ಇಂದಿನ ಸ್ಪರ್ಧಾತ್ಮಕ ಪುರುಷ ಪ್ರಪಂಚದ ಉದ್ದಿಮೆಗಳ ನಡುವೆ, ಫಾರ್ಮಾಸಿಟಿಕ್ಸ್ ನಂತಹ, ಅದರಲ್ಲೂ ಆಯುರ್ವೇದದ ಅತ್ಯುತ್ತಮ ಉತ್ಪನ್ನಗಳನ್ನು ಭಾರತೀಯ ಸಮಾಜಕ್ಕೆ ಕೊಡುಗೆಯಾಗಿ ನೀಡಿರುವ ವೆಂಕಟ ಫಾರ್ಮಾಸಿಟಿಕ್ಸ್ ನ ಒಡತಿ ಪದ್ಮಿನಿ ಶ್ರೀನಿವಾಸ್ ರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ…….?
ಪದ್ಮಿನಿ ಶ್ರೀನಿವಾಸ್ ಎಂ. ಫಾರ್ಮಾ (ಫಾರ್ಮಾಸಿಟಿಕ್ಸ್) ದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಆಯುರ್ವೇದ ಔಷಧಿಗಳ ಉತ್ಪಾದನೆಯಲ್ಲಿ 23 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ.
ಇವರ ತಂದೆಯವರು ಉದ್ದಿಮೆದಾರರಾಗಿದ್ದು, ಡಯಾಗ್ನೋಸ್ಟಿಕ್ ಕಿಟ್ ಗಳನ್ನು ತಯಾರು ಮಾಡುತ್ತಿದ್ದರು. ಆ ಉದ್ದಿಮೆಯನ್ನು ಮುಂದುವರಿಸಲು ಇವರಿಗೆ ಫಾರ್ಮಸಿ ವಿದ್ಯಾಭ್ಯಾಸ ಮಾಡಿಸಿದ್ದರು. ಆದರೆ ಮದುವೆಯಾದ ನಂತರ ತಂದೆಯ ಪ್ರೇರಣೆ ಮತ್ತು ಪತಿಯ ಉತ್ತೇಜನದಿಂದಾಗಿ ವೆಂಕಟ ಫಾರ್ಮಾ ಸಂಸ್ಥೆಯನ್ನು ಪ್ರಾರಂಭಿಸಲಾಯಿತು.
ಆಯುರ್ವೇದ ಭಾರತದ ಪ್ರಾಚೀನ ವೈದ್ಯ ಪದ್ಧತಿಯಾಗಿದ್ದರೂ ಸಹ ಅದರಲ್ಲಿ ಹೆಚ್ಚಿನ ಸಂಶೋಧನೆ, ಅಧ್ಯಯನ, ವೈಜ್ಞಾನಿಕವಾಗಿ ತಯಾರಿಸುವಿಕೆಯ ಕೊರತೆ ಇದ್ದುದರಿಂದ ನಾನು ಆಯುರ್ವೇದ ಔಷಧಿಗಳ ತಯಾರಿಕೆಗೆ ಗಮನವಿತ್ತೆ. ಆಲೋಪತಿ ವೈದ್ಯ ಪದ್ಧತಿಯಲ್ಲಿ ಹಲವಾರು ಮಾರಕ ಕಾಯಿಲೆಗಳಿಗೆ ಔಷಧಿಗಳು ಲಭ್ಯವಾಗಿವೆ. ಆದರೆ ಅವುಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಸರಿಯಾದ ಪ್ರಮಾಣದಲ್ಲಿ ಬೆರೆಸಿ ಒಂದು ನಿರ್ದಿಷ್ಟವಾದ ರೂಪದಲ್ಲಿ ಅಂದರೆ ಮಾತ್ರೆ, ಟಾನಿಕ್, ಕ್ಯಾಪ್ಸೂಲ್ ಲೇಪನದ ರೂಪದಲ್ಲಿ ರೋಗಿಗಳಿಗೆ ನೀಡಬೇಕಾಗುತ್ತದೆ, ಎನ್ನುತ್ತಾರೆ.
ಸಮಾಜಕ್ಕೆ ಹೊಸತನದ, ಉತ್ತಮ ಗುಣಮಟ್ಟದ, ಪರೀಕ್ಷಿತ ಪರಿಣಾಮಕಾರಿ ಆಯುರ್ವೇದದ ಔಷಧಿಗಳನ್ನು ನೀಡುವ ಉದ್ದೇಶದಿಂದ ವೆಂಕಟ ಫಾರ್ಮಾ ತಯಾರಿಕಾ ಸಂಸ್ಥೆಯನ್ನು ಸ್ಥಾಪಿಸಲಾಯಿತು.
ಉದ್ಯಮಗಳ ಸ್ಪರ್ಧೆ
ಸ್ಪರ್ಧೆ ಎಲ್ಲಾ ರಂಗಗಳಲ್ಲಿ ಇರುವುದು ಸಹಜ. ಸಕಾರಾತ್ಮಕ ಮನೋಭಾವದಿಂದ ಸ್ಪರ್ಧಿಸಿ, ತನ್ನದೇ ಆದ ಛಾಪು ಮೂಡಿಸುವುದು ಅಗತ್ಯ. ಈ ಕುರಿತಾಗಿ ಅವರೇ ಈ ರೀತಿ ಹೆಚ್ಚಿನ ವಿವರ ನೀಡಿದ್ದಾರೆ.
ಏಕಾಏಕಿ ಹೆಚ್ಚು ಬಂಡವಾಳ ಹೂಡುವ ಅಗತ್ಯವಿಲ್ಲ. ನಾನು 2001ರಲ್ಲಿ ಕೇವಲ 4 ಮಹಿಳಾ ಕಾರ್ಮಿಕರೊಂದಿಗೆ ಗ್ಲೂಕೋಸ್ ಪೌಡರ್ ರೀಪ್ಯಾಕಿಂಗ್ ಮಾಡುವುದರೊಂದಿಗೆ ಉದ್ದಿಮೆಯನ್ನು ಆರಂಭಿಸಿದೆ. ಹಂತ ಹಂತವಾಗಿ ಬೆಳೆದು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಹಿಳಾ ಉದ್ದಿಮೆದಾರರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ಪಡೆದಿರುತ್ತೇನೆ.
ನಮ್ಮ ತಯಾರಿಕಾ ಸಂಸ್ಥೆ ರಾಮನಗರದ ರಾಮದೇವರ ಬೆಟ್ಟದ ತಪ್ಪಲಿನಲ್ಲಿ ಇದ್ದು, ವಿಶಅವ ಮಟ್ಟದ ಸ್ಟಾಂಡರ್ಡ್ ಫೆಸಿಲಿಟಿ ಆಗಿದ್ದು, ಸುಮಾರು 70 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಅದರಲ್ಲಿ ಶೇ.90ರಷ್ಟು ಮಹಿಳೆಯರಿದ್ದಾರೆ.
ನಾವು ಮುಖ್ಯವಾಗಿ ಹೊಸ ಔಷಧಿಗಳ ಸಂಶೋಧನೆಯಲ್ಲಿ ತೊಡಗಿರುತ್ತೇವೆ. ಹಲವಾರು ಪ್ರತಿಷ್ಠಿತ ಕಂಪನಿಯರಿಗೆ ಲೋನ್ ಲೈಸೆನ್ಸ್ ಅಡಿಯಲ್ಲಿ ಅವರುಗಳ ಔಷಧಿಗಳನ್ನು ತಯಾರಿಸಿ ಕೊಡುತ್ತೇವೆ.
ಹೊಸ ಬಗೆಯ ಉತ್ಪನ್ನಗಳು
ಉದ್ದಿಮೆಯ ಲಾಭ ನಷ್ಟಗಳ ಬಗ್ಗೆ ವಿವರಿಸುತ್ತಾ, ಕಂಪನಿಯ ಲಾಭ, ನಮ್ಮ ನಿಷ್ಠೆ ಮತ್ತು ಶ್ರಮದ ಮೇಲೆ ನಿರ್ಧಾರಿತವಾಗಿರುತ್ತದೆ. ಒಮ್ಮೆಲೆ ಲಾಭ ಗಳಿಸುವುದು ಕಷ್ಟ ಸಾಧ್ಯ. ತಾಳ್ಮೆ ಅತಿ ಮುಖ್ಯ.
