– ರಾಘವೇಂದ್ರ ಅಡಿಗ ಎಚ್ಚೆನ್.
ರಾಷ್ಟ್ರೋತ್ಥಾನ ಸಾಹಿತ್ಯ ನವೆಂಬರ್ 1, 2025ರಿಂದ ಡಿಸೆಂಬರ್ 7, 2025ರವರೆಗೆ ಆಯೋಜಿಸುತ್ತಿರುವ 5ನೇ ಕನ್ನಡ ಪುಸ್ತಕ ಹಬ್ಬವನ್ನು ಮೈಸೂರು – ಕೊಡಗು ಸಂಸದ ಹಾಗೂ ಮೈಸೂರು ರಾಜವಂಶಸ್ಥ ಯದುವೀರ ಒಡೆಯರ್, ಭಾರತ ಸರ್ಕಾರದ ಮಾನವ ಸಂಪನ್ಮೂಲ ವಿಭಾಗದ ಸದಸ್ಯ (ಸಾಮರ್ಥ್ಯ ನಿರ್ಮಾಣ ಆಯೋಗ) ಡಾ. ಆರ್ ಬಾಲಸುಬ್ರಹ್ಮಣ್ಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರ ಜಿ ವೆಂಕಟೇಶ, ಮಿಥಿಕ್ ಸೊಸೈಟಿಯ ಗೌರವ ಅಧ‍್ಯಕ್ಷ ವಿ ನಾಗರಾಜ ಹಾಗೂ ರಾಷ್ಟ್ರೋತ್ಥಾನ ಪರಿಷತ್‍ನ ಅಧ‍್ಯಕ್ಷ ಎಂ ಪಿ ಕುಮಾರ್ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್ ನ ಕೇಶವಶಿಲ್ಪ ಸಭಾಂಗಣದಲ್ಲಿ ಉದ್ಘಾಟಿಸಿದರು.

ನವೆಂಬರ್ 1ರಿಂದ ಡಿಸೆಂಬರ್ 7 ರವರೆಗೆ, ಒಟ್ಟು 37 ದಿನಗಳ ಕಾಲ ನಡೆಯುವ ಕನ್ನಡ ಪುಸ್ತಕ ಹಬ್ಬದಲ್ಲಿ ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 9ರ ವರೆಗೆ ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟವಿರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟಣೆಗಳ ಜೊತೆಗೆ ಕರ್ನಾಟಕದ ಪ್ರತಿಷ್ಠಿತ ಪ್ರಕಾಶನಗಳ ಪುಸ್ತಕಗಳೂ ವಿಶೇಷ ರಿಯಾಯತಿಯಲ್ಲಿ (50% ವರೆಗೂ) ದೊರಕುತ್ತವೆ. ಜೊತೆಗೆ ಸಂಸ್ಕಾರಭಾರತಿಯ ಸಹಯೋಗದೊಂದಿಗೆ ಪ್ರತಿಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅದರಲ್ಲಿ ತಾಳವಾದ್ಯಗೋಷ್ಠಿ, ಭರತನಾಟ್ಯ, ಯಕ್ಷಗಾನ ತಾಳಮದ್ದಲೆ, ಉತ್ತರ-ದಕ್ಷಿಣಾದಿ ಸಂಗೀತ ಕಾರ್ಯಕ್ರಮಗಳು, ಜಾನಪದ, ಸುಗಮಸಂಗೀತ, ಹರಿಕಥೆ ಮೊದಲಾದ ಪ್ರಕಾರಗಳು ಇರಲಿವೆ.
ಉದ್ಘಾಟನಾ ಸಮಾರಂಭದ ಪೂರ್ವದಲ್ಲಿ ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯದ ಅಶ್ವತ್ಥವೃಕ್ಷ ಎಂದೇ ಖ್ಯಾತರಾದ ಕಗ್ಗದ ಕರ್ತೃ ಡಿವಿಜಿ ಅವರ 50ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ತಾಯಿ ಭುವನೇಶ್ವರಿಯ ಶೋಭಾಯಾತ್ರೆಗೆ ಶ್ರೀ ವಿ ನಾಗರಾಜ್ ಹಾಗೂ ರಾಷ್ಟ್ರೋತ್ಥಾನದ ಖಜಾಂಚಿಗಳಾದ ಶ್ರೀ ಕೆ ಎಸ್ ನಾರಾಯಣ ಅವರು ಚಾಲನೆ ನೀಡಿದರು. ಶೋಭಾಯಾತ್ರೆಯು ಬಸವನಗುಡಿ ರಸ್ತೆಯುದ್ದಕ್ಕೂ ಸಾಗಿ ರಾಷ್ಟ್ರೋತ್ಥಾನ ಪರಿಷತ್ ಕೇಂದ್ರ ಕಛೇರಿಯನ್ನು ತಲಪಿತು. ಭರತನಾಟ್ಯ, ವೀರಗಾಸೆ, ಡೊಳ್ಳುಕುಣಿತ ಇವುಗಳು ಶೋಭಾಯಾತ್ರೆಗೆ ಮೆರಗು ನೀಡಿದವು.
