ಹಿಂದಿಯ ಕಿರುತೆರೆಯಲ್ಲಿ ಸಾರ್ವಕಾಲಿಕ ಹಿಟ್ ಎನಿಸಿಕೊಂಡಿದ್ದ ಬಿ. ಆರ್. ಛೋಪ್ರಾ ನಿರ್ದೇಶನದ ‘ಮಹಾಭಾರತ’ ಸೀರಿಯಲ್‌ನಲ್ಲಿ ಕರ್ಣನ ಪಾತ್ರ ಮಾಡಿದ್ದ ನಟ ಪಂಕಜ್ ಧೀರ್ (68) ಇಂದು (ಅಕ್ಟೋಬರ್ 15) ಮೃತಪಟ್ಟಿದ್ದಾರೆ.

ಕ್ಯಾನ್ಸರ್‌ದಿಂದ ಬಳಲುತ್ತಿದ್ದ ಅವರು ನಂತರ ಚೇತರಿಸಿಕೊಂಡಿದ್ದರು. ಆದರೆ ಕೆಲ ದಿನಗಳ ಹಿಂದೆ ಕ್ಯಾನ್ಸರ್ ಮತ್ತೆ ಮರುಕಳಿಸಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಹಲೋಕ ತ್ಯಜಿಸಿದ್ದಾರೆ. ಪಂಕಜ್ ಅವರ ಅಕಾಲಿಕ ನಿಧನ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ.

ಪಂಕಜ್ ಧೀರ್ ಅವರ ಆತ್ಮೀಯ ಸ್ನೇಹಿತ ಹಾಗೂ ನಟ ಅಮಿತ್ ಬಹಲ್, ಪಂಕಜ್ ನಿಧನದ ಸುದ್ದಿಯನ್ನು ಖಚಿತಪಡಿಸಿದ್ದು, “ಪಂಕಜ್ ಧೀರ್ ಅವರಿಗೆ ಕ್ಯಾನ್ಸರ್ ಇತ್ತು. ಅವರು ಈ ಕಾಯಿಲೆಯಿಂದ ಗುಣಮುಖರಾಗಿದ್ದರು. ಆದರೆ ಕೆಲವು ತಿಂಗಳ ಹಿಂದೆ ಕ್ಯಾನ್ಸರ್ ಮತ್ತೆ ಕಾಣಿಸಿಕೊಂಡಿತ್ತು. ಪಂಕಜ್‌ಗೆ ಶಸ್ತ್ರಚಿಕಿತ್ಸೆಯೂ ಕೂಡ ನಡೆದಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ” ಎಂದು ತಿಳಿಸಿದ್ದಾರೆ.

ಪಂಕಜ್ ಧೀರ್ ಅವರ ನಿಧನಕ್ಕೆ ಸಿಂಟಾ (Cine & TV Artistes’ Association) ಸಂತಾಪ ಸೂಚಿಸಿದ್ದು, “ನಮ್ಮ ಟ್ರಸ್ಟ್‌ನ ಮಾಜಿ ಅಧ್ಯಕ್ಷರು ಮತ್ತು ಸಿಂಟಾದ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಪಂಕಜ್ ಧೀರ್ ನಿಧನರಾಗಿರುವುದು ಸಿನಿರಂಗಕ್ಕೆ ತುಂಬಲಾರದ ನಷ್ಟ ಎಂದು ದುಃಖ ವ್ಯಕ್ತಪಡಿಸಿದೆ. ಅವರ ಅಂತ್ಯಕ್ರಿಯೆ ಸಂಜೆ ಪವನ್ ಹನ್ಸ್, ವಿಲೆ ಪಾರ್ಲೆ (ಪಶ್ಚಿಮ), ಮುಂಬೈ ಸಮೀಪ ನಡೆಯಲಿದೆ” ಎಂದು ಹೇಳಿದೆ.

