ಜಾಗೀರ್ದಾರ್*
ಡಾ. ಶಿವರಾಜ್ಕುಮಾರ್ ಮತ್ತು ಧನಂಜಯ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಿ ನಿರ್ದೇಶಕ ಎಂ ಹೇಂಮತ್ ರಾವ್ ಚಿತ್ರೀಕರಣ ನಡೆಸುತ್ತಿದ್ದಾರೆ. ಇದೀಗ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಅಂಗಳಕ್ಕೆ WWE ಸೂಪರ್ ಸ್ಟಾರ್ ಸುಖ್ವಿಂದರ್ ಸಿಂಗ್ ಗ್ರೆವಾಲ್ ಎಂಟ್ರಿ ಕೊಟ್ಟಿದ್ದಾರೆ. ಶಾರುಖ್ ಖಾನ್ ನಟನೆಯ ಜವಾನ್ ಹಾಗೂ ಆರ್ಯನ್ ಖಾನ್ ನಿರ್ದೇಶನದ ‘ಬ್ಯಾಡ್ಸ್ ಆಫ್ ಬಾಲಿವುಡ್’ ನಲ್ಲಿ ನಟಿಸಿರುವ ಸುಖಿ ಗ್ರೆವಾಲ್ ಈಗ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ.
ಸದ್ಯ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಸುಖಿ ಎಂಟ್ರಿ ಬಗ್ಗೆ ಮಾತನಾಡಿದ ನಿರ್ದೇಶಕ ಹೇಮಂತ್ ಎಂ ರಾವ್, ‘ನಮಗೆ ಭಯಾನಕವಾಗಿ ಕಾಣುವ ವ್ಯಕ್ತಿತ್ವದ ಪಾತ್ರಧಾರಿ ಬೇಕಿತ್ತು. ದೊಡ್ಡ ಪರದೆಯನ್ನೂ ಚಿಕ್ಕದಾಗಿ ಕಾಣುವಂತೆ ಮಾಡಿದ ವ್ಯಕ್ತಿ. ಸುಖಿ ಪಾತ್ರವು ಒಂದು ರೀತಿಯ ಪಾತ್ರಕ್ಕೆ ಸರಿಹೊಂದುತ್ತದೆ. ನಾನು ಸೆಟ್ನಲ್ಲಿ ಭೇಟಿಯಾದ ಅತ್ಯಂತ ಸೌಮ್ಯ ವ್ಯಕ್ತಿಗಳಲ್ಲಿ ಅವರು ಒಬ್ಬರು, ಇದು ಅವರ ದೈತ್ಯ ವ್ಯಕ್ತಿತ್ವಕ್ಕೆ ಸಾಕಷ್ಟು ಭಿನ್ನವಾಗಿದೆ. ಅವರ ವ್ಯಕ್ತಿತ್ವವನ್ನು ಸರಿಹೊಂದಿಸಲು ನಾವು ಸೆಟ್ನ ಎತ್ತರವನ್ನು ಹೆಚ್ಚಿಸಬೇಕಾಗಿತ್ತು ಎಂದು ನಾನು ಹೇಳಿದಾಗ ಅದು ಉತ್ಪ್ರೇಕ್ಷೆಯಾಗುವುದಿಲ್ಲ ‘ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
7 ಅಡಿ 2 ಇಂಚು ಎತ್ತರವಿರುವ ಸುಖ್ವಿದರ್ ಸಿಂಗ್ ಗ್ರೆವಾಲ್ ಮಾತನಾಡಿ, ‘ದಕ್ಷಿಣ ಚಲನಚಿತ್ರೋದ್ಯಮದ ಬಗ್ಗೆ ನಾನು ಬಹಳಷ್ಟು ಕೇಳಿದ್ದೇನೆ, ಕನ್ನಡ ಚಲನಚಿತ್ರೋದ್ಯಮದ ಭಾಗವಾಗುವುದು ಅದ್ಭುತವಾಗಿದೆ. ಧನಂಜಯ ಮತ್ತು ಡಾ. ಶಿವರಾಜ್ ಕುಮಾರ್ ಇರುವ ಯೋಜನೆಯಲ್ಲಿ ಕೆಲಸ ಮಾಡುವುದು ಒಂದು ಗೌರವ. ನಾನು ಸೆಟ್ನಲ್ಲಿರಲು ಇಷ್ಟಪಡುತ್ತೇನೆ, ಇಲ್ಲಿನ ಜನರು ತುಂಬಾ ಪ್ರೀತಿಯಿಂದ ಇದ್ದಾರೆ. ನನ್ನ ಅಭಿನಯಕ್ಕೆ ಕನ್ನಡ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನಾನು ಎದುರು ನೋಡುತ್ತಿದ್ದೇನೆ ಮತ್ತು ಹೆಚ್ಚಿನ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಲು ಬಯಸುತ್ತೇನೆ. ಸೆಟ್ನಲ್ಲಿ ವಾತಾವರಣ ಮತ್ತು ಮುಖ್ಯವಾಗಿ ಬೆಂಗಳೂರಿನ ವಾತಾವರಣ ನಾನು ಹೆಚ್ಚು ಆನಂದಿಸಿದೆ. ನಾನು ನಗರವನ್ನು ಹೆಚ್ಚು ಅನ್ವೇಷಿಸಿಲ್ಲ, ಆದರೆ ಇಲ್ಲಿನ ಆಹಾರವನ್ನು ನಾನು ಆನಂದಿಸಿದೆ. ಅದಕ್ಕಾಗಿಯೇ ನಾನು ಜಿಮ್ನಲ್ಲಿ ಹೆಚ್ಚು ಸಮಯ ಕಳೆಯಬೇಕಾಯಿತು’ ಎಂದರು.
ಈಗಾಗಲೇ ತಮ್ಮ ಭಾಗದ ಆಕ್ಷನ್ ಸೀಕ್ವೆನ್ಸ್ ನ್ನು ಸುಖಿ ಮುಕ್ತಾಯಗೊಳಿಸಿನಿಮಾಗಿದೆ. ವೈಶಾಕ್ ಜೆ. ಗೌಡ ಅವರ ‘ವೈಶಾಕ್ ಜೆ. ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ನಿರ್ಮಿಸಲಾಗುತ್ತಿದೆ. ಹೇಮಂತ್ ಎಂ. ರಾವ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಈ ಸಿನಿಮಾಗಿದೆ.
ರೆಟ್ರೋ ಲುಕ್ನಲ್ಲಿ ಡಾ.ಶಿವ ರಾಜ್ಕುಮಾರ್ ಹಾಗೂ ಧನಂಜಯ್ ಕಾಣಿಸಿಕೊಂಡಿದ್ದು, ಪೋಸ್ಟರ್ ಈಗಾಗಲೇ ರಿಲೀಸ್ ಆಗಿದೆ. ಈ ಲುಕ್ ಡಾ. ರಾಜ್ಕುಮಾರ್ ಅವರ ಬಾಂಡ್ ಸಿನಿಮಾಗಳಾದ ಜೇಡರ ಬಲೆ, ಆಪರೇಷನ್ ಡೈಮಂಡ್ ರಾಕೆಟ್, ಗೋವಾದಲ್ಲಿ CID 999 ನೆನಪಿಸುತ್ತದೆ.