ಪತಿಯಿಂದ ಪರಿತ್ಯಕ್ತೆಯಾದ ಇಂದಿರಾ ತನಗಿನ್ನೂ ಭವಿಷ್ಯವೇ ಇಲ್ಲ ಎಂದು ಚಿಂತಿಸುತ್ತಿದ್ದಾಗ, ಚಂದ್ರಪ್ಪಗೌಡರು ಅವಳ ಬಾಳಿಗೆ ಹೆಮ್ಮರದಂತೆ ಆಸರೆಯಾಗಿ ಬಂದರು. ಮುಂದೆ ಅವರು ತೀರಿಕೊಂಡಾಗ, ಅವರ ಕುಟುಂಬದಲ್ಲಿ ಇವಳ ಸ್ಥಾನ ಏನಾಯಿತು……?

“ಅಂಕಲ್, ನನ್ನವರಿಗೆ ಇನ್ನೊಮ್ಮೆ ತುಸು ತಿಳಿಸಿ ಹೇಳಿರಲ್ಲ…..? ಬಾಳ ಉಪಕಾರ ಆಗುತ್ತೆ.”

“ನಿನ್ನ ಗಂಡನಿಗೆ ಹೇಳೋದು ಏನು ಉಳಿದೈತಂತ ಹೇಳ್ಬೇಕು? ಎಷ್ಟು ಸಾರೆ ತಿಳಿ ಹೇಳಿಲ್ಲ…..? ಅನೊಂಥರ ನಾಯಿ ಬಾಲ ಡೊಂಕು ಇದ್ದಂತೆ. ನಿನ್ನ ಅಪ್ಪಾನೂ ಬಾಳ ಹೇಳ್ಯಾನ. ಇಬ್ರು ಸೇರ್ಕೊಂಡೂ ಹೇಳೀವಿ. ಇನ್ನೆಂಗ ಹೇಳ್ಬೇಕು ಅಂತ ತಿಳಿದಿಲ್ವಾಗೇದ.”

“ಇಲ್ಲ, ಅಂಕಲ್. ನನ್ಗಿ ಬಾಳ ಚಿಂತಿ ಆಗ್ಲಕ್ಕತೇದ.”

“ಇನ್ನೊಂದು ಮೂರ್ನಾಲ್ಕು ದಿನ ಬಿಟ್ಟು ನಾ ನಿಮ್ಮೂರಿಗೆ ಹೋಗಾ ಅದೀನಿ. ಅಲ್ಲಿಗೆ ಹೋದ್ರೆ ಸರಿ, ಇಲ್ಲಾಂದ್ರೆ ಇಲ್ಲಿಗೇ ಅವನ್ ಕರ್ಸಿ ಹೇಳ್ತೀನಿ. ನಾ ಹೇಳಿ ಕಳ್ಸಿದ್ರೆ ಅವ ಓಡೋಡ್ಕಂತ ಇಲ್ಲಿಗೆ ಬರ್ತಾನೆ. ಆತಲ್ಲ….? ಸುಮ್ನೇ ಚಿಂತಿ ಮಾಡ್ಕೋತ ಕೂಡ್ಬ್ಯಾಡ. `ಚಿಂತ್ಯಾಕೆ ಮಾಡುತಿ, ಚಿನ್ಮಯನಿದ್ದಾನೆ’ ಅಂತ ದಾರ್ಶನಿಕರೇ ಹೇಳ್ಯಾರಲ್ಲ? ಎಲ್ಲ ಸರಿ ಹೋಗುತ್ತೆ.”

“ನೀವು ಎಷ್ಟಾದ್ರೂ ನಮ್ಮಪ್ಪಾಜಿ ಖಾಸಾ ದೋಸ್ತು. ಅದ್ಕೇ ಹೇಳ್ದೆ.  ನೀವೇಳ್ದಂಗೆ ಮನಸ್ಸಿಗೆ ಹಚ್ಕೊಳ್ದೇ ಇರ್ತೀನಿ, ಆತಾ….?”

“ಇದು ಒಳ್ಳೇ ಹುಡುಗಿ ಲಕ್ಷಣ! ಹುಟ್ಟಿದಾಗಿಂದ ನಿನ್ನ ನೋಡೀನಿ. ನಿನ್ಗೆ ಒಳ್ಳೇದು ಆಗ್ಬೇಕು ಅಂತ ನಾ ಬಯಸೋನು. ನಿಮ್ಮಪ್ಪ ನನ್ಗಿಂತ ಏಳೆಂಟು ವರ್ಷ ದೊಡ್ಡಾವಿದ್ರೂ ನಮ್ ದೋಸ್ತಾನಿಗೆ ವಯಸ್ಸು ಅಡ್ಡ ಬಂದಿಲ್ಲ. ಗೌಡ, ಕುಲ್ಕರ್ಣಿ ಇಬ್ರೂ ಚೊಲೋನೇ ಅದೀವಿ. ಇರ್ಲಿ, ನಿಮ್ಮಪ್ಪ ಮನ್ಯಾಗ ಅದಾನೋ ಇಲ್ವೋ? ತಟಗರ ಸುಳಿ ಕಾಣಿಲ್ತು?”

“ಅವ್ರಿಗೆ ಹಗಲೂ ರಾತ್ರಿ ನಂದೇ ಚಿಂತಿ ಆಗ್ಯಾದ. ವಿಶೇಷ ಪೂಜೆ ಮಾಡ್ಸಿಕೊಂಡು ಬರ್ಲಿಕ್ಕೆ ಅಪ್ಪ, ಅಮ್ಮ ಇಬ್ರೂ ಮಂತ್ರಾಲಯಕ್ಕೆ ಹೋಗ್ಯಾರ.”

“ಹೌದಾ? ಪೂಜೆ, ಪುನಸ್ಕಾರ ಎಲ್ಲಾ ಅಗ್ಲಿಬಿಡು. ಒಟ್ನಲ್ಲಿ ನಿನ್‌ ಬಾಳು ಸುದ್ದಾದ್ರೆ ಸಾಕು. ಹೌದು, ಹೀಂಗೇ ಬರೀ ಮಾತಾಡಿ ಕಳ್ಸುತೀಯಾ ಅಥವಾ ಒಂದ್ಕಪ್‌ ಚಾನಾದ್ರೂ ಕುಡುಸ್ತೀಯಾ?”

“ಅಂಕಲ್, ಹಂಗ್‌ ಅನಬ್ಯಾಡ್ರಿ…. ಮಾತಿನಾಗೆ ಮರ್ತಿದ್ದೆ. ಎರ್ಡು ಮಿನಿಟಿನಾಗ ಚಾ ತರ್ತೇನಿ,” ಎಂದೆನ್ನುತ್ತಾ ಕುಲಕರ್ಣಿ ರಾಘವೇಂದ್ರರಾವ್ ‌ರ ಮಗಳು ಇಂದಿರಾ ಅಡುಗೆಮನೆಗೆ ಹೆಜ್ಜೆ ಹಾಕಿದಳು. ಅವಳನ್ನೇ ದಿಟ್ಟಿಸುತ್ತಾ ಚಂದ್ರಪ್ಪಗೌಡರು ಕುಳಿತುಕೊಂಡರು.

ಐವತ್ತು ವರ್ಷದ ಚಂದ್ರಪ್ಪಗೌಡರಿಗೆ ಮತ್ತು ರಾಘವೇಂದ್ರ ರಾವ್ ಕುಲಕರ್ಣಿಯವರಿಗೆ ಚಿಕ್ಕವರಿದ್ದಾಗಿನಿಂದಲೂ ಚಲೋ ದೋಸ್ತಿ. ಇವ್ರು ಅವರ ಮನೆಗೆ ಹೋಗೋದು, ಅವ್ರು ಇವರ ಮನೆಗೆ ಬರೋದು ಇದ್ದೇ ಇರುತ್ತಿ.

`ಈ ಹುಡುಗಿ ಮದುವೆಯಾಗಿ ಆರು ತಿಂಗಳೂ ಆಗಿಲ್ಲ. ಸಂಸಾರದ ಗಾಲಿಗಳೆರಡಕ್ಕೂ ತಾಳಮೇಳವಿಲ್ಲ. ತವರುಮನಿ ಸೇರಿ ಹದಿನೈದು ದಿನಗಳಾಗಿರಬೇಕು. ಈಕಿಗಿನ್ನೂ ಇಪ್ಪತ್ತೈದಿರಬೇಕು. ಇಂದಿರಾ ತುಸು ಕಪ್ಪೇ. ಪೀಚುಪೀಚಾಗಿದ್ದಳು. ಈಗೀಗ ತುಸು ಮೈತುಂಬಿಕೊಂಡು ಕಳೆಕಳೆಯಾಗಿ ಕಾಣುತ್ತಿದ್ದಾಳೆ. ಇವಳ ಗಂಡ ಪವನನಿಗೆ ಒಂದು ಜೆರಾಕ್ಸ್ ಅಂಗಡಿ ಇದೆ. ಕುಡಿತದ ಚಟ ಇವನನ್ನು ಬಿಡವೊಲ್ಲದು. ಯಾಗಲೂ ಅದೇನೋ ಒಂಥರ ಗುಂಗಿನಲ್ಲಿರುತ್ತಾನೆ. ನಾನೂ ಇವನ ಬಗ್ಗೆ ತುಸು ಕೇಳಿದ್ದೆ. “ರಾಘಪ್ಪನಿಗೆ ಹೇಳಿದೆ, `ಗೌಡಾ, ಇಂದೂಗೆ ಆಗಲೇ ಇಪ್ಪತ್ನಾಲ್ಕು ದಾಟಿದೆ. ವಯಸ್ಸು ಏರಿದಂತೆ ಮದುವೆ ಕಷ್ಟ ಆಗುತ್ತೆ. ನಿನಗೆ ಕನ್ಯಾ ಸೆರೆ ಕಳೆದುಕೊಳ್ಳಬೇಕಿದೆ. ರಾಯರ ಕೃಪೆಯಿಂದ ಎಲ್ಲವೂ ಸರಿ ಹೋಗುತ್ತೆ,’ ಅಂತ. ರಾಘಪ್ಪ ರಾಗ ತೆಗೆಯುತ್ತಿದ್ದಾಗ, `ನಿನ್ನ ಈ ಕರಿಮೂತಿ ಮಗಳಿಗೆ ಗಂಡು ಸಿಗೋದು ಕಷ್ಟ. ನಾನೇ ಇವಳನ್ನು ಕಟ್ಟಿಕೊಳ್ಳಬೇಕಾಗುತ್ತೆ,’ ಅಂತ ಇವಳು ಚಿಕ್ಕವಳಿದ್ದಾಗಿನಿಂದ ನಾನು ತಮಾಷೆ ಮಾಡುತ್ತಿದ್ದುದನ್ನು ನೆನಪಿಸುತ್ತಿದ್ದೆ.

“ಆತ ಹೇಳಿದ್ದು ಸರೀನೇ ಇತ್ತು. ಬಹಳಷ್ಟು ವರಗಳಿಗೆ ತೋರಿಸಿದ್ದರೂ ನೋಡಿದವರೆಲ್ಲರೂ ಏನಾದರೂ ನೆಪವೊಡ್ಡಿ ಮೂಗು ಮುರಿಯುವವರೇ. ಹೀಗೆ ವಯಸ್ಸು ಏರುತ್ತಾ ಹೋಗಿತ್ತು. ಕಂಕಣ ಬಲ ಕೂಡಿ ಬಂದಾಗ ಇವಳಿಗೆ ಆಗಲೇ ಇಪ್ಪತ್ತೈದು ಸಮೀಪಿಸುತ್ತಿತ್ತು,’ ಚಹಾದ ಕಪ್ಪಿನೊಂದಿಗೆ ಇಂದಿರಾ ಬಂದಾಗ ಗೌಡರ ಯೊಚನಾ ಲಹರಿಗೆ ತಡೆಬಿತ್ತು. ನವಿಲಿನ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದ ಇಂದಿರಾ ಮೋಹಕವಾಗಿ ಕಂಡಳು.

