ಮಾನವ ಬಲು ಭಾವಜೀವಿ. ಅದರಲ್ಲೂ ನೊಂದ ಹೆಣ್ಣುಮಕ್ಕಳು ತಮಗಿನ್ನು ಭವಿಷ್ಯವೇ ಇಲ್ಲ ಎಂದು ಸದಾ ನಿರಾಶಾಕೂಪದಲ್ಲಿ ಮುಳುಗಿಹೋಗುತ್ತಾರೆ. ನಮಗಿಂತ ಕಷ್ಟದಲ್ಲಿರುವವರನ್ನು ಕಂಡು, ನಾವು ಹೇಗೆ ಹಂತ ಹಂತವಾಗಿ ಮೇಲೇರಬಹುದು ಎಂದು ಅರಿತು, ಅದಕ್ಕಾಗಿ ಸ್ವಪ್ರಯತ್ನದಿಂದ ಮುಂದೆ ಯಶಸ್ಸನ್ನು ಪಡೆಯುವ ದಾರಿಯ ಬಗ್ಗೆ ತಿಳಿಯೋಣವೇ…….?

ಪ್ರತಿಯೊಬ್ಬ ಹೆಣ್ಣುಮಕ್ಕಳ ಜೀವನದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ವೈಫಲ್ಯಗಳು ಎದುರಾಗುತ್ತಲೇ ಇರುತ್ತವೆ. ಹುಟ್ಟಿನಿಂದಲೇ ಕೆಲವು ನ್ಯೂನತೆಗಳು ಇರುವುದು, ಗುಣವಾಗದ ಕಾಯಿಲೆಗಳು ಬರುವುದು,  ನೌಕರಿ ಸಿಗದಿರುವುದು, ವೃತ್ತಿಯಲ್ಲಿ ಬಡತಿ ತಪ್ಪಿ ಹೋಗುವುದು, ಪ್ರೇಮ ವೈಫಲ್ಯ, ದಾಂಪತ್ಯದಲ್ಲಿ ಬಿರುಕು, ಗೆಳೆಯ ಗೆಳತಿಯರಲ್ಲಿ, ಕುಟುಂಬದರಲ್ಲಿ ಜಗಳ, ಹಣಕಾಸಿನಲ್ಲಿ ಅಥವಾ ಇನ್ನೇನೋ ರೀತಿಯಲ್ಲಿ ವೆಚನೆಗೊಳಗಾಗುವುದು ಹೀಗೆ….. ಇದತ್ತೆ ಕೊನೆಯೇ ಇಲ್ಲ. ಬೇರೆ ಬೇರೆ ರೀತಿಯಲ್ಲಿ ಆಘಾತಗಳು, ನಿರಾಸೆಗಳು ಉಂಟಾದಾಗ ಜೀವನವೇ ಸಾಕೆನ್ನುವ ಭಾವನೆಗಳು ಬರಲು ಆರಂಭಿಸುತ್ತದೆ. ದುಡುಕಿನ ಅಸಮರ್ಪಕ ನಿರ್ಧಾರ ತೆಗೆದುಕೊಳ್ಳುವ ಬದಲು ನಿಧಾನವಾಗಿ ಯೋಚಿಸಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದೆ ಎಂದು ಭರವಸೆ ಇಟ್ಟುಕೊಂಡು ಬದುಕುವುದು ಲೇಸು.

`ನಮ್ಮ ದಾರಿಯಲ್ಲಿ ಯಾವುದೇ ಅಡೆತಡೆಗಳಿಲ್ಲದಿದ್ದರೆ ಆ ದಾರಿ ನಮ್ಮನ್ನು ಎಲ್ಲಿಗೂ ಕರೆದೊಯ್ಯಲಾರದು,’ ಎಂದು ಅಮೆರಿಕಾದ ಪ್ರಸಿದ್ಧ ಪ್ರಚನಕಾರ ಫ್ರಾಂಕ್‌ ಕ್ಲರ್ಕ್‌ ಅಭಿಪ್ರಾಯ ಪಟ್ಟಂತೆ, ಜೀವನದಲ್ಲಿ ಯಶಸ್ಸು ಗಳಿಸಬೇಕೆಂದಾದರೆ ನಾವು ಅದನ್ನು ಕಷ್ಟಪಟ್ಟು ಸಂಪಾದಿಸಬೇಕು. ಬಂಗಾರದ ತಟ್ಟೆಯಲ್ಲಿಟ್ಟು ಯಾರೂ ಕೊಡುವುದಿಲ್ಲ. ರಭಸದಿಂದ ಹರಿಯುವ ನೀರಿಗೆ ಯಾವುದೇ ಅಡೆ ತಡೆ ಇರದೆ ಇರುತ್ತಿದ್ದರೆ, ಅದು ಹರಿದು ಸಮುದ್ರಕ್ಕೆ ಸೇರುತ್ತಿತ್ತಷ್ಟೆ. ಅಂತಹ ನೀರಿಗೆ ಅಣೆಕಟ್ಟು ಎಂಬ ಅಡ್ಡಿ ಎದುರಾದ ಬಳಿಕ ವಿದ್ಯುಚ್ಛಕ್ತಿ ಉತ್ಪಾದನೆ ಆಯಿತು. ವಿದ್ಯುಚ್ಛಕ್ತಿಯಿಂದ ಎಷ್ಟೆಲ್ಲ ಉಪಯೋಗಗಳಿವೆ, ಅದರಿಂದ ನಾಗರಿಕತೆ ಎಷ್ಟೊಂದು ಮುಂದುವರಿಯಿತು, ತಂತ್ರಜ್ಞಾನ ಎಷ್ಟೊಂದು ಬೆಳೆಯಿತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ.

