– ರಾಘವೇಂದ್ರ ಅಡಿಗ ಎಚ್ಚೆನ್.

ಬೆಂಗಳೂರು, ಕೇಶವಶಿಲ್ಪ, ಡಿ. 7: ಮೂವ್ವತ್ತೇಳು ದಿನಗಳ ಕಾಲ ನಡೆದ ಕನ್ನಡ ಪುಸ್ತಕ ಹಬ್ಬದ ಸಮಾರೋಪ ಸಮಾರಂಭವು ರಾಷ್ಟ್ರೋತ್ಥಾನ ಪರಿಷತ್‌ನ ಕೇಶವಶಿಲ್ಪ ಸಭಾಂಗಣದಲ್ಲಿ ಡಾ. ಗುರುರಾಜ ಕರಜಗಿ, ಶ್ರೀ ಬಸವರಾಜ ಪಾಟೀಲ ಸೇಡಂ ಹಾಗೂ ಶ್ರೀ ಎಂ ಪಿ ಕುಮಾರ್ ಅವರ ಘನ ಉಪಸ್ಥಿತಿಯಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿಕ್ಷಣತಜ್ಞರು, ಲೇಖಕರು ಹಾಗೂ ACT ಬೆಂಗಳೂರಿನ ಸ್ಥಾಪಕ ಅಧ್ಯಕ್ಷರಾದ ಡಾ. ಗುರುರಾಜ ಕರಜಗಿಯವರು ಆಗಮಿಸಿದ್ದರು. ಈ ಬಾರಿಯ ಪುಸ್ತಕ ಪರಿಚಾರಕರೆಂದು ಸಾಮಾಜಿಕ ಕಾರ್ಯಕರ್ತರು ಹಾಗೂ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸಂರಕ್ಷಕರಾದ ಶ್ರೀ ಬಸವರಾಜ ಪಾಟೀಲ ಸೇಡಂ ಅವರನ್ನು ಸನ್ಮಾನಿಸಲಾಯಿತು. ರಾಷ್ಟ್ರೋತ್ಥಾನ ಪರಿಷತ್‍ನ ಅಧ್ಯಕ್ಷರಾದ ಶ್ರೀ ಎಂ ಪಿ ಕುಮಾರ್ ಅವರು ಕಾರ್ಯಕ್ರಮದ ಅಧ‍್ಯಕ್ಷತೆಯನ್ನು ವಹಿಸಿದ್ದರು.

FB_IMG_1765154205623

ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ತಾಯಿ ಭುವನೇಶ್ವರಿ ಮೆರವಣಿಗೆಯ ಬಳಿಕ ಶ್ರೀ ಯದುವೀರ್‌ ಒಡೆಯರ್ ಅವರು ಕನ್ನಡ ಪುಸ್ತಕ ಹಬ್ಬಕ್ಕೆ ನ.1ರಂದು ಚಾಲನೆ ನೀಡಿದರು. 37 ದಿನಗಳ ಕಾಲ ನಡೆದ ಕನ್ನಡ ಪುಸ್ತಕ ಹಬ್ಬದಲ್ಲಿ ನೃತ್ಯ, ನಾಟಕ, ಹಾಸ್ಯರಸಾಯನ, ಕರ್ನಾಟಕ – ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಏಕವ್ಯಕ್ತಿ ತಾಳಮದ್ದಲೆ ಸೇರಿದಂತೆ ವೈವಿಧ್ಯಮಯ 5೦ ಸಾಂಸ್ಕೃತಿಕ ಕಾರ್ಯಕ್ರಮಗಳು, 2 ವಿಶೇಷ ಉಪನ್ಯಾಸಗಳು, ಅನಕೃ ಪ್ರತಿಷ್ಠಾನ ನೀಡುವ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೇರಿದಂತೆ ಒಟ್ಟು 55 ಕಾರ್ಯಕ್ರಮಗಳು ಈ ವೇದಿಕೆಯಲ್ಲಿ ನಡೆದವು. 210 ಹಿರಿಯ ಕಲಾವಿದರು ಹಾಗೂ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಪುಸ್ತಕ ಹಬ್ಬದ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಿಗೂ ಸಂಸ್ಕಾರ ಭಾರತಿಯ ಕಲಾಸಹಕಾರ ಬೆನ್ನೆಲುಬಾಗಿ ನಿಂತಿದೆ.

FB_IMG_1765154215687

ಹಾಗೂ 2 ಪುಸ್ತಕ ಲೋಕಾರ್ಪಣ ಕಾರ್ಯಕ್ರಮಗಳಲ್ಲಿ ಭಾರತೀಯ ಸಂಸ್ಕೃತಿ, ಇತಿಹಾಸ, ಪಂಚಪರಿವರ್ತನೆಗಳಿಗೆ ಸಂಬಂಧಿಸಿದ ಒಟ್ಟು 10 ಕೃತಿಗಳನ್ನು ಲೋಕಾರ್ಪಣಗೊಳಿಸಲಾಗಿದೆ. 9 ಸ್ಪರ್ಧೆಗಳನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆಸಲಾಗಿದೆ.

ಪುಸ್ತಕ ಪರಿಚಾರಕ ಸನ್ಮಾನ ಸ್ವೀಕರಿಸಿ ಶ್ರೀ ಬಸವರಾಜ ಪಾಟೀಲ ಸೇಡಂ ಅವರು ಮಾತನಾಡುತ್ತ ತನಗೆ ಸಾಹಿತ್ಯದ ಹುಚ್ಚು ಹಿಡಿಸಿದ್ದು ರಾಮಕೃಷ್ಣ ಆಶ್ರಮ ಹಾಗೂ ರಾಷ್ಟ್ರೋತ್ಥಾನ ಸಾಹಿತ್ಯ ಎಂದರು. ಉತ್ತಮ ನೈತಿಕ ಚಾರಿತ್ರ್ಯವನ್ನು ಇಟ್ಟುಕೊಂಡು ಉಪನ್ಯಾಸ ಮಾಡುವವರಿಗೆ ಉತ್ತಮ ಸಾಹಿತ್ಯ, ನಾಟಕ, ದೇಶಭಕ್ತಿಯ ಸಾಹಿತ್ಯ ಇವಕ್ಕೆಲ್ಲ ಬೆಲೆ ಇದ್ದೇ ಇದೆ. ‘Thus Speaks Series’ಗೆ ಆಗ 30 ಪೈಸೆ ಇತ್ತು, ಈಗ ಅದಕ್ಕೆ 15 ರೂ. ಇದೆ. ಅಂದಿನಿಂದಲೂ ಸಾಹಿತ್ಯವನ್ನು ಮಾರಿದ್ದೇನೆ. 25,000 ಪುಸ್ತಕ ಪ್ರಕಾಶನ ಮಾಡಿ ಮಾರಿದ್ದೇನೆ. ಉತ್ತಮ ಯಾವುದೇ ಇದ್ದರೂ ಅದಕ್ಕೆ ಪ್ರೋತ್ಸಾಹ ಇಲ್ಲದಿದ್ದರೆ ದೇಶಕ್ಕೆ ಭವಿಷ್ಯ ಇರುವುದಿಲ್ಲ. ಪುಸ್ತಕ ಯಾವಾಗ ಯಾವ ವ್ಯಕ್ತಿಯನ್ನು ಮೀಟುವುದೋ ಅದನ್ನು ಅಳೆಯುವುದಕ್ಕೆ ಯಾವುದೇ ಮೀಟರ್‌ ಇರುವುದಿಲ್ಲ. ಸಾಹಿತ್ಯಕ್ಕೆ ನನ್ನದೊಂದು ಅಳಿಲುಸೇವೆ ಸಲ್ಲಿಸಿದ್ದೇನೆ. 2.5 ಕೋಟಿ ಸಾಹಿತ್ಯವನ್ನು ಮಾರಿದ್ದೇನೆ. ಇದು ನನ್ನ ಜೀವನದ ಹವ್ಯಾಸವಾಗಿದ್ದು ಸೇಡಂನಲ್ಲಿ ಪುಸ್ತಕದ ಅಂಗಡಿ ಇದ್ದಂತೆ ಗುಲಬರ್ಗಾದಲ್ಲಿ ನನ್ನ ಕಛೇರಿಯಲ್ಲಿ ಪುಸ್ತಕದ ಅಂಗಡಿ ಇದೆ. ವಿಚಾರಕ್ರಾಂತಿ ತುಂಬ ದೊಡ್ಡದಿದ್ದು ಸಾಹಿತ್ಯ ಹಾಗೂ ಉಪನ್ಯಾಸದ ಪಾತ್ರ ಅದರಲ್ಲಿ ತುಂಬ ದೊಡ್ಡದು. ಎಲ್ಲೆಲ್ಲಿ ಉತ್ತಮ ಎನ್ನುವುದಿದೆಯೋ ಅದನ್ನು ನಿಮ್ಮದಾಗಿಸಿಕೊಂಡು ವ್ರತದಂತೆ ಅದನ್ನು ಮಾಡಿದರೆ ನೀವು ಸಹ ಯಾವುದೇ ದಾಖಲೆಯನ್ನು ಮುರಿಯಲು ಸಾಧ್ಯ ಎಂದು ಹೇಳಿದರು.

