– ರಾಘವೇಂದ್ರ ಅಡಿಗ ಎಚ್ಚೆನ್.
ರೂಪೇಶ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಜೈ’ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದ್ದಂತೆ ಅದರ ಪ್ರಚಾರ ಕಾರ್ಯ ಕೂಡ ಭರದಿಂದ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಕೆಲವು ಸೆಲೆಬ್ರಿಟಿಗಳ ಜೋಡಿಗಳನ್ನು ಕರೆಸಿ ಪ್ರೇಮ ಗೀತೆಯನ್ನು ಬಿಡುಗಡೆಗೊಳಿಸಲಾಗಿತ್ತು. ಇದೀಗ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಮುಂಬೈನಿಂದ ಬಂದು ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದರು. ಮಾಜಿ ಉಪಮುಖ್ಯಮಂತ್ರಿ ಅಶ್ಚತ್ಥ್ ನಾರಾಯಣ್ ಅವರು ಸಹ ಅತಿಥಿಯಾಗಿ ಭಾಗವಹಿಸಿದ್ದರು.

ಟ್ರೈಲರ್ ಲಾಂಚ್ ಬಳಿಕ ಮಾತನಾಡಿದ ಸುನಿಲ್ ಶೆಟ್ಟಿ ನನಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತದೆ. ಆದ್ರೆ ಅರ್ಥ ಆಗುತ್ತೆ. ತುಳು ಭಾಷೆ ನನಗೆ ಚನ್ನಾಗಿ ಬರುತ್ತೆ ತುಳುನಲ್ಲೇ ಮಾತಾಡ್ತೀನಿ ಎಂದಿದ್ದಾರೆ. ನಾನು ಹುಟ್ಟಿದ್ದು ತುಳುನಾಡಲ್ಲಿ ಅನ್ನೋದಕ್ಕೆ ಹೆಮ್ಮೆ ಆಗುತ್ತೆ. ಇದೊಂದು ತುಳು ಹಾಗೂ ಕನ್ನಡದ ಸಿನಿಮಾ ಅನ್ನೋದು ಹೆಮ್ಮೆ ಅನ್ಸುತ್ತೆ. ರೂಪೇಶ್ ಶೆಟ್ಟಿ ನನ್ನ ತಮ್ಮ. ನಾನು ತುಳು ಸಿನಿಮಾಗೆ ತುಂಬಾ ಸಪೋರ್ಟ್ ಮಾಡ್ತೀನಿ. ಕನ್ನಡದ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಮಾನ್ಯತೆ ಪಡೆಯುತ್ತಿವೆ. ಕಾಂತಾರ ಸಿನಿಮಾ ಮೂಲಕ ಇಡೀ ವಿಶ್ವಕ್ಕೆ ನಮ್ಮ ತುಳು ನಾಡಿನ ಸಂಸ್ಕೃತಿ ಪರಿಚಯ ಆಗಿದೆ. ನಾನು ಕರ್ನಾಟಕದ ಒಂದು ಭಾಗ. ನನ್ನ ಬ್ರದರ್ ಕೂಡ ಬೆಂಗಳೂರಿನಲ್ಲೇ ಇರೋದು. ಬೆಂಗಳೂರು ಇದೊಂದು ಗ್ರೀನ್ ಸಿಟಿ, ನನ್ನ ಬಾಲ್ಯದ ದಿನಗಳು ಕೂಡ ನೆನಪಾಗುತ್ತೆ. ಬೆಂಗಳೂರಿನ ಜನ ನೋಡಿ ತುಂಬಾ ಖುಷಿ ಆಗುತ್ತೆ ಎಂದಿದ್ದಾರೆ.

ಕರ್ನಾಟಕ ಅಂದಾಕ್ಷಣ ನಮಗೆಲ್ಲ ರಾಜ್‌ಕುಮಾರ್ ಸರ್ ನೆನಪಾಗ್ತಾರೆ. ನನ್ನ ಜನ್ಮಭೂಮಿ ಕರ್ನಾಟಕ, ಕರ್ಮಭೂಮಿ ಮುಂಬೈ. ನನಗೆ ಇನ್ನೂ ಕೇವಲ 65 ವಯಸ್ಸು ಮಾತ್ರ. ನಾನು ಇಷ್ಟೊಂದು ಸುಂದರವಾಗಿ ಕಾಣಲು ಒಂದು ಕಾರಣ ಇದೆ. ಅದು ನಮ್ಮ ತುಳುನಾಡು, ನಮ್ಮ ಮೀನು, ನಮ್ಮ ಸಂಸ್ಕೃತಿ, ನಮ್ಮ ಬೊಂಡ, ನಮ್ಮ ಮಂಗಳೂರು ಊಟವೇ ನನ್ನನ್ನ ಇಷ್ಟೊಂದು ಸುಂದರವಾಗಿ ಕಾಣುವಂತೆ ಮಾಡಿದೆ. ನಾನು ಕೂಡ ನಮ್ಮ ಸಂಸ್ಕೃತಿ, ಆಚಾರ, ಪರಂಪರೆಗಳನ್ನ ಪಾಲಿಸುವೆ ಎಂದಿದ್ದಾರೆ.

ಜೈ, ಇದು ರೂಪೇಶ್ ಶೆಟ್ಟಿ ನಿರ್ದೇಶನದ ಮೂರನೇ ಚಿತ್ರವಾಗಿದ್ದು, ಇದಕ್ಕೂ ಮೊದಲು ‘ಗಿರ್ಗಿಟ್’ ಮತ್ತು ‘ಸರ್ಕಸ್’ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಇದು ಕರಾವಳಿ ಭಾಗದ ರಾಜಕೀಯದ ಕುರಿತಾದ ಚಿತ್ರ. ‘ಜೈ’ ಚಿತ್ರದಲ್ಲಿ ರೂಪೇಶ್‍ಗೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ನಟಿಸಿದ್ದಾರೆ. ಆರ್. ಎಸ್. ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಈ ಚಿತ್ರವನ್ನು ನಿರ್ಮಿಸಿದ್ದಾರೆ.

‘ಜೈ’ ಚಿತ್ರದಲ್ಲಿ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ವಿನುತ್ ಛಾಯಾಗ್ರಹಣ , ಲೊಯ್ ವೆಲೆಂಟಿನ್ ಸಲ್ದಾನ ಸಂಗೀತವಿದ್ದು, ನವೆಂಬರ್ 14ರಂದು ತೆರೆಯ ಮೇಲೆ ಬರಲಿದೆ.





