ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವ, ಅದರಲ್ಲೂ ಬೇರೆ ಊರುಗಳಿಂದ ಬಂದವರ ನಡುವೆ ಲಿವಿಂಗ್ ರಿಲೇಶನ್‌ಶಿಪ್ ಹೆಚ್ಚಾಗುತ್ತಿದೆ. ಬೆಂಗಳೂರಿನಂಥ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಇಂಥ ಸಂಬಂಧಗಳು ಕಂಡುಬರುತ್ತಿದೆ. ವಯಸ್ಸಿಗೆ ಬಂದ ಯುವಕ, ಯುವತಿಯರು ಮದುವೆಯಾಗದೆ ಒಂದೇ ಮನೆಯಲ್ಲಿ ವಾಸಿಸುವ ವ್ಯವಸ್ಥೆಯನ್ನು ಈ ರೀತಿ ಕರೆಯಲಾಗುತ್ತದೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಇಬ್ಬರು ಪ್ರೇಮಿಗಳ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಚಿತ್ರದ ಹೆಸರು ಪ್ರೇಮಿಗಳ ಗಮನಕ್ಕೆ. ಸಿಟಾಡಿಲ್ ಫಿಲಂಸ್ ಹಾಗೂ ಜೊಯಿಟಾ ಎಂಟರ್‌ಟೈನ್‌ಮೆಂಟ್ಸ್ ಅಡಿ ಸುಬ್ಬು ಹಾಗೂ ಯಕ್ಕಂಟಿ ರಾಜಶೇಖರ ರೆಡ್ಡಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇದೇ ತಿಂಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು, ಬಿಗ್‌ಬಾಸ್ ಖ್ಯಾತಿಯ ಶಶಿ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಈಗಾಗಲೇ ಕನ್ನಡ, ತುಳು ಚಿತ್ರಗಳಲ್ಲಿ ನಟಿಸಿರುವ ಚಿರಶೀ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ, ನಿರ್ಮಾಪಕ ಸುಬ್ಬು ಅವರು ಖಳನಾಯಕನಾಗಿ ಚಿಕ್ಕ ಪಾತ್ರ ನಿರ್ವಹಿಸಿದ್ದಾರೆ.
ವಿನ್ಸೆಂಟ್ ಇನ್ಬರಾಜ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಅರುಳ್ ಸೆಲ್ವನ್ ಅವರ ಛಾಯಾಗ್ರಹಣ, ಡೆನ್ನಿಸ್ ವಲ್ಲಭನ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಚಿತ್ರದ ಸಹ ನಿರ್ದೇಶಕರಾಗಿ ಕೃಷ್ಣ ಕಾರ್ಯನಿರ್ವಹಿಸಿದ್ದಾರೆ.
ಕೊರೋನಾ ಸಮಯದಲ್ಲಿ ಇಡೀ ದೇಶವೇ ಲಾಕ್ಡೌನ್ ಆಗಿ ಯಾರೂ ಹೊರಗಡೆ ಹೋಗದ ಸಂದರ್ಭದಲ್ಲಿ ಬೆಂಗಳೂರಿನ ಎಲ್ಲಾ ಐಟಿ, ಬಿಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿಕೊಟ್ಟವು. ಅದರಂತೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಿತ್ರದ ನಾಯಕ, ನಾಯಕಿ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸತೊಡಗುತ್ತಾರೆ. ಆಗ ಆ ಮನೆಯಲ್ಲಿ ಏನೇನು ನಡೆಯುತ್ತದೆ ?, ಆಗಂತುಕನೊಬ್ಬ ಆ ಮನೆಗೆ ಹೇಗೆ ಎಂಟ್ರಿ ಕೊಡುತ್ತಾನೆ ?, ಅವರಿಗೆ ಯಾವರೀತಿ ತೊಂದರೆ ಕೊಡುತ್ತಾನೆ?, ಆ ಸಂದರ್ಭವನ್ನು ಅವರು ಹೇಗೆ ಫೇಸ್ ಮಾಡಿದರು? ಎನ್ನುವುದೇ ಪ್ರೇಮಿಗಳ ಗಮನಕ್ಕೆ ಚಿತ್ರದ ಕಾನ್ಸೆಪ್ಟ್.
ಐದು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ಒಂದು ನೈಜಘಟನೆ ಈ ಚಿತ್ರಕ್ಕೆ ಪ್ರೇರಣೆ. ಇಡೀ ಚಿತ್ರದ ಕಥೆ ನಡೆಯೋದು ಒಂದೇ ಮನೆಯಲ್ಲಿ, 2 ಪಾತ್ರಗಳ ಸುತ್ತ, ಮತ್ತೊಂದು ಪಾತ್ರ ಕೆಲ ದೃಶ್ಯಗಳಲ್ಲಿ ಮಾತ್ರ ಬಂದುಹೋಗುತ್ತೆ, ಅವೇರ್‌ನೆಸ್ ಜತೆಗೆ ಮನರಂಜನೆಯ ಅಂಶವನ್ನಿಟ್ಟುಕೊಂಡು ಮಾಡಿರೋ ಚಿತ್ರವಿದು. ಬೆಂಗಳೂರಿನ ಉತ್ತರಹಳ್ಳಿಯ ಮನೆಯೊಂದರಲ್ಲಿ ಬಹುತೇಕ ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ದೇಶಕ ವಿನ್ಸೆಂಟ್ ಇನ್ಬರಾಜ್ ಅವರು ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು,
ನಿರ್ಮಾಪಕ ಸುಬ್ಬು ಮಾತನಾಡುತ್ತ ನಾನು ಮೂಲತ: ಬಿಲ್ಡರ್, ನಿರ್ದೇಶಕರು ಈ ಕಥೆ ಹೇಳಿದಾಗ ಕಾನ್ಸೆಪ್ಟ್ ತುಂಬಾ ಇಷ್ಟವಾಗಿ ನಿರ್ಮಿಸಲು ಮುಂದಾದೆ. ನಿರ್ಮಾಣದ ಜತೆ ಖಳನಾಯಕನಾಗಿಯೂ ಈ ಚಿತ್ರದಲ್ಲಿ ನಟಿಸಿದ್ದೇನೆ, ಇದೇ ತಿಂಗಳ ಅಂತ್ಯದಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ ಎಂದು ಹೇಳಿದರು. ಮತ್ತೊಬ್ಬ ನಿರ್ಮಾಪಕ ಯಕ್ಕಂಟಿ ರಾಜಶೇಖರ ರೆಡ್ಡಿ ಮಾತನಾಡಿ ಇದೊಂದು ನೈಸ್ ಕಾನ್ಸೆಪ್ಟ್. ಒಂದೊಳ್ಳೇ ಟೀಮ್‌ವರ್ಕ್ ನಿಂದ ಉತ್ತಮ ಸಿನಿಮಾ ಹೊರಬರುತ್ತೆ ಎಂಬ ನಂಬಿಕೆಯಿದೆ ಎಂದರು,
ನಾಯಕ ಶಶಿ ಮಾತಾಡಿ ಇದು ನನ್ನ ಮೂರನೇ ಚಿತ್ರ. ಈಗಿನ ಕಾಲದ ಯೂಥ್‌ಗೆ ಈ ಕಥೆ ಕನೆಕ್ಟ್ ಆಗುತ್ತೆ ಎಂದರು. ನಾಯಕಿ ಚಿರಶ್ರೀ ಮಾತನಾಡಿ ಚಿತ್ರದಲ್ಲಿ ನನ್ನದು ಐಟಿ ಕಂಪನಿಯಲ್ಲಿ ಕೆಲಸಮಾಡೋ ದರ್ಶಿನಿ ಎಂಬ ಪಾತ್ರ. ಕನ್ನಡ, ತುಳು ಸೇರಿ ಇದು ನನ್ನ ಹತ್ತನೇ ಚಿತ್ರ ಎಂದು ಹೇಳಿದರು, ವಿತರಕ ನವರತ್ನ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು,