ಸರಸ್ವತಿ*
ಹೈದರಾಬಾದ್: ಪ್ಯಾನ್-ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ‘ದಿ ರಾಜಾ ಸಾಬ್’ ತಂಡದಿಂದ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಮುನ್ನುಡಿ ಬರೆಯಲಾಗಿದೆ. ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆದ ಪ್ರೀ-ರಿಲೀಸ್ ಸಮಾರಂಭದಲ್ಲಿ ಚಿತ್ರತಂಡವು ಅಭಿಮಾನಿಗಳ ಸಮ್ಮುಖದಲ್ಲಿ ಸಿನಿಮಾ ಬಗ್ಗೆ ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ರೆಬೆಲ್ ಸ್ಟಾರ್ ಪ್ರಭಾಸ್ ಮಾತನಾಡಿ, “ಅಭಿಮಾನಿಗಳಿಗೆ ಸಂಪೂರ್ಣ ಮನರಂಜನೆ ನೀಡುವ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇವೆ. ನಿರ್ದೇಶಕ ಮಾರುತಿ ಅವರ ಬರವಣಿಗೆಗೆ ನಾನು ಕ್ಲೈಮ್ಯಾಕ್ಸ್ ನೋಡಿದ ನಂತರ ಅಭಿಮಾನಿಯಾದೆ. ಈ ಸಂಕ್ರಾಂತಿಗೆ ಬಿಡುಗಡೆಯಾಗುತ್ತಿರುವ ಎಲ್ಲಾ ಸಿನಿಮಾಗಳು ಯಶಸ್ವಿಯಾಗಲಿ, ಅದರ ಜೊತೆಗೆ ‘ದಿ ರಾಜಾ ಸಾಬ್’ ಕೂಡ ಬ್ಲಾಕ್‌ಬಸ್ಟರ್ ಆಗಲಿ” ಎಂದು ಆಶಿಸಿದರು. ಅಲ್ಲದೆ, ನಾಳೆ (ಡಿಸೆಂಬರ್ 29) ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ ಎಂಬ ಸಿಹಿ ಸುದ್ದಿಯನ್ನು ನೀಡಿದರು.

*ಮಾರುತಿ ಬರವಣಿಗೆಗೆ ಪ್ರಭಾಸ್ ಮನಸೋತ ಕ್ಷಣ*
“ಮಾರುತಿ ಅವರು ಈ ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಅದನ್ನು ಅವರು ಪೆನ್ನಿನಿಂದ ಬರೆದಿದ್ದಾರೋ ಅಥವಾ ಮೆಷಿನ್ ಗನ್‌ನಿಂದ ಬರೆದಿದ್ದಾರೋ ಎಂಬಂತೆ ಪವರ್‌ಫುಲ್ ಆಗಿದೆ. 15 ವರ್ಷಗಳ ನಂತರ ಅಭಿಮಾನಿಗಳು ನನ್ನಿಂದ ಬಯಸುವ ‘ಡಾರ್ಲಿಂಗ್’ ಶೈಲಿಯ ಪೂರ್ಣ ಪ್ರಮಾಣದ ಮನರಂಜನೆ ಈ ಚಿತ್ರದಲ್ಲಿದೆ” ಎಂದರು. ಅಲ್ಲದೆ ಹಿರಿಯ ನಟಿ ಜರೀನಾ ವಹಾಬ್ ಅವರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
*ಮಾರುತಿ ಭಾವುಕ ಮಾತು*
“ನಾನು 11 ಸಿನಿಮಾಗಳನ್ನು ಮಾಡಿದ್ದೇನೆ, ಆದರೆ ಪ್ರಭಾಸ್ ಅವರು ನನಗೆ ‘ರೆಬೆಲ್ ಯೂನಿವರ್ಸಿಟಿ’ಯಲ್ಲಿ ದೊಡ್ಡ ಮಟ್ಟದ ಅವಕಾಶ ನೀಡಿದ್ದಾರೆ. ಈ ಸಿನಿಮಾದ ಎಮೋಷನಲ್ ದೃಶ್ಯಗಳನ್ನು ನೋಡುವಾಗ ನನ್ನ ಕಣ್ಣಲ್ಲೇ ನೀರು ಬಂದಿದೆ. ಒಂದು ವೇಳೆ ಈ ಸಿನಿಮಾ ನಿಮ್ಮನ್ನು ನಿರಾಸೆಗೊಳಿಸಿದರೆ ನನ್ನ ಮನೆ ವಿಳಾಸ ಕೊಡುತ್ತೇನೆ, ಅಲ್ಲಿಗೆ ಬಂದು ಕೇಳಿ” ಎಂದು ನಿರ್ದೇಶಕ ಮಾರುತಿ ಸವಾಲಿನೊಂದಿಗೆ ಭರವಸೆ ನೀಡಿದರು.