ಹಾಗೆಯೇ ಇಂತಹ ಅಡ್ಡಿ ಎದುರಿಸಿ ಅಣೆಕಟ್ಟಿನೊಳಗೆ ಬಂಧಿಯಾದ ನೀರು ಕೋಟ್ಯಂತರ ಜನರ ದಾಹವನ್ನು ತೀರಿಸುತ್ತಿರುವುದಷ್ಟೆ ಅಲ್ಲ, ಬೆಳೆ ಬೆಳೆಸಲು ಸಹಕಾರಿಯಾಗಿ ನಮ್ಮೆಲ್ಲರ ಹೊಟ್ಟೆ ತುಂಬಿಸುವ ಆಹಾರವನ್ನು ಉತ್ಪಾದಿಸಲು ತನ್ನ ಪ್ರಮುಖ ದೇಣಿಗೆಯನ್ನು ನೀಡುತ್ತಲೇ ಬಂದಿದೆ. ತನ್ನನ್ನು ಬಂಧಿಸಿದ್ದಾರೆಂದು ನೀರು ಎಲ್ಲಿಯಾದರೂ ಅಸಮಾಧಾನ ಗೊಳ್ಳುವಂತಿದ್ದರೆ ಎಷ್ಟೊಂದು ಅನರ್ಥ ಉಂಟಾಗುತ್ತಿತ್ತು ಅಲ್ಲವೇ….? ನಮಗುಂಟಾದ ಅಡ್ಡಿಯಿಂದ ಪ್ರಪಂಚಕ್ಕೆ ಏನೋ ಒಂದು ಅನುಕೂಲವಾಗಲೂಬಹುದು ಎಂಬ ಯೋಚನೆ ಕ್ಷಣ ಕಾಲ ಬಂದರೂ ನಾವು ಅಂತಹ ಅಡ್ಡಿಗಾಗಿ ತಲೆ ಕೆಡಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ.

ಕಥೆಯಿಂದ ನೀತಿ

ರೈತನೊಬ್ಬನು ಸಾಕಿದ್ದ ಕತ್ತೆಯೊದು ಮುದಿಯಾಗಿ ಒಮ್ಮೆ ಅದು ತಪ್ಪಿ ಹಾಳು ಬಾವಿಯೊಂದಕ್ಕೆ ಬಿತ್ತು. ಕತ್ತೆ ಹೇಗೂ ಮುದಿಯಾಗಿದೆ, ಅದನ್ನು ಮೇಲೆಕ್ಕೆತ್ತಿ ಏನು ಪ್ರಯೋಜನ ಎಂದು ರೈತ ಅದನ್ನು ಅಲ್ಲಿಯೇ ಹೂತು ಹಾಕಲು ತನ್ನ ಮನೆಯ ಸುತ್ತಮುತ್ತ ಇದ್ದ ಕಸ ಕಡ್ಡಿ, ಮಣ್ಣು, ಕಲ್ಲುಗಳನ್ನೆಲ್ಲ ಬಾವಿಗೆ ಸುರಿಯಲು ಶುರು ಮಾಡಿದ. ಮೊದ ಮೊದಲು ತನ್ನ ಮೈ ಮೇಲೆ ಇದೆಲ್ಲ ಬೀಳುತ್ತಿದ್ದ ಕಲ್ಲು ಮಣ್ಣುಗಳ ಹೊಡೆತಕ್ಕೆ ಅರಚುತ್ತಿದ್ದ ಕತ್ತೆ, ನಂತರ ಅವುಗಳನ್ನು ಕೊಡವಿಕೊಂಡು ಅವು ಕೆಳಗೆ ಬಿದ್ದ ಮೇಲೆ ಅವುಗಳ ಮೇಲೆಯೇ ಹತ್ತಿ, ನೋಡು ನೋಡುತ್ತಿದ್ದಂತೆಯೇ, ತನ್ನ ಸ್ವಪ್ರಯತ್ನದಿಂದ, ಬಾವಿಯಿಂದ ಮೇಲೆದ್ದು ಬಂದೇ ಬಿಟ್ಟಿತು!

ಈ ಪುಟ್ಟ ಕಥೆಯಂತೆ ನಮ್ಮ ಮೇಲೆಯೂ ಬೈಗಳು, ಸಮಸ್ಯೆಗಳು, ಒತ್ತಡಗಳು ಬೀಳುತ್ತಲೇ ಇರುತ್ತವೆ. ಕತ್ತೆಯು ತನ್ನ ಮೇಲೆ ಬಿದ್ದ ಕಲ್ಲು ಮಣ್ಣುಗಳನ್ನು ಕೊಡವಿ ಪುನರ್ಜನ್ಮ ಪಡೆದು ಬಾವಿಯಿಂದ ಮೇಲೆದ್ದು ಬಂದಿತು. ಹಾಗೆಯೇ ನಮ್ಮನ್ನು ತಾತ್ಸಾರ ಮಾಡಿದರು, ಬೈದರು, ತುಳಿದರು ನಮ್ಮ ಜೀವನದಲ್ಲಿ ಕೆಟ್ಟ ಪ್ರಭಾವ ಬೀರಿದರೆಂದು ತಲೆ ಕೆಡಿಸಿಕೊಳ್ಳುವ ಬದಲು, ಇಂತಹ ತೊಂದರೆಗಳನ್ನು ಕೊಡವಿ ಮುಂದಡಿ ಇಡುವುದೇ ನಮ್ಮ ಧೋರಣೆಯಾಗಬೇಕು. ಹೀಗೆ ಜೀವನದಲ್ಲಿ ಮೇಲಕ್ಕೇರುವ ಅವಕಾಶಗಳು ಒಂದಲ್ಲ ಒಂದು ರೀತಿಯಲ್ಲಿ ದೊರಕುತ್ತಲೇ ಇರುತ್ತವೆ.

IB167419_167419154900187_SM648642

ಶ್ರಮಕ್ಕೆ ತಕ್ಕ ಫಲ

ಒಮ್ಮೆ ಜನರೆಲ್ಲ ನಡೆದುಕೊಂಡು ಹೋಗಬೇಕಾದರೆ ರಸ್ತೆಯ ಮಧ್ಯದಲ್ಲಿ ಒಂದು ಬಂಡೆ ಕಲ್ಲು ಬಿದ್ದಿತ್ತು. `ರಸ್ತೆಯಲ್ಲಿ ಬಂಡೆ ಬಿದ್ದಿದೆ. ರಾಜನಿಗೆ ಸರಿಯಾದ ರಸ್ತೆಯ ವ್ಯವಸ್ಥೆಯನ್ನು ಮಾಡಲು ಸಾಧ್ಯವಿಲ್ಲವೇ?’ ಎಂದು ಜನ ಗೊಣಗುತ್ತಾ ರಸ್ತೆಯ ಬದಿಯಲ್ಲೇ ನಡೆಯುತ್ತಾರೆಯೇ ಹೊರತು ಅದನ್ನು ಯಾರೂ ಪಕ್ಕಕ್ಕೆ ಸರಿಸುವ ನಿಟ್ಟಿನಲ್ಲಿ ಯೋಚಿಸುವುದೇ ಇಲ್ಲ. ಕೊನೆಗೆ ಆ ದಾರಿಯಲ್ಲಿ ಬಂದ ರೈತನೊಬ್ಬ, ಬೇರೆಯವರಂತೆ ರಸ್ತೆಯ ಬದಿಯಲ್ಲಿ ಹೋಗುವ ಬಗ್ಗೆ ಯೋಚಿಸದೆ, ತನ್ನ ತಲೆಯ ಮೇಲಿದ್ದ ತರಕಾರಿ ಮೂಟೆಯನ್ನು ಕೆಳಗಿಳಿಸಿ, ಆ ಕಲ್ಲನ್ನು ಸರಿಸಲು ಪ್ರಯತ್ನಿಸುತ್ತಾನೆ. ಬಂಡೆ ಕಲ್ಲು ಸ್ವಲ್ಪ ಅಲುಗಾಡದಿದ್ದಾಗ ಕಬ್ಬಿಣದ ಸಲಾಕೆಯೊಂದನ್ನು ತಂದು ಕಷ್ಟಪಟ್ಟು ಆ ಬಂಡೆಯನ್ನು ಪಕ್ಕಕ್ಕೆ ಸರಿಸುವಲ್ಲಿ ಕೊನೆಗೂ ಯಶಸ್ವಿಯಾಗುತ್ತಾನೆ. ಮೈ ಕೈ ಕೊಡವಿ, ಬೆವರೊರೆಸಿಕೊಂಡು ಇನ್ನೇನು ತನ್ನ ತರಕಾರಿ ಮೂಟೆಯನ್ನು ಮೇಲಕ್ಕೆಬೇಕು ಎನ್ನುವಷ್ಟರಲ್ಲಿ ಆ ಬಂಡೆ ಇದ್ದ ಜಾಗದಲ್ಲಿ ಒಂದು ಸಣ್ಣ ಚೀಲ ಕಾಣಿಸಿತು. ರೈತ ಚೀಲ ತೆಗೆದು ನೋಡಿದರೆ ಅದರ ತುಂಬಾ ಚಿನ್ನದ ನಾಣ್ಯಗಳಿದ್ದವು! ನಿಜವಾಗಿ ಕಷ್ಟಪಟ್ಟು ದುಡಿಯುವವರು ಯಾರೆಂದು ನೋಡುವುದೇ ರಾಜನ ಉದ್ದೇಶವಾಗಿದ್ದ ಕಾರಣ ಆತ ಬೇಕೆಂದೇ ಬಂಡೆಯ ಕೆಳಗೆ ಚಿನ್ನದ ನಾಣ್ಯವಿದ್ದ ಚೀಲವನ್ನು ಇರಿಸಿದ್ದ.

