ಸರಸ್ವತಿ*
ಸುರಾಮ್ ಮೂವೀಸ್ ಲಾಂಛನದಲ್ಲಿ ಜಯರಾಮ್ ದೇವಸಮುದ್ರ ನಿರ್ಮಿಸುತ್ತಿರುವ ಹಾಗೂ ಶಕ್ತಿಪ್ರಸಾದ್ ನಿರ್ದೇಶನದಲ್ಲಿ ಚೈತ್ರಾ ಜೆ ಆಚಾರ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ “LSD”(ಲೈಲಾಸ್ ಸ್ವೀಟ್ ಡ್ರೀಮ್) ಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟೈಟಲ್ ಟೀಸರ್ ಬಹಳ ಕುತೂಹಲ ಮೂಡಿಸಿದೆ. ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
“LSD”, ನಮ್ಮ ಸುರಾಮ್ ಮೂವೀಸ್ ನಿರ್ಮಾಣದ ನಾಲ್ಕನೇ ಚಿತ್ರ. “ನಿದ್ರಾದೇವಿ ನೆಕ್ಸ್ಟ್ ಡೋರ್” ನಮ್ಮ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರ. ನಂತರ ಶ್ರೀಮುರಳಿ ಅಭಿನಯದ “ಉಗ್ರಾಯಧಮ್” ಹಾಗೂ “ನೀ ನಂಗೆ ಅಲ್ವಾ” ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಹೊಸಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕೆಂಬುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ. ಹಾಗಾಗಿ ಯುವ ಪ್ರತಿಭೆ ಶಕ್ತಿಪ್ರಸಾದ್ ಅವರು ಬಂದು “LSD” ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಚೈತ್ರಾ ಜೆ ಆಚಾರ್, ಎಂ.ಡಿ.ಪಲ್ಲವಿ, ಅವಿನಾಶ್ ಮುಂತಾದವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಜಯರಾಮ್ ದೇವಸಮುದ್ರ.

ನಾನು ನನ್ನ ತಂಡದ ಜೊತೆಗೆ ಅನೇಕ ಕಿರುಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಬೆಳ್ಳಿತೆರೆಯಲ್ಲಿ ಇದು ನನ್ನ ಮೊದಲ ಚಿತ್ರ. ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದ. “LSD” ಎಂದರೆ “ಲೈಲಾಸ್ ಸ್ವೀಟ್ ಡ್ರೀಮ್” ಅಂತ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ತಾಯಿ – ಮಗಳ ಬಾಂಧವ್ಯದ ಚಿತ್ರವೂ ಹೌದು. ಚೈತ್ರಾ ಜೆ ಆಚಾರ್ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ತಾಯಿ ಪಾತ್ರದಲ್ಲಿ ಎಂ.ಡಿ.ಪಲ್ಲವಿ ನಟಿಸುತ್ತಿದ್ದಾರೆ. ಬ್ಯುಸ್ ನೆಸ್ ಮ್ಯಾನ್ ಪಾತ್ರದಲ್ಲಿ ಹಿರಿಯನಟ ಅವಿನಾಶ್ ಕಾಣಿಸಿಕೊಳ್ಳುತ್ತಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ರಿತೇಶ್ ಛಾಯಾಗ್ರಹಣ ಹಾಗೂ ಬಲರಾಮ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಜನವರಿ 15 ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಶಕ್ತಿಪ್ರಸಾದ್ ತಿಳಿಸಿದರು.
ನನಗೆ ಶಕ್ತಿಪ್ರಸಾದ್ ಅವರು ಸುಮಾರು ಒಂದುವರೆ ವರ್ಷಗಳ ಹಿಂದೆ ಈ ಕಥೆ ಹೇಳಿದರು. ತುಂಬಾ ಇಷ್ಟವಾಯಿತು. ಶಕ್ತಿಪ್ರಸಾದ್ ಈ ಮೊದಲು ಬೇರೆ ಭಾಷೆಗಳ ನಿರ್ಮಾಪಕರ ಬಳಿ ಈ ಕಥೆ ಹೇಳಿದ್ದಾರೆ. ಅವರೆಲ್ಲರೂ ಕಥೆ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಕನ್ನಡದಲ್ಲೇ ಈ ಚಿತ್ರ ಮಾಡಬೇಕೆಂಬ ಉದ್ದೇಶದಿಂದ ಅವರು ಬೇರೆ ಭಾಷೆಗಳಲ್ಲಿ ಈ ಚಿತ್ರ ಮಾಡಲಿಲ್ಲ. ನಂತರ ನಿರ್ಮಾಪಕ ಜಯರಾಮ್ ದೇವಸಮುದ್ರ ಅವರು ಕನ್ನಡದಲ್ಲಿ ನಿರ್ಮಾಣಕ್ಕೆ ಮುಂದಾದರು. ನಾನು ಈ ಚಿತ್ರದಲ್ಲಿ ಈವರೆಗೂ ಮಾಡಿರದ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದು ನಟಿ ಚೈತ್ರಾ ಜೆ ಆಚಾರ್ ಹೇಳಿದರು.
ಕೆಲವು ವರ್ಷಗಳ ನಂತರ ಮತ್ತೆ ಸಿನಿಮಾದಲ್ಲಿ ನಾನು ಈ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಚೈತ್ರಾ ಜೆ ಆಚಾರ್ ಅವರ ಮೂಲಕ ನನಗೆ ಈ ವಿಷಯ ತಿಳಿಯಿತ್ತು. ಶಕ್ತಿಪ್ರಸಾದ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನಾನು ಚೈತ್ರಾ ಜೆ ಆಚಾರ್ ಅವರ ಅಮ್ಮನ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದರು ಎಂ.ಡಿ.ಪಲ್ಲವಿ.
ನಾನು ಸಾಕಷ್ಟು ಸಿನಿಮಾ ತಂಡಗಳ ಜೊತೆಗೆ ಕೆಲಸ ಮಾಡಿದ್ದೇನೆ. ಆದರೆ ಈ ತಂಡದ ಜೊತೆಗೆ ಕೆಲಸ ಮಾಡಿರುವುದು ಬಹಳ ಖುಷಿಯಾಗಿದೆ. ನನ್ನದು ಈ ಚಿತ್ರದಲ್ಲಿ ಬ್ಯುಸಿನೆಸ್ ಮ್ಯಾನ್ ಪಾತ್ರ ಎಂದು ಹಿರಿಯ ನಟ ಅವಿನಾಶ್ ಹೇಳಿದರು.
ಸಂಗೀತ ನಿರ್ದೇಶನದ ಕುರಿತು ಮಿಥುನ್ ಮುಕುಂದನ್ ಹಾಗೂ ಛಾಯಾಗ್ರಹಣದ ಬಗ್ಗೆ ರಿತೇಶ್ ಮಾತನಾಡಿದರು.





