಾಡಿ. ಅವರಿಗೆ ಬಾಡಿ ಪ್ರೈವೆಸಿಯ ಬಗ್ಗೆ ತಿಳಿಸಿ ಹೇಳಿ. ದೇಹದ ಕೆಲವು ಅಂಗಗಳನ್ನು ತಾಯಿಯನ್ನು ಹೊರತುಪಡಿಸಿ ಬೇರಾರಿಗೂ ನೋಡುವ ಅಥವಾ ಮುಟ್ಟುವ ಅಧಿಕಾರ ಇಲ್ಲ. ಡಾಕ್ಟರ್‌ ಕೂಡ ಯಾವಾಗ ನೋಡಬಹುದು ಅಂದರೆ ಮಗುವಿನ ಜೊತೆ ಮನೆಯ ಯಾರಾದರೊಬ್ಬರು ಇರಬೇಕು.

ಮಗು ಶಾಲೆಗೆ ಹೋಗಲು ಶುರು ಮಾಡುತ್ತಿದ್ದಂತೆ ಪೋಷಕರು ಮಗುವಿಗೆ ಯಾರಿಗೆ ಸ್ಟಾಪ್‌ ಹೇಳಬೇಕು, ತನ್ನನ್ನು ತಾನು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂಬ ಬಗ್ಗೆ ತಿಳಿವಳಿಕೆ ಕೊಡಬೇಕು.

ಭಾವನೆಗಳ ಬಗ್ಗೆ ತಿಳಿಸಿ : ಮಗು ತನ್ನ ಭಾವನೆಗಳನ್ನು ಅರಿತುಕೊಳ್ಳಲು ಶುರು ಮಾಡಿದಾಗ, ಯಾವ ಸಂಗತಿಗಳು ನಿನಗೆ ಹಿತಕರ ಎನಿಸುತ್ತವೆ ಹಾಗೂ ಯಾವ ಸಂಗತಿಗಳು ನಿನಗೆ ಖುಷಿ ಕೊಡುವುದಿಲ್ಲ ಎನ್ನುವುದರ ಬಗ್ಗೆ ಕೇಳಿ. ಅದರ ಜೊತೆಗೆ ಯಾವಾಗ ನಿನಗೆ ಕೋಪ ಬರುತ್ತದೆ, ಏಕೆ ಎನ್ನುವ ಬಗ್ಗೆ ಕೇಳಿ. ಯಾವಾಗ ನಿನಗೆ ಕಂಫರ್ಟೆಬಲ್ ಅನಿಸುತ್ತೆ, ಯಾವಾಗ ಇಲ್ಲ ಎನ್ನುವುದರ ಬಗ್ಗೆ ಅವರ ಭಾವನೆ ಅರಿತುಕೊಳ್ಳಿ.

ಉದಾಹರಣೆಗಾಗಿ, ಪೋಷಕರು ಅಪ್ಪಿಕೊಂಡಾಗ ಅವರಿಗೆ ಅದೊಂಥರ ಖುಷಿಯ ಅನುಭವವಾಗುತ್ತದೆ. ಆದರೆ ಯಾರಾದರೂ ಅವರ ಆಟಿಕೆ ಸಾಮಾನು ಕಸಿದುಕೊಂಡರೆ ಅವರಿಗೆ ಬಹಳ ಕೆಡುಕೆನಿಸುತ್ತೆ, ಕೋಪ ಬರುತ್ತದೆ.

ಮಕ್ಕಳಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಹೇಗೆ ಎಂಬ ಬಗ್ಗೆ ತಿಳಿಸಿ. ಏಕೆಂದರೆ ಸಕಾಲಕ್ಕೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗಬೇಕು. ಯಾರಾದರೂ ವಯಸ್ಕ ವ್ಯಕ್ತಿಯ ವಿಶಿಷ್ಟ ವರ್ತನೆಯ ಬಗ್ಗೆ ಅವರಿಗೆ ಕೋಪ ಬರುತ್ತದೆ, ಇಲ್ಲಿ ಬಹಳ ಕೆಟ್ಟದ್ದು ಅನಿಸುತ್ತದೆ. ಅದರಿಂದ ಅವರು ಎಚ್ಚರದಿಂದಿರಲು ಸಾಧ್ಯವಾಗುತ್ತದೆ.