“ಅಂಕಲ್ ಚಹಾ….” ಇಂದಿರಾ ಉಲಿದಾಗ ಅವಳ ಚೆಲುವನ್ನು ಕಣ್ಮನಗಳಲ್ಲಿ ತುಂಬಿಕೊಳ್ಳುತ್ತಿದ್ದ ಗೌಡರು ಗಲಿಬಿಲಿಯಿಂದಲೇ ಚಹಾದ ಕಪ್‌ ನ್ನು ಕೈಗೆತ್ತಿಕೊಂಡರು.

“ಚಹಾ ತುಂಬಾ ರುಚಿಯಾಗಿದೆ. ನಾನಿನ್ನು ಬರ್ತೀನಿ,” ಚಹಾ ಕುಡಿಯುದ ಮುಗಿಸಿ ಗೌಡರು ಅಲ್ಲಿಂದ ಹೊರಟರು.

“ಅಂಕಲ್, ನಾನು ಹೇಳಿದ್ದು ಮರೀಬ್ಯಾಡ್ರಿ,” ಎಂದು ಇಂದಿರಾ ಗೌಡರಿಗೆ ಮತ್ತೊಮ್ಮೆ ನೆನಪಿಸಿದಳು.

ಇಂದಿರಾಳಿಗೆ ತಿಳಿಸಿದಂತೆ ಚಂದ್ರಪ್ಪಗೌಡರು ನಾಲ್ಕೈದು ದಿನ ಬಿಟ್ಟು ಪವನನ ಊರಿಗೆ ಹೋದರು. ಗೆಳೆಯನ ಮನೆಯಲ್ಲಿ ಕುಳಿತಿದ್ದ ಗೌಡರು ಯಾರದೋ ಕೈಲಿ ಪವನನ್ನು ಕರೆದುಕೊಂಡು ಬರಲು ತಿಳಿಸಿದ್ದರು. ಅವನು ಮನೆಯಲ್ಲಿ ಇಲ್ಲವೆಂಬುದಷ್ಟೇ ಗೊತ್ತಾತು. ಅವನ ಖಾಸಾ ಗೆಳೆಯ ರಾಜೀವನನ್ನು ಕರೆಸಿ ಕೇಳಿದರು.

ಅಂಬಾ ಮಠದ ಜಾತ್ರೆಯಲ್ಲಿ ಪವನನಿಗೆ ಅದ್ಯಾರೋ ನಾಗಾ ಸಾಧುಗಳ ಪರಿಚಯವಾಗಿತ್ತಂತೆ. ಅವರ ಸಂಗಡ ಅಲ್ಲಿ ನಾಲ್ಕು ದಿನ ಇದ್ದು ಭಂಗಿ ಕೂಡ ಹೊಡೆದನಂತೆ. ಹಿಮಾಲಯ ಪರ್ತದ ತಪ್ಪಲಿನಲ್ಲಿ ನಾಗಾ ಸಾಧುಗಳ ಆಶ್ರಮವಿದೆಯಂತೆ. ಅವರು ನಿನ್ನೆ ಇಲ್ಲಿಂದ ಹೊರಡುವವರಿದ್ದಾರೆ ಎಂದು ಹೇಳುತ್ತಿದ್ದ. ತನಗೂ ಅವರೊಂದಿಗೆ ಹಿಮಾಲಯಕ್ಕೆ ಹೋಗಬೇಕೆಂಬ ಹಂಬಲವಿದೆ ಎಂದು ಹೇಳುತ್ತಿದ್ದ. ಅವನಿಗೂ ಆಧ್ಯಾತ್ಮದ ತೀವ್ರತರವಾದ ಒಲವಿತ್ತು. ನಿನ್ನೆ ಬೆಳಗ್ಗೆ ಜೆರಾಕ್ಸ್ ಅಂಗಡಿ ತೆಗೆದಿದ್ದ. ಮಧ್ಯಾಹ್ನ ಮುಚ್ಚಿದ್ದು ಇನ್ನೂ ತೆಗೆದಿಲ್ಲ. ಅವನೂ ಕಂಡಿಲ್ಲ. ಬಹುಶಃ ಇವನೂ ನಾಗಾ ಸಾಧುಗಳೊಂದಿಗೆ ಹೋಗಿರಬಹುದೇನೋ ಎಂಬ ಅನುಮಾನ ಅಥವಾ ಹೆಂಡತಿ ತವರುಮನೆಯಲ್ಲೇ ಇರುವುದರಿಂದ ಮಾವನ ಮನೆಗೂ ಹೋಗಿರಬಹುದು ಎಂದು ಅಂದುಕೊಂಡಿರುವೆ. ಇದು ವಿಷಯ ನೋಡಿ ಗೌಡ್ರೆ,’ ಎಂದು ತನಗೆ ತಿಳಿದಿದ್ದನ್ನು ಹೇಳಿದ್ದ.

ಊರಿಗೆ ಬರುತ್ತಲೇ ಗೌಡರು ಸೀದಾ ರಾಘಪ್ಪನ ಮನೆಗೇ ಹೋಗಿದ್ದರು. ರಾಘಪ್ಪನೂ ಮನೆಯಲ್ಲೇ ಇದ್ದ. ವಿಷಯವನ್ನು ಸೂಕ್ಷ್ಮವಾಗಿ ಆತನೊಬ್ಬನಿಗೆ ತಿಳಿಸಿದರು. `ಈಗಲೇ ಮನೆಯವರೆಲ್ಲರಿಗೆ ತಿಳಿಸುವುದು ಬೇಡ. ಪವನ್‌ ಅಲ್ಲಿಂದ ಒಂದೆರಡು ವಾರಗಳಲ್ಲಿ ಬರಬಹುದು. ಅಸರ ಮಾಡುವುದು ಬೇಡ,’ ಎಂದು ಗೆಳೆಯನಿಗೆ ತಾಕೀತು ಮಾಡಿದರು. ಗೌಡರ ಮಾತು ರಾಘಪ್ಪನಿಗೂ ಸಮಂಜಸ ಎನಿಸಿದ್ದರಿಂದ, `ಹಾಗೇ ಆಗಲಿ,’ ಎಂದ.

fir-vasant-laut-aaya-story1

ಆದರೆ ಪವನ್‌ ಊರಲ್ಲಿ ಇಲ್ಲದ್ದು ಸುದ್ದಿಯಾಗದೇ ಇದ್ದೀತೇ? ಮಗ ಮನೆಗೆ ಬರದಿದ್ದಾಗ, ಅವನ ತಾಯಿ ತಂದೆ ಬೀಗರ ಮನೆಗೆ ದೌಡಾಯಿಸಿದ್ದರು. ಆಗ ರಾಘಪ್ಪನ ಮನೆಯವರೆಲ್ಲರಿಗೂ ಸುದ್ದಿ ತಿಳಿಯಿತು. ಮನೆಯವರೆಲ್ಲರಿಗೂ ಗಾಬರಿ, ದುಃಖ, ನೂರಾರು ಯೋಚನೆಗಳು. ಸುದ್ದಿ ತಿಳಿದ ಇಂದಿರಾಳ ಮುಖದಲ್ಲೇನೂ ಅಂತಹ ಬದಸಾವಣೆ ಕಂಡು ಬರಲಿಲ್ಲ. ಹೆಚ್ಚಿಗೆ ಮಾತಾಡದೇ ಮೌನಕ್ಕೆ ಶರಣಾಗಿ ಮೌನಗೌರಿಯಂತಾದಳು. ಆಗ ಚಂದ್ರಪ್ಪಗೌಡರು ಮತ್ತೊಂದು ಸಾರೆ ರಾಘಪ್ಪನ ಮನೆಗೆ ಬಂದು ಮನೆಮಂದಿಗಳೆಲ್ಲರಿಗೂ ಸಮಾಧಾನ ಮಾಡಿ, `ಪುಣ್ಯ ಕ್ಷೇತ್ರಗಳ ದರ್ಶನ ಪಡೆಯಲು ಹೋಗಿರಬಹುದು. ಇಂದಲ್ಲ ನಾಳೆ ಬರುತ್ತಾನೆ,’ ಎಂದು ಧೈರ್ಯ ತುಂಬಿಹೋದರು. ಹೆಂಗಸರ ಮಧ್ಯದಲ್ಲಿದ್ದ ಇಂದಿರಾಳನ್ನು ಮಾತಾಡಿಸಲು ಆಗಲಿಲ್ಲ ಅವರಿಗೆ.

ಅಂದು ಇಂದಿರಾ ಸ್ನಾನ, ಪೂಜೆ, ಬೆಳಗಿನ ನಾಷ್ಟಾ ಮುಗಿಸುವಷ್ಟರಲ್ಲಿ ಹತ್ತು ಗಂಟೆಯಾಗಿತ್ತು. ಅಷ್ಟರಲ್ಲಿ ಇಂದಿರಾಳ ಮೊಬೈಲ್‌ರಿಂಗಣಿಸಿತು. ಗೌಡರ ಎರಡನೇ ಮಗ ಸಂಜಯನ ಕರೆಯಾಗಿತ್ತು. ಅವಳ ಎದೆಯಲ್ಲಿ ಒಂಥರ ಅಳುಕಿನ ಅನುಭವ. ಅವಸರದಿಂದ ಕರೆಯನ್ನು ಸ್ವೀಕರಿಸಿದಳು.

“ಆಂಟಿ, ನಾನು ಸಂಜಯ್‌ ಮಾತಾಡುತ್ತಿರುವೆ. ನೀವು ಫ್ರೀಯಾಗಿದ್ದೀರಾ….?” ಮುನ್ನುಡಿ, ಬೆನ್ನುಡಿ ಇಲ್ಲದೇ ನೇರವಾಗಿ ವಿಷಯದ ಪ್ರಸ್ತಾಪಕ್ಕೆ ಪೀಠಿಕೆ ಹಾಕುವಂತಿತ್ತು ಅವನ ಮಾತು.

“ಫ್ರೀಯಾಗಿ ಇದ್ದೇನೆ,” ಇಂದಿರಾಳ ಧ್ವನಿಯಲ್ಲಿ ಕೊಂಚ ನಡುಕವಿತ್ತು.

“ಒಂದು ಮುಖ್ಯವಾದ ವಿಷಯದ ಬಗ್ಗೆ ನಿಮ್ಮ ಜೊತೆಗೆ ಮಾತಾಡಬೇಕಿತ್ತು. ಅಣ್ಣ ಅಭಿಷೇಕ್‌ ನೊಂದಿಗೆ ನಿಮ್ಮಲ್ಲಿಗೆ ಬರಬೇಕೆಂದಿದ್ದೇನೆ ಅಥವಾ ನೀವೇ ಇಲ್ಲಿಗೆ…..”

“ನಾನೇ ಬರುತ್ತೇನೆ, ನಿಮಗೇಕೆ ತೊಂದರೆ….?”

“ಹಾಗಾದರೆ ಕಾರು ಕಳುಹಿಸಿಕೊಡುವೆ, ಬೇಗ ಬಂದುಬಿಡಿ.”

