ಯುಗಾದಿ ಹಬ್ಬ ಬಂತೆಂದರೆ ಮಾವಿನಕಾಯಿ ಚಿತ್ರಾನ್ನ, ಬೇಳೆ ಹೋಳಿಗೆ, ಶ್ಯಾವಿಗೆ ಪಾಯಸ, ಹುಗ್ಗಿ, ಕೋಸಂಬರಿ ಇರುವಂತೆ, ಅತಿ ಪ್ರಮುಖವಾದುದೆಂದರೆ ಬೇವು ಬೆಲ್ಲ, ಬೇವು ಬೆಲ್ಲದಲ್ಲಿ ದೇಹದ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ಪೌಷ್ಟಿಕಾಂಶಗಳು ಅಧಿಕವಾಗಿವೆ. ಪ್ರಕೃತಿಯಿಂದ ಸಿಗುವ ಮಾವಿನಕಾಯಿ, ಮಾವು, ಬೇವು, ವೀಳ್ಯದೆಲೆ ಇವುಗಳ ಸವಿ ರುಚಿಗಳು ಇಲ್ಲಿವೆ. ಉತ್ತಮ ಆರೋಗ್ಯಕ್ಕೆ ಇವೆಲ್ಲ ಪೂರಕವಾದದ್ದು!

KUTU-01

ಬೇಳೆ ಒಬ್ಬಟ್ಟು

ಸಾಮಗ್ರಿ : 4 ಕಪ್‌ ತೊಗರಿಬೇಳೆ, 1 ಕಪ್‌ ಕಡಲೆಬೇಳೆ, 1 ತೆಂಗಿನಕಾಯಿ, 3 ಅಚ್ಚು ದಪ್ಪ ಬೆಲ್ಲ, 2 ಏಲಕ್ಕಿ, 4 ಕಪ್‌ ಮೈದಾ ಹಿಟ್ಟು.

ವಿಧಾನ : ಮೈದಾ ಹಿಟ್ಟನ್ನು ಕಣಕದ ರೀತಿಯಲ್ಲಿ ಕಲಸಿಕೊಂಡು, ತುಪ್ಪ ಹಾಕಿ ಚೆನ್ನಾಗಿ ನಾದಿಕೊಳ್ಳಿ. ಪಾತ್ರೆಗೆ 6 ಕಪ್ಪು ನೀರು ಹಾಕಿ ಒಲೆಯ ಮೇಲಿಟ್ಟು ಕುದಿ ಬಂದ ಮೇಲೆ ಬೇಳೆಯನ್ನು ತೊಳೆದು  ಹಾಕಿ. ಬೇಳೆ ಬೆಂದ ಮೇಲೆ ನೀರನ್ನು ಪಾತ್ರೆಗೆ ಬಗ್ಗಿಸಿ, ಬೇಳೆಯನ್ನು ಬೇರೆ ತೆಗೆದಿಟ್ಟುಕೊಳ್ಳಿ. ಸ್ವಲ್ಪ ಆರಿದ ನಂತರ ಬೇಳೆ ರುಬ್ಬಿಕೊಳ್ಳಿ, ತೆಂಗಿನಕಾಯಿ ತುರಿದು ರುಬ್ಬಿಟ್ಟುಕೊಳ್ಳಿ. ಪಾತ್ರೆಗೆ ಬೆಲ್ಲ ಹಾಕಿ ನಾಲ್ಕು ಕಪ್‌ ನೀರು ಹಾಕಿ ಪಾಕ ತಯಾರಿಸಿ. ಇದಕ್ಕೆ ರುಬ್ಬಿದ ತೆಂಗಿನ ತುರಿ, ಏಲಕ್ಕಿ ಪುಡಿ ಹಾಕಿ. ಸುವಾಸನೆ ಪಾಕ ಬಂದಾಗ ರುಬ್ಬಿದ ಬೇಳೆಯನ್ನು ಹಾಕಿ ಕೈಯಾಡಿಸಿ. ಗಟ್ಟಿಯಾದಾಗ ಕೆಳಗೆ ಇಳಿಸಿ ಉಂಡೆ ಮಾಡಿ. ಮೈದಾಹಿಟ್ಟಿನ ಜೊತೆ ಸೇರಿಸಿ ಒಬ್ಬಟ್ಟು ತಟ್ಟಿ, ಕಾವಲಿಯ ಮೇಲೆ ಎಣ್ಣೆ ಹಾಕಿ ಬೇಯಿಸಿ, ಸವಿಯಲು ಕೊಡಿ.

Screenshot_20240218-093814-01

ಕಾಯಿ ಒಬ್ಬಟ್ಟು

ಸಾಮಗ್ರಿ : 1 ದಪ್ಪ ತೆಂಗಿನಕಾಯಿ, 4 ಕಪ್‌ ಸಕ್ಕರೆ, 4 ಏಲಕ್ಕಿ, 4 ಕಪ್‌ ಮೈದಾಹಿಟ್ಟು.

