50ನೇ ವಿವಾಹ ವಾರ್ಷಿಕೋತ್ಸವದಂದು ಗಂಡನ ಕಣ್ಣಲ್ಲಿ ಎರಡು ಹನಿ ಕಣ್ಣೀರನ್ನು ನೋಡಿದ ಹೆಂಡತಿ, “ರೀ, ನೀವು ಇಷ್ಟು ಭಾವುಕರು ಅಂತ ತಿಳಿದಿರಲಿಲ್ಲ,” ಎಂದಳು.
ಗಂಡ ಹೇಳಿದ, “50 ವರ್ಷಗಳ ಹಿಂದೆ ನಾನು ಮಾಡಿದ ಸಣ್ಣ ತಪ್ಪಿಗೆ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡ ನಿಮ್ಮಪ್ಪ, ನನ್ನ ಮಗಳನ್ನು `ಲಗ್ನ ಆಗ್ತೀಯಾ….. ಇಲ್ಲ 50 ವರ್ಷ ನಿನ್ನ ಜೈಲಿಗೆ ತಳ್ಳಿಬಿಡಲಾ?’ ಎಂದು ಘರ್ಜಿಸಿದಾಗ, ಜೈಲೇ ಇರಲಿ ಎಂದು ಒಪ್ಪಿಕೊಂಡಿದ್ದರೆ ಚೆನ್ನಾಗಿತ್ತು…. ಇವತ್ತಿಗೆ ನನ್ನ ಬಿಡುಗಡೆ ಆಗ್ತಿತ್ತು. ಅದನ್ನು ನೆನೆಸಿಕೊಂಡು ಕಣ್ಣೀರು ಬಂತು ಅಷ್ಟೇ….” ಎನ್ನುವುದೇ?
ತಂದೆ : ಮಗನೇ, ಜೀವನದಲ್ಲಿ ಏನಾದರೂ ಸಾಧಿಸಬೇಕೆಂದಿದ್ದರೆ ಮದುವೆಗೆ ಮೊದಲು ಸಾಧಿಸಿ ಮುಗಿಸಿಬಿಡು.
ಮಗ : ಯಾಕಪ್ಪ ಹಾಗಂತೀಯಾ?
ತಂದೆ : ಮದುವೆಯಾದ ನಂತರ ಸಾಧಿಸಿದರೆ ಹೆಂಡತಿಯ ಕಾಲ್ಗುಣ ಅಂತಾರೆ!
ಅಜಯ್ : ನೀನು ಮಾಡದ ತಪ್ಪಿಗೆ ನೀನೇ ಶಿಕ್ಷೆ ವಿಧಿಸಿಕೊಳ್ಳುತ್ತಿದ್ದೀಯಂತೆ, ಹೌದಾ?
ವಿಜಯ್ : ಹೌದಯ್ಯ, ಮುಂದಿನ ತಿಂಗಳು ನಾನು ಮದುವೆ ಆಗ್ತಿದ್ದೀನಿ!
ಗುಂಡ : ಇತ್ತೀಚೆಗೆ ಒಂದೇ ಕಡೆ ನೋಡಿ ನೋಡಿ ನನ್ನ ಕಣ್ಣು ಸದಾ ನೋಯ್ತಾ ಇದೆ ಡಾಕ್ಟರ್.
ವೈದ್ಯರು : ಸ್ವಲ್ಪ ಲೇಡೀಸ್ ಹಾಸ್ಟೆಲ್ ಕಡೆ ಓಡಾಡೋದನ್ನು ಕಡಿಮೆ ಮಾಡಿ, ಸರಿಹೋಗುತ್ತೆ!
ಪತ್ನಿ : ಆ ಕಾಮಿಡಿ ಸಿನಿಮಾ ನೋಡಿ ನೋಡಿ ನಕ್ಕೂ ನಕ್ಕು ನನ್ನ ಅರ್ಧ ಜೀವಾನೇ ಹೋದ ಹಾಗಾಯ್ತು ರೀ.
ಪತಿ : ಹೌದಾ….? ಜಾಸ್ತಿ ದುಡ್ಡಾದರೂ ಪರವಾಗಿಲ್ಲ, ನಾನು ಕೊಡ್ತೀನಿ…. ಒಳ್ಳೆ ಥಿಯೇಟರ್‌ನಲ್ಲಿ ಇನ್ನೊಮ್ಮೆ ಆ ಸಿನಿಮಾ ನೋಡಿಬಿಡು!
ಪತ್ನಿ : ರೀ….. ಅಡುಗೆ ಏನು ಮಾಡಲಿ ಅಂತ ಆಗಿನಿಂದ ಬಹಳ ಯೇಚನೆ ಮಾಡ್ತಾ ಇದ್ದೀನಿ.
ಪತಿ : ನಿನಗೊಂದು ಯೋಚನೆ ಆದರೆ, ನನ್ನದು ಇನ್ನೊಂದು ತರಹದ ಯೋಚನೆ ಆಗಿದೆ.
ಪತ್ನಿ : ನಿಮ್ಮದೇನು ಅಂಥ ಯೋಚನೆ?
ಪತಿ : ನೀನು ಮಾಡಿದ್ದನ್ನು ತಿನ್ನುವುದು ಹೇಗೆ ಅಂತಾ?
ಪತಿ : ತುಂತುರು ಮಳೆ ಬಿದ್ದು ವಾತಾವರಣ ಇಷ್ಟು ಹಿತಕರ ಆಗಿರೋವಾಗ, ಈ ಸಮಯದಲ್ಲಿ ನೀನು ಏನಾದರೂ ವಿಶೇಷವಾದದ್ದನ್ನು ಹೇಳಬಾರದೇ…..?
ಪತ್ನಿ : ವಾವ್… ಹೌ ನೈಸ್! ನಡೆಯಿರಿ, ಹಾಗೇ ಸುತ್ತಾಡಿಕೊಂಡು ಶಾಪಿಂಗ್ ಮುಗಿಸೋಣ!
ಮಹೇಶ್ : ಏನೋ ನೀನು…. ಇಷ್ಟು ಸಂತೋಷದಿಂದ ಸ್ವೀಟ್ಸ್ ಹಂಚುತ್ತಾ ಇದ್ದೀಯಾ…. ಲಾಟರಿ ಹೊಡೀತೇನು?
ಸುರೇಶ್ : ಇಲ್ಲ ಕಣೋ… ನಾಳೆಯಿಂದ ನನ್ನ ಹೆಂಡತಿ ತನ್ನ ಘನಘೋರ ಅಡುಗಿ ಮಾಡುವುದನ್ನು ನಿಲ್ಲಿಸಲಿದ್ದಾಳಂತೆ. ಇನ್ನಾದರೂ ನಾನೇ ಬೇಯಿಸಿಕೊಂಡು ನೆಮ್ಮದಿಯಾಗಿ ಇರಬಹುದಲ್ಲ….!
ತಾಯಿ : ಮಮತಾ, ನೀನು ಚರ್ಚಾಕೂಟದ ಸ್ಪರ್ಧೆಯಲ್ಲಿ ಗೆದ್ದದ್ದಕ್ಕೆ ನಿಮ್ಮ ತಂದೆ ಏನೆಂದರು?
ಮಗಳು : ಮಮತಾ, ದಿನದಿಂದ ದಿನಕ್ಕೆ ಮಾತನಾಡುವುದರಲ್ಲಿ ನೀನು ನಿಮ್ಮಮ್ಮನನ್ನು ಮೀರಿಸುತ್ತಿದ್ದೀಯಾ ಅಂತ ಹೇಳಿದರು.
ಪ್ರಶ್ನೆ : 1983ರಲ್ಲಿ ಕ್ರಿಕೆಟ್ ವಿಶ್ವ ಕಪ್ ಯಾರಿಗೆ ಸಿಕ್ಕಿತು?
ಉತ್ತರ : ಅದನ್ನು ಗೆದ್ದವರಿಗೆ!
ವಿಮಲಮ್ಮ ಸೀರೆ ಕೊಳ್ಳಲೆಂದು ಅಂಗಡಿಗೆ ಹೋದರು. ಸೇಲ್ಸ್ ಮ್ಯಾನ್ ಎಂಥ ಸೀರೆ ತೋರಿಸಿದರೂ ಅವರು ಬಡಪಟ್ಟಿಗೆ ಒಪ್ಪುತ್ತಿರಲಿಲ್ಲ.
ಸೇಲ್ಸ್ ಮ್ಯಾನ್ : ಮೇಡಂ, ಮತ್ತೆ ನಿಮಗೆಂಥ ಸೀರೆ ತಾನೇ ತೋರಿಸಲಿ, ನೀವೇ ಹೇಳಿ?
ವಿಮಲಮ್ಮ : ಅದನ್ನು ನಾನು ಉಟ್ಟುಕೊಂಡು ಹೊರಗೆ ಬಂದು ನಿಂತ ತಕ್ಷಣ, ಅಕ್ಕಪಕ್ಕದ ಮನೆಯವಳು ಹೊಟ್ಟೆಕಿಚ್ಚಿಗೆ ಎದೆಯೊಡೆದು ಸಾಯಬೇಕು….. ಅಂಥದ್ದನ್ನು ತೋರಿಸಿ!
ಅಜಿತ್ : ಒಂದು ಪಕ್ಷ ಅವಳಿ ಸಹೋದರಿಯರಲ್ಲಿ ಒಬ್ಬಳ ಜೊತೆ ನಿನ್ನ ಮದುವೆ ಆಯಿತು ಅಂತಿಟ್ಟುಕೊ. ನೀನು ಹಬ್ಬಕ್ಕೆ ಮಾವನ ಮನೆಗೆ ಹೋಗಿರ್ತಿಯಪ್ಪ, ಅಪರೂಪಕ್ಕೆ ಅಕ್ಕತಂಗಿ ಒಂದೇ ತರಹದ ಸೀರೆ ಉಟ್ಟಿರುತ್ತಾರೆ. ಆಗ ನಿನ್ನ ಹೆಂಡತಿಯನ್ನು ನೀನು ಹೇಗೆ ಗುರುತಿಸುತ್ತೀಯಾ?