ಅನೇಕ ಸಿನಿಮಾಗಳು ಮತ್ತು ಸೀರಿಯಲ್‌ಗಳಲ್ಲಿ ನಟಿಸಿದ್ದ ಪಂಕಜ್​ ಧೀರ್​ ಅವರಿಗೆ ‘ಮಹಾಭಾರತ’ ಸೀರಿಯಲ್‌ನ ‘ಕರ್ಣ’ನ ಪಾತ್ರವು ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ‘ಚಂದ್ರಕಾಂತ’ ಧಾರಾವಾಹಿಯಲ್ಲಿ ಶಿವದತ್ತನ ಪಾತ್ರದಲ್ಲೂ ಪ್ರೇಕ್ಷಕರ ಮನಗೆದ್ದಿದ್ದರು. ‘ಬಡೇ ಬಹು’, ‘ಯುಗ್’, ‘ಅಜೂನಿ’ ‘ಸಸುರಾಲ್ ಸಿಮರ್ ಕಾ’, ‘ದಿ ಗ್ರೇಟ್ ಮರಾಠಾ”, ”ಯುಗ್” ಸೇರಿದಂತೆ ಹಲವಾರು ಧಾರಾವಾಹಿಗಳಲ್ಲೂ ನಟಿಸಿ, ಸೈ ಎನಿಸಿಕೊಂಡಿದ್ದರು. ಕೊನೆಯದಾಗಿ ‘ಧ್ರುವ್ ತಾರಾ’ ಎಂಬ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದರು.

ಇದರ ಜೊತೆಗೆ ‘ಸೋಲ್ಜರ್’, ‘ತುಮ್ಕೋ ನಾ ಭೂಲ್ ಪಾಯೆಂಗೆ’, ‘ರಿಶ್ತೆ’, ‘ಅಂದಾಜ್’, ‘ಸಡಕ್’ ಮತ್ತು ‘ಬಾದ್‌ಷಾ’, ‘ಆಶೀಕ್ ಅವಾರ’, ‘ಇಕ್ಕೆ ಪೆ ಇಕ್ಕಾ’, ‘ಝಮೀನ್’, ‘ಜಾಗೃತಿ’ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿದ್ದರು.

ಎಂ. ಎಸ್. ಸತ್ಯು ನಿರ್ದೇಶನದ ”ಬರ” ಚಿತ್ರದ ಮೂಲಕ ಪಂಕಜ್ ಧೀರ್ ಕನ್ನಡ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದವರು. ಡಾ.ವಿಷ್ಣುವರ್ಧನ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ”ವಿಷ್ಣು ವಿಜಯ್” ಚಿತ್ರದಲ್ಲಿ ಅಭಿನಯಿಸಿದ್ದ ಪಂಕಜ್ ಧೀರ್ ”ವಿಷ್ಣುಸೇನಾ” ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆ ತೆರೆ ಹಂಚಿಕೊಂಡಿದ್ದರು.

ಪಂಕಜ್ ಧೀರ್ ಅವರು ನಟರಷ್ಟೇ ಅಲ್ಲದೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಪಂಕಜ್ ‘ಪರ್ವಾನ’ ಮತ್ತು ‘ಮೈ ಫಾದರ್ ಗಾಡ್‌ ಫಾದರ್’ ಚಿತ್ರಗಳನ್ನು ನಿರ್ದೇಶಿಸಿದ್ದರು. ಆಕ್ಟಿಂಗ್ ಅಕಾಡೆಮಿಯನ್ನು ಕೂಡ ಸ್ಥಾಪಿಸಿದ್ದರು. ಅವರ ತಂದೆ ಸಿ. ಎಲ್. ಧೀರ್ ಕೂಡ ಖ್ಯಾತ ನಿರ್ದೇಶಕರಾಗಿದ್ದರು.

ಪತ್ನಿ ಅನಿತಾ ಧೀರ್ ಹಾಗೂ ಪುತ್ರ ನಿಕಿತನ್ ಧೀರ್ ಅವರನ್ನು ಅಗಲಿದ್ದಾರೆ. ಪಂಕಜ್ ಧೀರ್ ಅವರ ನಿಧನಕ್ಕೆ ಬಾಲಿವುಡ್ ಮತ್ತು ಹಿಂದಿ ಕಿರುತೆರೆ ಉದ್ಯಮ ಸಂತಾಪವನ್ನು ಸೂಚಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