ಸಾಮಗ್ರಿ : 1 ಝುಕೀನೀ, 2 ಟೊಮೇಟೊ, 1 ಈರುಳ್ಳಿ, 1-1 ಹಸಿರು, ಕೆಂಪು, ಹಳದಿ ಕ್ಯಾಪ್ಸಿಕಂ, 100 ಗ್ರಾಂ ಆರ್ಗುಲಾ, ಗ್ರೀನ್‌ ಆಲಿವ್‌, ಬ್ಲ್ಯಾಕ್‌ ಆಲಿವ್ ‌(ತಲಾ 25 ಗ್ರಾಂ),  4-5 ಚಮಚ ಆಲಿವ್ ‌ಆಯಿಲ್‌, ಒಂದಿಷ್ಟು ಲೆಟ್ಯೂಸ್‌ (ಸಲಾಡ್‌ ಎಲೆ), ತುಸು ಜಜ್ಜಿದ ಬೆಳ್ಳುಳ್ಳಿ ಎಸಳು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಓರಿಗ್ಯಾನೋ, ನಿಂಬೆರಸ, ಡಿಝೋನ್‌ ಮಸ್ಟರ್ಡ್‌ ಸಾಸ್‌, ರೆಡ್‌ ವೈನ್ ವಿನಿಗರ್‌, ತುರಿದ ಚೀಸ್‌.

ವಿಧಾನ : ಮೊದಲು ಒಂದು ಬೇಸನ್ನಿಗೆ ಹೆಚ್ಚಿದ ಈರುಳ್ಳಿ, ಅದರ ಮೇಲೆ ಜಜ್ಜಿದ ಬೆಳ್ಳುಳ್ಳಿ ಹಾಕಿ, ತುಸು ರೆಡ್‌ ವೈನ್‌ ವಿನಿಗರ್ ಸಿಂಪಡಿಸಿ. ಇದನ್ನು 15 ನಿಮಿಷ ಹಾಗೇ ಬಿಡಿ. ನಂತರ ಇದರಿಂದ ನೀರಿನಂಶ ಬೇರ್ಪಡಿಸಿ. ನಂತರ ಮತ್ತೊಂದು ದೊಡ್ಡ ಬಟ್ಟಲಿಗೆ ಲೆಟ್ಯೂಸ್‌ ಹರಡಿರಿ. ಇದರ ಮೇಲೆ ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ, ಸೌತೇಕಾಯಿ, ಟೊಮೇಟೊ, ನೀರು ತೆಗೆದ ಈರುಳ್ಳಿ ಸಹ ಹರಡಿಕೊಳ್ಳಿ. ಮತ್ತೊಂದು ಬಟ್ಟಲು ತೆಗೆದುಕೊಂಡು ಅದಕ್ಕೆ 4-5 ಚಮಚ ರೆಡ್‌ ವೈನ್‌ ವಿನಿಗರ್‌ ನಿಂಬೆರಸ, ಮಸ್ಟರ್ಡ್‌ ಸಾಸ್‌, ಜಜ್ಜಿ ಬೆಳ್ಳುಳ್ಳಿ, ಓರಿಗ್ಯಾನೋ, ಉಪ್ಪು, ಮೆಣಸು ಇತ್ಯಾದಿ ಬೆರೆಸಿಕೊಳ್ಳಿ. ಈ ಡ್ರೆಸ್ಸಿಂಗ್‌ ಮಿಕ್ಸ್ ಚರ್‌ ಗೆ ನಿಧಾನವಾಗಿ ಆಲಿವ್ ಆಯಿಲ್ ‌ಬೆರೆಸಿರಿ. ಇದನ್ನು ನಿಧಾನವಾಗಿ ಗೊಟಾಯಿಸಿ. ನಂತರ ಈ ಮಿಶ್ರಣವನ್ನು ಹೆಚ್ಚಿದ ತರಕಾರಿ ಮಿಶ್ರಣಕ್ಕೆ ಸೇರಿಸಿ. ಇದರ ಮೇಲೆ ಆಲಿವ್ ‌ಆಯಿಲ್ ‌ಸಿಂಪಡಿಸಿ, ತುರಿದ ಚೀಸ್‌ ನಿಂದ ಗಾರ್ನಿಶ್‌ ಮಾಡಿ ಸವಿಯಲು ಕೊಡಿ.

