ಸಾಮಗ್ರಿ : 1 ಕಪ್ ಮೈದಾ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಕಸೂರಿಮೇಥಿ, ಜೀರಿಗೆ ಪುಡಿ, ಓಮ, ಕರಿಯಲು ಎಣ್ಣೆ, ತುಪ್ಪ.
ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಒಂದು ಬೇಸನ್ನಿಗೆ ಸೇರಿಸಿ, ತುಸು ಉಗುರು ಬೆಚ್ಚನೆಯ ನೀರು ಚಿಮುಕಿಸುತ್ತಾ ಪೂರಿ ಹಿಟ್ಟಿನ ಹದಕ್ಕೆ ಮೃದುವಾಗಿ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ, ಮೇಲೊಂದು ತೆಳು ಒದ್ದೆ ಬಟ್ಟೆ ಹೊದಿಸಿಡಿ. ನಂತರ ಮತ್ತೆ ತುಪ್ಪ ಬೆರೆಸಿ ನಾದಿಕೊಂಡು, ಉಂಡೆಗಳಾಗಿಸಿ, ಚಪಾತಿ ತರಹ ಲಟ್ಟಿಸಿ ನಂತರ ಚಾಕು ನೆರವಿನಿಂದ ಚಿತ್ರದಲ್ಲಿರುವಂತೆ ಉದ್ದನೆಯ ಸ್ಟ್ರಿಪ್ಸ್ ಕತ್ತರಿಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಹೊರ ತೆಗೆದು ಆರಿದ ನಂತರ ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ, ಬೇಕೆನಿಸಿದಾಗ ಬಿಸಿ ಬಿಸಿ ಕಾಫಿಟೀ ಜೊತೆ ಸವಿಯಿರಿ.
ಸ್ವಾದಿಷ್ಟ ಕಾಜೂ
ಸಾಮಗ್ರಿ : 2 ಕಪ್ ಇಡಿಯಾದ ಗೋಡಂಬಿ, ರುಚಿಗೆ ತಕ್ಕಷ್ಟು ಉಪ್ಪು, ಬ್ಲ್ಯಾಕ್ ಸಾಲ್ಟ್, ಮೆಣಸು, ಕರಿಯಲು ಎಣ್ಣೆ/ತುಪ್ಪ.
ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಯಾ ತುಪ್ಪ ಬಳಸಿ ಗೋಡಂಬಿಗಳನ್ನು ಹೊಂಬಣ್ಣ ಬರುವಂತೆ ಕರಿದು ತೆಗೆಯಿರಿ. ಇದರ ಮೇಲೆ ಇತರ ಎಲ್ಲಾ ಮಸಾಲೆ ಉದುರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಏರ್ ಟೈಟ್ ಡಬ್ಬಕ್ಕೆ ತುಂಬಿಸಿಡಿ. ಬೇಕಾದಾಗ ಸಿಹಿ ತಿನಿಸಿನ ಜೊತೆ ಇದನ್ನು ಸವಿಯಲು ಕೊಡಿ.
ಖಾರದ ಗರಿಗರಿ ಅವಲಕ್ಕಿ
ಸಾಮಗ್ರಿ : 1 ಕಪ್ ಪೇಪರ್ ಅವಲಕ್ಕಿ, ಅರ್ಧರ್ಧ ಕಪ್ ಕಡಲೆಬೀಜ, ಹುರಿಗಡಲೆ, ಗೋಡಂಬಿ, ಕೊಬ್ಬರಿ ತುಂಡು, ಕರಿಯಲು ಎಣ್ಣೆ, ಒಗ್ಗರಣೆಗೆ ಕರಿಬೇವು, ತುಂಡರಿಸಿದ ಒಣ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಅರಿಶಿನ, ಉಪ್ಪು, ಸಕ್ಕರೆ.