FB_IMG_1765154181807

ಮುಖ್ಯ ಅತಿಥಿಗಳಾದ ಡಾ. ಗುರುರಾಜ ಕರಜಗಿಯವರು ಪುಸ್ತಕವೆಂದರೆ ಜ್ಞಾನದ ಘನೀಭೂತ ಎಂದರು. ನೂರಾರು ಚಿಂತನೆಯ ಸಾರ ಒಂದು ಪುಸ್ತಕದಿಂದ ದೊರೆಯುತ್ತದೆ. ಮೊದಲು ಮೌಖಿಕ ಪರಂಪರೆ ಶುರುವಾಗಿ, ಅದನ್ನು ದಾಖಲಿಸಲು ಅಕ್ಷರದ ಅವಿಷ್ಕಾರವಾಗಿ, ಅಕ್ಷರರೂಪದಲ್ಲಿ ಇಳಿಸಿ ಇಷ್ಟು ಜ್ಞಾನ ದೊರಕುತ್ತಿದೆ. ಸಾಹಿತ್ಯದಲ್ಲಿ ಮನರಂಜನೆ, ಜೀವನದರ್ಶನ, ಜೀವೋತ್ಕರ್ಷ ಎನ್ನುವ ಮೂರು ಹಂತಗಳಿವೆ ಎಂದರು. ಬೀಚಿಯವರ ಸಾಹಿತ್ಯದ ಕುರಿತು ಉಲ್ಲೇಖಿಸುತ್ತ, ಅವರದು ಮೇಲ್ನೋಟಕ್ಕೆ ಮನರಂಜನೆಯಾಗಿ ಕಂಡರೂ ಒಳಗೆ ಅದ್ಭುತ ಜೀವನದರ್ಶನ, ಸಂದೇಶ ನೀಡುವಂಥದ್ದಿರುತ್ತದೆ ಎಂದರು. ಯಾವ ಪುಸ್ತಕ ಯಾರನ್ನು ಹೇಗೆ ಪ್ರೇರೇಪಿಸುವುದೆಂದು ಹೇಳಲಾಗದು. ಒಬ್ಬ ಅಣ್ಣಾ ಹಜಾರೆ ಆಗಲು ಒಂದು ಪುಸ್ತಕ ಕಾರಣವಾಯ್ತು. ಮನಸ್ಸಿಗೆ ಮಂಕು ಕವಿದಾಗ ಸಿಗುವ ಕಾದಂಬರಿಯೋ, ಕಥೆಯೋ ಜೀವನವನ್ನೇ ಬದಲಿಸಿದ ಉದಾಹರಣೆಯೂ ಇದೆ. ಬೆಂದ್ರೆಯವರು ನಾಳೆಯ ಚಿಂತೆಯಲ್ಲಿ ಸಾಧನಕೇರಿಗೆ ಬಂದು ನಿಂತು ಬರೆದ ಕವಿತೆ ಬಾರೋ ಸಾಧನಕೇರಿಗೆ. ನೀ ಹಿಂಗ ನೋಡಬ್ಯಾಡ ಕೂಡ ಅಂಥದ್ದೇ ಸಮಯದಲ್ಲಿ ಬರೆದದ್ದು. ಅನುವಾದ ಜಾರಿಕೆಯಾಗಿದ್ದರೂ ಕೆಲವು ಅನುವಾದಗಳು ಮೂಲಕ್ಕಿಂತಲೂ ಚೆನ್ನಾಗಿರುತ್ತವೆ. ಮಂಕುತಿಮ್ಮನ ಕಗ್ಗ ಪ್ರಕಟವಾದಾಗ ಇದನ್ನು ಯಾರು ಓದುತ್ತಾರೆ ಎಂದಿದ್ದರಂತೆ ಡಿವಿಜಿಯವರು. ಇಂದು ಅದನ್ನು ಕೋಟ್‌ ಮಾಡದವರೇ ಇಲ್ಲ. ಯಾವುದೇ ಭಾರತೀಯ ಚಿಂತನೆ ಜೀವ, ಜಗತ್ತು, ಈಶ್ವರ ಈ ಮೂರರ ಹಿಂದೆ ಸುತ್ತುತ್ತಿರುತ್ತದೆ. ಅದನ್ನು ಕಗ್ಗದ ನಾಲ್ಕು ಸಾಲಿನಲ್ಲಿ ಕೆತ್ತಿಕೊಟ್ಟಿದ್ದಾರೆ ಡಿವಿಜಿಯವರು. ಭಾರತೀಯ ಸಾಹಿತ್ಯದ ರಾಮಾಯಣ, ಮಹಾಭಾರತ ಇವೆಲ್ಲವೂ ಜೀವೋತ್ಕರ್ಷ ಸಾಹಿತ್ಯಗಳೇ ಆಗಿವೆ. ವಾಲ್ಮೀಕಿ ರಾಮಾಯಣದಲ್ಲಿ ಎಲ್ಲೂ ನೀವು ರಾಮನಂತಿರಿ, ಲಕ್ಷಣನಂತಿರಿ ಎನ್ನುವುದಿಲ್ಲ; ಬದಲಾಗಿ ಹಾಗೆಯೇ ಪಾತ್ರಗಳನ್ನು ರೂಪಿಸಿದ್ದು, ನಮಗೂ ಹಾಗೆಯೇ ಇರಬೇಕು ಎನಿಸುತ್ತದೆ. ಯಜಮಾನ, ದಾಸ ಹೇಗಿರಬೇಕು ಎನ್ನುವುದನ್ನು ಕಟ್ಟಿಕೊಡುತ್ತವೆ. ಕೌರವನಲ್ಲೂ ಒಳ್ಳೆಯತನವನ್ನು ತೋರಿಸಿಕೊಟ್ಟದ್ದು ಕುಮಾರವ್ಯಾಸ. ಮನುಷ್ಯನ ಚಿಂತನೆ ಮನೋಧರ್ಮವನ್ನು ಬದಲಿಸುವ ಸಾಹಿತ್ಯ ನಮಗೆ ಬೇಕು. ಅಂತಹ ಸಾಹಿತ್ಯ ರಾಷ್ಟ್ರೋತ್ಥಾನ ನಡೆಸುತ್ತಿರುವ ಕನ್ನಡ ಪುಸ್ತಕ ಹಬ್ಬದಿಂದ ಹರಡುತ್ತಿದೆ. ಮನೆಮನೆಯಲ್ಲೂ ಪುಸ್ತಕ ಇರಬೇಕು, ಮಕ್ಕಳು ಪುಸ್ತಕ ಓದಬೇಕು ಎಂದರು.