ವಿಧಾನ : ಮೈದಾಹಿಟ್ಟಿಗೆ ಸ್ವಲ್ಪ ನೀರು ಹಾಕಿ ಕಣಕ ಕಲಸಿಟ್ಟುಕೊಳ್ಳಿ. ತೆಂಗಿನಕಾಯಿಯನ್ನು ಬೆಳ್ಳಗೆ ತುರಿದು ನುಣ್ಣಗೆ ರುಬ್ಬಿಕೊಳ್ಳಿ. 4 ಕಪ್‌ ಸಕ್ಕರೆಗೆ 1 ಕಪ್‌ ನೀರನ್ನು ಹಾಕಿ ಎಳೆ ಪಾಕ ಬರುವವರೆಗೂ ಕುದಿಸಿ. ರುಬ್ಬಿದ ಕಾಯಿತುರಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕೈಯಾಡಿಸಿ. ಉಂಡೆ ಪಾಕ ಬರುವವರೆಗೆ ಕೈಯಾಡಿಸುತ್ತಿರಿ. ನಂತರ ಕೆಳಗಿಳಿಸಿ ಉಂಡೆ ಮಾಡಿ ಮೈದಾ ಹಿಟ್ಟಿನ ಜೊತೆ ಸೇರಿಸಿ ಒಬ್ಬಟ್ಟು ತಟ್ಟಿ ಕಾವಲಿಯ ಮೇಲೆ ಹಾಕಿ ಎಣ್ಣೆ ಹಾಕುತ್ತಾ ಎರಡೂ ಬದಿ ಬೇಯಿಸಿ, ಸವಿಯಲು ಕೊಡಿ.

MAVENAKAHE-CHITHARAHANNA-01

ಮಾವಿನಕಾಯಿ ಚಿತ್ರಾನ್ನ

ಸಾಮಗ್ರಿ : 4 ಕಪ್‌ ಅಕ್ಕಿ, 1 ದಪ್ಪ ಮಾವಿನಕಾಯಿ, 8 ಮೆಣಸಿನಕಾಯಿ, 2 ಚಮಚ ಧನಿಯಾ, ಅರ್ಧ ಚಮಚ ಜೀರಿಗೆ, 2-2 ಚಕ್ಕೆ, ಲವಂಗ, 2 ಮೊಗ್ಗು, 8 ಚಮಚ ಕಡಲೆಬೇಳೆ, 4 ಚಮಚ ಉದ್ದಿನಬೇಳೆ, ಅರ್ಧ ಕಪ್‌ ರೀಫೈನಡ್ ಎಣ್ಣೆ, ತುಸು ಸಾಸುವೆ, ಅರ್ಧ ಗಿಟುಕು ಕೊಬ್ಬರಿ ಅಥವಾ 1 ಹೋಳು ಕಾಯಿ, ಚಿಟಕಿ ಇಂಗು, ಅರಿಶಿನ, 8-10 ಗೋಡಂಬಿ, ಕೊ.ಸೊಪ್ಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ : ಚಕ್ಕೆ, ಲವಂಗ, ಮೊಗ್ಗು, ಒಣ ಮೆಣಸಿನಕಾಯಿ, ಧನಿಯಾ, 2 ಚಮಚ ಕ.ಬೇಳೆ, 2 ಚಮಚ ಉ.ಬೇಳೆ, ಕಾಯಿ ತುರಿ ಇವಿಷ್ಟನ್ನೂ ಬೇರೆ ಬೇರೆಯಾಗಿ ಹುರಿದು ರುಬ್ಬಿಕೊಳ್ಳಿ. ಅಕ್ಕಿಯನ್ನು ನೆನೆಹಾಕಿ ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ. ಮಾವಿನಕಾಯಿಯನ್ನು ತುರಿದುಕೊಳ್ಳಿ. ಒಗ್ಗರಣೆಗೆ ಸಾಸಿವೆ, ಇಂಗು, ಕ/ಉ ಬೇಳೆ, ಕರಿಬೇವು, ಅರಿಶಿನ, ಗೋಡಂಬಿ ಇವಿಷ್ಟನ್ನು ಹಾಕಿ ಕೈಯಾಡಿಸಿ, ನಂತರ ರುಬ್ಬಿದ ಮಸಾಲೆ, ಮಾವಿನಕಾಯಿ ತುರಿ, ಉಪ್ಪು ಹಾಕಿ ಚೆನ್ನಾಗಿ ಕೆದಕಿ. ನಂತರ ಅದಕ್ಕೆ ಅನ್ನವನ್ನು ಹಾಕಿ ಹದವಾಗಿ ಕಲಸಿ, ಹೆಚ್ಚಿದ ಕೊ.ಸೊಪ್ಪುನ್ನು ಮೇಲೆ ಉದುರಿಸಿ ಸವಿಯಲು ಕೊಡಿ.

