ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ʼಕಾಂತಾರ ಅಧ್ಯಾಯ 1’ ಚಿತ್ರದ ದೈವದ ಪಾತ್ರವನ್ನು ತಮಾಷೆಯಾಗಿ ಅನುಕರಣೆ ಮಾಡಿ ವಿವಾದಕ್ಕೆ ಕಾರಣವಾಗಿದ್ದಾರೆ. ʼಕಾಂತಾರಾ ಚಾಪ್ಟರ್ 1ʼ ಚಿತ್ರದ ದೈವವನ್ನು ‘ಹೆಣ್ಣು ದೆವ್ವ’ ಎಂದು ಹೇಳಿ ರಣವೀರ್ ಟೀಕೆಗೆ ಗುರಿಯಾಗಿದ್ದು, ಅವರು ಕ್ಷಮೆಯಾಚಿಸಬೇಕು ಎಂದು ವ್ಯಾಪಕ ಆಗ್ರಹ ಕೇಳಿ ಬಂದಿದೆ. ಕರಾವಳಿಯ ಹಲವರು ಸೋಶಿಯಲ್ ಮೀಡಿಯಾದಲ್ಲಿ ರಣವೀರ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತುಳುನಾಡಿನ ದೈವಾರಾಧಕರೂ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ನಟ ರಿಷಬ್ ಶೆಟ್ಟಿ ಅವರನ್ನು ಶ್ಲಾಘಿಸುತ್ತಾ, ನಾನು ಥಿಯೇಟರ್‌ನಲ್ಲಿ “ಕಾಂತಾರಾ ಚಾಪ್ಟರ್ 1” ನೋಡಿದೆ. ನಿಮ್ಮ ಅಭಿನಯ ಅದ್ಭುತವಾಗಿತ್ತು. ವಿಶೇಷವಾಗಿ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು” ಎಂದು ಹೇಳಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ರಣವೀರ್ ಸಿಂಗ್ ಅನುಕರಣೆ ಮಾಡಿದ್ದಾರೆ. ಆದರೆ ಹಾಗೆ ಮಾಡುವಾಗ ತಮಾಷೆಯ ರೀತಿಯಲ್ಲಿ ರಣವೀರ್ ಸಿಂಗ್ ಅನುಕರಣೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಅನುಕರಣೆ ವೇಳೆ ಕಿರುಚುತ್ತಾ ನಾಲಗೆ ಹೊರ ಚಾಚಿ, ಕೆಟ್ಟದಾಗಿ ನಟಿಸಿ ತೋರಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವಿವಾದದ ಕುರಿತು ರಣವೀರ್ ಸಿಂಗ್ ಅಥವಾ ಅವರ ತಂಡದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.