“ಗಾಡಿ ಬರುತ್ತಲೇ ಹೊರಡುವೆ,” ಇಂದಿರಾಳ ಮನಸ್ಸು ಗಲಿಬಿಲಿಯಲ್ಲಿ ಬಿದ್ದಿತು.

`ನನ್ನ, ಗೌಡರ ಸುದೀರ್ಘ 30 ವರ್ಷಗಳ ಸಂಬಂಧದ ಬೆಸುಗೆಯ ಕೊಂಡಿ ಕಳಚಿತು. ನನ್ನ ಬಾಳಿನ ಬೆಳಕು ನನ್ನಿಂದ ಮರೆಯಾಯಿತು. ಗೌಡರು 80ನೇ ವಯಸ್ಸಿನಲ್ಲಿ ಕೈಲಾಸವಾಸಿಗಳಾಗಿ ನನ್ನನ್ನು ಒಂಟಿಯಾಗಿ ಮಾಡಿಬಿಟ್ಟರು. ಉತ್ತರಾದಿ ಕ್ರಿಯೆಗಳು ಸಾಂಗವಾಗಿ ನೆರವೇರಿ ವಾರವಾಗಿತ್ತು. ಗೌಡರು ಇದ್ದಾಗ ಒಂದು ಸಾರೇನೂ ಈ ಹುಡುಗರು ನನ್ನ ಜೊತೆಗೆ ಮಾತಾಡಿಲ್ಲ. ಈಗ ಅದೇನಂತಹ ಜರೂರಿ ಕೆಲಸ….? ಅಪ್ಪ ಇದ್ದಿದ್ದರೆ ಅವರನ್ನಾದರೂ ಜೊತೆಗೆ ಕರೆದುಕೊಂಡು ಹೋಗಬಹುದಾಗಿತ್ತು.

`ಅಪ್ಪ ಗೌಡರಿಗಿಂತ 8 ವರ್ಷ ಮೊದಲೇ ವೈಕುಂಠ ಸೇರಿಕೊಂಡುಬಿಟ್ಟರಲ್ಲಾ….? ಅಮ್ಮನನ್ನು ಜೊತೆಗೆ ಕರೆದುಕೊಂಡು ಹೋದರೆ ಹೇಗೆ? ಆಕೆಗೆ ಹೊರಗಿನ ವ್ಯವಹಾರವಾದರೂ ಏನು ಗೊತ್ತಿದೆ? ತನ್ನ ನೆರಳಿಗೆ ಅಂಜಿ ಬಾಳುವವಳು ಆಕೆ. ಸುಮ್ಮನೇ ಆಕೆಗೇಕೆ ತ್ರಾಸು? ಬೇಡ, ನಾನೊಬ್ಬಳೇ ಹೋಗುವುದು ಒಳ್ಳೆಯದು,’ ಎಂದು ಇಂದಿರಾ ಮನದಲ್ಲಿ ಅಂದುಕೊಳ್ಳುವಷ್ಟರಲ್ಲಿ ಹೊರಗಡೆ ಕಾರಿನ ಹಾರ್ನ್‌ ಶಬ್ದವಾಯಿತು.

ತಾಯಿ ಭಾಗೀರತಿ ಬಾಯಿಗೆ ಸೂಕ್ಷ್ಮವಾಗಿ ವಿಷಯ ತಿಳಿಸಿ, ಕಾರನ್ನು ಏರಬೇಕು ಎಂದವಳಿಗೆ ಏನೋ ನೆನಪಾಗಿ ಅಲ್ಮೇರಾ ತೆಗೆದು ಕವರೊಂದನ್ನು ಬ್ಯಾಗಿನಲ್ಲಿಟ್ಟುಕೊಂಡು ಹೊರಟಳು.

ಇಂದಿರಾಳ ತಂದೆಯ ಮನೆಯಿಂದ ಗೌಡರ ಮನೆಗೆ ಸುಮಾರು 1 ಕಿ.ಮೀ ದೂರ. ಪರಿಚಯವಿದ್ದ ಕಾರ್‌ ಡ್ರೈವರ್‌ ಹಮೀದ್ ಆತ್ಮೀಯತೆಯಿಂದ ಮಾತಾಡಿಸಿದ. ಉಭಯ ಕುಶೋಪರಿಯ ನಂತರ ಮೌನದಲ್ಲಿ ಸಾಗಿತು ದಾರಿ. ಇಂದಿರಾಳ ಮನಸ್ಸು ನೆನಪಿನ ಕೋಟೆಯನ್ನು ಭೇದಿಸತೊಡಗಿತು.

ನನ್ನ ಗಂಡ ಪವನ್‌ ಕಾಣೆಯಾದ ನಂತರ ಅಮ್ಮ ಅಪ್ಪನಿಗೆ ನನ್ನದೇ ಚಿಂತೆಯಾಗಿತ್ತು. ನನ್ನ ಆರನೇ ಇಂದ್ರಿಯ, `ಇಂದೂ, ಅವನು ಬರುವುದಿಲ್ಲ. ನಿನ್ನ ದಾರಿ ನಿನಗೆ, ಅವನ ದಾರಿ ಅವನಿಗೆ ಅಷ್ಟೇ ಅಂತ ತಿಳಿದುಕೋ. ನಿನ್ನ ಭವಿಷ್ಯ ನೀನು ರೂಪಿಸಿಕೊಂಡರೆ ಜಾಣೆಯಾಗುವೆ. ಬಂದರೂ ಅವನಿಂದ ನಿನಗೆ ಉಪಕಾರವಾದೀತೇ….? ನಿನಗೆಲ್ಲ ತಿಳಿದಿದೆ. ಒಂದು ಗಟ್ಟಿ ನಿರ್ಧಾಕ್ಕೆ ಬಂದುಬಿಡು,’ ಎಂದು ಆಗಾಗ ಹೇಳುತ್ತಿತ್ತು.

fir-vasant-laut-aaya-story2

ಗೌಡರು ಆಗಾಗ ಬಂದು ನನಗೆ, ಅಪ್ಪ ಅಮ್ಮನಿಗೆ ಸಮಾಧಾನದ ಮಾತುಗಳನ್ನು ಹೇಳಿ ಹೋಗುತ್ತಿದ್ದರು. ಬೆಂಗಳೂರು ಮತ್ತು ಹೈದರಾಬಾದ್‌ ನಲ್ಲಿದ್ದ ಅಣ್ಣ, ಅತ್ತಿಗೆಯರೂ ಬಂದು ನಾಲ್ಕು ದಿನ ಜೊತೆಗಿದ್ದು ನನಗೆ ಸಮಾಧಾನ, ಸಾಂತ್ವನ ಹೇಳಿ ಹೋದರು. ಅಮ್ಮ ಒಂಥರ ಅಂತರ್ಮುಖಿಯಾದಳು. ಅಪ್ಪ ತುಸು ಹೆಚ್ಚಿಗೇ ವಯಸ್ಸಾದವರಂತೆ ಕಂಡು ಬರತೊಡಗಿದರು.

ಆ ಶುಕ್ರವಾರ ಅಪ್ಪ, ಅಮ್ಮ ಕಲ್ಲೂರಿನ ಮಹಾಲಕ್ಷಿದೇವಿಗೆ ವಿಶೇಷ ಪೂಜೆ ಮಾಡಿಸಲು ಹೋಗಿದ್ದರು. ಶಿವರಾಮ ಕಾರಂತರ `ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ಕೈಯಲ್ಲಿ ಹಿಡಿದುಕೊಂಡು ಪುಟಗಳನ್ನು ತಿರುಗಿಸುತ್ತಿದ್ದೆನಾದರೂ ಮನಸ್ಸು ನನ್ನ ಅತಂತ್ರ ಜೀವನದ ಬಗ್ಗೆಯೇ ಯೋಚಿಸುತ್ತಿತ್ತು. ಅಷ್ಟರಲ್ಲಿ ಚಂದ್ರಪ್ಪಗೌಡರ ಸವಾರಿ ಅತ್ತ ಬಂದಿತ್ತು.

“ಬನ್ನಿ ಅಂಕಲ್ ಬನ್ನಿ,” ಮುಖದಲ್ಲಿ ನಗೆಯ ಮುಖವಾಡ ಧರಿಸಿಕೊಂಡು ಅವರನ್ನು ಸ್ವಾಗತಿಸುತ್ತಾ ಅಪ್ಪ, ಅಮ್ಮ ಕಲ್ಲೂರಿಗೆ ಹೋದ ಬಗ್ಗೆ ತಿಳಿಸಿದೆ.

“ಹೌದೇ….?” ಎಂದವರು ಅವಳ ಮುಖ ನೋಡಿದರು.

“ಪರವಾಗಿಲ್ಲ ಅಂಕಲ್, ಬನ್ನಿರಿ….”

“ಇಂದಿರಾ, ಮನಸ್ಸಿಗೆ ತುಂಬಾ ಹಚ್ಚಿಕೊಂಡಿರುವ ಹಾಗಿದೆ….?” ತದೇಕಚಿತ್ತದಿಂದ ನನ್ನನ್ನೇ ದಿಟ್ಟಿಸುತ್ತಾ ಗೌಡರು ಕೇಳಿದರು.

“ಅಂಕಲ್, ನನ್ನ ಬದುಕಂತೂ ಕಳೆಗಟ್ಟಲಿಲ್ಲ, ನಾನೊಬ್ಬ ನತದೃಷ್ಟೆ. ಯಾವ ಜನ್ಮದ ಪಾಪದ ಫಲವೋ ಏನೋ? ಈಗ ಅನುಭವಿಸುತ್ತಿದ್ದೇನೆ. ಯಾವ ಪುರುಷಾರ್ಥಕ್ಕಾಗಿ ನಾನು ಬದುಕಿರಬೇಕು?” ಎನ್ನುವಷ್ಟರಲ್ಲಿ ಭಾವೋದ್ವೇಗಕ್ಕೆ ಒಳಗಾಗಿದ್ದೆ. ದುಃಖ ಉಮ್ಮಳಿಸಿ ಬಂದಿತ್ತು. ಸೊರ ಸೊರ ಅಂತ ಮೂಗೊರೆಸಲು ಮುಂದಾಗಿದ್ದೆ.

“ಇಂದ್ರಾ, ಬಾ ಇಲ್ಲಿ,” ಎಂದು ಗೌಡರು ನನ್ನನ್ನು ತಮ್ಮ ಹತ್ತಿರ ಕರೆದಿದ್ದರು. ಅವರು ಮೊದಲ ಸಾರೆ `ಇಂದ್ರಾ’ ಎಂದು ಕರೆದಿದ್ದರು. ಸನ್ನಿಗೆ ಒಳಗಾದವಳಂತೆ ಅವರ ಹತ್ತಿರ ಹೋಗಿದ್ದೆ. ಸಮೀಪಿಸುತ್ತಿದ್ದಂತೆ ತಮ್ಮ ಕೈಗಳಿಂದ ನನ್ನ ಕಣ್ಣೀರು ತೊಡೆದು ಮುಂಗುರುಳು ನೇವರಿಸಿ ತಲೆಗೂದಲು ಮತ್ತು ಬೆನ್ನಿನ ಮೇಲೆ ಬೆರಳಾಡಿಸುತ್ತಾ ಸಂತೈಸತೊಡಗಿದರು.