Photo0098-01

ಹೆಸರುಬೇಳೆ ಚಕ್ಕುಲಿ

ಸಾಮಗ್ರಿ : 4 ಕಪ್‌ ಹೆಸರುಬೇಳೆ, 2 ಕಪ್‌ ಅಕ್ಕಿ, 1 ಹೋಳು ತೆಂಗಿನಕಾಯಿ, 4 ಸ್ಪೂನ್‌ ಎಳ್ಳು, 1 ಸ್ಪೂನ್‌ ಜೀರಿಗೆ, ಚಿಟಕಿ ಇಂಗು, 4 ಏಲಕ್ಕಿ, 1 ಚಮಚ ಅಚ್ಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ವಿಧಾನ : ಅಕ್ಕಿಯನ್ನು 3 ಗಂಟೆಗಳ ಕಾಲ ನೆನೆಸಿ, ನಂತರ ನೀರನ್ನು ತೆಗೆದು, ಒಂದು ಬಟ್ಟೆಯ ಮೇಲೆ ಹರವಿ. ನೀರು ಆರಿದ ನಂತರ ಅದನ್ನು ಪುಡಿ ಮಾಡಿಕೊಳ್ಳಿ. ನಂತರ ಅದನ್ನು ಸಣ್ಣ ಉರಿಯಲ್ಲಿ ಸ್ವಲ್ಪ ಹುರಿದು, ಜರಡಿ ಮಾಡಿಟ್ಟುಕೊಳ್ಳಿ. ಹೆಸರುಬೇಳೆಯನ್ನು ತೊಳೆದು ಮೆತ್ತಗೆ ಬೇಯಿಸಿಕೊಳ್ಳಿ. ನಂತರ ಕಾಯಿ, ಉಪ್ಪು, ಇಂಗು, ಏಲಕ್ಕಿ ಇಷ್ಟನ್ನು ನುಣ್ಣಗೆ ರುಬ್ಬಿಕೊಳ್ಳಿ, ನಂತರ ಅದಕ್ಕೆ ಹೆಸರುಬೇಳೆಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಜರಡಿ ಮಾಡಿಟ್ಟ ಅಕ್ಕಿ ಹಿಟ್ಟನ್ನು ಸೇರಿಸಿ ಎಳ್ಳು, ಜೀರಿಗೆ, ಅಚ್ಚ ಖಾರದ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಂಡು ಚಕ್ಕುಲಿ ಒರಳಿಗೆ ಎಣ್ಣೆ ಸವರಿ ಅದರಲ್ಲಿ ಹಿಟ್ಟನ್ನು ಹಾಕಿ ಒತ್ತಿ, ಕಾದ ಎಣ್ಣೆಯಲ್ಲಿ ಕರಿಯಿರಿ. ರುಚಿಯಾದ ಬಿಸಿ ಬಿಸಿ ಚಕ್ಕುಲಿ ರೆಡಿ, ಸಂಜೆ ಕಾಫಿ/ಟೀ ಜೊತೆ ಸವಿಯಲು ಕೊಡಿ.

DSCN3024-01

ತೇಂಗೊಳಲು

ಸಾಮಗ್ರಿ : 1 ಕಪ್‌ ಅಕ್ಕಿಹಿಟ್ಟು, ಅರ್ಧ ಕಪ್‌ ಉದ್ದಿನ ಬೇಳೆ, ಸ್ವಲ್ಪ ಇಂಗು, 1-1 ಸ್ಪೂನ್‌ ಜೀರಿಗೆ, ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು, 1 ಸ್ಪೂನ್‌ ಬಿಸಿ ತುಪ್ಪ, ಕರಿಯಲು ಎಣ್ಣೆ.

ವಿಧಾನ : ಅಕ್ಕಿಹಿಟ್ಟನ್ನು ಹುರಿದುಕೊಂಡು, ಉದ್ದಿನ ಬೇಳೆಯನ್ನು ಬೇಯಿಸಿ ರುಬ್ಬಿಟ್ಟುಕೊಳ್ಳಿ. ಇವೆರಡನ್ನೂ ಸೇರಿಸಿ, ಅದಕ್ಕೆ ಜೀರಿಗೆ, ಎಳ್ಳು, ಇಂಗು, ಉಪ್ಪು ಹಾಗೂ ಬಿಸಿ ತುಪ್ಪ ಹಾಕಿ ಚೆನ್ನಾಗಿ ನೀರು ಹಾಕಿ ಕಲಸಿಕೊಳ್ಳಿ. ಚಕ್ಕುಲಿ ಒರಳಿನಲ್ಲಿ ಮೂರು ತೂತಿರುವ ಬಿಲ್ಲೆ ಹಾಕಿ, ಅದರಲ್ಲಿ ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಒತ್ತಿ ಹೊಂಬಣ್ಣ ಬರುವಂತೆ ಕರಿಯಿರಿ. ರುಚಿಯಾದ ತೇಂಗೊಳಲು ರೆಡಿ.

IMG_20240217_133821013_HDR-01

ತುಳಸಿ, ಮೊಳಕೆ ಹೆಸರುಕಾಳಿನ ಕೋಸಂಬರಿ

ಸಾಮಗ್ರಿ : 1 ಕಪ್‌ ಮೊಳಕೆ ಬರಿಸಿದ ಹೆಸರು ಕಾಳು, 1 ಕ್ಯಾರೆಟ್‌, 20 ತುಳಸಿ ಎಲೆ, ಅರ್ಧ ಕಪ್‌ ಹೆಚ್ಚಿರುವ ಸೌತೆಕಾಯಿ, 1 ಚಮಚ ಶುಂಠಿ ತುರಿ, ಅರ್ಧ ಹೋಳು ನಿಂಬೆಹಣ್ಣು, 1 ಚಮಚ ಕಾಳು ಮೆಣಸಿನ ಪುಡಿ, 4 ಹಸಿ ಮೆಣಸಿನಕಾಯಿ, ಕರಿಬೇವು, ಕೊ.ಸೊಪ್ಪು, 1 ಟೊಮೇಟೊ, 1 ಕಪ್‌ ಕಾಯಿತುರಿ, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ ಎಣ್ಣೆ, ಸಾಸಿವೆ, 1 ಒಣ ಮೆಣಸಿನಕಾಯಿ.