Swiss-Brisar-Musseli

ಸ್ವಿಸ್ಸ್ಪೆಷಲ್ ಮ್ಯೂಸ್ಲಿ

ಸಾಮಗ್ರಿ : 150 ಗ್ರಾಂ ಓಟ್ಸ್, ಅರ್ಧ ಲೀ. ಗಟ್ಟಿ ಹಾಲು, 100 ಮಿ.ಲೀ. ಆ್ಯಪಲ್ ಜೂಸ್‌, 3-4 ನಿಂಬೆರಸ, 1 ಸೇಬು, 4 ಚಮಚ ಜೇನುತುಪ್ಪ, 375 ಮಿ.ಲೀ. ಗಟ್ಟಿ ಕೆನೆ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಚಕ್ಕೆಪುಡಿ, ಹೆಚ್ಚಿದ ಫ್ರೆಶ್‌ಫ್ರೂಟ್ಸ್, ಡ್ರೈ ಫ್ರೂಟ್ಸ್, ಒಂದಿಷ್ಟು ತೆಂಗಿನ ತುರಿ, ಅಲಂಕರಿಸಲು ಮಲ್ಬರಿ ಹಣ್ಣು.

ವಿಧಾನ : ಒಂದು ಬಟ್ಟಲಿಗೆ ಓಟ್ಸ್, ಮೊಸರು, ಹಾಲು ಬೆರೆಸಿ ಚೆನ್ನಾಗಿ ಗೊಟಾಯಿಸಿ. ಇದಕ್ಕೆ ತುರಿದ ಸೇಬು ಸೇರಿಸಿ. ಜೊತೆಗೆ ಚಕ್ಕೆ ಪುಡಿ, ಆ್ಯಪಲ್ ಜೂಸ್‌, ನಿಂಬೆರಸ, ಜೇನುತುಪ್ಪ ಬೆರೆಸಿಕೊಳ್ಳಿ. ಹೀಗೆ ಸಿದ್ಧಪಡಿಸಿದ ಈ ಮಿಶ್ರಣವನ್ನು ಇಡೀ ರಾತ್ರಿ ಫ್ರಿಜ್ ನಲ್ಲಿಡಿ. ನಂತರ ಮಾರನೇ ಬೆಳಗ್ಗೆ ಇದಕ್ಕೆ ಚಿತ್ರದಲ್ಲಿರುವಂತೆ ಉಳಿದೆಲ್ಲ ತಾಜಾ ಸಾಮಗ್ರಿ ಸೇರಿಸಿ, ತಣ್ಣಗೆ ಸವಿಯಲು ಕೊಡಿ.

Coriender-Chilli-Spinech

ಪಾಲಕ್ಪಕೋಡ

ಸಾಮಗ್ರಿ : 2 ಕಂತೆ ಹೆಚ್ಚಿದ ತಾಜಾ ಪಾಲಕ್‌ ಸೊಪ್ಪು, 1 ಕಪ್‌ ಕಡಲೆಹಿಟ್ಟು, ಅರ್ಧ ಕಪ್‌ ಅಕ್ಕಿಹಿಟ್ಟು, ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸು/ಕೊತ್ತಂಬರಿ ಸೊಪ್ಪಿನ ಪೇಸ್ಟ್, ಅರಿಶಿನ, ಓಮ, ಕರಿಯಲು ಎಣ್ಣೆ.

ವಿಧಾನ : ಒಂದು ಬೇಸನ್ನಿಗೆ ಹೆಚ್ಚಿದ ಸೊಪ್ಪಿನ ಜೊತೆ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಳ್ಳಿ. ಇದಕ್ಕೆ ತುಸು ನೀರು ಚಿಮುಕಿಸಿ ಪಕೋಡ ಮಿಶ್ರಣದ ಹದಕ್ಕೆ ಕಲಸಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಇದರಿಂದ ಸ್ವಲ್ಪ ಸ್ವಲ್ಪವೇ ಮಿಶ್ರಣ ಅದಕ್ಕೆ ಹಾಕುತ್ತಾ, ಗರಿಗರಿಯಾಗಿ ಬರುವಂತೆ ಪಕೋಡ ಕರಿಯಿರಿ. ಇದನ್ನು ಬಿಸಿಯಾಗಿ ಟೊಮೇಟೋ ಸಾಸ್‌ ಜೊತೆ ಸವಿಯಲು ಕೊಡಿ.