`ಹಾಗೇ ಅವರು ನನ್ನನ್ನು ತಮ್ಮ ಎದೆಯೊಳಗೆ ಸೇರಿಸಿಕೊಂಡಿದ್ದರೆ ಚೆಂದಾಗಿತ್ತೇನೋ?’ ಎಂದು ನನ್ನ ಮನಸ್ಸು ಬಯಸುತ್ತಿತ್ತು. ನನ್ನ ಮನದಾಳದ ತುಡಿತ, ಹಂಬಲ ಅವರ ಹೃದಯದ ಅರಿವಿಗೆ ಬಂತೇನೋ ಎಂಬಂತೆ ಗೌಡರು ನನ್ನನ್ನು ಬಿಗಿದಪ್ಪಿಕೊಂಡರು. ನಾನು ಖುಷಿಯಿಂದ ಸಂಭ್ರಮಿಸಿದೆ. ಬಿಗಿದಪ್ಪಿಕೊಂಡಿದ್ದರು ನನ್ನ ಮುಖನ್ನೆತ್ತಿ ನನ್ನ ಕಣ್ಣುಗಳಲ್ಲಿ ತಮ್ಮ ದೃಷ್ಟಿ ನೆಟ್ಟು, “ಇಂದೂ, ಯಾರಿದ್ದರೂ, ಇಲ್ಲದಿದ್ದರೂ ಜೀವನ ನಿಲ್ಲುವುದೇ ಇಲ್ಲ. ಪಶ್ಚಿಮ ಘಟ್ಟದ ನದಿಗಳಂತೆ ನಿರಂತರವಾಗಿ ಹರಿಯುತ್ತಲೇ ಇರುತ್ತದೆ. ಈ ಪರಿಯಾಗಿ ಭಾವುಕಳಾಗುವುದು ಸರಿಯಲ್ಲ, ಬೇಸರಿಸಿಕೊಳ್ಳುವುದೂ ಬೇಡ, ಚಿಂತಿಸಬೇಡ, ನಾನಿದ್ದೇನೆ,” ಎನ್ನುತ್ತಾ ಗೌಡರು ನನ್ನ ಮೊಗನ್ನು ತಮ್ಮ ಬೊಗಸೆಯಲ್ಲಿ ತೆಗೆದುಕೊಂಡು ಮನಸಾರೆ ಮುದ್ದಿಸತೊಡಗಿದರು.

ನಾನು ಯಾವುದನ್ನೂ ನಿರಾಕರಿಸಲಿಲ್ಲ. ಮನಸ್ವೀ ಸ್ವೀಕರಿಸಿದೆ. ಅವರ ಮುದ್ದಾಟ ಹಣೆ, ಕೆನ್ನೆಗಳಿಂದ ತುಟಿಗಳನ್ನೂ ಮುಟ್ಟಿ ಕೊರಳು, ಕುತ್ತಿಗೆಯಿಂದ ಕೆಳಗಿಳಿದು ಎದೆಯ ಶಿಖರಗಳಿಗೆ ತಲುಪಿತ್ತು. ಉಬ್ಬರವಿಳಿತದಿಂದ ಕೂಡಿದ ಮಹಾಸಾಗರದಂತೆ ಸುಪುಷ್ಟವಾದ ನನ್ನೆದೆ ಏರಿಳಿಯತೊಡಗಿತ್ತು. ಪ್ರತಿಭಟಿಸುವ ಮನಸ್ಸಾಗಲಿಲ್ಲ. ನನ್ನ ಮೌನ ಗೌಡರಿಗೆ ಉತ್ತೇಜನ ನೀಡಿತ್ತೇನೋ….? `ಮೌನಂ ಸಮ್ಮತಿ ಲಕ್ಷಣಂ’ ಎಂದಲ್ಲವೇ? ಪ್ರೀತಿಯ ಆಟ ಭೋರ್ಗರೆದಿತ್ತು. ಶೃಂಗಾರ ಕಾವ್ಯಕ್ಕೆ ಮುನ್ನುಡಿ ಬರೆದಿತ್ತು. ಅವರು ಮಳೆಗಾಲದ ನದಿಯಂತಾದರೆ ನಾನು ಕಡಲಾದೆ. ಭೋರ್ಗರೆಯುತ್ತ ನನ್ನ ಹೇರಿದ್ದರು. ಮಳೆಯಲ್ಲಿ ಮಿಂದು ನಳನಳಿಸುವ ಭೂದೇವಿಯಂತಾಗಿದ್ದೆ.

“ಇಂದೂ, ಬೇಸರವಿಲ್ಲ ತಾನೇ…..?” ಶಾಂತವಾಗಿದ್ದ ನನ್ನೆದೆಯಲ್ಲಿ ಮುಖವಿರಿಸಿ ಮೌನದ ಅಬ್ಬರ ಕದಡಿ ಮೆಲ್ಲಗೇ ಉಲಿದಿದ್ದರು.

“ಹಾಗೆ ಅನಿಸಿದ್ದರೆ ಪ್ರತಿಭಟಿಸುತ್ತಿದ್ದೆನಲ್ಲವೇ….? ಬೇಕಾಗಿತ್ತು, ಸಹಕರಿಸಿದೆ, ಅನುಭವಿಸಿದೆ, ಸಂಭ್ರಮಿಸಿದೆ,” ಎಂದೆ.

“ಹೌದೇ….? ಒಳ್ಳೆಯದಾಯಿತು. ಇರಲಿ, ಇದು ನಿನಗೆ ಮೊದಲ ಅನುಭವವೇ….? ಮದುವೆಯಾದ ಮೇಲೆ ಆರು ತಿಂಗಳವರೆಗೆ ನೀನು ನಿನ್ನ ಗಂಡನ ಜೊತೆಗೆ ಇದ್ದೆಯಲ್ಲ, ಈಗ ನಮ್ಮಿಬ್ಬರ ಮಧ್ಯೆ ಆಯಿತಲ್ಲ…. ಆವಾಗ ಅದು ಆಗಲಿಲ್ಲವೇ….?” ಅನುಮಾನದ ಎಳೆ ಇವತ್ತು ಅವರ ಮಾತಿನಲ್ಲಿ.

“ಅದ್ಹೇಗೆ ಗೊತ್ತಾಯಿತು….?”

“ಇಂದು, ಯಾವುದು ತಾಜಾ, ಯಾವುದು ಹಳಸಿದ್ದು, ಯಾವುದು ಬಳಸಿದ್ದು ಎಂದು ಎಲ್ಲ ಗೊತ್ತಾಗುತ್ತೆ ನನಗೆ….”

“ಇಂಥಹದೊಂದು ಸವಿಗಳಿಗೆ ನನ್ನ ಜೀವನದಲ್ಲಿ ಬರಲಿಕ್ಕಿಲ್ಲವೆಂದು ಅಂದುಕೊಂಡವರಿಗೆ ಅದು ತಾನಾಗಿಯೇ ಒದಗಿ ಬಂದಿದ್ದಕ್ಕೆ ಹೃದಯ ಸಂತಸದಲ್ಲಿ ತೇಲಾಡುವಂತಾಗಿದೆ.”

“ಸರಿ, ವಿವರ ತಿಳಿಸು.”

“ದೊರೆಗಳೇ, ಏನಂತ ಹೇಳಲಿ ನನ್ನ ಕರ್ಮಕಾಂಡ….? ಮೊದಲ ರಾತ್ರಿಯ ದಿನವೇ ನನ್ನ ಗಂಡನ ಬಂಡವಾಳ ಬಯಲಿಗೆ ಬಂದಿತ್ತು. ಕುಡಿತದ ಚಟದಿಂದ ಅವನ ಪುರುಷತ್ವ ನಾಶವಾಗಿದ್ದು ಸಾಬೀತಾಗಿತ್ತು. `ಇಂದಿರಾ, ನನಗೆ ಮದುವೆಯ ಬಗ್ಗೆ ಆಸಕ್ತಿಯೇ ಇರಲಿಲ್ಲ. ತಾಯಿ ತಂದೆಯರ ಒತ್ತಾಯಕ್ಕೆ ಹ್ಞೂಂ ಅಂದಿದ್ದೆ. ಪತ್ರಿಕೆಗಳಲ್ಲಿ ಬರುವ ಜಾಹೀರಾತಿನಂತೆ ಏನೇನೋ ಔಷಧಿಗಳನ್ನು ತರಿಸಿ ತೆಗೆದುಕೊಂಡೆ. ಏನೂ ಪ್ರಯೋಜನವಾಗಲಿಲ್ಲ. ದಯವಿಟ್ಟು ಈ ವಿಷಯವನ್ನು ಹೊರಗೆಡಬೇಡ. ನಿನಗೆ  ಬೇರೆಯವರೊಂದಿಗೆ ಸಂಬಂಧ ಬೆಳೆಸುವ ಇಚ್ಛೆ ಇದ್ದರೆ ನನ್ನ ತಕರಾರಿಲ್ಲ. ಆದರೆ ನಾನು ಷಂಡ ಎನ್ನುವುದನ್ನು ಬಹಿರಂಗ ಪಡಿಸಬೇಡ. ನಿನ್ನ ಕಾಲು ಹಿಡಿದು ಬೇಡಿಕೊಳ್ಳುವೆ,’ ಎನ್ನುತ್ತಾ ಪವನ್‌ ನನ್ನ ಕಾಲುಗಳನ್ನು ಹಿಡಿದುಕೊಂಡ.

“ವಿಧಿಯಾಟವನ್ನು ನಾನು ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ. ನಿರಾಶಳಾಗಿ ಮೌನಕ್ಕೆ ಶರಣಾಗಿದ್ದೆ. ಅವನ ಮರ್ಯಾದೆ ಕಾಪಾಡುವುದಕ್ಕೋಸ್ಕರ ನಾನು ಯಾರ ಹತ್ತಿರ ಬಾಯಿ ಬಿಟ್ಟಿರಲಿಲ್ಲ. ಕುಡಿತದ ಚಟದಿಂದ ದೂರಾಗಿ ಸಹಜ ಮನುಷ್ಯನಾಗು ಎಂದು ಅವನ ಬಳಿ ದಿನನಿತ್ಯ ಬೇಡಿಕೊಳ್ಳುತ್ತಿದ್ದೆ. ನನ್ನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡಲಿಲ್ಲ. ನಿಮ್ಮಿಂದಲೂ ಹೇಳಿಸಿದೆ, ಅದೇನೋ ಗೊತ್ತಿಲ್ಲ, ನನ್ನ ಲೈಂಗಿಕ ಸಾಮರ್ಥ್ಯ ಮರಳಿ ಪಡೆಯುವುದು ಸಾಧ್ಯವಿಲ್ಲವೇನೋ ಎಂಬಂತೆ ತಣ್ಣಗಿರುತ್ತಿದ್ದ.

“ಅವನಲ್ಲಿ ಲೈಂಗಿಕಾಸಕ್ತಿ ಕೆರಳಿಸಲು ಶೃಂಗಾರ ಕಾವ್ಯದ ಪುಸ್ತಕಗಳನ್ನು ಓದಲು, ನೀಲಿ ಚಿತ್ರಗಳನ್ನು ನೋಡಲು ಪ್ರಚೋದಿಸಿ ಅದನ್ನೂ ಪ್ರಯತ್ನಿಸಿದೆ. ಆದರೆ ಸ್ವಲ್ಪವೂ ಸುಧಾರಣೆ ಕಂಡುಬರಲಿಲ್ಲ. ಕೊನೆಗೆ ನನಗೆ ಒಂಟಿ ಜೀವನ ಕರುಣಿಸಿ, ಎಲ್ಲಿಗೋ ಹೋಗಿಬಿಟ್ಟ,” ನನ್ನ ಕಣ್ಣೀರು ಕೆನ್ನೆಯ ಮೇಲೆ ಇಳಿಯಿತು.

“ಅರೇ, ಈಗಷ್ಟೇ ಭಂಡ ಧೈರ್ಯದಿಂದ ಈ ವಯಸ್ಸಾದವನನ್ನು ಸೇರಿದಾಕೆ ನೀನೇನಾ….? ನಾನಿಲ್ವಾ ನಿನಗೆ….?”