ವಿಧಾನ : ಬಾಣಲೆಗೆ 2 ಚಮಚ ಎಣ್ಣೆ ಹಾಕಿ, ಕಾದ ನಂತರ ಸಾಸಿವೆ, ಇಂಗು, ಒಣ ಮೆಣಸಿನಕಾಯಿ ಹಾಕಿ ಚಟಪಟಾಯಿಸಿ. ಅದಕ್ಕೆ ಹಸಿಮೆಣಸು, ಕರಿಬೇವು, ಶುಂಠಿ ತುರಿ ಹಾಕಿ ಸ್ವಲ್ಪ ಬಾಡಿಸಿ ಕೆಳಗಿಳಿಸಿ. ಬಿಸಿ ಆರಿದ ಮೇಲೆ ಮೊಳಕೆ ಕಟ್ಟಿದ  ಹೆಸರುಕಾಳು, ಕ್ಯಾರೆಟ್‌, ಹೆಚ್ಚಿದ ತುಳಸಿ ಎಲೆ, ಸೌತೆಕಾಯಿ, ಕಾಯಿತುರಿ, ಹೆಚ್ಚಿದ ಟೊಮೇಟೊ, ಕಾಳು ಮೆಣಸಿನ ಪುಡಿ ಹಾಕಿ ಕೈಯಾಡಿಸಿ. ಬಡಿಸುವ ಸಮಯದಲ್ಲಿ ನಿಂಬೆರಸ, ಕೊ.ಸೊಪು, ಉಪ್ಪು ಬೆರೆಸಿ. ಬೇಕೆನಿಸಿದರೆ ಇನ್ನೊಂದಿಷ್ಟು ತುಳಸಿ ಎಲೆ ಹಾಕಿ ಕೈಯಾಡಿಸಿ ಸವಿಯಲು ಕೊಡಿ. ಇದು ಪೌಷ್ಟಿಕಾಂಶವಿರುವ ಕೋಸಂಬರಿ.

ಖಾರದ ಪೊಂಗಲ್

ಸಾಮಗ್ರಿ : 1 ಕಪ್‌ ಅಕ್ಕಿ, ಅರ್ಧ ಕಪ್‌ ಹೆಸರುಬೇಳೆ, 4 ಚಮಚ ಮೆಂತ್ಯ, ತುಸು ಅರಿಶಿನ, 2 ಚಮಚ ಜೀರಿಗೆ, 18-20 ಗೋಡಂಬಿ, 1 ಗಿಟುಕು ಕೊಬ್ಬರಿ, 1 ಚಮಚ ಕರಿಮೆಣಸು ಕಾಳು, 5 ಹಸಿ ಮೆಣಸಿನಕಾಯಿ, 8-10 ಚಮಚ ತುಪ್ಪ, 1 ಒಣ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ : ಅಕ್ಕಿ-ಹೆಸರುಬೇಳೆಯನ್ನು ತೊಳೆದು ಕುಕ್ಕರ್‌ ಗೆ ಹಾಕಿ, ಅದಕ್ಕೆ ಮೆಂತ್ಯ, ಜೀರಿಗೆ, ಉಪ್ಪು ಜೊತೆಗೆ 6 ಕಪ್‌ ನೀರು ಹಾಕಿ ಮುಚ್ಚಳ ಮುಚ್ಚಿ ಮೂರು ವಿಶಲ್ ಬರಿಸಿ ಬೇಯಿಸಿ. ಒಗ್ಗರಣೆಗೆ ತುಪ್ಪ ಹಾಕಿ ಜೀರಿಗೆ, ಒಣ ಮೆಣಸಿನಕಾಯಿ, ಕರಿಮೆಣಸು, ಸೀಳಿದ ಹಸಿಮೆಣಸಿನಕಾಯಿ, ಗೋಡಂಬಿ ಜೊತೆಗೆ ಕೊಬ್ಬರಿ ತುರಿ ಹಾಕಿ ಕೈಯಾಡಿಸಿ ಅದನ್ನು ಬೆಂದ ಅನ್ನಕ್ಕೆ ಹಾಕಿ, ಉಳಿದ ತುಪ್ಪ ಸುರಿದು ಕಲಸಿ ಸವಿಯಲು ಕೊಡಿ.

