ಹೊಸ ವರ್ಷದಲ್ಲಿ ನಿಮ್ಮ ಅಡುಗೆಮನೆಯಿಂದ ಇನ್ನಷ್ಟು ಮತ್ತಷ್ಟು ಸ್ಮಾರ್ಟ್ಟೇಸ್ಟಿ ವ್ಯಂಜನಗಳು ತಯಾರಾಗಿ ಬರಬೇಕೆಂದರೆ ಈ ಉಪಾಯ ಅನುಸರಿಸಿ……!
ಇತ್ತೀಚೆಗೆ ಹೆಚ್ಚಿನ ಮನೆಗಳಲ್ಲಿ ಎಲ್ಲರೂ ಉದ್ಯೋಗಸ್ಥ ವನಿತೆಯರೇ ಆಗಿರುತ್ತಾರೆ. ಹೀಗಾಗಿ ಅಚ್ಚುಕಟ್ಟಾದ ಅಡುಗೆಗಾಗಿ ಅವರ ಬಳಿ ಸದಾ ಸಮಯದ ಆಭಾವ ಇರುತ್ತದೆ. ಅಷ್ಟೇ ಸಮಯದಲ್ಲಿ ಮನೆಯ ಕ್ಲೀನಿಂಗ್, ಪಾತ್ರೆ, ಬಟ್ಟೆಗಳ ಕೆಲಸ ಆಗಬೇಕು. ಇದರೊಂದಿಗೆ ಅವರು ಸಕಾಲಕ್ಕೆ ಕಾಫಿ, ತಿಂಡಿ, ಅಡುಗೆ ಮಾಡುತ್ತಲೇ ಇರಬೇಕಾಗುತ್ತದೆ. ಹೀಗಾಗಿ ಇವರ ಸುಸ್ತು, ಟೆನ್ಶನ್ ಎಂದೂ ತಪ್ಪದು.
ನೀವು ಇಂಥದ್ದೇ ಟೆನ್ಶನ್ ಎದುರಿಸುತ್ತಿದ್ದೀರಾ? ಹಾಗಾದರೆ ಕಿಚನ್ ಗೆ ಅಗತ್ಯವಿರುವ ಈ ಉಪಾಯಗಳನ್ನು ಅನುಸರಿಸಿ ಈ ಹಿಂಸೆಯಿಂದ ಹೊರಬನ್ನಿ. ಹೀಗೆ ನಿಮ್ಮ ಸಮಯದ ಸದುಪಯೋಗ ಪಡೆದು, ನಿಮ್ಮ ಹವ್ಯಾಸಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಿ. ಇದಕ್ಕಾಗಿ ಎಂಥ ಉಪಾಯಗಳನ್ನು ಅನುಸರಿಸಬೇಕು ಎಂದು ಗಮನಿಸೋಣವೇ? :
ನಿಮ್ಮ ಗ್ಯಾಸ್ ಬರ್ನರ್ ನ್ನು ಆಗಾಗ ಕ್ಲೀನ್ ಮಾಡಿಸಿ. ಇದರ ಸಂದಿನಿಂದ ಸರಾಗವಾಗಿ ಗ್ಯಾಸ್ ಹರಿಯದಿದ್ದರೆ ನಿಮ್ಮ ಅಡುಗೆ ಖಂಡಿತಾ ಲೇಟ್ ಆಗುತ್ತದೆ.
ಯಾವುದೇ ವ್ಯಂಜನ ಬಿಸಿ ಮಾಡುವಾಗಲೂ, ಅಗಲ ಪಾತ್ರೆ ಅಥವಾ ಬಾಣಲೆ ಬಳಸಿಕೊಳ್ಳಿ. ಇದರಿಂದ ಎಣ್ಣೆ ಬೇಗ ಬಿಸಿ ಆಗುತ್ತದೆ.