ಗುಡ್ಟಚ್ಬ್ಯಾಡ್ಟಚ್‌ : ಈ ಬಗ್ಗೆ ಮಗುವಿಗೆ ವಿವರವಾಗಿ ತಿಳಿಸಿ. ತಾಯಿತಂದೆ ಹೊರತುಪಡಿಸಿ ಬೇರೆ ಯಾರೊ ಪ್ರೈವೇಟ್ ಪಾರ್ಟ್‌ ಗಳ ಬಳಿ ಸ್ಪರ್ಶಿಸುವುದು ಬ್ಯಾಡ್‌ ಟಚ್‌. ಅದೇ ರೀತಿ ಬೇರಾರೊ ಗಲ್ಲ, ತುಟಿ, ಸೊಂಟ ಅಥವಾ ದೇಹದ ಯಾವುದೊ ಒಂದು ಭಾಗವನ್ನು ಮುಟ್ಟಿದಾಗ ಮಕ್ಕಳಿಗೆ ಸರಿ ಅನಿಸದಿದ್ದರೆ ಅದು ಕೂಡ `ಬ್ಯಾಡ್‌ ಟಚ್‌’ ಆಗಿದೆ. ಕುಟುಂಬದ ಯಾರೊ ಒಬ್ಬರು ಕೆನ್ನೆಯನ್ನು ಸರಿದಾಗ, ಕೆನ್ನೆಯ ಮೇಲೆ ಮುತ್ತು ಕೊಟ್ಟಾಗ ಮನಸ್ಸಿಗೆ ಖುಷಿ ಕೊಟ್ಟರೆ ಅದು `ಗುಡ್‌ ಟಚ್‌’ ಆಗಿದೆ.

ನಮ್ಮವರಿಂದಲೂ ಎಚ್ಚರವಾಗಿರಿ : ಸಾಮಾನ್ಯವಾಗಿ ತಾಯಿ ತಂದೆ ಮಕ್ಕಳಿಗೆ ಅಪರಿಚಿತರಿಂದ ದೂರ ಇರಲು ಕಲಿಸುತ್ತಾರೆ. ಆದರೆ ವಾಸ್ತವದಲ್ಲಿ ಅತ್ಯಂತ ನಿಕಟವರ್ತಿಗಳು ಹಾಗೂ ಅಕ್ಕಪಕ್ಕದವರು ಮಕ್ಕಳಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಹೀಗಾಗಿ ಮಕ್ಕಳಿಗೆ ಅಸುರಕ್ಷಿತ ವರ್ತನೆಯ ಬಗ್ಗೆ ತಿಳಿಹೇಳಲು ಪ್ರಯತ್ನಿಸಿ. ಉದಾಹರಣೆಗೆ ಯಾರಾದರೂ ಹೊರಗಿನ ವ್ಯಕ್ತಿ (ಆತ ಸಂಬಂಧಿತ ಅಥವಾ ನೆರೆಮನೆಯವನೇ ಆಗಿರಬಹುದು). ಮಗುವಿಗೆ ನಿರ್ದಿಷ್ಟ ಘಟನೆ ಅಥವಾ ಮಾತುಗಳ ಬಗ್ಗೆ ಬಚ್ಚಿಡಲು ಹೇಳಿದರೆ ಅದು ಒಂದು ಕುತಂತ್ರ ವರ್ತನೆಯೆಂದು ಭಾವಿಸಬೇಕು. ಮನೆಯವರಿಗೆ ಹೇಳದೆ ಎಲ್ಲಿಯಾದರೂ ಹೋಗೋಣ ಎಂದು ಹೇಳಿದರೆ ಅದು ದುರ್ವರ್ತನೆಯ ಪ್ರಯತ್ನ ಎಂದು ಭಾವಿಸಬೇಕು.