ಆ ದಾರಿಯಲ್ಲಿ ಅದೆಷ್ಟೋ ಜನ ಬಂದು ಹೋದರೂ ಆ ಅಡ್ಡಿಯನ್ನು ದೂರ ಮಾಡಲು ಯಾರೂ ಪ್ರಯತ್ನಿಸಲೇ ಇಲ್ಲ. ಬರೀ ದೂರುತ್ತಿದ್ದರಷ್ಟೆ. ಇದ್ದ ಅಡ್ಡಿ ದೂರ ಮಾಡಿದ ಕಾರಣದಿಂದಲೇ ರೈತನಿಗೆ ಅನಿರೀಕ್ಷಿತವಾಗಿ ಚಿನ್ನ ಬಹುಮಾನದ ರೂಪದಲ್ಲಿ ದೊರಕಿತು.

image-bazaar

ಬಂದ ಅವಕಾಶ ಬಿಡಬೇಡಿ

ಅವಕಾಶಗಳು ಬಾಗಿಲು ತಟ್ಟುತ್ತಲೇ ಇರುತ್ತವೆ. ಅಂತಹ ಅವಕಾಶಗಳು ಬಂದಾಗ ಕಣ್ಣು ಮುಚ್ಚಿ ಕುಳಿತುಕೊಳ್ಳುವ ಬದಲು ನಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದರೆ ಅದೃಷ್ಟ ದೇವತೆ ಅಂತಹ ಕಷ್ಟಸಹಿಷ್ಣುಗಳನ್ನು ಬೆಂಬಲಿಸುತ್ತಲೇ ಇರುತ್ತಾಳೆ.

ನೊಂದ ಒಬ್ಬ ಹೆಣ್ಣುಮಗಳು ಜೀವನದಲ್ಲಿ ಜಿಗುಪ್ಸೆ ಬಂದು ನದಿ ನೀರಿಗೆ ಹಾರಿ ಪ್ರಾಣ ಕಳೆದುಕೊಳ್ಳಲೆಂದು ಸೇತುವೆಯ ಬಳಿ ಸಾಗಿದಾಗ, ಅಲ್ಲಿ ಎದುರಾದ ಒಬ್ಬ ಅಪರಿಚಿತ ಮುಗುಳ್ನಕ್ಕ. ಆ ಮುಗುಳ್ನಗು ಆಕೆಗೆ ಅತ್ಯಂತ ಅಗತ್ಯವಾದ ಸಾಂತ್ವನ ಒದಗಿಸಿತು. ಆಕೆ ಆತ್ಮಹತ್ಯೆಯ ಕೆಟ್ಟ ಆಲೋಚನೆಯನ್ನು ಕೈಬಿಟ್ಟು ವಾಪಸ್ಸು ಬಂದು ಮತ್ತೆ ಉತ್ಸಾಹದಿಂದ ಜೀವನದಲ್ಲಿ ಮುಂದೆ ಬಂದಳು.