Couscous-with-Ratatouille

ಕಾಸ್ಕಾಸ್ವಿತ್ರಾಟೋಲಿ

ಕಾಸ್ಕಾಸ್ಗಾಗಿ ಸಾಮಗ್ರಿ : 200 ಗ್ರಾಂ ಇನ್‌ ಸ್ಟೆಂಟ್‌ ಕಾಸ್‌ ಕಾಸ್‌ (ರೆಡಿಮೇಡ್‌ ಲಭ್ಯ), 4 ಚಮಚ ಬೆಣ್ಣೆ, 2 ಚಮಚ ಎಕ್ಸ್ ಟ್ರಾ ವರ್ಜಿನ್‌ ಆಯಿಲ್‌, ರುಚಿಗೆ ಉಪ್ಪು, ಮೆಣಸು.

ವಿಧಾನ : ಒಂದು ಪ್ಯಾನಿನಲ್ಲಿ 4 ಸೌಟು ನೀರು ಬಿಸಿ ಮಾಡಿ. ಇದಕ್ಕೆ ಉಪ್ಪು, ಮೆಣಸು, ಬೆಣ್ಣೆ ಬೆರೆಸಿಡಿ. ಚೆನ್ನಾಗಿ ಕುದ್ದ ನಂತರ ಇದಕ್ಕೆ ಕಾಸ್‌ ಕಾಸ್‌ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಇದನ್ನು ಕೆಳಗಿಳಿಸಿ, ಮುಚ್ಚಳ ಮುಚ್ಚಿರಿಸಿ 5-6 ನಿಮಿಷ ಹಾಗೇ ಬಿಡಿ. ಸರ್ವ್ ಮಾಡುವ ಮೊದಲು ಮೇಲೆ ತುಸು ಹನಿ ಆಲಿವ್ ‌ಆಯಿಲ್‌ಸಿಂಪಡಿಸಿ, ಚೆನ್ನಾಗಿ ಗೊಟಾಯಿಸಿ, ಗಂಟಾಗದಂತೆ ನೋಡಿಕೊಳ್ಳಿ.

ರಾಟೋಲಿಗಾಗಿ ಸಾಮಗ್ರಿ : 150 ಗ್ರಾಂ ಟೊಮೇಟೊ, ಹೆಚ್ಚಿದ 2 ಈರುಳ್ಳಿ, 100 ಗ್ರಾಂ ಝುಕೀನೀ, 3 ಬಗೆಯ ಸಣ್ಣ ಗಾತ್ರದ ಕ್ಯಾಪ್ಸಿಕಂ, 2 ಕಪ್ಪು ಗುಂಡು ಬದನೆ, 4-5 ಚಮಚ ಟೊಮೇಟೊ ಪೇಸ್ಟ್, 7-8 ಎಸಳು ಜಜ್ಜಿದ ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ವೈಟ್‌ ಪೆಪ್ಪರ್‌, ಹೆಚ್ಚಿದ ಪಾರ್ಸ್ಲೆ.

ವಿಧಾನ : ಒಂದು ಪ್ಯಾನ್‌ ಗೆ ತುಸು ಆಲಿವ್ ‌ಆಯಿಲ್ ‌ಹಾಕಿ ಬಿಸಿ ಮಾಡಿ. ಇದಕ್ಕೆ ಬೆಳ್ಳುಳ್ಳಿ, ಈರುಳ್ಳಿ, 3 ಬಗೆ ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಇದನ್ನು ಒಂದು ಬಟ್ಟಲಿಗೆ ರವಾನಿಸಿ. ನಂತರ ಇದೇ ಪ್ಯಾನಿನಲ್ಲಿ ಬದನೆ ಹೋಳು ಬಾಡಿಸಿ. ಆಮೇಲೆ ಇದಕ್ಕೆ ಕ್ಯಾಪ್ಸಿಕಂ ಮಿಶ್ರಣ ಬೆರೆಸಿ ಕೈಯಾಡಿಸಿ. ನಂತರ ಹೆಚ್ಚಿದ ಟೊಮೇಟೊ ಸೇರಿಸಿ ಬಾಡಿಸಿ, ಜೊತೆಗೆ ಟೊಮೇಟೊ ಪೇಸ್ಟ್ ಸಹ ಸೇರಿಸಿ. ನಂತರ ಝುಕೀನೀ ತುಂಡು ಸೇರಿಸಿ ಬಾಡಿಸಬೇಕು. ಕೊನೆಯಲ್ಲಿ ಉಪ್ಪು, ಮೆಣಸು, ಪಾರ್ಸ್ಲೆ ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಎರಡನ್ನೂ ಒಟ್ಟಿಗೆ ಬಿಸಿಯಾಗಿ ಸವಿಯಲು ಕೊಡಿ.

Tomato-Soup-with-roasted-almonds47-(1)

ಟೊಮೇಟೊ ಸೂಪ್ವಿತ್ರೋಸ್ಟೆಡ್ಆಲ್ಮಂಡ್

ಸಾಮಗ್ರಿ : 4 ಚಮಚ ಆಲಿವ್ ‌ಆಯಿಲ್‌, 1-2 ಲಂಗದ ಎಲೆ, ಹೆಚ್ಚಿದ 2-3 ಈರುಳ್ಳಿ, 5-6 ಟೊಮೇಟೊ, 4 ಕಪ್‌ ವೆಜ್‌ ಸ್ಟಾಕ್ (ತರಕಾರಿ ಬೇಯಿಸಿ ಬಸಿದ ನೀರು), 2 ಕಪ್‌ ಫುಲ್ ಕ್ರೀಂ ಹಾಲು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ತುಪ್ಪದಲ್ಲಿ ಹುರಿದ ಒಂದಿಷ್ಟು ಬಾದಾಮಿ ಚೂರು, ಫ್ರೆಶ್‌ ಕ್ರೀಂ, ಹೆಚ್ಚಿದ ಪಾರ್ಸ್ಲೆ.

ವಿಧಾನ : ಒಂದು ಬಾಣಲೆಯಲ್ಲಿ ಆಲಿವ್ ‌ಆಯಿಲ್ ‌ಬಿಸಿ ಮಾಡಿ. ಇದಕ್ಕೆ ಲವಂಗದ ಎಲೆ, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ವೆಜ್‌ ಸ್ಟಾಕ್‌ ಬೆರೆಸಿರಿ. ಮಂದ ಉರಿಯಲ್ಲಿ ಕೈಯಾಡಿಸುತ್ತಾ ಸೂಪ್‌ ಗಟ್ಟಿಯಾಗುವವರೆಗೂ ಕುದಿಸಿರಿ. ನಂತರ ಕೆಳಗಳಿಸಿ ಆರಲು ಬಿಡಿ. ಆಮೇಲೆ ಇದರಿಂದ ಬೇ ಲೀಫ್‌ ಬೇರ್ಪಡಿಸಿ. ಚೆನ್ನಾಗಿ ತಣ್ಣಗಾದಾಗ, ಮಿಕ್ಸಿಗೆ ಹಾಕಿ ಪ್ಯೂರಿ ಸಿದ್ಧಪಡಿಸಿ. ಅದನ್ನು ಪ್ಯಾನಿಗೆ ಹಾಕಿ ಮತ್ತೆ ಒಲೆ ಮೇಲಿಡಿ, ಬಾದಾಮಿ ಚೂರು ಸೇರಿಸಿ. ಕೊನೆಯಲ್ಲಿ ಉಪ್ಪು, ಮೆಣಸು, ಹಾಲು ಬೆರೆಸಿಕೊಳ್ಳಿ, ಕುದಿಯುವುದು ಬೇಡ. ಇದನ್ನು ಸರ್ವ್ ಮಾಡುವಾಗ ಬಟ್ಟಲಿಗೆ ಫ್ರೆಶ್‌ ಕ್ರೀಂ, ಹೆಚ್ಚಿದ ಪಾರ್ಸ್ಲೆ ಹಾಕಿ ಕೊಡಿ.

Baked-Yogurt

ಪ್ರೊಬಯೋಟಿಕ್ಯೋಗರ್ಟ್

ಸಾಮಗ್ರಿ : 250 ಮಿ.ಲೀ ಹಂಗ್‌ ಕರ್ಡ್‌ (ತೇವಾಂಶ ರಹಿತ ಗಟ್ಟಿ ಮೊಸರು), 200 ಮಿ.ಲೀ. ಫ್ರೆಶ್‌ ಕ್ರೀಂ, 250 ಮಿ.ಲೀ. ಕಂಡೆನ್ಸ್ಡ್  ಮಿಲ್ಕ್, 100 ಗ್ರಾಂ ಮಾಗಿದ ಮಾವಿನ ತಿರುಳು, 100 ಮಿ.ಲೀ. ಪ್ರೊಬಯೋಟಿಕ್‌ ಮಿಲ್ಕ್.