“ಏನೋ ದುಃಖ ಬಂತು, ಕಣ್ಣೀರೂ ಬಂತು. ಆಯಿತು, ಇನ್ಮುಂದೆ ನೀವಿದ್ದೀರಲ್ಲ…..?”

“ಹೌದು…. ನಿನ್ನ ಅಪ್ಪ ಅಮ್ಮನಿಗೆ ಹೇಗೆ ಹೇಳುವಿ…..?” ಎಂದು ಕೇಳಿದರು ಗೌಡರು.

“ಅಮ್ಮ ಅಪ್ಪನಿಗೆ ಹೇಳುವುದು ನಿಮಗೇ ಬಿಟ್ಟಿದ್ದು. ನಾನೇಕೆ ಚಿಂತಿಸಲಿ? ಇನ್ಮುಂದೆ ನಾನು ನಿಮಗೆ ಅಂಟಿಕೊಂಡೇ ಇರುವವಳು ಅಷ್ಟೆ,” ಎನ್ನುತ್ತಾ ಅವರನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾ, “ಚಹಾ ಮಾಡಿಕೊಂಡು ಬರಲೇ….?” ಎಂದು ಕೇಳಿದೆ.

“ಅಮೃತವನ್ನೇ ಉಣ ಬಡಿಸುತ್ತಿರುವಿ. ಜುಜುಬಿ ಚಹಾ ಏಕೆ ಇಂಥಹ ಸಮಯದಲ್ಲಿ,” ಎನ್ನುತ್ತಾ ಗೌಡರು ಮೀಸೆ ತಿರುವುತ್ತಾ ಹೇಳಿದ್ದು ಕೋಗಿಲೆ ಕುಹೂ ಎಂದಂತಾಗಿ ತನುಮನಗಳು ಮತ್ತೊಂದು ಶೃಂಗಾರ ಕಾವ್ಯಕ್ಕೆ ಮುನ್ನುಡಿ ಬರೆದಿದ್ದವು. ಚೆಲ್ಲಾಟದ ತೃಪ್ತಿಯ ಹೊಳೆಯಲ್ಲಿ ಈಜಾಡಿದೆವು.

ಮನೆಯಿಂದ ಹೊರಡುವಾಗ ಮನಸಾರೆ ಮುದ್ದಿಸುತ್ತಾ, ಬೇಡವೆಂದರೂ, “ಇರಲಿ ಉಪಯೋಗಕ್ಕೆ ಬರುತ್ತೆ,” ಎನ್ನುತ್ತಾ ನೋಟಿನ ಕಂತೆಯೊಂದನ್ನು ಕೈಯಲ್ಲಿ ತುರುಕಿ ಹೋಗಿದ್ದರು.

ನನ್ನ ಮತ್ತು ಗೌಡರ ಮಧ್ಯೆ ಬೆಸೆದುಕೊಂಡಿದ್ದ ಸಂಬಂಧವನ್ನು ಗೌಡರೇ ಅಪ್ಪಾಜಿಗೆ ತಿಳಿಸಿದರು. ಅಮ್ಮನಿಗೆ ತಿಳಿಸಿ ಹೇಳಲು ವಿನಂತಿಸಿಕೊಂಡಿದ್ದರಂತೆ. ಇಬ್ಬರಿಂದಲೂ ಯಾವುದೇ ಪ್ರತಿರೋಧ ವ್ಯಕ್ತವಾಗದೇ ಇದ್ದುದರಿಂದ ನಮ್ಮ ಸಂಬಂಧಕ್ಕೆ ಯಾವುದೇ ಅಡ್ಡಿ ಆತಂಕಗಳು ಎದುರಾಗಲಿಲ್ಲ. ಸ್ಥಿತಪ್ರಜ್ಞರಂತೆ ಇದ್ದುಬಿಟ್ಟರು ಅಮ್ಮ ಅಪ್ಪ.

ಮುಂದಿನ ಕೆಲವು ದಿನಗಳಲ್ಲೇ ಮನೆಯ ಬಂಕದ ಮೇಲಿನ ಕೋಣೆ ಗೌಡರ ಮನದಿಚ್ಛೆಯಂತೆ ನವೀಕರಿಸಲ್ಪಟ್ಟಿತು. ಕೆಲವು ಪೀಠೋಪಕರಣಗಳೂ ಅಲಂಕರಿಸಲ್ಪಟ್ಟವು. ನನ್ನೊಂದಿಗೆ ಮಾತಾಡಲು ಒಂದು ಟೆಲಿಫೋನ್‌ ಸಹ ಬಂದಿತು. `ಮುಂದೆ ಹೇಗೋ ಏನೋ…? ನಿನ್ನ ಜೀವನಕ್ಕೆ ತೊಂದರೆಯಾಗಬಾರದು,’ ಎಂದು ಮನೆಯಲ್ಲೇ ಕುಳಿತಕೊಂಡು ಸೀರೆ ವ್ಯಾಪಾರ ಮಾಡಲು ಹಚ್ಚಿಕೊಟ್ಟರು. ಎಲ್ಲದಕ್ಕೂ ಗೌಡರದೇ ಹಣ.

ಅವರ ಸಲಹೆ ತುಂಬಾ ಸಮಯೋಚಿತ ಎನಿಸಿತು. ಆದರೆ ನನ್ನ ಉಪಜೀವನಕ್ಕೆ ಹಣವನ್ನು ಕೊಡುವುದನ್ನು ಅವರೆಂದೂ ನಿಲ್ಲಿಸಲಿಲ್ಲ ಎಂಬುದು ಬೇರೆ ಮಾತು. ನಾನು ದುಡಿದಿದ್ದು ಉಳಿತಾಯ ಆಯಿತು. ಬ್ಯಾಂಕ್‌ ನಲ್ಲಿ `ಇಂದಿರಾ ಗಂಡ ಚಂದ್ರಪ್ಪಗೌಡ’ ಎಂದು ನನಗೊಂದು ಖಾತೇನೂ ತೆಗೆಸಿದರು. ಊರಿನಲ್ಲಿದ್ದ ಅವರ ಮಾರ್ವಾಡಿ  ಗೆಳೆಯನ ದೊಡ್ಡ ಟೆಕ್ಸ್ ಟೈಲ್ಸ್ ಅಂಗಡಿಯಿಂದ ಹೋಲ್ ಸೇಲ್ ‌ದರದಲ್ಲಿ ಸೀರೆಗಳು ಸಿಗುವಂತೆ ವ್ಯವಸ್ಥೆ ಮಾಡಿದರು.

ನಾನು ಬೇಕಾದಾಗ ಆ ಅಂಗಡಿಗೆ ಹೋಗುತ್ತಿದ್ದೆ. ಬೇಕಿರುವ ಸೀರೆಗಳನ್ನು ಆರಿಸಿಕೊಳ್ಳುತ್ತಿದ್ದೆ. ಆಯ್ಕೆ ಮಾಡಿದ್ದನ್ನು ಅವರು ಪ್ಯಾಕ್ ಮಾಡಿ ಮನೆಗೆ ಕಳುಹಿಸುತ್ತಿದ್ದರು. ಒಂದು ತಿಂಗಳವರೆಗೆ ಸಾಲ ಸಿಗುತ್ತಿತ್ತು. ಸೀರೆ ಮಾರಿದ ಹಣದಲ್ಲಿ ಅವರಿಗೆ ಪೇಮೆಂಟ್‌ಮಾಡಿ ಮತ್ತೆ ಮತ್ತೆ ಖರೀದಿಸುತ್ತಿದ್ದೆ. ದಿನಗಳೆದಂತೆ ವ್ಯಾಪಾರದಲ್ಲಿ ಪರಿಣಿತಿ ಪಡೆದೆ. ಈಗ ವ್ಯಾಪಾರ ನಿರೀಕ್ಷೆ ಮೀರಿ ಅಭಿವೃದ್ಧಿ ಆಗತೊಡಗಿದೆ.

ವಾರದಲ್ಲಿ 2-3 ರಾತ್ರಿ ಗೌಡರು ನನ್ನೊಂದಿಗೆ ಕಳೆಯುತ್ತಿದ್ದರು. ನಮ್ಮಿಬ್ಬರ ಸಂಬಂದಕ್ಕೆ ಮೂರು ತಿಂಗಳು ತುಂಬಿದ್ದವೇನೋ. ಅಂದು ಅನಿರೀಕ್ಷಿತವಾಗಿ ಗೌಡಶಾನಿ ಸರ್ವಮಂಗಳಾ ದೇವಿಯಿಂದ ನನಗೆ ಬುಲಾವ್ ‌ಬಂದಿತ್ತು. `ಏನೋ ಗ್ರಹಚಾರ ಕಾದಿದೆ,’ ಎಂದು ಅಂಜಂಜುತ್ತಾ ಹೆಜ್ಜೆ ಹಾಕಿದ್ದೆ. ಹಾಲು ಬಣ್ಣದ ರೂಪವತಿ ಗೌಡಶಾನಿ ಕೈ ತೊಳೆದುಕೊಂಡು ಮುಟ್ಟಬೇಕು ಎಂಬಂತಿದ್ದರು.

“ಬಾರಾ ಹುಡುಗಿ ಬಾ, ಸಣ್ಣವಳಿದ್ದಾಗಿನಿಂದ ನಿನ್ನನ್ನು ನೋಡಿರುವೆನಾದರೂ ನೀನೇ ನನಗೇ ಸವತಿಯಾಗಿ ಬರುವಿ ಎಂದು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಗೌಡರ ಮುದ್ದಿನ ಕಿರಿ ರಾಣಿಯಾಗಿಬಿಟ್ಟೆ ನೀನು.” ಎಂದೆನ್ನುತ್ತಾ ಸ್ವಾಗತಿಸಿದ್ದರು.

ಅವರ ಮಾತಿನಲ್ಲಿ ಅಣಕವೋ, ಅಸೂಯೆಯೋ, ಹತಾಶೆಯೋ ಒಂದೂ ಸ್ಪಷ್ಟವಾಗಲಿಲ್ಲ. ನಿರ್ವಿಕಾರ ಭಾವದ ಮುಖದಲ್ಲಿ ತೇಜೋಮಾನ ಕಳೆಯಿತ್ತು. ಅವರೊಂದಿಗೆ ಮಾತಾಡಲು ನನ್ನಲ್ಲಿ ಧೈರ್ಯವೇ ಹುಟ್ಟಲಿಲ್ಲ. ಕೋಲೇ ಬಸವನಂತೆ ಸುಮ್ಮನೇ ಅವರೊಂದಿಗೆ ಹೆಜ್ಜೆ ಹಾಕಿದ್ದೆ.

“ಇಂದಿರಾ, ಗೌಡರ ಚರಿತ್ರೆಯ ಪುಟಗಳಲ್ಲಿ ನಿನ್ನಂತೆ ಬಹಳಷ್ಟು ಜನ ಹೆಂಗಸರ ಹೆಸರುಗಳಿರುವುದು ನಿನಗೂ ಗೊತ್ತಿರಬೇಕು. `ಹಾಲುಂಡ ಬಾಯಿಗೆ ಹುಳಿ ಮಜ್ಜಿಗೆ ಸೇರುವುದಿಲ್ಲವಂತೆ.’ ಆದರೆ ಇವರಿಗೆ ಹಾಲೂ ಬೇಕು, ಹುಳಿ ಮಜ್ಜಿಗೇನೂ ಬೇಕು. ಮನೆಯಲ್ಲೇ ಹಾಲಿನ ಹೊಳೆ ಹರಿಯುತ್ತಿದ್ದರೂ ಹೊರಗಿನ ಹುಳಿ ಮಜ್ಜಿಗೆಗೆ ಬಾಯಿ ಬಾಯಿ ಬಿಡುತ್ತಿದ್ದಾರೆ. ಇರಲಿ ಎಲ್ಲವೂ ದೈವೇಚ್ಛೆ ಎಂದುಕೊಂಡು ಸಮಚಿತ್ತದಿಂದ ಜೀವನ ಸಾಗಿಸುತ್ತಿದ್ದೇನೆ.