YESAARUBELE-THAVE-01

ಬೇವಿನ ಹೂವಿನ ಗೊಜ್ಜು

ಸಾಮಗ್ರಿ : 1 ಸಣ್ಣ ಕಪ್‌ ಬೇವಿನ ಹೂ, ನಿಂಬೆ ಗಾತ್ರದ ಹುಣಿಸೆಹಣ್ಣು, ಸ್ವಲ್ಪ ಬೆಲ್ಲ, ಚಿಟಕಿ ಇಂಗು, ಒಗ್ಗರಣೆಗೆ 2 ಚಮಚ ಎಣ್ಣೆ, 2 ಚಮಚ ಮೆಂತ್ಯ, ಅರ್ಧ ಚಮಚ ಸಾಸಿವೆ, 2 ಒಣ ಮೆಣಸಿನಕಾಯಿ, 1 ಚಮಚ ತಿಳಿಸಾರಿನ ಪುಡಿ, ಕರಿಬೇವು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ : ಸ್ವಲ್ಪ ತುಪ್ಪ ಹಾಕಿ ಬೇವಿನ ಹೂಗಳನ್ನು ಹುರಿದುಟ್ಟುಕೊಳ್ಳಿ. 2 ಕಪ್‌ ನೀರಿಗೆ ಹುಣಿಸೆಹಣ್ಣನ್ನು ಹಾಕಿ ಚೆನ್ನಾಗಿ ಕಿವುಚಿ ರಸ ತೆಗೆದಿಟ್ಟುಕೊಳ್ಳಿ. ಒಗ್ಗರಣೆಗೆ ಎಣ್ಣೆ, ಸಾಸಿವೆ, ಮೆಂತ್ಯ, ಇಂಗು, ಕರಿಬೇವು, ಒಣಮೆಣಸಿನಕಾಯಿ ಹಾಕಿ ಚಟಪಟಾಯಿಸಿ. ಅದಕ್ಕೆ ತಿಳಿಸಾರಿನ ಪುಡಿ ಹಾಕಿ, ಹುಣಿಸೇ ರಸ ಬಿಟ್ಟು ಬೇವಿನ ಹೂ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ಅದಕ್ಕೆ ಕೊ.ಸೊಪ್ಪು ಸೇರಿಸಿ. ಈ ಆರೋಗ್ಯಕರವಾದ ಈ ಬೇವಿನ ಗೊಜ್ಜನ್ನು ಬಿಸಿ ಅನ್ನದೊಂದಿಗೆ ಸವಿಯಲು ಕೊಡಿ.

GOJJU-01

ಬೇವಿನ ಹೂವಿನ ರಾಯತ

ಸಾಮಗ್ರಿ : 1 ಕಪ್‌ ಬೇವಿನ  ಹೂ, ಅರ್ಧ ಕಪ್‌ ಹೆಸರುಕಾಳು, 3 ಚಮಚ ಹುರಿಗಡಲೆ, 1-1 ಚಮಚ ಜೀರಿಗೆ, ಕೊತ್ತಂಬರಿ ಬೀಜ. 4 ಹಸಿ ಮೆಣಸಿನಕಾಯಿ, 1 ಹೋಳು ತೆಂಗಿನಕಾಯಿ ತುರಿ, ಕರಿಬೇವು, 6 ಕಪ್‌ ಮೊಸರು, 1 ಚೂರು ಹಸಿ ಶುಂಠಿ, ಕೊ.ಸೊಪ್ಪು, ಒಗ್ಗರಣೆಗೆ 2 ಚಮಚ ತುಪ್ಪ, ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ : ಹೆಸರುಕಾಳನ್ನು ತೊಳೆದು ನೀರಿನಲ್ಲಿ ಒಂದು ದಿನ ನೆನೆಸಿ. ಮಾರನೇ ದಿನ ನೀರನ್ನು ತೆಗೆದು ಮೊಳಕೆ ಕಟ್ಟಿ. ಮೊಳಕೆ ಬಂದ ಹೆಸರುಕಾಳನ್ನು ಸ್ವಲ್ಪವೇ ಬೇಯಿಸಿಕೊಳ್ಳಿ. ನಂತರ ಬೇವಿನ ಹೂವನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಗೆ ಜೀರಿಗೆ, ಕೊತ್ತಂಬರಿ, ಹಸಿಮೆಣಸು ಹಾಕಿ ಹುರಿದು ಅದಕ್ಕೆ ಹುರಿಗಡಲೆ, ಕಾಯಿ ತುರಿ, ಹಸಿ ಶುಂಠಿ ಹಾಕಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಗೆ ಬೆಂದ ಹೆಸರುಕಾಳು, ಹುರಿದ ಬೇವಿನ ಹೂ, ರುಬ್ಬಿದ ಮಸಾಲೆ ಹಾಕಿ ಅದಕ್ಕೆ ಮೊಸರು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಅದು ಆರಿದ ನಂತರ ರಾಯತಕ್ಕೆ ಹಾಕಿ ಕಲಸಿ. ಈ ರುಚಿಕರವಾದ ರಾಯತ ಅಜೀರ್ಣ, ಮಲಬದ್ಧತೆ ನಿವಾರಿಸಿ, ಆರೋಗ್ಯ ಕಾಪಾಡುತ್ತದೆ.

IMG_20210930_191130-01

ಬೆಲ್ಲದ ಮಿಠಾಯಿ

ಸಾಮಗ್ರಿ : 1 ತೆಂಗಿನಕಾಯಿ, 3 ಅಚ್ಚು ಬೆಲ್ಲ, 4 ಏಲಕ್ಕಿ ಕಾಯಿ, 4 ಚಮಚ ಗಸಗಸೆ, 8-10 ಗೋಡಂಬಿ, ಸ್ವಲ್ಪ ದ್ರಾಕ್ಷಿ.