ಹೆಚ್ಚು ರೇಜಿಗೆ ಇಲ್ಲದ, ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದಾದಂಥ ವ್ಯಂಜನ ಆರಿಸಿ. ತರಕಾರಿಯನ್ನು ಹಿಂದಿನ ರಾತ್ರಿಯೇ ಹೆಚ್ಚಿಡಿ. ಕಡಲೆಕಾಳು ಮುಂತಾದುವನ್ನು ಹಿಂದಿನ ಸಂಜೆಯೇ (ಆಫೀಸಿನಿಂದ ಬಂದ ತಕ್ಷಣ) ನೆನೆಹಾಕಿಡಿ. ಆಗ ಬೆಳಗಿನ ಅಡಾವುಡಿ ಎಷ್ಟೋ ತಪ್ಪುತ್ತದೆ. ಟೊಮೇಟೊ, ಶುಂಠಿ, ಬೆಳ್ಳುಳ್ಳಿ ಇತ್ಯಾದಿಗಳ ಪೇಸ್ಟ್ ಮೊದಲೇ ಮಾಡಿಟ್ಟುಕೊಳ್ಳಿ. ಇಂಥವನ್ನು ಫ್ರಿಜ್ ನಲ್ಲಿರಿಸಿಕೊಂಡು 2-3 ದಿನ ಆರಾಮವಾಗಿ ನಿಭಾಯಿಸಬಹುದು.
ಬೆಳಗ್ಗೆ ತಿಂಡಿಗೆ ಆಲೂ ಪರೋಟ ಆಗಬೇಕಿದ್ದರೆ, ರಾತ್ರಿಯೇ ಆಲೂ ಬೇಯಿಸಿ, ಮಸೆದಿಡಿ. ಗೋಧಿಹಿಟ್ಟನ್ನು ನಾದಿಕೊಂಡು ನೆನೆಯಲು ಬಿಡಿ. ಬೆಳಗ್ಗೆ ಸುಲಭವಾಗಿ ಆಲೂ ಪರೋಟ ತಯಾರಿಸಿ, ಅತ್ತ ಕುಕ್ಕರ್ ನಲ್ಲಿ ಮಧ್ಯಾಹ್ನದ ಅಡುಗೆಗೆ ಸಿಂಗಲ್ ಪಾಟ್ ಡಿಶ್ ಮಾಡಿಕೊಳ್ಳಬಹುದು.
ರಾಜ್ಮಾ ಗ್ರೇವಿ, ಛೋಲೆ, ಪೂರಿಗೆ ಬೇಕಾಗುವ ಸಾಗು ಇತ್ಯಾದಿಗಳಿದ್ದರೆ, ಇದಕ್ಕೆ ಬೇಕಾದ ಎಲ್ಲಾ ಪೂರ್ವಭಾವಿ ತಯಾರಿಗಳನ್ನೂ ಹಿಂದಿನ ದಿನವೇ ಅಗತ್ಯವಾಗಿ ಮಾಡಿಡಿ.
ಬೆಳ್ಳುಳ್ಳಿ ಬಿಡಿಸಲು ಹೆಚ್ಚಿನ ಸಮಯ ಬೇಕು. ಆದ್ದರಿಂದ ಇದನ್ನು ಲೈಟಾಗಿ ತವಾ ಮೇಲೆ ಬಾಡಿಸಿ ಅಥವಾ ಬಿಸಿ ನೀರಲ್ಲಿ 2 ನಿಮಿಷ ನೆನೆಸಿ, ನಂತರ ಸುಲಿಯಿರಿ. ಸುಲಭವಾಗಿ ಕೆಲಸ ಆಗುತ್ತದೆ.
ಅದೇ ತರಹ ಪಾಲಕ್ ಪನೀರ್ ಮಾಡಬೇಕಿದ್ದರೆ, ರಾತ್ರಿಯೇ ಪಾಲಕ್ ಸೊಪ್ಪು ಹೆಚ್ಚಿ, ಬಾಡಿಸಿ, ರುಬ್ಬಿಡಿ.
