– ರಾಘವೇಂದ್ರ ಅಡಿಗ ಎಚ್ಚೆನ್.
ವೀಕ್ಷಕರನ್ನು ರಂಜನೆಗಾಗಿ ವಿಭಿನ್ನ ಕಥೆಗಳನ್ನು ನೀಡುತ್ತಾ ಬಂದಿರುವ ಉದಯ ಟಿವಿ ಈಗ ಹೊಸ ಧಾರಾವಾಹಿ ರಥ ಸಪ್ತಮಿ ಪ್ರಸಾರಕ್ಕೆ ಸಿದ್ಧವಾಗಿದೆ. ಡಿಸೆಂಬರ್ 8 ರಿಂದ ಪ್ರತಿ ಸೋಮವಾರದಿಂದ ಶನಿವಾರ ಸಂಜೆ 6 ಗಂಟೆಗೆ ರಥಸಪ್ತಮಿ ಪ್ರಸಾರವಾಗಲಿದೆ. ರಂಗಭೂಮಿ ಹಿನ್ನಲೆಯ ನಟ, ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸ್ಟೋರಿ ಬ್ರೀವ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಹ್ಯಾರಿಸ್ ನಿರ್ಮಾಣ ಮಾಡುತ್ತಿದ್ದಾರೆ
ವಿಶೇಷ ಎಂದರೆ ಇತ್ತೀಚೆಗೆ ನಿಧನರಾದ ಹಿರಿಯ ನಟ ಎಂ ಎಸ್ ಉಮೇಶ್ ಅವರು ಅಭಿನಯಿಸಿರುವ ಕಡೆಯ ಧಾರಾವಾಹಿ ಇದಾಗಿದೆ. ತಮ್ಮ ಕೊನೇ ಗಳಿಗೆಯವರೆಗೂ ಬಣ್ಣದ ಲೋಕದ ನಂಟು ಇರಿಸಿಕೊಂಡಿದ್ದ ಉಮೇಶ್ ನಿಧನದ ಎರಡು ದಿನಗಳ ಮುನ್ನ ಅವರ ಅಭಿನಯ ಇರುವ ʻಜಿಎಸ್‌ಟಿʼ ಸಿನಿಮಾ ಸಹ ತೆರೆಗೆ ಬಂದಿತ್ತು. ಈಗ ರಥಸಪ್ತಮಿ ಧಾರಾವಾಹಿ ಪ್ರಸಾರಕ್ಕೆ ಸಿದ್ದವಾಗಿದೆ.

ನಿಸ್ವಾರ್ಥ ಹಾಗೂ ಉದಾರ ಮನೋಭಾವದ, ಮಧ್ಯಮ ವರ್ಗದ ಪದವಿ ಮುಗಿಸಿರುವ ಹುಡುಗಿ ಸಪ್ತಮಿ. ಅಪ್ಪನ ಮುದ್ದಿನ ಮಗಳು. ಇವಳ ದಾನಗುಣ ಮಲತಾಯಿಗೆ ಇಷ್ಟವಾಗುವುದಿಲ್ಲ. ಈಕೆಗೆ ಶ್ರೀಮಂತ್ ಅನ್ನೋ ಒಬ್ಬ ಜಿಪುಣನ ಜೊತೆ ಮದುವೆ ನಿಶ್ಚಯವಾಗುತ್ತದೆ. ಶ್ರೀಮಂತ್‌ಗೆ ಚಿಕ್ಕಪ್ಪನಿಂದ ಮೋಸವಾಗಿದ್ದರಿಂದ ಯಾರನ್ನೂ ನಂಬದೆ ಪೈಸೆ ಪೈಸೆಗೂ ಲೆಕ್ಕ ಇಡುವಂಥವನು. ಮನೆಯಲ್ಲಿ ಈತನನ್ನು ಕಂಜೂಸ್ ಕುಮಾರ ಅಂತ ಕರೆಯುತ್ತಿರುತ್ತಾರೆ. ಈತನ ಸರ್ಕಾರಿ ಸಂಬಳದಿಂದ ಕುಟುಂಬದ ಐದು ಜನರ ಬದುಕು ನಡೆಯಬೇಕಿರುತ್ತದೆ. ಎರಡೂ ಪರಿವಾರ ಹೇಳೋ ಸುಳ್ಳುಗಳಿಂದ ಸಪ್ತಮಿ ಮತ್ತು ಶ್ರೀಮಂತ್ ಪ್ರೀತಿಸುವಂತಾಗಿ ಮದುವೆ ಕೂಡ ಆಗ್ತಾರೆ. ತನ್ನ ಕುಟುಂಬವೇ ಸರ್ವಸ್ವ ಅಂತ ನಂಬಿರೋ ಸಪ್ತಮಿಗೆ ಆ ಕುಟುಂಬವನ್ನು ಭೂಮಿಗೆ ಭಾರ ಎನ್ನುವ ಥರ ನೋಡುವ ಶ್ರೀಮಂತನ ಜೊತೆ ಬದುಕುವ ಅನಿವಾರ್ಯತೆ. ಈ ವ್ಯತ್ಯಾಸ ವೈಶಿಷ್ಟ್ಯ ಹಾಗೂ ಸಂಘರ್ಷಗಳ ನಡುವೆ ಇಬ್ಬರ ಬದುಕು ಹೇಗೆ ಸಾಗುತ್ತದೆ ಎನ್ನುವುದು ಮುಂದಿನ ಕಥಾ ಹಂದರ.
ಇನ್ನು ನಾಯಕನಾಗಿ ಜೀವನ್, ನಾಯಕಿಯಾಗಿ ಮೌಲ್ಯ ಗೌಡ, ಉಳಿದಂತೆ ನಾಗೇಶ್ ಮಯ್ಯ, ಸುನಿಲ್, ವಂದನ, ಭೂಮಿಕಾ, ಪುಷ್ಪಾ ಬೆಳವಾಡಿ, ಪ್ರಮೀಳಾ, ಸುಮೋಕ್ಷ, ಮಧುಸೂದನ್, ನೀನಾಸಂ ಪ್ರದೀಪ್, ಚಂದನ, ಅಥರ್ವ ಮುಂತಾದವರು ಅಭಿನಯಿಸುತ್ತಿದ್ದಾರೆ. ಛಾಯಾಗ್ರಹಣ ಕೃಷ್ಣ, ಸಂಕಲನ ವಿಶಾಲ್ ವಿನಾಯಕ್ ಅವರದಾಗಿದೆ.