ನಮ್ಮ ಕಂಪನಿಯಲ್ಲಿ ಕ್ಯಾನ್ಸರ್ ಗೆ ಸಂಬಂಧಿಸಿದ ಔಷಧಿಗಳ ಬಗ್ಗೆ ಸಂಶೋಧನೆ ಪೂರ್ಣಗೊಂಡಿದ್ದು, 2 ಔಷಧಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಅವು ಆಲ್ಯೋ ಪಾಲಿ ಹರ್ಬ್ ಫಾರ್ಮ್ಯುಲೇಶನ್ ಗಳಾಗಿದ್ದು, ಸಪೋರ್ಟಿವ್ ಥೆರಪಿ ಫಾರ್ ಕ್ಯಾನ್ಸರ್ ಆಗಿರುತ್ತದೆ.
ಈ ಹಿಂದೆ ಸಕ್ಕರೆ ಕಾಯಿಲೆ ರೋಗಿಗಳಿಗೆ ಆಗುವ ಹುಣ್ಣು (ಡಯಾಬಿಟಕ್ ಸೋರ್ಸ್) ಗಳಿಗೆ ಒಂದು ಲೇಪನವನ್ನು ಕಂಡುಹಿಡಿದು, ಮಾನವರ ಮೇಲಿನ ಪ್ರಯೋಗದ ನಂತರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಅದರಂತೆ ಕೋವಿಡ್ ಸಮಯದಲ್ಲಿ ಹರ್ಬೋವಿರ್ ಎಂಬ ಆ್ಯಂಟಿವೈರಲ್ ಇಮ್ಯುನ್ ಮಾಡ್ಯುಲೇಟರ್ ಟಾನಿಕ್ ನ್ನು ಸಹ ಬಿಡುಗಡೆ ಮಾಡಲಾಗಿದೆ.
ಅಲೋಪತಿ ಪದ್ಧತಿಯಲ್ಲಿ ಕೊರತೆ ಇರುವಂತಹ ಔಷಧಿಗಳ ಬಗ್ಗೆ ಹೆಚ್ಚಿನ ಒತ್ತು ನೀಡಿ ಹಲವಾರು ಹೊಸ ಔಷಧಿಗಳನ್ನು ತಯಾರಿಸುವ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಿವೆ.
ಎಲ್ಲರ ಕೈಗೆಟುಕು ಉತ್ಪನ್ನಗಳು
ನಮ್ಮ ಸಂಸ್ಥೆ ಹಲವಾರು ಪ್ರತಿಷ್ಠಿತ ಆಸ್ಪತ್ರೆ, ವಿಜ್ಞಾನಿಗಳು ಮತ್ತು ವಿದ್ಯಾಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಗಳಲ್ಲಿ, ಪರಿಣಾಮಕಾರಿ ಔಷಧಿಗಳನ್ನು ಸರಬರಾಜು ಮಾಡುವ ನಿಟ್ಟಿನಲ್ಲಿ ಸಂಶೋಧನೆ ನಡೆಸುತ್ತಿದೆ.
ಕೋವಿಡ್ ನಂತರ ಜನಸಾಮಾನ್ಯರಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಕಂಡು ಬಂದಿರುತ್ತದೆ. ತಮ್ಮ ಆರೋಗ್ಯಕ್ಕಾಗಿ ಆಯುರ್ವೇದ ಔಷಧಿ ಬಳಕೆ ಹೆಚ್ಚಾಗಿರುವುದು ಕಂಡು ಬಂದಿರುತ್ತದೆ.
ಜನ ಔಷಧಿ ಕೇಂದ್ರಗಳಿಂದ ನಮ್ಮ ವ್ಯಾಪಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಅಲ್ಲಿ ಕೇವಲ ಆಲೋಪತಿ ಔಷಧಿಗಳ ಮಾರಾಟ ನಡೆಯುತ್ತಿದ್ದು, ಆಯುರ್ವೇದಿಕ್ ಔಷಧಿಗಳನ್ನೂ ಸಹ ಅವರ ವಹಿವಾಟಿನಲ್ಲಿ ಸೇರಿಸಿದರೆ ನಮ್ಮಂತಹ ದೇಶೀಯ ವೈದ್ಯ ಪದ್ಧತಿಯ ಔಷಧ ತಯಾರಿಕರಿಗೆ ಅನುಕೂಲವಾಗುತ್ತದೆ ಎಂಬುದು ನನ್ನ ಅಭಿಪ್ರಾಯ.
ಪ್ರಗತಿಪರ ಮಹಿಳೆ
ಗ್ಲಾಸ್ ಸೀಲಿಂಗ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದಾಗ, ಒಬ್ಬ ಮಹಿಳಾ ಬಾಸ್ ಆಗಿ ಕೆಲಸ ಮಾಡಿಸುವುದು ಸ್ವಲ್ಪ ಕಷ್ಟವೇ! ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇರುವುದರಿಂದ ಹಾಗೂ ಬಹಳ ಸಹಕಾರಿ ಆಗಿರುವುದರಿಂದ ನನಗೆ ಅಷ್ಟೇನೂ ಸಮಸ್ಯೆ ಇರುವುದಿಲ್ಲ.
ಪ್ರಗತಿಪರ ಮಹಿಳೆಯರ ಬಗ್ಗೆ ನಿಮ್ಮ ಆಲೋಚನೆ ತಿಳಿಸಿ ಎಂದಾಗ, ಪ್ರತಿಯೊಬ್ಬ ಮಹಿಳೆಯಲ್ಲಿ ಉದ್ಯೋಗಿಯಾಗುವ ದಕ್ಷತೆ, ಕ್ಷಮತೆ ಮತ್ತು ಬುದ್ಧಿವಂತಿಕೆ ಇದ್ದೇ ಇರುತ್ತದೆ. ಆದರೆ ಅವರು ತಮ್ಮ ಆಸಕ್ತಿಗೆ ತಕ್ಕ ಸೂಕ್ತ ವಿಷಯ ಆಯ್ಕೆ ಮಾಡಿಕೊಳ್ಳಬೇಕು. ಮಹಿಳೆಯರು ಪ್ರವೇಶಿಸದ ಯಾವುದೇ ಉದ್ದಿಮೆಗಳು ಇಲ್ಲ. ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಇದ್ದಾರೆ. ಆದರೆ ಅವರುಗಳ ಸಂಖ್ಯೆ ತೀರ ಕಡಿಮೆ. ಮಹಿಳೆಯರು ಕೀಳರಿಮೆ ಮತ್ತು ಸಂಕೋಚ ಬಿಡಬೇಕು. ಧೈರ್ಯದಿಂದ ಮುನ್ನುಗ್ಗಿದರೆ ಎಲ್ಲವೂ ಸಾಧ್ಯ.
ನಿಮ್ಮ ಕೌಟುಂಬಿಕ ಜೀವನದ ಬಗ್ಗೆ ಹೇಳಿ ಎಂದಾಗ, ನಮ್ಮದು ಚಿಕ್ಕ ಹಾಗೂ ಚೊಕ್ಕ ಸಂಸಾರ. ಕುಟುಂಬ ಮತ್ತು ಕೆಲಸ ಸರಿತೂಗಿಸುವುದು ಸ್ವಲ್ಪ ಕಷ್ಟ ಎನಿಸಿದರೂ ನನ್ನ ಪತಿಯ ಸಹಕಾರದಿಂದ ನಿಭಾಯಿಸುತ್ತಾ ಇರುತ್ತೇನೆ.
– ಸದ್ಯೋಜಾತ ಎ.ಎಂ.