ನಿಮ್ಮ ಮನೆಯವರೆಲ್ಲ ಕಾಫಿ ಪ್ರಿಯರೇ? ಹಾಗಿದ್ದರೆ ಅಗತ್ಯವಾಗಿ 2 ಫಿಲ್ಟರ್ ಇರಿಸಿಕೊಂಡು, ಒಂದರ ಡಿಕಾಕ್ಷನ್ ಮುಗಿಯುವ ಮೊದಲೇ ಮತ್ತೊಂದರಲ್ಲಿ ಹಾಕಿಟ್ಟುಬಿಡಿ. ಆಗ ಹೊಸದಾಗಿ ಅದನ್ನು ಹಾಕುವ, ಇಳಿಸುವ ರೇಜಿಗೆ ಇರುವುದಿಲ್ಲ. ಇದನ್ನು ಒಂದು ಪಕ್ಷ ಮರೆತರೆ, ಸದಾ ಇನ್ ಸ್ಟೆಂಟ್ ಕಾಫಿ ಪೌಡರ್ ಪ್ಯಾಕೆಟ್ಸ್ ರೆಡಿ ಇರಲಿ. ಮಧ್ಯದಲ್ಲಿ ಯಾರಾದರೂ ಕೇಳಿದಾಗ, ಥಟ್ ಅಂತ ಬಿಸಿ ಹಾಲಿಗೆ ಇದನ್ನು ಹಾಕಿ, ಸಕ್ಕರೆ ಕದಡಿ, ಸವಿಯಲು ಕೊಡಿ. ನಿಮ್ಮ ಟೈಂ ಎಷ್ಟೋ ಉಳಿತಾಯ ಆಗುತ್ತದೆ.
ಅರ್ಜೆಂಟಾಗಿ ಹೆಚ್ಚಿನ ಪ್ರಮಾಣದಲ್ಲಿ ಜೂಸ್, ಶರಬತ್ತು ತಯಾರಿಸಲು ಸಕ್ಕರೆಯನ್ನು ಕರಗಿಸುವುದೇ ದೊಡ್ಡ ಪ್ರಯಾಸದ ಕೆಲಸ. ಹೀಗಾಗಿ ಈ ಸಮಸ್ಯೆ ನಿವಾರಿಸಲು, ನೀವು ಮೊದಲೇ ಶುಗರ್ ಸಿರಪ್ ರೆಡಿ ಮಾಡಿ ಇರಿಸಿಕೊಳ್ಳಿ. ಇದು 2-3 ವಾರ ನಡೆಯುತ್ತದೆ. ಜೂಸ್, ಲಸ್ಸಿ ಏನೇ ಬೇಕಾದರೂ ಇದರಿಂದ ಬೇಕಾದ ಪ್ರಮಾಣ ತೆಗೆದುಕೊಂಡು ನಿಮ್ಮ ಕೆಲಸ ಮುಗಿಸಿ.
ಟೇಸ್ಟಿ ಡಿಶ್ ಗಾಗಿ ಸ್ಮಾರ್ಟ್ ಟಿಪ್ಸ್
ಆಮ್ಲೆಟ್ ಹೆಲ್ದಿ ಆಹಾರ. ಇದನ್ನು ಮತ್ತಷ್ಟು ಟೇಸ್ಟಿ ಆಗಿಸಲು, ಜೊತೆಗೆ ಬೆಣ್ಣೆ ಬಳಸಿಕೊಳ್ಳಿ. ಒಡೆದ ಮೊಟ್ಟೆಗೆ ತುಸು ಹಾಲು ಬೆರೆಸಿ ನಂತರ ಗೊಟಾಯಿಸಿ. ಇದರಿಂದ ಆಮ್ಲೆಟ್ ಸಾಫ್ಟ್ ಫ್ಲಫಿ ಆಗುತ್ತದೆ.
ಅನ್ನ ಟೇಸ್ಟಿ ಆಗಲು, ಕುಕ್ಕರ್ ಸೆಟ್ ಮಾಡುವಾಗಲೇ ಅದಕ್ಕೆ ಚಿಟಕಿ ಉಪ್ಪು, ತುಪ್ಪ ಬೆರೆಸಿಕೊಳ್ಳಿ.
ನೀವು ರೈಲು ಪ್ರಯಾಣಕ್ಕೆ ಹೊರಟಿದ್ದರೆ, ಅದು 1-2 ದಿನಗಳದ್ದಾಗಿದ್ದರೆ, ಜೊತೆಗೆ ಪೂರಿ ಪರೋಟ ಕೊಂಡೊಯ್ಯಿರಿ. ಈ ಸಂದರ್ಭದಲ್ಲಿ ಹಿಟ್ಟು ಕಲಸುವಾಗ, ನೀರಿಗೆ ಬದಲಾಗಿ ಹಾಲು ಬಳಸಿಕೊಳ್ಳಿ. ಇದರಿಂದ ಪೂರಿ, ಪರೋಟ ಹೆಚ್ಚು ಬಾಳಿಕೆ ಬರುತ್ತದೆ. ಬಣ್ಣ ಸಹ ಹೊಂಬಣ್ಣಾಗಿ ಆಕರ್ಷಕ ಎನಿಸುತ್ತದೆ. ಜೊತೆಗೆ ಮೃದುವಾಗಿ, ಟೇಸ್ಟ್ ಹೆಚ್ಚುತ್ತದೆ.
