– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ರೋಣ
ನಿರ್ದೇಶನ: ಸತೀಶ್ ಕುಮಾರ್
ನಿರ್ಮಾಣ: ರಘು ರಾಜ ನಂದ, ಬಿ ಕೆ ಆರ್ ಪ್ರೊಡಕ್ಷನ್ಸ್
ತಾರಾಗಣ: ರಘು ರಾಜ ನಂದ , ಪ್ರಕೃತಿ ಪ್ರಸಾದ್ , ಶರತ್ ಲೋಹಿತಾಶ್ವ , ಸದಾಶಿವ ನೀನಾಸಂ ಮಾಲೂರು ವಿಜಯ್ , ಚಿಲ್ಲರ್ ಮಂಜು , ಬಲರಾಜವಾಡಿ, ಸಂಗೀತ ಅನೀಲ್ ಹಾಗೂ ಮುಂತಾದವರು…
ರೇಟಿಂಗ್ : 3 /5
ಊರಿನ ಹೆಸರು – ರೋಣ. ಅಲ್ಲಿ ಕಾಳಿಯ ದೇವಾಲಯವಿದ್ದು ವರ್ಷವೂ ಅದ್ದೂರಿಯಾಗಿ ಜಾತ್ರೆ ನೆರವೇರುವ ಪದ್ದತಿ ಇದೆ. ಆದರೆ ಆ ಕ್ಷೇತ್ರದ ಎಂಎಲ್ಎ ತನ್ನದೇ ಪುಂಡರ ಗ್ಯಾಂಗ್ ಕಟ್ಟಿಕೊಂಡಿದ್ದು ಜನರಿಗೆ ನಾನಾ ಬಗೆಯ ತೊಂದರೆ ಕೊಡುತ್ತಿರುತ್ತಾನೆ. ಅದಕ್ಕೆ ಪ್ರತಿಯಾಗಿ ಊರಿನ ಮುಖಂಡ ಸಮಾಜ ಸೇವಕ ರಾಮಕೃಷ್ಣ (ಶರತ್ ಲೋಹಿತಾಶ್ವ) , ಈತನ ಬಂಟನಾಗಿ ಹನುಮಂತು (ಬಾಲರಾಜವಾಡಿ) ಮಗ ಶಿವು (ರಘು ರಾಜ ನಂದ) ಬಲವಾಗಿ ಪ್ರತಿರೋಧ ತೋರುತ್ತಾರೆ. ರಾಜಕೀಯ ಹಿನ್ನೆಲೆಯಲ್ಲಿ ಈ ಎರಡೂ ಕಡೆಯವರ ನಡುವೆ ವೈಶಮ್ಯವಿದ್ದು ಊರ ಜಾತ್ರೆಗೆ ಸಹ ಇದೇ ಅಡ್ಡಿಯಾಗಿರುತ್ತದೆ. ಆದರೆ ಕಡೆಗೊಮ್ಮೆ ದೇವಿಯ ಅನುಗ್ರಹದಿಂದ ಜಾತ್ರೆ ನಡೆಯುತ್ತದೆ. ಆದರೆ ಅದೇ ಜಾತ್ರೆಯಲ್ಲಿ ನಾಲ್ವರು ಕೊಲೆಯಾಗುತ್ತಾರೆ. ಆ ಕೊಲೆಗೆ ಕಾರಣವೇನು? ಶಿವು ಎಲ್ಲವನ್ನೂ ಹೇಗೆ ನಿಭಾಯಿಸಿಕೊಂಡು ಹೋದನು ಎನ್ನುವುದೇ “ರೋಣ” ಚಿತ್ರದ ಕಥಾ ಸಾರಾಂಶ..

ಇದೇ ಮೊದಲ ಬಾರಿ ಬೆಳ್ಳಿ ಪರದೆಯಮೇಲೆ ನಾಯಕನಾಗಿ ಕಾಣಿಸಿಕೊಂಡಿರುವ ರಘು ರಾಜ ನಂದ ಮಾಸ್ ಆಕ್ಷನ್ ಫೈಟ್ ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ. ಕಾವ್ಯ ಪಾತ್ರದಲ್ಲಿ ನಾಯಕಿ ಪ್ರಕೃತಿ ಪ್ರಸಾದ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಶರತ್ ಲೋಹಿತಾಶ್ವ ಅದ್ಭುತ ನಟನೆ ಇಡೀ ಚಿತ್ರದ ಹೈಲೈಟ್ ಆಗಿದ್ದರೆ ನಟ ಬಾಲ ರಾಜವಾಡಿ ಸಹ ಅವರಿಗೆ ಸರಿಸಮನಾಗಿ ಅಭಿನಯಿಸಿದ್ದಾರೆ, ಇನ್ನುಳಿದಂತೆ ಸಿಎಂ ಪಾತ್ರದಲ್ಲಿ ಈಟಿವಿ ಶ್ರೀಧರ್ ಕಥೆಗೆ ಟ್ವಿಸ್ಟ್ ನೀಡುವ ಪಾತ್ರದಲ್ಲಿದ್ದರೆ ಸಂಗೀತ ಅನಿಲ್ ಸೇರಿದಂತೆ ರಂಗಭೂಮಿ ಪ್ರತಿಭೆಗಳು ಹಾಗೂ ಯುವ ಪ್ರತಿಭೆಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಹಾಡುಗಳು ಉತ್ತಮವಾಗಿ ಮೂಡಿ ಬಂದಿದ್ದು ಅದರಲ್ಲೂ ದೇವಿಯ ಕುರಿತಾದ ಹಾಡು ಗಗನ್ ಬಡೇರಿಯ ಸಂಗೀತ, ಕೈಲಾಶ್ ಖೇರ್ ಕಂಠದಲ್ಲಿ ಮತ್ತೆ ಮತ್ತೆ ಕೇಳುವಂತಿದೆ.. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಸಹ ತಕ್ಕಮಟ್ಟಿಗೆ ಚಿತ್ರಕ್ಕೆ ಪುಷ್ಟಿ ಕೊಟ್ಟಿದೆ.
ಹೊಸ ತಂಡದ ಮೊದಲ ಪ್ರಯತ್ನ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಚಿಕ್ಕ ಪುಟ್ಟ ನ್ಯೂನತೆಗಳನ್ನು ಮರೆತು ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ಒಮ್ಮೆ ನೋಡಬಹುದಾದ ಸಿನಿಮಾ ಇದಾಗಿದೆ.
—





