– ರಾಘವೇಂದ್ರ ಅಡಿಗ ಎಚ್ಚೆನ್.

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಹೀಗೊಂದು ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿರುವುದು ನಿಮಗೆ ಗೊತ್ತಿರಬಹುದು. ಇದೀಗ ಈ ಸಿನಿಮಾ ಸದ್ದಿಲ್ಲದೆ ತನ್ನ ಚಿತ್ರೀಕರಣವನ್ನು ಪೂರೈಸಿದೆ. ಸಿನಿಮಾದ ಹೆಸರೇ ಹೇಳುವಂತೆ, ಇದು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಮತ್ತು ಪಡಿತರ ವ್ಯವಸ್ಥೆಯ ಸುತ್ತ ನಡೆಯುವಂಥ ಕಥಾಹಂದರದ ಚಿತ್ರ. ಪಕ್ಕಾ ಗ್ರಾಮೀಣ ಸೊಗಡಿನ ಕಥಾಹಂದರದ ಈ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಮಂಡ್ಯ ಜಿಲ್ಲೆಯಲ್ಲೇ ನಡೆಸಿರುವುದು ವಿಶೇಷ. ಇನ್ನು ನಟಿ ರಾಗಿಣಿ ದ್ವಿವೇದಿ, ನಟರಾದ ಕುಮಾರ ಬಂಗಾರಪ್ಪ, ದೊಡ್ಡಣ್ಣ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ಸಿನಿಮಾದಲ್ಲಿ ಮಂಡ್ಯ ಜಿಲ್ಲೆಯ ಮಾಜಿ ಸಂಸದ, ಹಿರಿಯ ರಾಜಕಾರಣಿ ಎಲ್‌. ಆರ್.‌ ಶಿವರಾಮೇಗೌಡ ಕೂಡ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

IMG-20251009-WA0012

ಇಡೀ ದೇಶದಲ್ಲಿಯೇ ಸರ್ಕಾರಿ ನ್ಯಾಯಬೆಲೆ ಅಂಗಡಿ ಮತ್ತು ಪಡಿತರ ವ್ಯವಸ್ಥೆಯ ಮೇಲೆ ಮೂಡಿ ಬರುತ್ತಿರುವ ಮೊಟ್ಟ ಮೊದಲ ಸಿನಿಮಾ ಇದಾಗಿದ್ದು, ಕನ್ನಡದ ಜೊತೆಗೆ ದೇಶದ ಇತರ ಭಾಷೆಗಳಲ್ಲೂ ಈ ಸಿನಿಮಾವನ್ನು ತಲುಪಿಸುವ ಯೋಚನೆಯಲ್ಲಿದೆ ಚಿತ್ರತಂಡ. ಇಂಥದ್ದೇ ಹಲವು  ವಿಷಯಗಳನ್ನು, ವಿಶೇಷತೆಗಳನ್ನು ಹೊತ್ತು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಕ್ಯಾರೆಕ್ಟರ್‌ ಟೀಸರ್‌ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಒಂದಷ್ಟು  ಮಾತನಾಡಿತು.