ವಿಧಾನ : ಒಂದು ಬಟ್ಟಲಿಗೆ ಗಟ್ಟಿ ಮೊಸರು, ಕಂಡೆನ್ಸ್ಡ್ ಮಿಲ್ಕ್, ಕ್ರೀಂ, ಪ್ರೊಬಯೋಟಿಕ್‌ ಮಿಲ್ಕ್ ಬೆರೆಸಿಕೊಂಡು ಚೆನ್ನಾಗಿ ಗೊಟಾಯಿಸಿ. ನಂತರ ಇದಕ್ಕೆ ಫ್ಲೇವರ್‌ ಗಾಗಿ ಚೆನ್ನಾಗಿ ಕಿವುಚಿದ ಮಾವು ಸೇರಿಸಿ. ನಂತರ ಇದನ್ನು ಓವನ್‌ ಪ್ರೂಫ್‌ ಬಟ್ಟಲುಗಳಿಗೆ ತುಂಬಿಸಿ, ಓವನ್ನಿನಲ್ಲಿ ಹಾಟ್‌ ವಾಟರ್‌ ಪ್ಯಾನಿನಲ್ಲಿರಿಸಿ, 160 ಡಿಗ್ರಿ ಶಾಖದಲ್ಲಿ 15 ನಿಮಿಷ ಬೇಕ್‌ ಮಾಡಿ. ನಂತರ ಚಿತ್ರದಲ್ಲಿರುವಂತೆ ಮಾವಿನ ಹೋಳಿನಿಂದ ಅಲಂಕರಿಸಿ ಸವಿಯಲು ಕೊಡಿ.

Bread-Ke-Bonde

ಬ್ರೆಡ್ಬೋಂಡ

ಸಾಮಗ್ರಿ : 7-8 ಬ್ರೆಡ್‌ ಸ್ಲೈಸ್‌, ಬೇಯಿಸಿ ಮಸೆದ 1 ದೊಡ್ಡ ಆಲೂ, 4 ಚಮಚ ಕಾರ್ನ್‌ ಫ್ಲೋರ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸು/ಶುಂಠಿ/ಬೆಳ್ಳುಳ್ಳಿ ಪೇಸ್ಟ್, ಚಾಟ್‌ ಮಸಾಲ, ಅಮ್ಚೂರ್‌ ಪುಡಿ, ದಾಳಿಂಬೆ ಪುಡಿ, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಕರಿಯಲು ಎಣ್ಣೆ.

ವಿಧಾನ : ಬ್ರೆಡ್‌ ಕಿವುಚಿ ಒಂದು ಬೇಸನ್ನಿಗೆ ಹಾಕಿ. ಕಾರ್ನ್‌ ಫ್ಲೋರ್‌ ಬಿಟ್ಟು ಉಳಿದೆಲ್ಲ ಸಾಮಗ್ರಿ ಇದಕ್ಕೆ ಹಾಕಿ ಮಿಶ್ರಣ ಕಲಸಿಕೊಳ್ಳಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಡಿ. ಕಾರ್ನ್‌ ಫ್ಲೋರ್‌ ಗೆ ತುಸು ಉಪ್ಪು, ಖಾರ, ನೀರು ಬೆರೆಸಿ ಬೋಂಡ ಮಿಶ್ರಣಕ್ಕೆ ತಕ್ಕಂತೆ ಕಲಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಈ ಉಂಡೆಗಳನ್ನು ಕಾರ್ನ್‌ ಫ್ಲೋರ್ ಮಿಶ್ರಣದಲ್ಲಿ ಅದ್ದಿ ಗರಿಗರಿಯಾಗಿ ಕರಿಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಸಾಸ್‌ ಜೊತೆ ಸವಿಯಲು ಕೊಡಿ.