“ಪ್ರಭಾಸ್ ಅವರಂತಹ ದೊಡ್ಡ ಸ್ಟಾರ್ ನನಗೆ ಈ ಅವಕಾಶ ನೀಡಿದ್ದಕ್ಕೆ ನಾನು ಚಿರಋಣಿ. ಇದು ಕೇವಲ ಸಿನಿಮಾ ಅಲ್ಲ, ಒಂದು ದೊಡ್ಡ ಮಟ್ಟದ ಹಾರರ್-ಫ್ಯಾಂಟಸಿ ಪ್ರಯೋಗ. ಚಿತ್ರದ ಪ್ರತಿಯೊಂದು ದೃಶ್ಯವೂ ಅಭಿಮಾನಿಗಳಿಗೆ ಹಬ್ಬದಂತಿರಲಿದೆ” ಎಂದರು ಮಾರುತಿ.
ನಿರ್ಮಾಪಕ ಟಿ.ಜಿ. ವಿಶ್ವ ಪ್ರಸಾದ್ ಮಾತನಾಡಿ, “ಇದು ಪೀಪಲ್ ಮೀಡಿಯಾ ಫ್ಯಾಕ್ಟರಿಯ ಅತಿ ದೊಡ್ಡ ಸಿನಿಮಾ. ಹಾರರ್-ಫ್ಯಾಂಟಸಿ ಜಾನರ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಇದೊಂದು ಮಾದರಿ ಚಿತ್ರವಾಗಲಿದೆ” ಎಂದರು. ಕ್ರಿಯೇಟಿವ್ ಪ್ರೊಡ್ಯೂಸರ್ SKN ಅವರು ಪ್ರಭಾಸ್ ಅವರ ದೊಡ್ಡ ಗುಣವನ್ನು ನೆನಪಿಸಿಕೊಂಡು, ಶೂಟಿಂಗ್ ವೇಳೆ ಪ್ರಭಾಸ್ ಅವರು ಇಡೀ ತಂಡಕ್ಕೆ ಪರ್ಸನಲ್ ಶೆಫ್ ಮೂಲಕ ತೆಲುಗು ಊಟ ಬಡಿಸುತ್ತಿದ್ದ ಘಟನೆಯನ್ನು ಹಂಚಿಕೊಂಡರು.
*2000 ಕೋಟಿ ಗಳಿಕೆಯ ಭರವಸೆ*
ನಟ ಸಪ್ತಗಿರಿ ಮಾತನಾಡಿ, “ಸಲಾರ್ ಸಿನಿಮಾ 2000 ಕೋಟಿ ಗಳಿಸುತ್ತದೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ‘ದಿ ರಾಜಾ ಸಾಬ್’ ಟ್ರೈಲರ್ ನೋಡಿದ್ದೇನೆ, ಇದು ಕೂಡ ಖಂಡಿತವಾಗಿ 2000 ಕೋಟಿ ಕ್ಲಬ್ ಸೇರಲಿದೆ. ಪ್ರಭಾಸ್ ಅಣ್ಣ ಮತ್ತೆ ಹೂವು ಹಿಡಿದು ವಿಂಟೇಜ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಹಬ್ಬ” ಎಂದರು.
*ಕೇರಳದಿಂದ ಬಂದ ಭೈರವಿ*
ನಾಯಕಿ ಮಾಳವಿಕಾ ಮೋಹನನ್ ಮಾತನಾಡಿ, “ಟಾಲಿವುಡ್‌ಗೆ ಪ್ರಭಾಸ್ ಅವರಂತಹ ದೊಡ್ಡ ಸ್ಟಾರ್ ಜೊತೆ ಎಂಟ್ರಿ ಕೊಡುತ್ತಿರುವುದು ನನ್ನ ಸೌಭಾಗ್ಯ. ಇಲ್ಲಿ ಕೇವಲ ಹಾಡು-ನೃತ್ಯವಷ್ಟೇ ಅಲ್ಲದೆ, ನನಗೆ ಆಕ್ಷನ್ ಮತ್ತು ಕಾಮಿಡಿ ಮಾಡುವ ಅವಕಾಶವನ್ನೂ ಮಾರುತಿ ಅವರು ನೀಡಿದ್ದಾರೆ” ಎಂದು ಸಂತಸ ಹಂಚಿಕೊಂಡರು. ಪ್ರಭಾಸ್ ಜೊತೆ ನಟಿಸುವುದು ಒಂದು ಕನಸು ಎಂದು ನಿಧಿ ಬಣ್ಣಿಸಿದರೆ, ಪ್ರಭಾಸ್ ಅವರ ನೈಜ ಗುಣಗಳನ್ನು ಈ ಸಿನಿಮಾದಲ್ಲಿ ನೋಡಬಹುದು ಎಂದು ರಿದ್ಧಿ ಕುಮಾರ್ ತಿಳಿಸಿದರು.
*ತಾರಾಗಣ ಮತ್ತು ತಾಂತ್ರಿಕ ವರ್ಗ*
ಪ್ರಭಾಸ್ ಜೊತೆಗೆ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. ಹಿರಿಯ ನಟಿ ಜರೀನಾ ವಹಾಬ್ ಅವರು ಪ್ರಭಾಸ್ ಅವರ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಮತ್ತು ಬೋಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಥಮನ್ ಅವರ ಸಂಗೀತ ಮತ್ತು ಕಾರ್ತಿಕ್ ಪಳನಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿಯ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವ ಪ್ರಸಾದ್ ಅವರು ಅತ್ಯಂತ ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಸಿನಿಮಾವು ಜನವರಿ 9 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ.