ಹಾಗೆಯೇ ಜೀವನದಲ್ಲಿ ಸೋಲು ಎದುರಾದಾಗ ಅಪರಿಚಿತರೇ ನಮ್ಮೆಡೆಗೆ ಒಂದು ಸಣ್ಣ ನಗು ಬೀರುತ್ತಾರೆಂದರೆ ಅದೆಷ್ಟು ಪರಿಚಿತರು ನಮ್ಮನ್ನು ಇಷ್ಟಪಡಲಿಕ್ಕಿಲ್ಲ! ಅದೆಷ್ಟು ಮಂದಿ ನಮ್ಮನ್ನು ಮಾತಾಡಿಸಲಿಕ್ಕಿಲ್ಲ! ಅದೆಷ್ಟು ಮಂದಿಗೆ ನಮ್ಮ ಅಗತ್ಯವಿರಲಿಕ್ಕಿಲ್ಲ? ಜೀವನ ಸದಾ ಸುಂದರವಾಗಿಯೇ ಇರುತ್ತದೆ. ಅದನ್ನು ಅನುಭವಿಸಲು ನಾವು ನಮ್ಮ ದೃಷ್ಟಿಕೋನವನ್ನು ಸರಿಯಾಗಿ ಬೆಳೆಸಿಕೊಳ್ಳಬೇಕು.

ಜೀವನ ಸುಂದರವಾಗಿದೆ ಎಂದು ನಾವು ಪದೇ ಪದೇ ನೆನಪಿಸಿಕೊಳ್ಳಬೇಕು ಅಷ್ಟೆ. ಸೂರ್ಯೋದಯ ಎಷ್ಟು ಸುಂದರವಾಗಿದ್ದು, ಹೊಸ ಭರವಸೆಯನ್ನು ನೀಡುತ್ತದೋ, ಹಾಗೆಯೇ ಸೂರ್ಯಾಸ್ತಮಾನ ಚಂದ್ರ, ನಕ್ಷತ್ರಗಳ ದರ್ಶನ ಮಾಡಿಸುತ್ತಾ ನಾಳೆಯ ಸುಂದರ ನಿರೀಕ್ಷೆಗಳನ್ನು ನೀಡುತ್ತಿರುತ್ತದೆ.

Sahe-Nahi-Aawaj-udhaye-2

ಸದಾ ಸಮಯದ ಅಭಾವ

ಇನ್ನೂ ಕೆಲವರಿಗೆ ಜೀವನದಲ್ಲಿ ವೈಫಲ್ಯ ಎದುರಾಗಲು ಮುಖ್ಯ ಕಾರಣ ಸಮಯವನ್ನು ಸರಿಯಾಗಿ ಹೊಂದಿಸಿಕೊಳ್ಳಲು ಸಾಧ್ಯವಾಗದು. ಪ್ರತಿಯೊಬ್ಬನಿಗೂ ಇರುವುದು ದಿನಕ್ಕೆ 24 ಗಂಟೆಗಳೇ, ವರ್ಷಕ್ಕೆ 365 ದಿನಗಳೇ. ಸಮಯದ ಸರಿಯಾದ ಪಾಲನೆ ಮಾಡಿಕೊಂಡವರು ಜೀವನದ ಹಲವು ಕ್ಷೇತ್ರಗಳಲ್ಲಿ ಯಶಸ್ಸನ್ನು ಗಳಿಸುವಲ್ಲಿ ಸಫಲರಾಗಿದ್ದರೆ, ಉಳಿದವರು ವೈಫಲ್ಯಗಳ ಸರಮಾಲೆಯನ್ನೇ ಎದುರಿಸುತ್ತಾರೆ.

ಆಂಗ್ಲ ರಾಜಕಾರಣಿ ವಿದ್ಯಾದಾನಿಯಾದ ಚಾರ್ಲ್ಸ್ ಬುಕ್ಸ್ ಟನ್‌ ಹೇಳಿದಂತೆ, ಸಮಯವೆಂಬುದು ಅದಾಗಿಯೇ ಸಿಗುವುದಲ್ಲ. ನಾವು ಅದನ್ನು ಉಂಟು ಮಾಡಿಕೊಳ್ಳಬೇಕು ಅಷ್ಟೆ. ಈ ಸಣ್ಣ ಆದರೆ ಅಷ್ಟೇ ಮಹತ್ವಪೂರ್ಣ ಮಾತನ್ನು ಸದಾ ನೆನಪಲ್ಲಿ ಇಟ್ಟುಕೊಂಡರೆ ನಾವು ಬದುಕಿನಲ್ಲಿ ಜಯ ಗಳಿಸಬಹುದು.