“ಹಿಂದಿನ ರಾಜ ಮಹಾರಾಜರಿಗೆ ಹಲವಾರು ಉಪಪತ್ನಿಯರು ಇರುತ್ತಿದ್ದಂತೆ, ಇವರಿಗೂ ಹಲವರು ಉಪಪತ್ನಿಯರು. ಕುರುಬರ ಓಣಿಯಲ್ಲಿ ಒಬ್ಬಾಕೆ, ಬ್ಯಾಡರ ಓಣಿಯಲ್ಲಿ ಇನ್ನೊಬ್ಬಾಕೆ, ಮುಸುಲರ ಓಣಿಯಲ್ಲಿ ಮಗದೊಬ್ಬಾಕೆ. ಈಗ ಬ್ರಾಹ್ಮಣರ ಓಣಿಯಲ್ಲಿ ನೀನೊಬ್ಬಾಕೆ ಇವರ ಪಟ್ಟಿಯಲ್ಲಿ ಸೇರಿಕೊಂಡುಬಿಟ್ಟೆವು.

“ತಲೆಗೂದಲು ನೆರೆಯಾಗಿದ್ದಾಗ ರತ್ನಾ ಎಂಬ ಕಿರಿ ವಯಸ್ಸಿನ ಹುಡುಗಿಯನ್ನು ತಂದಿದ್ದ ದೊರೆ ಕಂಪಿಲರಾಯನಂತೆ ಇವರೂ ತಮ್ಮ ಅರ್ಧ ವಯಸ್ಸಿನ ನಿನ್ನನ್ನು ಹಿಡಿದುಕೊಂಡಿದ್ದಾರೆ. ಏನೋ ಇಷ್ಟು ದಿನ ವಯಸ್ಸಿತ್ತು, ಹಾರಾಡಿದರು. ಆದರೆ ಈಗ ಐವತ್ತು ದಾಟಿದ್ದರೂ ಅದೇ ಮುಂದುವರಿದಿದೆ. ಇಂದಿರಾ, ನೀನು ಇವರ ಜೀವನ ಪ್ರವೇಶಿಸಿದ್ದಕ್ಕೆ ನನಗೇನೂ ಬೇಸರವಿಲ್ಲ. ಇನ್ಮುಂದೆ ಇವರು ಬೇರೆ ಹಕ್ಕಿಗಳನ್ನು ಹುಡುಕಿಕೊಂಡು ಹೋಗದಂತೆ ತಡೆಯಬೇಕು. ಇವರ ಜೀವನದಲ್ಲಿ ಬಂದಿರುವ ಹೆಣ್ಣುಗಳಲ್ಲಿ ನೀನೇ ಕೊನೆಯವಳಾಗಬೇಕು ಅಷ್ಟೇ. ಇದನ್ನು ಹೇಳುವುದಕ್ಕೇ ನಿನ್ನನ್ನು ಕರೆಸಿದ್ದು ಅಷ್ಟೆ,” ಎಂದು ಹೇಳಿ ಸುಮ್ಮನಾಗಿದ್ದರು ಗೌಡಶಾನಿ.

ಗೌಡಶಾನಿಯವರ ಮಾತು ಅಕ್ಷರಶಃ ನಿಜ ಆಗಿತ್ತು. ಮದುವೆ ವಯಸ್ಸಿನ ಮಕ್ಕಳು ಅವರಿಗಿದ್ದರೆಂದು ನನಗೂ ಚೆನ್ನಾಗಿ ಗೊತ್ತಿತ್ತು. ಅವರ ಹಿರಿ ಮಗನಿಗೆ ನನ್ನಷ್ಟೇ ವಯಸ್ಸಿರಬೇಕು. ಕಿರಿ ಮಗನಿಗೆ ಇಪ್ಪತ್ತೆರಡು, ಮಗಳಿಗೆ ಇಪ್ಪತ್ತಿರಬೇಕು.

“ಅಮ್ಮಾ… ನೀವು ಹೇಳಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತೇನೆ. ನನ್ನ ತಪ್ಪನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಿ….” ಎಂದೆನ್ನುತ್ತಾ ಅವರ ಪಾದಗಳನ್ನು ಹಿಡಿದು ಕ್ಷಮೆ ಕೇಳಿ ಅಲ್ಲಿಂದ ಹೊರಟಿದ್ದೆ.

ನಮ್ಮಿಬ್ಬರ ಸಂಬಂಧಕ್ಕೆ ಮೂರು ವರ್ಷಗಳ ಮೆರುಗು ತುಂಬಿದ್ದಾಗ ನಾನು ಗರ್ಭವತಿಯಾಗಿದ್ದೆ.

“ಇಂದೂ, ನಿನಗೆ ಮುಜುಗರವೆನಿಸಿದರೆ ತೆಗೆಸಿಬಿಡು. ನನ್ನದೇನೂ ಅಭ್ಯಂತರವಿಲ್ಲ. ಜಗದ ನಿಂದೆಯನ್ನು ಎದುರಿಸಲು ತಯಾರಿದ್ದರೆ ಮಾತ್ರ ನಮ್ಮಿಬ್ಬರ ಕರುಳಿನ ಕುಡಿಯನ್ನು ಬೆಳೆಸು,” ಎಂದು ತಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಿದ್ದರು ಗೌಡರು.

“ಮುಂದೆ ಬರುವುದೆಲ್ಲವನ್ನು ಎದುರಿಸುವ ಧೈರ್ಯ ತೆಗೆದುಕೊಂಡೇ ನಾನು ನಿಮ್ಮಲ್ಲಿ ಒಂದಾಗಿದ್ದು. ನಮ್ಮಿಬ್ಬರ ಕರುಳ ಬಳ್ಳಿ ಹಬ್ಬಲಿ ಎಂಬುದೇ ನನ್ನ ಮನದಿಚ್ಛೆ,” ಎಂದು ದಿಟ್ಟತನ ಪ್ರದರ್ಶಿಸಿದ್ದೆ. ಗಂಡು ಮಗು ಪೃಥ್ವಿಗೆ ತಾಯಿಯಾಗಿದ್ದೆ. ಗೌಡರ ಸಂತೋಷಕ್ಕೆ ಪಾರವೇ ಇರಲಿಲ್ಲ. ಪೃಥ್ವಿ ಬಿದಿಗೆಯ ಚಂದ್ರಮನಂತೆ ಬೆಳೆದ. ಶಾಲೆಗೆ ಸೇರಿದ. ಶಾಲೆಯ ರಿಜಿಸ್ಟರ್‌ ನಲ್ಲಿ ಪೃಥ್ವಿಗೆ ತಂದೆಯಾದರು ಗೌಡರು. ಶಾಲೆ, ಪಿಯು ಮುಗಿಸಿ ಎಂಜಿನಿಯರಿಂಗ್‌ ಕಾಲೇಜ್‌ ಸೇರಿಕೊಂಡ. ಖರ್ಚೆಲ್ಲವನ್ನೂ ಗೌಡರೇ ನೋಡಿಕೊಂಡರು. ಬಿಇ ಮುಗಿಸಿ ಬೆಂಗಳೂರಿನಲ್ಲಿ ಕೆಲಸಕ್ಕೂ ಸೇರಿಕೊಂಡ. ಮಗನ ಬೆಳವಣಿಗೆ ಗೌಡರಿಗೆ ತುಂಬಾ ಖುಷಿ ತಂದಿತ್ತು. ಪೃಥ್ವಿಯ ಮದುವೆಯ ಕನಸನ್ನೂ ಕಾಣುತ್ತಿದ್ದರು.

ಗೌಡಶಾನಿಯ ಇಚ್ಛೆಯಂತೆ ಗೌಡರು ಮತ್ತೆ ಹೊಸ ಹೆಣ್ಣಿನ ಕಡೆಗೆ ದೃಷ್ಟಿ ಹರಿಸಲಿಲ್ಲ. ನನ್ನೊಂದಿಗೇ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಈ ನಡುವೆ ಸುಮಾರು ಹತ್ತು ಲಕ್ಷಗಳ ಬ್ಯಾಂಕ್‌ ಠೇವಣಿ ನನ್ನ ಹೆಸರಿನಲ್ಲಿ ಮಾಡಿಸಿದ್ದಾರೆ. ಸೀರೆ ವ್ಯಾಪಾರ ಕೈ ಹಿಡಿದಿತ್ತು.

ಕಾರಿಗೆ ಬ್ರೇಕ್‌ ಹಾಕಿ ನಿಲ್ಲಿಸಿದ ಕರ್ಕಶ ಶಬ್ದದಿಂದ ಇಂದಿರಾಳ ಯೋಚನಾ ಲಹರಿಗೂ ಬ್ರೇಕ್‌ ಬಿದ್ದಿತ್ತು. ಗೌಡರ ಮನೆ ಮುಂದೆ ಕಾರು ನಿಂತಿತ್ತು. ತಡಬಡಾಯಿಸಿ ಇಳಿದು ಮನೆಯೊಳಗೆ ಹೆಜ್ಜೆ ಹಾಕಿದಳು ಇಂದಿರಾ.

ಅವಳ ಬರುವಿಕೆಗಾಗಿ ಕಾಯುತ್ತಿದ್ದ ಗೌಡರ ಮಕ್ಕಳಾದ ಸಂಜಯ್‌ ಮತ್ತು ಅಭಿಷೇಕ್‌ ಕ್ಷೇಮ ಸಮಾಚಾರವನ್ನೂ ವಿಚಾರಿಸದೆ ಸಾರ್ವನಿಕರ ಭೆಟ್ಟಿಗಾಗಿ ಇದ್ದ ಖಾಸಾ ಕೋಣೆಗೆ ಕರೆದುಕೊಂಡು ಹೋದಾಗ ಅವಳ ಮನಸ್ಸಿಗೆ ಕಸಿವಿಸಿ ಎನಿಸಿತಾದರೂ ತನ್ನೊಳಗೇ ನುಂಗಿಕೊಂಡಳು. ಅವಳೆಂದೂ ಚಿಕ್ಕಮ್ಮನಂತೆ ಕಾಣಲಿಲ್ಲ ಆ ಮಕ್ಕಳಿಗೆ. ಗೌಡಶಾನಿ ಮತ್ತು ಅವರ ಸೊಸೆಯಂದಿರು ಮೂಕ ಪ್ರೇಕ್ಷಕರಾಗಿ ಇವರನ್ನೇ ದಿಟ್ಟಿಸುತ್ತಿದ್ದುದು ಇಂದಿರಾಳ ಗಮನಕ್ಕೆ ಬಂದಿರಲಿಲ್ಲ.

“ಆಂಟಿ, ನೀವೇನಾದರೂ ನಮ್ಮ ಆಸ್ತಿಯನ್ನು ಖರಿದೀಸಿರುವಿರಾ? ಇದು ಆ ಖರೀದಿ ಪತ್ರದ ನಕಲು,” ಎಂದು ಸಂಜಯ್‌ ನೇರವಾಗಿ ವಿಷಯನ್ನು ಪ್ರಸ್ತಾಪಿಸುತ್ತಾ ದಸ್ತಾವೇಜು (ಡಾಕ್ಯುಮೆಂಟ್‌) ಪ್ರತಿಯನ್ನು ಅವಳ ಕೈಗೆ ಕೊಡಲು ಮುಂದಾದ.