ವಿಧಾನ : ಮೊದಲು ಕಾದ ಎಣ್ಣೆಯಲ್ಲಿ ಅವಲಕ್ಕಿ ಹಾಕಿ ಕರಿದು ತೆಗೆಯಿರಿ. ಇದರಲ್ಲಿ ಕಡಲೆಬೀಜ, ಹುರಿಗಡಲೆ, ಕೊಬ್ಬರಿ ತುಂಡು (ಒಟ್ಟಾಗಿ) ಕರಿದು ತೆಗೆಯಿರಿ. ಸ್ವಲ್ಪ ಎಣ್ಣೆ ಉಳಿಸಿಕೊಂಡು ಉಳಿದ ಪದಾರ್ಥ ಹಾಕಿ ಒಗ್ಗರಣೆ ಕೊಡಿ. ಇವನ್ನೆಲ್ಲ ಕರಿದ ಅವಲಕ್ಕಿಗೆ ಚೆನ್ನಾಗಿ ಬೆರೆಸಿ, ಉಪ್ಪು ಖಾರ ಬೆರೆತುಕೊಳ್ಳುವಂತೆ ಮಾಡಿ, ಏರ್ ಟೈಟ್ ಕಂಟೇನರ್ ಗೆ ತುಂಬಿಸಿಡಿ. ಸಂಜೆಯ ಕಾಫಿಟೀ ಜೊತೆ ಇದು ಸೊಗಸಾಗಿರುತ್ತದೆ.
ಕಸ್ಟರ್ಡ್ ಕಪ್
ಸಾಮಗ್ರಿ : 4 ಸ್ಲೈಸ್ ಬ್ರೆಡ್, ಅರ್ಧ ಕಪ್ ಮಾವಿನ ಹಣ್ಣಿನ ಪೇಸ್ಟ್, 4-5 ಚಮಚ ಮ್ಯಾಂಗೊ ಕಸ್ಚರ್ಡ್ ಪೌಡರ್, 5-6 ಚಮಚ ಸಕ್ಕರೆ, 2 ಕಪ್‌ಫುಲ್ ಕ್ರೀಂಯುಕ್ತ ಗಟ್ಟಿ ಹಾಲು, 2 ಚಮಚ ಕ್ರೀಂ, ಒಂದಿಷ್ಟು ಬೆಣ್ಣೆ, ಅಲಂಕರಿಸಲು ಪುದೀನಾ ಎಲೆ, ವಿಪ್ಪಿಂಗ್ ಕ್ರೀಂ.
ವಿಧಾನ : ಒದ್ದೆ ಕೈಯಿಂದ ಒತ್ತುತ್ತಾ ಬ್ರೆಡ್ ತುಂಡುಗಳನ್ನು ಗೋಲಾಕಾರವಾಗಿ ಸುತ್ತಿಕೊಳ್ಳಿ ಇದನ್ನು ಕಪ್ ಕೇಕ್ ಮೋಲ್ಡ್ಸ್ ಗೆ ಹಾಕಿ ಒತ್ತಿ, ಅದರಂತೆ ಆಕಾರ ಬರಿಸಿ. ನಂತರ ಇವನ್ನು ಓವನ್ನಿನಲ್ಲಿ ಲೈಟ್ ಬ್ರೌನ್ ಆಗುವಂತೆ ಬೇಕ್ ಮಾಡಿ. ಹಾಲಿಗೆ ಸಕ್ಕರೆ ಬೆರೆಸಿ ಕುದಿಸುತ್ತಾ, ಅರ್ಧದಷ್ಟಾಗುವಂತೆ ಹಿಂಗಿಸಿ. ಕಸ್ಟರ್ಡ್ ಪೌಡರ್ ನ್ನು ಕಾದಾರಿದ ಹಾಲಿಗೆ ಹಾಕಿ ಗೊಟಾಯಿಸಿ ಪೇಸ್ಟ್ ಮಾಡಿ. ಉಳಿದ ಸಕ್ಕರೆಯನ್ನು ಉಳಿದ ಹಾಲಿಗೆ ಬೆರೆಸಿ ಕುದಿಸಿರಿ. ನಂತರ ಕಸ್ಟರ್ಡ್ ಪೇಸ್ಟ್ ನ್ನು ಇದಕ್ಕೆ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. 