ಸೋರೆ, ಸೌತೇಕಾಯಿ ತುರಿದಾಗ ಅದರ ನೀರು ವೇಸ್ಟ್ ಮಾಡದೆ, ಅದರಿಂದ ಗೋಧಿಹಿಟ್ಟು ಕಲಸಿ ಚಪಾತಿ ಮಾಡಿ. ಇದರಿಂದ ಚಪಾತಿ ಮೃದು, ಟೇಸ್ಟಿ, ಹೆಲ್ದಿ ಆಗಿರುತ್ತದೆ.
ಕೊ. ಸೊಪ್ಪಿನ ದಂಟನ್ನು ಎಸೆಯದೆ, ಹೆಚ್ಚಿ ರುಬ್ಬಿಕೊಳ್ಳಿ. ಇದನ್ನು ಗ್ರೇವಿಗೆ ಬಳಸಿದರೆ ಅದರ ಟೇಸ್ಟ್ ಹೆಚ್ಚುತ್ತದೆ.
ಗ್ರೇವಿಗೆ ನೇರವಾಗಿ ಹಸಿ ಈರುಳ್ಳಿ/ಟೊಮೇಟೊ ಪೇಸ್ಟ್ ಬೆರೆಸುವ ಬದಲು, ಅದನ್ನು ನೀಟಾಗಿ ಬಾಡಿಸಿ ನಂತರ ಪೇಸ್ಟ್ ಮಾಡಿ, ಅಡುಗೆ ರುಚಿ ಹೆಚ್ಚುತ್ತದೆ. ಇದರಿಂದ ಗ್ರೇವಿ ಹೆಚ್ಚು ಗಟ್ಟಿಯಾಗಿಯೂ ಬರುತ್ತದೆ.
ಕೋಫ್ತಾ ತಯಾರಿಸುವಾಗ, ಇದಕ್ಕೆ ಕಡಲೆಹಿಟ್ಟನ್ನು ನೇರ ಬಳಸದೆ, ತುಸು ಬೆಚ್ಚಗೆ ಕೆದಕಿ ನಂತರ ಬಳಸಿರಿ. ಇದರಿಂದ ಕೋಫ್ತಾ ಮೃದು ಆಗುತ್ತದೆ.
ಕಡಲೆಕಾಳು ಬಳಸಿ ಗ್ರೇವಿ ಮಾಡುವಾಗ, ಇದಕ್ಕೆ ದಾಳಿಂಬೆಯ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಬೆರೆಸಿಕೊಳ್ಳಿ. ಅದರ ರುಚಿ ಹೆಚ್ಚುತ್ತದೆ.
ಈರುಳ್ಳಿ ಬಾಡಿಸುವಾಗ, ಅದಕ್ಕೆ ತುಸು ಸಕ್ಕರೆ ಸೇರಿಸಿ. ಆಗ ಇದರ ಬಣ್ಣ ಸುಧಾರಿಸುತ್ತದೆ.
ಹಾಲು ಹೆಪ್ಪು ಹಾಕಿ ಗಟ್ಟಿ ವೊಸರು ಬಯಸುತ್ತೀರಾ? ಹಾಲನ್ನು ಮೊದಲು ತುಸು ಬೆಚ್ಚಗಾಗಿಸಿ, ನಂತರ ಕ್ಯಾಸರೋಲ್ ನಲ್ಲಿ ಬಟ್ಟಲಿಟ್ಟು, ಹೆಪ್ಪು ಹಾಕಿದ ನಂತರ ಮುಚ್ಚಳ ಮುಚ್ಚಿರಿಸಿ. ಈಗ ಮೊಸರಿನ ಹದ ನೋಡಿ!