“ಅದರ ವಿವರ ನನಗೆ ಗೊತ್ತಿಲ್ಲ. ಆದರೆ ಸಾಹೇಬರು ಐದಾರು ವರ್ಷಗಳ ಹಿಂದೆ ಈ ಕವರ್‌ ನ್ನು ನನ್ನ ಕೈಗೆ ಕೊಟ್ಟು, `ಇಂದೂ, ನಾನೇನಾದರೂ ನಿನಗಿಂತ ಮುಂಚೆ ಕಣ್ಣು ಮುಚ್ಚಿದರೆ, ಆಗ ಈ ಕವರನ್ನು ತೆರೆದು ನೋಡು. ನಿನ್ನ ಜೀವನದ ಭದ್ರತೆಗೆ ಅಂತ ಒಂದಿಷ್ಟು ಆಸ್ತಿಯನ್ನು ನಿನ್ನ ಹೆಸರಿನಲ್ಲಿ ಖರೀದಿಸಿದ್ದೇನೆ,’ ಎಂದು ಹೇಳಿದ್ದರು. ಇದೇ ಆ ಕವರ್‌,” ಎನ್ನುತ್ತಾ ಇಂದಿರಾ ತನ್ನ ಕೈಚೀಲದಲ್ಲಿದ್ದ ಸೀಲ್ಡ್ ಕವರ್‌ ನ್ನು ಸಂಜಯ್‌ ಗೆ ಕೊಟ್ಟಳು.

ಸಂಜಯ್‌ ಅವಸರದಿಂದ ಕವರನ್ನು ಒಡೆದು ನೋಡಿದಾಗ, ತನ್ನ ಕೈಯಲ್ಲಿದ್ದ ಜೆರಾಕ್ಸ್ ಪ್ರತಿಯ ಮೂಲ ದಸ್ತಾವೇಜ್‌ ಆದಾಗಿತ್ತು. ಅಣ್ಣ ಅಭಿಷೇಕನ ಕಡೆಗೆ ದೃಷ್ಟಿಸಿದ. ಅವನು ಸನ್ನೆಯಲ್ಲೇ ಏನೋ ಹೇಳಿದ.

ಚಂದ್ರಪ್ಪಗೌಡರು, ಊರಿನಿಂದ ಜಿಲ್ಲಾ ಕೇಂದ್ರದ ಕಡೆಗೆ ಸಾಗುವ ರಾಜ್ಯ ಹೆದ್ದಾರಿಗೆ ಅಂಟಿಕೊಂಡ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಒಂದೇ ಹಾಸಿನಲ್ಲಿ 20 ಎಕರೆ ನೀರಾವರಿ ಭೂಮಿಯನ್ನು ಖರೀದಿಸಿದ್ದರು. ಅದರಲ್ಲಿ 5 ಎಕರೆ ಭೂಮಿಯನ್ನು ಇಂದಿರಾಳ ಹೆಸರಿಗೆ ಖರೀದಿ ಪತ್ರದ ಮುಖೇನ ರಿಜಿಸ್ಟರ್‌ ಮಾಡಿಕೊಟ್ಟಿದ್ದರು. ತಮ್ಮದು ತಾಲ್ಲೂಕು ಕೇಂದ್ರವಾಗಿರುವುದರಿಂದ ಜೊತೆಗೆ ಜಮೀನು ರಾಜ್ಯ ಹೆದ್ದಾರಿಯ ಪಕ್ಕವೇ ಇರುವುದರಿಂದ ಅದನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿ ಪ್ಲಾಟ್ ಮಾಡಿ ಮಾರಾಟ ಮಾಡಬೇಕೆಂದು ಅಣ್ಣ ತಮ್ಮಂದಿರು ಕಾಗದ ಪತ್ರಗಳನ್ನು ತೆಗೆಸಿದಾಗ, 5 ಎಕರೆ ಇಂದಿರಾಳ ಹೆಸರಿಲ್ಲಿ ಇದ್ದುದನ್ನು ಕಂಡು ಗಾಬರಿಯಾಗಿದ್ದರು. 2 ಕೋಟಿ ಬೆಲೆಯ ಆಸ್ತಿಯನ್ನು ತಂದೆ, ಇಂದಿರಾಳ ಹೆಸರಿಗೆ ಪರಭಾರೆ ಮಾಡಿದ್ದನ್ನು ಅವರಿಗೆ ಜೀರ್ಣಿಸಿಕೊಳ್ಳಲಾಗದೆ, ಇಂದಿರಾಳಿಗೆ ಧಮಕಿ ಹಾಕಿ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಬೇಕೆಂದು ತೀರ್ಮಾನಿಸಿ ಅವಳನ್ನು ಕರೆಸಿದ್ದರು.

“ಆಂಟಿ, ಈ ಪತ್ರದಲ್ಲಿನ ಆಸ್ತಿ ನಿಮ್ಮದಲ್ಲವಲ್ಲ…? ಈ ಪತ್ರ ನನ್ನಲ್ಲಿ ಇರಲಿ. ಇದನ್ನು ನಾವೇ ಇಟ್ಟುಕೊಳ್ಳುತ್ತೇವೆ…..” ಎಂದು ಸಂಜಯ್‌ ತಡವರಿಸುತ್ತಾ ಹೇಳಿದ.

“ಸಂಜಯ್‌, ಗೌಡರೇ ನನಗೆ ಆಸ್ತಿಯಾಗಿದ್ದರು. ಅವರಿಲ್ಲದ, 55 ದಾಟಿರುವ ನಾನಾದರೂ ಈ ಆಸ್ತಿ ತೆಗೆದುಕೊಂಡು ಏನು ಮಾಡಲಿ? ಈ ಪತ್ರ ನಿಮ್ಮಲ್ಲೇ ಇರಲಿ. ಮತ್ತೇನಾದರೂ ಕಾಗದಪತ್ರ ಮಾಡಿಕೊಡಬೇಕು ಎಂದಿದ್ದರೆ, ನೀವು ಹೇಳಿದಾಗ ಬಂದು ಮಾಡಿಕೊಟ್ಟು ಹೋಗುವೆ ಅಥವಾ ಈಗಲೇ ಯಾವುದಾದರೂ ಪತ್ರಕ್ಕೆ ಸಹಿಯ ಅವಶ್ಯಕತೆಯಿದ್ದರೆ ಮಾಡಿಕೊಡುವೆ. ಪೃಥ್ವಿಗೆ ಒಳ್ಳೆಯ ಉದ್ಯೋಗ ಇದೆಯಲ್ಲ, ಅಷ್ಟು ಸಾಕು ನನಗೆ,” ಎಂದು ಇಂದಿರಾ ಸ್ಪಷ್ಟವಾಗಿ ನುಡಿಯುತ್ತಾ ಅಣ್ಣತಮ್ಮಂದಿರ ಮುಖವನ್ನು ದಿಟ್ಟಿಸಿದಳು.

ಅವರಿಬ್ಬರೂ ಕಣ್ಣಲ್ಲೇ ಮಾತುಕತೆ ನಡೆಸಿದಂತಿತ್ತು.

“ಆಂಟಿ, ಸದ್ಯಕ್ಕೇನೂ ಬೇಡ. ಮುಂದೆ ಅವಶ್ಯಕತೆ ಬಿದ್ದರೆ ಹೇಳಿ ಕಳುಹಿಸುತ್ತೇವೆ. ಈ ಪತ್ರ ನಮ್ಮ ಬಳಿ ಇರಲಿ,” ಅಭಿಷೇಕ್‌ಹೇಳಿದ.

“ನಾನಿನ್ನು ಬರುವೆ,” ಎಂದು ಹೇಳಿ ಇಂದಿರಾ ಹೊರಟಳು.

ವರಾಂಡಕ್ಕೆ ಬಂದಾಗ ಗೌಡಶಾನಿ ಸರ್ವಮಂಗಳಾ ದೇವಿ ಸನ್ನೆ ಮಾಡಿ ಇಂದಿರಾಳನ್ನು ತಮ್ಮ ಕೋಣೆಗೆ ಕರೆದುಕೊಂಡು ಹೋಗಿ, ವಿಷಯವೇನೆಂದು ವಿಚಾರಿಸಿದರು. ಇಂದಿರಾ ಆಸ್ತಿಯ ಬಗ್ಗೆ ತಿಳಿಸಿದಳು.

“ನೀನೇನು ಹೇಳಿದಿ…?” ಎಂದು ಕೇಳಿದಾಗ, ಇಂದಿರಾ ತಾನು ಹೇಳಿದ್ದನ್ನು ಅವರಿಗೆ ವಿವರಿಸಿದಳು.

“ಹುಚ್ಚು ಹುಡುಗಿ ನೀನು. ವ್ಯವಹಾರ ಜ್ಞಾನವೇ ಇಲ್ಲ. ನಿನಗೂ ಒಬ್ಬ ಮಗನಿದ್ದಾನೆ ಎಂಬುದು ನಿನ್ನ ನೆನಪಿಗೆ ಬರಲಿಲ್ಲವೇ….? ಮೇಲಾಗಿ ಈ ಜಮೀನು ಗೌಡರು ಸ್ವತಃ ಗಳಿಸಿದ್ದು. ಅವರು ನಿನಗಾಗಿಯೇ ಕೊಟ್ಟಿದ್ದರು. ನಿನ್ನ ನಿರ್ಧಾರ ಬಹಳ ತಪ್ಪು,” ಎಂದು ಹಳಹಳಿಸಿದರು ಗೌಡಶಾನಿ.

“ಅಮ್ಮಾ, ಇರಲಿಬಡಿ. ಅದು ಇವರಿಗೇ ಇರಲಿ, ಇವರೂ ನನಗೆ ಮಕ್ಕಳಲ್ಲವೇ….? ಗೌಡರು ನನಗೆ ಬೇಕಾದಷ್ಟು ಮಾಡಿದ್ದಾರೆ. ಮುಳುಗಿದ್ದ ನನ್ನ ಜೀವನ ನೌಕೆಯನ್ನು ಮೇಲೆತ್ತಿ ಜೀವ ತುಂಬಿದ್ದಾರೆ,” ಎಂದಳು ಇಂದಿರಾ.

“ದೊಡ್ಡ ಮನಸಿನವಳು ನೀನು. ನಿನ್ನಂತೆ ಇವರು ಒಳ್ಳೆಯವರಲ್ಲ. ಬರೀ ಸ್ವಾರ್ಥಕ್ಕಾಗಿ ಬಡಿದಾಡುವವರು ಅಷ್ಟೆ. ಇವಳು ನಮ್ಮಪ್ಪನಿಗೆ ಬೇಕಿದ್ದಳು ಎಂದು ಒಂದು ದಿನವಾದರೂ ನಿನ್ನನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆಯೇ?” ಎನ್ನುತ್ತಾ ಗೌಡಶಾನಿ ದುಃಖಿಸಿದರು.