IMG-20251009-WA0015

ಇನ್ನು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ವರ್ಣರಂಜಿತ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ, ಮಂಡ್ಯ ಜಿಲ್ಲೆಯ ಮಾಜಿ ಸಂಸದ ಎಲ್‌. ಆರ್‌. ಶಿವರಾಮೇಗೌಡ ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ಎಲ್‌. ಆರ್‌. ಶಿವರಾಮೇಗೌಡ ಅವರದ್ದು ಮುಖ್ಯಮಂತ್ರಿಯ ಪಾತ್ರವಂತೆ. ಮೊದಲ ಬಾರಿಗೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ಇಂಥದ್ದೊಂದು ಪಾತ್ರವನ್ನು ನಿರ್ವಹಿಸಿದ ಬಗ್ಗೆ ಖುಷಿಯಿಂದ ಮಾತನಾಡಿದ ಎಲ್‌. ಆರ್‌. ಶಿವರಾಮೇಗೌಡ, ‘ನಾನು ಸುಮಾರು ನಾಲ್ಕು ದಶಕಗಳಿಂದ ರಾಜಕಾರಣದಲ್ಲಿದ್ದು, ರಾಜಕಾರಣಿಯಾಗಿ ಕೆಲಸ ಮಾಡಿದ್ದೇನೆ. ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಬಂದರೂ, ಮಂತ್ರಿಯಾಗುವ ಅದೃಷ್ಟ ನನಗೆ ಸಿಗಲಿಲ್ಲ ಎಂಬ ಬೇಸರವಿದೆ. ಆದರೆ ಈ ಸಿನಿಮಾದಲ್ಲಿ ಬರೀ ಮಂತ್ರಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿಯೇ ಕಾಣಿಸಿಕೊಂಡಿದ್ದೇನೆ. ರಿಯಲ್‌ ಲೈಫ್‌ನಲ್ಲಿ ಇನ್ನೂ ಮುಖ್ಯಮಂತ್ರಿಯಾಗುವ ಅದೃಷ್ಟ ಬರದಿದ್ದರೂ, ರೀಲ್‌ನಲ್ಲಿ ಈ ಸಿನಿಮಾದ ಮೂಲಕ ಮುಖ್ಯಮಂತ್ರಿಯಾಗಿದ್ದೇನೆ. ಸಿನಿಮಾದ ನಿರ್ದೇಶಕರು, ನಿರ್ಮಾಪಕರು ಹೇಳಿದಂತೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ಮುಖ್ಯಮಂತ್ರಿಯಾಗಿ ನನ್ನ ಪಾತ್ರವನ್ನು ನಿಭಾಯಿಸಿದ್ದೇನೆ. ಸಿನಿಮಾರಂಗದ ಜೊತೆಗೆ ಮೊದಲಿನಿಂದಲೂ ನಂಟಿದ್ದರೂ, ಯಾವತ್ತೂ ತೆರೆಮೇಲೆ ಅಭಿನಯಿಸಿರಲಿಲ್ಲ. ಅಭಿನಯ ನನಗೊಂದು ಹೊಸ ಅನುಭವ ಕೊಟ್ಟಿದೆ. ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ನನ್ನ ಪಾತ್ರ ತುಂಬ ಚೆನ್ನಾಗಿ ಮೂಡಿಬಂದಿದೆ ಎಂಬ ವಿಶ್ವಾಸವಿದೆ. ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರ ಇಂದಿನ ಪಡಿತರ ವ್ಯವಸ್ಥೆ ಪರಿಸ್ಥಿಯನ್ನು ಬಿಂಬಿಸುವ ಸಿನಿಮಾವಾಗಿದ್ದು, ಎಲ್ಲರಿಗೂ ಇಷ್ಟವಾಗುತ್ತದೆʼ ಎಂಬ ಭರವಸೆ ವ್ಯಕ್ತಪಡಿಸಿದರು.

IMG-20251009-WA0025

‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಪಾರ್ವತಿ ಎಂಬ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ತಮ್ಮ ಕ್ಯಾರೆಕ್ಟರ್‌ ಟೀಸರ್‌ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ರಾಗಿಣಿ ದ್ವಿವೇದಿ, ‘ನನ್ನ ಸಿನಿಮಾ ಕೆರಿಯರ್‌ನಲ್ಲಿ ಇಲ್ಲಿಯವರೆಗೂ ಮಾಡಿರದ ಅಪರೂಪದ ಪಾತ್ರ ಈ ಸಿನಿಮಾದಲ್ಲಿದೆ.  ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಏನೇನು ವ್ಯವಹಾರಗಳು, ಅವ್ಯವಹಾರಗಳು ನಡೆಯುತ್ತದೆ ಎಂಬುದನ್ನು ಸಮಾಜಕ್ಕೆ ತೋರಿಸುವಂಥ ದಿಟ್ಟ ಮಹಿಳೆಯ ಪಾತ್ರ ಈ ಸಿನಿಮಾದಲ್ಲಿದೆ. ನನಗೆ ಗೊತ್ತಿರುವಂತೆ, ಕನ್ನಡ ಚಿತ್ರರಂಗದಲ್ಲಿ ಇಂಥ ಸಿನಿಮಾ ಇಲ್ಲಿಯವರೆಗೂ ಬಂದಿಲ್ಲ. ಸಿನಿಮಾದಲ್ಲಿ ನನ್ನ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ.’ ಎಂದರು.