ವೃತ್ತಿ  ಪ್ರವೃತ್ತಿ

ಉನ್ನತ ಉದ್ಯೋಗದಲ್ಲಿ ಇರುವವರು ತಮ್ಮ ನೌಕರಿಯನ್ನು ನಿಷ್ಠೆಯಿಂದ ಮಾಡುತ್ತಾ, ಜೊತೆಗೇ ತಮ್ಮ ನೆಚ್ಚಿನ ಹವ್ಯಾಸಗಳನ್ನೂ ಮುಂದುವರಿಸಿಕೊಂಡು ಅದರಲ್ಲೂ ಯಶಸ್ವಿಯಾದ ಹಲವು ಉದಾಹರಣೆಗಳು ನಮಗೆ ಸಿಗುತ್ತಲೇ ಇರುತ್ತವೆ. ದಿನದಲ್ಲಿ ಎಷ್ಟು ಪಾಠಗಳನ್ನು ಅಭ್ಯಾಸ ಮಾಡಬೇಕು, ಯಾವ ಯಾವ ಕೆಲಸಗಳನ್ನು ಮಾಡಬೇಕಾಗಿದೆ ಎಂಬುದನ್ನು ಒಂದು ನೋಟು ಪುಸ್ತಕ ಅಥವಾ ಡೈರಿಯಲ್ಲೋ ಬರೆದಿಟ್ಟು, ಮಲಗುವ ಮುನ್ನ ಅದರಲ್ಲಿ ಎಷ್ಟು ಪಾಠ ಓದಿ ಆಗಿದೆ, ಎಷ್ಟು ಕೆಲಸ ಮಾಡಿ ಮುಗಿದಿದೆ ಎಂಬುದನ್ನು ಗುರುತು ಹಾಕಿಕೊಂಡರೆ, ನಾವು ಸಾಗಿದ ಮಾರ್ಗ ಹಾಗೂ ಮುಂದೆ ಕ್ರಮಿಸಬೇಕಾದ ಮಾರ್ಗಗಳ ಬಗ್ಗೆ ಸ್ಪಷ್ಟತೆ ಸಿಗುತ್ತದೆ.

ಬದುಕು ಗೋಜಲಲ್ಲ

ಬದುಕನ್ನು ಗೋಜಲಾಗಿಸುವ ಬದಲು, ಜೀವನವನ್ನು ಒಂದು ಶಿಸ್ತಿನಲ್ಲಿ ನಿರಾತಂಕವಾಗಿ ಮುಂದುವರಿಸಿದರೆ ಯಶಸ್ಸು ಖಂಡಿತ. ನಮ್ಮ ಮೆದುಳಿಗೆ ಅಪಾರ ಶಕ್ತಿಯಿದೆ. ಕಂಪ್ಯೂಟರ್‌ ಗಳಲ್ಲಿ ಹಲವು ಜೀಗಾ ಬೈಟ್ಸ್ (ಜೆಬಿ) ಸಾಮರ್ಥ್ಯವಿರುವ ಬಗ್ಗೆ ಚಕಿತರಾಗುವ ನಾವು ಅದಕ್ಕಿಂತ ಹಲವು ಸಹಸ್ರ ಪಟ್ಟು ಹೆಚ್ಚಿನ `ಮೆಮೋರಿ’ ಇರುವ ನಮ್ಮದೇ ಮೆದುಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬುದು ನಿಜಕ್ಕೂ ಸೋಜಿಗದ ಸಂಗತಿಯೇ ಸರಿ.

`ಜೀವನದಲ್ಲಿ ಯಶಸ್ಸನ್ನು ಗಳಿಸಬೇಕಾದರೆ ನಿರಂತರ ಶ್ರಮವನ್ನು ನಿಮ್ಮ ಆತ್ಮೀಯ ಸ್ನೇಹಿತನನ್ನಾಗಿಸಿ. ಅನುಭವವನ್ನು ನಿಮ್ಮ ಸಲಹೆಗಾರರನ್ನಾಗಿ, ಎಚ್ಚರಿಕೆಯನ್ನು ನಿಮ್ಮ ಹಿರಿಯ ಸಹೋದರ ಮತ್ತು ಭರವಸೆಯನ್ನು ನಿಮ್ಮ ಪೋಷಕನನ್ನಾಗಿಸಿ,’ ಎಂಬ ಆಂಗ್ಲ ಕವಿ, ನಾಟಕಕಾರ ಹಾಗೂ ಬರಹಗಾರರಾದ ಜೋಸೆಫ್‌ ಎಡಿಸನ್‌ ಅಭಿಪ್ರಾಯಪಟ್ಟಿದ್ದು, ಸತ್ಯವಾದ ಮಾತು.