2 ನಿಮಿಷ ಬಿಟ್ಟು, ಕೆಳಗಿಲಿಸಿ ಆರಲು ಬಿಡಿ. ನಂತರ ಫ್ರಿಜ್ ನಲ್ಲಿರಿಸಿ ಕೂಲ್ ಮಾಡಿ. ಕೂಲ್ ಕಸ್ಟರ್ಡ್ ಗೆ ಕ್ರೀಂ ಬೆರೆಸಿ. ಚೆನ್ನಾಗಿ ಬೀಟ್ ಮಾಡಿ. ನಂತರ ಈ ಮಿಶ್ರಣವನ್ನು ಪೈಪಿಂಗ್ ಬ್ಯಾಗಿಗೆ ತುಂಬಿಸಿ, ಒತ್ತುತ್ತಾ ಬ್ರೆಡ್ ಕಪ್ಸ್ ಗೆ ತುಂಬಿಸಿ. ಇದರ ಮೇಲೆ ಮ್ಯಾಂಗೊ ಪೇಸ್ಟ್, ಅದರ ಮೇಲೆ ವಿಪ್ಪಿಂಗ್ ಕ್ರೀಂ ಬರಲಿ. ಕೊನೆಯಲ್ಲಿ ಪುದೀನಾ ಇರಿಸಿ, ಸರ್ವ್ ಮಾಡಿ!
ಚಾಕೋ ಚಿಪ್ ಕಸ್ಟರ್ಡ್ ಕುಕೀಸ್ (ಗ್ಲುಟನ್ ಫ್ರೀ)
ಸಾಮಗ್ರಿ : 5-6 ಚಮಚ ವೆನಿಲಾ ಯಾ ಬಟರ್ ಸ್ಕಾಚ್ ಕಸ್ಟರ್ಡ್ ಪೌಡರ್, ಅರ್ಧ ಕಪ್ ಕಾರ್ನ್ ಫ್ಲೋರ್, 2 ಚಮಚ ಕೋಕೋ ಪೌಡರ್, ತುಸು ಬೇಕಿಂಗ್ ಪೌಡರ್, ಉಪ್ಪು, ಅರ್ಧ ಕಪ್ ಬೆಣ್ಣೆ, 4-5 ಚಮಚ ಬ್ರೌನ್ ಶುಗರ್, 3 ಚಮಚ ಸಕ್ಕರೆ, ಕೆಲವು ಹನಿ ವೆನಿಲಾ ಎಸೆನ್ಸ್, ಅರ್ಧ ಕಪ್ ಚಾಕೋ ಚಿಪ್ಸ್, ತುಸು ಹಾಲು.
ವಿಧಾನ : ಎರಡೂ ಬಗೆಯ ಸಕ್ಕರೆ, ಬೆಣ್ಣೆ ಸೇರಿಸಿ ಚೆನ್ನಾಗಿ ಗೊಟಾಯಿಸಿ. ನಂತರ ಈ ಮಿಶ್ರಣಕ್ಕೆ ಕಸ್ಟರ್ಡ್ ಪೌಡರ್, ಕಾರ್ನ್ ಫ್ಲೋರ್, ಉಪ್ಪು, ಬೇಕಿಂಗ್ ಪೌಡರ್, ಕೋಕೋ ಪೌಡರ್ ಇತ್ಯಾದಿ ಬೆರೆಸಿ, ನೀರಿಗೆ ಬದಲು ಕಾದಾರಿದ ಹಾಲು ಬೆರೆಸಿ ಮೃದು ಮಿಶ್ರಣ ಕಲಸಿಡಿ. ಇದಕ್ಕೆ ಮತ್ತಷ್ಟು ಬೆಣ್ಣೆ ಬೆರೆಸಿ ಚೆನ್ನಾಗಿ ನಾದಿಕೊಳ್ಳಿ. ಆಮೇಲೆ ಇದಕ್ಕೆ ಚಾಕೋ ಚಿಪ್ಸ್ ಸೇರಿಸಿ ಮತ್ತೆ ನಾದಿಕೊಳ್ಳಿ. ನಂತರ ಇದರಿಂದ ಸಣ್ಣ ಉಂಡೆ ಮಾಡಿ, ಚಿತ್ರದಲ್ಲಿರುವಂತೆ ಕುಕೀಸ್ ಆಕಾರ ನೀಡಿ. ಜಿಡ್ಡು ಸವರಿದ ಓವನ್ ಪ್ರೂಫ್ ಡಿಶ್ಶಿನಲ್ಲಿ ಇದನ್ನು ಜೋಡಿಸಿಕೊಂಡು, ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿರಿಸಿ, 150 ಡಿಗ್ರಿ ಶಾಖದಲ್ಲಿ 15-20 ನಿಮಿಷ ಹದನಾಗಿ ಬೇಕ್ ಮಾಡಿ. ಆರಿದ ನಂತರ ಏರ್ ಟೈಟ್ ಕಂಟೇನರ್ ಗೆ ತುಂಬಿಸಿ, ಮಕ್ಕಳು ಬಯಸಿದಾಗ ಸವಿಯಲು ಕೊಡಿ.
ಸ್ಪೆಷಲ್ ಕರಿಗಡುಬು
ಮೂಲ ಸಾಮಗ್ರಿ : 1 ಕಪ್ ಮೈದಾ, ತುಸು ತುಪ್ಪ, ಬೆಚ್ಚಗಿನ ಹಾಲು, ಕರಿಯಲು ರೀಫೈಂಡ್ ಎಣ್ಣೆ, ಅಲಂಕರಿಸಲು ಬೆಳ್ಳಿ ರೇಕು.
ಹೂರಣದ ಸಾಮಗ್ರಿ : 2 ಕಪ್ ತುರಿದ ಸಿಹಿ ಖೋವಾ, 1 ಗಿಟುಕು ಕೊಬ್ಬರಿ ತುರಿ, ಅರ್ಧ ಕಪ್ ಸಣ್ಣ ರವೆ, ಪುಡಿ ಸಕ್ಕರೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ, ಖರ್ಜೂರದ ಚೂರು (ಒಟ್ಟಾರೆ ಅರ್ಧ ಕಪ್), ತುಸು ಏಲಕ್ಕಿ ಪುಡಿ, ಗಸಗಸೆ, ಪಾಕಕ್ಕೆ 1 ಕಪ್ ಸಕ್ಕರೆ, ನೀರು, ಹಾಲಲ್ಲಿ ನೆನೆಸಿದ 5-6 ಎಸಳು ಕೇಸರಿ.
ವಿಧಾನ : ಮೊದಲು ಒಂದು ಬಾಣಲೆಯಲ್ಲಿ ತುಸು ತುಪ್ಪ ಹಾಕಿ, ತುರಿದ ಕೊಬ್ಬರಿ ಸೇರಿಸಿ ಹುರಿದು ತೆಗೆಯಿರಿ. ಅದಕ್ಕೆ ಇನ್ನಷ್ಟು ತುಪ್ಪ, ರವೆ ಹಾಕಿ ಮದ ಉರಿಯಲ್ಲಿ ಘಮ್ಮೆನ್ನುವಂತೆ ಹುರಿಯಿರಿ. ಗೋಡಂಬಿ-ದ್ರಾಕ್ಷಿಗಳನ್ನು ತರಿತರಿ ಮಾಡಿಡಿ. ಕೊನೆಯಲ್ಲಿ ಮತ್ತೆ ತುಪ್ಪ ಬಿಸಿ ಮಾಡಿ, ಖೋವಾ ಹಾಕಿ ಬಾಡಿಸಬೇಕು. ಇದಕ್ಕೆ ಏಲಕ್ಕಿ, ಗೋಡಂಬಿ ಮಿಶ್ರಣ, ಸಕ್ಕರೆ ಸಮೇತ ಉಳಿದೆಲ್ಲ ಸಾಮಗ್ರಿ ಬೆರೆಸಿ, ಕೆದಕಿ ಕೆಳಗಿಳಿಸಿ. ಇದೀಗ ಹೂರಣ ರೆಡಿ.
ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ, ಸಕ್ಕರೆ, ನೆನೆಸಿದ ಕೇಸರಿ ಹಾಕಿ ಒಂದೆಳೆ ಪಾಕ ತಯಾರಿಸಿ.
ಒಂದು ಬೇಸನ್ನಿಗೆ ಮೈದಾ, ಚಿಟಕಿ ಉಪ್ಪು, ಹಾಲು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಈ ಮಿಶ್ರಣಕ್ಕೆ ಮತ್ತಷ್ಟು ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು, ಸಣ್ಣ ಸಣ್ಣ ಉಂಡೆಗಳಾಗಿಸಿ ಲಟ್ಟಿಸಿ. ಪೂರಿ ತರಹ ಗುಂಡಗೆ ಕತ್ತರಿಸಿ, ಕಡುಬಿನ ಅಚ್ಚಿನಲ್ಲಿರಿಸಿ, ನಡುವೆ 2-3 ಚಮಚ ಹೂರಣ ಇರಿಸಿ, ಹೆಚ್ಚುವರಿ ಹಿಟ್ಟನ್ನು ತೆಗೆದು, ಎಲ್ಲವನ್ನೂ ಸಿದ್ಧಪಡಿಸಿಕೊಳ್ಳಿ. ನಂತರ ಇವನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಇದನ್ನು ಪೇಪರ್ ಮೇಲೆ ಹರಡಿ, ಆರಿದ ನಂತರ, ಸಕ್ಕರೆ ಪಾಕದಲ್ಲಿ ಹಾಕಿ ನೆನೆಯಲು ಬಿಡಿ. ಆಮೇಲೆ ಚಿತ್ರದಲ್ಲಿರುವಂತೆ ಬೆಳ್ಳಿ ರೇಕು, ಗುಲಾಬಿಗಳಿಂದ ಅಲಂಕರಿಸಿ ಸವಿಯಲು ಕೊಡಿ.
ರಾಗಿ ಲಡ್ಡು
ಸಾಮಗ್ರಿ : 1 ಕಪ್ ರಾಗಿ ಹಿಟ್ಟು, ಅರ್ಧ ಕಪ್ ಪುಡಿಸಕ್ಕರೆ, 2 ಚಮಚ ನೈಲಾನ್ ಎಳ್ಳು, ಅಗತ್ಯವಿದ್ದಷ್ಟು ತುಪ್ಪ, ಒಣಶುಂಠಿ ಪುಡಿ, ಏಲಕ್ಕಿ ಪುಡಿ.
ವಿಧಾನ : ಒಂದು ಬಾಣಲೆಯಲ್ಲಿ ಮೊದಲು ಎಳ್ಳನ್ನು ಹುರಿದಿಡಿ. ನಂತರ ತುಸು ತುಪ್ಪ ಹಾಕಿ, ರಾಗಿ ಹಿಟ್ಟನ್ನು ಘಮ್ಮೆನ್ನುವಂತೆ ಹುರಿದು ತೆಗೆಯಿರಿ. ಇದರಲ್ಲಿ ಸಕ್ಕರೆಗೆ ನೀರು ಬೆರೆಸಿ, ಅದು ಕರಗುವವರೆಗೂ ಕುದಿಸಬೇಕು. ನಂತರ ಇದನ್ನು ರಾಗಿ ಹಿಟ್ಟಿಗೆ ಬೆರೆಸಿರಿ. ನಂತರ ಇದಕ್ಕೆ ಉಳಿದೆಲ್ಲ ಪದಾರ್ಥ ಹಾಕಿ ಬೆರೆಸಿಕೊಳ್ಳಿ. ಇದಕ್ಕೆ ನಡು ನಡುವೆ ತುಪ್ಪ ಬೆರೆಸುತ್ತಾ ಮಿಶ್ರಣ ಕಲಸುತ್ತಾ ಹದಕ್ಕೆ ಬರುವಂತೆ ಮಾಡಿ. ಆರಿದ ನಂತರ ಇದರಿಂದ ಚಿತ್ರದಲ್ಲಿರುವಂತೆ ಸಣ್ಣ ಉಂಡೆಗಳನ್ನಾಗಿಸಿ, ಅಲಂಕರಿಸಿ, ಸವಿಯಲು ಕೊಡಿ.
