ಕೆಜಿಎಫ್ ಖ್ಯಾತಿಯ ಹಿರಿಯ ಕಲಾವಿದ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. 90ರ ದಶಕದಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ಓಂ, ಕೆಜಿಎಫ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಖಳನಟನಾಗಿ ಅಭಿನಯಿಸಿದ್ದರು. ಮೂಲತಃ ಉಡುಪಿಯವರಾಗಿದ್ದ ಹರೀಶ್​ ರಾಯ್​ ಅವರ ಅಂತ್ಯಕ್ರಿಯೆ ಅಂಬಲಪಾಡಿಯಲ್ಲಿ ನಡೆಯಲಿದೆ.

ಕಳೆದ ಕೆಲ ವರ್ಷಗಳಿಂದ ಹರೀಶ್ ರಾಯ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.  ಹರೀಶ್ ರಾಯ್ ಚಿಕಿತ್ಸೆಗೆ ಕೆಜಿಎಫ್ ಸಿನಿಮಾ ಹೀರೋ ಯಶ್ ಸೇರಿದಂತೆ ಅನೇಕರು ಆರ್ಥಿಕ ನೆರವು ನೀಡಿದ್ದರು. ಆದರೆ, ಕ್ಯಾನ್ಸರ್ ಮಹಾಮಾರಿಯಿಂದ ಹರೀಶ್ ರಾಯ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಹರೀಶ್ ರಾಯ್ ವಿಧಿವಶರಾಗಿದ್ದಾರೆ.

90 ರ ದಶಕದಲ್ಲಿ ಹಲವು ಸಿನಿಮಾಗಳಲ್ಲಿ ಖಳ ನಾಯಕನ ಪಾತ್ರದಲ್ಲಿ ಹರೀಶ್ ರಾಯ್ ನಟಿಸಿದ್ದರು. ರಾಜ್ ಬಹದ್ದೂರ್, ನನ್ನ ಕನಸಿನ ಹೂವೆ, ಮೀಂದುಮ್ ಒರು ಕಾದಲ್ ಕಧೈ, ಜೋಡಿ ಹಕ್ಕಿ, ತಾಯವ್ವ, ಅಂಡರ್​ ವರ್ಲ್ಡ್, ನಲ್ಲ, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ ಸೇರಿದಂತೆ ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. ಹರೀಶ್ ರಾಯ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಬೆಂಗಳೂರಿನಲ್ಲಿ ವಾಸವಾಗಿದ್ದ ಹರೀಶ್ ರಾಯ್ ಅವರು ಮೂಲತಃ ಉಡುಪಿಯ ಅಂಬಲಪಾಡಿಯವರು.  ಹರೀಶ್ ರಾಯ್ ಅವರ ಮೂಲ ಹೆಸರು ಹರೀಶ್ ಆಚಾರ್ಯ. ಅಂಬಲಪಾಡಿಯಲ್ಲಿ ಇರುವ ಮನೆಯಲ್ಲಿ ಅವರ ತಾಯಿ ಮತ್ತು ಸಹೋದರ ವಾಸವಾಗಿದ್ದಾರೆ. ಅಂಬಲಪಾಡಿಯಲ್ಲೇ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.

ಉಡುಪಿಯಲ್ಲಿ ಸ್ವರ್ಣೋದ್ಯಮ ನಡೆಸುವ ಕುಟುಂಬಕ್ಕೆ ಹರೀಶ್ ರಾಯ್ ಸೇರಿದವರು. ದಶಕಗಳ ಹಿಂದೆ ಪ್ರಖ್ಯಾತಿ ಪಡೆದಿದ್ದ ನೊವೆಲ್ಟಿ ಜ್ಯುವೆಲ್ಲರ್ಸ್ ಕುಟುಂಬ ಇವರದ್ದು. ಕೃಷ್ಣಮಠದ ರಥ ಬೀದಿ ಪರಿಸರದಲ್ಲಿ ಸ್ವರ್ಣೋದ್ಯಮ ಜನಪ್ರಿಯವಾಗಿತ್ತು.

ನಿಧನದ ಬಳಿಕ ಅಂಗಾಂಗ ದಾನ ಮಾಡಬೇಕು ಎಂಬುದು ಹರೀಶ್ ರಾಯ್ ಅವರ ಆಶಯವಾಗಿತ್ತು. ತಮ್ಮ ಸಾವಿನ ನಂತರ ಬೇರೆಯವರಿಗೆ ಅನುಕೂಲವಾಗಲಿ ಎಂಬ ಉದ್ದೇಶ ಹೊಂದಿದ್ದ ಅವರು, ಆ ಬಗ್ಗೆ ಪತ್ನಿ ಬಳಿ ಹೇಳಿಕೊಂಡಿದ್ದರು. ಆದರೆ ಕ್ಯಾನ್ಸರ್ ಇದ್ದ ಕಾರಣ ಅಂಗಾಗಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