IMG-20251009-WA0009

ನಟ ಕುಮಾರ್‌ ಬಂಗಾರಪ್ಪ ಮಾತನಾಡಿ, ‘ಇದು ಎಲ್ಲಾ ಥರದ ಆಡಿಯನ್ಸ್‌ಗೂ ಕನೆಕ್ಟ್‌ ಆಗುವಂಥ ಸಿನಿಮಾ. ಇಡೀ ಸಿನಿಮಾವನನ್ನು ಮಂಡ್ಯ ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಚಿತ್ರೀಕರಿಸಿದ್ದು, ಒಂದು ಅದ್ಭುತ ಅನುಭವ. ನಿರ್ಮಾಪಕರು, ನಿರ್ದೇಶಕರು ಮತ್ತು ತಂತ್ರಜ್ಞರ ಸಹಕಾರದಿಂದ ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರ ತುಂಬ ಚೆನ್ನಾಗಿ ಮೂಡಿಬರುತ್ತಿದೆ. ಸಿನಿಮಾದ ಚಿತ್ರೀಕರಣ ಮುಗಿದಿದ್ದೇ ಗೊತ್ತಾಗಲಿಲ್ಲ. ಇಡೀ ಸಿನಿಮಾ ಮತ್ತು ಚಿತ್ರತಂಡ ಒಳ್ಳೆಯ ನೆನಪುಗಳನ್ನು ಮತ್ತು ಅನುಭವಗಳನ್ನು ಕೊಟ್ಟಿದೆ. ಈ ಸಿನಿಮಾವನ್ನು ತೆರೆಮೇಲೆ ನೋಡಲು ನಾನು ಕೂಡ ಕುತೂಹಲದಿಂದ ಕಾಯುತ್ತಿದ್ದೇನೆʼ ಎಂದರು.

IMG-20251009-WA0024

ಹಿರಿಯ ನಟ ದೊಡ್ಡಣ್ಣ ಮಾತನಾಡಿ, ‘ನಮ್ಮೆಲ್ಲರ ನಟ ಮಂಡ್ಯದ ಗಂಡು ಅಂಬರೀಶ್‌ ಅವರ ಹುಟ್ಟೂರಾದ ದೊಡ್ಡರಸಿನಕೆರೆಯಲ್ಲೇ ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ಸಂಪೂರ್ಣ ಚಿತ್ರೀಕರಣ ಮಾಡಿರುವುದು ವಿಶೇಷ. ಈ ಸಿನಿಮಾದಲ್ಲಿ ಅಂಬರೀಶ್‌ ಹುಟ್ಟಿ, ಬೆಳೆದ ಜಾಗಗಳಿವೆ, ಈ ಸಿನಿಮಾದ ಮೇಲೆ ಅಂಬರೀಶ್‌ ಅವರ ಆಶೀರ್ವಾದವಿದೆ. ಇನ್ನು ನಾನು ಈ ಸಿನಿಮಾದಲ್ಲಿ ರಾಗಿಣಿ ಅವರ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಒಂದೊಳ್ಳೆ ಸಾಮಾಜಿಕ ಸಂದೇಶ ಇರುವಂಥ ಸಿನಿಮಾ ಇದಾಗಿದೆ. ನನಗೂ ಇಂಥದ್ದೊಂದು ಸಿನಿಮಾದ ಭಾಗವಾಗಿರುವುದಕ್ಕೆ ತುಂಬ ಖುಷಿಯಿದೆʼ ಎಂದರು.

IMG-20251009-WA0002

ʼಜಯಶಂಕರ ಟಾಕೀಸ್‌ʼ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರವನ್ನು ತೇಜು ಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅನಂತ್‌ ಆರ್ಯನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಬಿ. ರಾಮಮೂರ್ತಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರಕ್ಕೆ ಸಾತ್ವಿಕ್‌ ಪವನ್‌ ಕುಮಾರ್‌ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ.

IMG-20251009-WA0011

ಕಾರ್ಯಕ್ರಮದಲ್ಲಿ ತುಮಕೂರಿನ ಮಾಜಿ ಸಂಸದ ಮುದ್ದುಹನುಮೇಗೌಡ, ಚಿತ್ರದುರ್ಗದ ಮಾಜಿ ಸಂಸದ ಚಂದ್ರಪ್ಪ, ನಿರ್ದೇಶಕ ಬಿ. ರಾಮಮೂರ್ತಿ, ನಿರ್ಮಾಪಕ ಭಾ. ಮ. ಹರೀಶ್‌, ಭಾ. ಮ. ಗಿರೀಶ್‌  ಸೇರಿದಂತೆ ರಾಜಕೀಯ ಮತ್ತು ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.

IMG-20251009-WA0013

ಸುಮಾರು 52 ದಿನಗಳ ಕಾಲ ಮಂಡ್ಯ ಸುತ್ತಮುತ್ತಲಿನ ಸ್ಥಳಗಳಲ್ಲಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರಂತರವಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