ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ʼಕಾಂತಾರ ಅಧ್ಯಾಯ 1’ ಚಿತ್ರದ ದೈವದ ಪಾತ್ರವನ್ನು ತಮಾಷೆಯಾಗಿ ಅನುಕರಣೆ ಮಾಡಿ ವಿವಾದಕ್ಕೆ ಕಾರಣವಾಗಿದ್ದಾರೆ. ʼಕಾಂತಾರಾ ಚಾಪ್ಟರ್​ 1ʼ ಚಿತ್ರದ ದೈವವನ್ನು ‘ಹೆಣ್ಣು ದೆವ್ವ’ ಎಂದು ಹೇಳಿ ರಣವೀರ್ ಟೀಕೆಗೆ ಗುರಿಯಾಗಿದ್ದು,  ಅವರು ಕ್ಷಮೆಯಾಚಿಸಬೇಕು ಎಂದು ವ್ಯಾಪಕ ಆಗ್ರಹ ಕೇಳಿ ಬಂದಿದೆ. ಕರಾವಳಿಯ ಹಲವರು ಸೋಶಿಯಲ್​ ಮೀಡಿಯಾದಲ್ಲಿ ರಣವೀರ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತುಳುನಾಡಿನ ದೈವಾರಾಧಕರೂ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ನಟ ರಿಷಬ್ ಶೆಟ್ಟಿ ಅವರನ್ನು ಶ್ಲಾಘಿಸುತ್ತಾ, ನಾನು ಥಿಯೇಟರ್‌ನಲ್ಲಿ “ಕಾಂತಾರಾ ಚಾಪ್ಟರ್​ 1” ನೋಡಿದೆ. ನಿಮ್ಮ ಅಭಿನಯ ಅದ್ಭುತವಾಗಿತ್ತು. ವಿಶೇಷವಾಗಿ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು” ಎಂದು ಹೇಳಿ ಚಿತ್ರದ ಕ್ಲೈಮ್ಯಾಕ್ಸ್​ ದೃಶ್ಯವನ್ನು ರಣವೀರ್​ ಸಿಂಗ್ ಅನುಕರಣೆ ಮಾಡಿದ್ದಾರೆ. ಆದರೆ ಹಾಗೆ ಮಾಡುವಾಗ ತಮಾಷೆಯ ರೀತಿಯಲ್ಲಿ ರಣವೀರ್​ ಸಿಂಗ್​ ಅನುಕರಣೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಅನುಕರಣೆ ವೇಳೆ ಕಿರುಚುತ್ತಾ ನಾಲಗೆ ಹೊರ ಚಾಚಿ, ಕೆಟ್ಟದಾಗಿ ನಟಿಸಿ ತೋರಿಸಿದ್ದಾರೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ವಿವಾದದ ಕುರಿತು ರಣವೀರ್ ಸಿಂಗ್ ಅಥವಾ ಅವರ ತಂಡದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಸೂಪರ್​ ಸ್ಟಾರ್​ ರಜನಿಕಾಂತ್​, ಡಿವೈನ್​ ಸ್ಟಾರ್​ ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