ಪುಸ್ತಕ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ಯದುವೀರ ಒಡೆಯರ್ ಅವರು ಕನ್ನಡದ ಪ್ರೋತ್ಸಾಹಕ್ಕೆ ಪುಸ್ತಕ ಹಬ್ಬದಂತಹ ಕಾರ್ಯಕ್ರಮಗಳ ಅಗತ್ಯವಿದೆ ಎಂದರು. ಏಕತೆಯಿಂದ ವೈವಿಧ್ಯತೆ ಬಂತು. ವೈವಿಧ್ಯತೆಯಲ್ಲಿ ಏಕತೆ, ಏಕತೆಯಲ್ಲಿ ವೈವಿಧ್ಯತೆ ಇದು ನಮ್ಮ ವಿಶೇಷತೆಯಾಗಿದೆ. ಕರ್ನಾಟಕ ಏಕೀಕರಣದ ಇತಿಹಾಸದ ಸ್ಮರಣೆ ಮಾಡುವ ಅಗತ್ಯವಿದ್ದು ಹಿಂದಿನ ಎಲ್ಲ ರಾಜರುಗಳ ಕಾಲದಲ್ಲೂ ಕನ್ನಡವೇ ಅಧಿಕೃತ ಭಾಷೆಯಾಗಿತ್ತು. ಇತಿಹಾಸ ಕಾಲದಲ್ಲಿ ಎಷ್ಟೋ ವಿಭಜನೆಗಳು ಆಗುತ್ತಿದ್ದರೂ ಕನ್ನಡ ಮಾತ್ರ ಒಂದೇ ರೀತಿಯಾಗಿ ಮುಂದುವರಿಯುತ್ತಿತ್ತು. ಭಾರತಾಂಬೆಯ ಗರ್ಭದಲ್ಲೇ ಕನ್ನಡಾಂಬೆ ಹುಟ್ಟಿದ್ದು, ಅದರಿಂದಲೇ ನಾವು ಒಂದಾಗಿದ್ದು.

ಕನ್ನಡ ಏಕೀಕರಣದ ಚಳುವಳಿಗೆ ರಾಷ್ಟ್ರೀಯ ಚಳುವಳಿಯೇ ಪ್ರೇರಣೆ. ಏಕೀಕರಣದಲ್ಲಿ ಮೈಸೂರು ಸಂಸ್ಥಾನವೂ ಭಾಗವಹಿಸಿದ್ದು, ನಮ್ಮ ಪೂರ್ವಜರ ತ್ಯಾಗ-ಪ್ರೋತ್ಸಾಹಗಳಿಂದ 1973ರಲ್ಲಿ ಕರ್ನಾಟಕ ರಾಜ್ಯ ಉದಯವಾಯಿತು. ಹೈದ್ರಾಬಾದ್ ಸಂಸ್ಥಾನದಲ್ಲಿ ಆಪರೇಷನ್ ಪೋಲೋ ಯಶಸ್ವಿಯಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಪ್ರಧಾನಿ ನೆಹರು ಅವರಿಗೆ ಮಾತ್ರ ವಿಮಾನಯಾನದ ವ್ಯವಸ್ಥೆಯಿದ್ದ ಸಂದರ್ಭದಲ್ಲಿ ನಿರಂತರ ಪ್ರವಾಸ ಮಾಡಿ ಭಾರತವನ್ನು ಒಗ್ಗೂಡಿಸುವ ಸಲುವಾಗಿ ಮೈಸೂರು ಸಂಸ್ಥಾನದವರು ಸರದಾರ್ ವಲ್ಲಭಭಾಯ್ ಪಟೇಲರಿಗೆ ಸ್ವಯಂಪ್ರೇರಣೆಯಿಂದ ತಮ್ಮಲ್ಲಿದ್ದ ಡಕೋಟಾ ವಿಮಾನವನ್ನು ನೀಡಿದರು.