ಮಾತುಕತೆಯ ದಾರಿ ಮುಕ್ತವಾಗಿರಲಿ ಪೋಷಕರು ಮಕ್ಕಳಿಗೆ ಮಾತುಕಥೆ ನಡೆಸುವ ಇಲ್ಲಿ ತಮ್ಮ ಚಿಂತೆ, ಹೆದರಿಕೆ ಅಥವಾ ತೊಂದರೆಗಳ ಬಗ್ಗೆ ಹೇಳಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಒಂದು ವೇಳೆ ಮಕ್ಕಳು ಪೋಷಕರಿಗೆ ಸೆಕ್ಸ್ ಬಗ್ಗೆ ಇಲ್ಲವೇ ರಿಲೇಶನ್‌ ಶಿಪ್‌ ಬಗ್ಗೆ ಪ್ರಶ್ನೆ ಮಾಡಿದರೆ ಅವರಿಗೆ ಸಹಜವಾಗಿಯೇ ಉತ್ತರ ಕೊಡಿ. ಅವರ ಜಿಜ್ಞಾಸೆ ಶಾಂತಗೊಳಿಸಿದರೆ ಮುಂದೆ ಮಕ್ಕಳು ಪೋಷಕರಿಂದ ಯಾವುದೇ ವಿಷಯವನ್ನು ಬಚ್ಚಿಡುವುದಿಲ್ಲ. ಒಂದುವೇಳೆ ಮಗು ತನ್ನೊಂದಿಗೆ ನಡೆದ ಲೈಂಗಿಕ ದುರ್ವರ್ತನೆಯ ಬಗ್ಗೆ ಹೇಳಿದರೆ, ಅದರ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮಗುವಿನ ಮಾತನ್ನು ಶಾಂತವಾಗಿ ಆಲಿಸಿ.

ನನಗೆ ಈ ವಿಷಯ ಹೇಳಿ ನೀನು ಒಳ್ಳೆಯ ಕೆಲಸ ಮಾಡಿದೆ ಎಂದು ಮಗುವಿಗೆ ಹೇಳಿ. ಇದರಲ್ಲಿ ನಿನ್ನದೇನೂ ತಪ್ಪಿಲ್ಲ, ಇನ್ಮುಂದೆ ನಿನಗೆ ಯಾರೂ ತೊಂದರೆ ಕೊಡುವುದಿಲ್ಲ ಎಂದು ಮಗುವಿಗೆ  ಧೈರ್ಯ ತುಂಬಿ. ಪೊಲೀಸ್‌, ಡಾಕ್ಟರ್‌ ಅಥವಾ ಕೌನ್ಸೆಲರ್‌ ಯಾರದ್ದೇ ನೆರವು ಬೇಕಿದ್ದರೂ ಪಡೆದುಕೊಳ್ಳಿ.

ಮಗುವಿನ ಸಮಸ್ಯೆಯನ್ನು ಹೇಗೆ ಗುರುತಿಸುವುದು? : ಮಗು ಆಕಸ್ಮಿಕವಾಗಿ ತಳಮಳಗೊಂಡಿದ್ದರೆ, ಹೆದರಿದ್ದರೆ, ಹಾಸಿಗೆಯ ಮೇಲೆ ಮೂತ್ರ ಮಾಡಿಕೊಂಡಿದ್ದರೆ, ಬಟ್ಟೆ ತೆಗೆಯಲು ನಿರಾಕರಿಸಿದರೆ ಏಕಾಂಗಿಯಾಗಿರಲು ಭಯಪಡುತ್ತಿದ್ದರೆ, ಮಾತು ಮಾತಿಗೂ ರೋಧಿಸುತ್ತಿದ್ದರೆ ಏನೋ ಗಂಭೀರ ಸಮಸ್ಯೆ ಇದೆ ಎಂದರ್ಥ. ಇಂತಹ ಸ್ಥಿತಿಯಲ್ಲಿ ಮಗುವಿನ ದೈಹಿಕ ಸ್ಥಿತಿಯನ್ನು ಪರಿಶೀಲಿಸಿ. ಗುಪ್ತಾಂಗದ ಬಳಿ ತರಚಿದ ಗಾಯಗಳೇನಾದರೂ ಇವೆಯೇ ಎಂದು ಕಂಡುಕೊಳ್ಳಿ.

ಧ್ವನಿ ಎತ್ತುವುದು ಅತ್ಯವಶ್ಯ : ಅಧ್ಯಯನಗಳ ಪ್ರಕಾರ, ಮಕ್ಕಳ ಶೋಷಣೆಯ ಶೇ.70ರಷ್ಟು ಪ್ರಕರಣಗಳಲ್ಲಿ ಸಂತ್ರಸ್ತರು ತಮ್ಮ ಮೇಲಾದ ಅನ್ಯಾಯದ ಬಗ್ಗೆ ಪೊಲೀಸರ ಮುಂದಾಗಲಿ, ಬೇರೆ ಯಾರ ಮುಂದಾಗಲಿ ಹೇಳಿಕೊಳ್ಳುವುದಿಲ್ಲ. ಇಂತಹ ಸ್ಥಿತಿಯಲ್ಲಿ ಅವರಿಗೆ ಸೂಕ್ತ ಕೌನ್ಸೆಲಿಂಗ್‌ ನ ಅವಶ್ಯಕತೆ ಇರುತ್ತದ. ಈ ಬಗ್ಗೆ ಸಂತ್ರಸ್ತೆ ಧ್ವನಿ ಎತ್ತದೇ ಹೋದರೆ ಶೋಷಣೆ ಮಾಡುವವರು ಹಾಗೆಯೇ ಮುಂದುವರಿಯುತ್ತಾರೆ. ಮುಂದೆ ಅವಳಿಗೆ ಅದನ್ನು ವಿರೋಧಿಸುವ ಧೈರ್ಯ ಬರಲಾರದು. ಕಳೆದ ವರ್ಷವಷ್ಟೇ `ರಾಷ್ಟ್ರೀಯ ಗರಿಮಾ ಅಭಿಯಾನ’ ದನ್ವಯ 25,000 ಜನರು 10,000 ಕಿ.ಮೀ. ಪ್ರಯಾಣ ಮಾಡಿ ದೆಹಲಿಗೆ ಬಂದಿದ್ದರು. ಈ ಅಭಿಯಾನದ ವಿಶೇಷತೆಯೇನೆಂದರೆ, ಲೈಂಗಿಕ ಶೋಷಣೆಗೆ ಸಂಬಂಧಪಟ್ಟ ತಮ್ಮ ನೋವನ್ನು 200 ಜನ ನೀತಿ ನಿರೂಪಕರು ಹಾಗೂ 2000 ವಕೀಲರ ಸಮ್ಮುಖದಲ್ಲಿ ಹೇಳಿಕೊಂಡರು. ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದ ರಾನ್ಸಿ ಜಿಲ್ಲೆಯ ಗೀತಾ ದೇವಿ ತನ್ನ ಮಗಳ ಬಗ್ಗೆ ಹೇಳಿಕೊಳ್ಳುತ್ತಾ, 5 ವರ್ಷಗಳ ಹಿಂದೆ 6ನೇ ಕ್ಲಾಸ್‌ ನಲ್ಲಿ ಓದುತ್ತಿದ್ದ ಮಗಳ ಮೇಲೆ 4-5 ಬಾರಿ ಅತ್ಯಾಚಾರ ನಡೆಸಲಾಯಿತು. ಈ ಬಗ್ಗೆ ಪೊಲೀಸರ ಬಳಿ ನ್ಯಾಯ ಕೇಳಲು ಹೋದರೆ, ಅವರು ನಮಗೆ ನೆರವು ನೀಡುವ ಬದಲು ಅತ್ಯಾಚಾರಿಗೆ ಸಪೋರ್ಟ್‌ ಮಾಡಿದರು.

ಬಿ. ಸುಶೀಲಾ ಹೆಗಡೆ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