Rice-Lolipop

ರೈಸ್ಲಾಲಿಪಾಪ್

ಸಾಮಗ್ರಿ : 2 ಕಪ್‌ ಅನ್ನ, ಬೇಯಿಸಿ ಮಸೆದ 1 ಕಪ್‌ ಆಲೂ, ನುಣ್ಣಗೆ ಹೆಚ್ಚಿದ 1 ಕ್ಯಾಪ್ಸಿಕಂ, ತುಸು ಹೆಚ್ಚಿದ ಟೊಮೇಟೊ, ಹಸಿ ಮೆಣಸು, ಕೊ.ಸೊಪ್ಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾ ಪುಡಿ, ಅಮ್ಚೂರ್‌ ಪುಡಿ, ಗರಂ ಮಸಾಲ, ಚಾಟ್ ಮಸಾಲ, ಪುಡಿ ಸೋಂಪು, ಕರಿಯಲು ಎಣ್ಣೆ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ ಮಿಶ್ರಣ ಕಲಸಿಡಿ. ನಂತರ ಜಿಡ್ಡು ಸವರಿದ ಟ್ರೇನಲ್ಲಿ ಈ ಮಿಶ್ರಣ ಹರಡಿ, ಫ್ರಿಜ್‌ ನಲ್ಲಿ 1 ಗಂಟೆ ಕಾಲ ಇರಿಸಿ. ನಂತರ ಇದರಿಂದ ಚಿತ್ರದಲ್ಲಿರುವಂತೆ ಆಯತಾಕಾರದ ತುಂಡುಗಳಾಗಿ ಕತ್ತರಿಸಿ, ಅವಕ್ಕೆ 1-1 ಐಸ್‌ ಕ್ರೀಂ ಕಡ್ಡಿ ಸಿಗಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಹೊರ ತೆಗೆದು ಟಿಶ್ಯು ಪೇಪರ್‌ ಮೇಲೆ ಹರಡಿ, ಸಾಸ್‌, ಚಟ್ನಿ ಜೊತೆ ಸವಿಯಲು ಕೊಡಿ.

Pyaj-Kachori

ಈರುಳ್ಳಿ ಕಚೋರಿ

ಕಣಕದ ಸಾಮಗ್ರಿ : 250 ಗ್ರಾಂ ಮೈದಾ, ತುಸು ಉಪ್ಪು, ಎಣ್ಣೆ, ನೀರು.

ಹೂರಣದ ಸಾಮಗ್ರಿ : ಹೆಚ್ಚಿದ 3-4 ಈರುಳ್ಳಿ, ಬೇಯಿಸಿ ಮಸೆದ 4 ಆಲೂ, ಒಂದಿಷ್ಟು ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಕೊ.ಸೊಪ್ಪು, ಕರಿಬೇವು, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಅಮ್ಚೂರ್‌ ಪುಡಿ, ಧನಿಯಾಪುಡಿ, ಕರಿಯಲು ಎಣ್ಣೆ.

ವಿಧಾನ : ಕಣಕದ ಸಾಮಗ್ರಿ ಎಲ್ಲಾ ಸೇರಿಸಿ ಮೃದು ಪೂರಿ ಹಿಟ್ಟಿನ ಹಾಗೆ ಕಲಸಿ, 2 ಗಂಟೆ ಕಾಲ ನೆನೆಯಲು ಬಿಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಹಚ್ಚಿದ ಎಲ್ಲಾ ಸಾಮಗ್ರಿ ಒಂದೊಂದಾಗಿ ಹಾಕಿ ಬಾಡಿಸಿ. ಕೊನೆಯಲ್ಲಿ ಮಸೆದ ಆಲೂ ಸೇರಿಸಿ. ಮಸಾಲೆ ಸಾಮಗ್ರಿ, ಡ್ರೈ ಫ್ರೂಟ್ಸ್ ಸಹ ಕೆದಕಿ ಮಿಶ್ರಣ ಕೆಳಗಿಳಿಸಿ. ನೆನೆದ ಮೈದಾ ಹಿಟ್ಟಿಗೆ ತುಪ್ಪ ಹಾಕಿ ಚೆನ್ನಾಗಿ ನಾದಿಕೊಂಡು, ಪುಟ್ಟ ಪೂರಿಗಳಾಗಿ ಲಟ್ಟಿಸಿ. ಇದರ ಮಧ್ಯೆ 1-2 ಚಮಚ ಆಲೂ ಮಿಶ್ರಣ ಹರಡಿ, ಅದು ಬಿಟ್ಟುಕೊಳ್ಳುವಂತೆ ನೀಟಾಗಿ ಎಲ್ಲಾ ಕಡೆಯಿಂದ ಕವರ್‌ ಮಾಡಿ, ಒದ್ದೆ ಮೈದಾ ಮಿಶ್ರಣದಿಂದ ಪೇಸ್ಟ್ ಮಾಡಿಬಿಡಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಕೆಂಪಗೆ ಬರುವಂತೆ ಕರಿಯಿರಿ. ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ, ಸಾಸ್‌ ಜೊತೆ ಬೇಕಾದಾಗ ಸವಿಯಿರಿ. 1 ವಾರ ಕೆಡದೆ ಉಳಿಯುತ್ತದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