ಭಾರತ ಮಹಿಳಾ ಕಬಡ್ಡಿ ತಂಡವು ಕಬಡ್ಡಿ ವಿಶ್ವಕಪ್ 2025 ಅನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದೆ. ಫೈನಲ್‌ನಲ್ಲಿ ಚೀನೀಸ್ ತೈಪೆಯನ್ನು 35-28 ಅಂತರದಿಂದ ಸೋಲಿಸಿ ಭಾರತ ಎರಡನೇ ಬಾರಿಗೆ ವಿಶ್ವಕಪ್ ಗೆದ್ದಿದೆ. ತಂಡವು ಟೂರ್ನಿಯಲ್ಲಿ ಅಜೇಯವಾಗಿ ಉಳಿದಿತ್ತು.
ಇತ್ತೀಚೆಗೆ, ಭಾರತೀಯ ಮಹಿಳಾ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದಿತ್ತು. ಈಗ ಭಾರತೀಯ ವನಿತೆಯರ ಕಬಡ್ಡಿ ತಂಡದ ಸಮಯ.. ಭಾರತದ ಮಹಿಳಾ ಕಬಡ್ಡಿ ತಂಡ, 2025ರ ಕಬಡ್ಡಿ ವಿಶ್ವಕಪ್ ಗೆದ್ದುಕೊಂಡಿದೆ. ಈ ಅದ್ಭುತ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಢಾಕಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತವು ಚೈನೀಸ್ ತೈಪೆಯನ್ನು 35-28 ಅಂತರದಿಂದ ಸೋಲಿಸಿ, ಸತತ ಎರಡನೇ ಬಾರಿಗೆ ಮಹಿಳಾ ಕಬಡ್ಡಿ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇಡೀ ಟೂರ್ನಿಯಲ್ಲಿ ಭಾರತ ತಂಡವು ಒಂದೇ ಒಂದು ಪಂದ್ಯವನ್ನೂ ಸೋತಿಲ್ಲ.
ಪಂದ್ಯದ ಆರಂಭದಲ್ಲಿ ಭಾರತ ತಂಡವು ಬಲಿಷ್ಠ ರಕ್ಷಣಾ ವಿಭಾಗ ಮತ್ತು ಚುರುಕಾದ ದಾಳಿಯೊಂದಿಗೆ ಉತ್ತಮ ಪ್ರದರ್ಶನ ನೀಡಿ, ಮೊದಲಾರ್ಧದಲ್ಲಿ ಸಣ್ಣ ಅಂತರದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ತಂಡವು ಇನ್ನಷ್ಟು ಆಕ್ರಮಣಕಾರಿ ಆಟಕ್ಕೆ ಮೊರೆಹೋಗಿ, ಚೈನೀಸ್ ತೈಪೆಗೆ ತಿರುಗಿಬರಲು ಯಾವುದೇ ಅವಕಾಶ ನೀಡಲಿಲ್ಲ. ಇದಕ್ಕೂ ಮೊದಲು, ಭಾರತ ತಂಡವು ತನ್ನ ಗುಂಪಿನ ಎಲ್ಲಾ ಪಂದ್ಯಗಳನ್ನು ಗೆದ್ದಿತ್ತು. ನಂತರ ಸೆಮಿಫೈನಲ್‌ನಲ್ಲಿ ಇರಾನ್ ತಂಡವನ್ನು 33-21 ಅಂತರದಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿತ್ತು. ಇತ್ತ, ಚೈನೀಸ್ ತೈಪೆಯೂ ತನ್ನ ಗುಂಪಿನಲ್ಲಿ ಅಜೇಯವಾಗಿ ಉಳಿದಿತ್ತು ಮತ್ತು ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 25-18 ಅಂತರದಿಂದ ಮಣಿಸಿತ್ತು.
ಮೋದಿ ಶ್ಲಾಘನೆ: 2025ರ ಕಬಡ್ಡಿ ವಿಶ್ವಕಪ್ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ ಅಭಿನಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹಿಳಾ ತಂಡವು ಅತ್ಯುತ್ತಮ ಧೈರ್ಯ, ಕೌಶಲ್ಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದೆ. ಈ ವಿಜಯವು ಅನೇಕ ಯುವಕರಿಗೆ ಕಬಡ್ಡಿ ಆಡಲು, ದೊಡ್ಡ ಕನಸು ಕಾಣಲು ಹಾಗೂ ಉನ್ನತ ಗುರಿಗಳನ್ನು ತಲುಪಲು ಸ್ಪೂರ್ತಿ ನೀಡುತ್ತದೆ ಎಂದು ಅವರು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.