ವಿಧಾನ : ತೆಂಗಿನಕಾಯಿಯನ್ನು ಸಣ್ಣಗೆ ತುರಿದುಕೊಳ್ಳಿ, ಸ್ವಲ್ಪ ನೀರು ಕುದಿಸಿ ಅದಕ್ಕೆ ಬೆಲ್ಲ ಹಾಕಿ ಶೋಧಿಸಿ, ನಂತರ ಒಲೆಯ ಮೇಲಿಟ್ಟು ಸ್ವಲ್ಪ ಪಾಕ ಬಂದಾಗ ಅದಕ್ಕೆ ಕಾಯಿ ತುರಿಯನ್ನು ಹಾಕಿ ಗಟ್ಟಿಯಾಗಿ ತಳಬಿಡುವವರೆಗೂ ಚೆನ್ನಾಗಿ ಕೈಯಾಡಿಸುತ್ತಿರಿ.  ನಂತರ ಅದಕ್ಕೆ ಏಲಕ್ಕಿ ಪುಡಿ ಹಾಕಿ ಕೆದಕಿ, ಮಿಠಾಯಿ ಹದಕ್ಕೆ ಬಂದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ತಟ್ಟಿ, ಹುರಿದ ಗಸಗಸೆಯನ್ನು ಮೇಲೆ ಉದುರಿಸಿ. ಕರಿದಿಟ್ಟ ಗೋಡಂಬಿ, ದ್ರಾಕ್ಷಿ ಚೆನ್ನಾಗಿ ತಟ್ಟಿ. ನಂತರ ಅದನ್ನು ಬೇಕಾದ ಆಕಾರಕ್ಕೆ ಕತ್ತರಿಸಿ, ಸವಿಯಲು ಕೊಡಿ.

Screenshot_20240218-092136-02

ಸವಿಯಾದ ಗರಿಗರಿ ಗಾರಿಗೆ

ಸಾಮಗ್ರಿ : 2 ಕಪ್‌ ಅಕ್ಕಿ, 3 ಅಚ್ಚು ಬೆಲ್ಲ, ಅಗತ್ಯಕ್ಕೆ ತಕ್ಕಷ್ಟು ಗೋಡಂಬಿ, ಬಾದಾಮಿ, ಪಿಸ್ತಾ, ದ್ರಾಕ್ಷಿ, ಅರ್ಧ ಹೋಳು ತೆಂಗಿನಕಾಯಿ, 4 ಚಮಚ ತುಪ್ಪ, 4 ಏಲಕ್ಕಿ, 4-4 ಚಮಚ ಎಳ್ಳು, ಗಸಗಸೆ.

ವಿಧಾನ : ಅಕ್ಕಿಯನ್ನು 3-4 ನಾಲ್ಕು ತಾಸು ನೆನೆಸಿ, ಆನಂತರ ಅಕ್ಕಿಗೆ ಕಾಯಿತುರಿ, ಏಲಕ್ಕಿ ಹಾಕಿ ಇಡ್ಲಿಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ಗಸಗಸೆ ಮತ್ತು ಎಳ್ಳನ್ನು ಹುರಿದು ಪುಡಿ ಮಾಡಿ ಹಿಟ್ಟಿಗೆ ಹಾಕಿ. ಬಾದಾಮಿ, ಗೋಡಂಬಿ, ಪಿಸ್ತಾವನ್ನು ಸ್ವಲ್ಪ ಹುರಿದು ಸಣ್ಣಗೆ ಪುಡಿ ಮಾಡಿ ಹಿಟ್ಟಿಗೆ ಹಾಕಿಕೊಳ್ಳಿ. ನಂತರ ಬೆಲ್ಲಕ್ಕೆ ನೀರು ಹಾಕಿ ಗಟ್ಟಿ ಪಾಕ ಮಾಡಿಕೊಳ್ಳಿ ಅದಕ್ಕೆ ಹಿಟ್ಟನ್ನು ಹಾಕಿ ಗಟ್ಟಿಯಾಗಿ ಕಲಸಿ. ನಂತರ ಸಣ್ಣ ಉಂಡೆಗಳಾಗಿ ಮಾಡಿ. ಅಂಗೈ ಮೇಲೆ ಜಿಡ್ಡು ಸವರಿಕೊಂಡು ಈ ಉಂಡೆಯನ್ನು ಗುಂಡಗೆ ತಟ್ಟಿ ಎಣ್ಣೆಯಲ್ಲಿ ಕರಿಯಿರಿ. ಗರಿ ಗರಿಯಾದ ಸಿಹಿ ಗಾರಿಗೆ ಸಿದ್ಧ. ಇದನ್ನು ಗಾಳಿ ಆಡದ ಡಬ್ಬಿಗೆ ಹಾಕಿ ಬೇಕೆನಿಸಿದಾಗ ಸವಿಯಲು ಕೊಡಿ.

IMG_20240218_132535044-01

ವೀಳ್ಯದೆಲೆ ಲಡ್ಡು

ಸಾಮಗ್ರಿ : 8-10 ವೀಳ್ಯದೆಲೆ, 1-1 ಕಪ್‌ ಹಾಲು, ಸಕ್ಕರೆ, ಅರ್ಧ ಕಪ್‌ ಹಾಲಿನ ಪುಡಿ, ಸ್ವಲ್ಪ ಕೊಬ್ಬರಿ ಪುಡಿ, 10-10 ಗೋಡಂಬಿ, ಬಾದಾಮಿ, ದ್ರಾಕ್ಷಿ, 8 ಚಮಚ ಗುಲ್ಕಂದ್‌, 1-2 ಚಮಚ ತುಪ್ಪ, 2 ಏಲಕ್ಕಿ, 1 ಚಮಚ ಸೋಂಪು.