ಸುಜಿತ್ : ಅದು ಬಹಳ ಸುಲಭ, ನಾನು ಒಬ್ಬಳನ್ನು ಹಿಂದಿನಿಂದ ತಬ್ಬಿಕೊಳ್ತೀನಿ. ಆಗ ಅವಳು ಗಲಾಟೆ ಮಾಡದೆ ನಾನು ಕೇಳಿದ್ದಕ್ಕೆ ಉತ್ತರಿಸುತ್ತಿದ್ದರೆ ಅವಳೇ ನನ್ನ ಹೆಂಡತಿ. ಒಂದು ಪಕ್ಷ ಅವಳ ತಂಗಿಯನ್ನು ಹಿಡುಕೊಂಡೆ ಅನ್ಕೊ, ಆಗಲೂ ತೊಂದರೆಯಿಲ್ಲ. ಅವಳನ್ನು ತಬ್ಬಿದ ಮರುಕ್ಷಣದಲ್ಲೇ ನನ್ನ ಹೆಂಡತಿ ಕಾಳಿಯಂತೆ ಧುತ್ತೆಂದು ಪಕ್ಕದಲ್ಲೇ ಅವತರಿಸುತ್ತಾಳೆ. `ಓ ನೀನಾ….’ ಅಂತ ನಾನು ಇವಳ ಕಡೆ ತಿರುಗ್ತೀನಿ!
ಗುಂಡ ಸಂದರ್ಶನಕ್ಕೆ ಹೋಗಿದ್ದ. ಅಲ್ಲಿ ಹೀಗೆ ಪ್ರಶ್ನಿಸಿದರು. “ತಕ್ಷಣ 15 ಹಣ್ಣುಗಳ ಹೆಸರು ಹೇಳಿ?”
ತಡಬಡಾಯಿಸಿದ ಗುಂಡ, “ಮಾವು, ಸೀಬೆ, ಕಿತ್ತಳೆ…. ಮತ್ತು…. ಮತ್ತು… 1 ಡಜನ್ ಬಾಳೆಹಣ್ಣು!” ಎಂದು ಉತ್ತರಿಸಿದ.
ಟೀಚರ್ : ಪ್ರಪಂಚದಲ್ಲಿ ಒಟ್ಟು ಎಷ್ಟು ದೇಶಗಳಿವೆ?
ಕಿಟ್ಟಿ : ಇರೋದೇ 2 ದೇಶ ಟೀಚರ್. ಒಂದು ನಮ್ಮ ಭಾರತ ದೇಶ, ಉಳಿದದ್ದೆಲ್ಲ ವಿದೇಶ!
ಪ್ರಶ್ನೆ : ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ ಹೊಂದುವ ದ್ರವ ವಸ್ತುವನ್ನು ಹೆಸರಿಸಿ.
ಉತ್ತರ : ಇಡ್ಲಿ, ದೋಸೆ ಹಿಟ್ಟು!
ಟೀಚರ್ : ವಾಸ್ಕೋಡಿಗಾಮ ಭಾರತಕ್ಕೆ ಯಾವಾಗ ಬಂದ?
ಗುಂಡ : ನಾನಂತೂ ಆಗ ಹುಟ್ಟಿರಲಿಲ್ಲ ಟೀಚರ್, ಮತ್ತೆ ಅದು ನನಗೆ ಹೇಗೆ ತಾನೇ ಗೊತ್ತಾಗಬೇಕು?
ಪ್ರಶ್ನೆ : ಕ್ರಿಕೆಟ್ ಬಗ್ಗೆ ಒಂದು ಪುಟ್ಟ ಪ್ರಬಂಧ ಬರೆಯಿರಿ.
ಉತ್ತರ : ಜೋರಾಗಿ ಮಳೆ ಬಂದ ಕಾರಣ ಕ್ರಿಕೆಟ್ ಪಂದ್ಯವನ್ನು ಆಡದೆ ರದ್ದು ಮಾಡಲಾಯಿತು.
ಗುಂಡ : ಬರ್ತಾ ಬರ್ತಾ ಅಂಗಡೀಲಿ ಏನೂ ತೆಗೀಲಿಕ್ಕೆ ಆಗ್ತಾ ಇಲ್ಲ ಕಣೋ.
ಸೀನ : ಯಾಕೋ? ಎಲ್ಲ ಬಹಳ ದುಬಾರಿ ಅಂತೀಯ?
ಗುಂಡ : ಇಲ್ಲ…. ಅಂಗಡೀಲಿ ಬಹಳ ಜಾಸ್ತಿ ಕ್ಯಾಮೆರಾ ಅಳವಡಿಸಿದ್ದಾರೆ!





