ವರ್ಷಕ್ಕೆ ಒಂದು ಬಾರಿಯಷ್ಟೇ ದರ್ಶನಭಾಗ್ಯ ಕರುಣಿಸುವ ಹಾಸನಾಂಬೆಯ ದರ್ಶನೋತ್ಸವಕ್ಕೆ ಇಂದು ವಿದ್ಯುಕ್ತ ತೆರೆ ಎಳೆಯಲಾಗಿದೆ. ನಿನ್ನೆ ರಾತ್ರಿ ಸಾರ್ವಜನಿಕರ ದರ್ಶನ ಅಂತ್ಯವಾಗಿದ್ದು, ಇಂದು ಯಾರಿಗೂ ದರ್ಶನ ನೀಡಲಿಲ್ಲ. ಇಂದು ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ಹಾಕಲಾಗಿದ್ದು, ಮುಂದಿನ ವರ್ಷವೇ ಬಾಗಿಲು ತೆರೆಯಲಿದೆ.
ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸೋ ಹಾಸನದ ಅದಿದೇವತೆ ಹಾಸನಾಂಬೆಯ ಮಹಿಮೆ, ಪವಾಡ ಅಪಾರ. ದರ್ಶನಾಂತ್ಯದಲ್ಲಿ ಬಾಗಿಲು ಮುಚ್ಚುವ ವೇಳೆ ಹಚ್ಚಿದ ಮಹಾದೀಪ ನಂದುವುದಿಲ್ಲ. ಹೂವು ಬಾಡಿರುವುದಿಲ್ಲ ಎನ್ನುವ ನಂಬಿಕೆ ಇರುವುದರಿಂದ ಅಮ್ಮನ ಪವಾಡ ಶಕ್ತಿ ಎಲ್ಲಡೆ ಪಸರಿಸಿದೆ. ಇಂತಹ ಶಕ್ತಿದೇವತೆ ಈ ಬಾರಿಯ ದರ್ಶನೋತ್ಸವಕ್ಕೆ ಇಂದು ಶಾಸ್ತ್ರೋಕ್ತವಾಗಿ ತೆರೆ ಬಿದ್ದಿದೆ.
ಕಳೆದ ಅಕ್ಟೋಬರ್ 9ರಿಂದ ಆರಂಭವಾಗಿದ್ದ ಹಾಸನಾಂಬೆಯ ದರ್ಶನೋತ್ಸವ ಇಂದು ಸಂಪನ್ನಗೊಂಡಿದ್ದು, ಮಧ್ಯಾಹ್ನ 12 ಗಂಟೆ ವೇಳೆಗೆ ಪೂಜೆ ಸಲ್ಲಿಸಿದ ನಂತರ ಶಾಸ್ತ್ರೋಕ್ತವಾಗಿ ದೇವಿಯ ಬಾಗಿಲು ಹಾಕಲಾಯಿತು.ಈ ವೇಳೆ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್, ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಲತಾಕುಮಾರಿ, ಎಸ್ಪಿ ಮಹಮದ್ ಸುಜೀತಾ, ದೇವಾಯಲದ ಆಡಳಿತಾಧಿಕಾರಿ ಮಾರುತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಜರಿದ್ದರು.
ಈಗಾಗಲೇ 24ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣೇಬೈರೇಗೌಡ ಮಾಹಿತಿ ನೀಡಿದ್ದಾರೆ. ಟಿಕೆಟ್ ಹಾಗೂ ಲಡ್ಡು ಮಾರಾಟದಲ್ಲಿ ಈ ಬಾರಿ 22 ಕೋಟಿಗೂ ಅಧಿಕ ಆದಾಯ ಬಂದಿದೆ. ಸುಗಮ ದರ್ಶನಕ್ಕೆ ಸಚಿವ ಕೃಷ್ಣಬೈರೇಗೌಡರು ಮಾಡಿದ ವಿನೂತನ ಪ್ರಯೋಗ ಯಶಸ್ವಿಯಾಗಿದ್ದು ಭಕ್ತಗಣಕ್ಕೆ ಅನುಕೂಲವಾಗಿದೆ.
ಬೆಳಗ್ಗೆ 6 ಗಂಟೆಯಿಂದಲೇ ಶುರುವಾದ ದೇವಿಯ ದರ್ಶನ ಸಂಜೆ 7 ಗಂಟೆವರಗೂ ಮುಂದುವರಿತ್ತು. ನಂತರ ಹಾಸನಾಂಬೆಯ ವಿಶೇಷ ಪೂಜೆಗಾಗಿ ಗರ್ಭಗುಡಿ ಬಾಗಿಲನ್ನು ಹಾಕಲಾಯಿತು. ಬಳಿಕ ತಡರಾತ್ರಿ ಸಿದ್ದೇಶ್ವರಸ್ವಾಮಿ ರಥೋತ್ಸವ ಹಾಗೂ ಕೆಂಡೋತ್ಸವ ನಡೆಯಿತು. ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಾಸನಾಂಬೆ ಜಾತ್ರೋತ್ಸವ ಯಶಸ್ವಿಯಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಸಂತಸ ವ್ಯಕ್ತಪಡಿಸಿದ್ದಾರೆ.
ಹಾಸನಾಂಬೆಯ ಇತಿಹಾಸದಲ್ಲಿಯೇ ಈ ಬಾರಿ ಭಕ್ತರ ದರ್ಶನ ಹಾಗೂ ಆದಾಯ ದಾಖಲೆ ಬರೆದಿದೆ. ಹಾಸನಾಂಬೆ ದರ್ಶನ ಕಾಣಲು ಮುಂದಿನ ವರ್ಷದವರೆಗೂ ಕಾಯಲೇಬೇಕಿದೆ.