ಕನ್ನಡ ಇಲ್ಲಿಯೇ ಹುಟ್ಟಿದ್ದು, ಆ ದೊಡ್ಡ ನದಿಗೆ ಬೇರೆಬೇರೆ ಭಾಷೆಗಳು ಸೇರಿ ಉಪನದಿಗಳಾಗಿವೆ. ಕನ್ನಡದ ಓದುಗರನ್ನು ಹೆಚ್ಚಿಸುವುದೇ ಕನ್ನಡಕ್ಕಾಗಿ ಮಾಡುವ ದೊಡ್ಡ ಕೆಲಸ ಎಂದರು.
ಮುಖ್ಯ ಅತಿಥಿಗಳಾದ ಡಾ. ಆರ್ ಬಾಲಸುಬ್ರಹ್ಮಣ್ಯ ಅವರು ಇತ್ತೀಚಿನ ದಿನಗಳಲ್ಲಿ 10 ಸಾವಿರ ಪ್ರತಿಗಳು ಮಾರಾಟವಾದರೆ ಅದು ಬೆಸ್ಟ್ ಸೆಲ್ಲರ್ ಎಂದಾಗುತ್ತದೆ. ಕನ್ನಡ ಪುಸ್ತಕ ಮಾರಾಟವಾಗುವುದೇ ಕಷ್ಟವಾಗಿರುವಾಗ ಒಂದು ತಿಂಗಳ ಕಾಲ ಉತ್ಸವ ನಡೆಸಿ ಪುಸ್ತಕವನ್ನು ಕೊಂಡು ಓದುತ್ತಾರೆ ಎಂದು ಕೇಳಿ ಬಹಳ ಸಂತೋಷವಾಯಿತು. ಬುಡಕಟ್ಟು ಜನಾಂಗವಾದ ಜೇನುಕುರುಬರಿಗೆ ಆಡುಭಾಷೆ ಇದ್ದರೂ ಲಿಪಿ ಇಲ್ಲ. ಅವರಿಗೆ ಶಿಕ್ಷಣ ನೀಡಬೇಕಾಗಿ ಬಂದಾಗ ಯಾವ ಭಾಷೆಯಲ್ಲಿ ಎಂಬ ಪ್ರಶ್ನೆ ಮುಂದೆ ಬಂತು. ಅವರಲ್ಲಿನ 4 ಪಂಗಡದ ಮುಖಂಡರನ್ನು ಸೇರಿಸಿ ಕೇಳಿದಾಗ ಮೈಸೂರು ಸಂಸ್ಥಾನದ ಅರಮನೆ ಪರಂಪರೆಯಲ್ಲಿ ನಾವು ಕನ್ನಡವನ್ನೇ ಮಾತನಾಡುತ್ತಿದ್ದೆವು, ನೀವೂ ಅದರಲ್ಲೇ ಕಲಿಸಿ ಎಂದು ಹೇಳಿದ್ದನ್ನು ನೆನಪಿಸಿಕೊಂಡರು. ಬರಹಗಾರನಿಗೆ ತನ್ನ ಪುಸ್ತಕ ಮಾರಾಟವಾಗಿ ಓದುಗರು ಓದಿ ವಿಮರ್ಶಿಸಿದಾಗ ತೃಪ್ತಿ ದೊರಕುತ್ತದೆ ಎಂದರು.
