ಆಘಾತಕಾರಿ ಬೆಳವಣಿಗೆಯಲ್ಲಿ ಭಾನುವಾರ (ನ.23) ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಭಾರತ ಕ್ರಿಕೆಟ್ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ಮದುವೆ ಮುಂದೂಡಿಕೆಯಾಗಿದೆ.

ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ವಿವಾಹ ಸಮಾರಂಭ ಹಠಾತ್ ಮುಂದೂಡಿಕೆಯಾಗಿದೆ.

ಪೂರ್ವ ನಿಗದಿಯಂತೆ ನ.23ರಂದು ವಿವಾಹ ನಡೆಯಬೇಕಿತ್ತು. ಆದರೆ, ಸ್ಮೃತಿ ಅವರ ತಂದೆ ಶ್ರೀನಿವಾಸ್​ ಅವರು ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಅನಾರೋಗ್ಯಕ್ಕೆ ಒಳಗಾದ ಕಾರಣ ಸ್ಮೃತಿ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಎರಡೂ ಕುಟುಂಬಸ್ಥರು ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ ಎನ್ನಲಾಗಿದೆ.

ಸಾಂಗ್ಲಿಯ ಸ್ಯಾಮ್ಡೋಲ್‌ನಲ್ಲಿರುವ ಮಂಧಾನ ಫಾರ್ಮ್ ಹೌಸ್‌ನಲ್ಲಿ ವಿವಾಹದ ಸಿದ್ಧತೆಗಳು ನಡೆಯುತ್ತಿರುವಾಗ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹೃದಯಾಘಾತವಾಗಿದೆ ಎಂದು ಸ್ಮೃತಿ ಅವರ ವ್ಯವಹಾರ ವ್ಯವಸ್ಥಾಪಕ ತುಹಿನ್ ಮಿಶ್ರಾ ದೃಢಪಡಿಸಿದ್ದಾರೆ.

ಶ್ರೀನಿವಾಸ್ ಮಂಧಾನ ಅವರನ್ನು ತಕ್ಷಣ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರನ್ನುತುರ್ತು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಮೃತಿ ಮಂಧಾನ ಮತ್ತು ಅವರ ಹತ್ತಿರದ ಕುಟುಂಬ ಇಬ್ಬರೂ ಆಸ್ಪತ್ರೆಗೆ ಧಾವಿಸಿದರು ಎಂದು ಕುಟುಂಬದ ಆಪ್ತ ಮೂಲಗಳು ದೃಢಪಡಿಸಿವೆ.

ಶ್ರೀನಿವಾಸ ಮಂಧಾನ ಅವರ ಸ್ಥಿತಿ ಸ್ಥಿರವಾಗಿದೆ. “ತನ್ನ ತಂದೆಯ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳುವವರೆಗೆ ತಮ್ಮ ಮದುವೆಯನ್ನು ಮುಂದೂಡಲು ಮಂಧಾನ ನಿರ್ಧರಿಸಿದರು” ಎಂದು ಮಿಶ್ರಾ ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಮೆಹಂದಿ ಶಾಸ್ತ್ರ ಸೇರಿಂದೆ ಹಲವಾರು ಕಾರ್ಯಕ್ರಮಗಳು ನಡೆದಿದ್ದು, ಭಾರತ ಮಹಿಳಾ ತಂಡದ ಸದಸ್ಯರು ಸೇರಿದಂತೆ ಆಪ್ತ ವಲಯದ ಅನೇಕರು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