ಪಾವ್ ಭಾಜಿ
ಸಾಮಗ್ರಿ : 4 ಮಧ್ಯಮ ಗಾತ್ರದ ಆಲೂ ಬೇಯಿಸಿ ಮಸೆದಿಡಿ, ತುರಿದ 1-1 ಕಪ್ ಹೂಕೋಸು, ಕ್ಯಾರೆಟ್, ಅರ್ಧರ್ಧ ಕಪ್ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, ಬೆಂದ ಹಸಿ ಬಟಾಣಿ, ಹೆಚ್ಚಿದ 1 ಈರುಳ್ಳಿ, 3 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಭಾಜಿ ಮಸಾಲ (ರೆಡಿಮೇಡ್ ಲಭ್ಯ), ಅರಿಶಿನ, ಬೆಣ್ಣೆ, ಅಲಂಕರಿಸಲು ಹೆಚ್ಚಿದ ಈರುಳ್ಳಿ, ಕೊ.ಸೊಪ್ಪು, ಬೆಣ್ಣೆ, ನಿಂಬೆ ಹೋಳು ಇತ್ಯಾದಿ.
ವಿಧಾನ : ಮೊದಲು ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿ, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಹೆಚ್ಚಿದ ಉಳಿದ ಪದಾರ್ಥ ಹಾಕಿ ಬಾಡಿಸಬೇಕು. ಆಮೇಲೆ ಉಪ್ಪು, ಖಾರ, ಮಸಾಲೆಗಳನ್ನು ಸೇರಿಸಿ ಕೈಯಾಡಿಸಿ. ಕೊನೆಗೆ ಮಸೆದ ಆಲೂ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಅಗತ್ಯ ಎನಿಸಿದರೆ ತುಸು ನೀರು ಬೆರೆಸಿ ಕೆದಕಬಹುದು. 2 ನಿಮಿಷ ಬಿಟ್ಟು ಕೆಳಗಿಳಿಸಿ. ಈ ಭಾಜಿಯನ್ನು ಚಿತ್ರದಲ್ಲಿರುವಂತೆ ಹೆಚ್ಚಿದ ಪದಾರ್ಥ ಹಾಕಿ ಅಲಂಕರಿಸಿ, ಬೆಣ್ಣೆ, ಟೋಸ್ಟೆಡ್ ಪಾವ್ (ಬನ್) ಜೊತೆ ಸವಿಯಲು ಕೊಡಿ.
ಪನೀರ್ ಜೆಲ್ ಫ್ರೇಝಿ
ಸಾಮಗ್ರಿ : 250 ಗ್ರಾಂ ಪನೀರ್, ಕ್ಯೂಬ್ಸ್ ಆಗಿ ಕತ್ತರಿಸಿ ಎಣ್ಣೆಯಲ್ಲಿ ಕರಿದಿಡಿ, ಸಣ್ಣಗೆ ಹೆಚ್ಚಿದ 2 ಈರುಳ್ಳಿ, 2 ಟೊಮೇಟೊ. 2 ಕ್ಯಾಪ್ಸಿಕಂ, ತುಸು ಎಣ್ಣೆ, ಜೀರಿಗೆ, ಅಲಂಕರಿಸಲು ಈರುಳ್ಳಿ, ಟೊಮೇಟೊ ಹೋಳು. ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಸಾಸ್, ಗರಂಮಸಾಲ, ಧನಿಯಾಪುಡಿ, ಮೆಣಸು.
ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಒಗ್ಗರಣೆ ಕೊಡಿ. ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಕ್ಯಾಪ್ಸಿಕಂ, ಟೊಮೇಟೊ ಹಾಕಿ ಬಾಡಿಸಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಉಳಿದ ಎಲ್ಲಾ ಮಸಾಲೆ ಹಾಕಿ ಕೆದಕಬೇಕು. ನಂತರ ತುಸು ನೀರು ಬೆರೆಸಿ, ಗ್ರೇವಿ ಹದಕ್ಕೆ ಕುದಿಸಬೇಕು. ಕೊನೆಯಲ್ಲಿ ಕರಿದ ಪನೀರ್ ಕ್ಯೂಬ್ಸ್ ಸೇರಿಸಿ. ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಆಮೇಲೆ ಚಿತ್ರದಲ್ಲಿರುವಂತೆ ಹಸಿ ಈರುಳ್ಳಿ, ಟೊಮೇಟೋಗಳಿಂದ ಅಲಂಕರಿಸಿ, ಬಿಸಿ ಬಿಸಿ ಚಪಾತಿ ಜೊತೆ ಸವಿಯಿರಿ.
ಬೀಟ್ ರೂಟ್ ರಾಯ್ತಾ
ಸಾಮಗ್ರಿ : 1 ದೊಡ್ಡ ಬೀಟ್ ರೂಟ್ (ಬೇಯಿಸಿ ತುರಿದಿಡಿ), ಅರ್ಧ ಲೀ. ಗಟ್ಟಿ ಮೊಸರು, ಹೆಚ್ಚಿದ 2 ಈರುಳ್ಳಿ, 1 ದೊಡ್ಡ ಟೊಮೇಟೊ, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಕರಿಬೇವು, ಉಪ್ಪು, ಖಾರ.
ವಿಧಾನ : ಕಡೆದ ಮೊಸರಿಗೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ, ಒಗ್ಗರಣೆ ಕೊಡಿ. ಬಿಸಿ ಅನ್ನಕ್ಕೆ ಇದು ಸೊಗಸಾಗಿ ಹೊಂದುತ್ತದೆ. ಆಲೂ ಕಟ್ ಲೆಟ್ ಸಾಮಗ್ರಿ : ಬೇಯಿಸಿ ಮಸೆದ 2-3 ಆಲೂ, ಬೆಂದ ಅರ್ಧ ಕಪ್ ಕಡಲೆಬೇಳೆ, 4-5 ಚಮಚ ತುಪ್ಪ, ಹೆಚ್ಚಿದ 1-2 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂ ಮಸಾಲ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ತುಸು ಎಳ್ಳು, ಕರಿಯಲು ಎಣ್ಣೆ.
ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಇದಕ್ಕೆ ಉಪ್ಪು, ಖಾರ ಉಳಿದೆಲ್ಲ ಮಸಾಲೆ ಹಾಕಿ ಕೆದಕಬೇಕು. ಆಮೇಲೆ ಮಸೆದ ಆಲೂ ಸೇರಿಸಿ ಕೈಯಾಡಿಸಿ. ನಂತರ ಬೆಂದ ಬೇಳೆಯನ್ನು ಮಸೆದು ಇದಕ್ಕೆ ಬೆರೆಸಿ, ಗಟ್ಟಿ ಆಗುವವರೆಗೂ ಬಾಡಿಸಿ. ಕೆಳಗಿಳಿಸಿ ಆರಿದ ಮೇಲೆ ಈ ಮಿಶ್ರಣದಿಂದ ನಿಂಬೆ ಗಾತ್ರದ ಉಂಡೆಗಳಾಗಿಸಿ, ಚಿತ್ರದಲ್ಲಿರುವಂತೆ ಗುಂಡಗೆ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ತಿರುವಿ ಹಾಕುತ್ತಾ ಶ್ಯಾಲೋ ಫ್ರೈ ಮಾಡಬೇಕು. ಬಿಸಿ ಇರುವಾಗಲೇ ಇದನ್ನು ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.