ಪ್ರೊ. ಮಲ್ಲೇಪುರ ಜಿ ವೆಂಕಟೇಶ್ ಅವರು ಮಾತನಾಡುತ್ತ, ಹಬ್ಬ ಎನ್ನುವುದು ಭಾವನಾತ್ಮಕವೆನಿಸುತ್ತದೆ. ಮೇಳವೆಂದರೆ ವಾಣಿಜ್ಯದ ಕಲ್ಪನೆ ಬರುತ್ತದೆ. ಪುಸ್ತಕವೆನ್ನುವುದು ಹುಚ್ಚು, ಅದರೊಡನೆ ಸಖ್ಯ ಬೆಳೆಸಬೇಕು. ಪುಸ್ತಕ ವ್ಯಕ್ತಿತ್ವವನ್ನು ಅರಳಿಸಬೇಕು. ಪುಸ್ತಕಗಳು ಆಕರ್ಷಕವಾಗಿ ಓದುಗರನ್ನು ಓದುವಂತೆ ಪ್ರೇರೇಪಿಸಬೇಕು. ಕನ್ನಡ ಪುಸ್ತಕಗಳ ಮುದ್ರಣವೇ ಆಕರ್ಷಕವಾಗಿರುತ್ತದೆ. ಪುಸ್ತಕ ಹಿಡಿದಾಗ ಅದ್ಭುತ ವ್ಯಕ್ತಿತ್ವದೊಡನೆ ಇರುವಾಗಿನ ಆನಂದ ಉಂಟಾಗುತ್ತದೆ. ಪ್ರತಿ ಮನೆಯೂ ರಾಮಾಯಣ, ಮಹಾಭಾರತ, ಪಂಚತಂತ್ರ, ಒಳ್ಳೆಯ ಕಾದಂಬರಿಗಳನ್ನು ಹೆಚ್ಚು-ಹೆಚ್ಚು ಹೊಂದಬೇಕು. ಮನೆಗೆ ಪ್ರವೇಶಿಸಿದಾಗ ಪುಸ್ತಕಗಳು ಕಾಣಬೇಕು. ಕೇರಳದಲ್ಲಿ ಮನೆಗೆ ತರಕಾರಿ, ದಿನಸಿ ಪಟ್ಟಿ ಮಾಡುವ ಹಾಗೆ ಗೃಹಿಣಿಯರು ತಮಗೆ, ಮಕ್ಕಳಿಗೆ ಬೇಕಾದ ಪುಸ್ತಕಗಳ ಪಟ್ಟಿಯನ್ನೂ ಮಾಡಿ ತರಿಸುತ್ತಾರೆ. ಹಾಗಾಗಿ ಪುಸ್ತಕಗಳು ಹತ್ತು-ಹಲವು ಮುದ್ರಣ ಕಾಣುತ್ತವೆ. ತರಕಾರಿ ತರುವಂತೆ ಪುಸ್ತಕಗಳನ್ನೂ ತರಬೇಕು; ಮನೆಯಲ್ಲಿ ಫ್ರಿಡ್ಜ್, ವಾಶಿಂಗ್ ಮೆಶಿನ್‍ಗೆ ಜಾಗ ಮಾಡುವಂತೆ ಪುಸ್ತಕಗಳಿಗೂ ಗೂಡು ಕಟ್ಟಬೇಕು. ತಿಂಗಳಿಗೆ 500-1000 ಎಂದು ಪುಸ್ತಕದ ಮೇಲೆ ಖರ್ಚು ಮಾಡಿ ಎಂದು ಓದುಗರನ್ನು ಪುಸ್ತಕ ಕೊಂಡು ಓದುವಂತೆ ಪ್ರೋತ್ಸಾಹಿಸಿದರು.
ಶ್ರೀ ವಿ ನಾಗರಾಜ್ ಅವರು ಮಾತನಾಡಿ ಮಿಥಿಕ್ ಸೊಸೈಟಿಯಲ್ಲಿ ಗಮನಿಸಿದಂತೆ ಎಲ್ಲ ಬಗೆಯ ಪುಸ್ತಕಗಳಿಗೂ ಓದುಗರಿದ್ದು, ವಿದ್ಯಾರ್ಥಿಗಳು ಬಂದು ನಮ್ಮಲ್ಲಿ ಪುಸ್ತಕವನ್ನು ಓದುವುದನ್ನು ನಾನು ಸಂತೋಷದಿಂದ ಹಂಚಿಕೊಳ್ಳುತ್ತಿದ್ದೇನೆ. ಇಂದಿಗೂ ಪುಸ್ತಕಪ್ರೀತಿ ಇದ್ದ ಕಾರಣವೇ ಇಷ್ಟೊಂದು ಸಂಖ್ಯೆಯ ಪುಸ್ತಕಗಳು ಪ್ರಕಟಗೊಳ್ಳುತ್ತವೆ. ಭಾರತ-ಭಾರತಿ ಬರೆದ 500 ಲೇಖಕರಿಗೆ ರಾಷ್ಟ್ರೋತ್ಥಾನ ಸಾಹಿತ್ಯ ಸನ್ಮಾನ ಮಾಡಿದ್ದು ಸಾಹಸವೇ ಆಗಿದ್ದು, ಈ ಹಬ್ಬವೂ ಇನ್ನೊಂದು ಬಗೆಯ ಸಾಹಸ ಎಂದು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಎಂ ಪಿ ಕುಮಾರ್ ಅವರು ನವೆಂಬರ್ 1ರಂದು ಮಾತ್ರವಲ್ಲದೇ ಬೇರೆ ದಿನಗಳಲ್ಲೂ ಕನ್ನಡವನ್ನು ನೆನಪಿಸಿಕೊಳ್ಳಬೇಕು. ಕನ್ನಡ ಹಬ್ಬಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ, ಈ ಬಾರಿ ಹೆಚ್ಚು ಕಡೆ ಪುಸ್ತಕ ಹಬ್ಬ ನಡೆಸುವ ಆಲೋಚನೆ ಇದೆ. ಪುಸ್ತಕದ ಅಂಗಡಿ ಜಿಲ್ಲಾ ಕೇಂದ್ರಗಳಲ್ಲಿಯೂ ಇಲ್ಲದಿರುವುದು ಖೇದಕರ ಸಂಗತಿ. ಮದ್ಯದ ಅಂಗಡಿ, ಬಾರ್ ಇದ್ದ ಸಂಖ್ಯೆಯಲ್ಲಿ ಪುಸ್ತಕದ ಅಂಗಡಿ ಕಂಡುಬರುತ್ತಿಲ್ಲ. ಇದು ಸಾಂಸ್ಕೃತಿಕವಾಗಿ ಯೋಚಿಸಬೇಕಾದ ವಿಚಾರ.
ಭಾಷೆ ಸಂಸ್ಕೃತಿಯ ನಡುವೆ ಅವಿನಾಭಾವ ಸಂಬಂಧವಿದ್ದು, ಭಾಷೆ ಒಂದು ವಾಹಕವಾಗಿದೆ. ಮುದ್ರಣ ವಿಧಾನಕ್ಕಿಂತ ಮೊದಲು ಬಾಯಿಪಾಠದ ಮೂಲಕ ವೇದಗಳಂತಹ ಜ್ಞಾನವನ್ನು ಪ್ರಸಾರ ಮಾಡಿ ಮುಂದಿನ ಜನಾಂಗಕ್ಕೆ ತಲಪಿಸಲಾಯಿತು. ಪುಸ್ತಕದಿಂದ ಒಂದು ಜನಾಂಗ ಹೆಚ್ಚು ಸುಸಂಸ್ಕೃತವಾಗುತ್ತದೆ. ಒಂದು ತಲೆಮಾರಿನ ಮೇಲೆ ಭಾರತ-ಭಾರತಿ ಪುಸ್ತಕಗಳು ಅಪಾರ ಪ್ರಭಾವವನ್ನು ಉಂಟುಮಾಡಿದವು. ಪುಸ್ತಕ ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿ ಸತ್ಪ್ರಜೆಗಳನ್ನಾಗಿ ಮಾಡಬೇಕು. ಪುಸ್ತಕಗಳು ಯುವಜನರನ್ನು ತಲಪುವಂತೆ ಮಾಡಬೇಕು. ನಮ್ಮ ಮಾತೃಭಾಷೆಯಲ್ಲಿ ಭಾವಾಭಿವ್ಯಕ್ತಿ ಸಾಧ್ಯವಾಗುವಷ್ಟು ಸುಲಭದಲ್ಲಿ ಅನ್ಯ ಭಾಷೆಯಲ್ಲಿ ಸಾಧ್ಯವಿಲ್ಲ. ನಮ್ಮ ಭಾಷೆ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ. ತಂತ್ರಜ್ಞಾನ ಅತಿಹೆಚ್ಚು ಜನರಿಗೆ ಶೀಘ್ರವಾಗಿ ತಲಪಲು ನೆರವಾಗುತ್ತದೆ. ಆದರೆ ಕೃತಕಬುದ್ಧಿಮತ್ತೆಯ ಬಳಕೆಯಿಂದ ಮೂಲಭಾಷೆಯನ್ನು ವಿಕೃತಗೊಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕರಾದ ಶ್ರೀ ವಿಘ್ನೇಶ್ವರ ಭಟ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಉಮೇಶ್ ಅವರು ವಂದಿಸಿದರು.