ವಿದ್ಯಾರ್ಥಿಗಳ ಗಮನಕ್ಕೆ

ತರಗತಿಗಳಲ್ಲಿ ಅಧ್ಯಾಪಕರು ಮಾಡುವ ಪಾಠಗಳನ್ನು ಮನಸ್ಸಿಟ್ಟು ಕೇಳಿ ಸಂಶಯಗಳಿದ್ದರೆ ಪರಿಹರಿಸಿಕೊಂಡು ಮನೆಗೆ ಬಂದ ಮೇಲೆ ಅಂದಿನ ಪಾಠವನ್ನು ಅಂದಂದೇ ಓದುವುದು ಒಳ್ಳೆಯ ಅಭ್ಯಾಸ ಆಗಿರುವಂತೆಯೇ, ಪರೀಕ್ಷೆಗಳಲ್ಲಿ ಎಲ್ಲಿಯಾದರೂ ನಿರೀಕ್ಷಿತ ಅಂಕಗಳು ಬರದಿದ್ದರೆ, ಧೃತಿಗೆಡದೆ ಎಲ್ಲಿ ತಪ್ಪಾಯಿತು ಎಂದು ಉತ್ತರ ಪತ್ರಿಕೆ ನೋಡಿ ಮುಂದಿನ ಸಲ ಅಂತಹ ತಪ್ಪು ಮರುಕಳಿಸದಂತೆ ಎಚ್ಚರ ವಹಿಸುವುದು ಜಾಣತನ.

ಅಂದಂದೇ ಓದಲು ಸಾಧ್ಯವಾಗದಿದ್ದರೂ ಯಾವುದೇ ರೀತಿಯಲ್ಲಿ ಕೀಳರಿಮೆ ಬೆಳೆಸಿಕೊಳ್ಳದೆ ಆಮೇಲಾದರೂ ಪಾಠಗಳನ್ನು ಓದಲು ಖಂಡಿತಾ ಸಾಧ್ಯವಿದೆ. ನೌಕರಿ ಮಾಡುವವರೂ, ಸ್ವಂತ ಉದ್ಯೋಗ ನಡೆಸುವವರೂ ವೈಫಲ್ಯತೆಯನ್ನು ಎದುರಿಸಬೇಕಾಗಿ ಬರಬಹುದು.

ಮುಂದಿನ ದಿನಗಳಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಲು ಇದೂ ಒಂದು ಮೆಟ್ಟಿಲು ಎಂದು ತಿಳಿದುಕೊಳ್ಳಬೇಕು. ಕ್ರೀಡೆ, ಚಲನಚಿತ್ರ, ಉದ್ಯಮ, ಕಲೆ, ಹಾಡು, ನೃತ್ಯ ಮೊದಲಾದೆಡೆ ಒಮ್ಮೆಲೇ ಯಶಸ್ಸು ಯಾರಿಗೂ ಸುಲಭವಾಗಿ ದೊರಕುವುದೇ ಇಲ್ಲ.

ಅದಕ್ಕಾಗಿ ಅವರೆಲ್ಲ ದಿನ ಹಲವಾರು ಘಂಟೆಗಳ ಶ್ರಮಪಡುತ್ತಾರೆ. ಸೋಲನ್ನೂ ಅನುಭವಿಸುತ್ತಿರುತ್ತಾರೆ. ಆದರೆ ಅವರೆಲ್ಲ ಎಲ್ಲಿ ಸೋತೆವೆಂದು ಸಿಂಹಾವಲೋಕನ ಮಾಡಿ ಮತ್ತೆ ಮುಂದಡಿ ಇಡುವುದರಿಂದಲೇ ಉನ್ನತ ಮಟ್ಟವನ್ನು ತಲುಪಲು ಸಾಧ್ಯವಾಗುವುದು. ಇವರೆಲ್ಲ ಯಶಸ್ಸಿನ ಹುರುಪಿನಲ್ಲಿ ಮುಂದೆಯೂ ಮತ್ತಷ್ಟು ಸಾಧನೆ ಮಾಡುವುದನ್ನು ತಮ್ಮ ದಿನಚರಿಯನ್ನಾಗಿ ಮಾಡಿಕೊಳ್ಳುತ್ತಾರೆ.

ಸ್ವಪ್ರಯತ್ನದಿಂದ ಮಾತ್ರ ಯಶಸ್ಸು

ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳು ಬಂದರೆ ಅಥವಾ ಅನುತ್ತೀರ್ಣರಾದರೆ ಚಿಂತಿಸದೆ ಮರಳಿ ಪ್ರಯತ್ನ ಮಾಡುತ್ತ ಗಮನಹರಿಸಬೇಕು. ಈಗ ಜಗತ್ತಿನ ಅಗ್ರ ಉದ್ಯಮಿಯ ಸಾಲಲ್ಲಿರುವ ಚೀನಾದ ಯಶಸ್ವಿ ಉದ್ಯಮಿಯೊಬ್ಬರು ಶಾಲೆ, ಕಾಲೇಜುಗಳಲ್ಲಿ ಓದುತ್ತಿರುವಾಗ ಹಲವಾರು ವಿಷಯಗಳಲ್ಲಿ ಅನುತ್ತೀರ್ಣರಾಗುತ್ತಿದ್ದರೂ ಮರಳಿ ಯತ್ನ ಮಾಡುತ್ತಲೇ ಎತ್ತರೆತ್ತರಕ್ಕೆ ಏರಿದರು. ಹಾಗೆಯೇ ಪ್ರೇಮದಲ್ಲಿ ಹುಡುಗನೋ ಹುಡುಗಿಯೋ ಮೋಸ ಮಾಡಿದರೆಂದು ಅದರಲ್ಲೇ ಕೊರಗುತ್ತಿರಬಾರದು.