ಖೀರು, ಪಾಯಸ ತಯಾರಿಸುವಾಗ ಚಿಟಕಿ ಉಪ್ಪು ಸೇರಿಸಿ, ಆಗ ರುಚಿ ಹೆಚ್ಚುತ್ತದೆ. ಕೇಸರಿ ಎಸಳನ್ನು ನೇರ ಇದಕ್ಕೆ ಬೆರೆಸದೆ, ಬಿಸಿ ಹಾಲಲ್ಲಿ ಕದಡಿಕೊಂಡು 15 ನಿಮಿಷ ಬಿಟ್ಟು, ನಂತರ ಬಳಸಿಕೊಳ್ಳಿ. ಖೀರು, ಪಾಯಸದ ಬಣ್ಣ ರಂಗೇರುತ್ತದೆ.
ಇದೇ ತರಹ ಜಾಯಿಕಾಯಿಯನ್ನು ಹಾಲಲ್ಲಿ ತೇದು ಹಾಕಿ, ಏಲಕ್ಕಿಯನ್ನು ಸಕ್ಕರೆ ಸಮೇತ ಕುಟ್ಟಿ ಹಾಕಿ, ಕೆಲಸ ಸುಲಭವಾಗುತ್ತದೆ.
ಹಾಗೆಯೇ ಸಿಹಿ ಬೋಂಡಾ ತಯಾರಿಸುವಾಗ, ನೀರಿನ ಬದಲು ಹಾಲು ಬೆರೆಸಿಕೊಳ್ಳಿ, ರುಚಿ ಪರಿಮಳ ಹೆಚ್ಚುತ್ತದೆ.
ಸಿಂಗಲ್ ಪಾಟ್ ಡಿಶ್ ಗಾಗಿ, ಹುರಿದ ಹೆಸರುಬೇಳೆ ಜೊತೆ ಅಕ್ಕಿ ಅಥವಾ ಬ್ರೋಕನ್ ವೀಟ್ ಅಥವಾ ಎರಡನ್ನೂ ಬೆರೆಸಿಕೊಳ್ಳಿ. ಇದಕ್ಕೆ ಬೇಕಾದ ತರಕಾರಿ, ಟೊಮೇಟೊ, ಉಪ್ಪು, ಖಾರ, ಮಸಾಲೆಪುಡಿ ಸೇರಿಸಿದರೆ, ಮಿಕ್ಸಿ ತಂಟೆ ಇಲ್ಲದೆ ಬೇಗ ಅಡುಗೆ ಆಗುತ್ತದೆ, ರಾಯ್ತಾ ಇಲ್ಲದೆಯೂ ಸವಿಯಬಹುದು, ಇದ್ದರೆ ಮತ್ತಷ್ಟು ಸೊಗಸು!
ರಾಯ್ತಾ ತಯಾರಿಸುವಾಗ ಜೊತೆಗೇ ಉಪ್ಪು ಸೇರಿಸಬೇಡಿ. ಆಗ ರಾಯ್ತಾ ಬೇಗ ಹುಳಿ ಆಗುತ್ತದೆ, ತೆಳ್ಳಗಾಗುತ್ತದೆ. ಬಡಿಸುವ ಸಮಯದಲ್ಲಿ ಬೆರೆಸಿದರಾಯ್ತು. ಇದೇ ಮಾತು ಹೆಸರುಬೇಳೆ ಜೊತೆಗೆ ಸೌತೇಕಾಯಿ, ಕ್ಯಾರೆಟ್ ಬೆರೆಸಿ ಕೋಸಂಬರಿ ತಯಾರಿಸುವಾಗಲೂ ಅನ್ವಯಿಸುತ್ತದೆ.
ಗ್ರೇವಿ ಕುದಿಯುವಾಗಲೇ ಅದಕ್ಕೆ ನೇರ ಮೊಸರು ಬೆರೆಸಬಾರದು. ಅದು ಸಾಕಷ್ಟು ಕುದ್ದಾಯಿತು ಎಂದು ಖಾತ್ರಿಪಡಿಸಿಕೊಂಡು, ಮೊಸರು ಬೆರೆಸಿ ಕೆಳಗಿಳಿಸಿ, ನಂತರ ಉಪ್ಪು ಬೆರೆಸಬೇಕು.
ಧಾರಾಳ ಉಪ್ಪು ಬೆರೆತ ವ್ಯಂಜನ ಮತ್ತು ಸಿಹಿ ಪದಾರ್ಥ ಬೇರೆ ಬೇರೆಯೇ ಇರಿಸಿ. ಏರ್ ಟೈಟ್ ಕಂಟೇನರ್ ಬಳಸಿರಿ.
– ಪ್ರತಿನಿಧಿ