ಇಂದಿರಾಳಿಗೆ ಗಾಬರಿಯಾಯಿತು. ನಿಧಾನಕ್ಕೆ ಅವರ ಬಳಿ ಹೋದಳು. ಗೌಡಶಾನಿ ಇಂದಿರಾಳನ್ನು ಬರಸೆಳೆದು ಅಪ್ಪಿಕೊಂಡು ಭೋರೆಂದು ಅಳತೊಡಗಿದರು. ಹಿರಿಜೀವಕ್ಕೆ ಕಿರಿಜೀವ ತನಗೆ ತಿಳಿದಂತೆ ಸಮಾಧಾನ ಮಾಡುತ್ತಾ ತನ್ನ ಸೀರೆಯ ಸೆರಗಿನಿಂದ ಅವರ ಕಣ್ಣೀರು ಒರೆಸಿದಳು ಇಂದಿರಾ. ಸರ್ವಮಂಗಳಾ ದೇವಿಯರ ದುಃಖ ಕಡಿಮೆಯಾದಾಗ, ತಾನು ಹೊರಡುವುದಾಗಿ ಹೇಳಿದಳು ಇಂದಿರಾ.

ಅವಳನ್ನು ತಡೆದು, “ನಿನಗೆ ಹಣದ ಅವಶ್ಯಕತೆ ಇದ್ದರೆ ಕೇಳು, ಕೊಡುವೆ,” ಎಂದರು ಗೌಡಶಾನಿ.

“ಅಮ್ಮಾ…. ಬೇಡ,” ಎಂದು ನಯವಾಗಿ ಹೇಳಿ ಮುಂದಡಿ ಇಟ್ಟಳು ಇಂದಿರಾ.

`ಹಣ ಎಂದರೆ ಹೆಣ ಬಾಯಿ ಬಿಡುತ್ತದೆಯಂತೆ. ಬಂದಷ್ಟು ಬರಲಿ ಎಂದು ಬಾಚಿಕೊಳ್ಳುವ ಈ ಕಾಲದಲ್ಲಿ ಇವಳು ಮಾತ್ರ ಹೀಗೆ…. ವಿಚಿತ್ರ ಹೆಂಗಸು!’ ಎಂದು ಮನದಲ್ಲೇ ಅಂದುಕೊಳ್ಳುತ್ತಾ ಇಂದಿರಾಳನ್ನು ಬೀಳ್ಕೊಟ್ಟರು ಗೌಡಶಾನಿ.

ಇಂದಿರಾ ಹೋದ ನಂತರ ಅಭಿಷೇಕ್‌ ಮತ್ತು ಸಂಜಯ್‌ ಕೋಣೆಯ ಬಾಗಿಲನ್ನು ಹಾಕಿಕೊಂಡು ಬಹಳ ಹೊತ್ತಿನವರೆಗೆ ಏನೇನೋ ಚರ್ಚಿಸಿದರು. ತಮ್ಮ ಕೆಲಸ ಸರಳವಾಗಿ ಕಾರ್ಯಗತ ಆಗುತ್ತಿರುವುದಕ್ಕೆ ಸಂತೋಷವಾಗುತ್ತಿದ್ದರೂ, ಯಾವುದಕ್ಕೂ ಒಮ್ಮತ ಮೂಡಿ ಬರಲಿಲ್ಲ. ಕಾದ ಹೆಂಚಿನ ಮೇಲೆ ಹಾಕಿದ ಎಳ್ಳಿನಂತೆ ಚಟಪಟ ಸಿಡಿಯುತ್ತಿದ್ದರು.

ಅಂದು ಬೆಳಗ್ಗೆ ಇಂದಿರಾ ತನ್ನ ವ್ಯಾಪಾರ ಶುರು ಮಾಡಲು ಅಣಿಯಾಗುತ್ತಿದ್ದಳು. ಅಷ್ಟರಲ್ಲಿ ಸಂಜಯ್‌ ನಿಂದ ಮತ್ತೆ ಬುಲಾವ್‌. `ಇಂದೇನು ಕಾದಿದೆಯೋ…?’ ಎಂದುಕೊಳ್ಳುತ್ತಾ ಕಾರನ್ನೇರಿದಳು. ಗೌಡರ ಮನೆಗೆ ಹೋದಾಗ, ಗೌಡಶಾನಿ, ಸಂಜಯ್‌, ಅಭಿಷೇಕ್‌, ಇಬ್ಬರೂ ಸೊಸೆಯಂದಿರು ಹಾಲ್ ನಲ್ಲೇ ಜಮಾಯಿಸಿದ್ದರು.

ಇಂದಿರಾ ತಲೆಬಾಗಿಲಿನಲ್ಲಿ ಅಳುಕುತ್ತಾ ಕಾಲಿಡುತ್ತಿದ್ದಂತೆ, “ಬನ್ನಿ ಚಿಕ್ಕಮ್ಮ…. ಒಳಗೆ ಬನ್ನಿ,” ಎಂದು ಸಂಜಯ್‌ ಅವಳನ್ನು ಹಾರ್ದಿಕವಾಗಿ ಸ್ವಾಗತಿಸಿದ.

`ಚಿಕ್ಕಮ್ಮಾ…..’ ಎಂಬ ಕೇಳಿ ಇಂದಿರಾಳಿಗೆ ಕಿವಿ, ಎದೆ, ಹೃದಯ, ಮೈ ಮನಗಳಲ್ಲಿ ಜೇನು ಸುರಿದಂತೆ ಆಯಿತು. `ತಾನೆಲ್ಲಿದ್ದೇನೆ….? ಸಂಜಯ್‌ ತನ್ನನ್ನು ಚಿಕ್ಕಮ್ಮಾ ಎಂದನೇ….’ ಭಾವಪರವಶಳಾದಳು ಇಂದಿರಾ.

ಅಷ್ಟರಲ್ಲಿ, “ನಿಮ್ಮ ಅಪ್ಪಾಜಿ…. `ಏನೋ ದೈವೇಚ್ಛೆ, ಇಂದಿರಾ ಅಚಾನಕ್ಕಾಗಿ ನನ್ನ ಬಾಳಲ್ಲಿ ಅದೃಷ್ಟ ದೇವತೆಯಾಗಿ ಬಂದಳು. ಅವಳ ಕಾಲ್ಗುಣದಿಂದ ನನ್ನ ಆಸ್ತಿ ಮೂರು ಪಟ್ಟಾಯಿತು. ಇಪ್ಪತ್ತು ವರ್ಷಗಳಿಂದ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ದಾವೆಯೊಂದು ನನ್ನ ಪರವಾಗಿ, ಹಲವಾರು ಕೋಟಿಗಳ ಆಸ್ತಿ ಮತ್ತೆ ನನಗೆ ದಕ್ಕಿತು. ಇಂದಿರಾ ಎಂದೂ ಯಾವತ್ತೂ ತನಗೆ ಅದು ಬೇಕು, ಇದು ಬೇಕು ಎಂದು ಪೀಡಿಸಿದವಳಲ್ಲ. ಅವಳ ಮಗ ಪೃಥ್ವಿ ಉದ್ಯೋಗಕ್ಕೆ ಸೇರಿದ ನಂತರ ಅವಳ ಜೀವನೋಪಾಯಕ್ಕೆ ನಾನು ಕೊಡುತ್ತಿದ್ದ ಹಣವನ್ನೂ ನಯವಾಗಿ ನಿರಾಕರಿಸಿದಳು. ನನ್ನ ಮನೆತನದ ಒಳಿತಿಗಾಗಿ ಪರಿತಪಿಸುತ್ತಿದೆ ಅವಳ ಜೀವ. ವಯಸ್ಸು ಚಿಕ್ಕದಾದರೂ ವಿಶಾಲ ಹೃದಯಿ, ಮನಸ್ಸು ದೊಡ್ಡದು,” ಎಂಬ ಮಾತುಗಳು ಅಶರೀರ ವಾಣಿಯಂತೆ ಸಂಜಯ್‌ ಮೊಬೈಲ್ ‌ನಿಂದ ಕೇಳಿಬಂದಿತು. ಎಲ್ಲರೂ ತುಟಿ ಪಿಟಕ್ಕೆನ್ನದೇ ಕೇಳಿಸಿಕೊಂಡರು.

“ಇದು ಅಪ್ಪಾಜಿಯ ಆತ್ಮೀಯ ಗೆಳೆಯರೂ ಮತ್ತು ವಕೀಲರೂ ಆಗಿರುವ ಶಂಕರ್‌ ರವರ ಧ್ವನಿ. ಅಪ್ಪಾಜಿ ಜೀವಂತವಾಗಿದ್ದಾಗ ಇಂದಿರಾ ಚಿಕ್ಕಮ್ಮನ ಬಗ್ಗೆ ವಕೀಲರಿಗೆ ಹೇಳಿದ್ದ ಮಾತುಗಳಿವು. ನಾನಂತೂ ನಿಮ್ಮ ಬಗ್ಗೆ ತುಂಬಾ ಅಪಾರ್ಥ ಮಾಡಿಕೊಂಡಿದ್ದೆ. ಚಿಕ್ಕಮ್ಮಾ…. ನನ್ನನ್ನು ಕ್ಷಮಿಸಿಬಿಡಿ. ಇದು ನಿಮ್ಮ ಆಸ್ತಿಯ ಪತ್ರ. ಇದನ್ನು ತೆಗೆದುಕೊಳ್ಳಿ,” ಎನ್ನುತ್ತಾ ಸಂಜಯ್‌ ಇಂದಿರಾಳ ಪಾದವನ್ನು ಹಿಡಿದುಕೊಳ್ಳಲು ಮುಂದಾದ.

“ಬೇಡ ಸಂಜಯ್‌, ಬೇಡ. ನಾನು ನಿನಗಿಂತ ದೊಡ್ಡವಳಲ್ಲ! ನಿಮ್ಮ ಸಂಸಾರದಲ್ಲಿ ಮೂಗು ತೂರಿಸಿ ನಿಮ್ಮೆಲ್ಲರ ನಿದ್ದೆಗೆಡಿಸಿದವಳು ನಾನು. ನೀವೆಲ್ಲರೂ ನನ್ನನ್ನು ಕ್ಷಮಿಸಬೇಕಾಗಿ ನನ್ನ ವಿನಂತಿ. ನಾನೇ ನಿಮ್ಮ ಕುಟುಂಬದ ಸದಸ್ಯಳಾಗಿ ಇರುವಾಗ ಈ ಆಸ್ತಿ ನನಗೇಕೆ? ಇದು ಕುಟುಂಬದ ಆಸ್ತಿಯ ಪತ್ರ. ಇದು ನಿನ್ನ ಬಳಿಯೇ ಇರಲಿ,” ಎನ್ನುತ್ತಾ ಸಂಜಯ್‌ ನ ತಲೆ ನೇವರಿಸುವಷ್ಟರಲ್ಲಿ ಸನಿಹಕ್ಕೆ ಬಂದ ಗೌಡಶಾನಿಯವರ ಪಾದಗಳಿಗೆ ಎರಗಿ ಕಣ್ಣೀರ ಅಭಿಷೇಕ ಮಾಡತೊಡಗಿದಳು ಇಂದಿರಾ.

“ಛೀ ಹುಚ್ಚಿ… ಸಂತಸ ಅರಳಿ ಘಮಘಮಿಸುತ್ತಿರುವ ಅವಿಸ್ಮರಣೀಯ ಘಳಿಗೆ ಇದು. ಈಗ್ಯಾಕೆ ಈ ಕಣ್ಣೀರು…?” ಎನ್ನುತ್ತಾ ಸರ್ವಮಂಗಳಾ ದೇವಿ ಇಂದಿರಾಳನ್ನು ಮೇಲಕ್ಕೆತ್ತಿ ತಬ್ಬಿಕೊಂಡರು. ಉಳಿದವರೆಲ್ಲರೂ ಅವರನ್ನು ಸುತ್ತುವರಿದು ಸಂಭ್ರಮಿಸಿತೊಡಗಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