ವಿಧಾನ : ಗೋಡಂಬಿ-ಬಾದಾಮಿಯನ್ನು ಹುರಿದು ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಸೋಂಪು, ಗುಲ್ಕಂದ್‌ ಸೇರಿಸಿ ಮಿಶ್ರಣ ಮಾಡಿಟ್ಟುಕೊಳ್ಳಿ. ವೀಳ್ಯದೆಲೆಯನ್ನು ಚೆನ್ನಾಗಿ ತೊಳೆದು, ಹಿಂದೆ ಮುಂದೆ ತೊಟ್ಟು ತೆಗೆದು, ಕತ್ತರಿಸಿ ಮಿಕ್ಸಿಗೆ ಹಾಕಿ, ಹಾಲಿನ ಪುಡಿ, ಏಲಕ್ಕಿ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ. ಬಾಣಲೆಗೆ ಕೊಬ್ಬರಿ ಪುಡಿ ಹಾಕಿ ಬೆಚ್ಚಗೆ ಹುರಿಯಿರಿ. ನಂತರ ಇದಕ್ಕೆ ರುಬ್ಬಿದ ವೀಳ್ಯದೆಲೆ ಹಾಕಿ ನಂತರ ಸಕ್ಕರೆ ಹಾಕಿ ಗಟ್ಟಿ ಆಗುವರೆಗೂ ಕೈಯಾಡಿಸಿ. ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ, ಬಾದಾಮಿ ಚೂರು ಹಾಕಿ. ಅದು ಹದಕ್ಕೆ ಬಂದಾಗ ಕೆಳಗಿಳಿಸಿ. ತಣ್ಣಗಾದ ಮೇಲೆ ಅಂಗೈಗೆ ತುಪ್ಪ ಸರಿಕೊಂಡು ಮಿಶ್ರಣವನ್ನು ಸಣ್ಣ ಉಂಡೆಯಾಗಿ ಮಾಡಿಕೊಡು ಅದನ್ನು ಬಟ್ಟಲಿನಾಕಾರ ಮಾಡಿ, ಅದರೊಳಗೆ ಗುಲ್ಕಂದ್‌ ಮಿಶ್ರಣವನ್ನು ಹಾಕಿ ಮುಚ್ಚಿ ಉಂಡೆ ಕಟ್ಟಿ, ಕೊಬ್ಬರಿ ಪುಡಿಯಲ್ಲಿ ಹೊರಳಿಸಿ, ಬೇಕಾದರೆ ಗೋಡಂಬಿ, ದ್ರಾಕ್ಷಿಗಳಿಂದ ಅಲಂಕರಿಸಿ.

IMG_20240218_132026806_HDR-01-01

ಬಾಳೆ ಎಲೆ ಹಲ್ವಾ

ಸಾಮಗ್ರಿ : 2 ಬಾಳೆ ಎಲೆ, 1 ಕಪ್‌ ಕಾರ್ನ್‌ ಫ್ಲೋರ್‌. 1 ಕಪ್‌ ತುಪ್ಪ, ಎರಡೂವರೆ ಕಪ್‌ ಸಕ್ಕರೆ, 2 ಏಲಕ್ಕಿ, ಧಾರಾಳವಾಗಿ ಬಾದಾಮಿ, ಗೋಡಂಬಿ, ದ್ರಾಕ್ಷಿ.

ವಿಧಾನ : ಬಾಳೆ ಎಲೆಯ ಮಧ್ಯದ ದಿಂಡನ್ನು ತೆಗೆದು ತೊಳೆದು ಚಿಕ್ಕದಾಗಿ ಕತ್ತರಿಸಿ, ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಬಟ್ಟೆಯಲ್ಲಿ ಶೋಧಿಸಿ, ಮತ್ತೆ 2 ಕಪ್‌ ನೀರು ಹಾಕಿ. ಬಾಣಲೆಗೆ ರಸ ಹಾಕಿಕೊಳ್ಳಿ. ಕಾರ್ನ್‌ ಫ್ಲೋರ್‌ ಹಿಟ್ಟಿಗೆ ನೀರು ಹಾಕಿ ಗಂಟಿಲ್ಲದಂತೆ ಕೈಯಾಡಿಸಿ ಬಾಳೆ ಎಲೆ ರಸಕ್ಕೆ ಹಾಕಿ ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಕೈಯಾಡಿಸಿ. ಮಧ್ಯೆ ಮಧ್ಯೆ ಎರಡೆರಡು ಚಮಚ ತುಪ್ಪ ಹಾಕುತ್ತಿರಿ. ಸಕ್ಕರೆ, ಏಲಕ್ಕಿ ಪುಡಿ ಹಾಕಿ ಕೈಯಾಡಿಸುತ್ತಿರಿ. ಆಗಾಗ ತುಪ್ಪ ಹಾಕುತ್ತಾ ಕೈಯಾಡಿಸುತ್ತಿರಿ. ತುಪ್ಪ ತಳ ಬಿಡುವವರೆಗೂ ತಿರುವುತ್ತಿರಿ (ತೆಳು ಗಾಜಿನ ಹದಕ್ಕೆ ಬರುತ್ತದೆ). ತಳ ಬಿಟ್ಟಾಗ ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿ, ದ್ರಾಕ್ಷಿ ಹಾಕಿ ಕೈಯಾಡಿಸಿ. ನಂತರ ಜಿಡ್ಡು ಸವರಿದ ತಟ್ಟೆಗೆ ಅದನ್ನು ಹಾಕಿ, ಬೇಕಾದ ಆಕಾರಕ್ಕೆ ಕತ್ತರಿಸಿ. ರುಚಿಯಾದ ಆರೋಗ್ಯಕರವಾದ ಬಾಳೆ ಎಲೆಯ ಹಲ್ವಾ ಸಿದ್ಧ.

MAVINA-ANINNA-RASAYANA-01

ಮಾವಿನ ಹಣ್ಣಿನ ಸೀಕರಣೆ

ಸಾಮಗ್ರಿ : 1 ಕಪ್‌ ಸಿಹಿ ಮಾವಿನ ಹಣ್ಣಿನ ಗಟ್ಟಿ ರಸ, 1 ಕಪ್‌ ಚಿಕ್ಕದಾಗಿ ಕತ್ತರಿಸಿದ ಮಾವಿನ ತುಂಡುಗಳು, 1 ಕಪ್‌ ಶ್ಯಾವಿಗೆ, 1 ಲೀ. ಹಾಲು, ಅರ್ಧ ಚಮಚ ಏಲಕಿ ಪುಡಿ, 1 ಕಪ್‌ ಸಕ್ಕರೆ, ಹಾಲಲ್ಲಿ ನೆನೆಸಿದ 10-15 ಕೇಸರಿ ದಳ, ಅಲಂಕರಿಸಲು ಬಾದಾಮಿ, ಗೋಡಂಬಿ, ಪಿಸ್ತಾ, ದ್ರಾಕ್ಷಿ.

ವಿಧಾನ : ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿಕೊಂಡು ಅದಕ್ಕೆ ಶ್ಯಾವಿಗೆ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಹಾಲನ್ನು ಕುದಿಸಿ, ಅದಕ್ಕೆ ಹುರಿದ ಶ್ಯಾವಿಗೆಯನ್ನು ಹಾಕಿ, ಮೆತ್ತಗಾಗುವವರೆಗೂ ಬೇಯಿಸಿ. ನಂತರ ಸಕ್ಕರೆ ಹಾಕಿ. ಶ್ಯಾವಿಗೆ ಹಾಲಿನೊಂದಿಗೆ ಚೆನ್ನಾಗಿ ಬೆಂದು ಗಟ್ಟಿಯಾಗುತ್ತಾ ಬಂದಾಗ, ನೆನೆಸಿಟ್ಟ ಕೇಸರಿ, ಏಲಕ್ಕಿ ಪುಡಿ ಹಾಕಿ ಕೈಯಾಡಿಸಿ, ಕೆಳಗಿಳಿಸಿ ತಣ್ಣಗಾದ ಮೇಲೆ ಮಾವಿನ ಹಣ್ಣಿನ ರಸವನ್ನು ಸೇರಿಸಿ ಮಿಶ್ರಣ ಮಾಡಿ, ಅದಕ್ಕೆ ಮಾವಿನ ಹಣ್ಣಿನ ತುಂಡುಗಳನ್ನು ಹಾಕಿ. ತುಪ್ಪದಲ್ಲಿ ಕರಿದ ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾವನ್ನು ಹಾಕಿ ಅಲಂಕರಿಸಿ. ರುಚಿಯಾದ ಮಾವಿನ ಹಣ್ಣಿನ ಸೀಕರಣೆಯನ್ನು ಒಬ್ಬಟ್ಟಿನೊಂದಿಗೆ ಸವಿಯಲು ಕೊಡಿ.

ಸಿಹಿ ಪೊಂಗಲ್

ಸಾಮಗ್ರಿ : 1 ಕಪ್‌ ಅಕ್ಕಿ, 2 ಅಚ್ಚು ಬೆಲ್ಲ, 1 ಗಿಟುಕು ಕೊಬ್ಬರಿ, 10-10 ಗೋಡಂಬಿ, ಬಾದಾಮಿ, ದ್ರಾಕ್ಷಿ, ಸ್ವಲ್ಪ ಪಚ್ಚಕರ್ಪೂರ, 2 ಲವಂಗ, ಅರ್ಧ ಸೌಟು ತುಪ್ಪ, ಏಲಕ್ಕಿ.

ವಿಧಾನ : ಅಕ್ಕಿಯನ್ನು ಬೆಚ್ಚಗೆ ಹುರಿದು ತೊಳೆದಿಟ್ಟು, 2 ಕಪ್‌ ನೀರಿಗೆ ಅಕ್ಕಿ ಹಾಕಿ ಅನ್ನ ಮಾಡಿಟ್ಟುಕೊಳ್ಳಿ. ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಕುದಿಸಿ ಶೋಧಿಸಿ, ಅದು ಗಟ್ಟಿ ಪಾಕವಾದಾಗ ಅನ್ನಕ್ಕೆ ಹಾಕಿ. ಮೇಲೆ ಕೊಬ್ಬರಿ ತುರಿ, ಏಲಕ್ಕಿ ಪುಡಿ, ಪಚ್ಚ ಕರ್ಪೂರ ಇಷ್ಟನ್ನೂ ಹಾಕಿ. ತುಪ್ಪದಲ್ಲಿ ಕರಿದ ಲವಂಗ, ಗೋಡಂಬಿ, ಬಾದಾಮಿ, ದ್ರಾಕ್ಷಿ ಚೂರುಗಳನ್ನು ಅನ್ನಕ್ಕೆ ಹಾಕಿ ತುಪ್ಪದೊಂದಿಗೆ ಕೈಯಾಡಿಸಿ.

ರಾಜೇಶ್ವರಿ ವಿಶ್ವನಾಥ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