FB_IMG_1765154209646

ಅಧ್ಯಕ್ಷೀಯ ಭಾಷಣ ಮಾಡಿದ ಶ್ರೀ ಎಂ ಪಿ ಕುಮಾರ್‌ ಅವರು ಮಾತನಾಡುತ್ತ ತಂತ್ರಜ್ಞಾನದಿಂದಾಗಿ ನಾವು ಪುಸ್ತಕದಿಂದ ದೂರವಾಗುತ್ತಿದ್ದೇವೆ. ಯೂಟ್ಯೂಬ್‌ ದಾಸರಾಗುತ್ತಿದ್ದೇವೆ. ನಮ್ಮ ಅಟೆನ್ಶನ್‌ ಸ್ಪ್ಯಾನ್‌ ಕಡಿಮೆ ಆಗುತ್ತಿದೆ. ಇದೊಂದು ವಿಚಿತ್ರ ಅಧಃಪತನ. ಪುಸ್ತಕ ಮಿತ್ರನಷ್ಟೇ ಅಲ್ಲ, ಅದು ಮಾರ್ಗದರ್ಶಿ ಕೂಡ ಹೌದು. ಅಂತಹ ಶಕ್ತಿ ಪುಸ್ತಕಕ್ಕಿದೆ. ಆದರೆ ಯಾವುದು ಸರಿಯಾದ ಪುಸ್ತಕ ಎನ್ನುವುದನ್ನು ಗುರುತಿಸಬೇಕು. ಯಾವುದನ್ನು ಓದುವುದರಿಂದ ಜೀವೋತ್ಕರ್ಷವಾಗುತ್ತದೆ ಎನ್ನುವುದನ್ನು ಗುರುತಿಸಿ ಅಂತಹುದನ್ನು ಓದಬೇಕು. ತಂತ್ರಜ್ಞಾನದಿಂದ ಸಂವಹನ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ. ಅದು ಅನುಕೂಲವಾದರೆ, ಅನುವಾದದಂತಹದ್ದನ್ನು ಕೆಲವೇ ಕ್ಷಣದಲ್ಲಿ ಮಾಡಿ ಅದೇ ಶಾಶ್ವತವಾಗಿ ಉಳಿದುಬಿಡುತ್ತದೆ. ಅದು ತಂದು ಹಾಕುವ ಮಾಹಿತಿಗಳನ್ನು ವಿಮರ್ಶಿಸುವ ಸಾಮರ್ಥ್ಯ ಇರಬೇಕು. ಭಾಷೆಯಲ್ಲಿ ಇರುವ ಅನುಭವ, ಸಂಸ್ಕಾರ, ಹುಟ್ಟುವ ಭಾವನೆಗಳು ಆಯಾ ಸಮಾಜದ ಕಾಣ್ಕೆಯನ್ನು ಕೊಡುತ್ತದೆ. ಕನ್ನಡ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗುತ್ತಿರುವುದು ಅಪಾಯ. ಇಂಗ್ಲಿಷ್‌ ಮೋಹ, ಕೋಲೊನಿಯಲ್‌ ಮೈಂಡಸೆಟ್‌ ನಮ್ಮನ್ನು ಆವರಿಸುತ್ತಿದೆ. ಭಾಷೆ, ಸಾಹಿತ್ಯ, ಸಂಸ್ಕಾರವನ್ನು ಉಳಿಸುವ ಪ್ರಯತ್ನವಾಗಬೇಕು. ಅದರ ಅನುಭವ ಮುಂದಿನ ಪೀಳಿಗೆಗೂ ದಕ್ಕಬೇಕು ಎಂದರು.

FB_IMG_1765154179490

ಸಹಯೋಗ: ಸಂಸ್ಕಾರ ಭಾರತೀ

37 ದಿನಗಳ ಕನ್ನಡ ಪುಸ್ತಕ ಹಬ್ಬ (ನ.1 – ಡಿ.7) @ ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡನಗರ, ಬೆಂಗಳೂರು

Learn More: https://kannadapustakahabba.com/

#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaSahitya #RashtrotthanaSahityaBooks #KannadaPustakaHabba2025 #ಕನ್ನಡಪುಸ್ತಕಹಬ್ಬ #ಕನ್ನಡಪುಸ್ತಕಹಬ್ಬ2025 #KannadaPustakaHabba #KPH2025 #valedictoryprogram

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