ಎಲ್ಲಿಯಾದರೂ ಅಂಥಹವರ ಜೊತೆಯಲ್ಲೇ ಇರಬೇಕಾಗಿ ಬಂದು ಅವರು ಮುಂದೆ ವಂಚಿಸುತ್ತಿದ್ದರೆ, ಎಷ್ಟು ಅಪಾಯವಾಗುತ್ತಿತ್ತು ಎಂಬುದನ್ನು ನಾವು ಯೋಚಿಸಬೇಕು. ಹಣಕಾಸಿನ ವಿಷಯದಲ್ಲೂ ಯಾರಾದರೂ ಮೋಸ ಮಾಡಿದರೆ ಮುಂದೆ ಹುಷಾರಾಗಿದ್ದು ಮತ್ತೆ ಹೊಸದಾಗಿ ಎಲ್ಲವನ್ನೂ ಪ್ರಾರಂಭಿಸಬಹುದು.

ದುಡುಕು ನಿರ್ಧಾರ ಬೇಡ

ಆಘಾತಗಳನ್ನು ತಡಕೊಳ್ಳಲು ಸಾಧ್ಯವಾಗದಿರುವಾಗ ದುಡುಕುವ ನಿರ್ಧಾರದ ಯೋಚನೆಗಳು ಬಂದಾಗ ನಮ್ಮ ಹೆತ್ತವರೋ, ಆತ್ಮೀಯರೋ, ಬಾಳ ಸಂಗಾತಿಗಳೋ ನಮ್ಮ ಮೇಲಿಟ್ಟ ಪ್ರೀತಿ, ವಿಶ್ವಾಸ, ಅಭಿಮಾನ, ತ್ಯಾಗ, ಸಹಾಯ ಮುಂತಾದವೆಲ್ಲ ಒಂದು ಕ್ಷಣ ಮುಂದೆ ಬರಬೇಕು.

ಅಂಥ ಸುಮಧುರ ನೆನಪುಗಳ ಮುಂದೆ ನಮಗುಂಟಾದ ಬೇಸರ ಅಥವಾ ಅಸಮಾಧಾನ ಏನೇನೂ ಅಲ್ಲ, ಎಂದು ನಮಗೆ ಖಂಡಿತಾ ಗೊತ್ತಾಗುವುದು. ನಾವೆಲ್ಲಾದರೂ ಅಗಲಿದರೆ ನಮ್ಮ ಆತ್ಮೀಯರಿಗೆ ಉಂಟಾಗಬಹುದಾದ ಆಘಾತ, ಸಮಾಜದ ಮುಂದೆ ಅನುಭವಿಸಬೇಕಾದ ವೇದನೆ ಇಂತಹಗಳ ಯೋಚನೆಯಿಂದ ನಮ್ಮ ಜೀವನ ಬೇರೆಯವರಿಗೂ ಎಷ್ಟು ಅಗತ್ಯ ಎಂಬುದು ನಮಗೆ ತಿಳಿದು ಬರುವುದು. ಆಗ ನಾವು ಯಾವುದೇ ದುಡುಕಿನ ಅಪಾಯದ ಹೆಜ್ಜೆಗಳನ್ನು ಇಡಲಾರೆ.

ಇಂಗ್ಲೆಂಡಿನ ಜನಪ್ರಿಯ ಪ್ರಧಾನಿಯಾಗಿದ್ದ ವಿನ್‌ ಸ್ಟನ್‌ ಚರ್ಚಿಲ್ ‌ಹೇಳಿದಂತೆ, `ನಿರಾಶಾವಾದಿಗೆ ಎಲ್ಲ ಅವಕಾಶಗಳಲ್ಲೂ ಕಷ್ಟಗಳೇ ಕಂಡುಬರುವುದು. ಆಶಾವಾದಿಗೆ ಕಷ್ಟಗಳಲ್ಲೇ ಅವಕಾಶಗಳು ಕಾಣಿಸುವುದು,’ ಎಂಬ ಮಾತನ್ನು ಎಲ್ಲಾ ನೊಂದ ಹೆಣ್ಣುಮಕ್ಕಳೂ ಸದಾ ಸ್ಮರಿಸಬೇಕಾದುದು ಅವಶ್ಯ. ಹೀಗಾಗಿ ಆತ್ಮವಿಶ್ವಾಸದಿಂದ ಮುಂದುವರಿದಾಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ!

ಬಿ.ಎನ್‌, ಭರತ್ಬಾಳಿಕೆ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